Tag: ದೇವಸ್ಥಾನ

  • ನಮ್ಮ ಪ್ರಾಣ ಹೋದ್ರೂ ಪರವಾಗಿಲ್ಲ, ದೇವಸ್ಥಾನವನ್ನು ಬಿಟ್ಟು ಕೊಡಲ್ಲ: ಭಕ್ತರ ಆಕ್ರೋಶ

    ನಮ್ಮ ಪ್ರಾಣ ಹೋದ್ರೂ ಪರವಾಗಿಲ್ಲ, ದೇವಸ್ಥಾನವನ್ನು ಬಿಟ್ಟು ಕೊಡಲ್ಲ: ಭಕ್ತರ ಆಕ್ರೋಶ

    ಬೆಂಗಳೂರು: ಹೈಕೋರ್ಟ್ ಆದೇಶದ ಮೆರೆಗೆ ಸರ್ಕಾರಿ ಜಾಗದಲ್ಲಿರುವ ದೇಗುಲಗಳನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶ್ರೀರಾಂಪುರದ ಗಂಗಮ್ಮ ದೇಗುಲದ ತೆರವು ಕಾರ್ಯಚರಣೆಗೆ ಪಾಲಿಕೆಯ ಅಧಿಕಾರಿಗಳು ಮುಂದಾದರು. ಆದರೆ ಭಕ್ತರ ತೀವ್ರ ವಿರೋಧಕ್ಕೆ ಮಣಿದು ತೆರವು ಕಾರ್ಯಚರಣೆ ಮಾಡದೇ ವಾಪಸ್ಸಾದರು.

    ಗಂಗಮ್ಮ ದೇಗುಲವನ್ನು ಯಾವುದೇ ಕಾರಣಕ್ಕೆ ಬಿಟ್ಟು ಕೊಡುವುದಿಲ್ಲ. ನಮ್ಮ ಪ್ರಾಣ ಬೇಕಾದ್ರೂ ಕೊಡ್ತೇವೆ. ಆದರೆ ದೇವಸ್ಥಾನವನ್ನ ಒಡೆಯೋದಕ್ಕೆ ಬಿಡಲ್ಲ. 80 ವರ್ಷದ ದೇಗುಲವನ್ನು ಕೆಡವುದಕ್ಕೆ ಬಿಡಲ್ಲ ಎಂದು ಹೇಳುತ್ತಾ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ಕುಳಿತರು. 2009ರ ನಂತರ ನಗರದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕೆ ಭಕ್ತರು ವಿರೋಧ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    ಸರ್ಕಾರಿ ಜಾಗದಲ್ಲಿರುವ ದೇಗುಲಗಳನ್ನು ತೆರವುಗೊಳಿಸಿ ಎಂಬ ಆದೇಶ ಬಂದಿದ್ದರಿಂದ ಬಿಬಿಎಂಪಿಯ ಅಧಿಕಾರಿಗಳು ಇಂದು ಶ್ರೀರಾಂಪುರದ ಗಂಗಮ್ಮ ದೇಗುಲದ ತೆರವು ಕಾರ್ಯಚರಣೆಗೆ ಹೋಗಿದ್ದರು. ಈ ಹಿಂದೆ ಟೋಲ್ ಗೇಟ್ ನಲ್ಲಿರುವ ಸಾಯಿಬಾಬಾ ದೇವಸ್ಥಾನವನ್ನು ತೆರವು ಮಾಡೋದಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಅಲ್ಲಿಯೂ ಭಕ್ತರ ವಿರೋಧ ಹಿನ್ನೆಲೆ ತೆರವು ಕಾರ್ಯಚರಣೆಯನ್ನು ಪಾಲಿಕೆಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದ್ದರು.

  • ಸುಪ್ರೀಂಕೋರ್ಟ್ ಆದೇಶ – ಐತಿಹಾಸಿಕ ದೇವಾಲಯ ತೆರವು

    ಸುಪ್ರೀಂಕೋರ್ಟ್ ಆದೇಶ – ಐತಿಹಾಸಿಕ ದೇವಾಲಯ ತೆರವು

    ದಾವಣಗೆರೆ: ರಾಜ್ಯದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಉಚ್ಚಂಗಿಯಲ್ಲಮ್ಮ ದೇವಿಯ ಪಾದುಗಟ್ಟೆ ದೇವಸ್ಥಾನವನ್ನು ಇಂದು ತೆರವು ಮಾಡಲಾಯಿತು.

    ಉಚ್ಚಂಗಿದುರ್ಗ ಗ್ರಾಮದ ಮಧ್ಯದಲ್ಲಿರುವ ಉಚ್ಚಂಗಿದೇವಿಯ ಪಾದುಗಟ್ಟೆ ದೇವಸ್ಥಾನ ರಸ್ತೆ ಬದಿಯಲ್ಲಿ ಇತ್ತು. ಹರಪ್ಪನಹಳ್ಳಿ ಹಾಗೂ ಉಚ್ಚಂಗಿ ದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ದೇವಾಲಯವಿದೆ. ಹೀಗಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅಲ್ಲದೆ ಸುಪ್ರೀಂಕೋರ್ಟ್ ನ ಆದೇಶದ ಪ್ರಕಾರ ಇಂದು ತಹಶೀಲ್ದಾರ್ ಹಾಗೂ ಪೊಲೀಸರ ಭದ್ರತೆಯಲ್ಲಿ ದೇವಸ್ಥಾನವನ್ನು ಜೆಸಿಬಿ ಮುಖಾಂತರ ತೆರವುಗೊಳಿಸಿದರು.

    ನೂರಾರು ವರ್ಷಗಳ ಇತಿಹಾಸವಿರುವ ಉಚ್ಚಂಗಿ ದೇವಿಯ ದೇವಸ್ಥಾನ ಗುಡ್ಡದ ಮೇಲಿದ್ದು, ಆ ದೇವಿಯ ಪಾದಗಟ್ಟೆ ಗ್ರಾಮದ ಮಧ್ಯ ಇತ್ತು. ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ನೂರಾರು ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಈಗ ಏಕಾಏಕಿ ದೇವಸ್ಥಾನ ತೆರವು ಮಾಡಲು ಸುಪ್ರೀಂಕೋರ್ಟ್ ಆದೇಶ ಬರುತ್ತಿದ್ದಂತೆ ಭಕ್ತರು ಹಾಗೂ ಗ್ರಾಮಸ್ಥರು ವಿರೋಧ ಮಾಡಿದರು.

    ಜಿಲ್ಲಾಧಿಕಾರಿಗಳು, ಎಸ್.ಪಿ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಮೀರಲು ಸಾಧ್ಯವಿಲ್ಲ ಎಂದು ಭಕ್ತರು ಹಾಗೂ ಗ್ರಾಮಸ್ಥರ ಮನವೊಲಿಸಿದ್ದರು. ಇಂದು ಬೆಳಗ್ಗೆಯಿಂದಲೇ ಜೆಸಿಬಿ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಈ ರೀತಿಯಾಗಿ ನೆಲಸಮ ಆಗಿರುವುದಕ್ಕೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು.

  • ನಿಧಿ ಶೋಧನೆ ನಡೆಸಲು ಹೋದ ಅರ್ಚಕನ ಜೊತೆ ಐವರು ಅರೆಸ್ಟ್

    ನಿಧಿ ಶೋಧನೆ ನಡೆಸಲು ಹೋದ ಅರ್ಚಕನ ಜೊತೆ ಐವರು ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಬಡಗೋಡಿನ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿಧಿ ಶೋಧನೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

    ಬಡಗೋಡಿಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನಯ್ಯ, ಬರದವಳ್ಳಿಯ ಹಾಲಸ್ವಾಮಿ, ಶಿರಸಿಯ ಸೂರಜ್, ರಘುನಾಥ್ ಮತ್ತು ಸಾಗರದ ಭಾಸ್ಕರ್ ಬಂಧಿತ ಆರೋಪಿಗಳು. ಇದರ ಜೊತೆಗೆ ಆರೋಪಿಗಳು ನಿಧಿ ಶೋಧಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಕಾರು, ನೆಲ ಅಗಿಯಲು ತಂದಿದ್ದ ಸಾಮಾಗ್ರಿ, ಲೋಹ ಪತ್ತೆಯ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ದೇವಸ್ಥಾನದ ಹಿಂಭಾಗ ನಿಧಿ ಶೋಧ ಕಾರ್ಯದಲ್ಲಿ ಕೆಲವರು ತೊಡಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಈ ವೇಳೆ ಆರೋಪಿಗಳು ವಾಹನದಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರು ಆರೋಪಿಗಳನ್ನು ಸ್ಥಳದಲ್ಲಿಯೇ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಲು ಯಶಸ್ವಿಯಾಗಿದ್ದಾರೆ. ನಿಧಿ ಶೋಧನೆಯಲ್ಲಿ ತೊಡಗಿದ್ದ ಐವರು ಆರೋಪಿಗಳ ವಿರುದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ದೇವಸ್ಥಾನದಲ್ಲಿ ಮಾತೆಯರಿಗೆ ಮಾರ್ಷಲ್ ಆರ್ಟ್ಸ್

    ದೇವಸ್ಥಾನದಲ್ಲಿ ಮಾತೆಯರಿಗೆ ಮಾರ್ಷಲ್ ಆರ್ಟ್ಸ್

    ಬೆಂಗಳೂರು: ಮುಜರಾಯಿ ಇಲಾಖೆ ಮಾತೆಯರಿಗೆ ಮಾರ್ಷಲ್ ಆರ್ಟ್ಸ್ ಅನ್ನೋ ಹೊಸ ಯೋಜನೆಯ ಜಾರಿಗೆ ಚಿಂತನೆ ನಡೆಸಿದೆ.

    ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಯ ಆಯ್ದ ಪ್ರಮುಖ 10 ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಸ್ವ ರಕ್ಷಣೆಗೆ ಮಾರ್ಷಲ್ ಆರ್ಟ್ಸ್ ಕಲಿಸುವ ಯೋಜನೆ ಜಾರಿಗೆ ಚಿಂತಿಸಲಾಗುತ್ತಿದೆ. ದೇವಸ್ಥಾನದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ಹೇಳಿ ಕೊಡುವ ಬಗ್ಗೆ ಕಾರ್ಯ ಯೋಜನೆ ರೂಪಿಸುವ ಸಂಬಂಧ ಮುಜರಾಯಿ ಸಚಿವರು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿ ಪ್ರಕಾರ, ಹಿಂದೂ ಮಹಿಳೆಯರ ರಕ್ಷಣೆಗೆ ದೇವಸ್ಥಾನಗಳಲ್ಲೇ ಆತ್ಮ ರಕ್ಷಣಾ ಕಲೆ ಕಲಿಸಬೇಕು, ಅದಕ್ಕೆ ರಾಜ್ಯದ ಆಯ್ದ 10 ದೇವಸ್ಥಾನಗಳಲ್ಲಿ ಆತ್ಮರಕ್ಷಣಾ ಕಲೆಯ ಅಭ್ಯಾಸ ಆರಂಭಿಸುವ ಬಗ್ಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಜರಾಯಿ ಸಚಿವರು ತಮ್ಮ ಇಲಾಖಾ ಸಿಬ್ಬಂಧಿಗೆ ಸೂಚಿಸಿದ್ದಾರೆ.

    ಸಂಘಟನೆಯೊಂದರ ಮನವಿ ಮೇರೆಗೆ ಸಚಿವರು ಈ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಜರಾಯಿ ಇಲಾಖೆಗೂ ಮಾರ್ಷಲ್ ಆರ್ಟ್ಸ್‌ಗೂ  ಏನು ಸಂಬಂಧವಿದೆ ಗೊತ್ತಿಲ್ಲ. ಆದರೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇಂತದೊಂದು ಯೋಜನೆ ಜಾರಿಗೆ ಚಿಂತನೆ ನಡೆದಿದೆ.

  • ದೇವಸ್ಥಾನದಿಂದ ಬರ್ತಿದ್ದ ಅಪ್ರಾಪ್ತೆಯ ಕಿಡ್ನಾಪ್ – ರಾತ್ರಿಯಿಡೀ ಮೂವರಿಂದ ಗ್ಯಾಂಗ್‍ರೇಪ್

    ದೇವಸ್ಥಾನದಿಂದ ಬರ್ತಿದ್ದ ಅಪ್ರಾಪ್ತೆಯ ಕಿಡ್ನಾಪ್ – ರಾತ್ರಿಯಿಡೀ ಮೂವರಿಂದ ಗ್ಯಾಂಗ್‍ರೇಪ್

    – ಆರೋಪಿಯ ಕೆನ್ನೆಗೆ ಬಾರಿಸಿ ಸ್ನೇಹಿತೆ ಎಸ್ಕೇಪ್
    – ಕಾಡಿನೊಳಗಿದ್ದ ಮನೆಯಲ್ಲಿ ಬಿಟ್ಟು ಕಾಮುಕರು ಪರಾರಿ
    – ಎಫ್‍ಐಆರ್ ದಾಖಲಿಸಲು ಪೊಲೀಸರು ಹಿಂದೇಟು

    ರಾಯ್‍ಪುರ: ದೇವಸ್ಥಾನದಿಂದ ವಾಪಸ್ ಬರುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಲರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಫೆ. 19 ರಂದು ಸಂತ್ರಸ್ತೆ ತನ್ನ ಸ್ನೇಹಿತೆನೊಂದಿಗೆ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದಳು. ಇವರಿಬ್ಬರು ನಿರ್ಜನವಾದ ಪ್ರದೇಶದ ಮೂಲಕ ಹೋಗುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಅವರಿಗೆ ಕಿರುಕುಳ ನೀಡಿದ್ದಾರೆ. ಆಗ ಸಂತ್ರಸ್ತೆ ಜೊತೆಗಿದ್ದ ಸ್ನೇಹಿತೆ ಧೈರ್ಯದಿಂದ ಆರೋಪಿಯ ಕೆನ್ನೆಗೆ ಬಾರಿಸಿ ಪರಾರಿಯಾಗಿದ್ದಾಳೆ. ಆಗ ಆರೋಪಿಗಳು ಸಂತ್ರಸ್ತೆಯನ್ನು ಹಿಡಿದುಕೊಂಡು, ಆಕೆಯ ಬಾಯಿಯನ್ನು ಮುಚ್ಚಿ ಬಲವಂತವಾಗಿ ಕಾಡಿನೊಳಗಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅಪ್ರಾಪ್ತ ಸೇರಿದಂತೆ ರಾತ್ರಿಯಿಡೀ ಮೂವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಐಜಿ ರತನ್‍ಲಾಲ್ ದಂಗಿ ತಿಳಿಸಿದ್ದಾರೆ.

    ಮರುದಿನ ಮುಂಜಾನೆ ಆರೋಪಿಗಳು ಸಂತ್ರಸ್ತೆಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಅವರಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದ ಸಂತ್ರಸ್ತೆಯ ಸ್ನೇಹಿತೆ ಆಕೆಯ ಮನೆಗೆ ಹೋಗಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ಕುರಿತು ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.

    ಸಂತ್ರಸ್ತೆ ಮನೆಗೆ ಬಂದು ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ನಂತರ ಇನ್ಸ್‌ಪೆಕ್ಟರ್ ಉಮೇಶ್ ಭಗೆಲ್ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವರದಿಯಲ್ಲೂ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆದರೆ ಪೊಲೀಸರು ಎಫ್‍ಐಆರ್ ದಾಖಲಿಸದೆ ಸಂತ್ರಸ್ತೆಯನ್ನು ಮನೆಗೆ ಕಳುಹಿಸಿದ್ದಾರೆ.

    ಸಂತ್ರಸ್ತೆ ಆರೋಪಿಗಳನ್ನು ಗುರುತಿಸಿದ್ದರೂ ಪೊಲೀಸರು ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ. ಆರೋಪಿಗಳು ಕೂಡ ಭಯವಿಲ್ಲದೇ ಓಡಾಡುತ್ತಿದ್ದರು. ಇತ್ತ ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದಳು. ಇದರಿಂದ ಆತಂಕಕ್ಕೊಳಗಾದ ಆಕೆಯ ಕುಟುಂಬದವರು ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಕಾಂಗ್ರೆಸ್ ಶಾಸಕರು ಐಜಿ ದಂಗಿಯನ್ನು ಸಂಪರ್ಕಿಸಿ ಮೂವರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

    ಇದರ ಬೆನ್ನಲ್ಲೇ ಪೊಲೀಸರು ಎಫ್‍ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳನ್ನು ಕುಲದೀಪ್, ಪಿಂಟು ಠಾಕೂರ್ ಮತ್ತು 17 ವರ್ಷದ ಅಪ್ರಾಪ್ತ ಆರೋಪಿ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಡೊನಾಲ್ಡ್ ಟ್ರಂಪ್‍ಗಾಗಿ ಭಾರತದಲ್ಲೊಂದು ದೇಗುಲ

    ಡೊನಾಲ್ಡ್ ಟ್ರಂಪ್‍ಗಾಗಿ ಭಾರತದಲ್ಲೊಂದು ದೇಗುಲ

    – ಪ್ರತಿಮೆಗೆ ಅಭಿಮಾನಿಯಿಂದ ಪೂಜೆ, ಅಭಿಷೇಕ

    ಹೈದರಾಬಾದ್: ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅಮೆರಿಕ ಅಷ್ಟೇ ಅಲ್ಲದೆ ಭಾರತದಲ್ಲೂ ಟ್ರಂಪ್ ತಮ್ಮ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ತೆಲಂಗಾಣದಲ್ಲಿ ಅಭಿಮಾನಿಯೊಬ್ಬರು ಟ್ರಂಪ್‍ಗಾಗಿಯೇ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ.

    ಇಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಟ್ರಂಪ್ ಸ್ವಾಗತಿಸಲು ಇಡೀ ದೇಶಕ್ಕೆ ದೇಶವೇ ಸಜ್ಜಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಟ್ರಂಪ್‍ಗೆ ಸ್ವಾಗತ ಕೋರುತ್ತಿದ್ದಾರೆ. ಆದರೆ ತೆಲಂಗಾಣ ರಾಜ್ಯದಲ್ಲಿ ಟ್ರಂಪ್ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಾಯಕನಿಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

    ತೆಲಂಗಾಣದ ಜನ್‍ಗಾನ್ ಜಿಲ್ಲೆಯ ಬುಸ್ಸಾ ಕೃಷ್ಣ ಎಂಬವರು ಟ್ರಂಪ್‍ನ ಅಪ್ಪಟ ಅಭಿಮಾನಿ. ಟ್ರಂಪ್‍ಗಾಗಿ ದೇಗುಲ ಕಟ್ಟಿಸಿರುವ ಕೃಷ್ಣ, 6 ಅಡಿ ಎತ್ತರದ ಟ್ರಂಪ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ನಿತ್ಯವೂ ಹಾಲಿನ ಅಭಿಷೇಕ ಸೇರಿ ವಿವಿಧ ಅಭಿಷೇಕಗಳನ್ನು ಮಾಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬುಸ್ಸಾ ಕೃಷ್ಣ, ನಾನು ನಾಲ್ಕು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರನ್ನು ಪೂಜಿಸಲು ಆರಂಭಿಸಿದ್ದೆ. ನನ್ನ ಸಂಬಂಧಿಕರಿಂದ ನಾನು ತೊಂದರೆಗಳನ್ನು ಎದುರಿಸುತ್ತಿದ್ದೇನೆ. ನಾನು ಸಮಾಜವನ್ನು ಅವಮಾನಿಸುತ್ತಿದ್ದೇನೆ ಎಂದು ಅವರು ನನಗೆ ಹೇಳುತ್ತಾರೆ. ಆಗ ನಾನು ನೀವು ಹೇಗೆ ಶಿವ ಹಾಗೂ ಬೇರೆ ದೇವರುಗಳನ್ನು ಪೂಜಿಸುತ್ತೀರೋ, ನಾನು ಹಾಗೇ ಡೊನಾಲ್ಡ್ ಟ್ರಂಪ್ ಅವರನ್ನು ಪೂಜಿಸುತ್ತೇನೆ. ನಾನು ಟ್ರಂಪ್ ಅವರನ್ನು ಪೂಜೆ ಮಾಡುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.

    ಬುಸ್ಸಾ ಕೃಷ್ಣನ ಈ ನಡೆಯನ್ನು ನೋಡಿದ ಹಲವರು ಈತ ಹುಚ್ಚ ಎಂದು ಹೀಯಾಳಿಸಿದರು ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೃಷ್ಣ ತನ್ನ ಅಭಿಮಾನವನ್ನು ಮುಂದುವರಿಸಿದ್ದಾರೆ. ಸದ್ಯ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೇವಸ್ಥಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಬುಸ್ಸಾ ಕೃಷ್ಣ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡುವ ಅತೀವ ಹಂಬಲ ಹೊಂದಿದ್ದಾರೆ.

  • ತುಮಕೂರಿನ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ

    ತುಮಕೂರಿನ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ

    ತುಮಕೂರು: ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದ ಲಿಂಗದ ಮೇಲೆ ಸಂಕ್ರಾಂತಿ ಹಬ್ಬದಂದು ಸೂರ್ಯ ಕಿರಣಗಳು ಬದ್ದರೆ, ಈ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಮರುದಿನ ಸೂರ್ಯ ಕಿರಣ ಲಿಂಗವನ್ನು ಸ್ಪರ್ಶಿಸುತ್ತವೆ.

    ತಾಲೂಕಿನ ಕೋರ ಹೋಬಳಿಯ ಹಿರೇತೊಟ್ಲುಕೆರೆ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಮರುದಿನ ಸೋಮೇಶ್ವರ ದೇವರ ಶಿವಲಿಂಗವನ್ನು ಸೂರ್ಯನ ಕಿರಣ ಸ್ಪರ್ಶಿಸುತ್ತವೆ. ಹೀಗಾಗಿ ಈ ದೇವಸ್ಥಾನ ಮಹತ್ವ ಪಡೆದುಕೊಂಡಿದ್ದು, ಇದನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಆಗಮಿಸುತ್ತಾರೆ. ಸೂರ್ಯ ಕಿರಣ ಸ್ಪರ್ಶಿಸುವುದನ್ನು ನೋಡಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ.

    ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದಂದು ಸೂರ್ಯ ಕಿರಣಗಳು ಶಿವಲಿಂಗ ಸ್ಪರ್ಶಿಸುವಂತೆ ಇಲ್ಲಿಯೂ ವರ್ಷಕ್ಕೊಮ್ಮೆ ಈ ವಿಸ್ಮಯ ಜರುಗುತ್ತದೆ. ಈ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದ್ದು, ನೊಳಂಬ ಅರಸರು ದೇವಾಲಯ ನಿರ್ಮಿಸಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.

    ಶಿವರಾತ್ರಿ ದಿನ ವಿಶೇಷಪೂಜೆ, ಜಾಗರಣೆ, ಮಹಾ ರುದ್ರಾಭಿಷೇಕ ನೆರವೇರಿದ ನಂತರ ಶನಿವಾರ ಪ್ರಾಥಃ ಕಾಲ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸಿದವು. ಈ ವಿಸ್ಮಯ ನೋಡಲು ಅಕ್ಕ ಪಕ್ಕದ ಗ್ರಾಮಸ್ಥರಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.

  • ಉತ್ತರದಲ್ಲಿ ಸರ್ಪ, ದಕ್ಷಿಣದಲ್ಲಿ ಗಣೇಶ, ಪೂರ್ವದಲ್ಲಿ ನಂದಿ, ಪಶ್ಚಿಮದಲ್ಲಿ ಲಿಂಗ – ದಕ್ಷಿಣ ಕಾಶಿ ಶಿವಗಂಗೆ

    ಉತ್ತರದಲ್ಲಿ ಸರ್ಪ, ದಕ್ಷಿಣದಲ್ಲಿ ಗಣೇಶ, ಪೂರ್ವದಲ್ಲಿ ನಂದಿ, ಪಶ್ಚಿಮದಲ್ಲಿ ಲಿಂಗ – ದಕ್ಷಿಣ ಕಾಶಿ ಶಿವಗಂಗೆ

    ಫುಲ್ ಟೈಯರ್ಡ್ ಆಗಿದೆ, ಸ್ವಲ್ಪ ದೇಹ ದಂಡನೆ ಮಾಡ್ಬೇಕು, ಎಲ್ಲಾದ್ರೂ ಸ್ವಲ್ಪ ಬೆಟ್ಟ ಹತ್ತಬೇಕು, ನೀವು ಅಂದುಕೊಂಡಿದ್ದು ಆಗುತ್ತೋ ಇಲ್ವೋ ಅನ್ನೋದನ್ನೂ ತಿಳ್ಕೋಬೇಕು, ಶಿವರಾತ್ರಿ ಇರುವುದರಿಂದ ಶಿವನ ಧ್ಯಾನ ಮಾಡಬೇಕು, ಗಂಗಾ ಮಾತೆಯ ನೀರನ್ನೂ ಸ್ಪರ್ಷಿಸಬೇಕು, ಒಂದಿಷ್ಟು ಟ್ರೆಕ್ಕಿಂಗ್ ಮಾಡಬೇಕು, ಹದ್ದಿನ ಕಣ್ಣಿನಂತೆ ಆಕಾಶದಿಂದ ಭೂಮಿಯನ್ನ ನೋಡಬೇಕು, ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಆಸೆಗಳು ಬೆಂಗಳೂರಿನಲ್ಲಿ ಕೆಲಸ ಮಾಡೋರಿಗೆ ಇದ್ದೆ ಇರುತ್ತೆ. ಆದ್ರೆ, ಇಷ್ಟೆಲ್ಲ ಒಂದೇ ಕಡೆ ಸಿಕ್ರೇ ಹೇಗಿರುತ್ತೆ? ಅಯ್ಯೋ ಸ್ವರ್ಗಕ್ಕೆ ಮೂರೇ ಗೇಣು ಅಂತಾ ನಿಮ್ಮ ಮನಸ್ಸಲ್ಲಿ ಈಗಾಗಲೇ ಬಂದಿರುತ್ತೆ. ಇವತ್ತು ನಿಮಗಿಷ್ಟವಾಗೋ ಜಾಗಕ್ಕೆನೆ ಕರೆದುಕೊಂಡು ಹೋಗ್ತಿದ್ದೀನಿ. ಮೇಲೆ ಹೇಳಿದ ನಿಮ್ಮೆಲ್ಲ ಆಸೆಗಳನ್ನ ಒಂದೇ ಜಾಗ ಈಡೇರಿಸುತ್ತೆ. ಅಂತಹ ಜಾಗಕ್ಕೆ ಕರೆದೊಯ್ಯುತ್ತೇನೆ. ಬನ್ನಿ ನನ್ನೊಂದಿಗೆ.

    ಯೆಸ್.. ಬೆಂಗಳೂರಿನಿಂದ ಕೇವಲ 54 ಕಿಮೀ ಅಷ್ಟೇ. ಆರಾಮಾಗಿ ಬೈಕ್‍ನಲ್ಲೇ ಹೋಗಬಹುದು. ಅಂತಹ ಜಾಗಕ್ಕೆ ನಿಮ್ಮ ಕರೆದುಕೊಂಡು ಹೋಗ್ತಿದ್ದೀನಿ. ಬೈಕ್ ತಗೊಂಡು ನೇರವಾಗಿ ತುಮಕೂರು ಹೈವೇಗೆ ಬನ್ನಿ. ತುಮಕೂರಿನ ಕಡೆ ಬೈಕ್ ಶುರು ಮಾಡಿ ಹೊರಟೇ ಬಿಡಿ. ಹೀಗೆ ಒಂದ್ ಮುಕ್ಕಾಲು ಗಂಟೆ ಆಗ್ತಿದ್ದ ಹಾಗೆ, ನಿಮಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಬಸ್ ಪೇಟೆ ಅಂತಾ ಜಾಗ ಬರುತ್ತೆ. ಅಲ್ಲಿ ನಿಮ್ಮ ಬೈಕ್‍ನ್ನ ಎಡಕ್ಕೆ ತಿರುಗಿಸಿ, 6 ಕಿಮೀ ದೂರ ಚಲಿಸಿ. ಅಲ್ಲಿಗೆ ನಾನು ಹೇಳಿದ ಜಾಗ ಬಂದೆ ಬಿಡುತ್ತೆ. ಅದುವೇ ಶಿವಗಂಗೆ ಬೆಟ್ಟ.

    ದಾಬಸ್‍ಪೇಟೆಗೆ ಬರ್ತಾ ಇದ್ದಂತೆ ನಿಮಗೆ ದೂರದಿಂದ ಶಿವಗಂಗೆ ಬೆಟ್ಟ ಕಾಣಿಸುತ್ತೆ. ತುಂಬ ಜನರಿಗೆ ಅಯ್ಯೋ ಇದಾ ಗೊತ್ತು ಬಿಡಿ ಅನ್ನಬೇಡಿ. ನಿಮಗೆ ಶಿವಗಂಗೆ ಬೆಟ್ಟದ ಬಗ್ಗೆ ಗೊತ್ತಿರಬಹುದು. ಈ ಜಾಗಕ್ಕೆ ಹೋಗಿರಲೂಬಹುದು. ಆದ್ರೆ, ಈ ಜಾಗಕ್ಕಿರುವ ಪೌರಾಣಿಕೆ ಹಿನ್ನೆಲೆ ಗೊತ್ತಾ? ನಿಮಗೆ ಗೊತ್ತಿರಲಾರದ ಒಂದಿಷ್ಟು ವಿಷ್ಯಗಳನ್ನ ಇವತ್ತು ನಿಮಗೆ ತಿಳಿಸುತ್ತೇನೆ.

    ದಕ್ಷಿಣ ಕಾಶಿ:
    ಶಿವಗಂಗೆ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ ಅಂತಾನೂ ಕರೆಯುತ್ತಾರೆ. ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತೆ. ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುವುದೆ ಈ ಕ್ಷೇತ್ರದ ವಿಶೇಷ.

    ಹೀಗೆ ಶಿವಗಂಗೆಗೆ ಹೋಗಿ ತಲುಪಿದ ತಕ್ಷಣ ನಿಮಗೆ ಪಾರ್ಕಿಂಗ್ ಮಾಡಲು ಒಂದು ಜಾಗವಿದೆ. ಅಲ್ಲಿ ನಿಮ್ಮ ವಾಹನ ಪಾರ್ಕ್ ಮಾಡಿ, ಅಲ್ಲೆ ಸಾಲಾಗಿ ಅಂಗಡಿಗಳಿವೆ, ಅಲ್ಲಿ ಒಂದಿಷ್ಟು ಪೂಜೆಗಾಗಿ ಹೂವು ಹಣ್ಣು ಸಿಗುತ್ತೆ. ಅದನ್ನ ತಗೊಳ್ಳಿ. ಅಲ್ಲೆ ಹತ್ತಿರದಲ್ಲೇ ಒಂದು ಹೊಂಡ ಇದೆ. ಆ ಹೊಂಡವನ್ನ ನೋಡಿ ಆಮೇಲೆ ಬೆಟ್ಟದ ಕಡೆದ ಬನ್ನಿ.

    ತುಪ್ಪವೇ ಬೆಣ್ಣೆಯಾಗುವ ಪವಾಡ.
    ಯೆಸ್, ಈಗ ಬೆಟ್ಟ ಹತ್ತುವ ಕೆಲಸ ಮಾಡೋಣ, ಆದ್ರೆ ನಿಮ್ಮ ಕೈಯಲ್ಲಿ ಚೀಲಗಳಿದ್ದರೆ ಹುಷಾರು. ಇಲ್ಲಿ ಮಂಗಗಳು ನಿಮ್ಮ ಬ್ಯಾಗ್‍ಗಳನ್ನ ಕಿತ್ತುಕೊಳ್ಳುತ್ತದೆ. ಹಾಗಾಗಿ ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗ್‍ಗಳಿದ್ದರೆ ಉತ್ತಮ. ಈಗ ಬೆಟ್ಟ ಹತ್ತಲು ಶುರು ಮಾಡಿದಾಗ ಮೊದಲು ನಿಮಗೆ ಗಂಗಾಧರೇಶ್ವರನ ದೇವಾಲಯ ಸಿಗುತ್ತೆ. ಈ ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಗಣೇಶನ ದೇಗುಲವೂ ಇದೆ. ಗಂಗಾಧರೇಶ್ವರ ದೇವಾಲಯ ಬೆಟ್ಟದ ಆರಂಭದಲ್ಲೇ ಇದೆ. ಇಲ್ಲಿ ಉದ್ಭವ ಶಿವಲಿಂಗವಿದೆ. ಇಲ್ಲಿ ಪ್ರಪಂಚದ ಅದ್ಭುತವೊಂದು ನಡೆಯುತ್ತೆ. ನಾವೆಲ್ಲ ನೋಡಿರೋದು ಬೆಣ್ಣೆಯಿಂದ ತುಪ್ಪ ಬರುತ್ತೆ ಅಂತಾ. ಆದ್ರೆ, ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನ ಹಾಕಿದರೆ ಅದು ಬೆಣ್ಣೆಯಾಗಿ ಪರಿವರ್ತನೆ ಆಗುತ್ತೆ. ಇದೊಂದು ನಿಜಕ್ಕೂ ಅಸಕ್ತಿದಾಯಕ ಪವಾಡ. ಅದರಲ್ಲೂ ಅಭಿಷೇಕದ ಸಮಯದಲ್ಲಿ ಭಕ್ತರು ಈ ಪವಾಡವನ್ನು ನೋಡಬಹುದು. ಅಷ್ಟೇ ಅಲ್ಲ ಬೆಣ್ಣೆಯಾಗುವ ಈ ತುಪ್ಪಕ್ಕೆ ಔಷಧೀಯ ಶಕ್ತಿ ಇದೆ ಮತ್ತು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು ಎಂಬುದು ಇಲ್ಲಿ ನಂಬಿಕೆ.

    ದೇವಸ್ಥಾನದೊಳಗೆ ಸುರಂಗ:
    ಗಂಗಾಧರೇಶ್ವರ ದೇಗುಲದಲ್ಲೇ ಒಂದು ಸುರಂಗವಿದೆ. ಈಗಲೂ ಅದನ್ನ ಕಾಣಬಹುದು. ಈ ಸುರಂಗದಲ್ಲಿ ಮುಂದುವರಿದರೆ ಅದು ಬೆಂಗಳೂರಿನಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಬಂದು ತಲುಪುತ್ತಂತೆ. ಆದ್ರೆ, ಈಗ ಈ ಸುರಂಗದಲ್ಲಿ ಹೋಗಲು ಸಾಧ್ಯವಿಲ್ಲ. ಕಾರಣ ಉಸಿರಾಟದ ಸಮಸ್ಯೆಯಾಗುತ್ತೆ ಮತ್ತು ಸುರಂಗದ ಮಧ್ಯದಲ್ಲಿ ಹಾವುಗಳ ಇರುವ ಸಾಧ್ಯತೆ ಇರುತ್ತೆ. ಅಷ್ಟೇ ಅಲ್ಲ ಈಗ ಕೇವಲ ಸುರಂಗ ನೋಡಬಹುದಷ್ಟೇ ಹೋಗಲು ಮಾತ್ರ ಬಿಡೋದಿಲ್ಲ.

    ಅಂದುಕೊಂಡಿದ್ದು ಆಗುತ್ತೋ ಇಲ್ವೋ ಅನ್ನೋದರ ಪರೀಕ್ಷೆ.
    ಗಂಗಾಧರೇಶ್ವರ ದೇಗುಲದಲ್ಲಿ ಶಿವನ ದರ್ಶನ ಪಡೆದ ನಂತರ, ಮುಂದೆ ಹಾಗೆ ಬೆಟ್ಟ ಹತ್ತಲು ಆರಂಭ ಮಾಡಿದರೆ, ನಿಮಗೆ ಅಲ್ಲೊಂದು ಕಡಿದಾದ ಕಲ್ಲು ಬಂಡೆ ಸಿಗುತ್ತೆ. ಅದನ್ನ ಏರುವುದಕ್ಕೆ ಮೆಟ್ಟಿಲುಗಳಿವೆ. ಹಿಡಿದುಕೊಳ್ಳಲು ಕಬ್ಬಿಣದ ಸರಳುಗಳನ್ನೂ ಈಗ ಮಾಡಿದ್ದಾರೆ. ಹಾಗೆ ಮೇಲತ್ತಿದಾಗ, ನಿಮ್ಮ ದಣಿವಾರಿಸಿಕೊಳ್ಳೋಕೆ ಅಲ್ಲೊಂದಿಷ್ಟು ಕಬ್ಬಿನ ಹಾಲು, ಸೌತೆಕಾಯಿ, ಚಹಾ, ಕೋಲ್ಡ್ರಿಂಕ್ಸ್ ಹೀಗೆ ನಿಮಗೆ ಬೇಕಾಗಿರುವ ವಸ್ತುಗಳು ಸಿಗುತ್ತೆ. ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಬೆಟ್ಟ ಏರಲು ಶುರು ಮಾಡಿದರೆ, ಅಲ್ಲೊಂದು ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳ ಸಿಗುತ್ತೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುತ್ತೆ. ಆದ್ರೆ, ಇಲ್ಲಿ ನೀವು ಅಂದುಕೊಂಡಿದ್ದು ಈಡೇರುತ್ತೋ ಇಲ್ವೋ ಅನ್ನೋದರ ಅಗ್ನಿ ಪರೀಕ್ಷೆ ಮಾಡಿಕೊಳ್ಳಬಹುದು. ಅದೇನಂದ್ರೆ, ನೀವು ಏನಾದ್ರು ಅಂದುಕೊಂಡು ಅದು ಆಗುತ್ತೋ ಇಲ್ವೋ ಅಂತಾ ತಿಳಿದುಕೊಳ್ಳಲು ಈ ಒಳಕಲ್ಲು ತೀರ್ಥದಲ್ಲಿ ಕೈ ಹಾಕಿದರೆ, ನಿಮ್ಮ ಕೆಲಸ ಆಗುತ್ತೆ ಅನ್ನೋದಾದ್ರೆ ನಿಮ್ಮ ಕೈಗೆ ನೀರು ಸಿಗುತ್ತೆ. ಕೆಲಸ ಆಗೋದಿಲ್ಲ ಅನ್ನೋದಾದ್ರೆ, ನಿಮಗೆ ನೀರು ಸಿಗೋದೆ ಇಲ್ಲ. ಇದು ಇಲ್ಲಿನ ನಂಬಿಕೆ. ತುಂಬ ಜನರ ಅನುಭವದ ಪ್ರಕಾರ ಇದು ಸತ್ಯ ಅಂತಾನೆ ಹೇಳ್ತಾರೆ. ಎಲ್ಲವೂ ಅವರವರ ನಂಬಿಕೆ ಮೇಲೆ ಬಿಟ್ಟದ್ದು. ಈ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುವುದೇ ಒಂದು ಪವಾಡ.

    ಬೆಟ್ಟದ ತುದಿಯಲ್ಲಿ ಬೆಳ್ಳಿ ಗಂಟೆಗಳು..
    ಹೀಗೆ ಒಳಕಲ್ಲು ತೀರ್ಥ ನೋಡಿ ಮತ್ತೆ ಬೆಟ್ಟ ಏರಲು ಪ್ರಾರಂಭ ಮಾಡಿದರೆ, ಒಂದು ಶಿವಪಾರ್ವತಿಯ ದೇವಸ್ಥಾನವಿದೆ ಅಲ್ಲಿ ದ್ವಾದಶ ಜ್ಯೊತಿರ್ಲಿಂಗವು ಇದೆ. ಕಡಿದಾದ ಬೆಟ್ಟ ಏರಿದ ಬಳಿಕ ಸ್ವಲ್ಪ ಸುಧಾರಿಸಿಕೊಳ್ಳಲು ಅವಕಾಶವಿದೆ. ಇಲ್ಲೂ ಸಹ ನಿಮಗೆ ತಿನ್ನಲು, ಕುಡಿಯಲು ಒಂದಿಷ್ಟು ಸಾಮಗ್ರಿಗಳು ಸಿಗುತ್ವೆ. ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹ ಕಾಣಿಸುತ್ತೆ. ಈ ನಂದಿವಿಗ್ರಹ ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸದ ಕೆಲಸ. ಯಾಕಂದ್ರೆ, ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗು ಮತ್ತೊಂದು ಕಡೆ ಆಳವಾದ ಪ್ರಪಾತವಿದೆ. ಇಷ್ಟೆಲ್ಲ ಸಾಹ ಮಾಡಿದ ನಂತರ ನೀವು ಬೆಟ್ಟದ ತುತ್ತ ತುದಿ ತಲುಪುವುದಕ್ಕೆ 20 ಹೆಜ್ಜೆಗಳಷ್ಟೇ ಬೇಕು. ಕೊನೆಗೆ ದೇಹ ದಂಡಿಸಿ, ಅಯ್ಯಪ್ಪ ಸಾಕಪ್ಪ ಅಂತಾ ಬೆಟ್ಟದ ತುದಿ ತಲುಪಿದಾಗ ನಿಮ್ಮೆಲ್ಲ ದಣಿವು ಮರೆತು ಹೋಗುತ್ತೆ. ಕಾರಣ ಬೆಟ್ಟದ ಮೇಲಿಂದ ಕಾಣುವ ದೃಶ್ಯವೇ ಹಾಗಿದೆ. ಬೆಟ್ಟದ ಮೇಲೂ ಸಹ ಗಂಗಾಧರೇಶ್ವರ ದೇವಾಲಯವಿದೆ. ಆದ್ರೆ, ಇಲ್ಲಿ ಎಲ್ಲದಕ್ಕಿಂತ ಮತ್ತೊಂದು ಆಕರ್ಷಣೆ ಮತ್ತು ಶಾಕ್ ಕೊಡೋ ದೃಶ್ಯವೆಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳೀ ಗಂಟೆಗಳು. ಅಯ್ಯೋ ಯಾರಪ್ಪ ಇದನ್ನ ಇಲ್ಲಿ ಕಟ್ಟಿದವರು ಅಂತಾ ಗ್ಯಾರಂಟಿ ನಿಮಗೆ ಅನ್ನಿಸಿರುತ್ತೆ. ಈ ಗಂಟೆಗಳನ್ನು ಕಟ್ಟಿದೋರ್ ಗುಂಡಿಗೆ ಮಾತ್ರ ಸಖತ್ ಆಗಿಯೇ ಗಟ್ಟಿಯಾಗಿರಬೇಕು.

    ಶಾಂತಲಾ ಡ್ರಾಪ್..
    ಬೆಟ್ಟದ ಮೇಲೆ ನೋಡಬೇಕಾದ ಮತ್ತೊಂದು ಜಾಗ ನಾಟ್ಯ ರಾಣಿ ಶಾಂತಲೆಯು ಕೆಳಗೆ ಬಿದ್ದ ಜಾಗ. ಹಿಂದೆ ಈ ಸ್ಥಳವು ಹೊಯ್ಸಳ ರಾಜರ ನಿಯಂತ್ರಣದಲ್ಲಿತ್ತು ಮತ್ತು ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲಾ, ಮಗನಿಗೆ ಜನ್ಮ ನೀಡಲಿಲ್ಲ ಎಂಬ ಖಿನ್ನತೆಯಿಂದ, ಈ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂಬ ನಂಬಿಕೆ ಇದೆ. ಹಾಗಾಗಿ ಶಾಂತಲಾ ಬಿದ್ದ ಆ ಸ್ಥಳವನ್ನು ಶಾಂತಲಾ ಡ್ರಾಪ್ ಅಂತಾನೆ ಕರೆಯುತ್ತಾರೆ. ಈ ಜಾಗ ಅಷ್ಟೇ ಭಯಾನಕವಾಗಿದೆ, ಹಾಗೂ ನೋಡಲು ಅದ್ಭುತವಾಗಿದೆ. ಈಗ ಕಂಬಿಗಳನ್ನ ಹಾಕಿದ್ದಾರೆ. ಆದ್ರೂ ಈ ಜಾಗಕ್ಕೆ ಹೋಗುವಾಗ ಸ್ವಲ್ಪ ಎಚ್ಚರಿಕೆವಹಿಸಿ.

    ದೇವರುಗಳಿಗೆ ವಿವಾಹ ಮಹೋತ್ಸವ.
    ಇನ್ನೂ ಬೆಟ್ಟದಿಂದ ಕೆಳಗಿಳಿಯುವಾಗ ನಿಮಗೆ ಇನ್ನೊಂದು ವಿಶೇಷ ದೇವಸ್ಥಾನದ ದರ್ಶನ ಪಡೆಯಬಹುದು. ಬೆಟ್ಟ ಹತ್ತುವಾಗಲೂ ಪಡೆಯಬಹುದು. ಶ್ರೀ ಹೊನ್ನಾದೇವಿ ದೇವಸ್ಥಾನ. ಈ ದೇವಸ್ಥಾನ ಗವಿಯಲ್ಲಿದೆ. ಇಲ್ಲೂ ಸಹ ಗಂಗಾಧರೇಶ್ವರನ ದೇಗುಲವೂ ಇದೆ. ಪ್ರತಿ ವರ್ಷ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. ಸಂಕ್ರಾಂತಿಯ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಆದೇ ಜಲವನ್ನು ವಾದ್ಯಗೋಷ್ಠಿಗಳ ಸಹಿತದೊಂದಿಗೆ ತಂದು ಅದೇ ಪವಿತ್ರವಾದ ನೀರಿನಿಂದ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತೆ.

    ಪಾತಾಳ ಗಂಗೆ.
    ಇನ್ನೂ ಇಲ್ಲಿ ಶಂಕರಾಚಾರ್ಯರ ಶಾಖಾ ಮಠವಿದೆ. ಅಷ್ಟೆ ಅಲ್ಲ ಶಾರದಾಂಬೆಯ ದೇವಸ್ಥಾನವೂ ಇದೆ. 108 ಲಿಂಗಗಳನ್ನುಳ್ಳ ಅಗಸ್ತ್ಯರ ದೇವಸ್ಥಾನವೂ ಇದೆ. ಇಲ್ಲೊಂದು ಪಾತಾಳ ಗಂಗೆ ಇದ್ದು ಸದಾ ನೀರಿನಿಂದ ತುಂಬಿರುತ್ತೆ. ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತೆ. ಬೇಸಿಗೆಯಲ್ಲಿ ನೀರು ಹೆಚ್ಚಾಗಿ ಮೇಲಕ್ಕೆ ಬರುತ್ತೆ. ಬೆಟ್ಟದ ಮೇಲಿದ್ದರು ಸಹ ಬೇಸಿಗೆಯಲ್ಲೂ ಸಹ ಇಲ್ಲಿ ನೀರು ಕಡಿಮೆ ಆಗುವುದೇ ಇಲ್ಲ.

    ಇತಿಹಾಸ
    16ನೇ ಶತಮಾನದಲ್ಲಿ ಈ ಗುಡ್ಡವು ಶಿವಪ್ಪ ನಾಯಕ ಕೋಟೆಯಾಯಿತು. ಮುಂದೆ ಬೆಂಗಳೂರಿನ ಸಂಸ್ಥಾಪಕ, ಮಾಗಡಿ ಕೆಂಪೇಗೌಡ ಕೋಟೆಯನ್ನು ಸುಧಾರಿಸಿದರು ಮತ್ತು ಈ ಕೋಟೆಯಲ್ಲಿ ತನ್ನ ನಿಧಿಯ ಭಾಗವನ್ನು ಉಳಿಸಿಕೊಂಡರು.

    ಕುಮುದ್ವತಿ ನದಿಯ ಮೂಲ
    ಶಿವಗಂಗೆ ಬೆಟ್ಟಗಳಲ್ಲಿ ಕುಮುದ್ವತಿ ನದಿಯ ಮೂಲವಿದೆ, ಇದು ಅರ್ಕಾವತಿ ನದಿಯ ಉಪನದಿಯಾಗಿದೆ. ಬೆಂಗಳೂರಿನ ಗ್ರಾಮೀಣ ಜಿಲ್ಲೆಯ ನೆಲಮಂಗಲ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆಲವು ಭಾಗಗಳಲ್ಲಿ ಕುಮುದ್ವತಿ ನದಿ ಹರಿಯುತ್ತದೆ. ಕುಮುದ್ವತಿ ಹರಿಯುವ ಜಲಾನಯನ ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲವಾಗಿದೆ.

    ಶಿವಗಂಗೆ ಎಂದು ಹೆಸರು ಬಂದಿದ್ಹೇಗೆ..?
    ಕಣಾದ ಎಂಬ ಋಷಿಮುನಿ, ಏಕಪಾದದಲ್ಲಿ (ಒಂದೆ ಕಾಲಿನಲ್ಲಿ) ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಿಂದ ನೀರು ಹರಿದು ಭೂಮಿಗೆ ಬಂತು. ಅದನ್ನ ಕಂಡ ಮುನಿಗಳು ಶಿವನಗಂಗೆ ಅಂತಾ ಕರೆದರು. ಅದೇ ಮುಂದುವರೆದು ಈಗಿನ ಶಿವಗಂಗೆ ಕ್ಷೇತ್ರ ಆಗಿದೆ ಅನ್ನೋದು ಸ್ಥಳ ಪುರಾಣ.
    – ಅರುಣ್ ಬಡಿಗೇರ್

  • ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ

    ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ

    ಯಾದಗಿರಿ: ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರಾಮನಾಯಕನ ತಾಂಡದಲ್ಲಿ ನಡೆದಿದೆ.

    ರಾಮನಾಯಕ ತಾಂಡದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡವನ್ನು ದೇವಸ್ಥಾನ ಕಟ್ಟುವ ಸಲುವಾಗಿ ಕೆಡವಿ ಹಾಕಲಾಗಿದೆ. ಆದರೆ ಸರ್ಕಾರದ ಕಟ್ಟಡ ಕೆಡವಲು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಈ ಕೃತ್ಯ ನಡೆಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

    ಹೊಸ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸದ ಮೇಲೆ ಹಳೆ ಕಟ್ಟಡ ಮೇಲೆ ಕಣ್ಣಿಟ್ಟಿರುವ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಮತ್ತು ಗ್ರಾಮ ಕೆಲ ಮುಖಂಡರಗಳು ಮುಂದೆ ನಿಂತು ಸ್ವತಃ ಕಟ್ಟಡ ಧ್ವಂಸಗೊಳಿಸುತ್ತಿರುವ ಹಿನ್ನೆಲೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಕೆಲ ಗ್ರಾಮಸ್ಥರ ವಿರೋಧ ಇದ್ದರು ಅವರ ಮಾತಿಗೆ ಕೇರ್ ಮಾಡದೆ ಕಟ್ಟಡ ಕೆಡವಲಾಗುತ್ತಿದೆ.

    ಶಾಲೆಗೂ ನನಗೂ ಸಂಬಂಧವಿಲ್ಲ ಎಂದ ಶಾಲಾ ಮುಖ್ಯ ಶಿಕ್ಷಕ ಗುಂಡಪ್ಪ ಮತ್ತು ಬಿಇಓ ಸಮಜಾಯಿಷಿ ನೀಡುತ್ತಿದ್ದು, ಶಾಲೆ ಮುಖ್ಯ ಶಿಕ್ಷಕ ಮತ್ತು ಬಿಇಓ ಸಹ ಇದರಲ್ಲಿ ಶಾಮೀಲಾಗಿರುವ ಆರೋಪ ಸಹ ಕೇಳಿ ಬರುತ್ತಿದೆ.

  • ತ್ಯಾಜ್ಯ ನಿರ್ವಹಣೆ ಘಟಕಕ್ಕೆ ವಿರೋಧ- ಘಟಕದ ಬಳಿ ರಾತ್ರೋ ರಾತ್ರಿ ದೇವಸ್ಥಾನ ನಿರ್ಮಿಸಿದ್ರು

    ತ್ಯಾಜ್ಯ ನಿರ್ವಹಣೆ ಘಟಕಕ್ಕೆ ವಿರೋಧ- ಘಟಕದ ಬಳಿ ರಾತ್ರೋ ರಾತ್ರಿ ದೇವಸ್ಥಾನ ನಿರ್ಮಿಸಿದ್ರು

    ಹುಬ್ಬಳ್ಳಿ: ತ್ಯಾಜ್ಯ ನಿರ್ವಹಣೆ ಘಟಕ ಬರುವುದನ್ನು ತಡೆಯುವುದಕ್ಕಾಗಿ ಪಾಲಿಕೆಯ ಜಾಗದಲ್ಲೇ ರಾತ್ರೋ ರಾತ್ರಿ ದೇಗುಲವೊಂದು ತಲೆ ಎತ್ತಿದೆ. ಇದನ್ನು ಕಂಡು ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕಕ್ಕಾಬಿಕ್ಕಿಯಾಗಿದ್ದಾರೆ. ಕೊನೆಗೆ ಜನರ ವಿರೋಧದ ನಡುವೆಯೇ ಪೊಲೀಸರ ನೆರವಿನೊಂದಿಗೆ ದೇವಸ್ಥಾನದ ಪಕ್ಕದಲ್ಲೇ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸುವ ಕೆಲಸ ಶುರುವಾಗಿದೆ.

    ಹುಬ್ಬಳ್ಳಿಯ ನಂದಿನಿ ಲೇಔಟ್‍ನಲ್ಲಿ ಪಾಲಿಕೆಗೆ ಸೇರಿರುವ ಅರ್ಧ ಎಕರೆಗೂ ಹೆಚ್ಚಿನ ಪ್ರದೇಶವಿದೆ. ಆ ಜಾಗ ಇಷ್ಟು ದಿನ ಖಾಲಿ ಬಿದ್ದಿತ್ತು. ಈ ಜಾಗದ ಒಂದು ಕಡೆ 500 ಚದರಡಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಪಾಲಿಕೆ ಯೋಜನೆ ಸಿದ್ಧಪಡಿಸಿ ಇದಕ್ಕಾಗಿ ಒಂದು ವರ್ಷದ ಹಿಂದೆಯೇ ಟೆಂಡರ್ ಕೂಡ ಕರೆದಿತ್ತು. ಅದನ್ನು ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿ ಕೆಲಸವೂ ಪ್ರಾರಂಭವಾಗಿತ್ತು.

    ಇಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲು ಅಂದರೆ ವಲಯ- 5, 7 ಹಾಗೂ 10ರ ಕೆಲ ವಾರ್ಡ್‍ಗಳಲ್ಲಿ ಸಂಗ್ರಹಿಸಿರುವ ಕಸವನ್ನು ಇಲ್ಲಿಗೆ ತಂದು ಕಾಂಪ್ಯಾಕ್ಟ್ ಮಾಡುವ ಯೋಚನೆ ಪಾಲಿಕೆಯದ್ದು. ಮೊದಲಿಗೆ 1 ವರ್ಷದ ಹಿಂದೆ ಟೆಂಡರ್ ಕರೆದು ಏಜೆನ್ಸಿಯೊಂದಕ್ಕೆ ಗುತ್ತಿಗೆ ಕೂಡ ನಿಗದಿಯಾಗಿತ್ತು. ಏಜೆನ್ಸಿಯೂ ಕೆಲಸವನ್ನು ಪ್ರಾರಂಭಿಸಿತ್ತು. ಅಡಿಪಾಯ ನಿರ್ಮಾಣದ ಕೆಲಸ ಕೂಡ ಮುಗಿದಿತ್ತು. ಇನ್ನೂ 1 ತಿಂಗಳು ದಾಟಿದ್ದರೆ ಕಟ್ಟಡದ ಸಿವಿಲ್ ಕೆಲಸವೆಲ್ಲ ಮುಕ್ತಾಯವಾಗುತ್ತಿತ್ತು. ಆದರೆ ಅಷ್ಟರೊಳಗೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನೆಲ್ಲ ಅಲ್ಲಿಂದ ಸ್ಥಳೀಯರು ಕಳುಹಿಸಿದ್ದು ನಡೆಯಿತು.

    ಬಳಿಕ ಎರಡ್ಮೂರು ತಿಂಗಳವರೆಗೂ ಅಲ್ಲಿಗೆ ಪಾಲಿಕೆಯವರು ತೆರಳೇ ಇಲ್ಲ. ಆದರೆ ಅಷ್ಟರೊಳಗೆ ಪಾಲಿಕೆ ಕಟ್ಟಡ ನಿರ್ಮಾಣಕ್ಕೆ ತಂದಿಟ್ಟಿದ್ದ ಸಾಮಾಗ್ರಿಗಳನ್ನೇ ತೆಗೆದುಕೊಂಡು ಸ್ಥಳೀಯರು ಅಲ್ಲಿ ತ್ರೈಯಂಬಕೇಶ್ವರ ದೇವಾಸ್ಥಾನವನ್ನು ನಿರ್ಮಿಸಿದ್ದಾರೆ. ದೇವಸ್ಥಾನ ನಿರ್ಮಿಸಿದರೆ ಅಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಪಾಲಿಕೆಯವರು ನಿರ್ವಹಿಸುವುದಿಲ್ಲ ಎಂಬ ಕಾರಣಕ್ಕಾಗಿ ನಿರ್ಮಿಸಿ ಪೂಜೆ ಪುನಸ್ಕಾರ ಶುರು ಮಾಡಿದ್ದಾರೆ. ಪಾಲಿಕೆ ಎರಡ್ಮೂರು ತಿಂಗಳಿಂದ ಅಲ್ಲಿನ ನಾಗರಿಕರನ್ನು ಒಪ್ಪಿಸಲು ಶ್ರಮಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.

    ಕೊನೆಗೆ ಪೊಲೀಸರ ನೆರವು ಪಡೆದು ದೇವಸ್ಥಾನವನ್ನು ಅದರ ಪಾಡಿಗೆ ಬಿಟ್ಟು ಅದರ ಪಕ್ಕದಲ್ಲೇ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಕಾಮಗಾರಿ ಶುರು ಮಾಡಿದ್ದಾರೆ. ಶುಕ್ರವಾರದಿಂದ ಪ್ರಾರಂಭವಾಗಿರುವ ಕೆಲಸಕ್ಕೂ ಕೆಲ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಪೊಲೀಸರ ನೆರವಿನೊಂದಿಗೆ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಿದ್ದಾರೆ. ಇನ್ನು 10-20 ದಿನಗಳಲ್ಲಿ ಸಿವಿಲ್ ವರ್ಕ್ ಪೂರ್ಣಗೊಳಿಸಲು ಪಾಲಿಕೆ ತೀರ್ಮಾನಿಸಿದೆ. ಪೊಲೀಸರ ಆಗಮನದಿಂದಾಗಿ ಇದೀಗ ವಿರೋಧ ವ್ಯಕ್ತವಾಗಿಲ್ಲ. ಸ್ಥಳೀಯರು ತಮ್ಮ ಪಾಡಿಗೆ ತಾವು ತೆರಳಿದ್ದಾರೆ.

    ಆದರೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ಪ್ರತಿಭಟನೆ ಮಾಡಿದ್ರು ಜಗ್ಗದ ಪಾಲಿಕೆ ವಿರುದ್ಧ ಇದೀಗ ದೇವಸ್ಥಾನವನ್ನು ನಿರ್ಮಿಸಿದ್ದು ಮಾತ್ರ ಬಹು ಚರ್ಚೆಯ ವಿಷಯವಾಗಿರುವುದಂತೂ ಸತ್ಯ.