Tag: ದೇವಸ್ಥಾನ

  • ಅರ್ಚಕರ ಹತ್ಯೆ ಪ್ರಕರಣ – 9 ಆರೋಪಿಗಳಿಗೆ  ನ್ಯಾಯಾಂಗ ಬಂಧನ

    ಅರ್ಚಕರ ಹತ್ಯೆ ಪ್ರಕರಣ – 9 ಆರೋಪಿಗಳಿಗೆ ನ್ಯಾಯಾಂಗ ಬಂಧನ

    – 4.7 ಲಕ್ಷ ಹಣ, ಫೋನ್, ಬೈಕ್, ಕಾರು ವಶ

    ಮಂಡ್ಯ: ಜಿಲ್ಲೆಯಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿ, ದೇವಸ್ಥಾನದ ಹುಂಡಿ ದೋಚಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಒಟ್ಟು ಈ ಪ್ರಕರಣಗಳಲ್ಲಿ ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್‍ಔಟ್

    ಸೆಪ್ಟೆಂಬರ್ 14 ರಂದು ಕೊಲೆ ಮತ್ತು ದರೋಡೆ ಆರೋಪದ ಮೇಲೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಿದ ವೇಳೆ ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಬಂಧಿತ ಆರೋಪಿಗಳ ಮಾಹಿತಿ ಮೇರೆಗೆ ತಲೆಮರಿಸಿಕೊಂಡಿದ್ದ ನಾಲ್ವರನ್ನು ಬಂಧಿಸಲು ಬಲೆ ಬೀಸಿದ್ದರು. ಇದೀಗ ಆ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಶಿವು, ಮಂಜು, ಶಿವರಾಜ್ ಹಾಗೂ ಗಣೇಶ್ ಎಂದು ಗುರುತಿಸಲಾಗಿದೆ. ಈಗ ಬಂಧಿತರಾಗಿರುವ ನಾಲ್ಕು ಮಂದಿಯಿಂದ 4.7 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್, 2 ಬೈಕ್ ಮತ್ತು 1 ಕಾರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    ಸೆಪ್ಟೆಂಬರ್ 10ರ ಮಧ್ಯರಾತ್ರಿ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಕೊಲೆ ಗೈದು ದೇವಸ್ಥಾನದಲ್ಲಿದ್ದ ಮೂರು ಹುಂಡಿಯ ಹಣವನ್ನು ದೋಚಿಕೊಂಡು ಹಂತಕರು ಪರಾರಿಯಾಗಿದ್ದರು. ಪ್ರಕರಣ ನಡೆದ ಮೂರೇ ದಿನಗಳಲ್ಲಿ ಪೊಲೀಸರು ಐದು ಮಂದಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇವರನ್ನು ಬಂಧಿಸುವ ವೇಳೆ ಮದ್ದೂರು ಮಳವಳ್ಳಿ ರಸ್ತೆಯ ಸಾದೊಳಲು ಗೇಟ್ ಬಳಿ ಆರೋಪಿಗಳಾದ ವಿಜಿ, ಗಾಂಧಿ ಹಾಗೂ ಮಂಜು ಎಂಬವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಮೂವರಿಗೂ ಕಾಲಿಗೆ ಪೆಟ್ಟು ಬಿದ್ದಿತ್ತು.

  • 82 ದಿನಗಳ ನಂತ್ರ ಮಾದಪ್ಪನ ಹುಂಡಿ ಏಣಿಕೆ – 1.47 ಕೋಟಿ ನಗದು, 17 ಗ್ರಾಂ ಚಿನ್ನ ಸಂಗ್ರಹ

    82 ದಿನಗಳ ನಂತ್ರ ಮಾದಪ್ಪನ ಹುಂಡಿ ಏಣಿಕೆ – 1.47 ಕೋಟಿ ನಗದು, 17 ಗ್ರಾಂ ಚಿನ್ನ ಸಂಗ್ರಹ

    – ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ

    ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿ ಏಣಿಕೆ ಮಾಡಲಾಗಿದ್ದು, ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

    ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಏಣಿಕೆ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಹುಂಡಿ ಏಣಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ 82 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆದರೆ ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ ಕಂಡು ಬಂದಿದೆ.

    ಹುಂಡಿಯಲ್ಲಿ 1.47 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಹಣದ ಜೊತೆಗೆ 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿ ಸಹ ಮಹದೇಶ್ವರನ ಹುಂಡಿಯಲ್ಲಿ ಸಂಗ್ರಹವಾಗಿದೆ. ಈ ಮೊದಲು ಪ್ರತಿ ತಿಂಗಳ ಸರಾಸರಿ 1.50 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಆದರೆ ಈಗ 82 ದಿನಗಳಿಗೆ 1.47 ಕೋಟಿ ರೂಪಾಯಿ ಸಂಗ್ರಹವಾಗಿದೆ.

    ಏಳು ಮಲೆಗಳ ಒಡೆಯ, ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದು. ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಮಾದಪ್ಪನ ದೇವಾಲಯ ಅತಿ ಹೆಚ್ಚು ಆದಾಯ ತರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೊರೊನಾ ಕಾರಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸತತ 5 ತಿಂಗಳುಗಳ ಕಾಲ ಭಕ್ತರಿಗೆ ನಿಷೇದ ಹೇರಲಾಗಿತ್ತು.

    ಜೂನ್ 8ರಂದು ಸಾಕಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡು ಭಕ್ತರಿಗೆ ಮಾದಪ್ಪನ ದರ್ಶನ ಮಾಡುವ ವ್ಯವಸ್ಥೆಯನ್ನ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮಾಡಿತ್ತು.ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

    ಇತ್ತೀಚೆಗೆ ಅಂದರೆ ಅಮಾವಾಸ್ಯೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಒಂದೇ ಸ್ಥಳದಲ್ಲಿ ಸೇರುತ್ತಾರೆ ಎಂದು 16, 17 ಮತ್ತು 18 ಮೂರು ದಿನಗಳ ಮಾದಪ್ಪನ ಬೆಟ್ಟಕ್ಕೆ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಪ್ರವೇಶವನ್ನ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.

  • ಸ್ಕ್ರೂ ಡ್ರೈವರಿನಿಂದ ಆಗದೆ ರಾಡ್ ತಂದು ಗ್ರಿಲ್ ಮುರಿದ್ರು – ಮಂಡ್ಯದಲ್ಲಿ ನಿಲ್ಲದ ಹುಂಡಿ ಕಳವು

    ಸ್ಕ್ರೂ ಡ್ರೈವರಿನಿಂದ ಆಗದೆ ರಾಡ್ ತಂದು ಗ್ರಿಲ್ ಮುರಿದ್ರು – ಮಂಡ್ಯದಲ್ಲಿ ನಿಲ್ಲದ ಹುಂಡಿ ಕಳವು

    – ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ಯಾ ಹುಂಡಿ ಕಳ್ಳರ ಗ್ಯಾಂಗ್?

    ಮಂಡ್ಯ: ಕಳೆದ ವಾರವಷ್ಟೇ ಜಿಲ್ಲೆಯಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ದೋಚಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಜಿಲ್ಲೆಯ ಮತ್ತೊಂದು ದೇಗುಲದ ಬಾಗಿಲು ಮುರಿದು ಹುಂಡಿಯನ್ನು ದೋಚಿರುವ ಪ್ರಕರಣ ನಡೆದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ – ತಲಾ 5 ಲಕ್ಷ ಪರಿಹಾರ ಘೋಷಣೆ

    ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ರಾತ್ರಿ ದೇವಾಲಯಕ್ಕೆ ನುಗ್ಗಿರುವ 4 ರಿಂದ 5 ಮಂದಿಯ ಕಳ್ಳರ ಗ್ಯಾಂಗ್ ಹುಂಡಿ ದೋಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿ ದೇವಸ್ಥಾನಕ್ಕೆ ಬಂದಿರುವ ಕಳ್ಳರ ಗ್ಯಾಂಗ್ ಮೊದಲು ದೇವಸ್ಥಾನದ ಸುತ್ತ ವೀಕ್ಷಣೆ ಮಾಡಿದೆ. ನಂತರ ದೇವಸ್ಥಾನದ ಬಾಗಿಲನ್ನು ಸ್ಕ್ರೂ ಡ್ರೈವರ್‌ನಿಂದ ಬಿಚ್ಚಲು ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್‍ಔಟ್

    ಅದು ಸಾಧ್ಯವಾಗದ ಕಾರಣ ಅಲ್ಲಿಂದ ಹಿಂತಿರುಗಿದ್ದಾರೆ. ನಂತರ 10 ನಿಮಿಷ ಬಿಟ್ಟು ಕಬ್ಬಿಣದ ರಾಡ್‍ವೊಂದನ್ನು ತಂದು ಗ್ರಿಲ್ ಮುರಿದಿದ್ದಾರೆ. ಬಳಿಕ ನೇರವಾಗಿ ದೇವಸ್ಥಾನದ ಹುಂಡಿಯ ಬಳಿ ಹೋಗಿ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಈ ಎಲ್ಲಾ ದೃಶ್ಯಗಳು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದು ಮುಂಜಾನೆ ಎಂದಿನಂತೆ ದೇವಸ್ಥಾನದ ಮುಂದೆ ಜನರು ಸಂಚಾರ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಸ್ಥಳೀಯರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ವೀಕ್ಷಣೆ ಮಾಡಿ, ದೇವಸ್ಥಾನದ ಸಿಸಿಟಿವಿ ವಿಡಿಯೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಎಲ್ಲ ಮುಜರಾಯಿ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ – ಕೋಟಾ ಆದೇಶ

    ಎಲ್ಲ ಮುಜರಾಯಿ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ – ಕೋಟಾ ಆದೇಶ

    – ಕೊಲೆಯಾದ ಅರ್ಚಕ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ

    ಮಂಡ್ಯ: ಶುಕ್ರವಾರ ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ಹಣ ಕಳವು ಮಾಡಿದ ಹಿನ್ನೆಲೆ ಇಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಸಚಿವ ನಾರಾಯಣಗೌಡ ಹಾಗೂ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಟಾ ಶ್ರೀನಿವಾಸ್ ಪೂಜಾರಿ, ದೇವಸ್ಥಾನವನ್ನು ಮೊದಲು ವೀಕ್ಷಣೆ ಮಾಡಿದರು. ನಂತರ ನಿನ್ನೆ ನಡೆದ ಘಟನೆಯ ಕುರಿತು ಮಂಡ್ಯ ಎಸ್‍ಪಿ ಪರಶುರಾಮ್ ಅವರ ಬಳಿ ಮಾಹಿತಿ ಕಲೆ ಹಾಕಿ, ಹಂತಕರನ್ನು ಶ್ರೀಘ್ರದಲ್ಲಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದರು. ಬಳಿಕ ಕೊಲೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಸಾಂತ್ವನ ಹೇಳಿ, ತಲಾ ಐದು ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು.

    ನಂತರ ಮಾತನಾಡಿ ಅವರು, ನಿನ್ನೆ ಮಂಡ್ಯದಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಆಗಿದೆ. ಇಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮುಜರಾಯಿ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದೇನೆ. ಇನ್ನೂ ಮುಂದೆ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಹುಂಡಿ ತೆಗೆಯಬೇಕು ಎಂದು ಆದೇಶಿಸಿದರು.

  • ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ – ಸಾರ್ವಜನಿಕರಿಗೆ ನಿರ್ಬಂಧ

    ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ – ಸಾರ್ವಜನಿಕರಿಗೆ ನಿರ್ಬಂಧ

    ಉಡುಪಿ: ಜಿಲ್ಲೆಯಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಕೃಷ್ಣನ ಜನ್ಮಾಷ್ಟಮಿ ನಂತರದ ಶುಕ್ರವಾರ ರಥಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ. ಆದರೆ ಎರಡೂ ದಿನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಅವಕಾಶ ಇಲ್ಲ.

    ಸೆಪ್ಟೆಂಬರ್ 21ರವರೆಗೆ ನೂರು ಜನ ಸೇರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಹೀಗಾಗಿ ಉಡುಪಿ ಕೃಷ್ಣಮಠ ಕೋವಿಡ್ 19 ನ ಹಿಂದಿನ ಸೂಚನೆಯನ್ನೇ ಪಾಲಿಸಬೇಕಾಗುತ್ತದೆ. ರಥಬೀದಿಯಲ್ಲಿ ಸಾವಿರಾರು ಜನ ಸೇರಿ ಆಚರಿಸುವ ವಿಟ್ಲಪಿಂಡಿ ಆಚರಣೆಗೆ ಕೂಡ ನೂರು ಜನ ಸೇರುವ ಅವಕಾಶವೂ ಇಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ವೇಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ಇಲ್ಲ. ಪೊಲೀಸ್ ನಿಯೋಜನೆ ಮಾಡಿ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಡಿಸಿ ಹೇಳಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಕೃಷ್ಣ ಮಠದ ಪರ್ಯಾಯ ಅದಮಾರು ಸ್ವಾಮೀಜಿ ಜೊತೆ ಮಾತನಾಡಿದ್ದೇನೆ. ಸರ್ಕಾರದ ನಿಯಮವನ್ನು ಪಾಲಿಸುವುದಾಗಿ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ ಅಷ್ಟಮಿ ಮತ್ತು ವಿಟ್ಲಪಿಂಡಿ ಆಚರಣೆ ನಡೆಯುತ್ತದೆ. ಕೃಷ್ಣ ಮಠಕ್ಕೆ ಬರುವ ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡುತ್ತೇವೆ. ಮಠದ ಸುತ್ತಲ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ನಿಯೋಜನೆ ಮಾಡುತ್ತೇವೆ ಎಂದರು.

    ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ಯಾವುದೇ ವೇಷಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅವಕಾಶ ಇಲ್ಲ. ಮಠದ ಸಿಬ್ಬಂದಿ ಮೊಸರು ಕುಡಿಕೆಯನ್ನು ಸಾಂಪ್ರದಾಯಕವಾಗಿ ನಡೆಸುತ್ತಾರೆ. ಅದನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ ಎಂದರು.

  • ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    – ದೇವಸ್ಥಾನಕ್ಕೆ ಕಂಟಕವಾಯ್ತು ರಸ್ತೆ ಅಗಲೀಕರಣ

    ಮಂಡ್ಯ: ಹೆದ್ದಾರಿ ಕಾಮಗಾರಿಯಿಂದಾಗಿ ಜಿಲ್ಲೆಯಲ್ಲಿರುವ 500 ವರ್ಷಗಳ ಹಳೆಯದಾದ ಪ್ರಸಿದ್ಧ ದೇವಸ್ಥಾನಕ್ಕೆ ಕಂಟಕ ಎದುರಾಗಿದೆ. ಇದೀಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇಗುಲವೇ ಮುಚ್ಚಿಹೋಗುವ ಆತಂಕ ಎದುರಾಗಿದೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ರಂಗನಾಥ ಸ್ವಾಮಿ ದೇವಾಲಯ ಇದೆ. ಇದು 500 ವರ್ಷಗಳ ಹಿಂದಿನ ಪುರಾಣ ಪ್ರಸಿದ್ಧ ದೇವಾಲಯ. ರಂಗನಾಥ ಸ್ವಾಮಿ ಮಲಗಿರುವ ಭಂಗಿಯಲ್ಲಿ ವಿಗ್ರಹ ಕೆತ್ತಲಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯ ಮಣ್ಣಲ್ಲಿ ಮಣ್ಣಾಗುವ ಆತಂಕ ಎದುರಾಗಿದೆ.

    ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲಗಳು ಹತ್ತಾರಿವೆ. ಅದರಲ್ಲಿ ವಿಜಯನಗರ ಅರಸರ ಕಾಲದ ಈ ರಂಗನಾಥ ಸ್ವಾಮಿ ದೇಗುಲವೂ ಒಂದು. ಶ್ರೀರಂಗಪಟ್ಟಣದ ಗಂಜಾಂ ಸಮೀಪದ ಗದ್ದೆಯೊಂದರಲ್ಲಿ ದೇವಾಲಯ ನಿರ್ಮಿಸಿರುವುದರಿಂದ ಈ ದೇವಸ್ಥಾನವನ್ನು ಗದ್ದೆ ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಗದ್ದೆ ರಂಗನಾಥಸ್ವಾಮಿ ದೇವಾಲಯ ಮುಚ್ಚಿಹೋಗುವ ಭೀತಿ ಎದುರಾಗಿದೆ.

    ಈಗಾಗಲೇ ದೇವಾಲಯದ ಸುತ್ತಾ ಮಣ್ಣಿನ ರಾಶಿ ಹಾಕಲಾಗುತ್ತಿರುವುದರಿಂದ ಮುಚ್ಚಿಹೋಗುವ ಅಪಾಯ ಎದುರಾಗಿದೆ. ಹೀಗಿದ್ದರೂ ದೇವಾಲಯ ಸ್ಥಳಾಂತರ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಹೆದ್ದಾರಿ ಕಾಮಗಾರಿಗೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲೇ ಸ್ಥಳೀಯರು ದೇವಾಲಯ ಸ್ಥಳಾಂತರ ಮಾಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈವರೆಗೂ ಅಧಿಕಾರಿಗಳು ದೇವಸ್ಥಾನವನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದ್ದಾರೆ.

  • ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರು

    ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರು

    ಕಲಬುರಗಿ: ದೇವಸ್ಥಾನದ ಒಳಗೆ ನುಗ್ಗಿ ಖದೀಮರು ಹಣದ ಹುಂಡಿಯನ್ನೇ ಹೊತ್ತೊಯ್ದಿರುವ ಘಟನೆ ನಡೆದಿದೆ.

    ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಹಣದ ಹುಂಡಿಯನ್ನು ಖದೀಮರು ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಒಳಗಿದ್ದ ಹಣದ ಹುಂಡಿಯನ್ನು ಕೊರೊನಾ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಇಡಲಾಗಿತ್ತು. ಹೀಗಾಗಿ ಹುಂಡಿಯನ್ನು ಹೊರ ತರಲು ಕಳ್ಳರಿಗೆ ಅನುಕೂಲವಾಗಿದ್ದು, ಹೊತ್ತೊಯ್ದಿದ್ದಾರೆ.

    ದೇವಸ್ಥಾನದ ಹಿಂಭಾಗಕ್ಕೆ ಹುಂಡಿಯನ್ನ ಹೊತ್ತೊಯ್ದು, ಖದೀಮರು ಹಣ ಕಳ್ಳತನ ಮಾಡಿದ್ದು, ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

    ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

    – ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ನಿರ್ಧಾರ

    ಹೈದರಾಬಾದ್: ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯ ಸಚಿವಾಲಯದ ಆವರಣದಲ್ಲಿ 2 ಮಸೀದಿ, 1 ದೇವಸ್ಥಾನ, 1 ಚರ್ಚ್ ನಿರ್ಮಿಸುವ ನಿರ್ಧಾರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೈಗೊಂಡಿದ್ದಾರೆ.

    ಪ್ರಗತಿ ಭವನದಲ್ಲಿ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ. ಗಂಗಾ, ಯಮುನಾ, ತೆಹ್ಜೀಬ್ ಸಂಕೇತವಾಗಿ ಇವುಗಳನ್ನು ನಿರ್ಮಿಸುತ್ತಿರುವುದಾಗಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಎಲ್ಲ ಪೂಜಾ ಸ್ಥಳಗಳಿಗೆ ಒಂದೇ ದಿನ ಅಡಿಪಾಯ ಹಾಕಿ, ಒಂದೇ ದಿನ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿದ್ದಾರೆ.

    ಸಚಿವಾಲಯದ ಹಳೆಯ ಕಟ್ಟಡವನ್ನು ಕೆಡುವುವಾಗ ಒಂದು ದೇವಸ್ಥಾನ, ಎರಡು ಮಸೀದಿಗಳಿಗೆ ಹಾನಿಯಾಗಿತ್ತು, ಈ ಹಿನ್ನೆಲೆ ಮುಸ್ಲಿಂ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ.

    ಒಂದು ಇಮಾಮ್ ಕ್ವಾರ್ಟರ್ಸ್ ಸೇರಿ ತಲಾ 750 ಚ.ಅಡಿ ಒಟ್ಟು 1,500 ಚ.ಅಡಿಯಲ್ಲಿ 2 ಮಸೀದಿಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಮಸೀದಿಗಳಿದ್ದ ಜಾಗದಲ್ಲೇ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಸೀದಿಗಳನ್ನು ನಿರ್ಮಿಸಿದ ಬಳಿಕ ರಾಜ್ಯ ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

    ದೇವಸ್ಥಾನವನ್ನು 1,500 ಚ.ಅಡಿ ಜಾಗದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಇದನ್ನೂ ಸಹ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆ ನಡೆಯುತ್ತಿರುವಾಗಲೇ ಕ್ರಿಶ್ಚಿಯನ್ ಸಮುದಾಯದವರು ಸಹ ಚರ್ಚ್‍ಗಾಗಿ ಬೇಡಿಕೆ ಇಟ್ಟಿದ್ದಾರೆ. ಹೊಸ ಸಚಿವಾಲಯದ ಕಟ್ಟಡದ ಆವರಣದಲ್ಲಿ ಚರ್ಚ್ ಸಹ ಇರಬೇಕು ಎಂದು ಬೇಡಿಕೆ ಇಟ್ಟಿದೆ. ಹೀಗಾಗಿ ಚರ್ಚ್ ಸಹ ನಿರ್ಮಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

    ರಾಜ್ಯವು ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ತೆಲಂಗಾಣ ಧಾರ್ಮಿಕ ಸಹಿಷ್ಣುತೆಯನ್ನು ಪಾಲಿಸುತ್ತದೆ ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ. ಈ ಕುರಿತು ತೆಲಂಗಾಣದಲ್ಲಿ ಇದೀಗ ಭಾರೀ ಚರ್ಚೆ ನಡೆಯುತ್ತಿದೆ.

    ಅನಾಥ ಮುಸ್ಲಿಂ ಮಕ್ಕಳಿಗಾಗಿ ಆಶ್ರಯ ಕೇಂದ್ರ ನಿರ್ಮಾಣ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಇನ್ನೂ 18 ಕೋಟಿ ರೂ.ಗಳನ್ನು ಇದೀಗ ಕೆಸಿಆರ್ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೈದರಾಬಾದ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮುಸ್ಲಿಂ ಕೇಂದ್ರವನ್ನು ಸ್ಥಾಪಿಸಲು ಸಹ ಕೆಸಿಆರ್ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಾಗವನ್ನು ಸಹ ಸರ್ಕಾರ ಗುರುತಿಸಿದೆ.

    ಅಲ್ಲದೆ ಮುಸ್ಲಿಂ ಸಮುದಾಯದವರಿಗಾಗಿ ಸಮಾಧಿ ಸ್ಥಳ(ಖಬ್ರಾಸ್ತಾನ್)ಗಳನ್ನು ಸಹ ಗುರುತಿಸಲು ಸರ್ಕಾರ ಮುಂದಾಗಿದ್ದು, ನಗರದ ಹಲವು ಸ್ಥಳಗಳಲ್ಲಿ 150-200 ಖಬ್ರಾಸ್ತಾನ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇಷ್ಟು ಮಾತ್ರವಲ್ಲದೆ ಉರ್ದುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಲು ಕೆಸಿಆರ್ ಮುಂದಾಗಿದ್ದಾರೆ. ಉರ್ದು ಭಾಷೆಯ ರಕ್ಷಣೆ, ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಸಿಆರ್ ಯೋಜನೆ ರೂಪಿಸಿದ್ದಾರೆ. ಸರ್ಕಾರ ನಡೆಸಿದ ಸಭೆಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಸಹ ಸಭೆಯಲ್ಲಿ ಭಾಗವಹಿಸಿದ್ದರು.

  • ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

    ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

    ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ದೇವಿ ದೇವಸ್ಥಾನ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸರ್ವ ಸೇವೆಗಳು ಸೋಮವಾರದಿಂದ ಆರಂಭವಾಗಲಿದೆ. ಮುಜರಾಯಿ ಇಲಾಖೆಯ ಕಮಿಷನರ್ ಮೂಕಾಂಬಿಕ ದೇವಸ್ಥಾನಕ್ಕೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಸೋಮವಾರದಿಂದ ಎಲ್ಲಾ ಸೇವೆಗಳನ್ನು ಆರಂಭಿಸಲು ದೇಗುಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಮೂಕಾಂಬಿಕೆ ಸನ್ನಿಧಿ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನ. ಲಾಕ್‍ಡೌನ್ ಆಗಿರೋದರಿಂದ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಭಕ್ತರಿಗೆ ಲಭ್ಯವಿರಲಿಲ್ಲ. ಹೀಗಾಗಿ ಕಳೆದ 5 ತಿಂಗಳಿಂದ ಕಾತುರರಾಗಿದ್ದ ಮೂಕಾಂಬಿಕಾ ಭಕ್ತರಿಗೆ ಈ ಆದೇಶ ಹರ್ಷ ತಂದಿದೆ.

    ಮೂಕಾಂಬಿಕಾ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ಲಡ್ಡು ಪ್ರಸಾದ ತುಲಾಭಾರ ಸೇವೆಗಳು ಆರಂಭವಾಗಲಿದೆ. ಕೋವಿಡ್ 19 ನಿಯಮ ಪ್ರಕಾರ ಚಂಡಿಕಾಹೋಮ, ಬೆಳ್ಳಿ ರಥ, ಬಂಗಾರದ ರಥ ಸೇವೆ ನಡೆಸುವುದು ದೇವಸ್ಥಾನಕ್ಕೆ ಸವಾಲಾಗಿದೆ. ಈ ಸೇವೆಗಳಲ್ಲಿ ಎಷ್ಟು ಜನರಿಗೆ ಅವಕಾಶ ಕೊಡಬೇಕು ಎಂಬ ಬಗ್ಗೆ ದೇವಸ್ಥಾನಕ್ಕೆ ಸಾಕಷ್ಟು ಗೊಂದಲ ಇದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅರ್ಚಕರು ಜಿಲ್ಲಾಡಳಿತ ಚರ್ಚೆ ನಡೆಸಿ ನಿಯಮಗಳನ್ನು ರೂಪಿಸಲಿದ್ದಾರೆ.

    ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಮಧ್ಯಾಹ್ನ ಬರುವ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಇದೆ. ರಾತ್ರಿ ಊಟದ ವ್ಯವಸ್ಥೆ ಸದ್ಯಕ್ಕೆ ಇಲ್ಲ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳು ಆರಂಭವಾದರೂ ಕೇರಳ, ತಮಿಳುನಾಡು ಭಕ್ತರು ಸದ್ಯಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ.

    ನಾನು ತಿಂಗಳಿಗೆ ಒಂದು ಬಾರಿಯಾದರೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಮಾಡುತ್ತೇನೆ. ಆದರೆ ಕಳೆದ 5 ತಿಂಗಳಿಂದ ದೂರದಲ್ಲಿ ನಿಂತು ದೇವರ ದರ್ಶನ ಮಾಡುತ್ತಿದ್ದೆ. ಇದರಿಂದ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಮಾಡುವುದು ಮನಸ್ಸಿಗೆ ಕಿರಿಕಿರಿ ಮಾಡುತ್ತಿತ್ತು. ಇದೀಗ ದೇವಸ್ಥಾನದಲ್ಲಿ ದೇವರ ಸೇವೆಗಳು ಆರಂಭವಾಗುತ್ತದೆ ಎಂದು ಕೇಳಿ ಖುಷಿಯಾಗಿದೆ. ದೇವರನ್ನು ಹತ್ತಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಅದರಲ್ಲೂ ಆಷಾಢ, ಶ್ರಾವಣ ಮಾಸದಲ್ಲಿ ದೇವಿ ದೇವಸ್ಥಾನಗಳಿಗೆ ಹಲವಾರು ವರ್ಷಗಳಿಂದ ಭೇಟಿ ಕೊಡುತ್ತಿದ್ದೇನೆ. ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭವಾಗಿದೆ ಎಂದು ತಿಳಿದು ಬಹಳ ಸಂತೋಷವಾಗುತ್ತಿದೆ ಎಂದು ಮೂಕಾಂಬಿಕೆಯ ಭಕ್ತೆ ಸಂಧ್ಯಾ ರಮೇಶ್ ಹೇಳಿದ್ದಾರೆ.

  • ಅರ್ಚಕರಿಗೆ ಕೊರೊನಾ – ಶ್ರೀಭೋಗನಂದೀಶ್ವರ ದೇವಾಲಯ ಬಂದ್

    ಅರ್ಚಕರಿಗೆ ಕೊರೊನಾ – ಶ್ರೀಭೋಗನಂದೀಶ್ವರ ದೇವಾಲಯ ಬಂದ್

    ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇವಾಲಯದ ಅರ್ಚಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇವಾಲಯವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

    ದೇವಾಲಯದಲ್ಲಿನ ಇಬ್ಬರು ಅರ್ಚಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ದೇವಾಲಯವನ್ನು ಇಂದಿನಿಂದ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅರ್ಚಕರಿಗೆ ಕೊರೊನಾ ಸೋಂಕು ಹಿನ್ನೆಲೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ದೇವಾಲಯದ ಪ್ರಮಖ ಗೇಟ್‍ನ್ನು ಸಂಪೂರ್ಣ ಮುಚ್ಚಿ ಟೇಪ್ ಮಾಡಲಾಗಿದೆ. ಇಂದು ಸಹ ಜಿಲ್ಲೆಯಲ್ಲಿ 102 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,526 ಕ್ಕೆ ಏರಿಕೆಯಾಗಿದೆ. ಇದುವರೆಗೂ 3624 ಮಂದಿ ಗುಣಮುಖರಾಗಿದ್ದು, ಸದ್ಯ 836 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೊನಾದಿಂದ ಇದುವರೆಗೂ 65 ಮಂದಿ ಸಾವನ್ನಪ್ಪಿದ್ದಾರೆ.