ಹೈದರಾಬಾದ್: ಮದುವೆಯಾದ ಐದು ದಿನದಲ್ಲೇ ಅಪಘಾತದಲ್ಲಿ ವರ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಹೊಲಗುಂಡ ಮಂಡಲದ ಸಮ್ಮತಗೇರಿ ಗ್ರಾಮದ ಮರೇಶ್ (23) ಮೃತ ನವವಿವಾಹಿತ. ಮೃತ ಮರೇಶ್ ಜೂನ್ 17 ರಂದು ಹೊಲಗುಂಡದ ವಧು ರೇಣುಕಾ ಜೊತೆ ಸರಳವಾಗಿ ವಿವಾಹವಾಗಿದ್ದನು.
ಭಾನುವಾರ ಅಮಾವಾಸ್ಯೆಯ ನಂತರ ಅಂದರೆ ಸೋಮವಾರ ನೂತನ ದಂಪತಿ ಅಮೃತಪುರಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದರೆ ಈ ವೇಳೆ ವೇಗವಾಗಿ ಬಂದ ಬೈಕ್ ನವಜೋಡಿ ಇದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರೇಶ್ ಮತ್ತು ರೇಣುಕಾ ಇಬ್ಬರಿಗೂ ಗಂಂಭೀರವಾಗಿ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳದಲ್ಲಿದ್ದವರು ಕರ್ನೂಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮರೇಶ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರೇಣುಕಾ ಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮದುವೆಯಾದ ಐದು ದಿನಕ್ಕೆ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಇಂದು ಚೂಡಾಮಣಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿನ ಬಹುತೇಕ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮವನ್ನು ಮಾಡಿ ಬಾಗಿಲನ್ನು ಮುಚ್ಚಲಾಗಿದೆ.
ಬೆಂಗಳೂರಿನ ಪುರಾತನ ಐತಿಹಾಸಿಕ ದೇವಾಲಯವಾಗಿರೋ ಕಾಡುಮಲ್ಲೇಶ್ವರ ದೇವಾಲಯವನ್ನ ಈಗಾಗಲೇ ದರ್ಬೆಯಿಂದ ಬಂಧನ ಮಾಡಲಾಗಿದೆ. ಅರ್ಚಕರು ಶಿವನಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಮಾಡಿ, ರುದ್ರಪಠಣದ ಮೂಲಕ ದೇವರ ಪ್ರಾರ್ಥನೆ ಮಾಡಿದ್ದಾರೆ. ನಂತರ ಅರ್ಚಕರು ಮಹಾಮಂಗಳಾರತಿ ಮಾಡಿ ದರ್ಬೆಯಿಂದ ಬಂಧನ ಮಾಡಿದ್ದು, ದೇವಾಲಯದ ಬಾಗಿಲನ್ನ ಮುಚ್ಚಿದ್ದಾರೆ.
ಗ್ರಹಣ ಮೋಕ್ಷವಾದ ಬಳಿಕ ಮಧ್ಯಾಹ್ನ 1:35ರ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯ ಮಾಡಲಾಗುತ್ತೆ. ಶಿವ ಅಭಿಷೇಕ ಪ್ರಿಯನಾಗಿರೋದ್ರಿಂದ ಮತ್ತೆ ರುದ್ರಾಭಿಕೇಷ ಮತ್ತು ಪಂಚಾಮೃತ ಅಭಿಷೇಕ ಮಾಡಲಾಗುತ್ತಿದೆ. ಸಂಜೆ 4 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಾಲಯಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಮತ್ತು ಸೈನಿಟೈಸರ್ ಬಳಕೆ ಕಡ್ಡಾಯವಾಗಿದೆ. ದೇವರ ದರ್ಶನಕ್ಕೆ ಮಾತ್ರ ಇರುತ್ತೆ, ಯಾವುದೇ ಹೋಮ ಹವನ ಮಾಡುವಂತಿಲ್ಲ. ಅಲ್ಲದೇ ಭಕ್ತರಿಗೆ ತೀರ್ಥ ಪ್ರಸಾದವೂ ಸಹ ಇರುವುದಿಲ್ಲ.
ನಗರದ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಮಾಡಿ ದರ್ಬೆ ಅರ್ಪಣೆ ಮಾಡಿದ್ದಾರೆ. ದರ್ಪಣೆ ಮಾಡಿದ ಬಳಿಕ ದೇವಸ್ಥಾನದ ಮುಖ್ಯ ದ್ವಾರಕ್ಕೆ ದೊಡ್ಡ ಕಬ್ಬಿಣದ ಗೇಟ್‍ಗಳನ್ನು ಕಟ್ಟಿ ಕ್ಲೋಸ್ ಮಾಡಿದ್ದಾರೆ. ಗ್ರಹಣ ಮುಗಿಯುವವರೆಗೂ ಓಪನ್ ಆಗಲ್ಲ. ಮತ್ತೆ ಸಂಜೆ 4 ಗಂಟೆಗೆ ದೇವಸ್ಥಾನ ಓಪನ್ ಮಾಡಿ ಪೂಜೆ ಪುರಸ್ಕಾರ ಮಾಡಲಾಗುತ್ತದೆ.
ಇನ್ನೂ ದೊಡ್ಡ ಗಣಪತಿ ದೇವಾಲಯದಲ್ಲಿ ದರ್ಬೆ ಹಾಕಿ, ಅಭಿಷೇಕ, ಮಹಾಮಂಗಳಾರತಿ ಮಾಡಿ ಬಾಗಿಲು ಬಂದ್ ಮಾಡಲಾಗುತ್ತಿದೆ. ಭಕ್ತಾಧಿಗಳಿಗೆ ಮಾತ್ರ ಪ್ರವೇಶವಿಲ್ಲ. ಹೀಗಾಗಿ ಹೊರಗಡೆಯಿಂದಲೇ ಭಕ್ತರು ನಮಸ್ಕರಿಸುತ್ತಿದ್ದಾರೆ. ಅಭಿಷೇಕದ ನಂತರ ದೇವಾಲಯ ಬಂದ್ ಮಾಡಲಾಗುತ್ತದೆ. ಗ್ರಹಣ ಮುಗಿದ ನಂತರ ಸಂಜೆ 4.30ಕ್ಕೆ ದೊಡ್ಡ ಗಣಪತಿ ದೇವಸ್ಥಾನ ಓಪನ್ ಆಗುತ್ತೆ. ಬಳಿಕ 5.30ಕ್ಕೆ ಗ್ರಹಣ ಶಾಂತಿ ಅಭಿಷೇಕ ನಡೆಯುತ್ತೆ. ಮತ್ತೆ ಸಂಜೆ 7.30ಕ್ಕೆ ಮತ್ತೆ ದೇವಸ್ಥಾನ ಮುಚ್ಚಲಾಗುತ್ತದೆ.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಹೋಮ, ಆದಿತ್ಯಾಧಿ ನವಗ್ರಹ ಹೋಮ ಪೂಜೆ ಮಾಡಲಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೂ ಹೋಮ ಮಾಡಲಾಗುತ್ತಿದ್ದು, ಹೋಮ ಮುಗಿದ ಮೇಲೆ ದರ್ಬೆ ಹಾಕಿ ದೇವಾಲಯ ಬಂದ್ ಮಾಡಲಾಗುತ್ತದೆ. ಮದ್ಯಾಹ್ನ 1:40ಕ್ಕೆ ಗ್ರಹಣ ಸಮಾಪ್ತಿ ನಂತರ ದೇವಾಲಯ ಮತ್ತೆ ಓಪನ್ ಆಗುತ್ತದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೂ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಮಾಡುವುದು ಕಡ್ಡಾಯವಾಗಿದೆ.
ಮಂಗಳೂರು: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಪೂಜೆ ಹಾಗೂ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.40 ರಷ್ಟು ಸೂರ್ಯ ಗ್ರಹಣ ಗೋಚರವಾಗಲಿದೆ. ಬೆಳಗ್ಗೆ 10:05ಕ್ಕೆ ಗ್ರಹಣ ಸ್ಮರ್ಶ ಹಾಗೂ 1:22ಕ್ಕೆ ಖಂಡಗ್ರಾಸ ಸೂರ್ಯಗ್ರಹಣ ಮೋಕ್ಷವಾಗಲಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾತ್ರ ಇದ್ದು, ಸಮಯ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 6.30 ರಿಂದ 10 ಗಂಟೆಯ ರವರೆಗೆ ಹಾಗೂ ಮಧ್ಯಾಹ್ನ 3.30 ರಿಂದ 5.30 ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಕ್ಷೇತ್ರದಲ್ಲಿ ಯಾವುದೇ ವಿಶೇಷ ಪೂಜೆ, ಹೋಮ ಇರುವುದಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳ
ಧರ್ಮಸ್ಥಳದಲ್ಲಿ ದರ್ಶನ ಸಮಯ ಬದಲು ಮಾಡಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಂಜುನಾಥ ಸ್ವಾಮಿ ದರ್ಶನ ಇರುವುದಿಲ್ಲ. ಬೆಳಗ್ಗೆ 5.30ರಿಂದ ಬೆಳಗ್ಗೆ 9 ಗಂಟೆಯವರಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮತ್ತೆ ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ವಿಶೇಷ ಪೂಜೆ, ಹೋಮಗಳು ಇರುವುದಿಲ್ಲ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಾಳೆ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 9 ಗಂಟೆಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಗ್ರಹಣ ಸ್ಪರ್ಶದಿಂದ ಗ್ರಹಣ ಮೋಕ್ಷದವರೆಗೆ ಲೋಕ ಕಲ್ಯಾಣಾರ್ಥವಾಗಿ ಶಿವನಿಗೆ ಧಾರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಗ್ರಹಣ ಕಾಲದಲ್ಲಿ ಮಾಡಲಾಗುವುದು. ನಂತರ ಗ್ರಹಣ ಮುಕ್ತಿಯ ಬಳಿಕ ಗ್ರಹಣ ಶಾಂತಿ ಹೋಮ, ಮಹಾಪೂಜೆ ಈ ಕ್ಷೇತ್ರದಲ್ಲಿ ನಡೆಯಲಿದೆ.
ಕಟೀಲು, ಪೊಳಲಿ ಕ್ಷೇತ್ರ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೇ ವಿಶೇಷ ಪೂಜೆ, ಹೋಮಗಳು ಇರುವುದಿಲ್ಲ.
ಬೆಂಗಳೂರು: ಕೊಳದಲ್ಲಿ ಈಜಲು ಹೋಗಿದ್ದ ಬೆಂಗಳೂರು ಮೂಲದ ಯುವತಿ ಹಾಗೂ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ.
ಡ್ಯಾನಿಶ್ (23), ಮೋಸಿಸ್ (28) ಮತ್ತು ಜಸಿಕಾ ಮೃತ ಸ್ನೇಹಿತರು. ಜಾನ್ ಮತ್ತು ದಿವ್ಯ ಎಂಬವವರ ಜೊತೆಗೆ ಈ ಮೂವರು ಸ್ನೇಹಿತರು ಬಂದಿದ್ದರು. ಜಸಿಕಾ ಮತ್ತು ಮೋಸಿಸ್ ವಿಲ್ಸನ್ ಗಾರ್ಡನ್ ಮೂಲದವರಾಗಿದ್ದು, ಡ್ಯಾನಿಶ್ ಗರುಡ ಮಹಲ್ ನಿವಾಸಿ ಎಂದು ತಿಳಿದು ಬಂದಿದೆ.
ಮೂವರು ಸ್ನೇಹಿತರು ಬನ್ನೇರುಘಟ್ಟ ಬಳಿಯ ಸುವರ್ಣಮುಖಿ ಎಂಬ ಕೊಳಕ್ಕೆ ಶುಕ್ರವಾರ ಸಂಜೆ ಹೋಗಿದ್ದರು. ಚಂಪಕದಾಮ ದೇವಸ್ಥಾನ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಸ್ನೇಹಿತರು ತೆರಳಿದ್ದರು. ನಂತರ ಕೊಳದಲ್ಲಿ ಈಜಲು ತೆರಳಿದಾಗ ಈ ಘಟನೆ ಸಂಭವಿಸಿದೆ.
ಮಾಹಿತಿ ತಿಳಿದ ಬನ್ನೇರುಘಟ್ಟ ಪೊಲೀಸರು ಮತ್ತು ಅಗ್ನಿಶಾಮಕ ದಳ ಮೃತ ಮೃತದೇಹಕ್ಕಾಗಿ ಹುಡುಕಾಟ ಮಾಡಿದ್ದಾರೆ. ಸತತ ಕಾರ್ಯಾಚರಣೆಯ ನಂತರ ಮೂವರು ಮೃತದೇಹಗಳು ಪತ್ತೆಯಾಗಿವೆ.
ಬನ್ನೇರುಘಟ್ಟ ಕಾಡಿನಲ್ಲಿರುವ ಶಿವ ಮತ್ತು ಆಂಜನೇಯ ದೇವಸ್ಥಾನ ಬಳಿ ಸುವರ್ಣ ಮುಖಿ ಕೊಳ ಇದೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಸೌರಮಂಡಲದಲ್ಲಿ ಇದೇ ಭಾನುವಾರ ಆಗಸದಲ್ಲಿ ಮತ್ತೊಂದು ಗ್ರಹಣ ನಡೆಯಲಿದೆ. ಕೊರೊನಾ ಸಮಯದಲ್ಲಿ ನಡೆಯುತ್ತಿರುವ ಗ್ರಹಣದಿಂದಾಗಿ ಸಾಕಷ್ಟು ರಾಶಿಗಳ ಮೇಲೆ ಕೆಟ್ಟ ಫಲಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಮುಂದಿನ ಭಾನುವಾರ ಅಂದರೆ ಜೂನ್ 21ರಂದು ಸೂರ್ಯಗ್ರಹಣ ನಡೆಯಲಿದೆ. ಬೆಳಗ್ಗೆ 10.13ರಿಂದ ಮಧ್ಯಾಹ್ನ 1.32ರವರೆಗೆ ಸೂರ್ಯಗ್ರಹಣ ಸಂಭವಿಸಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಚೂಡಾಮಣಿ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಈ ಚೂಡಾಮಣಿ ಸೂರ್ಯಗ್ರಹಣದ ವೇಳೆ ಮನೆಯಿಂದ ಹೊರಬರಬಾರದು. ಮನೆಯಲ್ಲೇ ಇದ್ದು, ದೇವರ ಜಪ-ತಪ ಮಾಡಿ ಗ್ರಹಣ ಮೋಕ್ಷಕಾಲದ ಬಳಿಕ ಶುಚಿರ್ಭೂತರಾಗಿ ದೇವಾಲಯದಲ್ಲಿ ದೇವರ ದರ್ಶನ ಮಾಡೋದು ಪದ್ಧತಿ ಆಗಿದೆ.
ಕೊರೊನಾ ವೈರಸ್ ಸಂದರ್ಭದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಜನದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲೂ ಗ್ರಹಣದ ಸಮಯ ಮುಗಿದ ಮೇಲೆ ದೇವಾಲಯಕ್ಕೆ ಬರುವ ಭಕ್ತರು ಹಚ್ಚಾಗುವ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೇವಾಲಯದಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಲು ಮುಂದಾಗಿರುವ ದೇವಾಲಯದ ಆಡಳಿತ ಮಂಡಳಿಗಳು ಅಭಿಷೇಕಕ್ಕೆ ಅವಕಾಶ ನೀಡಿಲ್ಲ. ಆದರೆ ಗ್ರಹಣದ ದಿನ ನವಗ್ರಹ ಪ್ರದಕ್ಷಿಣೆಗೆ ಅವಕಾಶವಿದ್ದು, 1 ಬಾರಿಗೆ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕಾಡುಮಲ್ಲೇಶ್ವರ ದೇವಾಲಯದ ಅರ್ಚಕರಾದ ಗಂಗಾಧರ್ ದೀಕ್ಷಿತ್ ಹೇಳಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣ ಮಿಥುನ, ಸಿಂಹ ರಾಶಿ ಹಾಗೂ ಮೃಗಶಿರ ನಕ್ಷತ್ರದವರ ಮೇಲೆ ಕೆಟ್ಟ ಪರಿಣಾಮ ಆಗಲಿದೆ. ದೇವಸ್ಥಾನಗಳಿಗೆ ಬರುವ ಭಕ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಬಾರದು. ಹಿರಿಯರು, ಮಕ್ಕಳು ದೇವಾಲಯಕ್ಕೆ ಬರುವ ಬದಲು ಮನೆಯಲ್ಲೇ ದೇವರ ಪೂಜೆ ಮಾಡಿದರೆ ಉತ್ತಮ ಎಂದು ಗಾಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಡಾ.ಶ್ರೀನಿವಾಸ್ ಭಟ್ಟಾಚಾರ್ಯ ತಿಳಿಸಿದರು.
ಮಂಗಳೂರು: ಲಾಕ್‍ಡೌನ್ ನಂತರ ಈಗಾಗಲೇ ಹಲವು ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲೂ ಜೂನ್ 14ರ ಭಾನುವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಆದರೆ ಭಕ್ತರು ದೇವಸ್ಥಾನದ ವೆಬ್‍ಸೈಟ್‍ನಿಂದ ಉಚಿತವಾಗಿ ಇ-ಟಿಕೆಟ್ ಮೂಲಕ ತಮ್ಮ ದರ್ಶನದ ಅವಕಾಶವನ್ನು ಕಾದಿರಿಸಬೇಕಾಗುತ್ತದೆ. ದೇವಸ್ಥಾನವೊಂದು ದೇವರ ದರ್ಶನಕ್ಕೆ ಇ-ಟಿಕೆಟ್ ಮೂಲಕ ಕಾದಿರಿಸುವ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದೆ. ದೇವರ ದರ್ಶನಕ್ಕೆ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿರುವುದರಿಂದ ಇದನ್ನು ಪಾಲಿಸಲು ಕಟೀಲು ದೇವಸ್ಥಾನದಲ್ಲಿ ಕೊಂಚ ಕಷ್ಟವಾಗಿತ್ತು.
ಭಕ್ತರ ಭೇಟಿಯ ಸಂದರ್ಭ ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಬೇಕಾಗಿರುವುದರಿಂದ ಭಕ್ತರ ಸರತಿ ಸಾಲಿನ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಸಿದ್ಧತೆಯ ಅಗತ್ಯ ಇತ್ತು. ಹಾಗಾಗಿ ಕಳೆದ ಜೂನ್ 8ರಂದು ಕಟೀಲು ದೇಗುಲ ಭಕ್ತರ ದರ್ಶನಕ್ಕೆ ತೆರೆದಿರಲಿಲ್ಲ. ಇದೀಗ ಜೂನ್ 14ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಬಾಕ್ಸ್ ಹಾಕಲಾಗಿದೆ. ಇ-ಪಾಸ್ ವ್ಯವಸ್ಥೆಗೂ ಸಿದ್ಧತೆ ಮಾಡಲಾಗಿದ್ದು, ಪ್ರಾಯೋಗಿಕವಾಗಿಯೂ ನೋಡಲಾಗಿದೆ ಎಂದು ದೇವಸ್ಥಾನದ ಅಡಳಿತ ಮಂಡಳಿ ತಿಳಿಸಿದೆ.
ಭಕ್ತರು ವೆಬ್‍ಸೈಟ್ ಮೂಲಕ ನೋಂದಾಯಿಸಿ ದೇಗುಲಕ್ಕೆ ಬರಬಹುದಾಗಿದೆ. ಪ್ರತಿ ಹದಿನೈದು ನಿಮಿಷಕ್ಕೆ ಅರವತ್ತು ಮಂದಿಯಷ್ಟು ದೇವಾಲಯಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 7.30ರಿಂದ ಸಂಜೆ 7.30ರತನಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯ ಭಕ್ತರಿಗೆ ಇ-ಪಾಸ್ ಇಲ್ಲದೆ ದೇಗುಲಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ ಗಂಟೆ 6ರಿಂದ 7.30ರವರೆಗಿನ ಒಂದೂವರೆ ಗಂಟೆ ಸಮಯ ನಿಗದಿಪಡಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳ ಬಿಡಲಾಗುತ್ತದೆ. ಆದರೆ ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ.
ಬೆಂಗಳೂರು: ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಯವರು ಇಂದು ತನ್ನ ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತನ್ನ ಬಹುಕಾಲದ ಗೆಳೆಯ ಅರುಣ್ ಜೊತೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶುಭಲಗ್ನದಲ್ಲಿ ಮದುವೆಯಾಗಿದ್ದಾರೆ. ಅರುಣ್ ಮತ್ತು ಮಯೂgರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಇಂದು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.
https://www.instagram.com/p/CBUazPjAbao/
ತನ್ನ ಮದುವೆ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಮಯೂರಿ ಅವರು, ಹೌದು ನಾನು ಮದುವೆಯಾದೆ ಎಂದು ಬರೆದು ಅವರ ಮದುವೆ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಮೊದಲು ಕಿರುತೆರೆಯ ಮೂಲಕ ನಟನೆಗೆ ಎಂಟ್ರಿಕೊಟ್ಟಿದ್ದ ಮಯೂರಿ ನಂತರ ಸಿನಿಮಾಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ನಟ ಅಜಯ್ ರಾವ್ ಅವರ ಜೊತೆ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು.
ಮಯೂರಿ ಅವರು ಮದುವೆಯಾಗಿರುವ ಅರುಣ್ ಅವರು ಐಟಿ ಉದ್ಯೋಗಿ ಆಗಿದ್ದು, ಅಮೆರಿಕದಲ್ಲಿ ಸೆಟಲ್ ಆಗಿದ್ದರು. ಈಗ ಸದ್ಯ ಅವರು ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಗೆಳೆಯರಾಗಿದ್ದ ಅರುಣ್ ಹಾಗೂ ಮಯೂರಿ 10 ವರ್ಷದಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಈಗ ತಮ್ಮ ಮನೆಯವರ ಮುಂದೆ ತಮ್ಮ ಪ್ರೀತಿಯ ಬಗ್ಗೆ ಹೇಳಿ ಅವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.
ಮಯೂರಿ ಅವರು `ಅಶ್ವಿನಿ ನಕ್ಷತ್ರ’ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ, ಬಳಿಕ `ಕೃಷ್ಣ ಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟರು. `ಇಷ್ಟಕಾಮ್ಯ’, `ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ `ಆಟಕ್ಕುಂಟು ಲೆಕ್ಕಕ್ಕಿಲ್ಲ’, `ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಸಂಪೂರ್ಣ ಹೊಸಬರೇ ಇರುವ `ಮೌನಂ’ ಸಿನಿಮಾದಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದರು. ರಾಜ್ ಪಂಡಿತ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.
ಚಿಕ್ಕಮಗಳೂರು: ದೇವಾಲಯದ ಹುಂಡಿ ಒಡೆಯಲು ಬಂದ ಕಳ್ಳನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕಲ್ಲುಹೊಳೆ ಗ್ರಾಮದಲ್ಲಿ ನಡೆದಿದೆ.
ಕಲ್ಲುಹೊಳೆ ಗ್ರಾಮದ ಹುಲ್ಲೇ ಕಲ್ಲೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಒಡೆಯಲು ಕಳ್ಳ ಕಳೆದ ರಾತ್ರಿ ಬಂದಿದ್ದ. ಮಚ್ಚು ಹಾಗೂ ಸುತ್ತಿಗೆಯಲ್ಲಿ ಹುಡಿಯನ್ನ ಒಡೆಯುವ ವೇಳೆ ಶಬ್ಧ ಕೇಳಿ ಗ್ರಾಮಸ್ಥರು ಇಡೀ ದೇವಾಲಯವನ್ನ ಸುತ್ತುವರಿದಿದ್ದರು. ಯಾಕಂದರೆ ದೇವಾಲಯದಲ್ಲಿ ಹಿಂದೊಮ್ಮೆಯೂ ಕಳ್ಳತನವಾಗಿತ್ತು. ಹಾಗಾಗಿ ಊರಿನ ಜನ ಕೂಡ ಅಲರ್ಟ್ ಆಗಿದ್ದರು.
ದೇವಾಲಯದಲ್ಲಿ ಹುಂಡಿ ಒಡೆಯುವ ಶಬ್ಧ ಕೇಳಿದ ಕೂಡಲೇ ಗ್ರಾಮಸ್ಥರು ದೇವಾಲಯವನ್ನ ಸುತ್ತುವರಿದು ಕಳ್ಳನನ್ನ ಹಿಡಿದಿದ್ದಾರೆ. ಎರಡನೇ ಬಾರಿ ದೇವಾಲಯದ ಹುಂಡಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳ ಸ್ಥಳೀಯರ ಅತಿಥಿಯಾಗಿ ಗೂಸಾ ತಿಂದಿದ್ದಾನೆ. ಹುಂಡಿ ಕಳ್ಳನನ್ನ ಹಿಡಿದ ಸ್ಥಳೀಯರು ಅವನನ್ನ ಊರಿನ ಹೆಬ್ಬಾಗಿಲ ಕಂಬಕ್ಕೆ ಕಟ್ಟಿ ಥಳಿಸಿ, ಕಡೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವವರೆಗೂ ಸ್ಥಳೀಯರು ಹುಂಡಿ ಕಳ್ಳನಿಗೆ ಭರ್ಜರಿ ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲ್ಲಿನಲ್ಲಿರೋ ದತ್ತಪೀಠದಲ್ಲೂ ಭಕ್ತರಿಗೆ ದತ್ತಾತ್ರೇಯನ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿದೆ.
ಕೊರೊನಾ ಆತಂಕದಿಂದ ಕಳೆದ ಎರಡೂವರೆ ತಿಂಗಳಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹಾಗೂ ದೇಗುಲಗಳಿಗೆ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಅವಕಾಶ ಇರಲಿಲ್ಲ. ಮುಳ್ಳಯ್ಯನಗಿರಿಗೆ ಬರುವ ಎಲ್ಲಾ ಧರ್ಮದ ಪ್ರವಾಸಿಗರು ಕೂಡ ಗುರುದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾಕ್ಕೆ ಭೇಟಿ ನೀಡುತ್ತಿದ್ದರು. ಅಲ್ಲಿ ದತ್ತಪೀಠದ ಸೌಂದರ್ಯದ ಜೊತೆ ದತ್ತಾತ್ರೇಯನ ದರ್ಶನ ಪಡೆಯುತ್ತಿದ್ದರು. ಆದರೆ ಎರಡು ತಿಂಗಳಿಂದ ಪ್ರವಾಸಿಗರಿಗೂ ನಿಷೇಧವಿದ್ದ ಕಾರಣ ದತ್ತಪೀಠಕ್ಕೆ ಪ್ರವಾಸಿಗರು, ಭಕ್ತರು ಹೋಗಿರಲಿಲ್ಲ.
ಈಗ ಸರ್ಕಾರವೇ ದೇವಾಲಯಗಳನ್ನ ಓಪನ್ ಮಾಡಲು ಅವಕಾಶ ನೀಡಿರುವುದರಿಂದ ಜಿಲ್ಲಾಡಳಿತ ಭಕ್ತರಿಗೆ ದತ್ತಾತ್ರೇಯನ ದರ್ಶನಕ್ಕೆ ಅವಕಾಶ ಕಲ್ಪಸಿದೆ. ಆದರೆ ಕೆಲವು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಪ್ರತಿಯೊಬ್ಬರಿಗೂ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಇಲ್ಲದವರಿಗೆ ಪ್ರವೇಶವಿಲ್ಲ. ಗುಹೆಯ ಒಳಗೆ ಪ್ರವೇಶ ಮಾಡಿದಾಗಿನಿಂದ ಹೊರಬರುವವರೆಗೂ ಜಿಲ್ಲಾಡಳಿತ ಮಾರ್ಕ್ ಮಾಡಿದ್ದು, ಪ್ರತಿಯೊಬ್ಬರೂ ಮಾರ್ಕ್ ಒಳಗೆ ಸಂಚರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ.
ಪ್ರತಿಯೊಬ್ಬರಿಗೆ ಗುಹೆಯ ಹೊರಭಾಗ ಹಾಗೂ ಒಳಭಾಗದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ಕೂಡ ಕಡ್ಡಾಯವಾಗಿದೆ. ಪ್ರತಿಯೊಬ್ಬರು ಕೂಡ ಸ್ವಯಂ ಪ್ರೇರಿತವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಕೂಡ ಮಾಡಲಾಗಿದೆ. ಜೊತೆಗೆ ಪೊಲೀಸರು ಹಾಗೂ ಸಿಬ್ಬಂದಿ ಭಕ್ತರಿಗೆ ಸಾಮಾಜಿಕ ಅಂತರದ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.
ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಸಹಜ ಜೀವನಕ್ಕೆ ಅವಕಾಶ ನೀಡುತ್ತಿದ್ದಂತೆ ಕಾಫಿನಾಡಿಗೆ ಬರುತ್ತಿರೋ ಭಕ್ತರು ಹಾಗೂ ಪ್ರವಾಸಿಗರು ಕಾಫಿನಾಡ ಸೌಂದರ್ಯಕ್ಕೆ ಫಿದಾ ಆಗುತ್ತಿದ್ದಾರೆ. ಕಳೆದ ಎರಡ್ಮೂರು ದಶಕಗಳಲ್ಲಿ ಸ್ಥಳೀಯರೇ ಕಾಣದಂತ ಹೊಸ ಕಾಫಿನಾಡು ಉದಯವಾಗಿದೆ. ಜಿಲ್ಲೆಗೆ ಬರುತ್ತಿರುವಂತಹ ಪ್ರವಾಸಿಗರು ಮುಳ್ಳಯ್ಯನಗಿರಿಯ ಮನಮೋಹಕ ಸೊಬಗಿನ ಮಧ್ಯೆ ತಮ್ಮನ್ನ ತಾವೇ ಮರೆಯುತ್ತಾ, ದತ್ತಪೀಠಕ್ಕೆ ಬಂದು ದತ್ತಾತ್ರೇಯ ದರ್ಶನದೊಂದಿಗೆ ಸುತ್ತಮುತ್ತಲಿನ ಮುಗಿಲೆತ್ತರದ ಬೆಟ್ಟಗುಡ್ಡಗಳ ಕಂಡು ಪುಳಕಿತರಾಗುತ್ತಿದ್ದಾರೆ.
ರಾಯಚೂರು: 75 ದಿನಗಳ ಬಳಿಕ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ರಾಯಚೂರಿನಲ್ಲಿ ದೇವಾಲಯಗಳಲ್ಲಿ ಪ್ರವೇಶ ಮುಕ್ತವಾಗಿದ್ದರೂ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿದೆ. ಇತ್ತ ಮಂತ್ರಾಲಯದಲ್ಲಿ ಅಗತ್ಯ ಸಿದ್ಧತೆಯ ಕೊರತೆ ಹಿನ್ನೆಲೆ ಮಠ ಮಹಾದ್ವಾರವನ್ನ ತೆರೆದಿಲ್ಲ.
ಮಂತ್ರಾಲಯ ಮಠದ ಮಹಾದ್ವಾರವನ್ನು ತೆರೆಯದೆ ಇರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಇಂದು ಭಕ್ತರಿಗೆ ಸಿಕ್ಕಿಲ್ಲ. ಕೇಂದ್ರ ಹಾಗೂ ಆಂಧ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದಿನಿಂದ ದರ್ಶನಕ್ಕೆ ಮುಕ್ತವಾಗಬೇಕಿತ್ತು. ಆದರೆ ಬಾಗಿಲು ತೆರೆಯದೆ ಇರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.
ಮಂತ್ರಾಲಯ ಮಠದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಮಾತ್ರ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೊರರಾಜ್ಯ ಹಾಗೂ ಬೇರೆ ಜಿಲ್ಲೆಯ ಭಕ್ತರಿಗೆ ಜೂನ್ 15ರ ನಂತರ ರಾಯರ ದರ್ಶನಕ್ಕೆ ಅವಕಾಶ ಎಂದು ಹೇಳಲಾಗಿತ್ತು. ಆದರೆ ಮಂತ್ರಾಲಯದಲ್ಲಿ ದರ್ಶನಕ್ಕೆ ಪೂರ್ವ ತಯಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ರಾಯರ ಮಠದ ಬಾಗಿಲು ತೆಗೆಯಲಿಲ್ಲ.
ರಾಯರ ವೃಂದಾವನ ದರ್ಶನಕ್ಕೆ ಬಂದವರಿಗೆ ದರ್ಶನ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಭಕ್ತರು ಹೊರಗಡೆಯಿಂದಲೇ ರಾಯರಿಗೆ ನಮಿಸಿ ಮರಳುತ್ತಿದ್ದಾರೆ. ಮಠದ ಆಡಳಿತ ಮಂಡಳಿಯ ಸಭೆಯ ನಂತರ ಬಾಗಿಲು ತೆಗೆಯುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಮಠದ ಮೂಲಗಳು ಹೇಳಿವೆ.
ರಾಯಚೂರು ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀಶ್ವರ ದೇವಾಲಯ, ದೇವಸುಗೂರಿನ ಸೂಗುರೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಹರಕೆ, ಪ್ರಸಾದ ವಿತರಣೆಗೆ ಅವಕಾಶ ನೀಡಿಲ್ಲ. ಪೂಜೆ, ಅಭಿಷೇಕಗಳು ಮೊದಲಿನಂತೆ ನಡೆಯುತ್ತಿವೆ.
ದೇವಾಲಯಗಳಲ್ಲಿ ಸಾಮಾಜಿಕ ಅಂತರದ ಮಾರ್ಕ್ ಮಾಡಲಾಗಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ದೇವಾಲಯಕ್ಕೆ ಬರುವ ಕೆಲ ಭಕ್ತರು ಮಾಸ್ಕ್ ಧರಿಸದೇ ನೇರವಾಗಿ ಬರುತ್ತಿದ್ದಾರೆ. ದೇವಾಲಯದಲ್ಲಿ ಒಳಬರುವವರಿಗೆ ಹಾಗೂ ಹೊರ ಹೋಗುವವರಿಗೆ ಪ್ರತ್ಯೇಕ ವ್ಯವಸ್ಥೆಯಿದೆ. ಹೀಗಿದ್ದರೂ ಬಹಳಷ್ಟು ದೇವಾಲಯಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ. ಭಕ್ತರ ಸಂಖ್ಯೆ ಕಡಿಮೆಯಿದ್ದು ದೇವಾಲಯಗಳು ಇನ್ನೂ ಸಿದ್ಧತೆಗಳನ್ನ ನಡೆಸಿವೆ.