Tag: ದೇವಸ್ಥಾನ

  • ದೇವಾಲಯಗಳಲ್ಲಿ ದೈನಂದಿನ ಸೇವೆ ಆರಂಭಿಸಲು ಅನುಮತಿ

    ದೇವಾಲಯಗಳಲ್ಲಿ ದೈನಂದಿನ ಸೇವೆ ಆರಂಭಿಸಲು ಅನುಮತಿ

    – ಸರ್ಕಾರದಿಂದ ಅಧಿಕೃತ ಆದೇಶ

    ಬೆಂಗಳೂರು: ದೇವಾಲಗಳಲ್ಲಿ ದೈನಂದಿನ ಪೂಜೆ ಹಾಗೂ ಸೇವೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.

    ಮುಜರಾಯಿ ಇಲಾಖೆ ಇಂದು ಆದೇಶ ಹೊರಡಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಪೂಜೆ ಹಾಗೂ ಸೇವೆಗಳನ್ನು ನಡೆಸಬಹುದಾಗಿದೆ. ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿದೆ. ಉತ್ಸವದ ದಿನಗಳಲ್ಲಿ ಹೋಮ, ಹವನಗಳನ್ನು ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಲಾಗಿದ್ದು, ಅರ್ಚಕರು, ತಂತ್ರಿಗಳು, ದೇಗುಲದ ಸಿಬ್ಬಂದಿ ಮಾತ್ರ ಭಾಗವಹಿಸಿ ಸಾಂಕೇತಿಕ ಹೋಮ, ಹವನಗಳನ್ನು ನಡೆಸಬಹುದಾಗಿದೆ.

    ಭಕ್ತಾದಿಗಳು, ಜನಸಂದಣಿ ಇಲ್ಲದೇ ಹೋಮ, ಹವನ ನಡೆಸಬೇಕು. ಅಲ್ಲದೆ ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ, ಪವಿತ್ರೋತ್ಸವಗಳನ್ನು ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಕೊರೋನಾ ಹಾಗೂ ಲಾಕ್‍ಡೌನ್ ಆದಾಗಿನಿಂದ ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

  • ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಅನ್ನದಾಸೋಹ, ಸಮಾರಂಭ ಬಿಟ್ಟು ದೇವಸ್ಥಾನದಲ್ಲಿ ಎಲ್ಲಾ ಸೇವೆ ಆರಂಭ

    ಉಡುಪಿ: ಸೆಪ್ಟೆಂಬರ್ ಒಂದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭ ಆಗಲಿದೆ. ಅನ್ನ ದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ಎಲ್ಲಾ ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿ. ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. ಸರ್ಕಾರದಿಂದ ಅಧಿಕೃತ ಮಾಹಿತಿ ಮತ್ತು ಅನುಮತಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾಮಾಜಿಕ ಅಂತರ ಕಾಪಾಡುವ ಸೇವೆಗೆ ಮುಕ್ತ ಅವಕಾಶ ಇದೆ. ಕೊಲ್ಲೂರಿನ ಚಿನ್ನದ ರಥ ಸೇವೆ, ಬೆಳ್ಳಿರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ಕೋವಿಡ್-19 ಗೈಡ್ ಲೈನ್ ಮೇಲೆ ಎಲ್ಲಾ ಸೇವೆ ಆರಂಭವಾಗುತ್ತದೆ ಎಂದು ಹೇಳಿದರು.

    ನೂರಾರು, ಸಾವಿರಾರು ಜನ ಸೇರಿ ಕೊಡುವ ಸೇವೆ ಸದ್ಯಕ್ಕೆ ಸಾಧ್ಯವಿಲ್ಲ. ಅಂತಹ ಸೇವೆಯನ್ನು ಹತ್ತು-ಹದಿನೈದು ಜನರು ಮಾಡಲು ಸಾಧ್ಯವೇ ಎಂಬ ಚಿಂತನೆ ನಡೆಸುತ್ತೇವೆ. ಕೋವಿಡ್ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  • ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಮಂಗಳೂರು: ಭಕ್ತರ ಹಾಗೂ ಅರ್ಚಕರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವೆಗಳನ್ನು ಆರಂಭಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡೆ ಕವಿತಾ ಸನಿಲ್ ಆಗ್ರಹಿಸಿದ್ದಾರೆ.

    ಮಂಗಳೂರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಸಾಕಷ್ಟು ದೇಗುಲಗಳಿವೆ, ಅದರಲ್ಲೂ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಕೊರೊನಾದಿಂದಾಗಿ ವಿಶೇಷ ಪೂಜಾ ಸೇವೆಗಳು ನಡೆಯುತ್ತಿಲ್ಲ. ಹೀಗಾಗಿ ದೇಗುಲದ ಅರ್ಚಕರಿಗೆ ತಮ್ಮ ಕಷ್ಟವನ್ನು ಯಾರ ಹತ್ತಿರವೂ ಹೇಳಲಾಗುತ್ತಿಲ್ಲ ಎಂದರು.

    ಅರ್ಚಕರಿಗೆ ದೇವರ ಕೆಲಸ ಬಿಟ್ಟು ಬೇರೆ ಏನೂ ಕೆಲಸ ಮಾಡುವ ಹಾಗಿಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ದೇಗುಲಗಳ ಬಾಗಿಲನ್ನು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಬಾರ್, ವೈನ್ ಶಾಪ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅವರು ಯಾವ ರೀತಿ ಸಾಮಾಜಿಕ ಅಂತರ ಪಾಲಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದರು.

    ಆದ್ದರಿಂದ ದೇವಸ್ಥಾನಗಳಲ್ಲಿ ಸೇವೆಯನ್ನು ಅರಂಭಿಸಿದರೆ ಅರ್ಚಕರ ವೃಂದ, ಅಡಳಿತ ಮಂಡಳಿಯವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸವನ್ನು ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಸರ್ಕಾರ ಶೀಘ್ರದಲ್ಲೇ ದೇವಸ್ಥಾನಗಳಲ್ಲಿ ಸೇವೆ ಅರಂಭಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

  • ಸೆಪ್ಟೆಂಬರ್ 1ರಿಂದ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ

    ಸೆಪ್ಟೆಂಬರ್ 1ರಿಂದ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ

    ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಭಕ್ತರ ಪ್ರವೇಶ ನಿಷೇಧ ಹಾಗೂ ಕೆಲವೊಂದು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಸೆಪ್ಟೆಂಬರ್ 1 ರಿಂದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ.

    ಈ ಮೂಲಕ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ಇನ್ನು ಮುಂದೆ ದೇವಸ್ಥಾನಗಳಲ್ಲಿ ಮಾಮೂಲಿ ಪೂಜೆ ನಡೆಯಲಿದೆ. ಅದು ಕೂಡ ಕೊರೊನಾ ಮಾರ್ಗಸೂಚಿ ಅನ್ವಯವೇ ಎಲ್ಲಾ ಸೇವೆಗಳು ಲಭ್ಯವಾಗಲಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೀಗಾಗಿ ಸೆಪ್ಟೆಂಬರ್ 1ರಿಂದಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈಗಿದ್ದ ಸೀಮಿತ ಸೇವೆಗಳ ಜೊತೆಗೆ ಹೆಚ್ಚುವರಿ ಸೇವೆಗಳ ಆರಂಭ ಮಾಡುವ ಸಾಧ್ಯತೆಯೂ ಇದೆ. ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆ ಹಾಗೂ ಮುಡಿ ಸೇವೆ ಆರಂಭಕ್ಕೆ ಚಿಂತನೆ ಮಾಡಲಾಗಿದೆ. ಈ ವಿಚಾರವನ್ನು ಮುಜರಾಯಿ ಇಲಾಖೆ ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾಪ ಮಾಡಿದೆ. ಸರ್ಕಾರ ಒಪ್ಪಿದ್ರೆ ಸದ್ಯದಲ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗೆ ಅವಕಾಶ ನೀಡಲಾಗುವುದು. ಇದನ್ನೂ ಓದಿ: ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಒಟ್ಟಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸೇವೆಗಳು ಸ್ಥಗಿತಗೊಂಡಿದ್ದವು. ಅಲ್ಲದೆ ಕೇವಲ ಸೀಮಿತ ಸೇವಗಳಿಗೆ ಮಾತ್ರ ಅವಕಾಶ ಕೊಡಲಾಗಿತ್ತು. ಅನ್ ಲಾಕ್ ಪ್ರಕ್ರಿಯೆ ಜಾರಿ ಆಗುತ್ತಿರುವುದರಿಂದ ಎಲ್ಲಾ ಸೇವೆಗಳಿಗೆ ಅವಕಾಶ ನೀಡಲು ಸಿದ್ಧತೆ ನಡೆಸಲಾಗಿದೆ.

  • ಶಟರ್ ಧ್ವಂಸಗೊಳಿಸಿ ದೇಗುಲದಿಂದ ಪಲ್ಲಕ್ಕಿ ಹೊರತಂದು ಮೆರವಣಿಗೆ – 50ಕ್ಕೂ ಅಧಿಕ ಮಂದಿ ಅರೆಸ್ಟ್

    ಶಟರ್ ಧ್ವಂಸಗೊಳಿಸಿ ದೇಗುಲದಿಂದ ಪಲ್ಲಕ್ಕಿ ಹೊರತಂದು ಮೆರವಣಿಗೆ – 50ಕ್ಕೂ ಅಧಿಕ ಮಂದಿ ಅರೆಸ್ಟ್

    – ನಿರ್ಬಂಧದ ನಡುವೆ ಅಡ್ಡ ಪಲ್ಲಕ್ಕಿ ಉತ್ಸವ
    – ಪೊಲೀಸ್ ವಾಹನಕ್ಕೂ ಡಿಕ್ಕಿ

    ಕೊಪ್ಪಳ: ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಿದ್ದು, ಪರಿಣಾಮ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ದೇವರ ಆರಾಧನೆ ಮಹೋತ್ಸವ ನಿಮಿತ್ತ ಪ್ರತಿ ವರ್ಷ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಬಾರಿ ಕೊರೊನಾ ಭೀತಿಯಿಂದ ತಲತಲಾಂತರದಿಂದ ಆಚರಿಸಿಕೊಂಡು ಬಂದಂತಹ ಅಡ್ಡಪಲ್ಲಕ್ಕಿ ಉತ್ಸವವನ್ನು ಸರಳವಾಗಿ ದೇವಸ್ಥಾನದ ಆವರಣದಲ್ಲಿ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು.

    ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ಆರಂಭವಾಗುತ್ತಿದಂತೆ ಏಕಾಏಕಿ ಪಲ್ಲಕ್ಕಿ ಹೊತ್ತ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆಯಲು ಆರಂಭಿಸಿದರು. ಕೊನೆಗೆ ದೇವಸ್ಥಾನದ ಶಟರ್ ಧ್ವಂಸಗೊಳಿಸಿ ಪಲ್ಲಕ್ಕಿಯನ್ನು ಹೊರ ತಂದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ಮಧ್ಯೆ ಪಲ್ಲಕ್ಕಿ ಹೊರಬರುತ್ತಿದಂತೆ ಅಲ್ಲೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ವಾಹನದ ಗಾಜು ಪುಡಿ ಪುಡಿಯಾಗಿದೆ.

    ಅಡ್ಡಪಲ್ಲಕ್ಕಿ ಉತ್ಸವಕ್ಕೆ ತಹಶೀಲ್ದಾರರು ನಿರ್ಬಂಧ ಹೇರಿದರೂ ಕೂಡ ಸಾವಿರಾರು ಜನಜಂಗುಳಿ ಮಧ್ಯೆ ಪಲ್ಲಕ್ಕಿ ಉತ್ಸವ ಆಚರಣೆ ಮಾಡಿದ್ದಾರೆ. ಅಲ್ಲದೇ ನಾನಾ ಅವಾಂತರಕ್ಕೂ ಕಾರಣವಾಯಿತು. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮಾತಿಗೂ ಜನರು ಕ್ಯಾರೆ ಮಾಡಲಿಲ್ಲ. ಕೊನೆಗೆ ಪೊಲೀಸರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಜನ್ರು ಮೇಲೆ ಲಾಠಿ ಕೂಡ ಬೀಸಿದರು.

    ಒಂದು ಗಂಟೆಗಳ ಕಾಲ ಗ್ರಾಮದ ಮಧ್ಯೆ ಗ್ರಾಮಸ್ಥರು ಪಲ್ಲಕ್ಕಿ ಬಿಟ್ಟು ಹೋಗಿದ್ದರು. ಕೊನೆಗೆ ಪೊಲೀಸರು ಪಲ್ಲಕ್ಕಿ ಹೊತ್ತು ದೇವಸ್ಥಾನಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕುಷ್ಟಗಿ ಕಂದಾಯ ನೀರಿಕ್ಷಕ ಮತ್ತು ಪೊಲೀಸ್ ಠಾಣೆ ಸಿಬ್ಬಂದಿಯಿಂದ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಇಬ್ಬರು ದೂರಿನನ್ವಯ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

  • ಕೃಷ್ಣೆಯ ಪ್ರವಾಹ – ಸೇತುವೆಗಳು ಮುಳುಗಡೆ, ದೇವಾಲಯ ಜಲಾವೃತ

    ಕೃಷ್ಣೆಯ ಪ್ರವಾಹ – ಸೇತುವೆಗಳು ಮುಳುಗಡೆ, ದೇವಾಲಯ ಜಲಾವೃತ

    ರಾಯಚೂರು: ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಹೆಚ್ಚಳವಾಗಿದೆ.

    ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ 2.20 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

    ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಎರಡು ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಕಡದರಗಡ್ಡಿ, ಎಳಗುಂದಿ ಸೇರಿ ಎಂಟು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ದೇವದುರ್ಗ ತಾಲೂಕಿನ ಹೂವಿನ ಹೆಡಗಿ ಸೇತುವೆಯೂ ಮುಳುಗಡೆಯಾಗಿದ್ದು, ದೇವದುರ್ಗ-ಕಲಬುರ್ಗಿ ರಾಜ್ಯ ಹೆದ್ದಾರಿ ಮಾರ್ಗ ಕಡಿತವಾಗಿದೆ.

    ಇನ್ನೂ ದೇವದುರ್ಗ ತಾಲೂಕಿನ ಕೊಪ್ಪರದ ಐತಿಹಾಸಿಕ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಜಲಾವೃತವಾಗಿದೆ. ದೇವಾಲಯದ ಗರ್ಭಗುಡಿಯ ಮೆಟ್ಟಿಲುವರೆಗೆ ನೀರು ಬಂದಿದೆ. ಹೀಗಾಗಿ ಭಕ್ತರಿಗೆ ದೇವರ ದರ್ಶನ ಕಷ್ಟಸಾಧ್ಯವಾಗಿದೆ. ಒಟ್ಟು 33.333 ಟಿಎಂಸಿ ಸಾಮರ್ಥ್ಯದ ಬಸವಸಾಗರ ಜಲಾಶಯದಲ್ಲಿ ಈಗ 26.23 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಹೆಚ್ಚಾದಂತೆ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನ ಹರಿಸಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಜನ ಆತಂಕದಲ್ಲಿದ್ದಾರೆ.

  • ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ – ಸ್ಥಳೀಯ ನಿವಾಸಿಗಳ ಸ್ಥಳಾಂತರ

    ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ – ಸ್ಥಳೀಯ ನಿವಾಸಿಗಳ ಸ್ಥಳಾಂತರ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಗುರುವಾರ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಬೆಟ್ಟ ಕುಸಿತದಿಂದ ನಾಲ್ವರು ನಾಪತ್ತೆ- ಎನ್‍ಡಿಆರ್‍ಎಫ್ ತಂಡ ಸ್ಥಳಕ್ಕೆ ದೌಡು

    ಮಡಿಕೇರಿ ತಾಲೂಕಿನ ಬೊಟ್ಲಪ್ಪ ಗ್ರಾಮದಲ್ಲಿ ಭೂಕುಸಿತವಾಗಿದ್ದು, ಇದರಿಂದ ಮುನ್ನೆಚ್ಚರಿಕೆಯಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸ್ಥಳೀಯರಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ಆದರೆ ಸಂಪರ್ಕ ಕಡಿತಗೊಂಡ ಪರಿಣಾಮ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

    ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರೋ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ಭಗಂಡೇಶ್ವರ ದೇವಸ್ಥಾನ ಜಲಾವೃತವಾಗಿದೆ. ಸತತವಾಗಿ ಎರಡನೇ ವರ್ಷವೂ ದೇವಲಯದ ಆವರಣಕ್ಕೆ ನೀರು ನುಗ್ಗಿದೆ. ಗುರುವಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ.

    ಇನ್ನೂ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಕುಶಾಲನಗರದ ಜನರು ಪ್ರವಾಹದ ಭೀತಿಯಲ್ಲಿದ್ದಾರೆ. ಇದರಿಂದ ಸಾಯಿ ಬಡಾವಣೆ ಕುವೆಂಪುನಗರ ಮುಳುಗಡೆಯ ಭೀತಿಯಲ್ಲಿದೆ. ಅಲ್ಲದೇ ಮನೆಗಳಿಗೆ ನದಿಯ ನೀರು ನುಗ್ಗಿದ್ದು, ಭಾಗಶಃ ಮನೆಗಳು ಜಲಾವೃತವಾಗಿವೆ. ಇದರಿಂದ ಬಡಾವಣೆಯ ಜನರು ಸಂಕಷ್ಟದಲ್ಲಿದ್ದಾರೆ. ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಜಾಸ್ತಿಯಾಗಲಿದೆ.

  • ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್ ಕದ್ದೊಯ್ದ ಅಜ್ಜ- ಹೃದಯಾಘಾತವಾಗಿ ಕುಸಿದು ಬಿದ್ದ ಮಹಿಳೆ

    ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್ ಕದ್ದೊಯ್ದ ಅಜ್ಜ- ಹೃದಯಾಘಾತವಾಗಿ ಕುಸಿದು ಬಿದ್ದ ಮಹಿಳೆ

    ಬೆಂಗಳೂರು: ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್ ಕಳ್ಳತನ ಆಗಿರುವ ವಿಚಾರ ತಿಳಿದು ಮಹಿಳೆಯೊಬ್ಬರು ಸ್ಥಳದಲ್ಲೇ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕತ್ರಿಗುಪ್ಪೆ ಕಾವೇರಿ ನಗರದ ನಿವಾಸಿಯಾಗಿರುವ ಮಮತಾ, ಜುಲೈ 13 ರಂದು ಚಾಮರಾಜಪೇಟೆ ಠಾಣಾ ವ್ಯಾಪ್ತಿಯ ಗೌರಿ ಶಂಕರ ದೇವಸ್ಥಾನಕ್ಕೆ ಪೂಜೆಗೆ ಹೋಗಿದ್ದರು. ಈ ವೇಳೆ ದೇವಸ್ಥಾನದ ಹೊರಗೆ ಬೈಕ್ ನಿಲ್ಲಿಸಿ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿತ್ತು.

    ದೇವಸ್ಥಾನದ ಬಳಿ ನಿಲ್ಲಿಸಿದ್ದ ಬೈಕನ್ನು ಅದೇ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಕದ್ದು ಎಸ್ಕೇಪ್ ಆಗಿದ್ದ. ಬೈಕ್ ಖದೀಯುವ ಮುನ್ನ ಮಹಿಳೆ ಬಳಿ ಇದ್ದ ಬೈಕ್ ಕೀಯನ್ನು ವೃದ್ಧ ಎಗರಿಸಿದ್ದ. ದೇವಸ್ಥಾನದಿಂದ ಹೊರ ಬಂದ ಮಹಿಳೆಗೆ ಬೈಕ್ ಕಳ್ಳತನ ಆಗಿರುವುದು ತಿಳಿದಿತ್ತು. ಬೈಕ್ ಮೇಲೆ ತುಂಬಾ ಸೆಂಟಿಮೆಂಟ್ ಹೊಂದಿದ್ದ ಅವರು ಪ್ರಜ್ಞೆ ತಪ್ಪಿ, ಹೃದಯಾಘಾತವಾಗಿ ಕೆಳಗೆ ಬಿದ್ದಿದ್ದರು.

    ಬೈಕ್ ಕಳುವಿನ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕನ್ನು ವೃದ್ಧ ಕಳ್ಳತನ ಮಾಡಿರುವ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ಬೈಕ್ ಕದ್ದ ವೃದ್ಧನ ಪತ್ತೆ ಕಾರ್ಯ ಮಾಡುತ್ತಿದ್ದಾರೆ.

  • ಕೃಷ್ಣಜನ್ಮಾಷ್ಟಮಿಗೆ ಇಸ್ಕಾನ್‍ನಲ್ಲಿ ನೇರ ದರ್ಶನ ಇಲ್ಲ- ಆನ್‍ಲೈನ್ ಮೂಲಕ ನೇರ ಪ್ರಸಾರ

    ಕೃಷ್ಣಜನ್ಮಾಷ್ಟಮಿಗೆ ಇಸ್ಕಾನ್‍ನಲ್ಲಿ ನೇರ ದರ್ಶನ ಇಲ್ಲ- ಆನ್‍ಲೈನ್ ಮೂಲಕ ನೇರ ಪ್ರಸಾರ

    ಬೆಂಗಳೂರು: ಕೊರೊನಾ ಎಫೆಕ್ಟ್ ಹಬ್ಬಹರಿದಿನಗಳಿಗೆ ತಟ್ಟಿದೆ. ವರಮಹಾಲಕ್ಷ್ಮೀಹಬ್ಬ, ಗಣೇಶ್ ಚತುರ್ಥಿ, ಶ್ರೀಕೃಷ್ಣಜನ್ಮಾಷ್ಟಮಿ ಹೀಗೆ ಸಾಲು ಸಾಲು ಹಬ್ಬಗಳು ಬರಲಿವೆ. ಶ್ರೀಕೃಷ್ಣಜನ್ಮಾಷ್ಟಮಿಗೆ ಈಗಾಗಲೇ ಇಸ್ಕಾನ್‍ನಲ್ಲಿ ಸಿದ್ಧತೆ ಆರಂಭಿಸಲಾಗಿದೆ.

    ಕೊರೊನಾದಿಂದ ಈ ಬಾರಿ ಇಸ್ಕಾನ್‍ನಲ್ಲಿ ನೇರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಆದರೆ ಆನ್‍ಲೈನ್ ಮೂಲಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಆಗಸ್ಟ್ 11, 12 ರಂದು ನಡೆಯುವ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳನ್ನ ಯೂಟ್ಯೂಬ್, ಫೇಸ್‍ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ವೀಕ್ಷಿಸಬಹುದಾಗಿದೆ.

    ಶ್ರೀರಾಧಾಕೃಷ್ಣಚಂದ್ರ ದೇವರಿಗೆ ಮಾಡುವ ಅಭಿಷೇಕವನ್ನ ನೇರಪ್ರಸಾರ ಮಾಡಲಾಗುತ್ತದೆ ಎಂದು ಇಸ್ಕಾನ್ ಆಡಳಿತ ಮಂಡಳಿ ಪತ್ರದ ಮೂಲಕ ತಿಳಿಸಿದೆ.

    ಪತ್ರದಲ್ಲಿ ಏನಿದೆ?
    ಆಗಸ್ಟ್ 11 ಮತ್ತು 12 ರಂದು ನಡೆಯುವ ಶ್ರೀಕೃಷ್ಣಜನ್ಮಾಷ್ಟಮಿಯ ಕಾರ್ಯಕ್ರಮಗಳನ್ನು ಸುಮಾರು 20 ಗಂಟೆಗಳ ಕಾಲ ಇಸ್ಕಾನ್-ಬೆಂಗಳೂರು ಯೂಟ್ಯೂಬ್ ಚಾನಲ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಟ್ವಿಟ್ಟರಿನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಶ್ರೀ ಕೃಷ್ಣನಿಗೆ ನಡೆಯುವ ವೈಭವೋಪೇತ ಅಭಿಷೇಕವನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಹೆಸರಾಂತ ಕಲಾವಿದರಿಂದ ಲೈವ್ ಸಂಗೀತ ಕಾರ್ಯಕ್ರಮಗಳು ಇರುತ್ತವೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.

  • ಇತಿಹಾಸದಲ್ಲೇ ಮೊದಲ ಬಾರಿಗೆ ಕುಕ್ಕೆಯಲ್ಲಿ ಭಕ್ತರಿಲ್ಲದೆ ನಡೆದ ನಾಗರಪಂಚಮಿ

    ಮಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಲ್ಲದೆ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.

    ಕೊರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಈ ಬಾರಿಯ ಕುಕ್ಕೆ ಕ್ಷೇತ್ರದಲ್ಲಿ ನಾಗರಪಂಚಮಿಯ ವಿಶೇಷ ದಿನವಾದ ಇಂದು ನಿರ್ಬಂಧ ಹೇರಲಾಗಿತ್ತು. ಭಕ್ತರು ಬಂದರೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯಿಂದಲೂ ತೊಂದರೆಯಾಗುತ್ತದೆ. ಹೀಗಾಗಿ ಇಂದು ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

    ನಾಗರಪಂಚಮಿಯ ದಿನ ನಾಗದೇವರಿಗೆ ವಿಶೇಷ ದಿನವಾಗಿರುವುದರಿಂದ ಕುಕ್ಕೆ ಕ್ಷೇತ್ರದಲ್ಲಿ ಅರ್ಚಕರು ನಾಗದೇವರ ಕಲ್ಲಿಗೆ ಸೀಯಾಳಾಭಿಷೇಕ, ಹಾಲಿನ ಅಭಿಷೇಕ ನಡೆಸಿದರು. ಜೊತೆಗೆ ನಾಗರಪಂಚಮಿಯ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ಸಿಬ್ಬಂದಿ ಹಾಗೂ ಅರ್ಚಕರು ಮಾತ್ರ ಉಪಸ್ಥಿತರಿದ್ದರು.

    ಪ್ರತಿ ವರ್ಷ ನಾಗರಪಂಚಮಿಯ ದಿನದಂದು ಲಕ್ಷಾಂತರ ಮಂದಿ ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಮಾತ್ರ ಬೆರಳೆಣಿಕೆಯ ಭಕ್ತರು ದೇವಸ್ಥಾನದ ಹೊರಗಿನಿಂದಲೇ ನಮಸ್ಕರಿಸಿ ತೆರಳಿದರು.