Tag: ದೇವದತ್ ಪಡಿಕಲ್

  • ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯಕ್ಕೆ ಜಡ್ಡು ಇನ್‌ – ಕೆ.ಎಲ್‌ ರಾಹುಲ್‌ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್‌

    ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯಕ್ಕೆ ಜಡ್ಡು ಇನ್‌ – ಕೆ.ಎಲ್‌ ರಾಹುಲ್‌ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್‌

    ರಾಜ್‌ಕೋಟ್‌: ಇದೇ ಫೆ.15ರಿಂದ ಇಂಗ್ಲೆಂಡ್‌ ವಿರುದ್ಧ ಇಲ್ಲಿ ನಡೆಯಲಿರುವ 3ನೇ ಟೆಸ್ಟ್‌ ಪಂದ್ಯದಿಂದ ಟೀಂ ಇಂಡಿಯಾ ಬ್ಯಾಟಿಂಗ್‌ ಪಿಲ್ಲರ್‌ ಕೆ.ಎಲ್‌ ರಾಹುಲ್‌ ಹೊರಗುಳಿದಿದ್ದಾರೆ. ಆದ್ರೆ ಕೆ.ಎಲ್‌ ರಾಹುಲ್‌ (KL Rahul) ಅವರ ಸ್ಥಾನಕ್ಕೆ ಬಿಸಿಸಿಐ (BCCI) ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದೆ.

    ಇಂಗ್ಲೆಂಡ್‌ ವಿರುದ್ಧದ 3ನೇ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲು ಕನ್ನಡಿಗ ಕೆ.ಎಲ್‌ ರಾಹುಲ್‌ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಅವರನ್ನು ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಜಡೇಜಾ ಪಾಲ್ಗೊಳ್ಳುವಿಕೆಗೆ ಬಿಸಿಸಿಐ ಗ್ರೀನ್‌ ಸಿಗ್ನಲ್‌ ನೀಡಿದ್ದು, ಫಿಟ್‌ನೆಸ್‌ ಸಾಬೀತುಪಡಿಸುವಲ್ಲಿ ವಿಫಲರಾದ ಕೆ.ಎಲ್‌ ರಾಹುಲ್‌ ಅವರನ್ನು ಪಂದ್ಯದಿಂದ ಹೊರಗಿಡಲಾಗಿದೆ. ಅಲ್ಲದೇ ಕೆ.ಎಲ್‌ ರಾಹುಲ್‌ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗನನ್ನೇ ಆದ ದೇವದತ್‌ ಪಡಿಕ್ಕಲ್‌ (Devdutt Padikkal) ಅವರಿಗೆ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಔಟ್‌ – ಟೂರ್ನಿಯಿಂದಲೇ ಹೊರಗುಳಿದ ಕೊಹ್ಲಿ

    ಸದ್ಯ ವಿರಾಟ್‌ ಕೊಹ್ಲಿ (Virat Kohli) ಅವರ ಅನುಪಸ್ಥಿತಿಯಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್‌ ಬಲದ ಕೊರತೆಯಾಗಿದೆ. ಅನುಭವಿ ಅಗ್ರಕ್ರಮಾಂಕದಲ್ಲಿ ಕೊಹ್ಲಿ ಅವರ ಸ್ಥಾನ ತುಂಬಲು ಕೆ.ಎಲ್‌ ರಾಹುಲ್‌ ಅವರನ್ನು ತಂಡಕ್ಕೆ ಕರೆತರುವ ಉತ್ಸಾಹದಲ್ಲಿ ಬಿಸಿಸಿಐ ಇತ್ತು. ಆದ್ರೆ ಕೆ.ಎಲ್‌ ರಾಹುಲ್‌ ಅವರು ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಬಲತೋಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಸದ್ಯ ಕೆ.ಎಲ್‌ ರಾಹುಲ್‌ ಅವರು ಸಂಪೂರ್ಣ ಫಿಟ್‌ ಇರುವುದು ಕಂಡುಬಂದಿಲ್ಲ. ಹಾಗಾಗಿ ರಾಹುಲ್‌ ಅವರನ್ನು ಇನ್ನೂ ಒಂದು ವಾರಗಳ ಕಾಲ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ರೋಹಿತ್‌, ಗಿಲ್‌ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್‌ ವಾನ್‌

    ಪಡಿಕಲ್‌ಗೆ ಚಾನ್ಸ್‌:
    ಕೆ.ಎಲ್‌ ರಾಹುಲ್‌ ಬದಲಿಗೆ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ. ಸದ್ಯ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ದೇವದತ್‌ ಪಡಿಕಲ್‌ ಕರ್ನಾಟಕದ ಪರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ 193 ರನ್‌ ಗಳಿಸಿ ಮಿಂಚಿದ್ದರು. ಅಲ್ಲದೇ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ನಡೆದ ಎರಡು ಟೆಸ್ಟ್‌ ಪಂದ್ಯದ ಮೂರು ಇನ್ನಿಂಗ್ಸ್‌ಗಳಲ್ಲಿ ಭಾರತ ಎ ತಂಡದ ಪರ ಕ್ರಮವಾಗಿ 105, 65 ಮತ್ತು 21 ರನ್‌ ಗಳಿಸಿದ್ದರು. ಇದನ್ನೂ ಓದಿ: ಮತ್ತೆ ಹೀನಾಯ ಸೋಲು, ಭಾರತದ ವಿಶ್ವಕಪ್‌ ಕನಸು ಭಗ್ನ – 14 ವರ್ಷಗಳ ಬಳಿಕ ಆಸೀಸ್‌ಗೆ U19 ವಿಶ್ವಕಪ್‌ ಕಿರೀಟ!

  • IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    ಶಿಮ್ಲಾ: ಶಿಮ್ರಾನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. ಕೊನೆಯವರೆಗೂ ಹೋರಾಡಿದ ಪಂಜಾಬ್‌ ಕಿಂಗ್ಸ್‌ ಸೋಲಿನೊಂದಿಗೆ ವಿದಾಯ ಹೇಳಿದೆ.

    ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.148 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಸೋತರೇ ರಾಜಸ್ಥಾನ್‌ ರಾಯಲ್ಸ್‌ಗೆ ಪ್ಲೇ ಆಫ್‌ ತಲುಪುವ ಅವಕಾಶ ಸಿಗಲಿದೆ.

    ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕೊನೆಯ 4 ಓವರ್‌ಗಳಲ್ಲಿ ರಾಜಸ್ಥಾನ್‌ಗೆ 39 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 6 ರನ್‌, 18ನೇ ಓವರ್‌ನಲ್ಲಿ 14 ರನ್‌ ಹಾಗೂ 19ನೇ ಓವರ್‌ನಲ್ಲಿ 11 ರನ್‌ ಸೇರ್ಪಡೆಯಾಯಿತು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಶಿಮ್ರಾನ್‌ ಹೆಟ್ಮೇಯರ್‌ 28 ಎಸೆತಗಳಲ್ಲಿ ಭರ್ಜರಿ 46 ರನ್‌ (4 ಬೌಂಡರಿ, 3 ಸಿಕ್ಸ್‌) ಚಚ್ಚಿ ಔಟಾದರು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿದ್ದಾಗ. ಮೊದಲ 3 ಎಸೆತಗಳಲ್ಲಿ 4 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ಕ್ರೀಸ್‌ ತೆಗೆದುಕೊಂಡ ಧ್ರುವ್‌ ಜುರೆಲ್‌ ಸಿಕ್ಸ್‌ ಬಾರಿಸುವ ಮೂಲಕ ಜಯ ತಂದುಕೊಟ್ಟರು.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡರೂ 2 ವಿಕೆಟ್‌ಗೆ ಉತ್ತಮ ಆರಂಭ ಪಡೆಯಿತು. 2ನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕಲ್‌ ಹಾಗೂ ಯಶಸ್ವೀ ಜೈಸ್ವಾಲ್‌ ಭರ್ಜರಿ ಅರ್ಧ ಶತಕ ಸಿಡಿಸಿ ಔಟಾದರು.

    ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಈ ಮೂಲಕ 14 ಲೀಗ್‌ ಪಂದ್ಯಗಳಲ್ಲಿ 600 ರನ್‌ ಪೂರೈಸಿದರು. ಪಡಿಕಲ್‌ 30 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಕೊನೆಯ ಪಂದ್ಯದಲ್ಲೂ ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಗಳಿಸಿ ನಿರಾಸೆ ಮೂಡಿಸಿದರು. ರಿಯಾನ್‌ ಪರಾಗ್‌ 12 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 20 ರನ್‌ ಗಳಿಸುವ ಮೂಲಕ ತಂಡಕ್ಕೆ ಇನ್ನಷ್ಟು ರನ್‌ ಕೊಡುಗೆ ನೀಡಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ ಹಾಗೂ ಶಾರೂಖ್‌ ಖಾನ್‌ ಬ್ಯಾಟಿಂಗ್‌ ನೆರವಿನಿಂದ 187 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

    ಜಿತೇಶ್‌ ಶರ್ಮಾ 44 ರನ್‌ (28 ಎಸೆತ, 3 ಸಿಕ್ಸ್‌, 3 ಬೌಂಡರಿ) ಗಳಿಸಿದರೆ, ಶಾರೂಖ್‌ ಖಾನ್‌ 41 ರನ್‌ (23 ಎಸೆತ, 2 ಸಿಕ್ಸರ್‌, 4 ಬೌಂಡರಿ), ಸ್ಯಾಮ್‌ ಕರ್ರನ್‌ 49 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸ್‌) ಗಳಿಸಿ ಅಜೇಯರಾಗುಳಿದರು. ನಾಯಕ ಶಿಖರ್‌ ಧವನ್‌ 17 ರನ್‌, ಅಥರ್ವ್‌ ಟೈಡೆ 19 ರನ್‌ ಕೊಡುಗೆ ನೀಡಿದರು.

    ರಾಜಸ್ಥಾನ್‌ ಪರ ನವದೀಪ್‌ ಸೈನಿ 4 ಓವರ್‌ಗಳಲ್ಲಿ 40 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಡೆಲ್ಲಿಯ ಪ್ರವೀಣ್‌ಗೆ  ದಂಡದೊಂದಿಗೆ ಒಂದು ಪಂದ್ಯ ಬ್ಯಾನ್

    ಡೆಲ್ಲಿಯ ಪ್ರವೀಣ್‌ಗೆ ದಂಡದೊಂದಿಗೆ ಒಂದು ಪಂದ್ಯ ಬ್ಯಾನ್

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಾಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನೋಬಾಲ್ ಕೇಳುವಂತೆ ಒತ್ತಾಯಿಸಿ ಬ್ಯಾಟರ್‌ಗಳನ್ನು ಕರೆಯಲು ಕರೆದು ಹೈಡ್ರಾಮ ಮಾಡಿದ ಡೆಲ್ಲಿ ತಂಡದ ನಾಯಕ ರಿಷಭ್‌ಪಂತ್‌ಗೆ ಐಪಿಎಲ್ ಮಂಡಳಿ ದಂಡದ ವಿಧಿಸುವ ಮೂಲಕ ಪಂಚ್‌ಕೊಟ್ಟಿದೆ.

    ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ತಮ್ಮ ತಂಡದ ಪಂದ್ಯದ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್‌ಪಂತ್ ಅವರಿಗೆ ಪಂದ್ಯದ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    IPL ನೀತಿ ಸಂಹಿತೆಯ ನಿಯಮ 2.7 ಅಡಿಯಲ್ಲಿ 2ನೇ ಹಂತದ ಅಪರಾಧಕ್ಕೆ ಪಂತ್ ಗುರಿಯಾಗಿದ್ದಾರೆ. ಆದ್ದರಿಂದ ಪಂತ್‌ಗೆ ಶೇ.100ರಷ್ಟು ದಂಡಶುಲ್ಕ ವಿಧಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೂ ಪಂದ್ಯದ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿದೆ. ಇನ್ನೂ ಪಂದ್ಯದ ವೇಳೆ ಅಂಗಳಕ್ಕೆ ಇಳಿದು 3ನೇ ಅಂಪೈರ್‌ಗೆ ಮನವಿ ಮಾಡುವಂತೆ ಒತ್ತಾಯಿಸಿದಕ್ಕಾಗಿ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೂ 2.2ರ ನಿಯಮದ ಪ್ರಕಾರ ಶೇ.100 ದಂಡ ವಿಧಿಸುವ ಜೊತೆಗೆ ಮುಂದಿನ ಒಂದು ಪಂದ್ಯದಲ್ಲಿ ಸಹಾಯ ಕೋಚ್ ಆಗಿ ನಿರ್ವಹಿಸುವುದನ್ನು ಬ್ಯಾನ್ ಮಾಡಿದೆ.

    RISHAB PANTH

    ಏನಿದು ಆರ್ಟಿಕಲ್ 2.7, 2.2 ನಿಯಮ?: ಐಪಿಎಲ್ ನಿಯಮದ ಪ್ರಕಾರ ಪಂದ್ಯದ ಅವಧಿ ಮುಗಿಯುವವೆರೆಗೆ ಯಾವುದೇ ನಿರ್ಧಾರಗಳನ್ನು ಕ್ರೀಸ್‌ನಲ್ಲಿರುವವರೇ ಬಗೆಹರಿಸಿಕೊಳ್ಳಬೇಕು. ಅಂಪೈರ್ ತೀರ್ಪು ಪರಿಶೀಲನೆ ಮಾಡುವುದಿದ್ದರೂ ಬ್ಯಾಟರ್‌ಗಳೇ ಮನವಿ ಮಾಡಬೇಕು. ಒಂದು ವೇಳೆ ಪಂದ್ಯ ನಡೆಯುವ ವೇಳೆ ಉಳಿದವರು ಅಪೀಲ್ ಮಾಡುವಂತೆ ಒತ್ತಾಯಿಸುವುದು, ಅವರನ್ನು ಹೊರಬರುವಂತೆ ಸೂಚನೆ ನೀಡುವುದು ಅವರ ಪರವಾಗಿ ಅಪೀಲ್ ಮಾಡಲು ಕ್ರೀಡಾಂಗಣಕ್ಕೆ ಬರುವಂತಿಲ್ಲ.

  • ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

    ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

    ಮುಂಬೈ: ಐಪಿಎಲ್ ಕ್ರಿಕೆಟ್‌ನಲ್ಲಿ ಆಗಾಗ ವಿವಾದಗಳು ನಡೆಯುತ್ತಿರುತ್ತವೆ. ಆದರೆ ಶುಕ್ರವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಾಸ್ಥಾನ್ ರಾಯಲ್ಸ್ ಪಂದ್ಯ ಹೊಸ ವಿವಾದಕ್ಕೆ ಸಾಕ್ಷಿಯಾಗಿದೆ.

    ಕೊನೆಯ ಓವರ್‌ನಲ್ಲಿ ಅಂಪೈರ್ ನೀಡಿದ ತೀರ್ಪಿನಿಂದ ಅಸಮಧಾನಗೊಂಡ ಡೆಲ್ಲಿ ತಂಡದ ನಾಯಕ ರಿಷಭ್‌ಪಂತ್ ನಡೆದುಕೊಂಡ ರೀತಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೇ, ಹಿರಿಯ ಕ್ರಿಕೆಟಿಗರಿಂದಲೂ ಟೀಕೆಗೆ ಗುರಿಯಾಗಿದೆ. ಇಷ್ಟಕ್ಕೂ ಆ ಕೊನೆಯ ಓವರ್‌ನಲ್ಲಿ ನಡೆದಿದ್ದೇನು? ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ

    wtson

    ರಾಜಾಸ್ಥಾನ್ ರಾಯಲ್ಸ್ ನೀಡಿದ 222 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತಾದರೂ ನಂತರದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ವೆಸ್ಟ್ಇಂಡೀಸ್ ಕ್ರಿಕೆಟಿಗ ರೋವನ್ ಪೊವೆಲ್ ಅವರ ಆಟ ತಂಡಕ್ಕೆ ಗೆಲುವಿನ ಆಸೆ ಚಿಗುರುವಂತೆ ಮಾಡಿತ್ತು. ಅಂತಿಮ ಓವರ್‌ನಲ್ಲಿ ಡೆಲ್ಲಿ ತಂಡಕ್ಕೆ 36 ರನ್‌ಗಳು ಬೇಕಾಗಿತ್ತು. ಅಂದರೆ ಆರು ಬಾಲ್‌ನಲ್ಲಿ 6 ಸಿಕ್ಸರ್, ಇದು ಶೇ.90 ರಷ್ಟು ಗೆಲುವು ಅಸಾಧ್ಯ ಎಂಬುದೂ ಗೊತ್ತಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಪೋವೆಲ್ ಸತತ 3 ಎಸೆತಗಳನ್ನೂ ಸಿಕ್ಸ್‌ಗೆ ಅಟ್ಟಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವ ವೇಳೆ ದೊಡ್ಡ ಹೈಡ್ರಾಮವೇ ನಡೆದು ಹೋಯಿತು.

    ಮೆಕಾಯ್ ಅವರ 3 ಎಸೆತಗಳನ್ನೂ ಸಿಕ್ಸ್ ಬಾರಿಸಿದ್ದರು. ಆದರೆ, 3ನೇ ಎಸೆತ ಫುಲ್‌ಟಾಸ್ ಆಗಿದ್ದು ಇದನ್ನು ಕೂಡ ಪೊವೆಲ್ ಸಿಕ್ಸ್ಗೆ ಅಟ್ಟಿದರು. ಆದರೆ ಇದು ಅವರ ಸೊಂಟದ ಭಾಗಕ್ಕಿಂತಲೂ ಮೇಲಿತ್ತು. ಅಂಪೈರ್ ನೋಬಾಲ್ ಕೊಡದೇ ಇದ್ದರೂ ಡೆಲ್ಲಿ ಆಟಗಾರರು ಕುಳಿತಲ್ಲಿಂದಲೇ ನೋಬಾಲ್ ಸಿಗ್ನಲ್ ತೋರಿಸಿದರು.

    ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್‌ಪಂತ್ ಇದು ಅನ್ಯಾಯ ಎಂದು ಮೈದಾನದಲ್ಲಿದ್ದ ರೋವನ್ ಪೊವೆಲ್ ಮತ್ತು ಕುಲೀಪ್ ಯಾದವ್ ಅವರನ್ನು ಉದ್ದೇಶಿಸಿ ಬೌಂಡರಿ ಗೆರೆ ಬಳಿ ನಿಂತು ಟೆಸ್ಟ್ ಕ್ರಿಕೆಟ್‌ನಲ್ಲಿ ಡಿಕ್ಲೇರ್ ಘೋಷಣೆ ಮಾಡುವಂತೆ ಪೆವಿಲಿಯನ್‌ಗೆ ಬನ್ನಿ ಎಂದು ಕರೆದರು.

    ಆಕ್ರೋಷದಲ್ಲಿದ್ದ ಪಂತ್ ತಮ್ಮ ತಂಡದ ಕೋಚ್ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ ಬಳಿ ಚರ್ಚಿಸಲು ಮೈದಾನಕ್ಕೆ ಕಳುಹಿಸಿದರು. ಅಂಗಣಕ್ಕೆ ಧಾವಿಸಿ ಆನ್ ಫೀಲ್ಡ್ ಅಂಪೈರ್‌ಗಳ ಜೊತೆಗೆ ಚರ್ಚಿಸಿ ಕನಿಷ್ಠ 3ನೇ ಅಂಪೈರ್‌ಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಲೆಗ್ ಅಂಪೈರ್ ನಿತಿನ್ ಮೆನನ್ ಅದು ನೋ-ಬಾಲ್ ಅಲ್ಲ ಎಂದು ತೀರ್ಪು ನೀಡಿದ್ದ ಕಾರಣ, ಅದೇ ತೀರ್ಪಿಗೆ ಬದ್ಧರಾಗಿ ನಿಂತು ಆಟ ಮುಂದುವರಿಸಲು ಆನ್‌ಫೀಲ್ಡ್ ಅಂಪೈರ್ ತೀರ್ಮಾನಿಸಿದರು. ಅತ್ತ ಬೌಂಡರಿ ಗೆರೆ ಬಳಿಯಿದ್ದ ಆರ್‌ಆರ್ ಬ್ಯಾಟರ್ ಜಾಸ್ ಬಟ್ಲರ್ ಜೊತೆಗೂ ಪಂತ್ ರೇಗಾಡಿದರು. ಹಿರಿಯ ಆಟಗಾರ ಶೇನ್ ವಾಟ್ಸನ್ ಮೇಲೂ ಕೋಪಗೊಂಡರು. ಇದನ್ನೂ ಓದಿ: ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಆಘಾತ – ತಂಡದೊಂದಿಗಿಲ್ಲ ಕೋಚ್ ಪಾಟಿಂಗ್

    IPL 2022 JOS BUTLER

    ಬಳಿಕ ಡೈವರ್ಟ್ ಆದ ಪೋವೆಲ್ 4ನೇ ಎಸೆತವನ್ನು ಎದುರಿಸುವಲ್ಲಿ ವಿಫಲರಾದರು. 5ನೇ ಎಸೆತದಲ್ಲಿ 2ರನ್‌ಗಳಿಸಿ 6ನೇ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗೆಲ್ಲುವ ಕನಸು ಕಂಡಿದ್ದ ಡೆಲ್ಲಿಗೆ ರಿಷಬ್ ಪಂಥ್ ಅವರ ನಿರ್ಧಾರ ತಂಡದ ದಿಕ್ಕನ್ನೇ ಬದಲಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಶುಕ್ರವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಜೋಸ್ ಬಟ್ಲರ್, ದೇವದತ್ ಪಡಿಕಲ್ ಹಾಗೂ ಸಂಜು ಸಾಮ್ಸನ್ ಅವರ ಮಿಂಚಿನಾಟ ರನ್ 200ರ ಗಡಿದಾಟುವಂತೆ ಮಾಡಿತ್ತು.

    ನೋಬಾಲ್ ನಿಯಮಗಳೇನು?: ಸಾಮಾನ್ಯವಾಗಿ ಬೌಲಿಂಗ್ ವೇಳೆ ಬೌಲರ್ ಕೈನಿಂದ ಬಾಲ್ ಹೊರಡುವ ಮುನ್ನವೇ ಕ್ರೀಸ್‌ನಿಂದ ಕಾಲು ಹೊರಕ್ಕಿದ್ದರೆ ಅದು ನೋಬಾಲ್ ಆಗುತ್ತದೆ. ಈ ತೀರ್ಮಾನ ಮುಖ್ಯ ಅಂಪೈರ್ ನೀಡುತ್ತಾರೆ. ಒಂದು ವೇಳೆ ಕ್ರೀಸ್‌ನಲ್ಲಿ ಸಮಸ್ಯೆಯಿಲ್ಲದೆ ಬಾಲು ಫುಲ್‌ಟಾಸ್ ಆಗಿ ಸೊಂಟಕ್ಕಿಂತ ಮೇಲ್ಭಾಗದಲ್ಲಿದ್ದರೆ ಅದು ನೋಬಾಲ್ ಆಗುತ್ತದೆ. ಈ ತೀರ್ಪನ್ನು ಲೆಗ್‌ಅಂಪೈರ್ ಕೊಡಬೇಕು. ಇಲ್ಲದಿದ್ದರೆ ಅದು ನೋಬಾಲ್ ಆಗುವುದಿಲ್ಲ. ಹಾಗೆಯೇ ಸೊಂಟದ ಮೇಲ್ಭಾಗಕ್ಕೆ ಬಾಲ್ ಬರುವ ಸಾಧ್ಯತೆಯಿದ್ದರೂ ಬ್ಯಾಟ್ಸ್‌ಮನ್‌ ಕ್ರೀಸ್‌ನಿಂದ ಆಚೆಯಿದ್ದರೆ ಅದನ್ನು ನೋಬಾಲ್ ನೀಡದಂತೆ ತೀರ್ಪು ನೀಡಬಹುದು.

  • ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ: ಯುವಿಗೆ ಪಡಿಕಲ್ ಉತ್ತರ

    ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ: ಯುವಿಗೆ ಪಡಿಕಲ್ ಉತ್ತರ

    ಬೆಂಗಳೂರು: ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ ಎಂದು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಮಾಡಿದ ಟ್ವೀಟ್‍ಗೆ ಆರ್‌ಸಿಬಿ ಆಟಗಾರ ದೇವದತ್ ಪಡಿಕಲ್ ಅವರು ಉತ್ತರ ನೀಡಿದ್ದಾರೆ.

    ನಿನ್ನೆಯ ವೀಕೆಂಡ್ ಧಮಾಕದ ಮೊದಲ ಮ್ಯಾಚಿನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ಪಡಿಕಲ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಗೆದ್ದು ಬೀಗಿತ್ತು. ಕೊಹ್ಲಿ ಮತ್ತು ಪಡಿಕಲ್ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದ್ದರು.

    ಕೊಹ್ಲಿ ಮತ್ತು ಪಡಿಕಲ್ ಬ್ಯಾಟಿಂಗ್ ಮೆಚ್ಚಿ ಟ್ವೀಟ್ ಮಾಡಿದ್ದ ಯುವರಾಜ್ ಅವರು, ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಎಂಬುದು ಎಂದಿಗೂ ಇರುತ್ತದೆ. ಕಳೆದ ಎಂಟು ವರ್ಷದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬಲು ಆಗದ ಮಾತು. ಪಡಿಕಲ್ ತುಂಬು ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಅವರ ಜೊತೆ ಬ್ಯಾಟ್ ಮಾಡಬೇಕು ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ಎಂದು ನೋಡಬೇಕು ಎಂದು ಹೇಳಿದ್ದರು.

    ಯುವರಾಜ್ ಅವರ ಕಮೆಂಟ್ ನೋಡಿ ರೀಟ್ವೀಟ್ ಮಾಡಿರುವ ಪಡಿಕಲ್ ಅವರು, ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ ಪಾಜಿ. ನಾನು ಫ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮ ಜೊತೆ ಬ್ಯಾಟಿಂಗ್ ಮಾಡುವ ಆಸೆ ಇದೆ. ಬನ್ನಿ ಎಂದು ಬರೆದಿದ್ದಾರೆ. ಜೊತೆಗೆ ಯುವರಾಜ್ ಅವರ ಟ್ವೀಟ್‍ಗೆ ಕೊಹ್ಲಿ ಅವರು ಕಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

    ನಿನ್ನೆಯ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭದಿಂದಲೂ ರಾಜಸ್ಥಾನ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಿಸಿದ ಪಡಿಕ್ಕಲ್ ಐಪಿಎಲ್ 2020ರ ಆವೃತ್ತಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ತಂಡ 124 ರನ್ ಗಳಿಸಿದ್ದ ಸಂದರ್ಭದಲ್ಲಿ, ಭಾರೀ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

    ಐಪಿಎಲ್ 2020ರ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‍ನಲ್ಲಿ ವಿಫಲವಾಗಿದ್ದ ಕೊಹ್ಲಿ ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದರು. ಇನ್ಸಿಂಗ್ ಆರಂಭದಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೊತೆಗೆ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿ ನಿನ್ನೆಯ ಪಂದ್ಯದಲ್ಲಿ ಅಜೇಯರಾಗಿ ಉಳಿದ್ದರು.

  • ನಾಯಕನಾಗಿ ರಾಹುಲ್ ದಾಖಲೆ – ಐಪಿಎಲ್ ಆರಂಭದಲ್ಲೇ ಕನ್ನಡಿಗರ ಅಬ್ಬರ

    ನಾಯಕನಾಗಿ ರಾಹುಲ್ ದಾಖಲೆ – ಐಪಿಎಲ್ ಆರಂಭದಲ್ಲೇ ಕನ್ನಡಿಗರ ಅಬ್ಬರ

    ಅಬುಧಾಬಿ: 6 ತಿಂಗಳು ತಡವಾಗಿ ಆರಂಭವಾದರೂ ಈ ಬಾರಿಯ ಐಪಿಎಲ್ ಹಬ್ಬ ರಂಗೇರಿದೆ. ಜೊತೆಗೆ ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ ಎಂಬಂತೆ ಐಪಿಎಲ್ ಆರಂಭದಲ್ಲೇ ಕರ್ನಾಟಕದ ಯುವ ಆಟಗಾರರು ಮೇಲುಗೈ ಸಾಧಿಸಿದ್ದಾರೆ.

    ಈಗಾಗಲೇ ಐಪಿಎಲ್ ಆರಂಭವಾಗಿ ಒಂದು ವಾರವಾಗಿದೆ. ಟೂರ್ನಿಯ ಏಳು ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಇದೇ ವೇಳೆ ಐಪಿಎಲ್ ಆರಂಭದಲ್ಲೇ ಮೂವರು ಕನ್ನಡಿಗರು ಐಪಿಎಲ್‍ನಲ್ಲಿ ಉತ್ತಮವಾಗಿ ಆಡಿದ್ದಾರೆ. ಬೆಂಗಳೂರು ತಂಡದ ದೇವದತ್ ಪಡಿಕಲ್ ಮತ್ತು ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಐಪಿಎಲ್ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.

    ಕೆ.ಎಲ್ ರಾಹುಲ್
    ಈ ಬಾರಿ ಮೊದಲ ಬಾರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡ ಕೆಎಲ್ ರಾಹುಲ್ ಅವರು, ಕ್ಯಾಪ್ಟನ್ ಆಗಿ ದಾಖಲೆ ಬರೆದಿದ್ದಾರೆ. ಗುರುವಾರ ನಡೆದ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ ಭರ್ಜರಿ 132 ರನ್ ಗಳಿಸಿದರು. ಈ ಮೂಲಕ ನಾಯಕನಾಗಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದರು. ಜೊತೆಗೆ ಐಪಿಎಲ್-2020ಯಲ್ಲಿ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ದೇವದತ್ ಪಡಿಕಲ್
    ಈ ಬಾರಿ ತಾನು ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಆರ್‌ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕಲ್ ಅವರು ಅರ್ಧಶತಕ ಸಿಡಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಪಡಿಕಲ್ 42 ಎಸೆತಗಳಲ್ಲಿ 8 ಭರ್ಜರಿ ಬೌಂಡರಿಯೊಂದಿಗೆ 56 ರನ್ ಸಿಡಿಸಿದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಮಯಾಂಕ್ ಅಗರ್ವಾಲ್
    ಐಪಿಎಲ್‍ನಲ್ಲಿ ಪಂಜಾಬ್ ತಂಡದ ಪರವಾಗಿ ಆಡುತ್ತಿರುವ ಮಯಾಂಕ್ ಅಗರ್ವಾಲ್ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಅಗರ್ವಾಲ್ 60 ಎಸೆತಗಳಲ್ಲಿ 7 ಫೋರ್ ಮತ್ತು 4 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿದರು. ಈ ಮೂಲಕ ಏಕಾಂಗಿಯಾಗಿ ತಂಡವನ್ನು ಟೈ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಜೊತೆಗೆ ಎರಡನೇ ಪಂದ್ಯದಲ್ಲೂ ಕೂಡ ಉತ್ತಮವಾಗಿ ರಾಹುಲ್ ಅವರಿಗೆ ಸಾಥ್ ನೀಡಿದರು.

  • ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಅಬುಧಾಬಿ: ಪಂದ್ಯಕ್ಕೂ ಮುನ್ನ ಒತ್ತಡದಲ್ಲಿ ಇದ್ದೆ. ಆದರೆ ಎರಡು ಬಾಲ್ ಆಡಿದ ನಂತರ ವಿಶ್ವಾಸ ಜಾಸ್ತಿ ಆಯ್ತು ಎಂದು ಆರ್‍ಸಿಬಿ ತಂಡ ಉದಯೋನ್ಮುಖ ಆಟಗಾರ ದೇವದತ್ ಪಡಿಕಲ್ ಹೇಳಿದ್ದಾರೆ.

    ಸೋಮವಾರ ರಾತ್ರಿ ನಡೆದ ಐಪಿಎಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಕನ್ನಡಿಗ ದೇವದತ್ ಪಡಿಕಲ್ ಒಂದು ಮ್ಯಾಚಿನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಅವರು ಪಂದ್ಯಕ್ಕೂ ಮುನ್ನ ಬಹಳ ನರ್ವಸ್ ಆಗಿದ್ದೆ ಎಂದು ಚಹಲ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

    ಪಂದ್ಯ ಮುಗಿದ ಬಳಿಕ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಜೊತೆ ಪಡಿಕಲ್ ಮಾತನಾಡಿದ್ದಾರೆ. ಈ ವೇಳೆ ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ. ಸಂಜೆ ಊಟದ ನಂತರ ರೂಮಿನಲ್ಲೂ ಕೂಡ ತುಂಬ ಗೊಂದಲದಲ್ಲಿ ಓಡಾಡುತ್ತಿದ್ದೆ. ಆದರೆ ಬ್ಯಾಟಿಂಗ್ ಮಾಡಲು ಬಂದಾಗ ಎರಡು ಬಾಲ್ ಆಡಿದ ನಂತರ ವಿಶ್ವಾಸ ಹೆಚ್ಚಾಯ್ತು. ಇದಾದ ನಂತರ ಚೆನ್ನಾಗಿ ಆಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

    ಇದೇ ವೇಳೆ ವಿರಾಟ್, ಫಿಂಚ್ ಮತ್ತು ಎಬಿಡಿ ಜೊತೆ ಆಟವಾಡುತ್ತಿರುವ ಅನುಭವ ಹಂಚಿಕೊಂಡಿರುವ ಪಡಿಕಲ್, ಕಳೆದ ಒಂದು ತಿಂಗಳಿನಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಈ ವೇಳೆ ವಿರಾಟ್ ಬಹಳ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು. ಅಲ್ಲಿ ನಮಗೆ ಕಲಿಯುವುದಕ್ಕೆ ಬಹಳ ಇತ್ತು. ಕೊಹ್ಲಿ ಅವರನ್ನು ನಾನು ಪ್ರಶ್ನೆ ಮಾಡುತ್ತಲೇ ಇರುತ್ತಿದ್ದೆ. ಈ ಪಂದ್ಯದಲ್ಲಿ ನಾನು ಫಿಂಚ್ ಅವರ ಜೊತೆ ಆಟವಾಡಿದೆ. ಈ ವೇಳೆ ಅವರು ನನಗೆ ಸ್ಟ್ರೈಕ್ ನೀಡುತ್ತಿದ್ದರು. ಇದರಿಂದ ನನಗೆ ಬಹಳ ಖುಷಿ ಆಯ್ತು ಎಂದು ಪಡಿಕಲ್ ತಿಳಿಸಿದ್ದಾರೆ.

    ಸೋಮವಾರ ದುಬೈ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 20 ವರ್ಷದ ಯುವ ಆರ್‍ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್ ಹೊಡೆದು ಔಟಾಗಿದ್ದರು. 42 ಎಸೆತ ಎದುರಿಸಿದ ಇನ್ನಿಂಗ್ಸ್‍ನಲ್ಲಿ 8 ಬೌಂಡರಿ ಸಿಡಿಸಿದ್ದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ದೇವದತ್ ಪಡಿಕಲ್ ಪಾತ್ರವಾಗಿದ್ದಾರೆ.