Tag: ದೇವದತ್ತ ಪಡಿಕ್ಕಲ್

  • ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಬೆಂಗಳೂರು: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಫಾಫ್‌ ಡು ಪ್ಲೆಸಿಸ್‌‌ (Faf du Plessis) ಭರ್ಜರಿ ಬ್ಯಾಟಿಂಗ್‌ ಹಾಗೂ ಹರ್ಷಲ್‌ ಪಟೇಲ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಅಶ್ವಿನ್‌ 2ನೇ ಎಸೆತದಲ್ಲಿ 2 ರನ್‌ ತೆಗೆದುಕೊಂಡರು. 3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದಾಗ ಇನ್ನೇನು ಪಂದ್ಯ ಗೆದ್ದೇ ಬಿಟ್ಟಿತ್ತು ಎನ್ನುವಷ್ಟು ಆರ್‌ಸಿಬಿ ಫ್ಯಾನ್ಸ್‌ ಆತಂಕಗೊಂಡಿದ್ದರು. ಆದ್ರೆ ಅಶ್ವಿನ್‌ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿ ರಾಜಸ್ಥಾನ್‌ ತಂಡಕ್ಕೆ ನಿರಾಸೆ ಮೂಡಿಸಿದರು. 5ನೇ ಎಸೆತದಲ್ಲಿ ಧ್ರುವ್‌ ಜುರೆಲ್‌ 1 ರನ್‌ ಕದ್ದರೆ, 6ನೇ ಎಸೆತದಲ್ಲಿ ಅಬ್ದುಲ್‌ ಬಶಿತ್‌ 1 ರನ್‌ ಗಳಿಸಿದರು.

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಜೋಸ್‌ ಬಟ್ಲರ್‌ ಎರಡೇ ಎಸೆತಗಳಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ದೇವದತ್‌ ಪಡಿಕಲ್‌ (Devdutt Padikkal) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 66 ಎಸೆತಗಳಲ್ಲಿ ಈ ಜೋಡಿ 98 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ನಗೆ ಚಿಮ್ಮಿತ್ತು. ಪಡಿಕಲ್‌ 54 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 47 ರನ್‌ (37 ಎಸೆತ, 5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ನಂತರ 15‌ ಎಸೆತಗಳಲ್ಲಿ 22 ರನ್‌ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕ್ರಮಣಕಾರಿ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ಶಿಮ್ರಾನ್‌ ಹೆಟ್ಮೇಯರ್‌ ವಿಕೆಟ್‌ ಕೈಚೆಲ್ಲಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರವಿಚಂದ್ರನ್‌ ಅಶ್ವಿನ್‌ 6 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರೆ, ಧ್ರುವ್‌ ಜುರೆಲ್‌ 16 ಎಸೆತಗಳಲ್ಲಿ 34 ರನ್‌ (2 ಸಿಕ್ಸರ್‌, 2 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್‌ ಪಟೇಲ್‌ ಪ್ರಮುಖ ಮೂರು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಡೇವಿಡ್‌ ವಿಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲೇ ಟ್ರೆಂಟ್‌ ಬೋಲ್ಟ್‌ ಬೌಲಿಂಗ್‌ ದಾಳಿಗೆ ಔಟಾದರು, ಈ ಬೆನ್ನಲ್ಲೇ ಶಹಬಾಜ್‌ ಅಹ್ಮದ್‌ ಕೂಡ 2 ರನ್‌ ಗಳಿಸಿ ಔಟಾದರು. ಇದರಿಂದ ಆರಂಭದಲ್ಲೇ ಆರ್‌ಸಿಬಿಗೆ ಸಂಕಷ್ಟ ಎದುರಾಗಿತ್ತು.

    ಬಳಿಕ ಒಂದಾದ ಫಾಫ್‌ ಡು ಪ್ಲೆಸಿಸ್‌ ಹಾಗೂ ಸಿಕ್ಸರ್‌ ವೀರ ಗ್ಲೇನ್‌ ಮ್ಯಾಕ್ಸ್‌ವೆಲ್‌ ರಾಜಸ್ಥಾನ್‌ ಬೌಲರ್‌ಗಳನ್ನ ಚೆಂಡಾಡಿದರು. 3ನೇ ವಿಕೆಟ್‌ಗೆ ಈ ಜೋಡಿ 66 ಎಸೆತಗಳಲ್ಲಿ ಬರೋಬ್ಬರಿ 127 ರನ್‌ ಸಿಡಿಸಿತ್ತು. ಈ ವೇಳೆ ಡುಪ್ಲೆಸಿಸ್‌ 39 ಎಸೆತಗಳಲ್ಲಿ 62 ರನ್‌ (8 ಬೌಂಡರಿ, 2 ಸಿಕ್ಸರ್)‌ ಸಿಡಿಸಿದರೆ, ಮ್ಯಾಕ್ಸ್‌ವೆಲ್‌ 77 ರನ್‌ (44 ಎಸೆತ, 4 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗ ಕಡಿಮೆಯಾಗುವ ಜೊತೆಗೆ ಒಂದೊಂದೇ ವಿಕೆಟ್‌ ಪತನಗೊಂಡಿತು. ಮಹಿಪಾಲ್‌ ಲೊಮ್ರೋರ್‌ 8 ರನ್‌, ದಿನೇಶ್‌ ಕಾರ್ತಿಕ್‌ 16 ರನ್‌, ವಾನಿಂದು ಹಸರಂಗ 6 ರನ್‌ ಗಳಿಸಿದರೆ, ಸುಯಶ್‌ ಪ್ರಭುದೇಸಾಯ್‌ ಹಾಗೂ ವಿಜಯ್‌ಕುಮಾರ್‌ ವೈಶಾಕ್‌ ಶೂನ್ಯ ಸುತ್ತಿದರು. ಮೊಹಮ್ಮದ್‌ ಸಿರಾಜ್‌ 1 ರನ್‌ ಹಾಗೂ ಡೇವಿಡ್ ವಿಲ್ಲಿ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌ ಹಾಗೂ ಸಂದೀಪ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌, ಯಜುವೇಂದ್ರ ಚಹಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ಭಾರತ ತಂಡಕ್ಕೆ ಒಟ್ಟಿಗೆ ಪಾದಾರ್ಪಣೆ ಮಾಡಿದ ಧೋನಿ, ಕೊಹ್ಲಿ ಶಿಷ್ಯರು

    ಭಾರತ ತಂಡಕ್ಕೆ ಒಟ್ಟಿಗೆ ಪಾದಾರ್ಪಣೆ ಮಾಡಿದ ಧೋನಿ, ಕೊಹ್ಲಿ ಶಿಷ್ಯರು

    ಕೊಲಂಬೋ: ಭಾರತ ಟಿ20 ತಂಡಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ಅವರ ಶಿಷ್ಯರಿಬ್ಬರು ಒಟ್ಟಿಗೆ ಪಾದಾರ್ಪಣೆ ಮಾಡಿದ್ದಾರೆ.

    ಭಾರತ ಕ್ರಿಕೆಟ್‍ಗೆ ಉತ್ತಮ ಆಟಗಾರರನ್ನು ಸಿದ್ಧಪಡಿಸಿದ ಕೀರ್ತಿ ಐಪಿಎಲ್‍ಗೆ ಸಲ್ಲುತ್ತದೆ. ಯುವ ಆಟಗಾರರಿಗೆ ಭಾರತ ತಂಡ ಸೇರಲು ಐಪಿಎಲ್ ಒಂದು ಉತ್ತಮ ವೇದಿಕೆಯಾಗಿದೆ. ಈಗಾಗಲೇ ಸಾಕಷ್ಟು ಅಟಗಾರರು ಐಪಿಎಲ್ ಮೂಲಕ ಬೆಳಕಿಗೆ ಬಂದು ಟೀಂ ಇಂಡಿಯಾ ಪರ ಅಬ್ಬರಿಸಿದ್ದಾರೆ. ಅದರಂತೆ ಇದೀಗ ಪ್ರಸ್ತುತ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿರುವ ಸಾಕಷ್ಟು ಆಟಗಾರರು ಐಪಿಎಲ್‍ನಲ್ಲಿ ಆಡಿ ಮಿಂಚು ಹರಿಸಿದವರಾಗಿದ್ದಾರೆ.

    ಐಪಿಎಲ್‍ನಿಂದಾಗಿ ಭಾರತ ತಂಡದ ಬೆಂಚ್ ಸ್ಟ್ರೇಂತ್ ಕೂಡ ಬಲವಾಗಿದೆ. ಸಾಕಷ್ಟು ಆಟಗಾರರು ಭಾರತ ತಂಡಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಅದರಂತೆ ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಧೋನಿ ಶಿಷ್ಯ ಋತುರಾಜ್ ಗಾಯಕ್ವಾಡ್ ಮತ್ತು ಕೊಹ್ಲಿ ಶಿಷ್ಯ ದೇವದತ್ ಪಡಿಕ್ಕಲ್ ಒಟ್ಟಿಗೆ ಟಿ20 ಕ್ರಿಕೆಟ್ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ: ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಗರಡಿಯಲ್ಲಿ ಪಳಗಿರುವ ಋತುರಾಜ್ ಗಾಯಕ್ವಾಡ್ ಮತ್ತು ಆರ್​ಸಿಬಿ ತಂಡದ ಕ್ಯಾಪ್ಟನ್ ಕೊಹ್ಲಿಯ ನಂಬಿಕಸ್ಥ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡಿರುವ ಪಡಿಕ್ಕಲ್ ಒಟ್ಟಿಗೆ ಭಾರತದ ಪರ ಡೆಬ್ಯೂ ಪಂದ್ಯವಾಡಿರುವುದು ವಿಶೇಷ. ಈ ಇಬ್ಬರು ಕೂಡ ಐಪಿಎಲ್‍ನಲ್ಲಿ ದಿಗ್ಗಜ ಆಟಗಾರರ ನಡುವೆ ಉತ್ತಮ ಪ್ರದರ್ಶನ ತೋರಿ ಇದೀಗ ಭಾರತ ತಂಡದ ಪರ ಆಡುವ ಅವಕಾಶ ಪಡೆದಿದ್ದಾರೆ.

    ಧೋನಿ ಶಿಷ್ಯ ಗಾಯಕ್ವಾಡ್ ಸಿಎಸ್‍ಕೆ ಪರ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರಂಭಿಕ ಆಟಗಾರನಾಗಿ 7 ಪಂದ್ಯಗಳಿಂದ 2 ಅರ್ಧಶತಕ ಸಹಿತ 196 ರನ್ ಸಿಡಿಸಿದ್ದಾರೆ. ಕೊಹ್ಲಿ ಶಿಷ್ಯ ಪಡಿಕ್ಕಲ್ ಆರ್​ಸಿಬಿ ಪರ 6 ಪಂದ್ಯಗಳಿಂದ 1 ಶತಕ ಸಹಿತ 195 ರನ್ ಚಚ್ಚಿದ್ದಾರೆ. ಈ ಮೂಲಕ ಐಪಿಎಲ್‍ನಿಂದಾಗಿ ಈ ಇಬ್ಬರು ಆಟಗಾರರು ಇದೀಗ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

  • ಪಡಿಕ್ಕಲ್ ಶತಕ, ಕೊಹ್ಲಿಯಿಂದ 2 ದಾಖಲೆ – ಬೆಂಗಳೂರಿಗೆ 10 ವಿಕೆಟ್‌ಗಳ ಭರ್ಜರಿ ಜಯ

    ಪಡಿಕ್ಕಲ್ ಶತಕ, ಕೊಹ್ಲಿಯಿಂದ 2 ದಾಖಲೆ – ಬೆಂಗಳೂರಿಗೆ 10 ವಿಕೆಟ್‌ಗಳ ಭರ್ಜರಿ ಜಯ

    – ಮೊದಲ ವಿಕೆಟ್‌ಗೆ 181 ರನ್ ಜೊತೆಯಾಟ
    – ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ

    ಮುಂಬೈ: ದೇವದತ್ ಪಡಿಕ್ಕಲ್ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧಶತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ 9 ವಿಕೆಟ್‌ಗೆ 177 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಆರ್‌ಸಿಬಿ 16.3 ಓವರ್‌ಗಳಲ್ಲಿ 181 ರನ್ ಹೊಡೆದು ಜಯ ಸಾಧಿಸಿತು.

    ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 4 ಪಂದ್ಯಗಳನ್ನು ಆರ್‌ಸಿಬಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬೆಂಗಳೂರು ಒಟ್ಟು 8 ಅಂಕದೊಂದಿಗೆ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದಿದೆ.

    ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತದಲ್ಲಿ ಶತಕ ಹೊಡೆದರು. ವಿರಾಟ್ ಕೊಹ್ಲಿ 34 ಎಸೆತದಲ್ಲಿ ಅರ್ಧಶತಕ ಹೊಡೆದರು. ಅಂತಿಮವಾಗಿ ಪಡಿಕ್ಕಲ್ 101 ರನ್(52 ಎಸೆತ, 11 ಬೌಂಡರಿ, 6 ಸಿಕ್ಸ್) ಹೊಡೆದರೆ ವಿರಾಟ್ ಕೊಹ್ಲಿ 72 ರನ್(47 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದರು.

    ರಾಜಸ್ಥಾನ ರಾಯಲ್ಸ್ 7 ಮಂದಿ ಬೌಲರ್‌ಗಳನ್ನು ಪ್ರಯೋಗಿಸಿದ್ದರೂ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ.

    ಕೊಹ್ಲಿ ದಾಖಲೆ – ಈ ಪಂದ್ಯ ಆಡುವ ಮೊದಲು ಕೊಹ್ಲಿ 5,949 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 51 ರನ್ ಹೊಡೆಯುವ ಮೂಲಕ 6 ಸಾವಿರ ರನ್‌ಗಳ ಗಡಿಯನ್ನು ದಾಟಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ  6 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಪಟ್ಟದ ಜೊತೆಗೆ ಒಂದೇ ತಂಡದ ಪರವಾಗಿ ಆಡಿ 6 ಸಾವಿರ ರನ್ ಹೊಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

    ರನ್ ಏರಿದ್ದು ಹೇಗೆ?
    50 ರನ್ – 31 ಎಸೆತ
    100 ರನ್ – 58 ಎಸೆತ
    150 ರನ್ – 81 ಎಸೆತ
    181 ರನ್ – 99 ಎಸೆತ

    43 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ನೆರವಾದರು. ನಾಯಕ ಸಂಜು ಸ್ಯಾಮ್ಸನ್ 21 ರನ್(18 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರೆ ಶಿವಂ ದುಬೆ 46 ರನ್(32 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

    ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಯಾನ್ ಪರಾಗ್ 25 ರನ್(16 ಎಸೆತ, 4 ಬೌಂಡರಿ), ರಾಹುಲ್ ತೆವಾಟಿಯಾ 40 ರನ್(23 ಎಸೆತ, 4 ಬೌಂಡರಿ, 2 ಸಿಕ್ಸರ್) ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.

    ಮೊಹಮ್ಮದ್ ಸಿರಾಜ್ 27 ರನ್ ನೀಡಿ 3 ವಿಕೆಟ್ ಕಿತ್ತರು. ಹರ್ಷಲ್ ಪಟೇಲ್ 47 ರನ್ ನೀಡಿ 3 ವಿಕೆಟ್ ಪಡೆದರು. ಜೆಮಿಸನ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.