Tag: ದೆಹಲಿ ಪ್ರತಿಭಟನೆ

  • ದೆಹಲಿ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಜಾಹೀರಾತು – ರಾಜ್ಯ ಸರ್ಕಾರದ ವಿರುದ್ಧ ರಾಜಭವನಕ್ಕೆ ಬಿಜೆಪಿ ದೂರು

    ದೆಹಲಿ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಜಾಹೀರಾತು – ರಾಜ್ಯ ಸರ್ಕಾರದ ವಿರುದ್ಧ ರಾಜಭವನಕ್ಕೆ ಬಿಜೆಪಿ ದೂರು

    ಬೆಂಗಳೂರು: ಬಿಜೆಪಿ (BJP) ನಿಯೋಗವು ಇಂದು (ಫೆ.06) ರಾಜಭವನಕ್ಕೆ (Raj Bhavan) ಭೇಟಿ ನೀಡಿ ರಾಜ್ಯ ಸರ್ಕಾರದ ವಿರುದ್ಧ ದೂರು (Complaint) ಸಲ್ಲಿಸಿತು. ದಿನಪತ್ರಿಕೆಗಳಲ್ಲಿ ಜಾಹೀರಾತು (Advertisement) ನೀಡಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿದ ಕುರಿತು ಆಕ್ಷೇಪಿಸುವ ಮನವಿಯನ್ನು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ (Governer) ಸಲ್ಲಿಸಲಾಯಿತು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಮತ್ತು ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಈ ಜಾಹೀರಾತಿನ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಮನವಿ ಗಮನ ಸೆಳೆದಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಶೀರ್ಷಿಕೆಯ ಈ ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ನಡೆಸಲು ಕರೆ ನೀಡಿದ್ದು ಆಘಾತಕರ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುವ ಅಂಕಿ ಅಂಶಗಳನ್ನು ಈ ಜಾಹೀರಾತು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡಲು ಈ ಜಾಹೀರಾತು ಕೊಟ್ಟಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಮನವಿಯಲ್ಲಿ ಹೇಳಿದೆ. ಇದನ್ನೂ ಓದಿ: ನಮ್ಮ ಹಕ್ಕು ಕೇಳಲು ದೆಹಲಿಯಲ್ಲಿ ಪ್ರತಿಭಟನೆ: ಸತೀಶ್ ಜಾರಕಿಹೊಳಿ

    ಕೇಂದ್ರ ಸರ್ಕಾರದ ವಿರುದ್ಧ ರ‍್ಯಾಲಿ ಅಥವಾ ಪ್ರತಿಭಟನೆ ನಡೆಸುವ ಕುರಿತು ತಿಳಿಸಲು ಈ ಜಾಹೀರಾತು ನೀಡಿದ್ದು, ಇದು ಖಜಾನೆಯ ಹಣದ ದುರ್ಬಳಕೆ ಮತ್ತು ಮೋಸಗಾರಿಕೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಜಾಹೀರಾತಿನ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು, ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಕಮಿಷನರ್ ಅವರಿಗೆ ಇಂಥ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಕೋರಿದೆ. ಇದನ್ನೂ ಓದಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಆಭ್ಯರ್ಥಿಯಾಗಿ ಸ್ಪರ್ಧಿಸಲು ವಿಶ್ವನಾಥ್ ಸಿದ್ಧತೆ

  • ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯನಗರ ಸಾಮ್ರಾಜ್ಯದ ಟ್ಯಾಬ್ಲೊ ಜಖಂ

    ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯನಗರ ಸಾಮ್ರಾಜ್ಯದ ಟ್ಯಾಬ್ಲೊ ಜಖಂ

    ನವದೆಹಲಿ: ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ತುತ್ತಾಗಿದ್ದು, ಜಖಂ ಆಗಿದೆ. ಶ್ರೀಕೃಷ್ಣದೇವರಾಯನ ವೇಷದಲ್ಲಿದ್ದ ಡಾ.ರಾಜಕುಮಾರ್ ಮೂರ್ತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

    ಗಲಭೆಕೋರರು ನಡೆಸಿದ ದಾಂಧಲೆಯಿಂದ ಕೆಂಪುಕೋಟೆ ಸಂಪೂರ್ಣ ಹಾಳಾಗಿ ಹೋಗಿದೆ. ಸೆಕ್ಯೂರಿಟಿ ರೂಂನಿಂದ ಹಿಡಿದುಕೊಂಡು, ಪರಿಶೀಲನಾ ಕೊಠಡಿ, ಸಿಸಿಟಿವಿ, ಕಂಪ್ಯೂಟರ್, ಟಿಕೆಟ್ ಕೌಂಟರ್, ಫ್ಯಾನ್, ಪೀಠೋಪಕರಣ, ಬ್ಯಾರಿಕೇಡ್‍ಗಳನ್ನು ಧ್ವಂಸ ಮಾಡಲಾಗಿದೆ. ಕಂಡ ಕಂಡ ಗಾಜುಗಳನ್ನು ಧ್ವಂಸ ಮಾಡಲಾಗಿದೆ. ವೈರ್ ಗಳನ್ನು ಕಟ್ ಮಾಡಲಾಗಿದ್ದು, ಕೆಂಪುಕೋಟೆಯ ಎಲ್ಲಾ ಕಡೆ ವಿದ್ಯುತ್ ಸರಬರಾಜಿಗೂ ವ್ಯತ್ಯಯ ಉಂಟಾಗಿದೆ. ಪೊಲೀಸ್ ಜೀಪ್ ಜಖಂ ಆಗಿದ್ದು, ಕೆಲಸಕ್ಕೆ ಬಾರದಂತಾಗಿದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

    ಕೆಂಪುಕೋಟೆ ಹಿಂಸಾಚಾರದ ಮತ್ತಷ್ಟು ಘನಘೋರ ದೃಶ್ಯಗಳು ಒಂದೊಂದಾಗೇ ಬೆಳಕಿಗೆ ಬರ್ತಿವೆ. ಇದರಲ್ಲಿನ ಒಂದು ದೃಶ್ಯದಲ್ಲಂತೂ, ರೈತರ ವೇಷದಲ್ಲಿದ್ದ ಪಾತಕಿಗಳು ದೊಡ್ಡಮಟ್ಟದ ಹಿಂಸಾಕಾಂಡವನ್ನೇ ಸೃಷ್ಟಿಸಿರೋದು ಕಂಡು ಬರುತ್ತೆ. ಖಾಲಿ ಮಾಡಿಸಲು ಬಂದ ಪೊಲೀಸರ ಮೇಲೆ ಕಿಡಿಗೇಡಿಗಳು ತಿರುಗಿಬಿದ್ದಿದ್ದಾರೆ. ಗಲಭೆಕೋರರಿಂದ ತಪ್ಪಿಸಿಕೊಳ್ಳಲು, ತಮ್ಮ ಪ್ರಾಣ ಉಳಿಸಿಕೊಳ್ಳಲು ಕೆಂಪುಕೋಟೆ ಸಮೀಪದಲ್ಲಿದ್ದ 15 ಅಡಿ ಆಳದ ಕಂದಕಕ್ಕೆ ಪೊಲೀಸರು ಧುಮುಕುತ್ತಾರೆ. ಕೆಲವರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿಬೀಳುತ್ತಾರೆ. ಕೇವಲ ಇಲ್ಲೇ 150ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

    ಟ್ರ್ಯಾಕ್ಟರ್ ಮೂಲಕ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು, ದೊಣ್ಣೆಗಳ ಮೂಲಕ ಜಖಂ ಮಾಡುವ ದೃಶ್ಯವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ಮಧ್ಯೆ ಗಲಭೆಕೋರರು ಟ್ಯಾಬ್ಲೋ ಗಳನ್ನು ಬಿಟ್ಟಿಲ್ಲ. ಅದರಲ್ಲೂ ಪ್ರತಿಭಟನಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ಬಲಿಯಾಗಿದೆ.

  • ನಾವು ಸಂಯಮದಲ್ಲಿದ್ದರೂ ನಮ್ಮ ಮೇಲೆ ಕತ್ತಿ, ಲಾಠಿಯಿಂದ  ಥಳಿಸಿದ್ರು:  ಗಾಯಗೊಂಡ ಪೊಲೀಸ್‌

    ನಾವು ಸಂಯಮದಲ್ಲಿದ್ದರೂ ನಮ್ಮ ಮೇಲೆ ಕತ್ತಿ, ಲಾಠಿಯಿಂದ ಥಳಿಸಿದ್ರು: ಗಾಯಗೊಂಡ ಪೊಲೀಸ್‌

    ನವದೆಹಲಿ: ಕೆಂಪುಕೋಟೆ ಪ್ರವೇಶಿಸಿದ್ದ ರೈತರ ಜೊತೆ ಸಾಧ್ಯವಾದಷ್ಟು ನಾವು ಬಹಳ ಸಂಯಮದ ವರ್ತನೆ ತೋರಿದ್ದೆವು ಎಂದು ವಾಜಿರಾಬಾದ್‌ ಎಸ್‌ಎಚ್‌ಒ ಪಿಸಿ ಯಾದವ್‌ ಹೇಳಿದ್ದಾರೆ.

    ಕೆಂಪುಕೋಟೆ ದಾಂಧಲೆಯಲ್ಲಿ ರೈತರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು ನಿನ್ನೆಯ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    ಬಹಳಷ್ಟು ಜನ ಪ್ರವೇಶಿಸಿದ ಸಂದರ್ಭದಲ್ಲಿ ಭದ್ರತೆಗಾಗಿ ನಮ್ಮನ್ನು ಕೆಂಪು ಕೋಟೆಯಲ್ಲಿ ನಿಯೋಜಿಸಲಾಗಿತ್ತು. ನಾವು ಅವರನ್ನು ತಡೆದು ಕೋಟೆಯಿಂದ ಹೊರ ಹಾಕಲು ಪ್ರಯತ್ನಪಟ್ಟೆವು. ಆದರೆ ಪ್ರತಿಭಟನಾಕಾರರು ಬಹಳ ಆಕ್ರಮಣಕಾರಿಯಾಗಿದ್ದರು. ನಾವು ರೈತರ ವಿರುದ್ಧ ಬಲವನ್ನು ಬಳಸಲಿಲ್ಲ. ನಾವು ಸಾಧ್ಯವಾದಷ್ಟು ಸಂಯಮವನ್ನು ಪ್ರದರ್ಶಿಸಿದ್ದೇವೆ ಎಂದು ಅವರು ನಿನ್ನೆ ಘಟನೆಯ ಬಗ್ಗೆ ಮಾತನಾಡಿದರು.

    ಕೆಂಪುಕೋಟೆ ಬಳಿ ಪೊಲೀಸರ ಮೇಲೆ ರೈತರು ನಡೆಸಿದ ದಾಳಿ ಬೆಚ್ಚಿಬೀಳಿಸುವಂತಿದೆ. ಪೊಲೀಸರ ಮೇಲೆಯೇ ದೊಣ್ಣೆ, ಕೋಲುಗಳಿಂದ ಪ್ರತಿಭಟನಾಕಾರರು ಬೀಸಿದ್ದಾರೆ. ಒಟ್ಟಿನಲ್ಲಿ ಉದ್ರಿಕ್ತರು ಪೊಲೀಸರನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಪೊಲೀಸರು ಎಲ್ಲೂ ತಪ್ಪಿಸಿಕೊಳ್ಳದಂತೆ ಪ್ರತಿಭಟನಾಕಾರರು ಲಾಕ್ ಮಾಡಿದ್ದಾರೆ. ಹೀಗಾಗಿ ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು 8-10 ಅಡಿ ಎತ್ತರದ ಗೋಡೆಯಿಂದ ಜಿಗಿದಿರುವ ವಿಡಿಯೋ ವೈರಲ್‌ ಆಗಿದೆ.

    ದೆಹಲಿ ಪೊಲೀಸರು ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 22 ಪ್ರಕರಣಗಳನ್ನು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 395 (ಡಕಾಯಿತಿ) 397( ಮಾರಣಾಂತಿಕ ಹಲ್ಲೆ) 120 ಬಿ (ಕ್ರಿಮಿನಲ್ ಪಿತೂರಿ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಕೇಸ್‌ ದಾಖಲಾಗಿದೆ.

  • ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಹಲವೆಡೆ ಇಂಟರ್‌ನೆಟ್‌ ಸೇವೆ ಬಂದ್‌

    ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಹಲವೆಡೆ ಇಂಟರ್‌ನೆಟ್‌ ಸೇವೆ ಬಂದ್‌

    ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಟ್ರ್ಯಾಕ್ಟರ್‌ ಪ್ರತಿಭಟನೆ ಈಗ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿಯ ಕೆಲ ಭಾಗದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

    ಇಂದು ಮಧ್ಯಾಹ್ನ ದೆಹಲಿ ತಲುಪಿದ ರೈತರು ವಿಶ್ವ ಪಾರಂಪರಿಕ ತಾಣವಾದ ಕೆಂಪುಕೋಟೆಗೆ ನುಗ್ಗಿ ಕಿಸಾನ್‌ ಧ್ವಜವನ್ನು ಹಾರಿಸಿದ್ದಾರೆ. ಇಷ್ಟೇ ಅಲ್ಲದೇ ಕೆಂಪುಕೋಟೆಯ ಗುಮ್ಮಟದ ಮೇಲೆ ರೈತರು ಸಿಖ್‌ ಧ್ವಜವನ್ನು ಹಾರಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕೆಂಪುಕೋಟೆಗೆ ನುಗ್ಗಿದ ಪರಿಣಾಮ ಪೊಲೀಸರಿಗೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

    ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್‌ ಮಾಡಿ ಚದುರಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ದೆಹಲಿ ಕೆಲ ಭಾಗ ಮತ್ತು ಸಿಂಘು, ಗಾಜಿಯಾಬಾದ್‌, ಟಿಕ್ರಿ ಗಡಿ ಭಾಗದಲ್ಲಿ ಇಂದು ಮಧ್ಯರಾತ್ರಿಯವರೆಗೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

  • ದೆಹಲಿ ಪ್ರತಿಭಟನೆಗೆ ಬಂದಿದ್ದ ಯುವಕ ಶವವಾಗಿ ಪತ್ತೆ

    ದೆಹಲಿ ಪ್ರತಿಭಟನೆಗೆ ಬಂದಿದ್ದ ಯುವಕ ಶವವಾಗಿ ಪತ್ತೆ

    ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಯುವಕನ ಶವ ಹೆದ್ದಾರಿ ಬಳಿ ಪತ್ತೆಯಾಗಿದೆ. ಒಂದು ದಿನದ ಹಿಂದೆ ಯುವಕ ಮನೆಯಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ್ದನು.

    ಪಂಜಾಬ್ ರಾಜ್ಯದ ಸಂಗರೂರ ಜಿಲ್ಲೆಯ ಝನೆಡಿ ಗ್ರಾಮದ ನಿವಾಸಿ ಭೀಮ್ ಸಿಂಗ್ (36) ಮೃತ ಯುವಕ. ಕೆಲ ದಿನಗಳಿಂದ ಫತೇಗಢನಲ್ಲಿ ವಾಸವಾಗಿದ್ದ ಯುವಕ ಗುರುವಾರ ಬೆಳಗ್ಗೆ ಆಂದೋಲನದಲ್ಲಿ ಭಾಗಿಯಾಗಲು ದೆಹಲಿ- ಹರಿಯಾಣ ಗಡಿಯತ್ತ ಹೊರಟು ಬಂದಿದ್ದನು. ಹೆದ್ದಾರಿ ಪಕ್ಕದಲ್ಲಿಯೇ ಯುವಕನ ಶವವನ್ನ ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ಗುರುತಿನ ಚೀಟಿಯಿಂದ ಆತನ ಗುರುತು ಪತ್ತೆ ಮಾಡಿ, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಭೀಮ್ ಸಿಂಗ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.