Tag: ದೆಹಲಿ ಹೈ ಕೋರ್ಟ್

  • ಗುರುತಿನ ಪುರಾವೆಗಳಿಲ್ಲದೇ 2,000 ರೂ. ನೋಟುಗಳ ವಿನಿಮಯ – ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಯಾವುದೇ ಗುರುತಿನ ಪುರಾವೆಗಳಿಲ್ಲದೇ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅವಕಾಶ ನೀಡುವ ಆರ್‌ಬಿಐ (Reserve Bank of India) ಮಾರ್ಗಸೂಚಿಗಳ ವಿರುದ್ಧ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸುಧಾಂಶು ಧುಲಿಯಾ ನೇತೃತ್ವದ ದ್ವಿ ಸದಸ್ಯ ಪೀಠ ಬೇಸಿಗೆ ರಜೆಯ ಬಳಿಕ ಈ ಅರ್ಜಿಯನ್ನು ಸಿಜೆಐ ಪೀಠದ ಮುಂದೆ ಪ್ರಸ್ತಾಪಿಸಬಹುದು ಎಂದು ಹೇಳಿದೆ.

    ಆರ್‍ಬಿಐ ನಿರ್ಧಾರವನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್ (Delhi High Court) ತೀರ್ಪಿನ ವಿರುದ್ಧ ಅಶ್ವಿನಿ ಉಪಾಧ್ಯಾಯ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಆರ್‌ಬಿಐ ಮಾರ್ಗಸೂಚಿಗಳು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ. ಅಲ್ಲದೇ ಅಪರಾಧಿಗಳು ಕಪ್ಪು ಹಣವನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. 3 ದಿನಗಳಲ್ಲಿ 50,000 ಕೋಟಿ ರೂ. ವಿನಿಮಯವಾಗಿದೆ. ಇದು ವಿಶ್ವದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

    ಕಪ್ಪು ಹಣ, ಖೋಟಾನೋಟು ಮತ್ತು ಮನಿ ಲಾಂಡರಿಂಗ್ ಎದುರಿಸಲು ಉದ್ದೇಶಿಸಿರುವ ಬಹು ಶಾಸನದ ಉದ್ದೇಶಗಳಿಗೆ ಹೈಕೋರ್ಟ್ ತೀರ್ಪು ವಿರುದ್ಧವಾಗಿದೆ. ಆರ್‌ಬಿಐ ಅಧಿಸೂಚನೆಯು ಭಾರತದಲ್ಲಿ ಕಾನೂನಿನ ನಿಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಜೆಯ ಸಮಯದಲ್ಲಿ ವಿಚಾರಣೆ ನಡೆಸಲು ಈ ಅರ್ಜಿ ಅರ್ಹವಾಗಿಲ್ಲ. ಬೇಸಿಗೆ ವಿರಾಮದ ನಂತರ ಮುಖ್ಯ ನ್ಯಾಯಾಧೀಶರ ಮುಂದೆ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಹೇಳಿತು. ಇದಕ್ಕೆ ಉತ್ತರಿಸಿದ ಉಪಾಧ್ಯಾಯ, ಅಲ್ಲಿಯವರೆಗೆ ಎಲ್ಲಾ ಕಪ್ಪು ಹಣವು ಬಿಳಿ ಹಣವಾಗಿರುತ್ತದೆ ಎಂದರು.

    ದೆಹಲಿ ಹೈಕೋರ್ಟ್ ಮೇ 29 ರಂದು ತನ್ನ ತೀರ್ಪಿನಲ್ಲಿ 2,000 ರೂ. ನೋಟುಗಳು ತಮ್ಮ ಉದ್ದೇಶವನ್ನು ಪೂರೈಸಿವೆ ಮತ್ತು ಅದನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನೀತಿ ವಿಷಯವಾಗಿದ್ದು, ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನೂ ಓದಿ: ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್

  • 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    – ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಕೋರ್ಟ್

    ನವದೆಹಲಿ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆ ವಿರುದ್ಧ ನಟಿ, ಪರಿಸರ ಹೋರಾಟಗಾರ್ತಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈ ಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಅರ್ಜಿದಾರರು ‘ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು 20 ಲಕ್ಷ ರೂ.ಗಳ ದಂಡ ವಿಧಿಸಿದೆ.

    ಜೂಹಿ ಚಾವ್ಲಾ, ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಹಾಗೂ ಟೀನಾ ವಚನಿ ಅವರು 5ಜಿ ತಂತ್ರಜ್ಞಾನದ ವಿರುದ್ಧ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. 5ಜಿ ತಂತ್ರಜ್ಞಾನದಿಂದಾಗಿ ಅಪಾಯಕಾರಿ ರೇಡಿಯೇಶನ್ ಮಾನವರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ ಪರಿಸರ ವ್ಯವಸ್ಥೆಯನ್ನು ಶಾಶ್ವತವಾಗಿ ಹಾನಿಗೊಳಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ಅರ್ಜಿದಾರರ ವಾದವು ಅಸಹ್ಯಕರವಾಗಿದ್ದು, ಏನು ಹೇಳುತ್ತಿದ್ದಾರೆ ಎಂಬುದರ ಕುರಿತು ಅವರಿಗೇ ಜ್ಞಾನವಿಲ್ಲ. ಕೇವಲ ಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಜೆ.ಆರ್.ಮಿಧಾ ಅವರು ಚಾಟಿ ಬೀಸಿದರು.

    ನೇರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಬದಲು ಟೆಲಿಕಾಂ ಇಲಾಖೆಯೊಂದಿಗೆ ಏಕೆ ಚರ್ಚಿಸಿಲ್ಲ ಎಂದು ನ್ಯಾಯಮೂರ್ತಿ ಮಿಧಾ ಅವರು ವಿಚಾರಣೆ ವೇಳೆ ಜೂಹಿ ಚಾವ್ಲಾ ಹಾಗೂ ಉಳಿದ ಇಬ್ಬರು ಅರ್ಜಿದಾರರನ್ನು ಪ್ರಶ್ನಿಸಿದರು. ಅಲ್ಲದೆ ನ್ಯಾಯಾಲಯಕ್ಕೆ ಬರುವ ಮೊದಲು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಚರ್ಚಿಸಿ ಎಂದು ಜೂಹಿ ಚಾವ್ಲಾ ಹಾಗೂ ಇತರ ಇಬ್ಬರು ಅರ್ಜಿದಾರರಿಗೆ ಸೂಚಿಸಿತು.

    ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಅರ್ಜಿದಾರರ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ಲಿಂಕ್‍ನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ದೆಹಲಿ ಪೊಲೀಸರು ವ್ಯಕ್ತಿಗಳನ್ನು ಗುರುತಿಸಿ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

  • ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ನವದೆಹಲಿ: ವ್ಯಾಕ್ಸಿನ್ ಪಡೆಯುವ ಕುರಿತು ಜಾಗೃತಿಯ ಕಾಲರ್ ಟ್ಯೂನ್ ಬಗ್ಗೆ ದೆಹಲಿ ಹೈ ಕೋರ್ಟ್ ಕಿಡಿ ಕಾರಿದ್ದು, ಸಾಕಷ್ಟು ವ್ಯಾಕ್ಸಿನ್ ಇಲ್ಲ, ಹೀಗಿರುವಾಗ ಜನ ಹೇಗೆ ಲಸಿಕೆ ಪಡೆಯಬೇಕು? ಕಿರಿಕಿರಿಯುಂಟು ಮಾಡುವ ಈ ಕಾಲರ್ ಟ್ಯೂನ್‍ನ್ನು ಇನ್ನೂ ಎಷ್ಟು ದಿನ ಕೇಳಬೇಕು ಎಂದು ದೆಹಲಿ ಹೈ ಕೋರ್ಟ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

    ಪ್ರತಿ ಬಾರಿ ಕರೆ ಮಾಡಿದಾಗ ನೀವು ಕಿರಿಕಿರಿ ಉಂಟುಮಾಡುವ ಕಾಲರ್ ಟ್ಯೂನ್ ಪ್ಲೇ ಮಾಡುತ್ತಿದ್ದೀರಿ. ಇನ್ನೂ ಎಷ್ಟು ದಿನ ಇದನ್ನು ಕೇಳಬೇಕೋ ತಿಳಿಯುತ್ತಿಲ್ಲ. ನಿಮ್ಮ ಬಳಿ ಸಾಕಷ್ಟು ಲಸಿಕೆ ಲಭ್ಯತೆ ಇದೆಯೇ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈ ಕೋರ್ಟ್ ಪ್ರಶ್ನಿಸಿದೆ. ನೀವು ಜನರಿಗೆ ಲಸಿಕೆ ನೀಡುತ್ತಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡುತ್ತಿದ್ದೀರಿ. ಯಾರಿಗೂ ಲಸಿಕೆ ಇಲ್ಲದಿದ್ದಾಗ, ಯಾರು ಲಸಿಕೆ ಹಾಕಿಸಿಕೊಳ್ಳಬೇಕು? ಈ ಸಂದೇಶದ ಅರ್ಥವೇನು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರಿದ್ದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

    ಇಂತಹ ವಿಚಾರಗಳಲ್ಲಿ ಸರ್ಕಾರ ಆವಿಷ್ಕಾರಕವಾಗಿರಬೇಕು. ಕೇವಲ ಒಂದನ್ನು ತಯಾರಿಸಿ ಯಾವಾಗಲೂ ಅದನ್ನೇ ಹಾಕುವ ಬದಲು, ಇಂತಹ ಹೆಚ್ಚಿನ ಸಂದೇಶಗಳನ್ನು ಸಿದ್ಧಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಸ್ಥಿತಿಗೆ ಸ್ಪಂದಿಸಬೇಕು. ಹೀಗಾಗಿ ವಿವಿಧ ರೀತಿಯ ಹೆಚ್ಚು ಸಂದೇಶಗಳನ್ನು ತಯಾರಿಸಿ, ಪ್ರತಿ ಬಾರಿ ಬೇರೆ ಬೇರೆ ಕಾಲರ್ ಟ್ಯೂನ್ ಕೇಳಿದಾಗ ಅವರಿಗೆ ಸಹಾಯವಾಗಬಹುದು ಎಂದು ನ್ಯಾಯಾಲಯ ಸೂಚಿಸಿದೆ.

    ಟಿವಿ ನಿರೂಪಕರು ಹಾಗೂ ನಿರ್ಮಾಪಕರ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ, ಈ ಮೂಲಕ ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅರಿವು ಮೂಡಿಸಿ. ನಾವು ಸಮಯವನ್ನು ಕಳೆಯುತ್ತಿದ್ದೇವೆ. ಕೊರೊನಾ ನಿರ್ವಹಣೆ ಮಾಹಿತಿಯನ್ನು ಟಿವಿ, ಮುದ್ರಣ ಮಾಧ್ಯಮ ಹಾಗೂ ಕಾಲರ್ ಟ್ಯೂನ್‍ಗಳ ಮೂಲಕ ಪ್ರಸಾರ ಮಾಡಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಮೇ.18ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.

  • ಎಲ್ಲ ಕೇಸ್‍ಗಳಲ್ಲಿ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್‌ನಲ್ಲಿ ತೊಡಗಿದ್ರೆ ರೇಪ್ ಆಗಲ್ಲ: ಹೈಕೋರ್ಟ್

    ಎಲ್ಲ ಕೇಸ್‍ಗಳಲ್ಲಿ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್‌ನಲ್ಲಿ ತೊಡಗಿದ್ರೆ ರೇಪ್ ಆಗಲ್ಲ: ಹೈಕೋರ್ಟ್

    – ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

    ನವದೆಹಲಿ: ಎಲ್ಲ ಪ್ರಕರಣಗಳಲ್ಲಿ ವಿವಾಹವಾಗುವುದಾಗಿ ನಂಬಿಸಿ ಸುದೀರ್ಘ ಸಮಯದವರೆಗೆ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ದೆಹಲಿ ಹೈ ಕೋರ್ಟ್ ತಿಳಿಸಿದೆ.

    ಗುರುವಾರ ಅತ್ಯಾಚಾರ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್, ವಿವಾಹವಾಗುವುದನ್ನು ನಂಬಿ ಮಹಿಳೆ ಸುಧೀರ್ಘವಾಗಿ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸುದೀರ್ಘ ಹಾಗೂ ಅನಿರ್ದಿಷ್ಟ ಅವಧಿಯಲ್ಲಿ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ವಿವಾಹದ ಭರವಸೆ ಎಂದು ನಂಬಲಾಗುವುದಿಲ್ಲ ಎಂದು ತಿಳಿಸಿದೆ.

    ನ್ಯಾಯಾಧೀಶರಾದ ವಿಭು ಬಖ್ರು ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಕೆಲ ಸಂದರ್ಭಗಳಲ್ಲಿ ವಿವಾಹದ ಭರವಸೆ ನೀಡಿದ ಬಳಿಕ ಲೈಂಗಿಕತೆಯಲ್ಲಿ ತೊಡಗುತ್ತಾರೆ. ಆದರೆ ದೀರ್ಘಕಾಲಿನ ಅನ್ಯೂನ್ಯತೆಯ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ. ಕೆಲ ಸಂದರ್ಭಗಳಲ್ಲಿ ವಿವಾಹದ ಭರವಸೆಯಿಂದ ಲೈಂಗಿಕ ಸಂಬಂಧ ಬೆಳೆಸಲು ಒಬ್ಬರು ಪ್ರೇರೇಪಿಸುತ್ತಾರೆ. ಈ ಸಮಯದಲ್ಲಿ ಇಷ್ಟವಿಲ್ಲದವರು ತಿರಸ್ಕರಿಸಬಹುದು. ತಿರಸ್ಕರಿಸದ ಬಳಿಕ ಒತ್ತಾಯವೂ ಕೇಳಿ ಬರಬಹುದು. ಆದರೆ ದೀರ್ಘ ಕಾಲದವರೆಗೆ ಸಂಬಂಧ ಬೆಳೆಸುವುದು ಸಾಧ್ಯವಿಲ್ಲ, ಯಾರಾದರೂ ಒಬ್ಬರು ನಂಬಿಕೆ ಇಲ್ಲವಾದಲ್ಲಿ ತಿರಸ್ಕರಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

    ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿದ ಪ್ರಕರಣಗಳಲ್ಲಿ ಯಾರಾದರೂ ಒಬ್ಬರು ಒಪ್ಪಿಗೆಯನ್ನು ನಿರಾಕರಿಸಬಹದು. ಇದು ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ಅಡಿಯಲ್ಲಿ ಅತ್ಯಾಚಾರ ಅಪರಾಧವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ದೀರ್ಘಕಾಲದವರೆಗೆ ಅನ್ಯೋನ್ಯತೆ ಹೊಂದಿದ್ದ ಪ್ರಕರಣಗಳಲ್ಲಿ ಇದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

    ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಬಳಿಕ ನ್ಯಾಯಾಲಯ ಈ ಕುರಿತು ಸ್ಪಷ್ಟಪಡಿಸಿದೆ. 2008ರಲ್ಲಿ ವ್ಯಕ್ತಿಯೊಂದಿಗೆ ಮಹಿಳೆ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಮೂರ್ನಾಲ್ಕು ತಿಂಗಳ ಬಳಿಕ ವ್ಯಕ್ತಿ ತನ್ನನ್ನು ವಿವಾಹವಾಗುವುದಾಗಿ ಭರವಸೆ ನಿಡಿದ್ದ. ಹೀಗಾಗಿ ಅವನೊಂದಿಗೆ ಓಡಿಹೋಗಿದ್ದೆ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಅಲ್ಲದೆ ಆರೋಪಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಆದರೆ ಕೋರ್ಟ್ ಮಹಿಳೆಯ ವಾದವನ್ನು ತಳ್ಳಿ ಹಾಕಿದ್ದು, ಆರೋಪಿಯನ್ನು ಖುಲಾಸೆಗೊಳಿಸಿದೆ.

  • ಪಿಎಂ ಕೇರ್ಸ್ ಫಂಡ್ ಅನುಮಾನ ಮೂಡಿಸಿದೆ, ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವಂತೆ ಪಿಐಎಲ್ ಸಲ್ಲಿಕೆ

    ಪಿಎಂ ಕೇರ್ಸ್ ಫಂಡ್ ಅನುಮಾನ ಮೂಡಿಸಿದೆ, ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವಂತೆ ಪಿಐಎಲ್ ಸಲ್ಲಿಕೆ

    ನವದೆಹಲಿ: ಪಿಎಂ ಕೇರ್ಸ್ ಫಂಡ್ ಗೆ ಬರುತ್ತಿರುವ ದೇಣಿಗೆ ಮೂಲ ಮತ್ತು ಅದನ್ನು ಯಾವ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸಲು ಸೂಚಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

    ಮಾಹಿತಿ ಹಕ್ಕು ಕಾಯ್ದೆಯಡಿ ಪಿಎಂ ಕೇರ್ಸ್ ಮಾಹಿತಿ ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಳಿಕ ಡಾ.ಎಸ್.ಎಸ್ ಹೂಡಾ ಅವರು ವಕೀಲ ಆದಿತ್ಯ ಹೂಡಾ ಮೂಲಕ ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸಲ್ಲಿಸಿದ್ದಾರೆ.

    ಸರ್ಕಾರಿ ಸ್ವಾಮ್ಯದ ಅಥಾವ ಸರ್ಕಾರಿ ನಿಯಂತ್ರಿತ ಎಲ್ಲ ಹಣಕಾಸು ಸಂಸ್ಥೆಗಳು ಮಾಹಿತಿ ಹಕ್ಕಿನಡಿ ಬರಲಿದೆ. ಪಿಎಂ ಕೇರ್ಸ್ ಟ್ರಸ್ಟ್ ಗೆ ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿದ್ದು, ಹಣಕಾಸು ಸಚಿವರು, ರಕ್ಷಣಾ ಸಚಿವರು ಮತ್ತು ಗೃಹ ಸಚಿವರು ಟ್ರಸ್ಟಿಗಳಾಗಿದ್ದಾರೆ ಹೀಗಾಗಿ ಪಿಎಂ ಕೇರ್ಸ್ ಕೂಡಾ ಸರ್ಕಾರದ ಹಣಕಾಸು ಸಂಸ್ಥೆಯಾಗಲಿದೆ. ಅಲ್ಲದೆ ಪಿಎಂ ಕೇರ್ಸ್ ಗೆ ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಂದ ದೊಡ್ಡ ಮೊತ್ತದ ಹಣ ಹರಿದು ಬಂದಿದೆ. ಸಾರ್ವಜನಿಕರು ಹಣ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಒಂದು ದಿನದ ಸಂಬಂಳವನ್ನು ನೀಡಿದ್ದಾರೆ. ಪಿಎಂ ಕೇರ್ಸ್ ಈಗ ಸಾರ್ವಜನಿಕ ಪ್ರಾಧಿಕಾರವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

    ಪಿಎಂ ಕೇರ್ಸ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದಾದರೆ ಇದಕ್ಕೆ ಹಣ ನೀಡುವಂತೆ ಸರ್ಕಾರ ಜನರನ್ನು ಪ್ರೇರೆಪಿಸಬಹುದಾ ಎಂದು ಕೋರ್ಟ್ ಪರಿಶೀಲಿಸಬೇಕು. ಮಾಹಿತಿ ಹಕ್ಕು ಆರ್ಟಿಕಲ್ 19(1)(ಎ) ಸಾರ್ವಜನಿಕ ಪ್ರಾಧಿಕಾರವಲ್ಲದಿದ್ದರೂ ಜನರ ಹಣ ವ್ಯಯದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇದನ್ನು ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

    ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಈ ಸಂದರ್ಭದಲ್ಲಿ ಪಿಎಂ ಕೇರ್ಸ್ ಫಂಡ್ ಯಾವುದಕ್ಕೆ ಹೇಗೆ ಬಳಕೆಯಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಬೇಕು. ಈ ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೊರೊನಾಗಾಗಿ ನಿಧಿ ಸ್ಥಾಪಿಸಿರುವಾಗ ಮಾಹಿತಿ ನೀಡಲು ಹಿಂಜರಿಕೆ ಯಾಕೆ ಹಾಗೂ ಇದರ ದುರ್ಬಳಕೆಯಾಗಿಲ್ಲ ಎನ್ನುವುದಾದರೆ ಮಾಹಿತಿ ನೀಡಲು ನಿರಾಕರಿಸುವುದೇಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿ ಜೂನ್ 10ರ ಬಳಿಕ ವಿಚಾರಣೆಗೆ ಬರಲಿದೆ.

  • ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

    ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ.

    ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ಗೋಡೆಗೆ ತಲೆ ಚೆಚ್ಚಿಕೊಂಡಿರುವುದು ಸತ್ಯ, ತಲೆಗೆ ಗಾಯವಾಗಿದೆ ಎಂದು ಜೈಲು ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

    ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

    ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • ಅಪಘಾತದಲ್ಲಿ ಒಂದೂ ಸಾವಿಲ್ಲ – 166 ವರ್ಷಗಳ ಇತಿಹಾಸ ಹೊಂದಿರೋ ರೈಲ್ವೇಯಿಂದ ದಾಖಲೆ

    ಅಪಘಾತದಲ್ಲಿ ಒಂದೂ ಸಾವಿಲ್ಲ – 166 ವರ್ಷಗಳ ಇತಿಹಾಸ ಹೊಂದಿರೋ ರೈಲ್ವೇಯಿಂದ ದಾಖಲೆ

    ನವದೆಹಲಿ: ಭಾರತೀಯ ರೈಲ್ವೇಯ 166 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಯಾವುದೇ ಪ್ರಯಾಣಿಕರು ಸಾವನ್ನಪ್ಪಿಲ್ಲ. ಈ ಹಣಕಾಸು ವರ್ಷದಲ್ಲಿ ಒಬ್ಬ ಪ್ರಯಾಣಿಕರೂ ಸಾವನ್ನಪ್ಪಿಲ್ಲ ಎಂದು ಭಾರತೀಯ ರೈಲ್ವೇ ಹೇಳಿಕೊಂಡಿದೆ.

    ಭಾರತೀಯ ರೈಲ್ವೇಯ 166 ವರ್ಷಗಳ ಇತಿಹಾಸದಲ್ಲಿ, 2019-20 ‘ಶೂನ್ಯ ಪ್ರಯಾಣಿಕರ ಸಾವಿಗೆ’ ಸಾಕ್ಷಿಯಾಗಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್ ಖಾತೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ರೈಲ್ವೇ ಸೇವೆಗಳ ಏಕೀಕರಣ, ರೈಲ್ವೇ ಸೌಲಭ್ಯಗಳು, ಇಲಾಖೆ ಕಾರ್ಯ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಗಮನಾರ್ಹ ಸುಧಾರಣೆ ಇದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ವಿಶ್ವ ದರ್ಜೆಯ ರೈಲ್ವೇ ಸೇವೆಗಳನ್ನು ಒದಗಿಸುವ ನಮ್ಮ ಸಂಕಲ್ಪದ ದಿಕ್ಕಿನಲ್ಲಿ ತೆಗೆದುಕೊಂಡ ಹೆಜ್ಜೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಹೆಚ್ಚಿನ ಕೊಡುಗೆ ನೀಡಲಿದ್ದು ನಾವು ಹೆಚ್ಚು ಸುರಕ್ಷತೆ ಆದ್ಯತೆ ನೀಡುತ್ತಿದ್ದೇವೆ ಎಂದು ತಮ್ಮ ಎರಡನೇ ಟ್ವೀಟ್ ನಲ್ಲಿ ಗೋಯಲ್ ಹೇಳಿಕೊಂಡಿದ್ದಾರೆ.

    ಕಳೆದ ಡಿಸೆಂಬರ್ 6 ರಂದು, ದೆಹಲಿ ಹೈಕೋರ್ಟ್ ದೇಶಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಕೇಂದ್ರದಿಂದ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು.

    2018ರ ಹಣಕಾಸು ವರ್ಷದಲ್ಲಿ 73 ರೈಲ್ವೇ ಅಪಘಾತಗಳು ಸಂಭವಿಸಿದ್ದವು. 2019ರಲ್ಲಿ ಈ ಸಂಖ್ಯೆ 59ಕ್ಕೆ ಇಳಿದಿದೆ. 2013ರಿಂದ 2018ರವರೆಗೆ ಪ್ರತಿ ವರ್ಷ ಸರಾಸರಿ 110 ಅಪಘಾತಗಳು ಸಂಭವಿಸಿದ್ದು 990 ಮಂದಿ ಬಲಿಯಾಗಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ನವೆಂಬರಿನಲ್ಲಿ ರೈಲ್ವೇ ಹಳಿಗಳನ್ನು ಸುರಕ್ಷತೆ ಸುಧಾರಿಸಲು ಆಧುನೀಕರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ. ಹಳಿಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಅಲ್ಟ್ರಾಸೋನಿಕ್ ಫ್ಲಾ ಡಿಟೆಕ್ಷನ್(ಯುಎಸ್‍ಎಫ್‍ಡಿ) ತಂತ್ರಜ್ಞಾನ ಬಳಸಿಕೊಂಡಿದ್ದು ಸೆನ್ಸರ್  ಮೂಲಕ ಅಪಘಾತಗಳನ್ನು ತಪ್ಪಿಸಲಾಗಿದೆ. ಇವೆಲ್ಲದರ ಹೊರತಾಗಿ, ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

  • ಬಿಗ್ ರಿಲೀಫ್ – ಹೈಕೋರ್ಟಿನಿಂದ ಡಿಕೆಶಿಗೆ ಜಾಮೀನು ಮಂಜೂರು

    ಬಿಗ್ ರಿಲೀಫ್ – ಹೈಕೋರ್ಟಿನಿಂದ ಡಿಕೆಶಿಗೆ ಜಾಮೀನು ಮಂಜೂರು

    ನವದೆಹಲಿ: ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ದೆಹಲಿ ಹೈಕೋರ್ಟಿನ ನ್ಯಾ.ಸುರೇಶ್ ಕುಮಾರ್ ಕೈಟ್ ಜಾಮೀನು ಆದೇಶವನ್ನು ಪ್ರಕಟಿಸಿದರು.

    ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಸುಮಾರು ಗುರುವಾರ (ಅಕ್ಟೋಬರ್ 17) 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು.

    ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು, 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು ಎಂಬುದಾಗಿ ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

    ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಸದ ಡಿಕೆ ಸುರೇಶ್, ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಅಣ್ಣನಲ್ಲಿ ಹೇಳಿ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಸೋನಿಯಾಗಾಂಧಿ ಭೇಟಿ ಹಾಗೂ ಸಾಂತ್ವನದಿಂದ ಶಿವಕುಮಾರ್ ಅವರಲ್ಲಿಯೂ ಧೈರ್ಯ ಬಂದಿದೆ ಎಂದು ತಿಳಿಸಿದರು.

    ಇಂದು ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಗುವ ವಿಶ್ವಾಸದಲ್ಲಿದ್ದೇವೆ. ಏನೇ ಅದರೂ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಸುರೇಶ್ ಪ್ರತಿಕ್ರಿಯಿಸಿದ್ದರು.