Tag: ದೇವಸ್ಥಾನ

  • ದೇವಸ್ಥಾನಗಳಲ್ಲಿ ಗ್ರಹಣದ ವಿಶೇಷ ಪೂಜೆ ಇಲ್ಲ

    ದೇವಸ್ಥಾನಗಳಲ್ಲಿ ಗ್ರಹಣದ ವಿಶೇಷ ಪೂಜೆ ಇಲ್ಲ

    ಮಂಡ್ಯ/ಚಾಮರಾಜನಗರ: ಇಂದು 2020ರ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಗ್ರಹಣದ ವೇಳೆ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗುವುದು ಸಹಜ. ಆದರೆ ಇಂದು ಜರುಗುವ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಲ್ಲ.

    ಮಂಡ್ಯ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಹಾಗೂ ರಂಗನಾಥಸ್ವಾಮಿ ದೇವಸ್ಥಾನಗಳಲ್ಲಿ ಗ್ರಹಣ ಪ್ರಯುಕ್ತ ಯಾವುದೇ ವಿಶೇಷ ಪೂಜೆಗಳು ಇಲ್ಲ. ಎಂದಿನಂತೆ ಪೂಜಾ ಕೈಂಕರ್ಯಗಳು ಮಾತ್ರ ಜರುಗಲಿವೆ.

    ವಿಶೇಷ ಎಂದರೆ ಇಂದು ಹುಣ್ಣಿಮೆ ಇರುವ ಕಾರಣ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇದೆ. ಇನ್ನೂ ಪಂಚಾಂಗದಲ್ಲಿ ಈ ಗ್ರಹಣದ ನಿಮಿತಿ ವಿಶೇಷ ಪೂಜೆಗಳ ಉಲ್ಲೇಖ ಇಲ್ಲದ ಕಾರಣ ಯಾವುದೇ ವಿಶೇಷತೆಗಳು ಮಂಡ್ಯ ಜಿಲ್ಲೆಯ ದೇವಸ್ಥಾನಗಳಲ್ಲಿ ಇಲ್ಲ.

    ಇತ್ತ ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ, ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ, ಶಿವನಸಮುದ್ರದ ಮಧ್ಯರಂಗ ದೇವಾಲಯ, ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯ ಸೇರಿದಂತೆ ಯಾವುದೇ ದೇವಾಲಯಗಳಲ್ಲೂ ಕೂಡ ಗ್ರಹಣದ ವಿಶೇಷ ಪೂಜೆ ಇಲ್ಲ. ಇನ್ನೂ ಹುಣ್ಣಿಮೆ ಇರುವ ಹಿನ್ನೆಲೆಯಲ್ಲಿ ಎಂದಿನಂತೆ ಇಂದು ಸಹ ದೇವಾಲಯಗಳಲ್ಲಿ ವಿಶೇಷ ಪೂಜೆ ಇದೆ.

  • ಮಂಡ್ಯದಲ್ಲಿ ಯಮನಿಗೊಂದು ದೇವಸ್ಥಾನ- ಕಟ್ಟಿದ ದೇಸ್ಥಾನದ ಗೋಡೆ ಉರುಳಿಸಿದ ವ್ಯಕ್ತಿ

    ಮಂಡ್ಯದಲ್ಲಿ ಯಮನಿಗೊಂದು ದೇವಸ್ಥಾನ- ಕಟ್ಟಿದ ದೇಸ್ಥಾನದ ಗೋಡೆ ಉರುಳಿಸಿದ ವ್ಯಕ್ತಿ

    ಮಂಡ್ಯ: ಭಾರತ ಹಾಗೂ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಶಿವ, ವಿಷ್ಣು, ಗಣಪತಿ, ಆಂಜನೇಯ ಹೀಗೆ ನಾನಾ ಹಿಂದೂ ದೇವತೆಗಳಗೆ ದೇವಸ್ಥಾನ ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಸಾವನ್ನು ಹೊತ್ತುಕೊಂಡು ಹೋಗುವ ಯಮಧರ್ಮರಾಜನಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುವ ಪದ್ಧತಿ ಮಾತ್ರ ಇಲ್ಲ. ಆದರೆ ಇಲ್ಲೂಂದು ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಯಮಧರ್ಮರಾಜನಿಗೆ ವ್ಯಕ್ತಿಯೊಬ್ಬರು ದೇವಸ್ಥಾನ ಕಟ್ಟಿ ಪೂಜೆ ಮಾಡಲು ಮುಂದಾಗಿದ್ದಾರೆ.

    ಯಮಧರ್ಮರಾಜ ಎಂದರೆ ಸಾಕು, ಎಂಥವರು ಸಹ ಮಲಗಿದ್ದರೂ ಎಚ್ಚರವಾಗಿ ಕಣ್ಣು ಬಿಟ್ಟು ನೋಡುತ್ತಾರೆ. ನಮ್ಮ ಹಿಂದೂಗಳ ಕಲ್ಪನೆಯ ಪ್ರಕಾರ ಯಮಧರ್ಮರಾಜ ಕೋಣದ ಮೇಲೆ ಕೂತುಕೊಂಡು, ಕೀರಿಟ ಹಾಕಿಕೊಂಡು, ದಪ್ಪ ಮೀಸೆ ಬಿಟ್ಟುಕೊಂಡು, ಕೈಯಲ್ಲಿ ಗದೆ ಮತ್ತು ಪಾಶವನ್ನು ಹಿಡಿದುಕೊಂಡು ಪ್ರಾಣವನ್ನು ಯಮಲೋಕಕ್ಕೆ ಕೊಂಡಯ್ಯಲು ಬರುವ ಒಬ್ಬ ದೇವ ಎಂದು ನಾವು ನಂಬಿದ್ದೇವೆ.

    ಯಮ ಓರ್ವ ದೇವನಾದರೂ ಯಮನಿಗೆ ಭೂಲೋಕದಲ್ಲೇಲ್ಲೂ ಪೂಜೆ ಸಲ್ಲುವುದಿಲ್ಲ. ಆದರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನಿರಿನ ಪಕ್ಕದಲ್ಲಿರುವ ಹೊಸಹುಂಡವಾಡಿಯಲ್ಲಿ ಯಮಧರ್ಮರಾಜ ದೇವಸ್ಥಾನ ನಿರ್ಮಾಣವಾಗುತ್ತಿದೆ. ಕೆಆರ್‌ಎಸ್‌ನ ನಿವಾಸಿ ರಾಜು ಎಂಬವರು ಯಮಧರ್ಮರಾಜ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ. ದೇಶದಲ್ಲಿ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಾತ್ರ ಯಮಧರ್ಮರಾಜನಿಗೆ ದೇವಸ್ಥಾನ ನಿರ್ಮಾಣ ಮಾಡಿದ್ದಾರಂತೆ.

    ರಾಜು ಅವರು ಸದ್ಯ ಯಮಧರ್ಮರಾಜ ದೇವಸ್ಥಾನ ಕಟ್ಟಲು ಹೊರಟಿರುವ ಜಾಗವನ್ನು ವಿಷ್ಟುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ನೀಡಲು ಮುಂದಾಗಿದ್ದರು. ಆದರೆ ವಿಷ್ಣು ಸ್ಮಾರಕ ಮೈಸೂರಿನಲ್ಲಿ ಆಗುತ್ತಿರುವ ಕಾರಣ, ಈ ಜಾಗವನ್ನು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಜಾಗದಲ್ಲಿ ಯಮಧರ್ಮರಾಜನ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ. ಈಗಾಗಲೇ ಇಲ್ಲಿ ಶನಿ ಸಿಂಗಾಪುರ ಮಾದರಿಯ ದೇವಸ್ಥಾನವನ್ನು ಸಹ ನಿರ್ಮಾಣ ಮಾಡಲಾಗಿದೆ. ಶನಿಮಹಾತ್ಮ ಹಾಗೂ ಯಮಧರ್ಮರಾಜ ಅಣ್ಣತಮ್ಮಂದಿರು ಆದ ಕಾರಣ ಇಬ್ಬರು ಒಂದೇ ಜಾಗದಲ್ಲಿ ಇರಲಿ ಎಂದು ಇಲ್ಲಿ ಯಮಧರ್ಮರಾಜನ ದೇವಸ್ಥಾನ ಕಟ್ಟಿಸುತ್ತಿದೇನೆ ಎಂದು ರಾಜು ಹೇಳಿದ್ದಾರೆ. ಈಗಾಗಲೇ ರಾಜು ಅವರು ದೇವಸ್ಥಾನ ನಿರ್ಮಾಣಕ್ಕೆ ಮೈಸೂರಿನಲ್ಲಿ ಯಮಧರ್ಮರಾಜನನ್ನು ಹೋಲುವ ಮೂರ್ತಿಯನ್ನು ಸಹ ತಯಾರು ಮಾಡಿಸಿದ್ದಾರೆ.

    ಹೊಸಹುಂಡವಾಡಿ ಗ್ರಾಮದಲ್ಲಿ ದೇವಸ್ಥಾನ ಕಟ್ಟುವುದಕ್ಕೆ ಮುಂದಾದ ರಾಜು ಅವರು, ಸ್ವಲ್ಪ ಕಾಮಗಾರಿಯನ್ನು ಮಾಡಿಸಿದ್ದಾರೆ. ಆದರೆ ಮೈಸೂರಿನ ಸೂರ್ಯನಾರಾಯಣ್ ಎಂಬವರು ಈ ಜಾಗ ನನಗೆ ನೀಡು ಎಂದು ಕಟ್ಟಿದ್ದ ದೇವಸ್ಥಾನವನ್ನು ಗುಂಪು ಕಟ್ಟಿಕೊಂಡು ಬಂದು ಕೆಡವಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ.

    ಈ ಹಿಂದೆ ರಾಜು ಅವರು ಸೂರ್ಯನಾರಾಯಣ್ ಪತ್ನಿಗೆ 15 ಲಕ್ಷ ರೂ. ನೀಡಿ ಜಾಗವನ್ನು ಖರೀದಿ ಮಾಡಿದ್ದರಂತೆ. ಆದರೆ ಈಗ ಈ ಜಾಗ 50 ಲಕ್ಷ ರೂ.ಗೆ ಬೆಲೆ ಬಾಳುತ್ತದೆ ಎಂಬ ಕಾರಣಕ್ಕೆ ದೇವಸ್ಥಾನದ ಕೆಲಸಕ್ಕೆ ಸೂರ್ಯನಾರಯಣ್ ಕಲ್ಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಯಮಧರ್ಮರಾಜ ದೇವಸ್ಥಾನ ಕಟ್ಟಲು ಹೊರಟಿರುವ ರಾಜು
  • ಕೋತಿಗೆ ಅಂತ್ಯಸಂಸ್ಕಾರ – ಸಮಾಧಿಯ ಜಾಗದಲ್ಲಿ ಭಜರಂಗಿ ಗುಡಿ

    ಕೋತಿಗೆ ಅಂತ್ಯಸಂಸ್ಕಾರ – ಸಮಾಧಿಯ ಜಾಗದಲ್ಲಿ ಭಜರಂಗಿ ಗುಡಿ

    ದಾವಣಗೆರೆ: ಅಕಾಲಿಕವಾಗಿ ಸಾವನ್ನಪ್ಪಿದ ಕೋತಿಗೆ ಹಿಂದೂ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ನಡೆದಿದೆ.

    ನಗರದ ಎಸ್.ವಿ.ಆರ್ ಕಾಲೋನಿ ಜನ ಈ ಕಾರ್ಯ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಎರಡು ಮಂಗಗಳು ಎಸ್.ವಿ.ಆರ್ ಕಾಲೋನಿಗೆ ಬಂದಿದ್ದವು. ಇಲ್ಲಿನ ಜನರಿಗೆ ಯಾವುದೇ ತೊಂದರೆ ಕೊಡದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಮಕ್ಕಳ ಜೊತೆ ಆಟವಾಡುತ್ತಾ ಎಲ್ಲರ ಮನಸ್ಸು ಗೆದ್ದಿದ್ದವು. ಆದರೆ ಬುಧವಾರ ಅಕಾಲಿಕವಾಗಿ ಸಾವನ್ನಪ್ಪಿದ ಮಂಗಕ್ಕೆ ಮನುಷ್ಯರ ಅಂತ್ಯಕ್ರಿಯೆ ನಡೆಸುವಂತೆಯೇ ಹಿಂದೂ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ಕಣ್ಬಿಟ್ಟ ಆಂಜನೇಯ ಮೂರ್ತಿ- ಭಜರಂಗಿಯನ್ನು ನೋಡಲು ಮುಗಿಬಿದ್ದ ಭಕ್ತರು

    ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕೋತಿ ಸದಾ ಜನರ ಮನಸ್ಸಲ್ಲಿ ಉಳಿಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಸಮಾಧಿ ಮೇಲೆ ಈಗ ಚಿಕ್ಕದಾದ ಆಂಜನೇಯನ ಗುಡಿ ಸ್ಥಾಪಿಸಿ, ಅಲ್ಲಿ ಆಂಜನೇಯ ಭಾವಚಿತ್ರ ಇಟ್ಟು ಜನರು ಪೂಜಿಸತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ದೊಡ್ಡದಾದ ಆಂಜನೇಯನ ದೇಗುಲ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

  • ಸುಳ್ವಾಡಿ ಮಾರಮ್ಮನ ದೇವಸ್ಥಾನದ ಬಾಗಿಲು ತೆರೆಯಲು ಸಕಲ ಸಿದ್ಧತೆ

    ಸುಳ್ವಾಡಿ ಮಾರಮ್ಮನ ದೇವಸ್ಥಾನದ ಬಾಗಿಲು ತೆರೆಯಲು ಸಕಲ ಸಿದ್ಧತೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಸುಳ್ವಾಡಿ ವಿಷ ಪ್ರಸಾದ ದುರಂತದಿಂದಾಗಿ ಕಳೆದ ಒಂದು ವರ್ಷದಿಂದಲೂ ದೇವಾಲಯದ ಬಾಗಿಲು ಬಂದ್ ಆಗಿದೆ. ದೇವಾಲಯ ಬಾಗಿಲು ತೆರೆಯುವಂತೆ ಗ್ರಾಮಸ್ಥರು, ಅಪಾರ ಸಂಖ್ಯೆಯ ಭಕ್ತರು ಸರ್ಕಾರ ಹಾಗೂ ಜಿಲ್ಲಾಡಳಿತ ಬಳಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ, ಜಿಲ್ಲಾಡಳಿತ ದೇವಾಲಯ ಬಾಗಿಲು ತೆರೆಯುವ ಕುರಿತು ಭರವಸೆ ನೀಡಿತ್ತು.

    ಅದರಂತೆ ದೇವಾಲಯದ ಅರ್ಚಕರಾಗಲು ಆಗಮಿಕ ಶಾಸ್ತ್ರ ಬರಬೇಕು ಅನ್ನೋ ನಿಯಮ ಹೊರಡಿಸಿದೆ. ಆ ಹಿನ್ನೆಲೆಯಲ್ಲಿ ಹಲವು ಜನ ಆಗಮಿಕ ಪಂಡಿತರು ಕೂಡ ದೇವಾಲಯದ ಅರ್ಚಕರಾಗಲೂ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

    ಇಂದು ರಾಜ್ಯ ಆಗಮಿಕ ಪಂಡಿತ್ ವಿದ್ವಾನ್ ಜಿ.ಎ.ವಿಜಯಕುಮಾರ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಳ್ವಾಡಿ ದೇವಾಸ್ಥಾನದ ಅರ್ಚಕರು, ಮುಖಂಡರು ಗ್ರಾಮಸ್ಥರಿಂದ ಅಭಿಪ್ರಾಯ ಸಂಗ್ರಹ ಮಾಡಿರೋದು ದೇವಾಲಯದ ಬಾಗಿಲು ತೆರೆಯುವ ಕನಸು ಚಿಗುರಿಸಿದೆ.

    ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ 17 ಜನ ಸಾವನ್ನಪ್ಪಿದ್ದು, 120 ಜನ ಅಸ್ವಸ್ಥರಾಗಿದ್ದರು. ಆ ನಂತರ ಸರ್ಕಾರ ಕಿಚ್ ಗುತ್ ಮಾರಮ್ಮನ ಟ್ರಸ್ಟ್ ಅನ್ನು ಮುಜರಾಯಿ ಇಲಾಖೆಯ ವಶಕ್ಕೆ ನೀಡಿತ್ತು.

  • ದೇವ್ರಿಗೆ ನಮಸ್ಕರಿಸಿ, ಒಂದು ರೌಂಡ್ ಹಾಕಿ ಹುಂಡಿ ಹಣ ಕಳವುಗೈದ!

    ದೇವ್ರಿಗೆ ನಮಸ್ಕರಿಸಿ, ಒಂದು ರೌಂಡ್ ಹಾಕಿ ಹುಂಡಿ ಹಣ ಕಳವುಗೈದ!

    ಯಾದಗಿರಿ: ಚಾಲಾಕಿ ಕಳ್ಳನೊಬ್ಬ ದೇವರಿಗೆ ನಮಸ್ಕಾರ ಮಾಡಿ ಅದೇ ದೇವರ ಹುಂಡಿಯಿಂದ ಹಣ ಕಳ್ಳತನ ಮಾಡಿದ್ದಾನೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರಿನ ಮಾಳಿಂಗರಾಯ ಈ ಖತರ್ನಾಕ್ ಕಳ್ಳ. ಸರಿಯಾಗಿ ಇನ್ನೂ ಮೀಸೆ ಮೂಡದ 19 ವರ್ಷದ ಈ ಮಾಳಿಂಗರಾಯ, ಕಳೆದ ಡಿಸೆಂಬರ್ 31ರ ರಾತ್ರಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದಲ್ಲಿರುವ ಮತ್ತು ಉತ್ತರ ಕರ್ನಾಟಕ ಪ್ರಸಿದ್ಧ ಕೋಡೆಕಲ್ ಬಸವಣ್ಣ ದೇವಸ್ಥಾನಕ್ಕೆ ಕನ್ನ ಹಾಕಿದ್ದಾನೆ.

    ಮೊದಲು ದೇವಸ್ಥಾನದ ಒಳಗೆ ಬಂದ ಕಳ್ಳ, ಅತ್ತ-ಇತ್ತ ನೋಡಿ ಹುಂಡಿ ಕಡೆ ಹೆಜ್ಜೆ ಹಾಕಿ ಕಳ್ಳ ಬೆಕ್ಕಿನಂತೆ ಹುಂಡಿಯನ್ನು ನೋಡುತ್ತಾನೆ. ಬಳಿಕ ದೇವರ ಮೂರ್ತಿಗೆ ನಮಸ್ಕಾರ ಮಾಡಿ, ದೇವಸ್ಥಾನಕ್ಕೆ ಒಂದು ರೌಂಡ್ ಹಾಕಿ ನಂತರ ಹುಂಡಿ ಕಡೆ ತೆರಳಿ ಬೀಗ ಮುರಿದು ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.

    ಕಳ್ಳನ ಈ ಖತರ್ನಾಕ್ ಪ್ಲಾನ್ ದೇವಸ್ಥಾನದಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೋಡೆಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಹ ದಾಖಲಾಗಿದೆ. ಘಟನೆ ನಡೆದ ನಾಲ್ಕು ದಿನಗಳಲ್ಲಿ ಪ್ರಕರಣ ಭೇದಿಸಿದ ಕೋಡೆಕಲ್ ಠಾಣೆಯ ಪೊಲೀಸರು, ಚಾಲಾಕಿ ಕಳ್ಳನನ್ನು ಬಂಧಿಸಿದ್ದಾರೆ.

  • ವೈಕುಂಠ ಏಕಾದಶಿ – ಭಕ್ತರಿಗಾಗಿ 1 ಲಕ್ಷಕ್ಕೂ ಹೆಚ್ಚು ಲಡ್ಡು ತಯಾರಿ

    ವೈಕುಂಠ ಏಕಾದಶಿ – ಭಕ್ತರಿಗಾಗಿ 1 ಲಕ್ಷಕ್ಕೂ ಹೆಚ್ಚು ಲಡ್ಡು ತಯಾರಿ

    ಬೆಂಗಳೂರು: ದರ್ನುಮಾಸದ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವಿಷ್ಣು ದೇವಾಲಯಗಳಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ವೈಯಾಲಿಕಾವಲ್‍ನ ತಿರುಮಲ ತಿರುಪತಿ ದೇವಾಸ್ಥಾನದಲ್ಲಿ ವೆಂಕಟೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

    ಏಕಾಂತ ಸೇವೆ, ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣು ನಾಮ ಪರಾಯಣ ಮಾಡಲಾಗುತ್ತಿದೆ. ದೇವರಿಗೆ ವಿಶೇಷ ಹೂವಿನ, ಆಭರಣಗಳಿಂದ ಸಿಂಗಾರ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಗೋವಿಂದ ನಾಮ ಪಸರಿಸಿದೆ. ದೇವಾಲಯವನ್ನು ವಿಶೇಷ ಅಲಂಕಾರಿಕ ಹೂವಿಗಳಿಂದ ಅಲಂಕಾರಗೊಳಿಸಲಾಗಿದೆ.

    ಬೆಳಗ್ಗೆಯಿಂದಲೇ 4 ಕಿಮೀ ದೂರದಿಂದ ಸಾರ್ವಜನಿಕರು ದೇವರ ದರ್ಶನಕ್ಕೆ ಸಾಲು ಗಟ್ಟಿ ನಿಂತಿದ್ದಾರೆ. ಬರುವ ಭಕ್ತಾಧಿಗಳಿಗಾಗಿಯೇ 1 ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ. ತಿರುಪತಿಯ ಲಡ್ಡುಗಳು ಸಹ ದೇವಾಲಯದಲ್ಲಿ ಮಾರಾಟಕ್ಕೆ ಇಡಲಾಗಿದೆ.

    ಇಂದು ಬೆಳಗ್ಗೆ 5 ಗಂಟೆಯಿಂದ ಆರಂಭವಾಗಿರುವ ವೈಕುಂಠ ದ್ವಾರದ ಪ್ರವೇಶ ರಾತ್ರಿ 9 ಗಂಟೆವರೆಗೂ ತೆರೆದಿರಲಿದೆ. ಇಂದು ಶ್ರೀನಿವಾಸ ದರ್ಶನ ಪಡೆದು ವೈಕುಂಠ ದ್ವಾರ ಪ್ರವೇಶ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗಿ ಪುಣ್ಯ ಬರಲಿದೆ ಡಂಬ ನಂಬಿಕೆಯೂ ಇದೆ.

  • ದೇವಸ್ಥಾನದ ಹುಂಡಿ ಕದಿಯುತ್ತಿದ್ದವನಿಗೆ ಬಿತ್ತು ಗೂಸಾ

    ದೇವಸ್ಥಾನದ ಹುಂಡಿ ಕದಿಯುತ್ತಿದ್ದವನಿಗೆ ಬಿತ್ತು ಗೂಸಾ

    ಧಾರವಾಡ: ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಬಂದು ಜನರ ಕೈಗೆ ಕಳ್ಳನೊಬ್ಬ ಸಿಕ್ಕಿಹಾಕೊಕಿಕೊಂಡಿರುವ ಘಟನೆ ನಗರದ ಮಿಲ್ಟ್ರಿ ಕ್ಯಾಂಟಿನ್ ಬಳಿಯ ಗಾಳಿ ದುರ್ಗೆಮ್ಮ ದೇವಸ್ಥಾನದಲ್ಲಿ ನಡೆದಿದೆ.

    ಹುಂಡಿ ಕದಿಯುವಾಗ ಆರೋಪಿ ರವಿ ಹುಬ್ಬಳ್ಳಿ ಸಿಕ್ಕಿ ಹಾಕಿಕೊಂಡಿದ್ದು, ಇವನು ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಬಂದಿದ್ದ ಎಂದು ತಿಳಿದಿದ್ದೇ ತಡ ಸ್ಥಳಿಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಕಳೆದ ಮೂರು ದಿನಗಳಿಂದ ಈತ ದೇವಸ್ಥಾನದ ಬಳಿಯೇ ಸುತ್ತಾಡುತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಕಳ್ಳ ಸಿಕ್ಕ ತಕ್ಷಣ ಆತನಿಗೆ ದೇವಸ್ಥಾನದಲ್ಲಿ ಕೂಡಿ ಹಾಕಿ ಸ್ಥಳಿಯರು ಹೊಡೆದಿದ್ದಾರೆ. ನಂತರ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆ ಕಳ್ಳ ಹುಂಡಿಯಲ್ಲಿನ ಹಣ ಎಗರಿಸಲು ದಾರಕ್ಕೆ ಬಿಲ್ಲೆ ಕಟ್ಟಿ, ಅದಕ್ಕೆ ಅಂಟು ಹಚ್ಚಿ ಕಳ್ಳತನಕ್ಕೆ ಯತ್ನಿಸಿದ್ದ. ಆರೋಪಿ ಸಿಕ್ಕಿಬಿದ್ದಿರುವ ಕುರಿತು ಸ್ಥಳೀಯರು ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

  • ನಾನು ನಾಸ್ತಿಕ, ಚಂಡಿಕಾ ಹೋಮ ಪೂಜೆಗೆ ಒತ್ತಾಯ ಮಾಡಿ ಕೂರಿಸಿದ್ರು: ಮಾಧುಸ್ವಾಮಿ

    ನಾನು ನಾಸ್ತಿಕ, ಚಂಡಿಕಾ ಹೋಮ ಪೂಜೆಗೆ ಒತ್ತಾಯ ಮಾಡಿ ಕೂರಿಸಿದ್ರು: ಮಾಧುಸ್ವಾಮಿ

    ಉಡುಪಿ: ಜಾತಿ, ಧರ್ಮ, ದೇವರ ಮೇಲೆ ನಂಬಿಕೆ ಇಲ್ಲದ ಕಾನೂನು ಸಚಿವ ಮಾಧುಸ್ವಾಮಿ ಒತ್ತಾಯಕ್ಕೆ ಮಣಿದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ.

    ಜಿಲ್ಲೆಯ ಬೈಂದೂರು ಬಿಜೆಪಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಒತ್ತಾಯ ಮಾಡಿ, ಚಂಡಿಕಾ ಹೋಮದಲ್ಲಿ ಭಾಗಿಯಾಗಿ ಪೂಜೆಗೆ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ನನಗೆ ಗ್ರಹಣ- ಹೋಮ ಎಲ್ಲ ಗೊತ್ತಿಲ್ಲ. ನಮ್ಮ ಶಾಸಕರು ಪೂಜೆಗೆ ಕೂರಿಸಿದ್ರು ನಾನು ಕೂತೆ. ಇವತ್ತಿನ ಪೂಜೆಗೂ ಗ್ರಹಣಕ್ಕೂ ಸಂಬಂಧವಿಲ್ಲ ಎಂದರು.

    ನಾನು ಹರಕೆ ಹೊರುವವನಲ್ಲ. ನಮ್ಮ ಕಥೆನೇ ಬೇರೆ ಇದೆ, ಅದೆಲ್ಲಾ ಈಗ್ಯಾಕೆ ಬಿಡಿ. ರಾತ್ರಿಯೇ ಜಾಗ ಖಾಲಿ ಮಾಡಿ ಉಡುಪಿಯಲ್ಲಿ ವಾಸ್ತವ್ಯ ಹೂಡಲು ಹೊರಟಿದ್ದೆ. ನಾನು ನಾಸ್ತಿಕ, ಆದರೆ ಎಲ್ಲರ ಒತ್ತಾಯಕ್ಕೆ ಮಣಿದು ಹೋಮದಲ್ಲಿ ಭಾಗಿಯಾಗಿದ್ದೇನೆ ಎಂದು ಮಾಧುಸ್ವಾಮಿ ಹೇಳಿದರು. ನಾನು ಹೋಮದಲ್ಲಿ ಭಾಗಿಯಾದರೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತದೆ ಎಂದು ಮೊದಲೇ ಗೊತ್ತಿತ್ತು. ಆದರೆ ಎಲ್ಲರ ಒತ್ತಾಯಕ್ಕೆ ಮಣಿದು ಪೂಜೆ, ಹೋಮದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿ ಮಾಧುಸ್ವಾಮಿ ನಕ್ಕರು.

  • ಓಂಕಾರೇಶ್ವರ ದೇವಾಲಯದಲ್ಲಿ ಗ್ರಹಣ ಶಾಂತಿ ಹೋಮ

    ಓಂಕಾರೇಶ್ವರ ದೇವಾಲಯದಲ್ಲಿ ಗ್ರಹಣ ಶಾಂತಿ ಹೋಮ

    -900ಕ್ಕೂ ಅಧಿಕ ಭಕ್ತರು ಪೂಜೆಯಲ್ಲಿ ಭಾಗಿ

    ಮಡಿಕೇರಿ: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ, ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆ ನೆರವೇರಿಸಲಾಯಿತು.

    ಗುರುವಾರ ಸೂರ್ಯಗ್ರಹಣದ ಮೊದಲೇ ದೇವಸ್ಥಾನಗಳು ಬಾಗಿಲು ಹಾಕಿ, ಸಂಜೆ ದೇವಾಲಯಗಳಲ್ಲಿ ಶುದ್ಧ ಕಾರ್ಯಗಳು ನೆರವೇರಿದವು. ಆದರೆ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಿಲ್ಲ. ಇಂದು ಬೆಳಗ್ಗೆ ಪೂಜಾ ವಿಧಿ-ವಿಧಾನಗಳಿಗೆ ದೇವಾಲಯದಲ್ಲಿ ಅನುವು ಮಾಡಿಕೊಡಲಾಗಿದೆ.

    ಬೆಳಗ್ಗೆಯಿಂದಲೂ ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸುತ್ತಿದ್ದು, ಗ್ರಹಣ ಹೋಮದಲ್ಲಿ ಭಾಗಿಯಾಗುತ್ತಿದ್ದಾರೆ. ಸುಮಾರು 900ಕ್ಕೂ ಅಧಿಕ ಭಕ್ತರು ಗ್ರಹಣ ಶಾಂತಿ ಪೂಜೆ ಮಾಡಿಸುತ್ತಿದ್ದಾರೆ. ದೇವಾಲಯದ ಪ್ರಧಾನ ಅರ್ಚಕರಾದ ಪ್ರಸನ್ನ ಅವರ ನೇತ್ರತ್ವದಲ್ಲಿ ಗ್ರಹಣ ಹೋಮ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಓಂಕಾರೇಶ್ವರ ದೇವಾಲಯದಲ್ಲಿ ಗ್ರಹಣ ಹೋಮ ನಡೆಯುತ್ತಿದೆ.

  • ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ

    ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ

    ಮೈಸೂರು: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಭರದ ಸಿದ್ಧತೆ ಎಲ್ಲೆಡೆ ನಡೆಯುತ್ತಿದೆ. ಇತ್ತ ಅರಮನೆ ನಗರಿ ಮೈಸೂರಿನಲ್ಲೂ ನೂತನ ವರ್ಷವನ್ನು ಬರ ಮಾಡಿಕೊಳ್ಳಲು ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.

    ಮೈಸೂರಿನ ಶ್ರೀ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲು ಬರೋಬ್ಬರಿ 2 ಲಕ್ಷ ತಿರುಪತಿ ಮಾದರಿಯ ಲಡ್ಡು ತಯಾರಾಗುತ್ತಿದೆ. ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇಗುಲ ಸುದರ್ಶನ ನರಸಿಂಹ ಕ್ಷೇತ್ರವೆಂದೇ ಹೆಸರುವಾಸಿವಾಗಿದೆ.

    1994 ರಿಂದಲೂ ಹೊಸ ವರ್ಷದ ಮೊದಲ ದಿನ ಈ ಲಡ್ಡುಗಳನ್ನು ವಿತರಣೆ ನಡೆಯುತ್ತಿದೆ. ಈ ಬಾರಿ ಎರಡು ಲಕ್ಷ ಲಡ್ಡುಗಳನ್ನು ವಿತರಿಸಲು ನಿರ್ಧರಿಸಿದ್ದು, ಡಿಸೆಂಬರ್ 20ರಿಂದಲೇ ಲಡ್ಡುಗಳನ್ನು ತಯಾರಿಸುವ ಕಾರ್ಯ ಶುರುವಾಗಿದೆ. ಡಿಸೆಂಬರ್ 31ಕ್ಕೆ ಲಡ್ಡುಗಳ ತಯಾರಿ ಮುಕ್ತಾಯವಾಗಲಿದೆ. 50 ಮಂದಿ ನುರಿತ ಬಾಣಸಿಗರು ಲಡ್ಡು ತಯಾರಿಸುತ್ತಿದ್ದಾರೆ.

    ಲಡ್ಡುಗಳ ತಯಾರಿಗಾಗಿ 50 ಕ್ವಿಂಟಾಲ್ ಕಡ್ಲೆ ಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4,000 ಲೀಟರ್ ಖಾದ್ಯ ತೈಲ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100 ಕೆ.ಜಿ ಬಾದಾಮಿ, 200 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ ಬೂರಾ ಸಕ್ಕರೆ, 10 ಕೆ.ಜಿ ಪಿಸ್ತಾ, 20 ಕೆ.ಜಿ ಏಲಕ್ಕಿ, 20 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 5 ಕೆ.ಜಿ ಕರ್ಪೂರ, 100 ಕೆ.ಜಿ ಲವಂಗ ಬಳಕೆ ಮಾಡಿಕೊಳ್ಳಲಾಗುತ್ತಿದೆ.