Tag: ದೇವಸ್ಥಾನ

  • ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಕೋಲಾರ: ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಗರಾಯನಹಳ್ಳಿಯಲ್ಲಿ ನಡೆದಿದೆ.

    ಹಳ್ಳಿಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ಹೊಸ ವರ್ಷಾಚರಣೆಯ ಅಂಗವಾಗಿ ವಿಶೇಷ ಪೂಜೆ ನಡೆದಿತ್ತು. ನಂತರದಲ್ಲಿ ದೇವಾಲಯದ ಆಡಳಿತ ಮಂಡಳಿ ಮಾಡಿಸಿದ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿದೆ.

    ಪ್ರಸಾದದ ರೂಪದಲ್ಲಿ ಚಿತ್ರಾನ್ನ ಹಾಗೂ ಕೇಸರಿಬಾತ್ ಸೇವಿಸಿದ ಭಕ್ತರು ಅಸ್ವಸ್ಥಗೊಂಡಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    ಅಸ್ವಸ್ಥತರ ಪೈಕಿ 12 ಜನ ಮಕ್ಕಳು, 30 ಕ್ಕೂ ಹೆಚ್ಚು ಜನ ಪುರುಷರು ಹಾಗೂ ಮಹಿಳೆಯರು ಇದ್ದಾರೆ. ಈಗಾಗಲೇ ಭಕ್ತರು ಗುಣಮುಖರಾಗಿ ಮನೆಗಳತ್ತ ತೆರಳುತ್ತಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಸಾವಿರ ಸೋಂಕು – ಬೆಂಗ್ಳೂರಲ್ಲಿ 810 ಕೇಸ್

  • ಸರ್ಕಾರಿ ನಿಯಂತ್ರಣದ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ- ಆದಾಯ ದೇವಾಲಯಗಳ ಅಭಿವೃದ್ಧಿಗೆ ಮೀಸಲು

    ಸರ್ಕಾರಿ ನಿಯಂತ್ರಣದ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ- ಆದಾಯ ದೇವಾಲಯಗಳ ಅಭಿವೃದ್ಧಿಗೆ ಮೀಸಲು

    – ಹಿಂದುತ್ವದ ಅಸ್ತ್ರ ಪ್ರಯೋಗಿಸಿದ ಸಿಎಂ

    ಹುಬ್ಬಳ್ಳಿ: ಇತ್ತೀಚಿಗೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅನುಮೋದನೆ ವೇಳೆ ಸಚಿವ ಈಶ್ವರಪ್ಪ ಒಂದು ಮಾತು ಹೇಳಿದ್ರು. ಹಿಂದೂ ಧರ್ಮದ ಉದ್ಧಾರಕ್ಕಾಗಿ, ಹಿತಕ್ಕಾಗಿ ಇನ್ನೂ ಮೂರು ಕಾಯ್ದೆ ತರ್ತೀವಿ ಎಂದು ಘೋಷಿಸಿದ್ರು. ಇದಕ್ಕೆ ಪೂರಕವಾದ ಬೆಳವಣಿಗೆಗಳು, ತಯಾರಿಗಳು ಪಕ್ಷದ ಒಳಗಿಂದೊಳಗೆ ಅತ್ಯಂತ ವೇಗವಾಗಿ ನಡೀತಿವೆ.

    ಇಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯ ಸಮಾರೋಪ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದುತ್ವದ ಅಸ್ತ್ರ ಪ್ರಯೋಗಿಸಿದ್ದಾರೆ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳನ್ನು ಶೀಘ್ರವೇ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ದೆಹಲಿಯಲ್ಲಿ ಎರಡೂ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ: ಡಿ.ಕೆ. ಶಿವಕುಮಾರ್

    ಇತರೆ ಧರ್ಮಗಳ ಪ್ರಾರ್ಥನಾ ಮಂದಿರಗಳು ಸ್ವಾತಂತ್ರ್ಯವಾಗಿವೆ. ಆದರೆ ನಮ್ಮ ಹಿಂದೂ ದೇವಾಲಯಗಳು ಮಾತ್ರ ಹಲವು ನಿಯಂತ್ರಣಕ್ಕೆ ಒಳಪಟ್ಟಿವೆ. ಹಲವು ಕಟ್ಟುಪಾಡುಗಳಿಗೆ ಒಳಪಟ್ಟು ಕಿರುಕುಳ ಅನುಭವಿಸ್ತಿವೆ. ದೇವಸ್ಥಾನದ ಆದಾಯ ಬೇರೆ ಕಡೆ ಹರಿದುಹೋಗದಂತೆ, ದೇವಸ್ಥಾನಗಳ ಆದಾಯವನ್ನು ದೇವಸ್ಥಾನಗಳಿಗೆ ಬಳಸುವ ಕಾರ್ಯವನ್ನು ನಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಜೆಟ್ ಅಧಿವೇಶನಕ್ಕೆ ಮುನ್ನವೇ ಇದಕ್ಕೆ ಸಂಬಂಧಿಸಿದ ಕಾನೂನು ಜಾರಿ ಮಾಡುವ ಸುಳಿವನ್ನು ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ್ದಾರೆ.

    ಇದೇ ವೇಳೆ ನಮ್ಮ ಅಜೆಂಡಾ ಕ್ಲಿಯರ್ ಆಗಿದ್ದು, ಕೊಪ್ಪಳದ ಅಂಜನಾದ್ರಿ ಕ್ಷೇತ್ರವನ್ನು ಅಯೋಧ್ಯೆಯ ಶ್ರೀರಾಮಚಂದ್ರನ ಮಂದಿರದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ ಪ್ರಧಾನಿ ಮೋದಿಯಿಂದಲೇ ಉದ್ಘಾಟನೆ ಮಾಡಿಸೋದಾಗಿ ಹೇಳಿದ್ದಾರೆ. ಇನ್ನು ಮತಾಂತರ ನಿಗ್ರಹ ಕಾಯ್ದೆ ಜಾರಿಗಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸುವುದಾಗಿ ಸಿಎಂ ಬೊಮ್ಮಾಯಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರನ್ನು ಬೆಳೆಸಿದ ಕಾಂಗ್ರೆಸ್, ಹಿಂದೂ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ: ಯೋಗಿ

    ಹೊಸ ಕಾನೂನು ಜಾರಿಗೆ ಬಂದ್ರೇ ರಾಜ್ಯದ 34,558 ದೇಗುಲಗಳು ಮುಕ್ತಗೊಳ್ಳಲಿವೆ. ಇದರಲ್ಲಿ ಎ ಗ್ರೇಡ್ ದೇಗುಲಗಳೇ 132 ಇದೆ. ಇವು 25 ಲಕ್ಷ ಮೇಲ್ಪಟ್ಟು ಅಧಿಕ ಆದಾಯ ತಂದುಕೊಡುವ ದೇಗುಲಗಳಾಗಿವೆ. ಐದರಿಂದ 25 ಲಕ್ಷದ ಒಳಗೆ ವಾರ್ಷಿಕ ಆದಾಯ ತಂದುಕೊಡುವ ಬಿ ಶ್ರೇಣಿಯ ದೇಗುಲಗಳ ಸಂಖ್ಯೆಯೇ 180 ಇದೆ. 5 ಲಕ್ಷದ ಒಳಗೆ ಸರ್ಕಾರಕ್ಕೆ ಆದಾಯ ತಂದುಕೊಡುವ ದೇಗುಲಗಳ ಸಂಖ್ಯೆ 34,246.

    ಈ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ?
    * ಚಾಮುಂಡಿ ದೇಗುಲ, ಚಾಮುಂಡಿ ಬೆಟ್ಟ, ಮೈಸೂರು
    * ಶ್ರೀಕಂಠೇಶ್ವರ ದೇಗುಲ, ನಂಜನಗೂಡು
    * ಕುಕ್ಕೆ ಸುಬ್ರಹ್ಮಣ್ಯ ದೇವಳ
    * ಘಾಟಿ ಸುಬ್ರಹ್ಮಣ್ಯ ದೇಗುಲ
    * ಕೊಲ್ಲೂರು ಮೂಕಾಂಬಿಕೆ ದೇಗುಲ
    * ಸವದತ್ತಿ ಯಲ್ಲಮ್ಮ ದೇಗುಲ
    * ಬಾದಾಮಿ ಬನಶಂಕರಿ ದೇಗುಲ
    * ಬೆಂಗಳೂರು ಬನಶಂಕರಿ ದೇಗುಲ
    * ಹಾಸನಾಂಬೆ ದೇವಾಲಯ, ಹಾಸನ
    * ನಿಮಿಷಾಂಬ ದೇವಾಲಯ, ಶ್ರೀರಂಗಪಟ್ಟಣ

    ಸಿಎಂ ಬಸವರಾಜ ಬೊಮ್ಮಾಯಿಯವರ ಘೋಷಣೆಗೆ ಪ್ರೇರಣೆ ಆಗಿದ್ದು ಬಹುಷಃ ಇತ್ತೀಚಿಗೆ ಉತ್ತರಾಖಂಡ್ ಸರ್ಕಾರ ತೆಗೆದುಕೊಂಡ ಖಡಕ್ ತೀರ್ಮಾನ. ಡಿಸೆಂಬರ್ ಮೂರರಂದು ವಿವಾದಾತ್ಮಕ ಚಾರ್‍ಧಾಮ್ ದೇವಸ್ಥಾನಗಳ ನಿರ್ವಹಣಾ ಮಂಡಳಿ ಕಾಯ್ದೆಯನ್ನು ಅಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಾಮಿ ರದ್ದು ಮಾಡಿದ್ದರು. ಈ ಮೂಲಕ ಚಾರ್‍ಧಾಮ್ ಕ್ಷೇತ್ರಗಳಾದ ಗಂಗೋತ್ರಿ, ಯಮುನೋತ್ರಿ, ಕೇದಾರ್‍ನಾಥ್, ಬದರಿನಾಥ್ ಸೇರಿ 53 ದೇಗುಲಗಳಿಗೆ ಸ್ವಾತಂತ್ರ್ಯ ನೀಡಿದ್ದರು. ವಿಧಾನಸಭೆ ಚುನಾವಣೆ ಸನಿಹದಲ್ಲಿರುವುದರಿಂದ ಉತ್ತರಾಖಂಡ್ ಬಿಜೆಪಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.

    ದ್ರಾವಿಡ ನಾಡು ತಮಿಳುನಾಡಿನಲ್ಲೂ ಇದಕ್ಕೆ ಸಂಬಂಧಿಸಿದ ಹೋರಾಟ ತೀವ್ರಗೊಂಡಿದೆ. ದೇಗುಲಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಕೆಲಸ ಆರಂಭ ಮಾಡಿದ್ದು ಬ್ರಿಟೀಷರು. 1863ರಲ್ಲಿಯೇ ಧಾರ್ಮಿಕ ದತ್ತಿ ಕಾಯ್ದೆಯನ್ನು ಈಸ್ಟ್ ಇಂಡಿಯಾ ಕಂಪನಿ ಜಾರಿಗೊಳಿಸಿತ್ತು. ಇದನ್ನೇ ಈವರೆಗೂ ಸರ್ಕಾರಗಳು ಅನುಸರಿಸಿಕೊಂಡು ಬರುತ್ತಿದ್ದವು. ಆದರೆ ದೇಗುಲಗಳು ಸರ್ಕಾರದ ಹಿಡಿತದಲ್ಲಿ ಇರಬಾರದು ಎಂದು ಬಿಜೆಪಿ ಹೋರಾಟ ಆರಂಭಿಸಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಷ್ಟೇ ವಿಹೆಚ್‍ಪಿ ದೇಶಾವ್ಯಾಪಿ ಆಂದೋಲನ ನಡೆಸಿತ್ತು. ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ದೇಗುಲಗಳಿಗೆ ಮುಕ್ತಿ ಕೊಡುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ.

  • ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅಗತ್ಯ ಸಹಕಾರ: ಗೋಪಾಲಯ್ಯ

    ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅಗತ್ಯ ಸಹಕಾರ: ಗೋಪಾಲಯ್ಯ

    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

    ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಶ್ರೀ ಜಯಮಾರುತಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ 32ನೇ ವರ್ಷದ ಹನುಮ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಾನು ಬದ್ಧನಾಗಿದ್ದು, ಆಡಳಿತ ಮಂಡಳಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

    ಕೋವಿಡ್ ಮೂರನೇ ಅಲೆ ಈಗಾಗಲೇ ಪ್ರಾರಂಭವಾಗಿರುವ ಸೂಚನೆಗಳು ಸಿಗುತ್ತಿವೆ. ಈ ಹಿನ್ನೆಲೆಯಲ್ಲಿ ಯಾರೂ ಕೂಡ ಮೈ ಮರೆಯಬಾರದು. ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸುವಂತೆ ಸಚಿವರು ಮನವಿ ಮಾಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    ನಂದಿನಿ ಬಡಾವಣೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ 2022ರ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಉಪ ಮೇಯರ್ ಎಸ್. ಹರೀಶ್, ಜಯಸಿಂಹ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಲೋಕೇಶ್ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

  • ಯಾದಗಿರಿ ಕೋಟೆಯಲ್ಲಿ ನಿಧಿಗಾಗಿ ದೇವಸ್ಥಾನದ ಮುಂದಿನ ಮೂರ್ತಿ ಧ್ವಂಸ

    ಯಾದಗಿರಿ ಕೋಟೆಯಲ್ಲಿ ನಿಧಿಗಾಗಿ ದೇವಸ್ಥಾನದ ಮುಂದಿನ ಮೂರ್ತಿ ಧ್ವಂಸ

    ಯಾದಗಿರಿ: ಐತಿಹಾಸಿಕ ಸ್ಥಳಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದ್ದು, ಯಾದಗಿರಿ ಕೋಟೆಯಲ್ಲಿ ನಿಧಿಗಾಗಿ ದೇವಸ್ಥಾನದ ಮುಂದಿನ ಮೂರ್ತಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.

    ಯಾದಗಿರಿ ಕೋಟೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನಿಧಿಗಾಗಿ ಮಧ್ಯರಾತ್ರಿ ಕೋಟೆಯನ್ನು ಹತ್ತಿದ ಖದೀಮರು ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ. ದೇವಸ್ಥಾನದ ಮುಂಭಾಗದ ನಂದಿ ಮೂರ್ತಿ ಕಿತ್ತೆಸೆದು ಮೂರ್ನಾಲ್ಕು ಅಡಿ ಆಳಕ್ಕೆ ಅಗೆದು ಪರಾರಿಯಾಗಿದ್ದಾರೆ. ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಸುದ್ದಿ ತಿಳಿದೆ. ಇದಕ್ಕೂ ಮೊದಲು ಈ ಕೋಟೆಯಲ್ಲಿ ಸಾಕಷ್ಟು ಬಾರಿ ನಿಧಿಗಾಗಿ ಶೋಧ ನಡೆದಿತ್ತು. ಇದನ್ನು ಓದಿ: ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಾಪಾರಿಯ ಬಂಧನ

    ಕಳ್ಳರು ರಾತ್ರಿ ವೇಳೆ ಬಂದು ನಿಧಿಗಾಗಿ ಸಾಕಷ್ಟು ಬಾರಿ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮತೆಗದುಕೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದಾಗಿ ಕೋಟೆಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

  • ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ನನ್ನು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿದ್ದಾರೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.

     

    ಈಗಾಗಲೇ ಮೋದಿ ಅವರು ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಾರಾಣಿಸಿಯ ಜನರು ಹೂ ಮಳೆ ಸುರಿಸಿ, ಮೋದಿ, ಮೋದಿ, ಹರ್ ಹರ್ ಮಹಾದೇವ್ ಎಂದು ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಮೋದಿಯವರು ಕಾವಿ ವಸ್ತ್ರವನ್ನು ಧರಿಸಿ ಗಂಗಾ ನದಿಯಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡಿ, ಜಪ ಮಾಲೆ ಹಿಡಿದು ಜಪ ಮಾಡಿದ್ದಾರೆ.

    ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ:
    ಕಾಶಿ ವಿಶ್ವನಾಥ ಕಾರಿಡಾರ್ ವಿಶ್ವನಾಥ ದೇಗುಲ ಮತ್ತು ಪವಿತ್ರ ಗಂಗಾ ನದಿಯನ್ನು ನೇರವಾಗಿ ಸಂಪರ್ಕಿಸುತ್ತದೆ. ಈ ಮೊದಲು ದೇಗುಲ ಮತ್ತು ಪವಿತ್ರ ಗಂಗಾ ನದಿಗೆ ನೇರವಾದ ಸಂಪರ್ಕವಿರಲಿಲ್ಲ. ದೇಗುಲದ ಮೂರು ದಿಕ್ಕುಗಳಲ್ಲಿ ಮನೆಗಳು, ಕಟ್ಟಡಗಳು, ಆವರಿಸಿದ್ದವು. ಇದೀಗ ಕಿಕ್ಕಿರಿದ ಪ್ರದೇಶ, ಜನಸಂದಣಿಯಿಂದ ಯಾವುದೇ ಅಡೆತಡೆಗಳಿಲ್ಲದೆ ಗಂಗೆಯ ಲಲಿತಾ ಘಾಟ್‍ಗೆ ಭಕ್ತರು ಮಂದಿರದಿಂದ ಭೇಟಿ ನೀಡಬಹುದು. ದೇಗುಲದಲ್ಲಿ ನಿಂತೇ ಪ್ರಸಿದ್ಧ ಗಂಗಾರತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ಕಾರಿಡಾರ್ ದೇಗುಲ ಮತ್ತು ಲಲಿತಾ ಘಾಟ್‍ಗೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲದೇ ದೇಗುಲ ಚೌಕ, ವಾರಾಣಸಿ ನಗರ ಗ್ಯಾಲರಿ, ಮ್ಯೂಸಿಯಂ, ವಿವಿಧ ಉದ್ದೇಶಿತ ಸಭಾಂಗಣ, ಹಾಲ್, ಭಕ್ತರಿಗೆ ಸೌಲಭ್ಯ ಒದಗಿಸುವ ಕೇಂದ್ರವಾಗಿದೆ. ಸಾರ್ವಜನಿಕ ತಂಗುದಾಣ, ಅರ್ಚಕರಿಗೆ ವಸತಿ ಮತ್ತು ಆಧ್ಯಾತ್ಮ ಗ್ರಂಥಾಲಯ ಮುಂತಾದ ಸೌಕರ್ಯಗಳನ್ನು ಕಾರಿಡಾರ್ ಒಳಗೊಂಡಿದೆ.

    ಕಾರಿಡಾರ್‌ನಲ್ಲಿ ಏನಿದೆ?:
    * ಯೋಜನೆಯಡಿ 24 ಕಟ್ಟಡ ನಿರ್ಮಾಣ
    * ಸುಮಾರು 50 ಅಡಿ ಉದ್ದ ಕಾರಿಡಾರ್ ಗಂಗಾ ಮಣಿಕರ್ಣಿಕಾ, ಲಲಿತಾ ಘಾಟ್ ಮತ್ತು ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದೇಗುಲವನ್ನು ಸಂಪರ್ಕಿಸುತ್ತದೆ. ಯಾತ್ರಾರ್ಥಿಗಳಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ.
    * ವಾರಾಣಸಿ ಸಂಸ್ಕ್ರತಿ ಪ್ರತಿಬಿಂಬಿಸುವ ಮ್ಯೂಸಿಯಂ ಮತ್ತು ಸಭಾಂಗಣ ಮತ್ತು ಹೋಮ ಹವನದಂತಹ ಧಾರ್ಮಿಕ ಕಾರ್ಯ ನಡೆಸಲು ಯೋಗಶಾಲೆಗಳು ಇವೆ.
    * ಆರ್ಚಕರು, ಸ್ವಯಂ ಸೇವಕರು ಮತ್ತು ಯಾತ್ರಾರ್ಥಿಗಳಿಗೆ ವಿಶೇಷ ವಸತಿಯನ್ನು ಮಾಡಲಾಗಿದೆ.

    * ಗಂಗಾ ನದಿ ಕಣ್ತುಂಬಿಕೊಳ್ಳುವ ಗ್ಯಾಲರಿ ಇದ್ದು, ದೇಗುಲದ 7000 ಚದರ ಮೀ. ಪ್ರದೇಸ 10,000 ಜನರಿಗೆ ಧ್ಯಾನಕ್ಕೆ ಮೀಸಲು ಇಡಲಾಗಿದೆ. 7 ದ್ವಾರ ಕೆಫೆಟೇರಿಯಾ, ಆಧ್ಯಾತ್ಮ ಗ್ರಂಥಾಲಯ, ಫುಡ್ ಸ್ಟ್ರೀಟ್ ವ್ಯವಸ್ಥೆ ಇದೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಕಾಶಿ ದೇಗುಲ 3000 ಚದರಡಿ ವ್ಯಾಪ್ತಿಯಲ್ಲಿತ್ತು. ಮಹತ್ವಾಕಾಂಕ್ಷಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯೇ ಮೊದಲ ಹಂತದ ವೆಚ್ಚ399 ಕೋಟಿ ಆಗಿದ್ದು, 5 ಲಕ್ಷ ಚದರ ಅಡಿ ಪ್ರದೇಶಕ್ಕೆ ದೇಗುಲದ ವ್ಯಾಪ್ತಿ ವಿಸ್ತರಿಸಿದೆ. ಕಾರಿಡಾರ್ 320 ಮೀಟರ್ ಉದ್ದ ಮತ್ತು 20 ಮೀಟರ್ ಅಗಲ ಇದೆ. ಮೊದಲಿನಂತೆ ಕಿಕ್ಕಿರಿದ ರಸ್ತೆಗಳ ಬದಲಾಗಿ ಇದೀಗ ಸರಾಗವಾಗಿ ಕೇವಲ ಒಂದು ನಿಮಿಷದಲ್ಲಿ ದೇಗುಲದಿಂದ ಲಲಿತಾ ಘಾಟ್ ತಲುಪಬಹುದಾಗಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ಮೋದಿ ಕಾಶಿ ಪರಿವರ್ತನೆ ಮಾಡಿದ್ದು ಹೇಗೆ?:
    ಮೋದಿ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾದ ಬೆನ್ನಲ್ಲೇ ಕಾಶಿ ಸ್ವರೂಪವನ್ನೇ ಬದಲಿಸಿದರು. ಈ ಹಿಂದಿನ ಹಳೆಯ ಕಾಶಿಯಲ್ಲಿ ಕಿರಿದಾದ ರಸ್ತೆಗಳಿದ್ದವು. ಅಸ್ವಚ್ಛತೆ ಎಲ್ಲಾ ಕಡೆ ಎದ್ದು ಕಾಣುತ್ತಿತ್ತು. ಇದನ್ನು ಬದಲಿಸಿದ ಅವರು ರಸ್ತೆಗಳ ಅಗಲೀಕರಣ ಮಾಡಿಸಿದರು. ನೈರ್ಮಲೀಕರಣಕ್ಕೆ ಕ್ರಮ ಕೈಗೊಂಡರು. ಮಲಿನವಾಗಿದ್ದ ಗಂಗಾ ನದಿಯನ್ನು “ನಮಾಮಿ ಗಂಗೆ” ಯೋಜನೆ ಅಡಿ ಸ್ವಚ್ಛಗೊಳಿಸಿದಉ. ಈಗ ‘ವಿಶ್ವನಾಥ ಕಾರಿಡಾರ್’ ಯೋಜನೆ ಜಾರಿಗೊಳಿಸಿ ದೇಗುಲದ ಗತವೈಭವ ಮರುಕಳಿಸಿದ್ದಾರೆ.

  • ಬಾಹುಬಲಿ ಶೈಲಿಯಲ್ಲಿ ದೇವಾಲಯದ ಕಾಣಿಕೆ ಹುಂಡಿ ಹೊತ್ತೊಯ್ದ ಖದೀಮರು

    ಬಾಹುಬಲಿ ಶೈಲಿಯಲ್ಲಿ ದೇವಾಲಯದ ಕಾಣಿಕೆ ಹುಂಡಿ ಹೊತ್ತೊಯ್ದ ಖದೀಮರು

    ಬೆಂಗಳೂರು: ಬಾಹುಬಲಿಯ ಶೈಲಿಯಲ್ಲಿ ದೇವಾಲಯದಲ್ಲಿದ್ದ ಹುಂಡಿಯನ್ನು ಖದೀಮರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಗರದ ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ ನಡೆದಿದೆ.

    ನಿನ್ನೆ ತಡರಾತ್ರಿ 1:30ರ ಸುಮಾರಿಗೆ ಇಬ್ಬರು ಖದೀಮರು ದೇವಸ್ಥಾನದ ಬಾಗಿಲು ಹೊಡೆದು ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಚೋಳನಾಯಕನಹಳ್ಳಿಯ ಶಂಭುಲಿಂಗೇಶ್ವರ ಹಾಗೂ ಶನೇಶ್ವರ ಎರಡು ದೇವಾಲಗಳಲ್ಲಿ ಕೃತ್ಯ ಎಸಗಿದ್ದಾರೆ. ಎರಡು ದೇವಾಲಯಗಳಲ್ಲಿ ಕಳೆದ ಒಂದು ವರ್ಷದಿಂದ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಈ ಮಾಹಿತಿ ತಿಳಿದು ಕಳ್ಳರು ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಕಳ್ಳರು ಕಳ್ಳತನ ಮಾಡುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಶಾಲಾ ನೀರಿನ ಟ್ಯಾಂಕ್‍ಗೆ ವಿಷ ಬೆರೆಸಿದ ಕಿಡಿಗೇಡಿಗಳು – ತಪ್ಪಿದ ಭಾರೀ ಅನಾಹುತ

    ಹುಂಡಿಯಲ್ಲಿ ದೊಡ್ಡ ಪ್ರಮಾಣದ ಹಣ ಇರುವುದನ್ನು ಗಮನಿಸಿರುವವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆಬೀಸಿದ್ದಾರೆ. ಇದನ್ನೂ ಓದಿ: ಮತದಾರರ ಬಳಿ ಆಣೆ ಪ್ರಮಾಣ ಮಾಡಿಸಿದ ಬಿಜೆಪಿ ನಾಯಕ

  • ಕಿಚ್ಚ ಸುದೀಪ್‍ಗೆ ದೇವಾಲಯ ಕಟ್ಟಿಸುತ್ತಿದ್ದಾರೆ ಅಭಿಮಾನಿಗಳು

    ಕಿಚ್ಚ ಸುದೀಪ್‍ಗೆ ದೇವಾಲಯ ಕಟ್ಟಿಸುತ್ತಿದ್ದಾರೆ ಅಭಿಮಾನಿಗಳು

    – ವಾಲ್ಮೀಕಿ ಮೂರ್ತಿ ಜೊತೆ ಸುದೀಪ್ ಮೂರ್ತಿ ಪ್ರತಿಷ್ಠಾಪನೆ
    – 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನ

    ರಾಯಚೂರು: ದೇವರಿಗೆ ಪೂಜಿಸಲು ಗುಡಿ ಕಟ್ಟಿಸುತ್ತಾರೆ, ದೇವರಿಗೆ ಸಮನಾದ ತಂದೆ, ತಾಯಿಗಳಿಗೆ ಪೂಜಿಸಲು ದೇವಾಲಯಗಳನ್ನೂ ಕಟ್ಟಿಸಿದವರಿದ್ದಾರೆ. ಆದರೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದ ಗ್ರಾಮದ ಜನ ತಮ್ಮ ನೆಚ್ಚಿನ ಸಿನಿಮಾ ನಟ ಕಿಚ್ಚ ಸುದೀಪ್ ಅವರ ಮೂರ್ತಿ ಪ್ರತಿಷ್ಠಾಪಿಸಿ ದೇವಸ್ಥಾನ ಕಟ್ಟಿ ನಿತ್ಯ ಪೂಜಿಸಲು ಮುಂದಾಗಿದ್ದಾರೆ.

    ತಮಿಳುನಾಡಿನಲ್ಲಿ ಹಲವಾರು ಸಿನೆಮಾ ನಟರ ದೇವಾಲಯಗಳನ್ನು ಅವರ ಅಭಿಮಾನಿಗಳು ಕಟ್ಟಿಸಿರುವ ಉದಾಹರಣೆಗಳಿವೆ. ಆದರೆ ರಾಜ್ಯದ ಮಟ್ಟಿಗೆ ಇದು ತೀರಾ ವಿರಳ. ಕುರಕುಂದ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಅವರ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಇದು ಅಚ್ಚರಿ ಅನ್ನಿಸಿದ್ರು ಸತ್ಯ. ಕುರಕುಂದ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಟ ಸುದೀಪ್ ಅಭಿಮಾನಿಗಳಿದ್ದಾರೆ. ಹೀಗಾಗಿ ನೆಚ್ಚಿನ ನಟನಿಗೆ ದೇವಸ್ಥಾನ ಕಟ್ಟುವ ಮೂಲಕ ಗೌರವ ಸಲ್ಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಮೂರ್ನಾಲ್ಕು ಬಾರಿ ಕಿಚ್ಚ ಅವರನ್ನು ಭೇಟಿಯಾಗಿ ಅನುಮತಿಯನ್ನು ಪಡೆದಿದ್ದಾರೆ. ಸುದೀಪ್ ರಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ, 30*40 ವಿಸ್ತೀರ್ಣದ ಜಾಗದಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಸುದೀಪ್ ಹಾಗೂ ವಾಲ್ಮೀಕಿ ಮಹರ್ಷಿಯ ದೇವಸ್ಥಾನ ಕಟ್ಟಿಸಲಾಗುತ್ತಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ಇಲ್ಲಿ ಸುದೀಪ್‍ರ 4 ಅಡಿ ಮೂರ್ತಿ ಹಾಗೂ ವಾಲ್ಮೀಕಿ ಮಹರ್ಷಿಯ 6 ಅಡಿ ಮೂರ್ತಿಯನ್ನು ಈಗಾಗಲೇ ಪ್ರತಿಷ್ಠಾಪಿಸಲಾಗಿದೆ. ಕುರಕುಂದ ಗ್ರಾಮದ ಕೆಲ ಮುಖಂಡರು ಹಾಗೂ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಸುದೀಪ್ ಮೂರ್ತಿ ಎದುರು ಇತ್ತೀಚೆಗೆ ಅಭಿಮಾನಿಗಳನ್ನಗಲಿದ ದಿವಂಗತ ನಟ ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ಎಲ್‍ಇಡಿ ರೂಪದಲ್ಲಿ ಅಳವಡಿಸುವ ಮೂಲಕ, ಪವರ್ ಸ್ಟಾರ್ ಸ್ಮರಣೆ ಮಾಡಲಾಗುತ್ತಿದೆ. ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಕ್ಕಾಗಿ ಅರ್ಚಕರನ್ನೂ ನೇಮಿಸಲಾಗುತ್ತಿದೆ. ಇದನ್ನೂ ಓದಿ:  ‘ಅಪ್ಪುಶ್ರೀ’ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಬರಿಗಾಲಲ್ಲಿ ಪಾದಯಾತ್ರೆ 

    ಈಗಾಗಲೇ 75 ದಿನಗಳ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಯಾನವನ, ಗ್ಲಾಸ್ ವರ್ಕ್ ಹಾಗೂ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಖುದ್ದು ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ. ಹೀಗಾಗಿ ನೆಚ್ಚಿನ ನಟನನ್ನು ಕಣ್ತುಂಬಿಸಿಕೊಳ್ಳಲು ಇಡೀ ಅಭಿಮಾನಿ ಬಳಗವೇ ಕಾತುರದಿಂದ ಕಾಯುತ್ತಿದೆ.

  • ದೇಗುಲಕ್ಕೆ ಬಂದ ಭಿಕ್ಷುಕಿಯನ್ನು ಬೈದು ಹೊರಗೆ ಕಳುಹಿಸಿದ್ರೂ ಆಕೆ ಕೊಟ್ಳು 10 ಸಾವಿರ ರೂ.!

    ದೇಗುಲಕ್ಕೆ ಬಂದ ಭಿಕ್ಷುಕಿಯನ್ನು ಬೈದು ಹೊರಗೆ ಕಳುಹಿಸಿದ್ರೂ ಆಕೆ ಕೊಟ್ಳು 10 ಸಾವಿರ ರೂ.!

    ಚಿಕ್ಕಮಗಳೂರು: ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ದಿನ ಭಿಕ್ಷುಕಿಯೊಬ್ಬರು ದೇವಸ್ಥಾನದ ಅಧ್ಯಕ್ಷ ಎಲ್ಲಿ ಅಧ್ಯಕ್ಷ ಎಲ್ಲಿ ಎಂದು ಹುಡುಕುತ್ತಿದ್ದರು. ಎಲ್ಲರೂ ಭಿಕ್ಷೆ ಕೆಳುವುದಕ್ಕೆ ಎಂದು ಭಾವಿಸಿ ಆಕೆಗೆ ಬೈದು ಕಳುಹಿಸುತ್ತಿದ್ದರು. ಆದರೆ, ಆಕೆ ಅಧ್ಯಕ್ಷ ಸಿಗಲಿಲ್ಲ ಎಂದು ಸೀದಾ ದೇವಸ್ಥಾನದ ಒಳಗೆ ಹೋಗಿ ಅಲ್ಲಿದ್ದ ಸ್ವಾಮಿಜಿ ಬಳಿ 500 ಮುಖ ಬೆಲೆಯ 20 ನೋಟುಗಳನ್ನು ನೀಡಿ ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಮನವಿ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.


    ನಿನ್ನೆ ಜಿಲ್ಲೆಯ ಕಡೂರು ಪಟ್ಟಣದ ಕೋಟೆ ಪಾತಾಳಾಂಜನೇಯ ಸ್ವಾಮಿ ದೇಗುಲದ ಪುನರ್ ಪ್ರತಿಷ್ಠಾಪನ ಮಹೋತ್ಸವ ನಡೆಯಿತು. ಈ ವೇಳೆ ಭಿಕ್ಷುಕಿಯೊಬ್ಬರು ದೇವಸ್ಥಾನಕ್ಕೆ 10 ಸಾವಿರ ದೇಣಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ದೇವಸ್ಥಾನಕ್ಕೆ ದೇಣಿಗೆ ನೀಡಿದ 80 ವರ್ಷ ಪ್ರಾಯದ ಭಿಕ್ಷುಕಿ ಹೆಸರು ಕೆಂಪಜ್ಜಿ. ಕಡೂರು ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ವೃದ್ಧೆ. ಆಂಜನೇಯ ಸ್ವಾಮಿಯ ದೇಗುಲದ ಕಾರ್ಯಕ್ರಮದ ವೇಳೆ ಹೊರಗೆ ಕುಳಿತಿದ್ದ ಅಜ್ಜಿ ಹೋಗಿ-ಬರುವವರನ್ನೆಲ್ಲಾ ಅಧ್ಯಕ್ಷರು ಎಲ್ಲಿ ಎಂದು ಕೇಳುತ್ತಿದ್ದಳು. ಹಣ ಕೇಳಲು ಎಂದೇ ತಿಳಿದು ಎಲ್ಲರೂ ವೃದ್ಧೆಯನ್ನು ದೂರ ಹೋಗಲು ಹೇಳುತ್ತಿದ್ದರು. ಆದರೆ, ಆ ಭಿಕ್ಷುಕಿ ನೇರವಾಗಿ ದೇಗುಲದೊಳಗೆ ಹೋಗಿ ಅಲ್ಲಿದ್ದ ದತ್ತ ವಾಸುದೇವ ಸ್ವಾಮೀಜಿಗೆ 500 ಮುಖಬೆಲೆಯ 20 ನೋಟುಗಳನ್ನು ಕಾಣಿಕೆ ಎಂದು ನೀಡಿದಾಗ ಎಲ್ಲರಿಗೂ ಆಶ್ಚರ್ಯ. ಮೂಕವಿಸ್ಮಿತರಾಗಿ ನಿಂತರು. ಕೆಂಪಜ್ಜಿಯ ದೊಡ್ಡತನಕ್ಕೆ ಎಲ್ಲರಿಂದಲೂ ಮೆಚ್ಚುಗೆ ದೊರೆಯಿತು. ಇದನ್ನೂ ಓದಿ: ಪಕ್ಷಕ್ಕೆ ಬರುವಂತೆ ಪುನೀತ್‍ಗೆ ಹಲವು ಬಾರಿ ಗಾಳ ಹಾಕಿದ್ದೆ: ಡಿಕೆಶಿ

    ಕೆಂಪಜ್ಜಿ 2019ರಲ್ಲಿ ಪಾತಾಳಾಂಜನೇಯ ದೇಗುಲ ಜೀರ್ಣೋದ್ಧಾರ ಆರಂಭವಾದಾಗಲೂ ಹತ್ತು ಸಾವಿರ ನೀಡಿದ್ದರು. ಪಟ್ಟಣದ ಸಾಯಿಬಾಬಾ ದೇವಾಲಯದ ಬಳಿ ಭಿಕ್ಷೆ ಬೇಡುವ ಕೆಂಪಜ್ಜಿಗೆ ಪಟ್ಟಣದ ವಿನಾಯಕ ಹೋಟೆಲ್ ಮಾಲೀಕ ಭಾಸ್ಕರ್ ಪ್ರತಿದಿನ ತಿಂಡಿ-ಊಟ ನೀಡುತ್ತಾರೆ. ಅಜ್ಜಿಗೆ ಆರೋಗ್ಯ ಸಮಸ್ಯೆಯಾದಾಗಲೂ ಇದೇ ಭಾಸ್ಕರ್ ಚಿಕಿತ್ಸೆ ಕೊಡಿಸುತ್ತಾರೆ. ದೇಗುಲಕ್ಕೆ ಸಾವಿರಾರು ಜನ ಲಕ್ಷಾಂತರ ಹಣ ನೀಡಬಹುದು. ಆದರೆ, ಈ 10 ಸಾವಿರ ತುಂಬಾ ಮೌಲ್ಯಯುತವಾದದ್ದು ಎಂದು ಭಕ್ತರು ಭಾವಿಸಿದ್ದಾರೆ. ತಾನು ನೀಡಿದ 10 ಸಾವಿರ ಹಣದಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡಿಸಿ ಹಾಕಬೇಕೆಂದು ಕೆಂಪಜ್ಜಿ ಬೇಡಿಕೊಂಡಿದ್ದಾಳೆ. ಆರಂಭದಲ್ಲಿ ಭಿಕ್ಷುಕಿಗೆ ಬೈತಿದ್ದ ಜನ ಕೊನೆಗೆ ಆಕೆ ಜೊತೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖಷಿಪಟ್ಟಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್

  • ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ

    ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ

    ಗದಗ: ಟ್ರ್ಯಾಕ್ಟರ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಈ ಭೀಕರವಾದ ಅಪಘಾತ ಮುಂಡರಗಿ ತಾಲೂಕಿನ ಡಂಬಳ- ಮೇವುಂಡಿ ಬಳಿ ನಡೆದಿದೆ.

    ಶಿವಾನಂದಯ್ಯ ಹಿರೇಮಠ(45), ತಾಯಿ ಅನಸೂಯಾ( 70), ಮಗಳು ಮನಸ್ವಿ(6) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪತ್ನಿ ಗಿರಿಜಾ ಸ್ಥಿತಿ ಚಿಂತಾಜನಕವಾಗಿದೆ. ಮೃತ ಹಾಗೂ ಗಾಯಾಳು ಹುಬ್ಬಳಿ ನವನಗರ ನಿವಾಸಿಗಳು ಎನ್ನಲಾಗುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಕಾರ್, ಟ್ರ್ಯಾಕ್ಟರ್‌ ಹಿಂಬದಿಯಿಂದ ಡಿಕ್ಕಿ ಸಂಬವಿಸಿದ್ದು, ಕಾರ್‍ನಲ್ಲಿದ್ದ ಒಂದೇ ಕುಟುಂಬದ 3 ಜನ ಸ್ಥಳದಲ್ಲೇ ಸಾವನ್ನಪ್ಪಿದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು

    ಮೆಕ್ಕೆ ಜೋಳ ತುಂಬಿಕೊಂಡು ಮುಂಡರಗಿಯಿಂದ ಗದಗ ಕಡೆಗೆ ಬರುತ್ತಿತ್ತು. ಮುಂಡರಗಿ ತಾಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಮರಳಿ ಹುಬ್ಬಳ್ಳಿಗೆ ಹೊರಟ್ಟಿದ್ದ ವೇಳೆ ದಾರಿ ಮಧ್ಯೆ ಈ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ಗೆ ವೇಗವಾಗಿ ಚಲಿಸುತ್ತಿದ್ದ ಕಾರ್ ಹಿಂಬದಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರ್ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಗಂಭೀರ ಗಾಯಾಳು ಮಹಿಳೆ ಗಿರಿಜಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಾಯು ಮಾಲಿನ್ಯ ಹೆಚ್ಚಳದಿಂದ ಶಾಲಾ-ಕಾಲೇಜು ಬಂದ್ ಮಾಡಿದ ದೆಹಲಿ

    ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ದರ್ಶನ ಮುಗಿಸಿ ಕುಟುಂಬಸ್ಥರು ಪ್ರಾಣ ಬಿಟ್ಟಿದ್ದಾರೆ.

  • ಮಹಾಮಂಗಳಾರತಿ ವೇಳೆ ಅಲುಗಾಡುತ್ತೆ 16 ಅಡಿ ಎತ್ತರದ ಹುತ್ತ

    ಮಹಾಮಂಗಳಾರತಿ ವೇಳೆ ಅಲುಗಾಡುತ್ತೆ 16 ಅಡಿ ಎತ್ತರದ ಹುತ್ತ

    ಚಿಕ್ಕಮಗಳೂರು: ಮಹಾಮಂಗಳಾರತಿ ವೇಳೆ ಸುಮಾರು 16 ಅಡಿ ಎತ್ತರದ ಮಣ್ಣಿನ ಹುತ್ತವೊಂದು 10 ರಿಂದ 15 ಡಿಗ್ರಿ ಅಲುಗಾಡುವ ಮೂಲಕ ನೋಡುಗರಲ್ಲಿ ಆಶ್ಚರ್ಯ ಮೂಡಿಸಿ, ಭಕ್ತರನ್ನು ಮಂತ್ರಮುಗ್ಧರನ್ನಾಗಿಸುವ ನಮ್ಮ ಕಣ್ಣನ್ನು ನಾವೇ ನಂಬಲಾಗದಂತಹಾ ಅಪರೂಪದ ಜಾತ್ರೆಯೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಾನಹಳ್ಳಿಯಲ್ಲಿ ಶತಮಾನಗಳಿಂದ ಸದ್ದಿಲ್ಲದೆ ನಡೆದುಕೊಂಡು ಬರುತ್ತಿದೆ.

    ಶತಮಾನಗಳಿಂದ ಆ ಹುತ್ತಕ್ಕೆ ಸೂರಿಲ್ಲ. ತಡೆಗೋಡೆಗಳು ಇಲ್ಲ. ಆದರೂ ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್‍ಗಳಿಂದ ಬಂದೋಬಸ್ತ್ ಮಾಡಿದ್ದರೂ ಕೂಡ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣಿಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲಿ ನಡೆಯೋ ವಿಚಿತ್ರವನ್ನು ಕಂಡು ನಾಸ್ತಿಕರೂ ಕೂಡ ಆಸ್ತಿಕರಾಗುತ್ತಿದ್ದಾರೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ದನ ಕಾಯುವ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟದೈವವಾಗಿದೆ. ಇದನ್ನೂ ಓದಿ: ತಿರುಪತಿಯಲ್ಲಿ ಪ್ರವಾಹ- ಜಲಪಾತದಂತೆ ಧುಮ್ಮಿಕ್ಕುತ್ತಿದೆ ಮಳೆ ನೀರು, ಕೊಚ್ಚಿ ಹೋಗ್ತಿವೆ ವಾಹನಗಳು!

    ಹೊಯ್ಸಳರ ಕಾಲದಿಂದಲೂ ನಡೆದು ಬರುತ್ತಿರುವ ಇಲ್ಲಿನ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣಿಮೆಯಂದು ನಡೆಯೋ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತಾ ಸುಮಾರು 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತೆ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನ ನೋಡಲೆಂದು ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ವರ್ಷ ಈ ಉಣ್ಣಕ್ಕಿ ಉತ್ಸವಕ್ಕೆ ಬರುತ್ತಿದ್ದಾರೆ.

    ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನು ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡುವ ವಾಡಿಕೆ ಇಂದಿಗೂ ಜೀವಂತವಿದೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದ ಇದ್ದು ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯುವ ಹುಡುಗರು ಕಟ್ಟಿದ ಹುತ್ತವಾದ್ದರಿಂದ ಕರುವನ್ನು ಕಾಡಿಗೆ ಬಿಡುವ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನು ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ (ಪುರಿ) ಹಾಕುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಂಡರೆ ಎಂತಹಾ ಕಷ್ಟವೂ ಕಳೆಯುತ್ತೆ ಅನ್ನೋದು ಭಕ್ತರ ನಂಬಿಕೆ. ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯ ಗುರುವಾರ ಅಥವಾ ಭಾನುವಾರ ಈ ಉತ್ಸವ ನಡೆಯಲಿದೆ. ಚರ್ಮರೋಗ, ಮಕ್ಕಳಾಗದವರು, ದನಕರು ಸಾಯುತ್ತಿದ್ದರೆ ಅಥವಾ ಪದೇ ಪದೆ ಆರೋಗ್ಯ ಹದಗೆಡುತ್ತಿದ್ದರೆ ಇಲ್ಲಿಗೆ ಹರಕೆ ಕಟ್ಟಿದರೆ ಸಾಕು ವರ್ಷದೊಳಗೆ ಆ ಹರಕೆ ಈಡೇರುತ್ತಂತೆ. ಹಾಗಾಗಿ, ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್‌ ಆಗಿರಲು 13 ಜಿಲ್ಲೆಗಳಿಗೆ ಸೂಚನೆ

    ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡೋದ್ರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿಶಕ್ತಿಯ ಪ್ರಭಾವವಿದ್ಯೋ ಅನ್ನೋದು ಇಂದಿಗೂ ನಿಗೂಢ. ದನ ಕಾಯೋ ಹುಡುಗರ ಭಕ್ತಿಯ ಹಿಂದಿರೋ ಈ ಹುತ್ತಾ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದ್ರೆ, ಹುತ್ತ ಅಲುಗಾಡೋದ್ರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದ-ವಿವಾದಗಳು ಇವೆ. ಆದರೆ, ನೋಡುಗರ ಕಣ್ಮುಂದೆ ನಡೆಯೋ ಈ ವಿಚಿತ್ರ ಹಾಗೂ ವಿಶಿಷ್ಠ ಪವಾಡ ಮಾತ್ರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ. ಭೂಗರ್ಭದ ಒಡಲಾಳದಲ್ಲಿ ಅಡಗಿರೋ ಒದೊಂದು ಸತ್ಯ ಹೊರಬಂದಾಗಲೂ ದೇವರಿರೋದು ಸತ್ಯ ಅನಿಸುತ್ತದೆ. ಜನ ಅದನ್ನು ನಂಬಿದ್ದಾರೆ.