Tag: ದೆಹಲಿ ವಾಯುಮಾಲಿನ್ಯ

  • ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ – ಸಿಎನ್‌ಜಿ ಆಟೋಗಳಿಗೆ ಬ್ರೇಕ್, ಇವಿಗೆ ಮಾತ್ರ ಆದ್ಯತೆ?

    ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ – ಸಿಎನ್‌ಜಿ ಆಟೋಗಳಿಗೆ ಬ್ರೇಕ್, ಇವಿಗೆ ಮಾತ್ರ ಆದ್ಯತೆ?

    ನವದೆಹಲಿ: ಹತ್ತು ವರ್ಷ ಹಳೆಯ ಡೀಸೆಲ್, ಹದಿನೈದು ವರ್ಷಗಳ ಹಳೆಯ ಪೆಟ್ರೋಲ್ ವಾಹನಗಳನ್ನು ದೆಹಲಿ ಸರ್ಕಾರ (Delhi Government) ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ ವಾಯುಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಸಿಎನ್‌ಜಿ (CNG) ಚಾಲಿತ ಆಟೋಗಳ ನೋಂದಣಿ ರದ್ದು ಮಾಡಲು ನಿರ್ಧರಿಸಿದೆ.

    ವಾಯುಮಾಲಿನ್ಯ (Air Pollution) ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಹೊಸ ಇವಿ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ. ಶೀಘ್ರದಲ್ಲಿ ಈ ಸಂಬಂಧ ಹೊಸ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಹೊಸ ನೀತಿಯ ಪ್ರಕಾರ ಈ ವರ್ಷದ ಆ.15ರಿಂದ ಸಿಎನ್‌ಜಿ ಆಟೋ ನೋಂದಣಿಯನ್ನು ನಿಲ್ಲಿಸಲಾಗುತ್ತದೆ. ಇದೇ ವೇಳೆ ಸಿಎನ್‌ಜಿ ಆಟೋಗಳ ನವೀಕರಣಕ್ಕೂ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದೆ.ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಹೊಸ ನೀತಿಯಡಿ ಎಲ್ಲಾ ನವೀಕರಿಸಿದ ಅಥವಾ ಬದಲಿ ಪರವಾನಗಿಗಳನ್ನು ವಿದ್ಯುತ್ ಆಟೋಗಳಿಗೆ ಮಾತ್ರ ನೀಡಲಾಗುತ್ತದೆ. ಆಟೋರಿಕ್ಷಾಗಳಲ್ಲದೆ, ನಾಗರಿಕ ಸೇವೆಗಳಿಗೆ ಬಳಸುವ ಇಂಧನ ಚಾಲಿತ ವಾಹನಗಳನ್ನು ಸಹ ಈ ನೀತಿಯಡಿ ಗುರಿಯಾಗಿಸಿಕೊಂಡಿದೆ. ಹೆಚ್ಚು ಮಹತ್ವಾಕಾಂಕ್ಷೆಯ ಪ್ರಸ್ತಾವನೆಯಲ್ಲಿ, ಹೊಸ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು 2026ರ ಆ.15ರಿಂದ ನಿಷೇಧಿಸಬೇಕು ಎಂದು ಕರಡು ಹೇಳುತ್ತದೆ.

    ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation), ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ದೆಹಲಿ ಜಲಮಂಡಳಿ ನಿರ್ವಹಿಸುವ ಎಲ್ಲಾ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಕಸ ಸಂಗ್ರಹಣಾ ವಾಹನಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಇದು ಶಿಫಾರಸು ಮಾಡುತ್ತದೆ. ಇವುಗಳನ್ನು 2027ರ ಡಿ.31ರೊಳಗೆ ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿ ಪರಿವರ್ತಿಸಲಾಗುವುದು.

    ದೆಹಲಿ ಸಾರಿಗೆ ನಿಗಮ ಮತ್ತು ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ ನಿರ್ವಹಿಸುವ ಎಲ್ಲಾ ಇಂಟ್ರಾ-ಸಿಟಿ ಬಸ್‌ಗಳು ಇನ್ಮುಂದೆ ವಿದ್ಯುತ್ ಚಾಲಿತವಾಗಿರಬೇಕು ಎಂದು ನೀತಿಯು ಪ್ರಸ್ತಾಪಿಸುತ್ತದೆ. ಅಂತರ-ರಾಜ್ಯ ಮಾರ್ಗಗಳಿಗೆ ಬಿಎಸ್-ವಿಐ ಕಂಪ್ಲೈಂಟ್ ಬಸ್‌ಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಹೊಸ ನೀತಿಯಡಿಯಲ್ಲಿ ನಗರ ಬಳಕೆಗಾಗಿ ಯಾವುದೇ ಹೊಸ ಪಳೆಯುಳಿಕೆ ಇಂಧನ ಆಧಾರಿತ ಬಸ್‌ಗಳನ್ನು ಖರೀದಿಸಲಾಗುವುದಿಲ್ಲ.

    ಕರಡು ಇನ್ನೂ ಪರಿಶೀಲನೆಯಲ್ಲಿದ್ದು, ದೆಹಲಿ ಸಚಿವ ಸಂಪುಟದ ಮುಂದೆ ಇಡುವ ಮೊದಲು ವಿಶೇಷವಾಗಿ ದ್ವಿಚಕ್ರ ವಾಹನಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಿಗೆ ಒಳಗಾಗಬಹುದು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾ.31 ರಂದು ಮುಕ್ತಾಯಗೊಂಡ ಪ್ರಸ್ತುತ ಇವಿ (Electric Vehicles) ನೀತಿಯ ಹೊಸ ಆವೃತ್ತಿಯನ್ನು ಅಂತಿಮಗೊಳಿಸಲು 15 ದಿನಗಳವರೆಗೆ ವಿಸ್ತರಿಸಲಾಗಿದೆ. ಪಳೆಯುಳಿಕೆ ಇಂಧನ ಚಾಲಿತ ವಾಹನಗಳನ್ನು ಎಲ್ಲಾ ವಿಭಾಗಗಳಲ್ಲಿ ಆಕ್ರಮಣಕಾರಿಯಾಗಿ ಬದಲಾಯಿಸುವ ಮೂಲಕ ದೆಹಲಿಯ ವಾಯುಮಾಲಿನ್ಯವನ್ನು ತೀವ್ರವಾಗಿ ಕಡಿಮೆ ಮಾಡುವುದು ಈ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

  • ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ನವದೆಹಲಿ: ಇಡೀ ವಿಶ್ವದಲ್ಲೇ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದೆಹಲಿ (Delhi Air Pollution), ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನ ಉಸಿರಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು (CAQM) ಮಾಲಿನ್ಯ ನಿಯಂತ್ರಣಕ್ಕೆ 3ನೇ ಹಂತದ ಕ್ರಮ (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP-III) ಜಾರಿಗೆ ಮುಂದಾಗಿದೆ. ನವೆಂಬರ್‌ 15ರ ಶುಕ್ರವಾರದಿಂದಲೇ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿವೆ.

    ಏನೇನು ಕ್ರಮ ?
    ಜಿಆರ್‌ಎಪಿ-3 (GRAP-III) ಜಾರಿಯಲ್ಲಿರುವವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. BS-3 ಪೆಟ್ರೋಲ್ ಡಿಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗುತ್ತದೆ. ಸಿಎನ್‌ಜಿ, ಇವಿ ಸೇರಿದಂತೆ ಅಂತರರಾಜ್ಯಗಳ BS4 ಡಿಸೇಲ್ ಬಸ್‌ಗಳಿಗೆ ಮಾತ್ರ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ತುರ್ತು ಅಲ್ಲದ ನಿರ್ಮಾಣ ಮತ್ತು ಕಟ್ಟಡ ತೆರವು ಕಾರ್ಯಕ್ಕೆ ತಡೆ ನೀಡಲಾಗಿದ್ದು, ಸರ್ಕಾರಿ ಕಾಮಗಾರಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಗೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ಚಿಮುಕಿಸುವುದನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ ಎನ್‌ಸಿಎಆರ್‌ನಲ್ಲಿ 5ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಮುಖ್ಯವಾಗಿ ದೆಹಲಿ ನಿವಾಸಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ.

    ಅಪಾಯ ಮಟ್ಟ ಮೀರಿದ ಮಾಲಿನ್ಯ:
    ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ. ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಎಕ್ಯೂಐ ಮಟ್ಟವು ಶೂನ್ಯದಿಂದ 50 ರಷ್ಟಿದ್ದರೆ ಉಸಿರಾಟಕ್ಕೆ ಯೋಗ್ಯ ಗಾಳಿ, 51 ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ, 401 ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.

    300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ:
    ಗುರುವಾರ (ನ.14) ಬೆಳಿಗ್ಗೆ ದಟ್ಟನೆಯ ಮಂಜು ಆವರಿಸಿದ್ದನ್ನು ಕಂಡು ದೆಹಲಿಯ ಜನ ಕಂಗಾಲಾಗಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIQ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದೆ. ಮುಂಜಾನೆ AQI 452ರ ಗಡಿ ದಾಟಿದೆ. ಇದರಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದ್ದು, 300 ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ತಿಳಿಸಿದೆ.

  • ಪಾಕ್‌ ಕೈಗಾರಿಕೆಗಳ ಬ್ಯಾನ್‌ ಮಾಡ್ಬೇಕೆ: ದಿಲ್ಲಿ ವಾಯುಮಾಲಿನ್ಯಕ್ಕೆ ಪಾಕ್‌ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ಪಾಕ್‌ ಕೈಗಾರಿಕೆಗಳ ಬ್ಯಾನ್‌ ಮಾಡ್ಬೇಕೆ: ದಿಲ್ಲಿ ವಾಯುಮಾಲಿನ್ಯಕ್ಕೆ ಪಾಕ್‌ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಭಾರತದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ ಎಂದು ಆಪಾದಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ಕೈಗಾರಿಕೆಗಳ ನಿಷೇಧವನ್ನು ನೀವು ಬಯಸುತ್ತೀರಾ ಎಂದು ಯುಪಿ ಸರ್ಕಾರವನ್ನು ಸುಪ್ರೀಂ ಪ್ರಶ್ನಿಸಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಉತ್ತರ ಪ್ರದೇಶದ ಕೈಗಾರಿಕೆಗಳು ಕಾರಣವಲ್ಲ. ಪಾಕಿಸ್ತಾನದಿಂದ ಬರುತ್ತಿರುವ ಕಲುಷಿತ ಗಾಳಿಯಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು, ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ನೀವು, ಪಾಕಿಸ್ತಾನದ ಕೈಗಾರಿಕೆಗಳ ನಿಷೇಧವನ್ನು ಬಯಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಡಿ.4 ರಂದು ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ

    ಯುಪಿ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್‌ ಕುಮಾರ್‌ ವಾದ ಮಂಡಿಸಿ, ಪಾಕಿಸ್ತಾನದಿಂದ ಬರುತ್ತಿರುವ ಮಾಲಿನ್ಯಕಾರಕ ಗಾಳಿಯು ದೆಹಲಿಯ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ನಡೆಸಿದ 8 ಗಂಟೆಗಳ ಕಾರ್ಯಾಚರಣೆಯಿಂದ ಕಬ್ಬು ಮತ್ತು ಹಾಲಿನ ಉದ್ಯಮಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ಪ್ರತಿಪಾದಿಸಿದ್ದರು. ಈ ವೇಳೆ ವಕೀಲರ ವಿರುದ್ಧ ಗರಂ ಆದ ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠ, ಮೊದಲು ಆಯೋಗದ ಮೊರೆ ಹೋಗಿ, ವಾಯುಮಾಲಿನ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಹೇಳಿ ಎಂದು ಸೂಚಿಸಿತು.

    ವಾಯುಗುಣಮಟ್ಟ ನಿರ್ವಹಣೆ ಆಯೋಗವು ರಾಜಧಾನಿಯಲ್ಲಿನ ವಾಯುಮಾಲಿನ್ಯ ಪರಿಸ್ಥಿತಿಯನ್ನು ಪರಿಶೀಲಿಸಲು ಕಾರ್ಯಪಡೆಯೊಂದನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ 24 ಗಂಟೆಗಳ ಗಡುವು ನೀಡಿದೆ. ಇದನ್ನೂ ಓದಿ: ಕೇರಳ ವಿದ್ಯಾರ್ಥಿಗಳ ಬೀದಿರಂಪಾಟ – ಪೊಲೀಸರ ಮೇಲೆ ಹಲ್ಲೆ

    ಪರಿಸರ ಹೋರಾಟಗಾರ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್‌ ಬಂಕಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿ ವಲಯದ ರೈತರಿಗೆ ಹುಲ್ಲು ತೆಗೆಯುವ ಯಂತ್ರಗಳನ್ನು ಉಚಿತವಾಗಿ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ದುಬೆ ಅವರು ಸುಪ್ರೀಂಗೆ ಮನವಿ ಮಾಡಿದ್ದಾರೆ.