Tag: ದೇವಸ್ಥಾನ

  • ದೇವಸ್ಥಾನದ ಬಳಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಕೆನ್ನೆ ಕೊಯ್ದ ಪುಂಡರು

    ದೇವಸ್ಥಾನದ ಬಳಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಕೆನ್ನೆ ಕೊಯ್ದ ಪುಂಡರು

    ಹಾಸನ: ಕೊರೊನಾ ಲಾಕ್‍ಡೌನ್ ನಡುವೆಯೂ ಹಾಸನದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು ಮನೆ ಬಳಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾರೆ.

    ಹಾಸನದ ಬೇಲೂರು ರಸ್ತೆಯ, ಈಶ್ವರ ದೇವಾಲಯ ಬಳಿ ಆಟೋಚಾಲಕ ನವೀನ್ ಮನೆಯಿದ್ದು, ಅಲ್ಲಿ ಮೂವರು ಯುವಕರು ಸಿಗರೇಟ್ ಸೇದುತ್ತಾ ಕೂಗಾಡುತ್ತಿದ್ದರು. ಇದನ್ನು ನೋಡಿದ ಆಟೋ ಚಾಲಕ ನವೀನ್, ಯಾರು ನೀವು, ಯಾಕೆ ಹೀಗೆ ಕೂಗಾಡುತ್ತಿದ್ದೀರಿ. ದೇವಾಲಯದ ಬಳಿ ಸಿಗರೇಟ್ ಸೇದಬಾರದು ಎಂದು ಬುದ್ಧಿವಾದ ಹೇಳಿದ್ದಾರೆ.

    ಇದರಿಂದ ಕೆರಳಿದ ಯುವಕರು ನೀನ್ಯಾವನೋ ಕೇಳೋಕೆ ಎಂದು ಏಕಾಏಕಿ ಚಾಕು ಬೀಸಿದ್ದಾರೆ. ನವೀನ್ ತಕ್ಷಣ ಹಿಂದೆ ಸರಿದಿದ್ದರಿಂದ ಚಾಕು ಕುತ್ತಿಗೆ ಕೊಯ್ಯುವ ಬದಲು ಕೆನ್ನೆಯನ್ನು ಕೊಯ್ದುಕೊಂಡು ಮುಂದೆ ಸಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ನವೀನ್ ಕೂಗಾಟದಿಂದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಹಾಸನ ಪೆನ್ಷನ್ ಮೊಹಲ್ಲ ಠಾಣೆಗೆ ನವೀನ್ ದೂರು ನೀಡಿದ್ದಾರೆ.

  • ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ ಮೂಕ ಪ್ರಾಣಿಗಳನ್ನು ಕಂಗಾಲಾಗಿಸಿದೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್‍ಡೌನ್ ಮಾಡಿ ಜನರಿಗೆ ಅಗತ್ಯ ವಸ್ತು, ಆಹಾರ ಒದಗಿಸುವ ಪ್ರಯತ್ನವೆನೋ ನಡೆಯುತ್ತಿದೆ. ಆದರೆ ಲಾಕ್‍ಡೌನಿಂದ ಆಹಾರ ಸಿಗದೇ ಮೂಕ ಪ್ರಾಣಿಗಳು ನರಳುತ್ತಿವೆ.

    ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಸಾವಿರಾರು ಮಂಗಗಳು ನಿತ್ಯ ಆಹಾರಕ್ಕಾಗಿ ಪರದಾಡುವಂತಾಗಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದು, ದೇವಸ್ಥಾನದಲ್ಲಿ ಭಕ್ತರು ನೀಡುತ್ತಿದ್ದ ಹಣ್ಣು, ಆಹಾರವನ್ನೇ ತಿಂದು ಬದುಕುತ್ತಿದ್ದ ಮಂಗಗಳು ಆಹಾರ ಸಿಗದೇ ಪರಿತಪಿಸುವಂತಾಗಿದೆ.

    ಸಾವಿರಾರು ಭಕ್ತರು ದೇವಸ್ಥನಕ್ಕೆ ಭೇಟಿ ನೀಡಿ ಮಂಗಗಳಿಗೂ ಆಹಾರ ನೀಡುತ್ತಿದ್ದರು. ಈಗ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿಲ್ಲ. ಹೀಗಾಗಿ ಮಂಗಗಳ ಸ್ಥಿತಿ ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಮಂಗಗಳಿಗೆ ನಿತ್ಯ ಆಹಾರ ಪೂರೈಕೆ ಮಾಡುತ್ತಿದೆ. ಈಗ ಪ್ರತಿನಿತ್ಯ ದೇವಸ್ಥಾನದಿಂದ ಮಂಗಗಳಿಗೆ ಮೂರು ಹೊತ್ತು ಶೇಂಗಾ, ಕಡಲೆ ಕಾಳು ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ.

    ಆದರೆ ನಿತ್ಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರಿಂದಲು ಆಹಾರ ಸಿಗುತ್ತಿದ್ದ ಮಂಗಗಳಿಗೆ ಈಗ ಆಹಾರಕ್ಕೆ ಅಲೆದಾಡುವಂತ ಸ್ಥಿತಿ ಕೊರೊನಾದಿಂದ ನಿರ್ಮಾಣವಾಗಿದೆ. ದೇವಸ್ಥಾನದ ಕೆಳಗೆ ಇರುವ ಮಂಗಗಳು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಆಹಾರ ತಿಂದು ಜೀವ ಉಳಿಸಿಕೊಂಡಿವೆ. ಆದ್ರೆ ಬೆಟ್ಟದ ಮೇಲಿರುವ ಸಾವಿರಾರು ಮಂಗಗಳು ಆಹಾರ, ನೀರು ಸಿಗದೇ ನರಳಾಡುತ್ತಿವೆ.

  • ಒಂದು ದಿನದ ಮಗುವನ್ನ ದೇವಸ್ಥಾನದಲ್ಲಿ ಬಿಟ್ಟು ಹೋದ ಪಾಪಿಗಳು

    ಒಂದು ದಿನದ ಮಗುವನ್ನ ದೇವಸ್ಥಾನದಲ್ಲಿ ಬಿಟ್ಟು ಹೋದ ಪಾಪಿಗಳು

    ಚಿಕ್ಕೋಡಿ/ಬೆಳಗಾವಿ: ಒಂದು ದಿನದ ನವಜಾತ ಗಂಡು ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಹೊರವಲಯದ ಬಸವೇಶ್ವರ ದೇವಸ್ಥಾನದಲ್ಲಿ ಹೆರಿಗೆಯ ನಂತರ ಗಂಡು ಮಗುವನ್ನು ಕೈಚೀಲದಲ್ಲಿ ಇಟ್ಟು ಪರಾರಿಯಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆಗೆ ಮಗು ಅಳುವಿನ ಧ್ವನಿ ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮಗುವಿಗೆ ಆರೈಕೆ ಮಾಡಿ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಈಗ ಮಗು ಆರೋಗ್ಯವಾಗಿದೆ.

    ಕೊರೊನ ವೈರಸ್ ಹಾವಳಿ ನಡುವೆಯೂ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮುಗಳಖೋಡ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ಹೆರಿಗೆಯಾಗಿಲ್ಲ. ಬೇರೆ ಯಾವುದೋ ಊರಿನಲ್ಲಿ ಹೆರಿಗೆಯಾಗಿದ್ದು, ನಂತರ ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ. ಈ ಕುರಿತು ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ.

    ಈ ಕುರಿತು ಹಾರುಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗು ಬಿಟ್ಟು ಹೋದವರಿಗೆ ಬಲೆ ಬೀಸಿದ್ದಾರೆ.

  • ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಬಡವರಿಗೆ ಊಟ ನೀಡದೆ ಖಾಸಗಿ ಆಸ್ಪತ್ರೆಗೆ ಕಟೀಲಿನಿಂದ ಆಹಾರ ರವಾನೆ

    ಮಂಗಳೂರು: ನಿರ್ವಸಿತ ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳಿಂದ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆದರೆ ಎ ದರ್ಜೆಯ ಹೆಚ್ಚಿನ ದೇವಸ್ಥಾನಗಳಿಂದ ಈ ಆದೇಶ ಪಾಲನೆಯಾಗುತ್ತಿಲ್ಲ.

    ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಎ ದರ್ಜೆಯ ದೇವಸ್ಥಾನ ಆಗಿರುವ ಕಟೀಲು ದುರ್ಗಾಪರಮೇಶ್ವರಿ ದೇಗುಲದಿಂದ ಖಾಸಗಿ ಕೆಎಂಸಿ ಆಸ್ಪತ್ರೆಗೆ ಗುಪ್ತವಾಗಿ ಊಟ ರವಾನಿಸುತ್ತಿರುವ ವಿಡಿಯೋ ಈಗ ಹರಿದಾಡುತ್ತಿದೆ. ದೇವಸ್ಥಾನದ ಅಕ್ಕಿ ಬಳಸಿ, ಅಲ್ಲಿನ ಅಡುಗೆ ಕಾರ್ಮಿಕರ ಮೂಲಕ ಊಟ ರೆಡಿ ಮಾಡಲಾಗುತ್ತಿದ್ದು ದಿನವೊಂದಕ್ಕೆ ಎರಡು ಸಾವಿರ ಜನರಿಗೆ ಊಟ ತಯಾರಿಸಿ ಕೊಡಲಾಗುತ್ತಿದೆ. ದೇವಸ್ಥಾನದ ದುಡ್ಡಲ್ಲಿ ಊಟ ರೆಡಿ ಮಾಡಿಸಿ, ಕೆಎಂಸಿ ಆಸ್ಪತ್ರೆಗೆ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪ ಕೇಳಿಬಂದಿದೆ.

    ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿರುವ ಸಂದರ್ಭ ಇಷ್ಟೊಂದು ಭೋಜನ ತಯಾರಿಸುತ್ತಿರುವುದಲ್ಲದೆ, ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ದೇವಸ್ಥಾನದ ಆಡಳಿತ ವಹಿಕೊಂಡಿರುವ ಆಸ್ರಣ್ಣರ ಕಾರುಬಾರಿನಲ್ಲಿ ಸರ್ಕಾರಿ ದೇವಸ್ಥಾನದಿಂದ ಊಟ ಮಾರಾಟ ಮಾಡಲಾಗುತ್ತಿದೆಯೇ ಅನ್ನುವ ಪ್ರಶ್ನೆ ಎದುರಾಗಿದೆ.

    ಬಡ ಕೂಲಿ ಕಾರ್ಮಿಕರಿಗೆ ಊಟ ಪೂರೈಸುವ ಬಗ್ಗೆ ಪ್ರಶ್ನೆ ಮಾಡಿದರೆ ಅಡುಗೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ನೆಪ ಹೇಳುತ್ತಾರೆ. ಈಗ ಕೆಎಂಸಿ ಅಂಬುಲೆನ್ಸ್ ನಲ್ಲಿ ಊಟ ರವಾನಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

  • ಮಡಿಕೇರಿಯಲ್ಲಿ ಮನೆಯಲ್ಲೇ ಸಾರ್ವಜನಿಕರಿಂದ ಯುಗಾದಿ ಹಬ್ಬ ಆಚರಣೆ

    ಮಡಿಕೇರಿಯಲ್ಲಿ ಮನೆಯಲ್ಲೇ ಸಾರ್ವಜನಿಕರಿಂದ ಯುಗಾದಿ ಹಬ್ಬ ಆಚರಣೆ

    ಮಡಿಕೇರಿ: ಭಾರತೀಯ ಸಂಸ್ಕೃತಿಯ ಹೊಸ ವರ್ಷವೇ ಯುಗಾದಿ. ಈ ಹಬ್ಬವನ್ನು ಕೊರೊನಾ ವೈರಸ್‍ನ ಆತಂಕದ ನಡುವೆಯೂ ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.

    ಜಿಲ್ಲೆಯಲ್ಲಿ ಯುಗಾದಿ ಹಬ್ಬದ ದಿನ ಬಹುತೇಕರು ತಮ್ಮ ಮನೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಜನರು ದೇವಾಲಯಗಳಿಗೆ ತೆರಳದೆ ಮನೆಯಲ್ಲೇ ಪೂಜೆ ಸಲ್ಲಿಸುತ್ತಿದ್ದಾರೆ. ಅದರಂತೆ ಬಹುತೇಕ ಜನರು ಸರಳವಾಗಿ ಈ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

    ಮನೆಯಲ್ಲಿ ಇರುವ ದೇವರಿಗೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಮನೆ ಮಂದಿ ಎಲ್ಲಾ ಬೇವು-ಬೆಲ್ಲದ ಸವಿಯನ್ನು ಸವಿಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಎಲ್ಲರೂ ಮನೆಯಲ್ಲಿ ಇದ್ದುಕೊಂಡೇ ಹಬ್ಬ ಆಚರಿಸುತ್ತಿರುವುದು ಒಂದು ರೀತಿಯಲ್ಲಿ ಖುಷಿಯಾಗುತ್ತಿದೆ. ಆದರೆ ಈ ಕೊರೊನಾ ಮಾಹಾಮಾರಿ ಈ ದೇಶವನ್ನು ಬಿಟ್ಟು ತೊಲಗಬೇಕು. ನಾಡಿನ ಜನರು ಸುಖ-ಶಾಂತಿಯಿಂದ ಜೀವನ ನಡೆಸುವ ಹಾಗೆ ಆಗಬೇಕು ಎಂದು ಜನರು ಹೇಳುತ್ತಿದ್ದಾರೆ.

    ಅಲ್ಲದೆ ಜನ ಸಾಮಾನ್ಯರಿಗೋಸ್ಕರ ಶ್ರಮಿಸುತ್ತಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪ್ರಧಾನಿ ಮೋದಿ, ಮುಖ್ಯಮಂತ್ರಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಗಳು ಜನಸಾಮಾನ್ಯರು ಸಲ್ಲಿಸುತ್ತಿದ್ದಾರೆ.

  • ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನಕ್ಕೂ ತಟ್ಟಿದ ಕೊರೊನಾ ಭೀತಿ

    ಶಕ್ತಿ ದೇವತೆ ಮಾಯಕ್ಕಾದೇವಿ ದರ್ಶನಕ್ಕೂ ತಟ್ಟಿದ ಕೊರೊನಾ ಭೀತಿ

    ಬೆಳಗಾವಿ(ಚಿಕ್ಕೋಡಿ): ಕೊರೊನಾ ವೈರಸ್ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿಗೂ ಕೊರೊನಾ ಬಿಸಿ ತಟ್ಟಿದೆ.

    ಚಿಂಚಲಿಯ ಮಾಯಕ್ಕಾದೇವಿಯ ದರ್ಶನವನ್ನು ಇಂದಿನಿಂದ ಮಾರ್ಚ್ 31ರವರೆಗೂ ಸ್ಥಗಿತಗೊಳಿಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನವನ್ನು ಬಂದ್ ಮಾಡಿದೆ. ಮಾಯಕ್ಕಾದೇವಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾದ್ಯ ದೇವತೆಯಾಗಿದ್ದು, ದೇವಿಯ ದರ್ಶನ ಪಡೆಯಲು ದಿನನಿತ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತಿದ್ದರು.

    ಕೊರೊನಾ ಭೀತಿಯಿಂದ ಮಾರ್ಚ 31ರವರೆಗೆ ಮಾಯಕ್ಕಾದೇವಿ ದರ್ಶನಕ್ಕೆ ಬಾರದಂತೆ ಭಕ್ತರಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆ. ನಿತ್ಯ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನ ಇಂದು ದರ್ಶನ ಬಂದ್ ಮಾಡಿದ ಹಿನ್ನೆಲೆ ಭಕ್ತರಿಲ್ಲದೆ ಬಣಗುಡುತ್ತಿದೆ.

    ಇತ್ತ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಸಂಕೇಶ್ವರ ಪಟ್ಟಣದಲ್ಲಿ ಶುಕ್ರವಾರದ ಸಂತೆಯನ್ನ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ರದ್ದು ಮಾಡಿದ್ದಾರೆ. ಸಂತೆ ನಡೆಸಬಾರದೆಂಬ ಆದೇಶವನ್ನು ಲೆಕ್ಕಸದೆ ಸಂತೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದರು. ಅದಕ್ಕೆ ಅನುಮತಿ ನೀಡದ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸಂತೆಯನ್ನ ಬಂದ್ ಮಾಡಿಸಿದ್ದಾರೆ. ಜನ ಸಂತೆಗೆ ಬರುತ್ತಾರೆ ಎಂದು ವ್ಯಾಪಾರಸ್ಥರು ತರಕಾರಿ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಮಾರಾಟಕ್ಕೆ ತಂದಿದ್ದರು. ಆದರೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಸಂತೆಯನ್ನ ತೆರವುಗೊಳಿಸಲಾಯಿತು.

  • ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನ ಡೆಮಾಲಿಷನ್

    ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನ ಡೆಮಾಲಿಷನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿದ್ದ ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿದ್ದಾರೆ.

    ಬೆಂಗಳೂರಿನ ಶ್ರೀರಾಂಪುರಲ್ಲಿ ಗಂಗೈಯಮ್ಮ ದೇವಸ್ಥಾನವಿದ್ದು, ಪೊಲೀಸ್ ಸರ್ಪಗಾವಲಿನ ನಡುವೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಪಾಲಿಕೆ ಅಧಿಕಾರಿಗಳು ದೇವಸ್ಥಾನವನ್ನ ಹಾಗೂ ಅದರೊಳಗೆ ಇದ್ದ ಗಂಗೈಯಮ್ಮ ದೇವಿಯ ವಿಗ್ರಹವನ್ನ ತರೆವುಗೊಳಿಸಿ, ಅರಳಿ ಮರದ ಕೆಳಗಡೆ ಇಟ್ಟು ದೇವಸ್ಥಾನವನ್ನ ಒಡೆದು ಹಾಕಲಾಯ್ತು.

    ಗಂಗೈಯಮ್ಮ ದೇವಸ್ಥಾನ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ವಿಜಯಾ ಎಂಬ ಮಹಿಳೆ ಹೈಕೋರ್ಟ್ ಮೇಟ್ಟಿಲೇರಿದ್ದರು. ನ್ಯಾಯಾಲಯ ದೇವಸ್ಥಾನದ ಜಾಗವನ್ನ ಪರಿಶೀಲನೆ ಮಾಡಿ ತೆರವುಗೊಳಿಸಲು ಆದೇಶ ಮಾಡಿತ್ತು. ಅಧಿಕಾರಿಗಳು ದೇವಸ್ಥಾನವನ್ನ ಒಡೆದು ಹಾಕಲು ಎರಡು ಮೂರು ಬಾರಿ ಪ್ರಯತ್ನ ಮಾಡಿದ್ದರು. ಆದರೆ ಭಕ್ತಾದಿಗಳು ಯಾವುದೇ ಕಾರಣಕ್ಕೂ ದೇವಸ್ಥಾನವನ್ನ ಒಡೆದು ಹಾಕಲು ಬಿಡೋದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ದೇವಸ್ಥಾನ ತೆರವುಗೊಳಿಸಲು ಆಗಿರಲಿಲ್ಲ.

    ಹೈಕೋರ್ಟ್ ಇದೇ ತಿಂಗಳ 20ರ ಒಳಗಾಗಿ ದೇವಸ್ಥಾನ ತೆರವು ಮಾಡಿ ವರದಿ ನೀಡಲು ಪಾಲಿಕೆಗೆ ಗಡವು ನೀಡಿತ್ತು. ಹೀಗಾಗಿ ಭಕ್ತಾದಿಗಳನ್ನ ಮಂಗಳವಾರ ಸಂಪರ್ಕ ಮಾಡಿ, ದೇವಸ್ಥಾನ ತೆರವುಗೊಳಿಸಲೇ ಬೇಕು ನ್ಯಾಯಾಲಯ 20ನೇ ತಾರೀಖಿನ ಒಳಗಾಗಿ ತೆರವುಗೊಳಿಸಿ ವರದಿಕೊಡುವಂತೆ ಸೂಚಿಸಿದೆ. ಭಕ್ತಾದಿಗಳೆಲ್ಲರು ಸಹಕರಿಸುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಭಕ್ತಾದಿಗಳು ಗಲಾಟೆ ಮಾಡುವ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಪೊಲೀಸ್ ಭದ್ರತೆಯ ನಡುವೆ ದೇವಸ್ಥಾನ ತೆರವು ಮಾಡಲಾಯ್ತು.

  • ಕೊರೊನಾ ಭೀತಿ- ದಕ್ಷಿಣ ಕನ್ನಡದ ಎಲ್ಲ ಪುಣ್ಯ ಕ್ಷೇತ್ರಗಳ ಸೇವೆ ಬಂದ್

    ಕೊರೊನಾ ಭೀತಿ- ದಕ್ಷಿಣ ಕನ್ನಡದ ಎಲ್ಲ ಪುಣ್ಯ ಕ್ಷೇತ್ರಗಳ ಸೇವೆ ಬಂದ್

    ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಸ್ಥಾನಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತ್ರತ್ವದಲ್ಲಿ ನಡೆದ ಸಭೆಯ ನಂತರ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಈ ಮಾಹಿತಿ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿಯೂ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ತಡೆ ನೀಡಲಾಗಿದೆ ಎಂದು ತಿಳಿಸಿದರು.

    ದೇವಸ್ಥಾನಗಳ ಉತ್ಸವಗಳಲ್ಲಿ ಸಿಬ್ಬಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಜನದಟ್ಟಣೆಯನ್ನು ತಪ್ಪಿಸುವುದಕ್ಕೆ ಇಂದಿನಿಂದ ಎಲ್ಲ ಸೇವೆಗಳನ್ನು ರದ್ದುಪಡಿಸಲಾಗುವುದು. ಮೊನ್ನೆ ಕುಕ್ಕೆಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆಯಂತಹ ಸೇವೆಗಳಿಗೆ ಕುಟುಂಬ ಸದಸ್ಯರ ಬದಲು ತಲಾ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಉಳಿದಂತೆ ಎಲ್ಲ ಸೇವೆಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಎಡಿಸಿ ರೂಪ ಸ್ಪಷ್ಟಪಡಿಸಿದರು.

  • ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ

    ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಅದ್ಧೂರಿ ರಥೋತ್ಸವ ನಡೆಸದೇ ಇರಲು ದೇವಸ್ಥಾನ ತೀರ್ಮಾನಿಸಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರುವುದರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ದೇವಸ್ಥಾನದ ಆಡಳಿತ ಮಂಡಳಿ ಸಭೆ ಮಾಡಿ ಜಿಲ್ಲಾಧಿಕಾರಿ ಜಗದೀಶ್ ಅವರ ಸೂಚನೆಗೆ ಒಪ್ಪಿದೆ. ಅದ್ಧೂರಿ ರಥೋತ್ಸವ ಬದಲು ದೇವರ ರಥಾರೋಹಣ ಮಾತ್ರ ಮಾಡಲು ನಿಶ್ಚಯಿಸಿದೆ. ರಥಾರೋಹಣ ವೇಳೆ ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರು ಮಾತ್ರ ಪಾಲ್ಗೊಳ್ಳುವಂತೆ ವಿನಂತಿ ಮಾಡಿಕೊಂಡಿದೆ.

    ಭಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಸಮಸ್ಯೆಗಳು, ಕಂಟಕಗಳ ನಿವಾರಣೆಯಾದ ಮೇಲೆ ದೇವಸ್ಥಾನದಲ್ಲಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಪಬ್ಲಿಕ್ ಟಿವಿ ಮೂಲಕ ವಿನಂತಿ ಮಾಡಿದ್ದಾರೆ.

  • ಹ್ಯಾಟ್ರಿಕ್ ಹೀರೋ ಶಿವಣ್ಣ ಶಬರಿ ಮಲೆ ಯಾತ್ರೆ ರದ್ದು

    ಹ್ಯಾಟ್ರಿಕ್ ಹೀರೋ ಶಿವಣ್ಣ ಶಬರಿ ಮಲೆ ಯಾತ್ರೆ ರದ್ದು

    ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಶಬರಿ ಮಲೆ ಯಾತ್ರೆಗೂ ಬ್ರೇಕ್ ಬಿದ್ದಿದೆ.

    ಶಿವಣ್ಣ ಪ್ರತಿ ಬಾರಿ ಮಾಲೆ ಧರಿಸಿಕೊಂಡು ತಮ್ಮ ತಂಡದೊಂದಿಗೆ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಹೋಗುತ್ತಿದ್ದರು. ಈ ಬಾರಿಯೂ ಮಾಲೆ ಧರಿಸಿಕೊಂಡು ಸ್ವಾಮಿ ಅಯ್ಯಪ್ಪ ದೇವಾಲಯಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್‍ನಿಂದ ಶಿವಣ್ಣ ಮುಂಜಾಗ್ರತವಾಗಿ ಶಬರಿ ಮಲೆ ಯಾತ್ರೆಯನ್ನು ರದ್ದು ಮಾಡಿದ್ದಾರೆ.

    ಹೀಗಾಗಿ ಶಿವಣ್ಣ ಇಂದು ಮನೆಯಲ್ಲಿ ಪೂಜೆ ಮಾಡಿ ಮಾಲೆ ಬಿಚ್ಚಲಿದ್ದಾರೆ. ಈ ಪೂಜೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ. ಮನೆಯಲ್ಲಿ ಪೂಜೆಯನಂತರ ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನಕ್ಕೆ ಶಿವರಾಜ್‍ಕುಮಾರ್ ಭೇಟಿ ಕೊಡಲಿದ್ದಾರೆ.

    ಶಿವಣ್ಣ ಅವರು ನಿರ್ದೇಶಕ ರಘುರಾಮ್ ಮತ್ತು ಅವರ ಬಳಗ ಫೆಬ್ರವರಿ 21ರಂದು ಮಾಲೆ ಧರಿಸಿತ್ತು. ಇಂದು ಸಂಜೆ ಶಬರಿಮಲೆ ಯಾತ್ರೆಗೆ ತೆರಳು ನಿರ್ಧರಿಸಿದ್ದರು. ಅದೇ ರೀತಿ ಯಾತ್ರೆ ಮುಗಿಸಿ ಮಾರ್ಚ್ 18ರಂದು ವಾಪಸ್ ಬರಬೇಕಿತ್ತು. ಆದರೆ ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳು ಬಂದ್ ಆಗಿವೆ.

    ಶಬರಿಮಲೆ ದೇವಸ್ಥಾನ ಮಂಡಳಿ ಕೂಡ ಭಕ್ತರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವುದು ಬೇಡ ಎಂದು ತಿಳಿಸಿದೆ. ಈ ಎಲ್ಲಾ ಕಾರಣ ದಿಂದ ಶಿವರಾಜ್ ಕುಮಾರ್ ಯಾತ್ರೆಯನ್ನು ಕೈಬಿಟ್ಟಿದ್ದಾರೆ.