Tag: ದೇವಸ್ಥಾನ

  • ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    – ಇದು ನೆಹರು ದೇಶವಲ್ಲ, ಮೋದಿ ದೇಶ
    – ಬೆದರಿಕೆ ಕರೆ ವಿರುದ್ಧ ದೂರು ದಾಖಲು

    ಮಂಗಳೂರು: ದೇವಸ್ಥಾನದ ನವರಾತ್ರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ.

    ಮಂಗಳೂರು ಹೊರವಲಯದ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಕೊಪ್ಪರಿಗೆ ಇಡುವ ಕಾರ್ಯಕ್ರಮವಿತ್ತು. ಇದಕ್ಕೆ ಕ್ಷೇತ್ರದ ಆಹ್ವಾನದಂತೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭೇಟಿ ನೀಡಿದ್ದರು. ಅದೇ ವೇಳೆ ಕೊಪ್ಪರಿಗೆ ಇಡುವ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿತ್ತು. ಹೀಗಾಗಿ ಕ್ಷೇತ್ರಾಡಳಿತ ಮಂಡಳಿಯವರು ಮಾಜಿ ಶಾಸಕ ಮೊಯಿದ್ದೀನ್ ಬಾವಾರಿಂದಲೂ ಕೊಪ್ಪರಿಗೆಗೆ (ಅನ್ನದಾನಕ್ಕೆ ಅಕ್ಕಿ ಸಂಗ್ರಹಿಸುವ ದೊಡ್ಡ ಪಾತ್ರೆ) ಅಕ್ಕಿ ಹಾಕುವಂತೆ ಹೇಳಿದ್ದು, ಬಾವಾ ಅವರು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದಾರೆ.

    ಇದರ ವೀಡಿಯೋ ವೈರಲ್ ಆಗಿ ಪರ ವಿರೋಧ ಚರ್ಚೆ ನಡೆದಿತ್ತು. ಇದೇ ವೇಳೆ ಮುಂಬೈನಿಂದ ಅನಿಲ್ ಎಂದು ಹೇಳಿಕೊಂಡ ವ್ಯಕ್ತಿ ಮೊಯಿದ್ದೀನ್ ಬಾವಾ ಅವರ ಮೊಬೈಲ್‍ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಿಂದೂ ದೇವಸ್ಥಾನದಲ್ಲಿ ನೀವು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದು ಯಾಕೆ? ನೀವು ದನದ ಮಾಂಸ ತಿನ್ನೋರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗೋದು ಸರಿಯಲ್ಲ. ಇದು ನೆಹರು ದೇಶವಲ್ಲ, ಮೋದಿಯ ದೇಶ, ಇನ್ನು ಮುಂದೆ ಹೀಗೆಲ್ಲಾ ಹೋದ್ರೆ ಹುಷಾರ್ ಎಂದು ತುಳುವಿನಲ್ಲಿ ಮಾತಾಡಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಕರೆಯ ಬಗ್ಗೆ ಮೊಯಿದ್ದೀನ್ ಬಾವಾ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಸುಂಕದಕಟ್ಟೆ ದೇವಸ್ಥಾನದ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೇಳಿಕೆ ನೀಡಿದ್ದು, ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಅಲ್ಲಿನ ಸ್ವಾಮೀಜಿಯವರ ಮಗ ನನ್ನನ್ನು ಆಹ್ವಾನಿದ್ದರು. ನಾನು ಅಲ್ಲಿನ ಮಾಜಿ ಶಾಸಕನ ನೆಲೆಯಲ್ಲಿ ಅಲ್ಲಿಗೆ ಹೋಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕೊಪ್ಪರಿಗೆಗೆ ಅಕ್ಕಿಯನ್ನ ಹಾಕುವ ಧಾರ್ಮಿಕ ಕಾರ್ಯ ನಡೆಯುತ್ತಿತ್ತು. ದೇವರ ಅನುಗ್ರಹದಂತೆ ನನಗೆ ಆ ಅವಕಾಶ ಸಿಕ್ಕಿತು ಅಂದುಕೊಳ್ತೇನೆ. ಆಗಷ್ಟೇ ಹಾಲಿ ಶಾಸಕರು ಬಂದು, ಅರ್ಜೆಂಟ್ ಇದೆ ಅಂತ ಹೋದರು ಅನ್ನೋದು ಗೊತ್ತಾಯ್ತು. ಅಲ್ಲಿದ್ದವರು ನನಗೆ ಅಕ್ಕಿ ಹಾಕಿ ಅಂತ ಹೇಳಿದಾಗ ಹಾಕಿದೆ.

    ನಾನು ಜಾತಿವಾದಿಯಲ್ಲ, ಜಾತ್ಯಾತೀತ ನೆಲೆಯಲ್ಲಿ ಮಾಡಿದೆ. ಇದರಲ್ಲಿ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಅಲ್ಲಿ ಸೋತಿದ್ದರೂ ಜನರ ಪ್ರೀತಿ ಇಂದಿಗೂ ನನಗಿದೆ. ಚುನಾವಣೆ ವೇಳೆ ನಡೆದ ಒಂದು ಕೊಲೆಯನ್ನು ನನ್ನ ತಲೆಗೆ ಕಟ್ಟಿ ಸೋಲಿಸಿದ್ದರು. ಈ ಷಡ್ಯಂತ್ರದಿಂದ ಭರತ್ ಶೆಟ್ಟಿ ಅಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಪ್ರತಿಕ್ರಿಯಿಸಿದ್ದಾರೆ.

  • ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಮೊಸಳೆ

    ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಮೊಸಳೆ

    ಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ಇಂದು ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

    ಗರ್ಭಗುಡಿ ಬಳಿ ಬಂದಿದ್ದು, ಈ ಕ್ಷೇತ್ರದ ಮೊಸಳೆ ಅನ್ನೋದು ವಿಶೇಷ. ಈ ಕ್ಷೇತ್ರ ಕೆರೆ ನೀರಿನ ಮಧ್ಯೆ ಇದ್ದು ಇಲ್ಲಿನ ಕೆರೆಯಲ್ಲಿ ವಾಸವಾಗಿರುವ ದೇವರ ಮೊಸಳೆ ಎಂದೇ ಪ್ರಸಿದ್ಧಿ ಪಡೆದ ‘ಬಬಿಯಾ’ ಅನ್ನುವ ಮೊಸಳೆ ಗರ್ಭಗುಡಿ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

    ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುವ ‘ಬಬಿಯಾ’ಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಆದರೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷ

    ಹೋಗುವುದು ಹೇಗೆ?
    ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಅನಂತಪುರ ದೇವಾಲಯವಿದೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ ಕಥೆಗಳಲ್ಲಿ ಕಾಣಬಹುದು. ಮಾತ್ರವಲ್ಲದೆ, ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು ಎಂದು ಪ್ರತೀತಿ. ದೇವಸ್ಥಾನದಲ್ಲಿ ಸಾಮಾನ್ಯವಾಗಿ ವಿಗ್ರಹವು ಕಲ್ಲಿನಿಂದಲೋ, ಲೋಹದಿಂದಲೋ ಕೆತ್ತಲ್ಪಟ್ಟಿರುತ್ತದೆ. ಆದರೆ ಇಲ್ಲಿನ ದೇವರ ಮೂರ್ತಿಯು ಸಂಪೂರ್ಣವಾಗಿ ಆಯುರ್ವೇದದ ಗಿಡಮೂಲಿಕೆಗಳಿಂದ, ವಿವಿಧ ದ್ರವ್ಯಗಳ ಲೇಪನದಿಂದ ತಯಾರಿಸಿದ್ದಾಗಿದೆ. ಇದಕ್ಕೆ ‘ಕಡುಶರ್ಕರ ಪಾಕ’ದ ವಿಗ್ರಹ ಎಂದು ಹೆಸರಿದೆ.

    ದೇವರ ಮೊಸಳೆ ಬಬಿಯಾ:
    ಹಲವಾರು ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿ ಪ್ರಾಣಿಗಳಿಗಳಿರುತ್ತದೆ. ಆದರೆ ಈ ದೇವಾಲದ ಕೆರೆಯ ನಡುವಿನಲ್ಲಿ ನೆಲೆಸಿರುವ ‘ಅನಂತಪದ್ಮಾನಾಭನಿಗೆ ಮೊಸಳೆ-ಬಬಿಯಾ’ ‘ಕಾವಲು ಕಾಯುವ ಕೆಲಸ’ ಮಾಡುತ್ತದೆ ಎನ್ನುವ ನಂಬಿಕೆ ಇದೆ. ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಈ ಮೊಸಳೆಯೂ ಕೂಡ ಇಲ್ಲೇ ವಾಸವಾಗಿರುತ್ತದೆ. ದೇವರ ನೈವೇಧ್ಯವೇ ಇದಕ್ಕೆ ನಿತ್ಯ ಆಹಾರ. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿದೆ. ಹಾಗೆಂದು ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲವಂತೆ.

    ಈ ದೇವಾಲಯದ ಹತ್ತಿರದಲ್ಲಿ ಶ್ರೀ ಮಹಾಗಣಪತಿಯ ಗುಡಿಯ ಇದೆ. ಅಷ್ಟೇ ಅಲ್ಲದೇ ಪುರಾತನ ಕಾಲದ ತುಳುಶಾಸನ ಇದೆ. ಪ್ರಧಾನ ದೇವಾಲಯದ ಬದಿಯಲ್ಲಿಯೇ ಗೋಶಾಲಕೃಷ್ಣ ದೇವರು, ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಗುಡಿಯನ್ನೂ ಕಾಣಬಹುದು. ಹಾಗೆಯೇ ಶ್ರೀ ವನಶಾಸ್ತಾರ ಗುಡಿಯೂ ಇದೆ. ಈ ಗುಡಿ ಬಳಿಯೇ ಇನ್ನೊಂದು ಸಣ್ಣ ಕೆರೆ ಕಾಣಬಹುದು. ದೇವಾಲಯದ ವೆಬ್ ಸೈಟ್: www.ananthapuratemple.com

  • ದೇವರಿಗೆ ಕೈಮುಗಿದು ಮಂಗಳಾರತಿ ದುಡ್ಡು ಎಗರಿಸಿದ ಭಕ್ತೆ!

    ದೇವರಿಗೆ ಕೈಮುಗಿದು ಮಂಗಳಾರತಿ ದುಡ್ಡು ಎಗರಿಸಿದ ಭಕ್ತೆ!

    – ಖನರ್ತಾಕ್ ಮಹಿಳೆಯ ವೀಡಿಯೋ ಸೆರೆ

    ಮಡಿಕೇರಿ: ದೇವರಿಗೆ ವಿನಮ್ರವಾಗಿ ಕೈ ಮುಗಿದು, ಸುತ್ತು ಬಂದ ಬಳಿಕ ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.

    ಅಕ್ಟೋಬರ್ 12 ರಂದು ನಡೆದಿರುವ ಮಹಿಳೆಯ ಖತರ್ನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುಧವಾರ ಸಂಜೆ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲೇನಿದೆ?
    ಮಹಿಳೆ ಮೊದಲು ದೇವರಿಗೆ ಕೈಮುಗಿದು ಅತ್ತ-ಇತ್ತ ನೋಡುತ್ತಾಳೆ. ನಂತರ ಗರ್ಭಗುಡಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ದುಡ್ಡು ಎಗರಿಸಿದ್ದಾಳೆ. ಕೈಮುಗಿದು ಕುಂಕುಮ ಪಡೆದು ಮತ್ತೊಮ್ಮೆ ತಟ್ಟೆಯಲ್ಲಿದ್ದ ಹಣವನ್ನು ಕದ್ದಿದ್ದಾಳೆ. ಅಲ್ಲದೆ ಹೊರಬಂದು ಪರಾರಿಯಾಗಲು ಲಿಫ್ಟ್ ಕೊಡುವಂತೆ ಬೈಕ್ ಸವಾರ ಬಳಿ ಕೇಳಿಕೊಳ್ಳುತ್ತಾಳೆ. ಅದು ಸಾಧ್ಯವಾಗದಿದ್ದಾಗ ಧಾವಂತದಿಂದ ಎಸ್ಕೇಪ್ ಆಗಿದ್ದಾಳೆ.

  • ಭಾರೀ ಮಳೆ- ನೋಡ ನೋಡುತ್ತಲೇ ಕುಸಿದು ಬಿತ್ತು ದೇವಸ್ಥಾನದ ಗೋಡೆ

    ಭಾರೀ ಮಳೆ- ನೋಡ ನೋಡುತ್ತಲೇ ಕುಸಿದು ಬಿತ್ತು ದೇವಸ್ಥಾನದ ಗೋಡೆ

    ಗದಗ: ಜಿಲ್ಲೆಯನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು, ನೋಡ ನೋಡುತ್ತಿದ್ದಂತೆ ದೇವಸ್ಥಾನದ ಗೋಡೆ ಕುಸಿದು ಬಿದ್ದಿದೆ.

    ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯ ದೇವಸ್ಥಾನದ ಗೋಡೆ ನೋಡ ನೋಡುತ್ತಲೇ ಕುಸಿದು ಬಿದ್ದಿದೆ. ಕಸಬಾ ಓಣಿಯ ಶಾಲಾ ಶ್ರೀಬಸವೇಶ್ವರ ದೇವಸ್ಥಾನದ ಗೋಡೆ ಕುಸಿತವಾಗಿದೆ. ಏಕಾಏಕಿ ಗೋಡೆ ಕುಸಿದಿದ್ದನ್ನು ಕಂಡು ಸ್ಥಳಿಯರು ಭಯಭೀತರಾಗಿದ್ದಾರೆ. ದೇವಸ್ಥಾನದ ಬಳಿ ಯಾರೂ ಇಲ್ಲದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಗೋಡೆ ಕುಸಿತವಾಗುವುದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಈ ನಿರಂತರ ಮಳೆಗೆ ನರಗುಂದ ತಾಲೂಕಿನಾದ್ಯಂತ ಒಂದುವಾರದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ. ಭಾರೀ ಮಳೆಯಿಂದಾಗಿ ಗೋಡೆಗಳು ತಂಪು ಹಿಡಿಯುತ್ತಿದ್ದು, ಹೀಗಾಗಿ ಮಣ್ಣಿನ ಗೋಡೆಯ ಮನೆಗಳು, ದೇವಸ್ಥಾನಗಳು, ಭವನಗಳು, ಕೋಟೆ ಗೋಡೆಗಳು, ವಿದ್ಯುತ್ ಕಂಬ, ಮರಗಳು ಧರೆಗೆ ಉರುಳುತ್ತಿವೆ. ವರುಣನ ಆರ್ಭಟದಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.

  • ಹುಟ್ಟುಹಬ್ಬ ಆಚರಿಸಲು ದೇವಸ್ಥಾನಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಸಾವು

    ಹುಟ್ಟುಹಬ್ಬ ಆಚರಿಸಲು ದೇವಸ್ಥಾನಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಸಾವು

    – ಕಾಲುವೆಯಲ್ಲಿ ಮುಳುಗಲು ಹೋದ ಬರ್ತ್ ಡೇ ಹುಡುಗಿ

    ಚೆನ್ನೈ: ಒಂದೇ ಕುಟುಂಬದ ಮೂವರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ತಿರುಪ್ಪೂರು ಜಿಲ್ಲೆಯ ಪಲ್ಲಡಂ ಬಳಿ ನಡೆದಿದೆ. ಈ ಕಾಲುವೆಯೂ ಪರಂಬಿಕುಲಂ-ಅಲಿಯಾರ್ ಯೋಜನೆ (ಪಿಎಪಿ) ಅಡಿಯಲ್ಲಿ ನಿರ್ಮಿಸಲಾಗಿದೆ.

    ಮಂಗಳವಾರ ಈ ಘಟನೆ ನಡೆದಿದ್ದು, ಮೃತರನ್ನು ದೇವಿ (18), ಈಕೆಯ ಪತಿ ಸೇತುಪತಿ (23) ಮತ್ತು ದೇವಿಯ ಸಹೋದರಿ ಶರಣ್ಯಾ (12) ಎಂದು ಗುರುತಿಸಲಾಗಿದೆ. ಮಂಗಳವಾರ ದೇವಿ ಸಹೋದರಿ ಶರಣ್ಯಾಳ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ದೇವಾಲಯವು ಪಿಎಪಿ ಕಾಲುವೆಯ ಬಳಿ ಇದ್ದುದರಿಂದ ಶರಣ್ಯಾ ಕಾಲುವೆಯಲ್ಲಿ ನೀರು ಮುಳುಗಲು ಇಷ್ಟಪಟ್ಟಿದ್ದಳು.

    ಅದರಂತೆಯೇ ಕುಟುಂಬದವರನ್ನು ದಡದಲ್ಲಿ ಕಾಯುವಂತೆ ಹೇಳಿ ಕಾಲುವೆಗೆ ಹೋಗಿದ್ದಾಳೆ. ಆದರೆ ಶರಣ್ಯಾ ಆಕಸ್ಮಿಕವಾಗಿ ಕಾಲು ಜಾರಿಗೆ ಕಾಲುವೆಗೆ ಬಿದ್ದಿದ್ದು, ತಕ್ಷಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಇದನ್ನು ನೋಡಿದ ದೇವಿ ಮತ್ತು ಸೇತುಪತಿ ಕೂಡ ನೀರಿಗೆ ಹಾರಿದ್ದಾರೆ. ಆದರೆ ಅವರು ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದಡದಲ್ಲಿದ್ದ ದೇವಿ ತಾಯಿ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ಪಡೆ ಮತ್ತು ಪೊಲೀಸರು ಮಂಗಳವಾರ ಸಂಜೆ ಬಂದಿದ್ದು, ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಅಂದೂ ಯಾರ ಮೃತದೇಹವೂ ಪತ್ತೆಯಾಗಿರಲಿಲ್ಲ.

    ಏಳು ಜನರ ರಕ್ಷಣಾ ತಂಡವು ಕಾಲುವೆಯಿಂದ ಮೂರು ಶವಗಳನ್ನು ಹೊರತೆಗೆದಿದ್ದಾರೆ. ದೇವಿಯ ಮೃತದೇಹ ಬುಧವಾರ ಪತ್ತೆಯಾಗಿತ್ತು. ಸೇತುಪತಿ ಮತ್ತು ಶರಣ್ಯಾಳ ಮೃತದೇಹ ಗುರುವಾರ ಪತ್ತೆಯಾಗಿವೆ. ಸದ್ಯಕ್ಕೆ ಮೂವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಸಿ.ರಾಮಚಂದ್ರನ್ ತಿಳಿಸಿದ್ದಾರೆ.

    ಈ ಘಟನೆ ಕುರಿತು ಕಾಮನೈಕನ್‍ಪಾಲಯಂ ಪೊಲೀಸರು ಅಸ್ವಾಭಾವಿಕ ಸಾವು ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಫೆಬ್ರವರಿಯಲ್ಲಿ ಕೊಯಮತ್ತೂರು ಜಿಲ್ಲೆಯ ಅಲಿಯಾರ್ ಬಳಿ 8 ವರ್ಷದ ಬಾಲಕ ರೋಹಿತ್ ಪಿಎಪಿ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದನು.

  • ಗೋಕರ್ಣ ಆತ್ಮಲಿಂಗ ದರ್ಶನಕ್ಕೆ ಸೋಮವಾರದಿಂದ ಅವಕಾಶ-ಕಟ್ಟು ನಿಟ್ಟಿನ ವಸ್ತ್ರ ಸಂಹಿತೆ

    ಗೋಕರ್ಣ ಆತ್ಮಲಿಂಗ ದರ್ಶನಕ್ಕೆ ಸೋಮವಾರದಿಂದ ಅವಕಾಶ-ಕಟ್ಟು ನಿಟ್ಟಿನ ವಸ್ತ್ರ ಸಂಹಿತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಆತ್ಮಲಿಂಗ ದರ್ಶನಕ್ಕೆ ನಾಳೆಯಿಂದ ಭಕ್ತರಿಗೆ ಎಲ್ಲ ಪ್ರಕಾರದ ಸೇವೆಗಳು ಪ್ರಾರಂಭವಾಗಲಿವೆ. ಕಳೆದ ಮಾರ್ಚ್ ನಲ್ಲಿ ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆ ಮಂದಿರದಲ್ಲಿ ನಿತ್ಯ ಕಾರ್ಯಗಳ ಹೊರತಾಗಿ ಉಳಿದೆಲ್ಲ ಸೇವೆಗಳನ್ನು ರದ್ದು ಪಡಿಸಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

    ಕಳೆದ ಒಂದು ತಿಂಗಳಿಂದ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಕಿದ ಭಕ್ತರಿಗೆ ನಂದಿ ಮಂಟಪದವರೆಗೆ ಬಂದು ಆತ್ಮಲಿಂಗ ದರ್ಶನ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸೇವೆ ಆರಂಭದ ಹಿನ್ನೆಲೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಂದಿರದಲ್ಲಿ ಈಗಾಗಲೇ ಮಾಡಿಕೊಳ್ಳಲಾಗಿದೆ. ಸ್ಥಳೀಯ ಉಪಾಧಿವಂತರಿಂದ ಪೂಜೆ ಮಾಡಿಸುವ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಂಕಲ್ಪ ಮಾಡಿಸುವ ಸ್ಥಳದಲ್ಲಿ ಮತ್ತು ಆತ್ಮಲಿಂಗಕ್ಕೆ ಪೂಜೆಗೆ ಹೋಗುವ ವೇಳೆ ಸರತಿ ಸಾಲಿನಲ್ಲಿ ಪ್ರತ್ಯೇಕವಾದ ಮಾರ್ಕ್ ಹಾಕಲಾಗಿದೆ.

    ಸರ್ಕಾರಿ ನಿಯಮದಂತೆ ನಿರ್ದಿಷ್ಟ ಸಂಖ್ಯೆಯ ಭಕ್ತರನ್ನು ಮಾತ್ರ ಒಮ್ಮೆ ಮಂದಿರದ ನಂದಿ ಮಂಟಪ ಮತ್ತು ಗರ್ಭಗುಡಿಗೆ ಬಿಡಲಾಗುವುದು. ಉಳಿದವರು ಮಂದಿರದ ಹೊರ ಪ್ರಾಂಗಣದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಗರ್ಭಗುಡಿಯಲ್ಲಿಯೂ ಪರಸ್ಪರ ಅಂತರ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ ಹೆಗಡೆ ಮಾಹಿತಿ ನೀಡಿದ್ದಾರೆ.

    ವಸ್ತ್ರ ಸಂಹಿತೆ ಕಡ್ಡಾಯ: ದೇವರ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ವಸ್ತ್ರ ಸಂಹಿತೆ ಕಡ್ಡಾಯವಾಗಿದ್ದರೂ ಪುರುಷರಿಗೆ ಪ್ಯಾಂಟ್ ಧರಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಪುರುಷರು ಲುಂಗಿ, ದೋತಿ ಹಾಗೂ ಮಹಿಳೆಯರು ಸೀರೆ ಹಾಗೂ ಚೂಡಿ ಮಾತ್ರ ಧರಿಸಿ ಗರ್ಭಗುಡಿ ಪ್ರವೇಶ ಮಾಡಬಹುದಾಗಿದೆ.

    ಒಂದು ವೇಳೆ ಸ್ತ್ರೀಯರು ಪ್ಯಾಂಟ್/ಜೀನ್ಸ್ ಧರಿಸಿದರೆ ಅಥವಾ ಶರ್ಟ ಧರಿಸಿ ಬಂದಲ್ಲಿ ಹಾಗೂ ಪುರುಷರು ಲುಂಗಿ ಅಥವಾ ಪಂಚೆ ಧರಿಸದಿದ್ದರೆ ಅಂತವರಿಗೆ ಆತ್ಮ ಲಿಂಗ ದರ್ಶನಕ್ಕೆ ಅನುಮತಿ ಇರುವುದಿಲ್ಲ. ಇದಲ್ಲದೇ ದೇವಸ್ಥಾನದ ಒಳಗೆ ಆಂತರಿಕ ನಿರ್ಭಂಧಗಳನ್ನು ಸಹ ಹಾಕಲಾಗಿದ್ದು, ಸದ್ಯ ಈಶ್ವರನ ಭಕ್ತರಿಗೆ ನಾಳೆಯಿಂದ ಆತ್ಮಲಿಂಗ ದರ್ಶನ ಭಾಗ್ಯ ದೊರೆಯಲಿದೆ.

  • ಶಾಸಕರಿಗೆ ಕೊರೊನಾ – ಮಂಡಿಯಲ್ಲಿ ಮೆಟ್ಟಿಲೇರಿ ಅಭಿಮಾನಿಗಳಿಂದ ಪ್ರಾರ್ಥನೆ

    ಶಾಸಕರಿಗೆ ಕೊರೊನಾ – ಮಂಡಿಯಲ್ಲಿ ಮೆಟ್ಟಿಲೇರಿ ಅಭಿಮಾನಿಗಳಿಂದ ಪ್ರಾರ್ಥನೆ

    ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರಪಾಟೀಲ್ ಮುನೇನಕೊಪ್ಪರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದೀಗ ಶಾಸಕ ಶಂಕರಪಾಟೀಲ್ ಅವರ ಅಭಿಮಾನಿಗಳು ಶಾಸಕರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಸಾಯಿಬಾಬಾ ಮಂದಿರದ ಮೆಟ್ಟಿಲುಗಳನ್ನು ಮಂಡಿಯಲ್ಲಿ ಏರಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 30ರಂದು ಶಾಸಕ ಶಂಕರಪಾಟೀಲ್ ಮುನೇನಕೊಪ್ಪರಿಗೆ ಸೋಂಕು ತಗುಲಿದ್ದು, ಶಾಸಕರು ಬೇಗನೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

    ಹುಬ್ಬಳ್ಳಿ ನಗರದ ಶಿರಡಿನಗರದಲ್ಲಿರುವ ಸಾಯಿಬಾಬಾ ಮಂದಿರದ ಮೆಟ್ಟಿಲುಗಳನ್ನು ಮಂಡಿಗಾಲಿನಲ್ಲಿ ಏರಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕರು ಶೀಘ್ರವೇ ಗುಣಮುಖರಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಅವರ ಅಭಿಮಾನಿಗಳಾದ ಮಂಜುನಾಥ್ ಹೆಬಸೂರ. ವಿಜಯಕಾಂತ ನಿಡವಣಿ, ಶಂಕರಗೌಡ ಪಾಟೀಲ, ಸಂತೋಷ ಹಿರೇಮಠ, ಅಣ್ಣಪ್ಪ ಸೇರಿದಂತೆ ಹಲವಾರು ಅಭಿಮಾನಿಗಳು ಸಾಯಿಬಾಬಾ ಮಂದಿರ ಮೆಟ್ಟಿಲುಗಳನ್ನು ಮಂಡಿಗಾಲಿನಲ್ಲೆ ಏರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

  • ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕ್ತಿದ್ದ ವೃದ್ಧೆಯ ತಲೆಗೆ ಹೊಡೆದು ಕೊಲೆ

    ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕ್ತಿದ್ದ ವೃದ್ಧೆಯ ತಲೆಗೆ ಹೊಡೆದು ಕೊಲೆ

    – 20 ಗ್ರಾಂ ತೂಕದ ಚಿನ್ನಕ್ಕಾಗಿ ಹಾಡಹಗಲೇ ಮರ್ಡರ್

    ಚಿಕ್ಕಮಗಳೂರು: ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ವೃದ್ಧೆಗೆ ದುಷ್ಕರ್ಮಿಗಳು ಹಿಂಬದಿಯಿಂದ ಬಂದು ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲದೇ ಆಕೆಯ ಕೊರಳಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

    ನಾಗರತ್ನ (70) ದೇವಸ್ಥಾನದ ಆವರಣದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ನಾಗರತ್ನ ಬಹಳ ವರ್ಷಗಳಿಂದ ಅಜ್ಜಂಪುರದ ಪಟ್ಟಣದಲ್ಲಿದ್ದ ಶಿವಾನಂದಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಪೂಜೆ ಮಾಡಿ ದೇವಸ್ಥಾನದ ಸುತ್ತಲು ಪ್ರದಕ್ಷಿಣಿ ಹಾಕಿಕೊಂಡು ಬರುತ್ತಿದ್ದರು. ಆದರೆ ಇಂದು ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವೃದ್ಧೆಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ನಂತರ ಆಕೆಯ ಕೊರಳಲಿದ್ದ 20 ಗ್ರಾಮ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ.

    ಬಲವಾದ ಹೊಡೆತದಿಂದ ವೃದ್ಧೆ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಹಾಡಹಗಲೇ ದೇವಸ್ಥಾನದಲ್ಲಿ ನಡೆದ ಈ ಘಟನೆ ಕಂಡು ತಾಲೂಕಿನ ಜನ ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯವನ್ನ ಗೊತ್ತಿರುವವರೇ ಮಾಡಿರೋದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.

  • ಗೋಕರ್ಣದ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ- ಭಾರೀ ಅನಾಹುತ ತಪ್ಪಿಸಿದ ಮರ

    ಗೋಕರ್ಣದ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ- ಭಾರೀ ಅನಾಹುತ ತಪ್ಪಿಸಿದ ಮರ

    – ಅಪಾಯದಿಂದ ಪಾರಾದ ನಿವಾಸಿಗಳು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪುರಾಣ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ.

    ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಕರ್ಣದ ಮಾಣೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿರುವ ಗುಡ್ಡ ಕುಸಿದಿದ್ದು, ಈ ವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ. ಆದರೆ ಪಕ್ಕದಲ್ಲೇ ಬೃಹದಾಕಾರದ ಮರವಿದ್ದ ಕಾರಣ ಗುಡ್ಡದಿಂದ ಜಾರಿದ ಕಲ್ಲುಬಂಡೆ ಮರದ ಬಳಿ ನಿಂತಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇದರಿಂದಾಗಿ ಸ್ಥಳೀಯರು ಪ್ರಾಣಾಪಾಯದಿಂದ ಪಾರಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

    ಬಂಡೆ ಬಿದ್ದ ಜಾಗದ ಸುತ್ತ ಹಾಗೂ ಪಕ್ಕದಲ್ಲೇ ಮನೆಗಳಿದ್ದು, ಗುಡ್ಡದ ಬಲಭಾಗಕ್ಕೆ ಕಲ್ಲುಬಂಡೆ ಜಾರಿದಲ್ಲಿ ಮನೆಗಳ ಮೇಲೆ ಬೀಳುತಿತ್ತು. ಹಾಗೆಯೇ ಎಡಭಾಗಕ್ಕೆ ಜಾರಿದ್ದರೆ ದೇವಸ್ಥಾನದ ಮೇಲೆ ಬೀಳುತಿತ್ತು. ಅದೃಷ್ಟವಶಾತ್ ಬಂಡೆ ಮರದ ಬಳಿಯೇ ಜಾರಿ ನಿಂತಿದ್ದರಿಂದ ದೊಡ್ಡ ಹಾನಿ ತಪ್ಪಿದಂತಾಗಿದೆ.

  • ಅಧಿವೇಶನದ ಮಧ್ಯೆ ತಿರುಪತಿಗೆ ತೆರಳಲಿದ್ದಾರೆ ಸಿಎಂ ಯಡಿಯೂರಪ್ಪ

    ಅಧಿವೇಶನದ ಮಧ್ಯೆ ತಿರುಪತಿಗೆ ತೆರಳಲಿದ್ದಾರೆ ಸಿಎಂ ಯಡಿಯೂರಪ್ಪ

    ಬೆಂಗಳೂರು: ಒಂದು ಕಡೆ ಕೊರೊನಾ ಮಧ್ಯೆಯೂ ಅಧಿವೇಶನ ನಡೆಯುತ್ತಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಬಂದ್ ಮಾಡುವ ಸಾಧ್ಯತೆ ಇದೆ. ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇಗಲ ದರ್ಶನಕ್ಕೆ ಮುಂದಾಗಿದ್ದಾರೆ.

    ಸಿಎಂ ಯಡಿಯೂರಪ್ಪ ಬುಧವಾರ ರಾತ್ರಿ ತಿರುಪತಿಗೆ ತೆರಳಲಿದ್ದಾರೆ. ಅಧಿಕೃತ ಕಾರ್ಯಕ್ರಮದೊಂದಿಗೆ ದೇವರ ದರ್ಶನ ಪಡೆಯಲಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಬುಧವಾರ ಸಂಜೆ 5 ಗಂಟೆಗೆ ವಿಶೇಷ ವಿಮಾನದ ಮೂಲಕ ತಿರುಪತಿಗೆ ಪ್ರಯಾಣ ಬೆಳಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬುಧವಾರ ರಾತ್ರಿ ಸುಮಾರು 7.15ಕ್ಕೆ ತಿರುಮಲದ ಪದ್ಮಾವತಿ ಗೆಸ್ಟ್ ಹೌಸ್‍ನಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಗುರುವಾರ ಬೆಳಗ್ಗೆ ಸುಮಾರು 6.20ಕ್ಕೆ ಸಿಎಂ ಯಡಿಯೂರಪ್ಪ ಅವರು ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

    ದೇವರ ದರ್ಶನದ ನಂತರ ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಕರ್ನಾಟಕ ಸಿಎಂ ಯಡಿಯೂರಪ್ಪ ಮತ್ತು ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಗುರುವಾರ ಬೆಳಗ್ಗೆ 10 ಗಂಟೆಗೆ ಯಡಿಯೂರಪ್ಪ ತಿರುಪತಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ.