Tag: ದೇವಸ್ಥಾನ

  • ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಇಲ್ಲ

    ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಇಲ್ಲ

    – ನಮಗೆ ಭಕ್ತರ ಆರೋಗ್ಯ ಮುಖ್ಯ ಎಂದ ಸ್ವಾಮೀಜಿ

    ಉಡುಪಿ: ಸರ್ಕಾರ ಜೂನ್ 8ರ ನಂತರ ದೇವಸ್ಥಾನ ತೆರೆಯುವ ಅವಕಾಶ ಕೊಟ್ಟಿದೆ. ಆದರೆ ಉಡುಪಿ ಕೃಷ್ಣನ ದರ್ಶನ ಸಿಗೋದಕ್ಕೆ ಜುಲೈ ತನಕ ಕಾಯಬೇಕಾಗಿದೆ. ಯಾಕಂದರೆ ಉಡುಪಿ ಕೃಷ್ಣ ಮಠ ಸೋಮವಾರ ಓಪನ್ ಆಗಲ್ಲ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಮಾರು ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ, ನಾವು ಇನ್ನೂ 20 ರಿಂದ 30 ದಿನ ಕಾಯುತ್ತೇವೆ. ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ. ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಹೀಗಾಗಿ ನಮಗೆ ಭಕ್ತರ ಮತ್ತು ಕೃಷ್ಣ ಮಠದ ಸಿಬ್ಬಂದಿ ಆರೋಗ್ಯ ಮುಖ್ಯ ಎಂದರು.

    ಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡ ಪರಂಪರೆ ಇದೆ. ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯ ಇದೆ. ಯಾರಿಗೂ ಸಮಸ್ಯೆ ಆಗಬಾರದು. ಹೀಗಾಗಿ ಸೋಮವಾರ ನಾವು ದೇವಸ್ಥಾನವನ್ನು ತೆರೆಯುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

    ಶ್ರೀಕೃಷ್ಣ ಮಠಕ್ಕೆ ಪ್ರತಿದಿನ 1 ಲಕ್ಷ ರೂಪಾಯಿಯಷ್ಟು ಖರ್ಚು ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೂಡ ನಮ್ಮೆಲ್ಲಾ ಸಿಬ್ಬಂದಿಗೆ ಸಂಬಳ ಕೊಡುತ್ತಿದ್ದೇವೆ. ಅದೇನೆ ಇದ್ದರೂ ಮಠ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ. ಕೊರೊನಾ ಸೋಂಕು ಶೀಘ್ರ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಕಳೆದ ಎರಡು ತಿಂಗಳು ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.

  • ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

    ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

    – ಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕೋರಿದ ಆಡಳಿತ ಮಂಡಳಿ

    ಬೆಂಗಳೂರು: ಜೂನ್ 8ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಈಗಾಗಲೇ ಹಲವು ಪ್ರತಿಷ್ಠಿತ ದೇವಸ್ಥಾನಗಳ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಆದರೆ ಇಸ್ಕಾನ್ ಜೂನ್ 15ರ ವರೆಗೆ ಸಮಯಾವಕಾಶ ಕೋರಿದೆ.

    ಸಿಲಿಕಾನ್ ಸಿಟಿಯ ಇಸ್ಕಾನ್ ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆ ಆಡಳಿತ ಮಂಡಳಿ ದೇವಸ್ಥಾನ ತೆರೆಯಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದೆ. ಹೀಗಾಗಿ ಇಸ್ಕಾನ್ ಬಾಗಿಲು ತೆರೆಯುವುದು ಕೆಲ ದಿನಗಳ ಕಾಲ ತಡವಾಗಲಿದೆ. ದೇವಸ್ಥಾನದ ಬಾಗಿಲು ತೆರೆಯಲು ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಆದರೆ ಭಕ್ತರ ಆಗಮನಕ್ಕುಣವಾಗಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೀಗಾಗಿ ತಡವಾದರೂ ಪರವಾಗಿಲ್ಲ ಸೂಕ್ತ ಭದ್ರತೆ, ವ್ಯವಸ್ಥೆ ಮಾಡಿಕೊಂಡೇ ಬಾಗಿಲು ತೆರೆಯಲು ನಿರ್ಧರಿಸಿದೆ.

    ಇಸ್ಕಾನ್‍ಗೆ ಪ್ರತಿದಿನ 12 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಇಷ್ಟೊಂದು ಜನರಿಗೆ ಸಾಮಾಜಿಕ ಅಂತರ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ದೇವಾಲಯದ ಸಿದ್ಧತೆಗಾಗಿ ಸ್ವಲ್ಪ ಹೆಚ್ಚಿನ ಸಮಯ ಬೇಕು ಎಂದು ಇಸ್ಕಾನ್‍ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

    ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ಪ್ರಸಿದ್ಧ ದೇವಾಲಯಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುತೇಕ ಎಲ್ಲ ದೇವಾಲಯಗಳು ಸರ್ಕಾರದ ನಿಯಮದಂತೆ ಸೋಮವಾರದಿಂದ ಬಾಗಿಲು ತೆರೆಯಲಿವೆ. ಸರ್ಕಾರದ ಮಾರ್ಗಸೂಚಿಯಂತೆ ದೇವರ ದರ್ಶನ ಪಡೆಯಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

  • ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    – ತನ್ನ ದುಡಿಮೆಯಲ್ಲಿ ಸಂಪಾದಿಸಿದ ಆಸ್ತಿ ಮಾರಾಟ
    – ಸಿದ್ಧಲಿಂಗೇಶ್ವರ ದೇವರಿಗೆ 10 ಕೋಟಿ ವೆಚ್ಚದ ಚಿನ್ನದ ತೇರು

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವರಿಗೆ ಭಕ್ತರೊಬ್ಬರು ಸುಮಾರು 10 ಕೋಟಿ ರೂ. ಮೌಲ್ಯದ  ಚಿನ್ನದ ತೇರನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಕುಣಿಗಲ್ ತಾಲೂಕಿನ ದೇವಕನ್ನಸಂದ್ರದ ಶಿವಣ್ಣ ತೋಂಟದಾರ್ಯ ಎಂಬುವರು ದೇವರಿಗೆ ಚಿನ್ನದ ತೇರನ್ನ ಸಮರ್ಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಶಿವಣ್ಣ ಅವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತಂತೆ. ಆಗ ಎಡೆಯೂರು ಸಿದ್ಧಲಿಂಗೇಶ್ವರ ದೇವರು ಕೈ ಹಿಡಿದು ಕೋಟ್ಯಂತರ ರೂ. ಸಂಪಾದನೆ ಮಾಡುವಂತೆ ಆಶೀರ್ವಾದ ಮಾಡಿದ್ದರಂತೆ. ಹೀಗಾಗಿ ದೇವರ ಕೃಪೆಯಿಂದ ತಾನು ಶ್ರೀಮಂತನಾಗಿದ್ದು, ದೇವರಿಗೆ ಕಾಣಿಕೆ ಕೊಡಬೇಕು ಎಂದು ಬಯಸಿ ಕುಟುಂಬ ಸಮೇತವಾಗಿ ಬಂದು ಚಿನ್ನದ ತೇರನ್ನ ಸಮರ್ಪಿಸಿದ್ದಾರೆ.

    ಶಿವಣ್ಣ 50 ವರ್ಷದ ಹಿಂದೆ ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಹೋದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡದೆ ಬದುಕಿಲ್ಲ ಎನ್ನುವ ಸ್ಥಿತಿಯಲ್ಲಿ ಕುಟುಂಬ ಇತ್ತು. ಅಂದಿನಿಂದ ಕೆಲ ಕಾಲ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ತರಕಾರಿ ವ್ಯಾಪಾರ ಮಾಡಿದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟರು. ಇದೀಗ ಶಿವಣ್ಣನವರು ಬೆಂಗಳೂರಿನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರು. ಅಂದು ಧೈರ್ಯ ತುಂಬಿದ ದೈವಕ್ಕೆ ಏನಾದರೂ ಮಾಡಬೇಕು ಎನ್ನುವ ಬಯಕೆಯ ಹಿನ್ನೆಲೆಯಲ್ಲಿ ತಮ್ಮ ಹೆಸರಿಗಿದ್ದ ಸೈಟ್‍ಗಳನ್ನ ಮಾರಿ ಎಡೆಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ನೀಡಿದ್ದಾರೆ ಎಂದು ಪ್ರಧಾನ ಅರ್ಚಕರು ಶಿವಮೂರ್ತಿಯ್ಯ ತಿಳಿಸಿದ್ದಾರೆ.

    ಶಿವಣ್ಣ ತಾವು ಹಂತ ಹಂತವಾಗಿ ಜೀವನದಲ್ಲಿ ಮೇಲಕ್ಕೆ ಏರುತಿದ್ದಂತೆ ಎಡೆಯೂರು ಸಿದ್ಧಲಿಂಗೇಶ್ವರನಿಗೆ ವಿಶೇಷ ಕಾಣಿಕೆ, ದೇವಸ್ಥಾನದ ಸೇವಾಕಾರ್ಯ ಮಾಡುತ್ತಿದ್ದರು. ಈ ಹಿಂದೆ ಕಗ್ಗೆರೆ ಸಿದ್ಧಲಿಂಗೇಶ್ವರನಿಗೆ ಬೆಳ್ಳಿಯ ಮೂರ್ತಿ ಅರ್ಪಿಸಿದ್ದರು. ಇದೀಗ ಶಿವಣ್ಣ ಕೊಟ್ಟ ಚಿನ್ನದ ತೇರು ಶ್ರೀಕ್ಷೇತ್ರದ ಜಾತ್ರೆ ವೇಳೆ ರಥದಲ್ಲಿ ಅಲಂಕರಿಸಿ ಎಳೆಯಲಾಗುವುದು.

  • ಜೂನ್ 8ರಿಂದ ಕೆಲ ಷರತ್ತುಗಳೊಂದಿಗೆ ಮಾದಪ್ಪನ ದರ್ಶನ

    ಜೂನ್ 8ರಿಂದ ಕೆಲ ಷರತ್ತುಗಳೊಂದಿಗೆ ಮಾದಪ್ಪನ ದರ್ಶನ

    ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲಕ್ಕೆ ಭಕ್ತರಿಗೆ ಪ್ರವೇಶ ಮುಕ್ತ ಮಾಡಲು ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ಕೈಗೊಂಡಿದೆ.

    ಜೂ.8ರಿಂದ ದೇಗುಲಕ್ಕೆ ಭಕ್ತರು ಬರಬಹುದಾಗಿದ್ದು ಕೋವಿಡ್-19 ಭೀತಿಯಲ್ಲಿ 1 ಮೀ. ಅಂತರದ ವೃತ್ತಗಳನ್ನು ಬರೆಯಲಾಗಿದೆ. ಈ ಮೂಲಕ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾದಪ್ಪನ ದರ್ಶನ ಪಡೆಯಬೇಕಿದೆ.

    ಈ ಹಿಂದೆ ಸಾವಿರಾರು ಮಂದಿ ಸಾಲುಗಟ್ಟಿ ನಿಲ್ಲಲು ಪ್ರಾಧಿಕಾರ ಬ್ರೇಕ್ ಹಾಕಿದ್ದು, ಒಮ್ಮೆಗೆ 180 ಮಂದಿ ಮಾತ್ರ ಸಾಲಿನಲ್ಲಿ ನಿಲ್ಲಬೇಕಿದೆ. ರಂಗ ಮಂಟಪದಲ್ಲಿ ಎಬಿಸಿಡಿ ಎಂಬ ನಾಲ್ಕು ವಿಭಾಗ ಮಾಡಿ ಒಂದೊಂದು ಬ್ಲಾಕ್ ನಲ್ಲಿ 200 ಮಂದಿ ಕುರ್ಚಿಯಲ್ಲಿ ಕೂರಲು ಅವಕಾಶ ಮಾಡಿಕೊಡಲಾಗುತ್ತಿದ್ದು, ದೇಗುಲ ಪ್ರವೇಶಕ್ಕೂ ಮುನ್ನ ಸಾನಿಟೈಸರ್ ಮಾಡುವ ಜೊತೆಗೆ ಸ್ಕ್ರೀನಿಂಗ್ ಮಾಡಲು ತಯಾರಿ ನಡೆದಿದೆ.

    ಕ್ಷೇತ್ರದ ಬಹುಮುಖ್ಯ ಸೇವೆಯಾದ ಚಿನ್ನದ ತೇರು ಮತ್ತಿತರ ರಥದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಪರ ಮಾಡಲು ಕೂಡ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಬಸ್, ಕಾರು, ಬೈಕಿನಲ್ಲಿ ಬರುವ ಭಕ್ತರಿಗೆ ಮಾತ್ರ ಅವಕಾಶ ಇರಲಿದ್ದು ಈ ಹಿಂದೆ ಬರುತ್ತಿದ್ದಂತೆ ಗೂಡ್ಸ್ ಆಟೋ, ಟ್ರ್ಯಾಕ್ಟರ್ ಗಳಲ್ಲಿ ಬರುವಂತಿಲ್ಲ ಎಂದು ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

    ದಾಸೋಹ ಭವನದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ತಿಂಡಿ ವ್ಯವಸ್ಥೆ ಕಲ್ಪಿಸಲಿದ್ದು, ಒಟ್ಟಿಗೆ ಕುಳಿತು ತಿನ್ನಲು ಅವಕಾಶ ಇರುವುದಿಲ್ಲ. ಈಗಾಗಲೇ ಪ್ರಾಯೋಗಿಕವಾಗಿ 20 ಸಾವಿರ ಲಡ್ಡು ತಯಾರಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ಹಲವು ಮುನ್ನೆಚ್ಚರಿಕೆ, ನಿರ್ಬಂಧಗಳ ನಡುವೆ ಜೂ.8 ರಿಂದ ಮಲೆ ಮಾದಪ್ಪ ಭಕ್ತರಿಗೆ ದರ್ಶನ ನೀಡಲು ಅಣಿಯಾಗಿದ್ದಾನೆ.

  • ದೇಗುಲದಲ್ಲಿ ಕುಂಕುಮ ಗಂಧ ಸಿಗುತ್ತೆ, ತೀರ್ಥ ಕೇಳುವಂತಿಲ್ಲ: ಸಚಿವ ಕೋಟ

    ದೇಗುಲದಲ್ಲಿ ಕುಂಕುಮ ಗಂಧ ಸಿಗುತ್ತೆ, ತೀರ್ಥ ಕೇಳುವಂತಿಲ್ಲ: ಸಚಿವ ಕೋಟ

    ಉಡುಪಿ: ಜೂನ್ ಎಂಟರಿಂದ ಮುಜರಾಯಿ ದೇವಸ್ಥಾನಗಳು ತೆರೆದುಕೊಳ್ಳುತ್ತವೆ. ದೇವಸ್ಥಾನದಲ್ಲಿ ಕುಂಕುಮ, ಗಂಧ ಕೊಡ್ತೇವೆ ಆದ್ರೆ ತೀರ್ಥ ಕೊಡುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಅಧೀನ ದೇವಸ್ಥಾನಗಳು ನಾಳೆಯಿಂದ ತೆರೆಯುವುದಿಲ್ಲ. ಈ ಹಿಂದೆ ಜೂನ್ 1ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲಿವೆ ಎಂದು ಹೇಳಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಸಹಮತ ನಿರೀಕ್ಷೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ಜೂನ್ 8ರಿಂದ ತೆರೆಯಲು ಅನುಮತಿಸಿದೆ. ನಾವು ಕೇಂದ್ರದ ಆದೇಶವನ್ನು ಪಾಲಿಸುತ್ತೇವೆ ಎಂದರು.

    ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನ, ಶ್ರದ್ಧಾಕೇಂದ್ರಗಳು ಜೂನ್ 8ರಂದು ಅಧಿಕೃತವಾಗಿ ತೆರೆಯಲಿವೆ. ಇಲಾಖೆಯಡಿ ಬಾರದ ದೇವಾಲಯಗಳನ್ನು ತೆರೆಯುವುದು ಅವರವರ ವಿವೇಚನೆಗೆ ಬಿಟ್ಟದ್ದು ಎಂದ ಸಚಿವರು, ಧಾರ್ಮಿಕ ಕೇಂದ್ರಗಳಲ್ಲಿ ಜಾತ್ರೆ, ಸಮಾರಂಭ, ಉತ್ಸವ ಮುಂತಾದ ಜನ ಸೇರಿಸುವ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಭಕ್ತರಿಗೆ ಗರ್ಭಗುಡಿ ಪ್ರವೇಶ ಇಲ್ಲ: ಈ ನಡುವೆ ಕೆಲ ಷರತ್ತುಗಳ ಬಗ್ಗೆ ವಿವರಣೆ ನೀಡಿದ ಅವರು, ದೇವಸ್ಥಾನಗಳ ಅರ್ಚಕರಿಗೆ ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಿದ್ದೇವೆ. ಭಕ್ತರು ದೇವರನ್ನು ಮುಟ್ಟಿ ಪೂಜೆ ಮಾಡಲು ಅವಕಾಶವಿಲ್ಲ. ದೇವಸ್ಥಾನಗಳಲ್ಲಿ ಶ್ರೀಗಂಧ ಅಥವಾ ಕುಂಕುಮ ನೀಡುವುಕ್ಕೆ ಮಾತ್ರ ಸೀಮಿತ ಮಾಡಿದ್ದು, ತೀರ್ಥ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳು, ಅಧಿಕಾರಿಗಳು, ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ದೇವಸ್ಥಾನಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿಸ್ತೃತವಾದ ಮಾರ್ಗ ಸೂಚಿಯನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ. ಭಕ್ತರು ಕೊರೊನಾ ಹಿನ್ನೆಲೆಯಲ್ಲಿ ಒಂದಿಷ್ಟು ಕ್ರಮಗಳನ್ನು ಪಾಲಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದನ್ನು ಅನುಸರಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ದೇವಾಲಯಗಳ ಓಪನ್‍ಗೆ ರಾಜ್ಯ ಸರ್ಕಾರದಿಂದ ಎಂಟು ನಿಯಮ

    ದೇವಾಲಯಗಳ ಓಪನ್‍ಗೆ ರಾಜ್ಯ ಸರ್ಕಾರದಿಂದ ಎಂಟು ನಿಯಮ

    ಬೆಂಗಳೂರು: ಕೊರೊನಾ ಲಾಕ್‍ಡೌನ್ 5.0ನಲ್ಲಿ ಕೇಂದ್ರ ಸರ್ಕಾರವು ದೇವಾಲಯ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಜೂನ್ 8ರಿಂದ ದೇವಾಲಯ ತೆರೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಂಟು ಸೂತ್ರಗಳನ್ನು ಹೊರಡಿಸಿದೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ. ಸರ್ಕಾರವು ಮುಂಬರುವ ದಿನಗಳಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಬಹುದು. ಹೀಗಾಗಿ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಿದೆ ಎಂದು ತಿಳಿಸಿದೆ.

    ಎಂಟು ನಿಯಮಗಳು ಏನು?
    1. ನಿತ್ಯ ಸ್ವಚ್ಛತೆ ಜೊತೆಗೆ ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ.
    2. ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲೇ ನೇಮಿಸಿ.
    3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.
    4. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಹಾಕಿದ ನಂತರವೇ ದೇವಸ್ಥಾನಕ್ಕೆ ಎಂಟ್ರಿ.
    5. ಥರ್ಮಲ್ ಸ್ಕ್ರೀನಿಂಗ್‍ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ನೋ ಎಂಟ್ರಿ.
    6. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ.
    7. ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.
    8. ದೇವಸ್ಥಾನದ ಶೌಚಾಲಯ ಆಗಾಗ ಸ್ವಚ್ಛಗೊಳಿಸಿ, ಅಗತ್ಯ ಡಿಸ್ ಇನ್ಫೆಂಕಟರ್ ಸಿಂಪಡಿಸಬೇಕು.

  • ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮೂರು ಕಡೆ ಆನ್‍ಲೈನ್ ಪೂಜೆಗೆ ಅವಕಾಶ ನೀಡಲಾಗಿದೆ. ಕೊಲ್ಲೂರಿನಲ್ಲಿ ಈಗಾಗಲೇ ಭಕ್ತರಿಗೆ ಅವಕಾಶವಿದ್ದು, ಕೋಟ ಅಮೃತೇಶ್ವರಿ ಮತ್ತು ಮಂದಾರ್ತಿ ಕ್ಷೇತ್ರ ಹೊಸ ಸೇರ್ಪಡೆಯಾಗಿದೆ.

    ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯೊಳಗೆ ಮೂರು ದೇವಸ್ಥಾನಗಳಿಗೆ ಅವಕಾಶವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಬುಕ್ ಮಾಡಿ ಪೂಜೆ ಮಾಡಿಸಿ, ಪೋಸ್ಟ್ ಮೂಲಕ ಪ್ರಸಾದ ಪಡೆಯುವ ಅವಕಾಶ ಇತ್ತು. ಇದೀಗ ಕೋಟ ಅಮೃತೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಬರಲು ಸಾಧ್ಯವಾಗದವರು ಈ ಅವಕಾಶ ಪಡೆಯಬಹುದು.

    ಜೂನ್ 1 ರಿಂದ ನಮ್ಮಲ್ಲಿ ಆನ್‍ಲೈನ್ ಪೂಜೆ ಆರಂಭವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ಮಾಹಿತಿ ನೀಡಿದೆ. ಕೋಟ ಅಮೃತೇಶ್ವರಿ ದೇವರಿಗೆ ವಿಶೇಷ ಅಭಿಷೇಕ ಬೆಳಗ್ಗೆ ಸಂಪನ್ನವಾಗುತ್ತದೆ. ಅಲಂಕಾರ ಪೂಜೆ, ಮಂಗಳಾರತಿ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚುತ್ತಿದ್ದರು, ಜೂನ್ 1 ರಿಂದ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದರ್ಶನ ಅವಕಾಶ ಸಿಗಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಆರಂಭವಾಗಿದೆ. ಭಕ್ತರು ಆನ್‍ಲೈನ್ ಮೂಲಕ ಪೂಜೆ ಬುಕ್ ಮಾಡಬಹುದು. ಸರ್ಕಾರದ ನಿಯಮದಂತೆ ಪೂಜೆ ನಡೆಸುತ್ತೇವೆ. ಜೂನ್ 1ರಿಂದ ಭಕ್ತರಿಗೆ ನೇರ ದರ್ಶನ ಅವಕಾಶವಿದೆ. ಸರ್ಕಾರದ ಸುತ್ತೋಲೆ ಈವರೆಗೆ ನಮ್ಮ ಕೈ ಸೇರಿಲ್ಲ. ದೇಗುಲ ತೆರವಿಗೆ ಎಲ್ಲಾ ಸ್ವಚ್ಛತೆ, ಸಿದ್ಧತೆ ಮಾಡುತ್ತೇವೆ ಎಂದು ಮಂದರ್ತಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ ಮಾಹಿತಿ ನೀಡಿದ್ದಾರೆ.

  • ಮಲೆ ಮಾದಪ್ಪನ ದೇವಾಲಯ ತೆರೆಯಲು ಶಾಸಕರ ವಿರೋಧ

    ಮಲೆ ಮಾದಪ್ಪನ ದೇವಾಲಯ ತೆರೆಯಲು ಶಾಸಕರ ವಿರೋಧ

    ಚಾಮರಾಜನಗರ: ಮುಜರಾಯಿ ಸಚಿವರು ಜೂನ್ 1ರಿಂದ ದೇವಾಲಯ ಆರಂಭಿಸಲು ಸೂಚನೆ ನೀಡಿದ್ದಾರೆ. ಆದರೆ ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಾದಪ್ಪನ ದೇವಾಲಯ ದರ್ಶನಕ್ಕೆ ಶಾಸಕ ನರೇಂದ್ರ ಮಲೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹದೇಶ್ವರ ದೇವಾಲಯ ತೆರೆದರೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರಲಿದೆ. ಭಕ್ತಾಧಿಗಳನ್ನು ಆಡಳಿತ ಮಂಡಳಿ ಹೇಗೆ ನಿಯಂತ್ರಿಸಲು ಸಾಧ್ಯವಾಗುತ್ತೆ? ಅಲ್ಲದೆ ದರ್ಶನಕ್ಕೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲೂ ಸಾಧ್ಯವಾಗುವುದಿಲ್ಲ. ದಾಸೋಹ ವ್ಯವಸ್ಥೆ ಮಾಡದಿದ್ದರೆ ಕಾಲದಿಂದಲೂ ನಡೆದು ಬಂದಿರುವ ಪರಂಪರೆ ವ್ಯವಸ್ಥೆಗೆ ಧಕ್ಕೆಯಾಗುತ್ತೆ ಎಂದರು.

    ಒಂದು ವೇಳೆ ದರ್ಶನ, ದಾಸೋಹ ಎರಡಕ್ಕೂ ಅವಕಾಶ ನೀಡಿದರೆ ಕೊರೊನಾ ವೈರಸ್ ಹರಡುವ ಭೀತಿ ಇದೆ. ದೇವಾಲಯದ ಬಾಗಿಲು ತೆರೆದು, ಮಸೀದಿ, ಚರ್ಚ್‍ಗೆ ಅವಕಾಶ ಕೊಡದಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ, ಎಲ್ಲರಿಗೂ ಅವಕಾಶ ಮಾಡಿಕೊಡಿ. ಇನ್ನೊಂದಿಷ್ಟು ದಿನ ದೇವಾಲಯಗಳ ಬಾಗಿಲು ತೆರೆಯದಿದ್ದರೆ, ಇನ್ನೂ ಒಳ್ಳೆಯದು. ಪೂಜೆಗೆ ಆನ್‍ಲೈನ್ ವ್ಯವಸ್ಥೆ ಮುಂದುವರಿಸಿ ಎಂದು ಶಾಸಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  • 100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    – ಸಾಮಾನ್ಯ ಉಡುಪಿನಲ್ಲೇ ಮದುವೆ

    ಲಕ್ನೋ: ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಅನೇಕರು ಬೈಕಿನಲ್ಲಿ ವಧುವಿನ ಮನೆಗೆ ತೆರಳಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಸೈಕಲ್ ಮೇಲೆ ಸವಾರಿ ಮಾಡಿಕೊಂಡು ಹೋಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹಮೀರ್ ಪುರ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ (23) ಸೈಕಲ್ ಮೂಲಕ ವಧು ರಿಂಕಿ ಮನೆಗೆ ಹೋಗಿ ಮದುವೆಯಾಗಿದ್ದಾನೆ. ವರ ತಾನು ಮದುವೆಯಾಗುವ ವಧುವಿನ ಮನೆಗೆ ತಲುಪಲು ಸುಮಾರು 100 ಕಿ.ಮೀ ದೂರದವರೆಗೂ ಸೈಕಲ್ ತುಳಿದಿದ್ದಾನೆ. ತಮ್ಮ ಮದುವೆಯ ದಿನಾಂಕವನ್ನು ಮುಂದೂಡಲಾಗದೆ ಒಂಟಿಯಾಗಿ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಇದನ್ನೂ ಓದಿ: ದಿನಸಿ ತರಲು ಕಳುಹಿಸಿದ್ರೆ ಪತ್ನಿ ಜೊತೆ ಬಂದ ಮಗ – ತಾಯಿ ಶಾಕ್

    ಕಲ್ಕು ಪ್ರಜಾಪತಿ ಏಪ್ರಿಲ್ 25 ರಂದು ತಮ್ಮ ಮದುವೆಗೆ ಜಿಲ್ಲಾಡಳಿತದ ಅನುಮತಿಗಾಗಿ ಕಾಯುತ್ತಿದ್ದನು. ಆದರೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೊನೆಗೆ ಲಕ್ನೋದಿಂದ 100 ಕಿ.ಮೀ ದೂರದಲ್ಲಿರುವ ಮಹೋಬಾ ಜಿಲ್ಲೆಯ ಪುನಿಯಾ ಗ್ರಾಮದಲ್ಲಿರುವ ವಧು ರಿಂಕಿಯ ಮನೆಗೆ ತನ್ನ ಬೈಸಿಕಲ್‍ನಲ್ಲಿ ಏಕಾಂಗಿಯಾಗಿ ಹೋಗಲು ನಿರ್ಧರಿಸಿದ್ದನು. ಅದರಂತೆಯೇ ಸೈಕಲ್ ಮೂಲಕ ಹೋಗಿ ಹಳ್ಳಿಯ ದೇವಸ್ಥಾನವೊಂದರಲ್ಲಿ ಪ್ರಜಾಪತಿ ಮತ್ತು ರಿಂಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವಧು-ವರ ಇಬ್ಬರು ಮದುವೆ ಉಡುಪನ್ನು ಧರಿಸಿದೆ ಸಾಮಾನ್ಯ ಉಡುಪಿನಲ್ಲಿ ಮದುವೆಯಾಗಿದ್ದಾರೆ. ನಮ್ಮ ಮದುವೆಗೆ ಸ್ಥಳೀಯ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ನಾನು ಸೈಕಲ್ ಮೂಲಕ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ನನ್ನ ಬಳಿ ಬೈಕ್ ಇದೆ. ಆದರೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊನೆಗೆ ಸೈಕಲ್ ಮೂಲಕ ಹೋದೆ. ಆದರೆ ಸೋಂಕಿನಿಂದ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಬಾಯಿಗೆ ಕರವಸ್ತ್ರ ಕಟ್ಟಿಕೊಂಡಿದ್ದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿಕೊಂಡು ಹೋಗಿದ್ದೆ ಎಂದು ರೈತ ಪ್ರಜಾಪತಿ ಹೇಳಿದರು.

    ಮದುವೆಗೆ ನಾವು ಕಾರ್ಡ್ ಕೂಡ ರೆಡಿ ಮಾಡಿಸಿದ್ದು, ಸಂಬಂಧಿಕರಿಗೆ ನೀಡಿದ್ದೆವು. ಆದರೆ ಲಾಕ್‍ಡೌನ್‍ನಿಂದ ಅದ್ಧೂರಿ ಮದುವೆಯಾಗಲು ಸಾಧ್ಯವಾಗಿಲ್ಲ. ಆದರೆ ವಾಪಸ್ ಬರುವಾಗ ಪತ್ನಿಯ ಜೊತೆ ಬಂದಿದ್ದೇನೆ. ಎರಡೂ ಕುಟುಂಬದವರು ನಮ್ಮ ಮದುವೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಹೀಗಾಗಿ ಅಡುಗೆ ಮಾಡಲು ಯಾರೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಮದುವೆಯಾಗಬೇಕಿತ್ತು. ಇದಲ್ಲದೆ ಲಾಕ್‍ಡೌನ್ ಮುಗಿಯಲು ಎಷ್ಟು ದಿನವಾಗುತ್ತದೋ ಗೊತ್ತಿಲ್ಲ. ಹೀಗಾಗಿ ಏಕಾಂಕಿಯಾಗಿ ಸೈಕಲ್ ನಲ್ಲಿ ಹೋಗಿ ವಿವಾಹವಾದೆ ಎಂದು ವರ ಹೇಳಿದನು.

  • 10 ಮಂದಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

    10 ಮಂದಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

    ಚಿಕ್ಕಮಗಳೂರು: ಕೊರೊನಾ ಆತಂಕ ಹಾಗೂ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕೇವಲ 10 ಮಂದಿಯ ಸಮ್ಮುಖದಲ್ಲಿ ಸರಳವಾದ ಮದುವೆಯೊಂದು ನಡೆದಿದೆ.

    ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ರಂಜಿತ್ ಹಾಗೂ ಮೇಘ ಮದುವೆ ಇಂದು ಮೂಡಿಗೆರೆ ನಗರದ ರೈತ ಭವನದಲ್ಲಿ ನಿಶ್ಚಯವಾಗಿತ್ತು. ಆದರೆ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಅಲ್ಲದೇ ಮದುವೆ, ಸಭೆ, ಸಮಾರಂಭಗಳಿಗೆ ಸರ್ಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ಜೋಡಿ ಬೈದುವಳ್ಳಿ ಗ್ರಾಮದಲ್ಲಿನ ಈಶ್ವರ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸರಳ ಮದುವೆಯಲ್ಲಿ ವಧು-ವರರ ಪೋಷಕರು, ಅರ್ಚಕರು ಹಾಗೂ ಆಪ್ತ ಸಂಬಂಧಿಗಳಷ್ಟೆ ಭಾಗವಹಿಸಿದ್ದರು. ಹತ್ತು ಮಂದಿಗಿಂತ ಹೆಚ್ಚಿನ ಜನ ಮದುವೆಯಲ್ಲಿ ಇರಲಿಲ್ಲ. ಮದುವೆಯಲ್ಲಿ ಭಾಗಿಯಾದ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

    ವಧು-ವರರೂ ಕೂಡ ಮಾಸ್ಕ್ ಹಾಕಿಕೊಂಡೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಮಾಡಿಸಿದ ಪುರೋಹಿತರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಂಪ್ರದಾಯಿಕವಾಗಿ ಮದುವೆ ಮಾಡಿಸಿದ್ದಾರೆ. ಕೊರೊನಾ ಭಯದಲ್ಲಿ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ಮಲೆನಾಡು ಸೇರಿದಂತೆ ಅನೇಕ ಕಡೆ ಇದೇ ರೀತಿಯ ಸರಳ ವಿವಾಹಗಳು ನಡೆಯುತ್ತಿವೆ.