Tag: ದೆಹಲಿ ಗಲಾಟೆ

  • ‘ಪಿತೂರಿ ಇಲ್ಲದೇ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆಯಲು ಸಾಧ್ಯವಿಲ್ಲ’

    ‘ಪಿತೂರಿ ಇಲ್ಲದೇ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆಯಲು ಸಾಧ್ಯವಿಲ್ಲ’

    – ಇದೊಂದು ಪೂರ್ವನಿಯೋಜಿತ ಕೃತ್ಯ
    – 4 ದಿನದಲ್ಲಿ ಸೃಷ್ಟಿಯಾಗಿ ಮುಚ್ಚಿತು 60 ಖಾತೆ
    – ದೆಹಲಿ ಗಲಭೆ ಬಗ್ಗೆ ಲೋಕಸಭೆಯಲ್ಲಿ ಅಮಿತ್ ಶಾ ಉತ್ತರ

    ನವದೆಹಲಿ: ಯಾವುದೇ ಪಿತೂರಿ ಇಲ್ಲದೇ ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಗಲಾಟೆ ನಡೆಯಲು ಸಾಧ್ಯವೇ ಇಲ್ಲ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

    ದೆಹಲಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಕ್ಷಿಪ್ರಗತಿಯಲ್ಲಿ ಗಲಾಟೆ ನಡೆಯಲು ದೊಡ್ಡ ಮಟ್ಟದ ಪಿತೂರಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಈ ದಿಕ್ಕಿನಲ್ಲಿ ತನಿಖೆ ಸಾಗುತ್ತಿದೆ ಎಂದು ಉತ್ತರಿಸಿದರು.

    ಪ್ರಾಥಮಿಕ ವರದಿಗಳ ಪ್ರಕಾರ ಇದೊಂದು ಪೂರ್ವನಿಯೋಜಿತ ಕೃತ್ಯ. ಈ ಗಲಾಟೆಗೆ ಹಣಕಾಸಿನ ನೆರವು ನೀಡಿದ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಯಾರೆಲ್ಲ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರು ಯಾವುದೇ ಕಾರಣಕ್ಕೆ ಕಾನೂನಿಂದ ಪಾರಾಗಲು ಸಾಧ್ಯವಿಲ್ಲ ಎಂಬುದನ್ನು ನಾನು ಭರವಸೆ ನೀಡುತ್ತೇನೆ ಎಂದು ಹೇಳಿದರು.

    ಅಮಾಯಕ ವ್ಯಕ್ತಿಗಳ ಮೇಲೆ ನಾವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಭರವಸೆ ನೀಡುತ್ತಿದ್ದೇನೆ. ಈಗಾಗಲೇ ಶಸ್ತ್ರಾಸ್ತ್ರ ಕಾಯ್ದೆಯ ಅಡಿ 49 ಪ್ರಕರಣ ದಾಖಲಾಗಿದ್ದು 153 ಶಾಸ್ತ್ರಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಾಂತಿ ಸಮಿತಿಯಿಂದ 650ಕ್ಕೂ ಹೆಚ್ಚು ಶಾಂತಿ ಸಭೆಗಳನ್ನು ನಡೆಸಲಾಗಿದೆ ಎಂದು ಶಾ ಮಾಹಿತಿ ನೀಡಿದರು.

    ಒಟ್ಟು 2,647 ಮಂದಿ ವಶಕ್ಕೆ ಮತ್ತು ಬಂಧನ ಮಾಡಿದ್ದೇವೆ. ಫೆ.27 ರಿಂದ ಇಲ್ಲಿಯವರೆಗೆ ಒಟ್ಟು 700 ಎಫ್‍ಐಆರ್ ದಾಖಲಾಗಿದೆ ಎಂದು ವಿವರಿಸಿದರು.

    ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದರಿಂದ ಗಲಾಟೆ ತೀವ್ರತೆ ಜಾಸ್ತಿ ಆಗತೊಡಗಿತು. ಫೆ.22ರಂದು ಸಾಮಾಜಿಕ ಜಾಲತಾಣದಲ್ಲಿ 60 ಖಾತೆಗಳು ಸೃಷ್ಟಿಯಾಗಿದ್ದು, ಈ ಖಾತೆಗಳು ಫೆ.26ಕ್ಕೆ ಮುಚ್ಚಿವೆ. ಪೊಲೀಸರು ಈಗ ಈ ಖಾತೆಗಳನ್ನು ಸೃಷ್ಟಿಸಿದ ವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.

    ಗಲಾಟೆಯ ವೇಳೆ ಅಮಿತ್ ಶಾ ದೆಹಲಿಯಲ್ಲಿ ಇರಲಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ, ಅಮೆರಿಕದ ಅಧ್ಯಕ್ಷರ ಕಾರ್ಯಕ್ರಮ ಮೊದಲೇ ಪೂರ್ವ ನಿಯೋಜಿತವಾಗಿತ್ತು. ಅಷ್ಟೇ ಅಲ್ಲದೇ ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ನನ್ನ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಮರುದಿನ ದೆಹಲಿಗೆ ಟ್ರಂಪ್ ಭೇಟಿ ನೀಡಿದ ದಿನ ನಾನು ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಆ ದಿನ ಪೂರ್ತಿ ನಾನು ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಕುಳಿತು ಅವಲೋಕಿಸುತ್ತಿದ್ದೆ ಎಂದರು.

    ನಾನು ಗಲಭೆ ನಡೆದ ಸ್ಥಳಕ್ಕೆ ತೆರಳಿದರೆ ಪೊಲೀಸರು ನನ್ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಬೇಕಿತ್ತು. ಭದ್ರತೆ ದೃಷ್ಟಿಯಿಂದ ಪೊಲೀಸರ ಸಂಪನ್ಮೂಲ ನನ್ನ ಕಡೆಗೆ ತಿರುಗಿಸಲು ನನಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ನಾನು ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದ್ದೆ ಎಂದು ತಿಳಿಸಿದರು.

    ಫೆ.25 ರಿಂದ ಇಲ್ಲಿಯವರೆಗೆ ದೆಹಲಿಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಆದರೆ ಲಾಭಕ್ಕಾಗಿ ಈ ಗಲಾಟೆಯನ್ನು ಪಕ್ಷಗಳು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.

    ದೆಹಲಿ ಪೊಲೀಸರ ಕರ್ತವ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ವೇಗವಾಗಿ ಹಬ್ಬಿದ್ದ ಗಲಾಟೆಯನ್ನು ಪೊಲೀಸರು 36 ಗಂಟೆಯಲ್ಲಿ ನಿಯಂತ್ರಿಸಿದ್ದಾರೆ. ಪೊಲೀಸರು ಸಹ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಗಲಭೆ ಬೇರೆ ಕಡೆ ಹರಡದಂತೆ ತಡೆದಿದ್ದಕ್ಕೆ ದೆಹಲಿ ಪೊಲೀಸರ ಕರ್ತವ್ಯವನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿದರು.

  • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

    ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

    -ಸಿಬಿಎಸ್‍ಇ ಪರೀಕ್ಷೆಗಳು ಮುಂದೂಡಿಕೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಹಿಂಸಾಚಾರದಲ್ಲಿ ಸುಮಾರು 180ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ದೆಹಲಿಯಲ್ಲಿ ಗಲಭೆ ಮತ್ತು ಹಿಂಸಾಚಾರ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ರಾತ್ರಿಯೇ ಘಟನೆಯ ಬಗ್ಗೆ ವಿಚಾರಣೆಯೇ ನಡೆಸಿತು. ನ್ಯಾ. ಮುರಳೀಧರ್ ಅವರು ರಾತ್ರಿ 12.30ರ ವೇಳೆಗೆ ತಮ್ಮ ನಿವಾಸದಲ್ಲಿ ವಿಚಾರಣೆ ನಡೆಸಿ, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡಬೇಕು. ಸೂಕ್ತ ಭದ್ರತಾ ಕ್ರಮ ತೆಗೆದುಕೊಳ್ಳಬೇಕು. ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ವೇಳೆ ದೆಹಲಿ ಪೊಲೀಸರಿಗೆ ಘಟನೆಯ ಸಂಪೂರ್ಣ ವರದಿ ಸಲ್ಲಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.

    ಫೆಬ್ರವರಿ 23ರಂದು ಈಶಾನ್ಯ ದೆಹಲಿಯಲ್ಲಿ ಆರಂಭವಾದ ಗಲಾಟೆ ಹಿಂಸಾಚಾರ ರೂಪ ಪಡೆದುಕೊಂಡಿದೆ. ಇಂದು ನಡೆಯಬೇಕಿದ್ದ 10 ಮತ್ತು 12ನೇ ತರಗತಿಯ ಸಿಬಿಎಸ್‍ಇ ಪರೀಕ್ಷೆಗಳನ್ನು ಮುಂದೂಡಿದೆ. ಮೌಜ್‍ಪುರ್ ಮತ್ತು ಗೋಕುಲ್ಪುರಿ ಪ್ರದೇಶದಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಮೌಜ್‍ಪುರ್ ಮತ್ತು ಗೋಕುಲ್ಪುರಿ ಪ್ರದೇಶಗಳ ಒಳಗೆ ವಾಹನ ಸಂಚಾರ ರದ್ದು ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಭದ್ರತಾ ಪಡೆಗಳು ಆಗಮಿಸಿವೆ.