Tag: ದೇವಸ್ಥಾನ

  • ಯಶ್ ದಂಪತಿಯಿಂದ ಶತ್ರು ಸಂಹಾರ ಯಾಗ

    ಯಶ್ ದಂಪತಿಯಿಂದ ಶತ್ರು ಸಂಹಾರ ಯಾಗ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಅಡ್ಡಾ ಬಿಟ್ಟು ದೇವರ ಮೊರೆ ಹೋಗಿದ್ದು, ಪತ್ನಿ ರಾಧಿಕಾ ಮತ್ತು ಕುಟುಂಬದವರ ಜೊತೆ ಸೇರಿ ಶತ್ರು ಸಂಹಾರ ಯಾಗವನ್ನು ಮಾಡಿಸುತ್ತಿದ್ದಾರೆ.

    ಯಶ್ ಕುಟುಂಬ ಮಲ್ಲೇಶ್ವರಂನಲ್ಲಿರುವ ದುರ್ಗಾ ರಾಧಾ-ಕೃಷ್ಣ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಇಂದು ಬೆಳಗ್ಗೆ ಸುಮಾರು 10.30ರಿಂದ ಪೂಜೆ ಮಾಡಿಸುತ್ತಿದ್ದಾರೆ. ಸದ್ಯಕ್ಕೆ ಯಶ್ ದಂಪತಿ ಮಾರ್ಕಂಡೇಯ ಹೋಮ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಅಪಕಂಟಕ ಮತ್ತು ಶತ್ರು ನಾಶಕ್ಕೆ ಮಾರ್ಕಂಡೇಯ ಹೋಮ ಮಾಡಿಸಲಾಗುತ್ತದೆ. ಹೋಮದಲ್ಲಿ ಯಶ್, ರಾಧಿಕಾ, ಯಶ್ ತಂದೆ ಮತ್ತು ತಾಯಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ಸಿಬ್ಬಂದಿ ಪ್ರವೇಶ ತಡೆಹಿಡಿದಿದ್ದಾರೆ.

    ಮತ್ತೊಂದೆಡೆ ಯಶ್ ಮತ್ತು ರಾಧಿಕಾ ತಮ್ಮ ಪುತ್ರನಿಗೆ ಸರಳವಾಗಿ ನಾಮಕರಣ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಶ್ ಇದ್ದಕ್ಕಿದ್ದಂತೆ ಕೆಜಿಎಫ್ ಸಿನಿಮಾ ಶೂಟಿಂಗ್‍ನಿಂದ ಬಂದು ಮಾರ್ಕಂಡೇಯ ಹೋಮ ಮಾಡಿಸುತ್ತಿರುವುದು ಯಾಕೆ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.

    ಸದ್ಯಕ್ಕೆ ಯಶ್ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಂದ ಬೆಂಗಳೂರಿಗೆ ಬಂದು ಇಂದು ಶತ್ರು ಸಂಹಾರ ಯಾಗದ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

  • ಯಾದಗಿರಿಯ ಗೋನಾಲಕ್ಕಿಂದು ಡಿಕೆಶಿ- ಬರೋಬ್ಬರಿ 7 ಗಂಟೆಗಳ ಕಾಲ ದುರ್ಗಾದೇವಿಗೆ ಪೂಜೆ

    ಯಾದಗಿರಿಯ ಗೋನಾಲಕ್ಕಿಂದು ಡಿಕೆಶಿ- ಬರೋಬ್ಬರಿ 7 ಗಂಟೆಗಳ ಕಾಲ ದುರ್ಗಾದೇವಿಗೆ ಪೂಜೆ

    ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆರಲು ತುದಿಗಾಲಿನಲ್ಲಿರುವ ಡಿ.ಕೆ ಶಿವಕುಮಾರ್, ಕಷ್ಟ ಕಾಲದಲ್ಲಿ ಕಾಪಾಡಿ ಕೈ ಹಿಡಿದು ಮುನ್ನಡೆಸಿದ ದೇವಿಯ ಋಣ ತೀರಿಸಲು ಯಾದಗಿರಿಗೆ ಪಯಣ ಬೆಳೆಸಿದ್ದಾರೆ.

    ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಕಡೆ ದುರ್ಗಾದೇವಿ ಮತ್ತು ಮಾಜಿ ಸಚಿವ ಡಿಕಿ ಶಿವಕುಮಾರ್ ನಡುವೆ ಭಕ್ತಿಯ ಸಂಬಂಧ ಇಡೀ ರಾಜ್ಯಕ್ಕೆ ಗೊತ್ತಿದೆ. ತನ್ನ ಕಷ್ಟಗಳನ್ನು ದೂರ ಮಾಡಿದ ಮಾತೆಗೆ ನಮಿಸಲು ಡಿಕೆಶಿ ಕೊನೆಗೂ ಯಾದಗಿರಿಗೆ ಬರುತ್ತಾರೆ. ಈ ಹಿಂದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸುಳಿವು ಮೊದಲೇ ದುರ್ಗಾ ಮಾತೆ ನೀಡಿದ್ದಳು. ಈ ಬೆನ್ನಲ್ಲೇ ದೊಡ್ಡ ಸಂಕಷ್ಟವೊಂದು ಎದುರಾಗಲಿದೆ ಅಂತ ಭವಿಷ್ಯ ನುಡಿದಿದ್ದಳು. ಅದೇ ರೀತಿ ಡಿಕೆಶಿಗೆ ಇಡಿಯ ದೊಡ್ಡ ಸಂಕಷ್ಟ ಎದುರಾಯಿತು.

    ಹೀಗಾಗಿ ದೇವಿಯ ಮಹಿಮೆ ಅರಿತ ಡಿಕೆಶಿ, ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಒಂದು ತಿಂಗಳಕಾಲ ಈ ದೇವಸ್ಥಾನದ ಮಹಾದೇವಪ್ಪ ಪೂಜಾರಿಯಿಂದ ವಿಶೇಷ ಪೂಜೆ ಸಹ ಮಾಡಿಸಿ, ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರವನ್ನು ರಕ್ಷಿಸಲು ಮತ್ತು ಆದಾಯ ತೆರಿಗೆ ಪ್ರಕರಣದಲ್ಲಿ ಹೊರ ಬರುವ ಮಾರ್ಗವನ್ನು ಈ ರೀತಿ ಕಂಡುಕೊಂಡಿದ್ದರು.

    ಮಹಾದೇವಪ್ಪ ಪೂಜಾರಿ ಕಡೆಯಿಂದ ಒಂದು ತಿಂಗಳ ನಿರಂತರ ಪೂಜೆ ನಡೆಸಿದ ಡಿಕೆಶಿ, ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರೆ ಬರುವುದಾಗಿ ಮಾತು ಕೊಟ್ಟಿದ್ರು. ಆದರೆ ಕೊನೆಯ ಕ್ಷಣದಲ್ಲಿ ಡಿಕೆಶಿ ಬರುವುದನ್ನು ಕ್ಯಾನ್ಸಲ್ ಮಾಡಿಕೊಂಡಿದ್ರು. ಇದಾದ ಕೆಲವೇ ತಿಂಗಳ ಬಳಿಕ ಮೈತ್ರಿ ಸರ್ಕಾರ ಪತನಗೊಂಡು ಡಿಕೆಶಿಗೆ ಇ.ಡಿ ಕಂಟಕ ಎದುರಾಯ್ತು. ಡಿಕೆಶಿ ದೆಹಲಿಯ ತಿಹಾರ್ ಜೈಲಿನಲ್ಲಿ 45 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಇದು ದೇವಿಯ ಮುನಿಸು ಎನ್ನುವುದು ಡಿಕೆಶಿ ಗಮನಕ್ಕೆ ಬಂದಿದೆ ಎನ್ನಲಾಗಿದೆ.

    ಡಿಕೆಶಿಯನ್ನು ಇ.ಡಿ ಸಂಕಷ್ಟದಿಂದ ಪಾರು ಮಾಡಲು ಶ್ರಾವಣ ಮಾಸದ ಕೊನೆಯ ಅಮವಾಸ್ಯೆಯ ದಿನ ಶ್ರೀದುರ್ಗಾ ದೇವಿಗೆ ತಡ ರಾತ್ರಿವರೆಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ಇ.ಡಿಯ ಬಿಗಿ ಹಿಡಿತದಲ್ಲಿದ್ದ ಡಿಕೆಶಿ ಸಂಕಷ್ಟದಿಂದ ಪಾರು ಮಾಡು ಎಂದು ಮತ್ತೆ ಗೋನಾಲ ದುರ್ಗಾದೇವಿ ಮೊರೆ ಹೋಗಿದ್ರು. ಅಲ್ಲದೆ ಡಿಕೆಶಿ ದೆಹಲಿಯಲ್ಲಿ ತನಿಖೆಗೆ ಒಳಗಾಗುವಷ್ಟು ದಿನ ವಿಶೇಷ ಪೂಜೆ ಸಲ್ಲಿಸುವಂತೆ ದೇವಸ್ಥಾನ ಪೂಜಾರಿಯ ಬಳಿ ಬೇಡಿಕೊಂಡಿದ್ದಾರಂತೆ.

    ಇ.ಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಕೂಡಲೇ ಡಿಕೆಶಿ ಮಹಾದೇವಪ್ಪ ಪೂಜಾರಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಆಗ ಉಪ ಚುನಾವಣಾ ಪ್ರಚಾರದಲ್ಲಿದ್ದ ಡಿಕೆಶಿ, ಮಹಾದೇವಪ್ಪ ಪೂಜಾರಿಯವರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಯಿಸಿ ತಪ್ಪಿಗೆ ಕ್ಷಮೆ ಕೇಳಿ, ಈ ವರ್ಷದ ಜಾತ್ರೆ ಬರುವುದಾಗಿ ಮತ್ತೆ ಮಾತುಕೊಟ್ಟಿದ್ದರು. ಅದರಂತೆ ಡಿಕೆಶಿ ಇಂದು ಬೆಂಗಳೂರಿನ ಮೂಲಕ ಕಲಬುರಗಿಗೆ ವಿಮಾನದಲ್ಲಿ ಬಂದು, ಕಲಬುರಗಿಯಿಂದ ರಸ್ತೆಯ ಮೂಲಕ ಗೋನಾಲಕ್ಕೆ ಬರಲಿದ್ದಾರೆ. ಸುಮಾರು 7 ತಾಸು ದೇವಿಗೆ ಪೂಜೆ ಸಲ್ಲಿಸಲಿರುವ ಡಿಕೆಶಿ ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

    ಒಟ್ಟಿನಲ್ಲಿ ಕಳೆದ ಬಾರಿ ಕೊಟ್ಟ ಮಾತು ತಪ್ಪಿದ್ದ ಡಿಕೆಶಿ, ಈ ಬಾರಿ ಜಾತ್ರೆಯಲ್ಲಿ ತಾಯಿಯ ಋಣ ತೀರಿಸಲು ಯಾದಗಿರಿಗೆ ಬರುತ್ತಿದ್ದಾರೆ.

  • ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

    ಮತ್ತೆ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ತೆರಳಿದ್ರು ಸಿದ್ದರಾಮಯ್ಯ!

    ಗದಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸಾಹಾರ ತಿಂದು ದೇವರ ಗುಡಿಗೆ ಹೋಗುವ ಮೂಲಕ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ:  ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

    ಈ ಹಿಂದೆ ಕೂಡ ಮಾಜಿ ಸಿಎಂ ಮಂಗಳೂರನಲ್ಲಿ ನಾನ್ ವೆಜ್ ಊಟಮಾಡಿ ದೇವಸ್ಥಾನಕ್ಕೆ ಹೋಗಿ ಸಾಕಷ್ಟು ಪೇಚಿಗೆ ಸಿಲುಕಿದ್ದರು. ಈಗ ಅದೇ ರೀತಿ ಚಿಕನ್, ಫಿಶ್, ಎಗ್ ಊಟಮಾಡಿ ದೇವಸ್ಥಾನಕ್ಕೆ ಹೋಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ. ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಶ್ರೀಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಮತ್ತು ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರು, ಸೋಮವಾರ ಸಂಜೆ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮುಂಡವಾಡ ಮನೆಗೆ ಊಟಕ್ಕೆ ಹೋಗಿದ್ದರು. ಅಲ್ಲಿ ಚಿಕನ್, ಫಿಶ್, ಎಗ್ ಭರ್ಜರಿಯಾಗಿ ಬಾಡೂಟ ಸವಿದು ನಂತರ ಶ್ರೀಬೀರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನ ಲೋಕಾರ್ಪಣೆ ಮಾಡಿ, ಬೀರೇಶ್ವರ ಹಾಗೂ ರೇವಣಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಪಕ್ಕದ ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದರು. ನಂತರ ಸಮಾರಂಭದ ವೇದಿಕೆಗೆ ಆಗಮಿಸಿದರು.

    ನಾನ್ ವೆಜ್ ಊಟಮಾಡಿ ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸಿರುವ ವಿಚಾರ ಸಿದ್ದರಾಮಯ್ಯನವರು ಹೋದನಂತರ ತಿಳಿದಿದೆ. ಇದರಿಂದ ಅನೇಕರ ಆಕ್ರೋಶಕ್ಕೆ ಸಿದ್ದರಾಮಯ್ಯನವರು ಗುರಿಯಾಗಿದ್ದಾರೆ. ಈ ಊಟದಲ್ಲಿ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ ಮತ್ತು ಸಲೀಂ ಅಹ್ಮದ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗಿಯಾಗಿದ್ದರು.

     

  • ಮಂಡ್ಯದಲ್ಲಿ 65 ದೇವಸ್ಥಾನ, 4 ಮಸೀದಿಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ

    ಮಂಡ್ಯದಲ್ಲಿ 65 ದೇವಸ್ಥಾನ, 4 ಮಸೀದಿಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ

    ಮಂಡ್ಯ: ಜಿಲ್ಲೆಯಲ್ಲಿ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ 65 ದೇವಾಲಯಗಳು ಹಾಗೂ 4 ಮಸೀದಿಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

    ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇದೀಗ ಜಿಲ್ಲಾಡಳಿತ ಸಾರ್ವಜನಿಕ ಜಾಗದಲ್ಲಿ ತಲೆ ಎತ್ತಿರುವ ದೇವಾಲಯಗಳು ಹಾಗೂ ಮಸೀದಿಗಳನ್ನು ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಡಳಿತ ದೇವಸ್ಥಾನಗಳು ಹಾಗೂ ಮಸೀದಿಗಳನ್ನು ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಜಿಲ್ಲಾಡಳಿತ ಸಾರ್ವಜನಿಕ ಜಾಗದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಹಾಗೂ ಮಸೀದಿಗಳನ್ನು ತೆರವು ಮಾಡಲು ಮುಂದಾಗಿದ್ದು, ಈ ಹಿನ್ನೆಯಲ್ಲಿ ದೇವಸ್ಥಾನಗಳ ಹಾಗೂ ಮಸೀದಿಗಳ ಟ್ರಸ್ಟಿಗೆ ಹಾಗೂ ಮುಖ್ಯಸ್ಥರಿಗೆ ನೋಟಿಸ್ ಕೂಡ ನೀಡಿದೆ. ದೇವಸ್ಥಾನ ಹಾಗೂ ಮಸೀದಿಗಳಿಗೆ ಸೇರಿದ ದಾಖಲೆ ಪತ್ರಗಳನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಸೂಚನೆ ನೀಡಿದೆ. ದಾಖಲೆಯನ್ನು ಸಲ್ಲಿಕೆ ಮಾಡಲು ನಾಳೆ ಕೊನೆಯ ದಿನಾಂಕವಾಗಿದೆ.

    ಸಾರ್ವಜನಿಕ ಜಾಗದಲ್ಲಿ ನಿರ್ಮಾಣ ಮಾಡಿರುವ ದೇವಸ್ಥಾನಗಳು ಮಂಡ್ಯ ನಗರ ಪ್ರದೇಶಗಳಲ್ಲಿ ಅಯ್ಯಪ್ಪ ದೇವಸ್ಥಾನ, ಆದಿಶಕ್ತಿ ಮಾರಮ್ಮ, ಚಾಮುಂಡೇಶ್ವರಿ ದೇವಸ್ಥಾನ, ಗಣೇಶ ದೇವಸ್ಥಾನ, ಮಹದೇಶ್ವರ ದೇವಸ್ಥಾನ, ಎಡಮುರಿ ಗಣಪತಿ ದೇವಸ್ಥಾನ, ಸುಬ್ರಹ್ಮಣ್ಯ ನಾಗರಕಟ್ಟೆ, ಮಾರಮ್ಮ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಬೃಂದಾವನದ ದೇವಾಲಯ ಸೇರಿದಂತೆ ಮೊದಲಾದ ದೇವಸ್ಥಾನಗಳನ್ನು ಪಟ್ಟಿ ಮಾಡಲಾಗಿದೆ.

    ಈ ಪೈಕಿ 4 ಮಸೀದಿಗಳನ್ನು ಸಹ ಗುರುತಿಸಲಾಗಿದೆ. ಶೀಘ್ರದಲ್ಲಿ ಈ ದೇವಸ್ಥಾನಗಳು ಹಾಗೂ ಮಸೀದಿಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ. ನ್ಯಾಯಾಲಯದ ಈ ನಿರ್ದೇಶನಕ್ಕೆ ಭಕ್ತರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆ ದೇವಸ್ಥಾನ ಹಾಗೂ ಮಸೀದಿಗಳನ್ನು ಹೇಗೆ ತೆರವುಗೊಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಮಕರ ರಾಶಿಗೆ ಶನಿ ಪ್ರವೇಶ – ಜನರಲ್ಲಿ ಆತಂಕ

    ಮಕರ ರಾಶಿಗೆ ಶನಿ ಪ್ರವೇಶ – ಜನರಲ್ಲಿ ಆತಂಕ

    ಬೆಂಗಳೂರು: ಇಂದಿನಿಂದ ಶನಿ ತನ್ನ ಸ್ಥಾನವನ್ನು ಬದಲಾಯಿಸಿದ್ದಾನೆ. ಸರಿಯಾಗಿ ಇಂದು 12.05ಕ್ಕೆ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಶನಿಯ ಆಗಮನ ಕೆಲ ರಾಶಿಯ ಮೇಲೆ ಗಾಢ ಪರಿಣಾಮ ಬೀರಲಿದೆ. ಮುಖ್ಯವಾಗಿ ಧನಸ್ಸು, ಕುಂಬ, ಮಕರ ರಾಶಿಗಳಿಗೆ ಸಂಕಟ ಎದುರಾಗಲಿದೆ ಎಂದು ಜ್ಯೋತಿಷ್ಯಗಳು ಅಭಿಪ್ರಾಯಪಟ್ಟಿದ್ದಾರೆ.

    ನಗರದ ಬಹುತೇಕ ಶನೈಶ್ವರ ದೇಗುಲಗಳಲ್ಲಿ ಸಂಜೆವರೆಗೂ ವಿಶೇಷ ಪೂಜೆ, ಹೋಮ, ಕುಂಬಾಭಿಷೇಕ ನಡೆಯಿತು. ಇನ್ನೂ ಮೈಸೂರು ರಸ್ತೆಯಲ್ಲಿರುವ ದೀಪಾಂಜಲಿ ನಗರದ ಶನೈಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ದ್ವಾದಶ ರಾಶಿಗಳ ಬದಲಾವಣೆ ಮೇಲೆ ಹೋಮ, ಕುಂಬಾಭಿಷೇಕ, ಪೂಜೆ ನಡೆಸಲಾಯಿತು.

    ದೋಷ ಪರಿಹಾರಕ್ಕಾಗಿ 108 ಮಹಿಳೆಯರು ಕಳಸ ಹೊತ್ತುಕೊಂಡು ಶನೈಶ್ವರನ ದರ್ಶನ ಪಡೆದು, ಪೂಜೆ ಮಾಡಿಸಿದರು. ಸಹಜವಾಗಿ ಪ್ರತಿನಿತ್ಯ ಎರಡು ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತಿತ್ತು. ಆದರೆ ಇಂದು ಶನಿಮೌನಿ ಅಮವಾಸ್ಯೆ ಹಾಗೂ ಶನಿ ಪ್ರವೇಶ ಹಿನ್ನೆಲೆ ರಾತ್ರಿ 11 ಗಂಟೆವರೆಗೂ ದೇವಸ್ಥಾನದ ಬಾಗಿಲು ಓಪನ್ ಇರಲಿದೆ.

    ಸಂಜೆಯ ನಂತರ ದೇಗುಲಕ್ಕೆ ಅಲಂಕಾರ ಮಾಡಿ, ಮತ್ತೆ ಪೂಜೆ, ಹೋಮ ಕಾರ್ಯಕ್ರಮಗಳು ನಡೆಯಲಿವೆ. ನಾಳೆಯೂ ಮತ್ತೆ ಶನಿದೋಷ ಪರಿಹಾರಕ್ಕಾಗಿ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆಯಲಿವೆ.

  • ದೇವರು, ಭಕ್ತರಿಗೂ ತಡೆಗೋಡೆಯೇ ಇಲ್ಲ- 23 ಅಡಿ ಏಕಶಿಲಾ ಶನಿ ವಿಗ್ರಹಕ್ಕೆ ಭಕ್ತರಿಂದ ನೇರ ಎಳ್ಳೆಣ್ಣೆ ಅಭಿಷೇಕ

    ದೇವರು, ಭಕ್ತರಿಗೂ ತಡೆಗೋಡೆಯೇ ಇಲ್ಲ- 23 ಅಡಿ ಏಕಶಿಲಾ ಶನಿ ವಿಗ್ರಹಕ್ಕೆ ಭಕ್ತರಿಂದ ನೇರ ಎಳ್ಳೆಣ್ಣೆ ಅಭಿಷೇಕ

    ಉಡುಪಿ: ಶನಿ ಇಂದು ಧನುಸ್ಸು ರಾಶಿಯಿಂದ ಮಕರ ರಾಶಿಗೆ  ಪ್ರವೇಶಿಸುತ್ತಿದ್ದಾನೆ. 30 ವರ್ಷಗಳ ಬಳಿಕ ಈ ವಿದ್ಯಮಾನ ನಡೆಯುತ್ತಿದೆ. ಶನಿ ತನ್ನ ಸ್ವಂತ ಮನೆ ಮಕರಕ್ಕೆ ಪ್ರವೇಶ ಮಾಡುತ್ತಿದ್ದು ಎಲ್ಲೆಡೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದೆ.

    ಉಡುಪಿ ಜಿಲ್ಲೆ ಬನ್ನಂಜೆಯ ಶನೀಶ್ವರ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಶನಿ ಶಾಂತಿ ಹೋಮ ನಡೆಯಿತು. ನೂರಾರು ಭಕ್ತರು ಬನ್ನಂಜೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. 23 ಅಡಿ ಎತ್ತರದ ಶನಿ ದೇವರ ವಿಗ್ರಹವನು ಬನ್ನಂಜೆಯಲ್ಲಿ ಸ್ಥಾಪಿಸಲಾಗಿದ್ದು, ವಿಶ್ವದ ಏಕೈಕ ಅತೀ ಎತ್ತರದ ವಿಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ.

    ಭಕ್ತರು ಎಳ್ಳೆಣ್ಣೆ ಅಭಿಷೇಕ, ಎಳ್ಳು ಗಂಟು ಆರತಿ ಮತ್ತಿತರ ಸೇವೆಯನ್ನು ಭಕ್ತರೇ ದೇವರಿಗೆ ಅರ್ಪಿಸುವ ವಿಶೇಷ ಅವಕಾಶ ಬನ್ನಂಜೆ ಕ್ಷೇತ್ರದಲ್ಲಿದೆ. ಕ್ಷೇತ್ರದ ಪೂಜೆಯ ಅರ್ಚಕ ಸತ್ಯನಾರಾಯಣ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಭಕ್ತರಾಧಿಗಳಿಗಳ ಶನಿದೋಷ ಪರಿಹಾರಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ ಎಂದರು.

    ಎಳ್ಳೆಣ್ಣೆಯ ಅಭಿಷೇಕ ಅರ್ಚಕರಿಂದ ಆಗುವುದಿಲ್ಲ. ಬಂದ ಭಕ್ತರು ಎಣ್ಣೆ ಖರೀದಿ ಮಾಡಿ ಅಭಿಷೇಕ ಮಾಡುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು 10 ವರ್ಷದ ಹಿಂದೆ ವಾರಂಗಲ್ ನಿಂದ ಬೃಹತ್ ಕರಿಕಲ್ಲನ್ನು ಉಡುಪಿಗೆ ತಂದಿದ್ದರು. ಎರಡು ವರ್ಷಗಳ ಕಾಲ ಕಲ್ಲನ್ನು ಇಲ್ಲೇ ಕೆತ್ತನೆ ಮಾಡಲಾಯಿತು. ಇದೀಗ 10 ವರ್ಷಗಳ ಹಿಂದೆ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿ ಶನಿವಾರ ಸಾವಿರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

    ಇಂದು ವಿಶೇಷ ದಿನವಾಗಿರುವುದರಿಂದ ಹೋಮ ಹವನಾದಿಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಉಡುಪಿ ನಗರದಿಂದ ಎರಡು ಕಿ.ಮೀ ದೂರವಿರುವ ಬನ್ನಂಜೆ ಶನೀಶ್ವರ ಕ್ಷೇತ್ರ ದೇಶದಲ್ಲೇ ವಿಶಿಷ್ಟವಾದ ದೇವಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.

  • ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

    ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

    ಮಂಗಳೂರು: ದೇವಸ್ಥಾನಗಳಿಗೆ ಭಕ್ತರು ತಮ್ಮಿಷ್ಟದಂತೆ ಡ್ರೆಸ್ ತೊಟ್ಟು ಬರುತ್ತಾರೆ. ಆದರೆ ಇದು ಕೆಲವು ಮಂದಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಗೆ ಸರ್ಕಾರಕ್ಕೆ ತರಲು ಒತ್ತಾಯಿಸಿದ್ದಾರೆ. ಅದರಲ್ಲೂ ವಿಶ್ವ ಹಿಂದೂ ಪರಿಷತ್, ರಾಜ್ಯದ ನಂಬರ್ ಒನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಪಣತೊಟ್ಟಿದೆ.

    ನೆರೆಯ ರಾಜ್ಯಗಳಾದ ಕೇರಳ ಮತ್ತು ಆಂಧ್ರದಲ್ಲಿರುವಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸರ್ಕಾರವನ್ನು ಆಗ್ರಹಿಸಿದೆ. ಇದಕ್ಕೆ ಪೂರ್ವಭಾವಿ ಎಂಬಂತೆ ರಾಜ್ಯದ ನಂಬರ್ ಒನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದು, ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲ ಭಕ್ತರು ಅಸಭ್ಯವಾಗಿ ಡ್ರೆಸ್ ಹಾಕುವ ಬಗ್ಗೆ ಕೆಲ ಭಕ್ತ ಗಣ ಸ್ಥಳೀಯ ವಿಎಚ್‌ಪಿ ಮುಖಂಡರ ಬಳಿ ದೂರು ಕೊಟ್ಟಿದ್ದು, ಇದೇ ದೂರಿನ ಅನುಸಾರವಾಗಿ ವಿಎಚ್‍ಪಿ ಮತ್ತು ಬಜರಂಗ ದಳದ ಪ್ರಮುಖರು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗೆ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಮನವಿ ಮಾಡಿದೆ.

    ಕೆಲವರ ಡ್ರೆಸ್ ಕೋಡ್ ನಿಂದ ಭಕ್ತರ ಮನಸ್ಸು ಚಂಚಲಗೊಳ್ಳುತ್ತಿದ್ದು, ಪುರುಷರು ಪಂಚೆ ಅಥವಾ ಧೋತಿ, ಮಹಿಳೆಯರು ಸೀರೆಯಲ್ಲಿ ದೇವಸ್ಥಾನಕ್ಕೆ ಬರಲು ಆದೇಶಿಸುವಂತೆ ಮನವಿ ಮಾಡಲಾಗಿದೆ ಎಂದು ವಿಎಚ್‍ಪಿಯ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

    ಕಾಂಗ್ರೆಸ್ ಮಾತ್ರ ವಿಎಚ್‍ಪಿ ಮನವಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಭಕ್ತರ ಒತ್ತಡ ಹೇರಿಕೆಯ ಕೆಲಸವಾಗುತ್ತಿದ್ದು, ಭಕ್ತರ ಸ್ವಾತಂತ್ರ್ಯಕ್ಕೆ ಬಿಟ್ಟು ಬಿಡಬೇಕು. ಸರ್ಕಾರ ದೇವಸ್ಥಾನಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆ ಭಕ್ತರು ಈ ಹಿಂದೆ ಬರುತ್ತಿದ್ದಂತೆಯೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

    ಈ ಗೊಂದಲ ಬಗ್ಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಆದರೆ ಹಲವು ದೇವಸ್ಥಾನಗಳಿಂದ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಮನವಿಗಳು ಬಂದಿದ್ದು, ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಆದರೆ ಸರ್ಕಾರ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮ ವಿಧಿಸುತ್ತಾ ಅಥವಾ ಭಕ್ತರ ಇಷ್ಟಾನುಸಾರವಾಗಿ ಬಿಟ್ಟುಕೊಡುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಡಿಕೆಶಿಗೆ ಕೆಪಿಸಿಸಿ ಪಟ್ಟ – ತಾಯಿ ಗೌರಮ್ಮರಿಂದ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ

    ಡಿಕೆಶಿಗೆ ಕೆಪಿಸಿಸಿ ಪಟ್ಟ – ತಾಯಿ ಗೌರಮ್ಮರಿಂದ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ

    ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟದ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದ್ದು, ಡಿಕೆಶಿ ಬೆಂಬಲಿಗರಲ್ಲಿ ಸಂತೋಷ ಮನೆ ಮಾಡಿದರೆ, ಇತ್ತ ಡಿಕೆಶಿ ತಾಯಿ ಗೌರಮ್ಮ ಶಕ್ತಿದೇವತೆ ಕಬ್ಬಾಳಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿನ ಶಕ್ತಿದೇವತೆ ಕಬ್ಬಾಳಮ್ಮ ದೇವಿಗೆ ಡಿಕೆಶಿ ತಾಯಿ ಗೌರಮ್ಮ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ಹೆಚ್ಚು ನಂಬಿರುವ ಕಬ್ಬಾಳಮ್ಮ ದೇವಿಗೆ ತಮ್ಮ ಕುಟುಂಬದಲ್ಲಿ ಏನೇ ವಿಶೇಷವಿದ್ದರೂ ಸಹ ಡಿಕೆಶಿ ಕುಟುಂಬದವರು ಪೂಜೆ ಸಲ್ಲಿಸುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಮಗ ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ಒಲಿಯುತ್ತಿರುವ ಹಿನ್ನೆಲೆಯಲ್ಲಿ ಗೌರಮ್ಮನವರು ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಮಕ್ಕಳ ಹೆಸರಿನಲ್ಲಿ ಅರ್ಚನೆ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಡಿಕೆಶಿ ಸಹ ಯಾವುದೇ ಕಾರ್ಯ ಮಾಡಬೇಕಿದ್ರೂ ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ದಿನ, ಚುನಾವಣೆ ಫಲಿತಾಂಶ, ಅಧಿಕಾರ ಸ್ವೀಕಾರ ಪಡೆಯುವ ವೇಳೆಯಲ್ಲಿ ಅಲ್ಲದೇ ಕಳೆದ ವರ್ಷ ತಿಹಾರ್ ಜೈಲಿನಿಂದ ಹೊರಬಂದ ಸಂದರ್ಭದಲ್ಲಿಯೂ ಸಹ ಪೂಜೆ ಸಲ್ಲಿಸಿದ್ದರು.

  • ಕಳೆದ ವರ್ಷ ಕೋಟಿಗಟ್ಟಲೆ ಆದಾಯ ತಂದ ಕರ್ನಾಟಕದ ಟಾಪ್ 10 ದೇವಾಲಯಗಳ ಪಟ್ಟಿ ಬಿಡುಗಡೆ

    ಕಳೆದ ವರ್ಷ ಕೋಟಿಗಟ್ಟಲೆ ಆದಾಯ ತಂದ ಕರ್ನಾಟಕದ ಟಾಪ್ 10 ದೇವಾಲಯಗಳ ಪಟ್ಟಿ ಬಿಡುಗಡೆ

    ಬೆಂಗಳೂರು: ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುವ ರಾಜ್ಯದ ಟಾಪ್ 10 ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇವಾಲಯ ಗಳಿಸಿರುವ ಆದಾಯದ ಎಷ್ಟು ಎಂಬ ಆಧಾರದಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

    ಮೊದಲ ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಿದ್ದು, ಕಳೆದ ವರ್ಷ ಈ ದೇಗುವ ಬರೋಬ್ಬರಿ 100 ಕೋಟಿ ರೂ. ಆದಾಯ ಗಳಿಸಿದೆ. ಎರಡನೇ ಸ್ಥಾನದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿದ್ದು, 90-92 ಕೋಟಿ ರೂ. ಆದಾಯವನ್ನು ಕಳೆದ ವರ್ಷ ದೇಗುಲ ಗಳಿಸಿದೆ.

    ಮೂರನೇ ಸ್ಥಾನದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವಿದ್ದು, ಈ ದೇವಾಲಯ 40-42 ಕೋಟಿ ರೂ. ಆದಾಯ ಪಡೆದಿದೆ. ಮೈಸೂರು ಚಾಮುಂಡೇಶ್ವರಿ ದೇವಾಲಯ ನಾಲ್ಕನೇ ಸ್ಥಾನ ಪಡೆದಿದ್ದು, ಸುಮಾರು 30-33 ಕೋಟಿ ರೂ. ಆದಾಯ ಗಳಿಸಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯ 15-20 ಕೋಟಿ ರೂ. ಆದಾಯ ಗಳಿಸುವ ಮೂಲಕ ಐದನೇ ಸ್ಥಾನ ಪಡೆದುಕೊಂಡಿದೆ.

    ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯ ಆರನೇ ಸ್ಥಾನ ಪಡೆದಿದ್ದು, 15-17 ಕೋಟಿ ರೂ. ಆದಾಯ ಗಳಿಸಿದೆ. ಏಳನೇ ಸ್ಥಾನದಲ್ಲಿ ಮಂದರ್ತಿ ದೇವಾಲಯವಿದ್ದು, ಇದು ಕಳೆದ ವರ್ಷ 10-12 ಕೋಟಿ ರೂ. ಆದಾಯ ಪಡೆದಿದೆ. ಕೊಪ್ಪಳದ ಗುಳ್ಳಮ್ಮನ ದೇವಾಲಯ 08-10 ಕೋಟಿ ರೂ. ಆದಾಯಗಳಿಸಿ ಎಂಟನೇ ಸ್ಥಾನದಲ್ಲಿದೆ. 08-10 ಕೋಟಿ ಆದಾಯ ಗಳಿಸಿ ಬೆಂಗಳೂರಿನ ಬನಶಂಕರಿ ದೇವಾಲಯ ಒಂಭತ್ತನೇ ಸ್ಥಾನ ಪಡೆದಿದ್ದು, 08-10 ಕೋಟಿ ಆದಾಯದೊಂದಿಗೆ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯ ಹತ್ತನೇ ಸ್ಥಾನ ಪಡೆದುಕೊಂಡಿದೆ.

  • ಆಂಧ್ರದ ಸ್ವಾತ್ಮಾನಂದೇಂದ್ರ ಶ್ರೀಗಳಿಂದ ಉಡುಪಿ ಸಂಚಾರ – ಸಮುದ್ರರಾಜನಿಗೆ ಪೂಜೆ ಸಲ್ಲಿಕೆ

    ಆಂಧ್ರದ ಸ್ವಾತ್ಮಾನಂದೇಂದ್ರ ಶ್ರೀಗಳಿಂದ ಉಡುಪಿ ಸಂಚಾರ – ಸಮುದ್ರರಾಜನಿಗೆ ಪೂಜೆ ಸಲ್ಲಿಕೆ

    ಉಡುಪಿ: ಆಂಧ್ರಪ್ರದೇಶದ ವೈಶಾಖ ಶ್ರೀ ಶಾರದಾ ಪೀಠದ ಶ್ರೀಸ್ವಾತ್ಮಾನಂದೇಂದ್ರ ಸ್ವಾಮೀಜಿ ದೇವಾಲಯಗಳ ನಗರಿ ಉಡುಪಿ ಯಾತ್ರೆಯಲ್ಲಿದ್ದಾರೆ. ಈ ಸಂದರ್ಭ ಮಲ್ಪೆಯಲ್ಲಿ ಸಮುದ್ರ ಪೂಜೆ ಸಲ್ಲಿಸಿದ್ದಾರೆ.

    ಉಡುಪಿಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಶ್ರೀಗಳು ಮೂರು ದಿನಗಳ ಯಾತ್ರೆಯನ್ನು ಕೈಗೊಂಡಿದ್ದಾರೆ. ಸಂಚಾರ ಸಂದರ್ಭ ಮಲ್ಪೆ ಸಾಗರತೀರಕ್ಕೆ ಸ್ವಾಮೀಜಿ ಭಕ್ತರ ಜೊತೆ ಭೇಟಿ ನೀಡಿದರು. ಸಮುದ್ರರಾಜನಿಗೆ ನಮಸ್ಕರಿಸಿದ ಅವರು, ಸಮುದ್ರದ ನೀರನ್ನು ದೇಹಕ್ಕೆ ಚಿಮುಕಿಸಿಕೊಂಡರು.

    ಸ್ವರೂಪೇಂದ್ರ ಸರಸ್ವತಿ ಮಹಾಸ್ವಾಮಿಗಳ ಶಿಷ್ಯರಾಗಿರುವ ಶ್ರೀಸ್ವಾತ್ಮಾನಂದೇಂದ್ರರು ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳ ಯಾತ್ರೆಯಲ್ಲಿದ್ದಾರೆ. ಈ ಸಂದರ್ಭ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನಕ್ಕೂ ಭೇಟಿ ನೀಡಿದ್ದಾರೆ. ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.