Tag: ದೆಹಲಿ ಐಐಟಿ

  • ಆತ್ಮಹತ್ಯೆಗೆ ಶರಣಾದ ದೆಹಲಿ ಐಐಟಿ ವಿದ್ಯಾರ್ಥಿನಿ

    ಆತ್ಮಹತ್ಯೆಗೆ ಶರಣಾದ ದೆಹಲಿ ಐಐಟಿ ವಿದ್ಯಾರ್ಥಿನಿ

    ನವದೆಹಲಿ: ಇಲ್ಲಿನ ಐಐಟಿಯ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮಂಗಳವಾರದಂದು ನಡೆದಿದೆ.

    ಮಂಜುಳಾ ದೇವಕ್ (28) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮಂಜುಳಾ ಈ ಮೊದಲು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗವನ್ನು ತ್ಯಜಿಸಿ ದೆಹಲಿ ಐಐಟಿಗೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದರು.

    ಮಂಜುಳಾ ಐಐಟಿ ಕ್ಯಾಂಪಸ್‍ನಲ್ಲಿರುವ ನಳಂದ ಅಪಾರ್ಟ್‍ಮೆಂಟ್‍ನಲ್ಲಿ ಮಂಗಳವಾರ ಸಂಜೆ ಸುಮಾರು 7.45ರ ವೇಳೆಯಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೂಮಿನಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ.

    ಮೂಲತಃ ಇಂದೋರ್‍ನವರಾದ ಮಂಜುಳಾ ಸಿವಿಲ್ ಎಂಜಿನಿಯರ್ ಆಗಿದ್ದು, ಜಲ ಸಂಪನ್ಮೂಲ ವಿಷಯದಲ್ಲಿ ಪಿಎಚ್‍ಡಿ ಮಾಡುತ್ತಿದ್ದರು. 2013ರಲ್ಲಿ ಇವರ ವಿವಾಹವಾಗಿದ್ದು, ದೆಹಲಿಯ ಅಪಾರ್ಟ್‍ಮೆಂಟ್‍ನಲ್ಲಿ ತಮ್ಮ ಪತಿ ರಿತೇಶ್ ವಿರ್ಹಾ ಜೊತೆಗೆ ವಾಸವಾಗಿದ್ದರು. ಕೆಲವೊಂದು ಬಾರಿ ರಿತೇಶ್ ಇಂದೋರ್‍ನಲ್ಲಿ ಇರುತ್ತಿದ್ದರು. ಘಟನೆ ನಡೆದಾಗಲೂ ಇಂದೋರ್‍ನಲ್ಲಿ ಇದ್ದರು ಎಂದು ವರದಿಯಾಗಿದೆ.

    ಮಂಜುಳಾ ಅವರನ್ನು ಕೊನೆಯ ಬಾರಿ ನೋಡಿದ್ದು ಸೋಮವಾರ ರಾತ್ರಿ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಮಂಜುಳಾ ಫೋನ್ ಕರೆಗಳನ್ನು ಸ್ವೀಕರಿಸದ ಕಾರಣ ಗಾಬರಿಗೊಂಡ ಸ್ನೇಹಿತರು ಮನೆಯ ಬಳಿ ಹೋಗಿ ನೋಡಿದ್ದಾರೆ. ಆದ್ರೆ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದು ಒಳಹೋಗಿ ನೋಡಿದಾಗ ಮಂಜುಳಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜುಳಾ ಚೆನ್ನಾಗಿಯೇ ಇದ್ದರು. ಅವರು ಖುಷಿಯಾಗೇ ಇದ್ದರು ಎಂದು ಆಕೆಯ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಮಂಜುಳಾ ಅವರ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಕಾಲ್ ರೆಕಾರ್ಡ್ಸ್ ಪರಿಶೀಲಿಸಿದ ನಂತರ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್‍ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.