Tag: ದೆಹಲಿ ಸರ್ಕಾರ

  • ಆದಾಯ ನಷ್ಟ ತಡೆಗೆ ಪ್ಲ್ಯಾನ್‌ – ಬಿಯರ್ ಕುಡಿಯುವ ಕಾನೂನುಬದ್ಧ ವಯಸ್ಸು 21ಕ್ಕೆ ಇಳಿಕೆ

    ಆದಾಯ ನಷ್ಟ ತಡೆಗೆ ಪ್ಲ್ಯಾನ್‌ – ಬಿಯರ್ ಕುಡಿಯುವ ಕಾನೂನುಬದ್ಧ ವಯಸ್ಸು 21ಕ್ಕೆ ಇಳಿಕೆ

    ನವದೆಹಲಿ: ಆದಾಯ ನಷ್ಟ ತಡೆಯಲು ಚಿಂತನೆ ನಡೆಸಿರುವ ದೆಹಲಿ ರಾಜ್ಯ ಸರ್ಕಾರ (Delhi Government) ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಅದರ ಪ್ರಕಾರ, ಬಿಯರ್‌ (Beer) ಕುಡಿಯುವ ಕಾನೂನು ಬದ್ಧ ವಯಸ್ಸನ್ನು 25‌ ರಿಂದ 21 ವರ್ಷಕ್ಕೆ ಇಳಿಸಲು ಪ್ಲ್ಯಾನ್‌ ಮಾಡಿದೆ.

    ಮೂಲಗಳ ಪ್ರಕಾರ, ಇತ್ತೀಚೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ದೆಹಲಿ ಸರ್ಕಾರ ಈ ಬಗ್ಗೆ ಚರ್ಚಿಸಿದೆ. ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳಲ್ಲಿ ಈಗಾಗಲೇ ಬಿಯರ್‌ ಕುಡಿಯುವ ಕಾನೂನುಬದ್ಧ ವಯೋಮಿತಿಯನ್ನ 21 ವರ್ಷಕ್ಕೆ ಇಳಿಸಲಾಗಿದೆ. ದೆಹಲಿಯಲ್ಲೂ ವಯೋಮಿತಿ ಕಡಿಮೆ ಮಾಡುವುದರಿಂದ ಅಕ್ರಮ ಮದ್ಯ ಮಾರಾಟ ತಪ್ಪುತ್ತದೆ. ಜೊತೆಗೆ ಬ್ಲ್ಯಾಕ್‌ ಮಾರ್ಕೆಟ್‌ ಅನ್ನೂ ನಿಯಂತ್ರಿಸಬಹುದು ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.

    ಇದಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಅಂಗಡಿಗಳನ್ನ ನಡೆಸಲು ಹೈಬ್ರಿಡ್ ಮಾದರಿ ಅನುಸರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಂದ್ರೆ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರಾಟ ನಡೆಯಬೇಕು. ಪ್ರಸ್ತುತ, ದೆಹಲಿಯಲ್ಲಿ ಕೇವಲ 4 ಸರ್ಕಾರಿ ನಿಗಮಗಳು ಮಾತ್ರ ಮದ್ಯದ ಅಂಗಡಿಗಳನ್ನು ನಡೆಸುತ್ತಿವೆ. ಹೀಗಾಗಿ ಸರ್ಕಾರಿ ಮಾರಾಟಗಾರರ ಜೊತೆಗೆ ಖಾಸಗಿ ಸಹಭಾಗಿತ್ವ ತೊಡಗಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.

    ಆದಾಯ ನಷ್ಟ ತಡೆಯಲು ಪ್ಲ್ಯಾನ್‌
    ಮೂಲಗಳ ಪ್ರಕಾರ, ಹೊಸ ಅಬಕಾರಿ ನೀತಿಯ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಪರಿಗಣಿಸಲಾಗುತ್ತಿದೆ. ನೆರೆಯ ರಾಜ್ಯಗಳ ಮದ್ಯದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿ ದೆಹಲಿ ನಷ್ಟ ಅನುಭವಿಸದಂತೆ ನೋಡಿಕೊಳ್ಳುವುದು ಹೊಸ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರೀಮಿಯಂ ಬ್ರಾಂಡ್‌ಗಳ ಲಭ್ಯತೆ
    ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್‌ಗಳು ದೆಹಲಿಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದನ್ನು ಸಮಿತಿ ಪರಿಶೀಲಿಸುತ್ತಿದೆ. ಪ್ರಸ್ತುತ, ಅವುಗಳ ಕೊರತೆಯಿಂದಾಗಿ, ಗ್ರಾಹಕರು ಹರಿಯಾಣ ಮತ್ತು ಯುಪಿಯತ್ತ ಮುಖ ಮಾಡುತ್ತಾರೆ, ಇದರಿಂದಾಗಿ ದೆಹಲಿಗೆ ಆದಾಯ ನಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಜನನಿಬಿಡ ವಸತಿ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.

  • ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

    ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

    ದೆಹಲಿಯಲ್ಲಿ ಆಗಾಗ್ಗೆ ಉಂಟಾಗುವ ವಾಯುಮಾಲಿನ್ಯ (Air Pollution) ತಡೆಯಲು ಬಿಜೆಪಿ ನೇತೃತ್ವದ ದೆಹಲಿ ರಾಜ್ಯ ಸರ್ಕಾರ (Delhi Government) ಇತ್ತೀಚೆಗೆ ಹೊಸ ಆದೇಶವೊಂದನ್ನ ಪ್ರಕಟಿಸಿತ್ತು. 10 ವರ್ಷ ಮೇಲ್ಪಟ್ಟ ಡೀಸೆಲ್‌ 15 ವರ್ಷ ಹಳೆಯದಾದ ಪೆಟ್ರೋಲ್‌ ವಾಹನಗಳಿಗೆ ಇಂಧನ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು. ಅದಕ್ಕಾಗಿ ಹಳೆಯ ವಾಹನಗಳನ್ನು ಗುರುತಿಸಿ ಪೆಟ್ರೋಲ್‌ ಬಂಕ್‌ಗಳಿಗೆ (Petrol Pumps) ಸಂದೇಶ ಕಳುಹಿಸಲು ಸೆಂಟ್ರಲ್‌ ಡೇಟಾಬೇಸ್‌ ವ್ಯವಸ್ಥೆ ರೂಪಿಸಲಾಗಿತ್ತು. ಜೊತೆಗೆ ದೆಹಲಿಯ 498 ಬಂಕ್‌ಗಳಿಗೆ ಸುತ್ತೋಲೆ ರವಾನಿಸಿದ್ದ ಸರ್ಕಾರ, 15 ವರ್ಷದ ಹಳೆಯ ಪೆಟ್ರೋಲ್‌, 10 ವರ್ಷದ ತುಂಬಿದ ಡೀಸೆಲ್‌ ವಾಹನಗಳಿಗೆ ಇಂಧನ ಪೂರೈಸಬಾರದು ಎಂದು ಸೂಚಿಸಿತ್ತು.

    ದೆಹಲಿಯಲ್ಲಿ ಶೇ.50ರಷ್ಟು ವಾಯು ಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದೆ ಎಂದು ಅಂದಾಜಿಸಿ, ವಾಯು ಗುಣಮಟ್ಟ ಕಾಪಾಡುವ ಉದ್ದೇಶದಿಂದ ವಾಯುಗುಣ ಮಟ್ಟ ನಿರ್ವಹಣಾ ಆಯೋಗ ಇಂಧನ ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಕಾರು, ದ್ವಿಚಕ್ರ ವಾಹನ, ಟ್ರಕ್‌, ವಿಂಟೇಜ್‌ ಆಟೋಮೊಬೈಲ್ಸ್‌ ಸೇರಿದಂತೆ ಸುಮಾರು 62 ಲಕ್ಷ ವಾಹನಗಳನ್ನು ಹಳೆಯ ವಾಹನಗಳ (Old Vehicles) ಪಟ್ಟಿಗೆ ಸೇರಿಸಲಾಗಿತ್ತು. ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ʻಹಸಿರು ನೀತಿ’ (ಗ್ರೀನ್‌ ಪಾಲಿಸಿ) ಹೆಸರಿನಲ್ಲಿ ಸರ್ಕಾರ ಹೊಸ ವಾಹನ ಖರೀದಿಗೆ ಪರೋಕ್ಷವಾಗಿ ಒತ್ತಡ ಹಾಕುತ್ತಿದೆ. ಹೊಸ ಕಾರು ಖರೀದಿಸಿದ್ರೆ ಸಾಮಾನ್ಯ ಜನತೆ ಶೇ.45ರಷ್ಟು ಜಿಎಸ್‌ಟಿ ಪ್ಲಸ್‌ ಸೆಸ್‌ ತೆರಬೇಕಾಗುತ್ತದೆ. ಹಾಗಾಗಿ ಇದು ಹಿಂಬಾಗಿಲ ಮೂಲಕ ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಪ್ರಯತ್ನವಾಗಿದೆ ಎಂದು ವಾಹನ ಮಾಲೀಕರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    ಜನಾಕ್ರೋಶ ಹೆಚ್ಚಾದ ಬೆನ್ನಲ್ಲೇ ಆದೇಶವನ್ನು ಹಿಂಪಡೆಯಲಾಗಿದೆ. ಈ ಬೆನ್ನಲ್ಲೇ ʻತಾಂತ್ರಿಕ ಸವಾಲುಗಳು, ಸಂಕೀರ್ಣ ವ್ಯವಸ್ಥೆಗಳಿಂದ ಇಂಧನ ನಿರ್ಬಂಧಿಸುವ ಆದೇಶ ಜಾರಿಗೊಳಿಸುವುದು ಕಷ್ಟವಾಗಿದೆ. ಹೀಗಾಗಿ ಮಾಲಿನ್ಯಕ್ಕೆ ದಾರಿ ಮಾಡಿಕೊಡುವ ಕಳಪೆ ನಿರ್ವಹಣೆಯ ವಾಹನಗಳನ್ನು ಜಪ್ತಿ ಮಾಡುವ ವ್ಯವಸ್ಥೆ ರೂಪಿಸಲಾಗುವುದುʼ ಎಂದು ಪರಿಸರ ಸಚಿವ ಮಂಜಿಂದರ್‌ ಸಿಂಗ್‌ ಸಿರ್ಸಾ ಹೇಳಿದ್ದರು. ಇದಕ್ಕೆ ಪೂರಕವಾಗಿ ಒಂದಿಷ್ಟು ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತೆ ಈ ಆದೇಶ ಸಕ್ರೀಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಫೇಲ್‌, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್‌

    ಮಾಲಿನ್ಯ ತಡೆಗೆ ಮುಂದಾಗಿರುವ ದೆಹಲಿ ಸರ್ಕಾರ ವಾಹನಗಳ ವಯೋಮಿತಿಗಳನ್ನು ತಿಳಿಯಲು ಮತ್ತು ಅನುಷ್ಠಾನಕ್ಕೆ ತರಲು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ (ಎನ್‌ಸಿಆರ್‌) ಟೋಲ್‌ ಬೂತ್‌ಗಳು ಮತ್ತು ಪೆಟ್ರೋಲ್‌ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಶುರು ಮಾಡಿದೆ. ಈ ಹೈಟೆಕ್‌ ಕ್ಯಾಮೆರಾ 15 ವರ್ಷಕ್ಕಿಂತ ಮೇಲ್ಪಟ್ಟ ಹಳೆಯದಾದ ಪೆಟ್ರೋಲ್‌ ವಾಹನ ಮತ್ತು 10 ವರ್ಷ ಮೇಲ್ಪಟ್ಟ ಡೀಸೆಲ್‌ ವಾಹನಗಳನ್ನ ಗುರುತಿಸಲು ಸಹಾಯ ಮಾಡುತ್ತದೆ. ಬಳಿಕ ಅವುಗಳ ವಯೋಮಿಯನ್ನು ಗುರುತಿಸಿ ಸ್ಕ್ರಾಪ್‌ಪಿಂಗ್‌ಗೆ ರವಾನಿಸಲು ಅನುಕೂಲವಾಗುತ್ತದೆ. ಇದನ್ನೂ ಓದಿ: ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

    ಸದ್ಯ ANPR ಕ್ಯಾಮೆರಾಗಳನ್ನು ದೆಹಲಿಯ 500 ಪೆಟ್ರೋಲ್‌ ಪಂಪ್‌ಗಳಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗುರಗಾಂವ್‌ನಲ್ಲಿರುವ ಪಂಪ್‌ಗಳಲ್ಲೂ ಈ ಕ್ಯಾಮೆರಾಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಇದರಲ್ಲಿನ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನವನ್ನು ಬಳಸಿಕೊಂಡು, ಕ್ಯಾಮೆರಾಗಳು ನಂಬರ್ ಪ್ಲೇಟ್ ಡೇಟಾವನ್ನು ಡಿಜಿಟಲ್ ಮಾಹಿತಿಯಾಗಿ ಪರಿವರ್ತಿಸುತ್ತವೆ. ಜೊತೆಗೆ ದೆಹಲಿಯಲ್ಲಿ ನೋಂದಣಿಯಾದ ವಾಹನದ ವಿವರಗಳು ಮತ್ತು ಬಳಕೆಯ ಅವಧಿಯನ್ನ ತಕ್ಷಣವೇ ಬಹಿರಂಗಪಡಿಸುತ್ತವೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಅನುಕೂಲವಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇಷ್ಟೇ ಅಲ್ಲ ANPR ಕ್ಯಾಮೆರಾಗಳು ಹಳೆಯ ವಾಹನಗಳನ್ನು ಪತ್ತೆಹಚ್ಚುವ ಜೊತೆಗೆ ಇತರ ಕೆಲಸಗಳಿಗೂ ಉಪಯೋಗವಾಗಲಿದೆ ಅದೇನೆಂಬುದನ್ನು ತಿಳಿಯಲು ಮುಂದೆ ಓದಿ…

    ANPR ಕ್ಯಾಮೆರಾದ ಬೆಲೆ ಎಷ್ಟು?

    ಭಾರತದಲ್ಲಿ ANPR ಕ್ಯಾಮೆರಾಗಳ ಬೆಲೆ 20,000 ರೂ. ನಿಂದ 50,000 ರೂ.ವರೆಗೆ ಇದೆ. ಆದಾಗ್ಯೂ, ಹೆಚ್ಚಿನ ರೆಸಲ್ಯೂಶನ್ ಅಥವಾ ಮುಂದುವರಿದ ಮಾದರಿಗಳು ಇನ್ನೂ ದುಪ್ಪಟ್ಟು ವೆಚ್ಚವಾಗಬಹುದು.

    ಈ ಕ್ಯಾಮೆರಾಗಳು ಯಾವುದಕ್ಕೆಲ್ಲ ಅನುಕೂಲ?

    * ಸಂಚಾರ ನಿರ್ವಹಣೆ: ಪ್ರತಿ ವಾಹನದ ಸ್ಪೀಡ್‌ ಅಂದಾಜಿಸಲು, ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಹಾಗೂ ವಾಹನ ದಟ್ಟಣೆ ಮಾದರಿಯನ್ನ ವಿಶ್ಲೇಷಣೆ ಮಾಡಲು ಬಳಸಲಾಗುತ್ತದೆ.
    * ಕಾನೂನು ಮತ್ತು ಸುವ್ಯವಸ್ಥೆ: ಕದ್ದ ವಾಹನಗಳನ್ನು ಗುರುತಿಸಲು, ಶಂಕಿತರನ್ನು ಪತ್ತೆಹಚ್ಚಲು ಮತ್ತು ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲು ಅನುಕೂಲವಾಗುತ್ತದೆ.
    * ಪಾರ್ಕಿಂಗ್ ನಿರ್ವಹಣೆ: ವಾಹನ ಪ್ರವೇಶ ಮತ್ತು ನಿರ್ಗಮನ ದಾಖಲಿಸಲು ಮತ್ತು ಸ್ವಯಂಚಾಲಿತ ಪಾರ್ಕಿಂಗ್ ಶುಲ್ಕ ಸಂಗ್ರಹ ಸಕ್ರಿಯಗೊಳಿಸಲು ಅನುಕೂಲ.
    * ಟೋಲ್ ಸಂಗ್ರಹ: ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಖ್ಯೆ ಫಲಕಗಳನ್ನು ರೀಡ್‌ ಮಾಡುವ ಮೂಲಕ ಸ್ವಯಂಚಾಲಿತ ಟೋಲ್ ಕಡಿತಕ್ಕಾಗಿ ಬಳಸಲಾಗುತ್ತದೆ.
    * ಭದ್ರತೆ: ನಿರ್ಬಂಧಿತ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ವಾಹನಗಳನ್ನು ಪತ್ತೆಹಚ್ಚಲು ಮತ್ತು ಕಣ್ಗಾವಲು ಹೆಚ್ಚಿಸಲು ಸುಲಭವಾಗುತ್ತದೆ.

    ಕ್ಯಾಮೆರಾಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

    * ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾ ವಾಹನದ ನಂಬರ್ ಪ್ಲೇಟನ್ನು ಸುಲಭ ಮತ್ತು ಸ್ಪಷ್ಟವಾಗಿ ರೀಡ್‌ ಮಾಡುತ್ತದೆ.
    * ಇದರಲ್ಲಿನ OCR (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಸಾಫ್ಟ್‌ವೇರ್ ಇಮೇಜ್‌ನಿಂದ ಆಲ್ಫಾನ್ಯೂಮರಿಕ್ ಕೋಡನ್ನು (ನಂಬರ್‌ ಪ್ಲೇಟ್‌ನಲ್ಲಿರುವ ಸಂಖ್ಯೆಗಳು)‌ ರೀಡ್‌ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಹೊರತೆಗೆಯುತ್ತದೆ.
    * ಕೇಂದ್ರ ಡೇಟಾಬೇಸ್‌ನೊಂದಿಗೆ ಕ್ರಾಸ್-ಚೆಕ್ ಮಾಡುವ ಮೂಲಕ ನೋಂದಣಿ ಯಂತಹ ವಾಹನ ವಿವರ ಹಾಗೂ ನಿಜವಾದ ಮಾಲೀಕರನ್ನು ಪತ್ತೆ ಮಾಡುತ್ತದೆ.
    * ಈ ಡೇಟಾಗಳನ್ನು ಅಪರಾಧ ಪತ್ತೆ, ಸಂಚಾರ ನಿಯಮ ಉಲ್ಲಂಘನೆ ಇನ್ನಿತರ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

    ಇದರ ಅನುಕೂಲ ಮತ್ತು ಅನಾನುಕೂಲಗಳೇನು?

    * ಸಮಯ ಉಳಿತಾಯದೊಂದಿಗೆ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.
    * ವಾಹನ ಗುರುತಿಸುವಿಕೆಯಲ್ಲಿ ಮಾನವ ದೋಷದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಂದ್ರೆ ಮನುಷ್ಯನಿಂದ ಆಗುವ ದೋಷಗಳನ್ನು ಇದು ಮಾಡುವುದಿಲ್ಲ.
    * ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದೆ.
    * ವಾಹನ ಮತ್ತು ಮಾಲೀಕರ ಮಾಹಿತಿಯನ್ನು ಸಂಗ್ರಹಿಸುವ ಜೊತೆಗೆ ಸಂಗ್ರಹಿಸಿದ ಮಾಹಿತಿಯನ್ನ ಗೌಪ್ಯವಾಗಿಡಲು ಸಹಾಯಕವಾಗುತ್ತದೆ.
    * ಇದರ ಅನಾನುಕೂಲವೆಂದರೆ ಕಳಪೆ ಹವಾಮಾನ ಪರಿಸ್ಥಿತಿ ಅಥವಾ ಕಡಿಮೆ ಬೆಳಕಿನ ವಾತಾವರಣ ಇರುವಾಗ ನಿಖರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರಲಿದೆ.

    ಪೆಟ್ರೋಲ್‌ ಪಂಪ್‌ಗಳಲ್ಲಿ ಈ ಕ್ರಮ ಏಕೆ?

    ಪೆಟ್ರೋಲ್‌ ಪಂಪ್‌ಗಳಲ್ಲಿ ANPR ಕ್ಯಾಮೆರಾಗಳನ್ನು ಅಳವಡಿಸುವ ಮುಖ್ಯ ಉದ್ದೇಶವೇ ವಾಯುಮಾಲಿನ್ಯ ತಡೆಯುವುದು. ಮಾಲಿನ್ಯಕಾರಕ ವಾಹನಗಳನ್ನು ಗುರುತಿಸಿದ್ರೆ, ಅವುಗಳ ವಯೋಮಿತಿ ಗಮನಿಸಿ ಬಳಿಕ ಅವುಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಬಹುದು ಅನ್ನೋದು ಸರ್ಕಾರದ ಚಿಂತನೆ.

  • ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ – ಸಿಎನ್‌ಜಿ ಆಟೋಗಳಿಗೆ ಬ್ರೇಕ್, ಇವಿಗೆ ಮಾತ್ರ ಆದ್ಯತೆ?

    ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ – ಸಿಎನ್‌ಜಿ ಆಟೋಗಳಿಗೆ ಬ್ರೇಕ್, ಇವಿಗೆ ಮಾತ್ರ ಆದ್ಯತೆ?

    ನವದೆಹಲಿ: ಹತ್ತು ವರ್ಷ ಹಳೆಯ ಡೀಸೆಲ್, ಹದಿನೈದು ವರ್ಷಗಳ ಹಳೆಯ ಪೆಟ್ರೋಲ್ ವಾಹನಗಳನ್ನು ದೆಹಲಿ ಸರ್ಕಾರ (Delhi Government) ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ ವಾಯುಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಸಿಎನ್‌ಜಿ (CNG) ಚಾಲಿತ ಆಟೋಗಳ ನೋಂದಣಿ ರದ್ದು ಮಾಡಲು ನಿರ್ಧರಿಸಿದೆ.

    ವಾಯುಮಾಲಿನ್ಯ (Air Pollution) ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಹೊಸ ಇವಿ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ. ಶೀಘ್ರದಲ್ಲಿ ಈ ಸಂಬಂಧ ಹೊಸ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಹೊಸ ನೀತಿಯ ಪ್ರಕಾರ ಈ ವರ್ಷದ ಆ.15ರಿಂದ ಸಿಎನ್‌ಜಿ ಆಟೋ ನೋಂದಣಿಯನ್ನು ನಿಲ್ಲಿಸಲಾಗುತ್ತದೆ. ಇದೇ ವೇಳೆ ಸಿಎನ್‌ಜಿ ಆಟೋಗಳ ನವೀಕರಣಕ್ಕೂ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದೆ.ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಹೊಸ ನೀತಿಯಡಿ ಎಲ್ಲಾ ನವೀಕರಿಸಿದ ಅಥವಾ ಬದಲಿ ಪರವಾನಗಿಗಳನ್ನು ವಿದ್ಯುತ್ ಆಟೋಗಳಿಗೆ ಮಾತ್ರ ನೀಡಲಾಗುತ್ತದೆ. ಆಟೋರಿಕ್ಷಾಗಳಲ್ಲದೆ, ನಾಗರಿಕ ಸೇವೆಗಳಿಗೆ ಬಳಸುವ ಇಂಧನ ಚಾಲಿತ ವಾಹನಗಳನ್ನು ಸಹ ಈ ನೀತಿಯಡಿ ಗುರಿಯಾಗಿಸಿಕೊಂಡಿದೆ. ಹೆಚ್ಚು ಮಹತ್ವಾಕಾಂಕ್ಷೆಯ ಪ್ರಸ್ತಾವನೆಯಲ್ಲಿ, ಹೊಸ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು 2026ರ ಆ.15ರಿಂದ ನಿಷೇಧಿಸಬೇಕು ಎಂದು ಕರಡು ಹೇಳುತ್ತದೆ.

    ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation), ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ದೆಹಲಿ ಜಲಮಂಡಳಿ ನಿರ್ವಹಿಸುವ ಎಲ್ಲಾ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಕಸ ಸಂಗ್ರಹಣಾ ವಾಹನಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಇದು ಶಿಫಾರಸು ಮಾಡುತ್ತದೆ. ಇವುಗಳನ್ನು 2027ರ ಡಿ.31ರೊಳಗೆ ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿ ಪರಿವರ್ತಿಸಲಾಗುವುದು.

    ದೆಹಲಿ ಸಾರಿಗೆ ನಿಗಮ ಮತ್ತು ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ ನಿರ್ವಹಿಸುವ ಎಲ್ಲಾ ಇಂಟ್ರಾ-ಸಿಟಿ ಬಸ್‌ಗಳು ಇನ್ಮುಂದೆ ವಿದ್ಯುತ್ ಚಾಲಿತವಾಗಿರಬೇಕು ಎಂದು ನೀತಿಯು ಪ್ರಸ್ತಾಪಿಸುತ್ತದೆ. ಅಂತರ-ರಾಜ್ಯ ಮಾರ್ಗಗಳಿಗೆ ಬಿಎಸ್-ವಿಐ ಕಂಪ್ಲೈಂಟ್ ಬಸ್‌ಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಹೊಸ ನೀತಿಯಡಿಯಲ್ಲಿ ನಗರ ಬಳಕೆಗಾಗಿ ಯಾವುದೇ ಹೊಸ ಪಳೆಯುಳಿಕೆ ಇಂಧನ ಆಧಾರಿತ ಬಸ್‌ಗಳನ್ನು ಖರೀದಿಸಲಾಗುವುದಿಲ್ಲ.

    ಕರಡು ಇನ್ನೂ ಪರಿಶೀಲನೆಯಲ್ಲಿದ್ದು, ದೆಹಲಿ ಸಚಿವ ಸಂಪುಟದ ಮುಂದೆ ಇಡುವ ಮೊದಲು ವಿಶೇಷವಾಗಿ ದ್ವಿಚಕ್ರ ವಾಹನಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಿಗೆ ಒಳಗಾಗಬಹುದು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾ.31 ರಂದು ಮುಕ್ತಾಯಗೊಂಡ ಪ್ರಸ್ತುತ ಇವಿ (Electric Vehicles) ನೀತಿಯ ಹೊಸ ಆವೃತ್ತಿಯನ್ನು ಅಂತಿಮಗೊಳಿಸಲು 15 ದಿನಗಳವರೆಗೆ ವಿಸ್ತರಿಸಲಾಗಿದೆ. ಪಳೆಯುಳಿಕೆ ಇಂಧನ ಚಾಲಿತ ವಾಹನಗಳನ್ನು ಎಲ್ಲಾ ವಿಭಾಗಗಳಲ್ಲಿ ಆಕ್ರಮಣಕಾರಿಯಾಗಿ ಬದಲಾಯಿಸುವ ಮೂಲಕ ದೆಹಲಿಯ ವಾಯುಮಾಲಿನ್ಯವನ್ನು ತೀವ್ರವಾಗಿ ಕಡಿಮೆ ಮಾಡುವುದು ಈ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

  • ಮೋದಿ ಜಿ ಭರವಸೆ ನಂಬಿ ಮಹಿಳೆಯರು ಮೋಸ ಹೋಗಿದ್ದಾರೆ – ದೆಹಲಿ ಸಿಎಂಗೆ ಅತಿಶಿ ಪತ್ರ

    ಮೋದಿ ಜಿ ಭರವಸೆ ನಂಬಿ ಮಹಿಳೆಯರು ಮೋಸ ಹೋಗಿದ್ದಾರೆ – ದೆಹಲಿ ಸಿಎಂಗೆ ಅತಿಶಿ ಪತ್ರ

    – ಮಹಿಳೆಯರಿಗೆ 2,500 ರೂ. ಗ್ಯಾರಂಟಿ ಸ್ಕ್ರೀಂ ಕುರಿತು ಚರ್ಚಿಸಲು ಸಮಯ ಕೇಳಿದ ಮಾಜಿ ಸಿಎಂ

    ನವದೆಹಲಿ: ಮಹಿಳೆಯರಿಗೆ ತಿಂಗಳಿಗೆ 2,500 ರೂ. ಹಣ ನೀಡುವ ಗ್ಯಾರಂಟಿ ಯೋಜನೆ ಕುರಿತು ಚರ್ಚಿಸಲು ಭಾನುವಾರ ಸಮಯ ನೀಡುವಂತೆ ಕೋರಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಮಾಜಿ ಸಿಎಂ ಅತಿಶಿ ಪತ್ರ ಬರೆದಿದ್ದಾರೆ.

    ಅಲ್ಲದೇ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಮಹಿಳೆಯರಿಗೆ ನೀಡಿದ್ದ ಆರ್ಥಿಕ ನೆರವು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಪತ್ರದಲ್ಲಿ ಏನಿದೆ?
    ಮೊದಲಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಬಿಜೆಪಿಯ ನಾಯಕ ಹಾಗೂ ದೇಶದ ಪ್ರಧಾನಿಯೂ ಆಗಿರುವ ನರೇಂದ್ರ ಮೋದಿ ಜಿ ಅವರು 2025ರ ಜ.31ರಂದು ದೆಹಲಿಯ ತಾಯಂದಿರು ಹಾಗೂ ಸಹೋದರಿಯರಿಗೆ ಭರವಸೆ ನೀಡಿದ್ದರು. ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ತಿಂಗಳಿಗೆ 2,500 ರೂ. ಆರ್ಥಿಕ ನೆರವು ಯೋಜನೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಇದು ಮೋದಿ ಜಿ ಭರವಸೆ ಎಂದು ಒತ್ತಿ ಹೇಳಿದ್ದರು.

    ದೆಹಲಿ ಸರ್ಕಾರ ಫೆ.20ರಂದು ತನ್ನ ಮೊದಲ ಕ್ಯಾಬಿನೆಟ್‌ ಸಭೆ ನಡೆಸಿತು. ಆದ್ರೆ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ. ದೆಹಲಿಯ ತಾಯಂದಿರು ಸಹೋದರಿಯರು ಮೋದಿ ಜೀ ಅವರ ಭರವಸೆ ನಂಬಿ ಮೋಸ ಹೋಗಿದ್ದಾರೆ. ಈ ಗ್ಯಾರಂಟಿ ಯೋಜನೆ ಸಂಬಂಧ ಚರ್ಚಿಸಲು ಎಎಪಿ ನಿಯೋಗ ಭಾನುವಾರ ನಿಮ್ಮನ್ನು ಭೇಟಿ ಮಾಡಲು ಇಚ್ಛಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದೇ ಫೆ.20ರಂದು ದೆಹಲಿಯ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಿದ್ದರು. ಜೊತೆಗೆ ಆರು ಇತರ ಶಾಸಕರು ಅವರ ಸಂಪುಟಕ್ಕೆ ಸೇರ್ಪಡೆಗೊಂಡರು. ಅದೇ ದಿನ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ದೆಹಲಿ ಸರ್ಕಾರವು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೇ ಮಹಿಳಾ ಸಮೃದ್ಧಿ ಯೋಜನೆ ಕುರಿತು ಚರ್ಚಿಸಿತು ಮತ್ತು ಬಾಕಿ ಇರುವ 14 ಸಿಎಜಿ ವರದಿಗಳನ್ನು ಮಂಡಿಸಲು ನಿರ್ಧರಿಸಿತು.

  • ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆ?

    ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆ?

    – ರಾಷ್ಟ್ರ ರಾಜಧಾನಿಯ ನೂತನ ಸಾರಥಿ ಯಾರು?
    – 14 ರಾಜ್ಯಗಳಲ್ಲಿ ಬಿಜೆಪಿಗೆ ಸ್ವಂತ ಬಲದ ಅಧಿಕಾರ

    ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ (Delhi Election Results) ಶನಿವಾರ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ (BJP) ಅಧಿಕಾರಕ್ಕೇರಿದೆ. ಆದ್ರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್‌ ಸೋಲು ಕಂಡಿದ್ದರೆ, ʻಕೈʼ ಪಾಳಯ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.

    ಚುನಾವನೆಯಲ್ಲಿ ಬಹುಮತ ಪಡೆದ ಬೆನ್ನಲ್ಲೇ ರಾಜಧಾನಿಯ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ನಡುವೆ ಸರ್ಕಾರ ರಚನೆ (Delhi Government Formation) ಇನ್ನೂ ನಾಲ್ಕೈದು ದಿನ ವಿಳಂಭವಾಗುವ ಸಾಧ್ಯತೆಗಳಿವೆ. ಫೆ.15ರ ವರೆಗೆ ಸರ್ಕಾರ ರಚನೆ ಇಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಪಾಕ್‌ ಮೈದಾನದಲ್ಲಿ ಫೀಲ್ಡಿಂಗ್‌ ವೇಳೆ ಹಣೆಗೆ ಬಡಿದ ಚೆಂಡು – ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ

    ಹೌದು. ಇದೇ ಫೆ.12-13ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್‌ (Donald Trump) 2ನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ಭೇಟಿಯಾಗಿದೆ. ಪ್ರವಾಸ ಮುಗಿಸಿ ಫೆ.14ರಂದು ಮೋದಿ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಪ್ರಮಾಣ ವಚನ ಸಮಾರಂಭ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

    ಬಿಜೆಪಿಯು ಪ್ರಮಾಣ ವಚನ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿದೆ. ಈ ಸಮಾರಂಭಕ್ಕೆ ಎಲ್ಲಾ ಎನ್‌ಡಿಎ ನಾಯಕರು ಹಾಗೂ ಸಿಎಂಗಳನ್ನ ಆಹ್ವಾನಿಸಲಾಗುತ್ತದೆ. ಹೀಗಾಗಿಯೇ ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬಳಿಕವೇ ದೆಹಲಿಯಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮರಳು ತುಂಬಿದ್ದ ಲಾರಿ ಪಲ್ಟಿ – ರಸ್ತೆಬದಿ ಕೆಲಸ ಮಾಡ್ತಿದ್ದ ಮೂವರು ಮಹಿಳೆಯರು, ಮಗು ದುರ್ಮರಣ

    ದೆಹಲಿಯ ನೂತನ ನಾಯಕ ಯಾರು?
    ಕೇಜ್ರಿವಾಲ್‌ ಅವರನ್ನು ಸೋಲಿಸಿದ ಪರ್ವೇಶ್‌ ವರ್ಮಾ, ಮುಖಂಡರಾದ ರಮೇಶ್‌ ಬಿಧೂರಿ, ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌, ಕೈಲಾಶ್‌ ಗೆಹ್ಲೋಟ್‌ ಹಾಗೂ ಕಪಿಲ್‌ ಮಿಶ್ರಾ ಸೇರಿ ಹಲವರು ಸಿಎಂ ರೇಸ್‌ನಲ್ಲಿದ್ದಾರೆ.

    21 ರಾಜ್ಯಗಳಲ್ಲಿ ಈಗ ಬಿಜೆಪಿ ಆಳ್ವಿಕೆ:
    ದೆಹಲಿ ಗೆಲುವಿನೊಂದಿಗೆ ಬಿಜೆಪಿ ಮೈತ್ರಿಕೂಟ ಆಳ್ವಿಕೆಯಲ್ಲಿರುವ ರಾಜ್ಯಗಳ ಸಂಖ್ಯೆ 21ಕ್ಕೆ ಏರಿದೆ. ಈ ಪೈಕಿ 14 ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರ ಬದಲ್ಲಿ ಅಧಿಕಾರದಲ್ಲಿದ್ದರೆ, 7 ರಾಜ್ಯಗಳಲ್ಲಿ ಮೈತ್ರಿಯೊಂದಿಗೆ ಗದ್ದುಗೆ ಹಿಡಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ – ಬೆಂಗಳೂರು ತಲುಪಿದ 2ನೇ ಡ್ರೈವರ್‌ಲೆಸ್‌ ಮೆಟ್ರೋ

  • ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ – ಸರ್ಕಾರದ ಬೊಕ್ಕಸಕ್ಕೆ 2,026 ಕೋಟಿ ನಷ್ಟ: ಸಿಎಜಿ ವರದಿ

    ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ – ಸರ್ಕಾರದ ಬೊಕ್ಕಸಕ್ಕೆ 2,026 ಕೋಟಿ ನಷ್ಟ: ಸಿಎಜಿ ವರದಿ

    ನವದೆಹಲಿ: ದೆಹಲಿ ಮದ್ಯ ನೀತಿ (Delhi Liquor Policy) ಅಕ್ರಮದಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 2,026 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ವರದಿ ಬಹಿರಂಗಪಡಿಸಿದೆ.

    ಮದ್ಯ ನೀತಿಯಲ್ಲಿ ಬಹಳಷ್ಟು ಲೋಪದೋಷಗಳು ಕಂಡುಬಂದಿದ್ದು, ಪರವಾನಗಿ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ವರದಿಯಲ್ಲಿ ಕಂಡುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ – ಕರಾಳ ಅನುಭವ ಬಿಚ್ಚಿಟ್ಟ ದಲಿತ ಬಾಲಕಿ

    ಈ ಹಿಂದೆ ಕೇಜ್ರಿವಾಲ್‌ ನೇತೃತ್ವದ ಸರ್ಕಾರ (Kejriwal’s Government) ಜಾರಿಗೊಳಿಸಿದ್ದ ಮದ್ಯ ನೀತಿಯು ಉದ್ದೇಶಿತ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ಮುಖ್ಯವಾಗಿ ಆಪ್‌ ನಾಯಕರು ಕಿಕ್‌ಬ್ಯಾಕ್‌ ಲಾಭ ಪಡೆದಿದ್ದಾರೆ. ಮದ್ಯ ನೀತಿ ಅನುಷ್ಠಾನಗೊಳಿಸುವಲ್ಲಿ ಅಂದಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನೇತೃತ್ವದ ಸಚಿವರ ಗುಂಪು ತಜ್ಞರ ಸಮಿತಿಯ ಶಿಫಾರಸುಗಳನ್ನು ಕಡೆಗಣಿಸಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್‌ ಇನ್‌ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ

    ಹೊಸ ಮದ್ಯ ನೀತಿ ದೆಹಲಿಯ ವಿಧಾನಸಭೆಯಲ್ಲಿ ಮಂಡನೆಯಾಗದೆಯೇ ಜಾರಿಗೆ ತರಲಾಗಿದೆ. ನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕ್ಯಾಬಿನೆಟ್ ಅಥವಾ ರಾಜ್ಯಪಾಲರ ಅನುಮೋದನೆಯಿಲ್ಲದೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಘಟಕಗಳಿಗೆ ಬಿಡ್‌ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ಬಿಡ್‌ ದಾರರ ಆರ್ಥಿಕ ಪರಿಸ್ಥಿತಿಯನ್ನೂ ಪರಿಶೀಲಿಸಿರಲಿಲ್ಲ. ಇದರೊಂದಿಗೆ ಹೆಚ್ಚುವರಿಯಾಗಿ ನಿಯಮ ವಿಧಿಸುವವರಿಗೆ ಉದ್ದೇಶಪೂರ್ವಕವಾಗಿ ದಂಡ ವಿಧಿಸುವುದನ್ನು ಕೈಬಿಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    ಏನಿದು ಹಗರಣ?
    ಕೋವಿಡ್‌ 2ನೇ ಅಲೆ ಉತ್ತುಂಗದಲ್ಲಿದ್ದಾಗ ಮನೀಶ್ ಸಿಸೋಡಿಯಾ 2021ರ ಏಪ್ರಿಲ್‌ನಲ್ಲಿ ಕ್ಯಾಬಿನೆಟ್‌ ಅನುಮೋದನೆ ಇಲ್ಲದೇ ಮದ್ಯದಂಗಡಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದವರ 144.36 ಕೋಟಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲು ಆದೇಶ ಹೊರಡಿಸುತ್ತಾರೆ. ಈ ಮಹತ್ವದ ನಿರ್ಧಾರದ ಬಳಿಕ ಮೇ ತಿಂಗಳಿನಲ್ಲಿ ಕೇಜ್ರಿವಾಲ್‌ ನೇತೃತ್ವದ ಕ್ಯಾಬಿನೆಟ್‌ ಸಭೆ ಕರೆದು ಅಬಕಾರಿ ನೀತಿಯಲ್ಲಿ ಬದಲಾವಣೆ ಮಾಡುತ್ತದೆ. ಮದ್ಯವನ್ನು ಮನೆಗ ಹೋಮ್‌ ಡೆಲಿವರಿ ಮಾಡಬಹುದು ಅಷ್ಟೇ ಅಲ್ಲದೇ ಮದ್ಯದ ಅಂಗಡಿಗಳನ್ನು ಬೆಳಗಿನ ಜಾವ 3 ಗಂಟೆಯವರೆಗೆ ತೆರೆಯಬಹುದು. ಪರವಾನಗಿದಾರರು ಅನಿಯಮಿತ ರಿಯಾಯಿತಿಗಳನ್ನು ನೀಡಲು ನೀತಿ ಅನುಮತಿ ಕಲ್ಪಿಸಿತ್ತು.

    ಲೆಫ್ಟಿನೆಂಟ್‌ ಗವರ್ನರ್‌ ಅವರು ಕ್ಯಾಬಿನೆಟ್‌ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ದೆಹಲಿ ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತದೆ. ಆದರೆ ಸಿಸೋಡಿಯಾ ಕೈಗೊಂಡ ನಿರ್ಧಾರ ಮುಂದುವರಿಯುತ್ತದೆ. ಸರ್ಕಾರದ ನಿರ್ಧಾರ ಬಗ್ಗೆ ದೆಹಲಿ ಮುಖ್ಯ ಕಾರ್ಯದರ್ಶಿ ಅವರು ಲೆಫ್ಟಿನೆಂಟ್‌ ಗವರ್ನರ್‌ ಬಳಿ ದೂರು ನೀಡುತ್ತಾರೆ. ಸಿಸೋಡಿಯಾ ನಿರ್ಧಾರದಿಂದ ಸರ್ಕಾರಕ್ಕೆ ಭಾರೀ ನಷ್ಟವಾಗಿದೆ. ವಿಸ್ಕಿ ಮತ್ತು ವೈನ್‌ ಮಾರಾಟ ಅನುಕ್ರಮವಾಗಿ 60% ಮತ್ತು 87%ರಷ್ಟು ಭಾರೀ ಏರಿಕೆಯಾಗಿದ್ದರೂ ಆದಾಯ 80% ರಷ್ಟು ಇಳಿಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸುತ್ತಾರೆ.

    ಕೇಜ್ರಿವಾಲ್‌- ಸಿಸೋಡಿಯಾ ಅವರು ಲೆಫ್ಟಿನೆಂಟ್‌ ಗವರ್ನರ್‌ ಗಮನಕ್ಕೆ ತಾರದೇ ತುರ್ತು ಕ್ಯಾಬಿನೆಟ್‌ ಸಭೆಯನ್ನು ಕರೆಯುತ್ತಾರೆ. ಸಿಸೋಡಿಯಾ ಅಕ್ರಮವಾಗಿ ಹೊರಡಿಸಿದ ಆದೇಶವನ್ನು ಸಕ್ರಮ ಮಾಡಲು ಕ್ಯಾಬಿನೆಟ್‌ನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಈ ನಿರ್ಧಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಭಾರೀ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುತ್ತದೆ. ವಿರೋಧ ವ್ಯಕ್ತವಾಗುತ್ತಿದ್ದಂತೆ 2022ರ ಜುಲೈನಲ್ಲಿ ಮದ್ಯ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅವರು ಆದೇಶ ಹೊರಡಿಸುತ್ತಾರೆ. 2022ರ ಜುಲೈನಲ್ಲಿ ಕೇಜ್ರಿವಾಲ್‌ ಸರ್ಕಾರ ಈ ಹಿಂದೆ ಹೊರಡಿಸಿದ್ದ ಅಬಕಾರಿ ನೀತಿಯನ್ನು ಹಿಂದಕ್ಕೆ ಪಡೆಯುತ್ತದೆ.

  • ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ನವದೆಹಲಿ: ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟದಲ್ಲಿ (Delhi Air Quality) ಸುಧಾರಣೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ವಿಧಿಸಲಾಗಿದ್ದ 3ನೇ ಹಂತದ ನಿರ್ಬಂಧಗಳನ್ನು‌ ತೆರವುಗೊಳಿಸಲಾಗಿದೆ. ಜೊತೆಗೆ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಓಡಾಟದ ಮೇಲಿನ ನಿರ್ಬಂಧಗಳನ್ನೂ ಸಡಿಲಗೊಳಿಸಲಾಗಿದೆ.

    ಭಾನುವಾರ (ಇಂದು) ದೆಹಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಅಂಕಿ – ಅಂಶಗಳ ಪ್ರಕಾರ, ಮಧ್ಯಾಹ್ನ 2 ಗಂಟೆ ವೇಳೆ ದೆಹಲಿಯ ಎಕ್ಯೂಐ 348 ಆಗಿತ್ತು, ಇದು ಮಧ್ಯಾಹ್ನ 3 ಗಂಟೆ ವೇಳೆಗೆ 343 ಹಾಗೂ ಸಂಜೆ 5 ಗಂಟೆ ಸುಮಾರಿಗೆ 335 ದಾಖಲಾಗಿದೆ. ಇದು ಸುಧಾರಣೆಯ ಸ್ಪಷ್ಟ ಸಂಕೇತ ಎಂದು ವರದಿ ಹೇಳಿದೆ.

    ಈ ಸಕಾರಾತ್ಮಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎನ್‌ಸಿಆರ್‌ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಿಧಿಸಲಾಗಿದ್ದ 3ನೇ ಹಂತದ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿದೆ. ಇದನ್ನೂ ಓದಿ: ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

    ಹಂತ-1, ಹಂತ – 2ರ ನಿರ್ಬಂಧಗಳು ಮುಂದುವರಿಯಲಿವೆ. ಇದರೊಂದಿಗೆ ಕೈಗಾರಿಕಾ ಘಟಕಗಳು ಹಾಗೂ ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ವಿಧಿಸಲಾದ ನಿರ್ಬಂಧಗಳು ಮುಂದಿನ ಆದೇಶದವರೆಗೆ ಮುಂದುವರಿಯಲಿವೆ ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

  • ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ನವದೆಹಲಿ: ವಾಯು ಮಾಲಿನ್ಯದಿಂದ ದೆಹಲಿ (Delhi Air Pollution) ತತ್ತರಿಸಿದೆ. ಸತತ 4ನೇ ದಿನವೂ ಗಾಳಿಯ ಗುಣಮಟ್ಟ ವಿಪರೀತವಾಗಿ ಹಾಳಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿನ ಪ್ರಜೆಗಳು ಏಕಕಾಲದಲ್ಲಿ 4 ಸಿಗರೇಟ್‌ಗೆ ಸಮಾನವಾದ ಹೊಗೆಯನ್ನು ಸೇವನೆ ಮಾಡ್ತಿದ್ದಾರೆ. ಪರಿಣಾಮ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಿದೆ. ಮಾಸ್ಕ್ ಧರಿಸಿ.. ವಾಕಿಂಗ್ ಮಾಡ್ಬೇಡಿ.. ಉಗುರುಬೆಚ್ಚಗಿನ ನೀರು ಕುಡೀರಿ ಎಂದು ವೈದ್ಯರು ಸೂಚಿಸಿದ್ದಾರೆ.

    ಇನ್ನೂ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ (Delhi Government) ಮೂರನೇ ಹಂತದ ಕ್ರಮ ಜಾರಿಗೊಳಿಸಿದ್ದು, BS 3 ಪೆಟ್ರೋಲ್, BS IV ಡೀಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅಂತರರಾಜ್ಯ ಬಸ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

    ಇದರ ಹೊರತಾಗಿಯೂ ನಿಯಮವನ್ನು ಗಾಳಿಗೆ ತೂರಿದವರಿಗೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಸುಮಾರು 550 ಚಲನ್‌ ವಿಧಿಸಿದ್ದು, 1 ಕೋಟಿ ರೂ.ಗಿಂತಲೂ ಅಧಿಕ ದಂಡ ವಿಧಿಸಲಾಗಿದೆ. ಇದರೊಂದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಹೊಂದಿರದಿದ್ದಕ್ಕಾಗಿ 4,855 ವಾಹನಗಳಿಗೆ ಚಲನ್‌ ನೀಡಿದ್ದು, ಒಟ್ಟು 4.8 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆb

    ಮಾನ್ಯ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ಹೊಂದಿರದ ವಾಹನ ಚಾಲಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ ನಗರದ ಪೂರ್ವ, ಮಧ್ಯ ಮತ್ತು ಉತ್ತರ ವ್ಯಾಪ್ತಿಯಲ್ಲಿ BS-III ಪೆಟ್ರೋಲ್‌ ಮತ್ತು BS-IV ಡೀಸೇಲ್‌ ವಾಹನಗಳಿಗೆ ಒಟ್ಟು 293 ಚಲನ್‌, ಪಿಯುಸಿಸಿ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ಒಟ್ಟು 2,404 ಚಲನ್‌ಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ದೂರು – ನಡ್ಡಾ, ಖರ್ಗೆಯಿಂದ ಸ್ಪಷ್ಟನೆ ಕೇಳಿದ ಚುನಾವಣಾ ಆಯೋಗ

    ಎಲ್ಲೆಲ್ಲಿ ಎಷ್ಟು ಚಲನ್‌ ವಿತರಣೆ?
    GRAP -III ನಿಯಮ ಉಲ್ಲಂಘಿಸಿದವರ ವಿರುದ್ಧ ನವದೆಹಲಿ ವ್ಯಾಪ್ತಿಯಲ್ಲಿ 63 ಚಲನ್‌, ಪಶ್ಚಿಮ ವಲಯದಲ್ಲಿ 73 ಮತ್ತು ದಕ್ಷಿಣ ವಲಯದಲ್ಲಿ 121 ಚಲನ್‌, ನವದೆಹಲಿ, ದಕ್ಷಿಣ ಮತ್ತು ಪಶ್ಚಿಮ ಶ್ರೇಣಿಗಳು ಪಿಯುಸಿಸಿ ಹೊಂದಿಲ್ಲದ ಕಾರಣ ಕ್ರಮವಾಗಿ 322, 894 ಮತ್ತು 1,235 ಚಲನ್‌ಗಳನ್ನು ವಿತರಿಸಲಾಗಿದೆ. ಸಂಚಾರ ಪೊಲೀಸರ ಮೂರು ವ್ಯಾಪ್ತಿಯಲ್ಲಿ ಶುಕ್ರವಾರ ಸುಮಾರು 3,000 ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ) ರಾಜೀವ್ ಕುಮಾರ್ ರಾವಲ್ ತಿಳಿಸಿದ್ದಾರೆ.

  • ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ನವದೆಹಲಿ: ಇಡೀ ವಿಶ್ವದಲ್ಲೇ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದೆಹಲಿ (Delhi Air Pollution), ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನ ಉಸಿರಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು (CAQM) ಮಾಲಿನ್ಯ ನಿಯಂತ್ರಣಕ್ಕೆ 3ನೇ ಹಂತದ ಕ್ರಮ (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP-III) ಜಾರಿಗೆ ಮುಂದಾಗಿದೆ. ನವೆಂಬರ್‌ 15ರ ಶುಕ್ರವಾರದಿಂದಲೇ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿವೆ.

    ಏನೇನು ಕ್ರಮ ?
    ಜಿಆರ್‌ಎಪಿ-3 (GRAP-III) ಜಾರಿಯಲ್ಲಿರುವವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. BS-3 ಪೆಟ್ರೋಲ್ ಡಿಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗುತ್ತದೆ. ಸಿಎನ್‌ಜಿ, ಇವಿ ಸೇರಿದಂತೆ ಅಂತರರಾಜ್ಯಗಳ BS4 ಡಿಸೇಲ್ ಬಸ್‌ಗಳಿಗೆ ಮಾತ್ರ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ತುರ್ತು ಅಲ್ಲದ ನಿರ್ಮಾಣ ಮತ್ತು ಕಟ್ಟಡ ತೆರವು ಕಾರ್ಯಕ್ಕೆ ತಡೆ ನೀಡಲಾಗಿದ್ದು, ಸರ್ಕಾರಿ ಕಾಮಗಾರಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಗೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ಚಿಮುಕಿಸುವುದನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ ಎನ್‌ಸಿಎಆರ್‌ನಲ್ಲಿ 5ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಮುಖ್ಯವಾಗಿ ದೆಹಲಿ ನಿವಾಸಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ.

    ಅಪಾಯ ಮಟ್ಟ ಮೀರಿದ ಮಾಲಿನ್ಯ:
    ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ. ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಎಕ್ಯೂಐ ಮಟ್ಟವು ಶೂನ್ಯದಿಂದ 50 ರಷ್ಟಿದ್ದರೆ ಉಸಿರಾಟಕ್ಕೆ ಯೋಗ್ಯ ಗಾಳಿ, 51 ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ, 401 ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.

    300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ:
    ಗುರುವಾರ (ನ.14) ಬೆಳಿಗ್ಗೆ ದಟ್ಟನೆಯ ಮಂಜು ಆವರಿಸಿದ್ದನ್ನು ಕಂಡು ದೆಹಲಿಯ ಜನ ಕಂಗಾಲಾಗಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIQ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದೆ. ಮುಂಜಾನೆ AQI 452ರ ಗಡಿ ದಾಟಿದೆ. ಇದರಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದ್ದು, 300 ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ತಿಳಿಸಿದೆ.

  • ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನೇ ನೋಡಿಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು

    ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನೇ ನೋಡಿಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು

    ನವದೆಹಲಿ: ರಾಜಕೀಯ ಹಿತಾಸಕ್ತಿಗಳ ಕಾರಣದಿಂದ ಆಯುಷ್ಮಾನ್ ಭಾರತ್ (Ayushman Bharat) ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಫಲವಾಗಿದೆ, ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.

    ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಫಲವಾಗಿದೆ ಎಂದು ಟೀಕಿಸಿದ ಪ್ರಧಾನಿ ಮೋದಿಗೆ (Narendra Modi) ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

    ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, ಸಾರ್ವಜನಿಕ ಆರೋಗ್ಯದ ವಿಷಯದ ಬಗ್ಗೆ ತಪ್ಪಾಗಿ ಮಾತನಾಡುವುದು ಮತ್ತು ಅದರ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ ದೆಹಲಿ ಮಾದರಿಯ ಆರೋಗ್ಯ ರಕ್ಷಣೆ ಯೋಜನೆಯನ್ನು ಅಧ್ಯಯನ ಮಾಡಬೇಕು. ದೆಹಲಿ ಸರ್ಕಾರದ ಯೋಜನೆಯಡಿಯಲ್ಲಿ, ನಗರದ ಪ್ರತಿಯೊಬ್ಬ ವ್ಯಕ್ತಿಯು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾನೆ. 5 ರೂ. ಮಾತ್ರೆ ಅಥವಾ 1 ಕೋಟಿ ರೂ. ಮೌಲ್ಯದ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

    ಜನರಿಗೆ ವಾಸ್ತವದಲ್ಲಿ ಆರೋಗ್ಯ ಪ್ರಯೋಜನಕ್ಕಾಗಿ ದೇಶದಾದ್ಯಂತ ದೆಹಲಿಯಂತೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಬದಲಿಸಬೇಕು ಎಂದು ಒತ್ತಾಯಿಸಿದ ಕೇಜ್ರಿವಾಲ್, ಈವರೆಗೂ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನು ತಾನು ಇನ್ನೂ ಭೇಟಿ ಮಾಡಿಲ್ಲ ಎಂದು ಕೇಜ್ರಿವಾಲ್ ವ್ಯಂಗ್ಯ ಮಾಡಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಸಿಎಜಿ ಅದರಲ್ಲಿ ಹಲವಾರು ಅಕ್ರಮಗಳನ್ನು ಕಂಡುಹಿಡಿದಿದೆ ಎಂದು ಹೇಳಿದರು.

    ಆಯುಷ್ಮಾನ್ ಭಾರತ್ ʻವಿಫಲʼ ಯೋಜನೆಯಾಗಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಯೋಜನೆಯನ್ನು ಜಾರಿಗೊಳಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಂತಹ ಬಿಜೆಪಿ ಆಡಳಿತ ರಾಜ್ಯಗಳ ಬಡ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ತಿರಗೇಟು ನೀಡಿದರು. ಇದನ್ನೂ ಓದಿ: ದರ್ಶನ್‌ಗೆ ಜಾಮೀನು – ಪಾಸ್‌ಪೋರ್ಟ್‌ ಒಪ್ಪಿಸುವಂತೆ ಕೋರ್ಟ್‌ ಸೂಚಿಸಿದ್ದೇಕೆ?