Tag: ದೆಹಲಿ ಆಸ್ಪತ್ರೆ

  • ಕೆಂಡದಂತ ಬಿಸಿಲು, ಬಿಸಿಗಾಳಿ ಹೊಡೆತಕ್ಕೆ ದೆಹಲಿಯಲ್ಲಿ 15 ಮಂದಿ ಸಾವು

    ಕೆಂಡದಂತ ಬಿಸಿಲು, ಬಿಸಿಗಾಳಿ ಹೊಡೆತಕ್ಕೆ ದೆಹಲಿಯಲ್ಲಿ 15 ಮಂದಿ ಸಾವು

    ನವದೆಹಲಿ: ಉತ್ತರ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ತಾಪಮಾನ (Temperature) ಹೆಚ್ಚುತ್ತಿದ್ದು ಕಳೆದ 72 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಬಿಸಿ ಗಾಳಿಗೆ 5 ಮತ್ತು ನೋಯ್ಡಾದಲ್ಲಿ ಕಳೆದ 24 ಗಂಟೆಗಳಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಬಿಸಿಗಾಳಿಯಿಂದ ಪೀಡಿತರಾದ ಸುಮಾರು 36 ಜನರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ (Ram Manohar Lohia Hospital) ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ತಲಾ ಒಬ್ಬ ಸಾವು ವರದಿಯಾಗಿದೆ. ಲೋಕನಾಯಕ ಆಸ್ಪತ್ರೆಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಜೂನ್ 16 ರಂದು ಶಾಖದ ಹೊಡೆತದಿಂದ ನಿಧನರಾದ ಕಾರ್ ಮೆಕ್ಯಾನಿಕ್ ಜೂನ್ 15 ರಂದು 106 ಡಿಗ್ರಿಗಳಷ್ಟು ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಮುಂಬೈನ 50 ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆ

    ದೆಹಲಿಯಲ್ಲಿ ಸಾವನ್ನಪ್ಪಿದ ಐವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಈ ಪೈಕಿ ಮೂವರು ರೋಗಿಗಳು 65 ವರ್ಷಕ್ಕಿಂತ ಮೇಲ್ಪಟ್ಟವರು. ಈ ಬಗ್ಗೆ ಎಲ್‌ಎನ್‌ಜೆಪಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್ ಕುಮಾರ್ ಮಾತನಾಡಿ, ಶಾಖದ ಅಲೆಯಿಂದ ಬಳಲುತ್ತಿರುವ ಹೆಚ್ಚಿನ ಜನರು ಕಾರ್ಮಿಕರು ಅಥವಾ ರಿಕ್ಷಾ ಚಾಲಕರು ಮತ್ತು ಅವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು. ಈ ರೋಗಿಗಳಲ್ಲಿ ಹೆಚ್ಚಿನವರು ಎಲೆಕ್ಟ್ರೋಲೈಟ್ ಕೊರತೆ, ಶಾಖದ ಹೊಡೆತ, 105 ಡಿಗ್ರಿಗಿಂತ ಹೆಚ್ಚಿನ ಜ್ವರ ಮತ್ತು ವಿಪರೀತ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

    ದೆಹಲಿಯ ವಿವಿಧ ಖಾಸಗಿ ಆಸ್ಪತ್ರೆಗಳು ಮತ್ತು ಸಣ್ಣ ಚಿಕಿತ್ಸಾಲಯಗಳಲ್ಲಿ ಶಾಖದ ಹೊಡೆತದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಸರಾಸರಿ ಹೆಚ್ಚುತ್ತಿದೆ. ಪಹರ್‌ಗಂಜ್‌ನಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಗೌರವ್ ಕುಮಾರ್ ಪ್ರಕಾರ, ಕಳೆದ ತಿಂಗಳಲ್ಲಿ ಬಿಸಿಗಾಳಿಯಿಂದ ಬಳಲುತ್ತಿರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಹಾನಿಗೊಳಗಾದವರಲ್ಲಿ ಹೆಚ್ಚಿನವರು ರಿಕ್ಷಾ ಚಾಲಕರು ಅಥವಾ ದಿನಗೂಲಿ ಕಾರ್ಮಿಕರಾಗಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು!

  • 7 ನವಜಾತ ಶಿಶುಗಳ ಸಾವು ಪ್ರಕರಣ; ಆಸ್ಪತ್ರೆಯ ಮಾಲೀಕ, ವೈದ್ಯ ಅರೆಸ್ಟ್‌

    7 ನವಜಾತ ಶಿಶುಗಳ ಸಾವು ಪ್ರಕರಣ; ಆಸ್ಪತ್ರೆಯ ಮಾಲೀಕ, ವೈದ್ಯ ಅರೆಸ್ಟ್‌

    ನವದೆಹಲಿ: ಇಲ್ಲಿನ ಆಸ್ಪತ್ರೆಯೊಂದರಲ್ಲಿ (Delhi Hospital) ಬೆಂಕಿ ಅವಘಡದಲ್ಲಿ ಏಳು ನವಜಾತ ಶಿಶುಗಳು (Newborn Babies) ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಬೆಂಕಿ ಹೊತ್ತಿಕೊಂಡಾಗ ಕರ್ತವ್ಯದಲ್ಲಿದ್ದ ಮತ್ತೊಬ್ಬ ವೈದ್ಯನನ್ನೂ ಬಂಧಿಸಲಾಗಿದೆ. ಪೂರ್ವ ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯ ಮಾಲೀಕ ಡಾ.ನವೀನ್ ಖಿಚಿ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡ ನಂತರ ಪರಾರಿಯಾಗಿದ್ದರು. ಇದನ್ನೂ ಓದಿ: ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ -6 ನವಜಾತ ಶಿಶುಗಳು ಬಲಿ

    ಎರಡು ಅಂತಸ್ತಿನ ಕಟ್ಟಡದಲ್ಲಿ ಇರಿಸಲಾಗಿದ್ದ ಆಕ್ಸಿಜನ್ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಲೇನ್ ಕಿರಿದಾಗಿದ್ದು, ಓವರ್ ಹೆಡ್ ತಂತಿಗಳಿಂದ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅಗ್ನಿಶಾಮಕ ದಳದವರು ಸವಾಲುಗಳನ್ನು ಎದುರಿಸಿದರು.

    ನಾವು ಎದುರಿಸಿದ ಮತ್ತೊಂದು ಸವಾಲೆಂದರೆ ಯಾವುದೇ ನೀರಿನ ಮೂಲವಿರಲಿಲ್ಲ. ನೇತಾಡುತ್ತಿದ್ದ ವಿದ್ಯುತ್ ತಂತಿಗಳು ದೊಡ್ಡ ಸಮಸ್ಯೆಯಾಗಿದ್ದವು ಎಂದು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಆಯೋಗದ ತಂಡವು ಆಸ್ಪತ್ರೆಗೆ ಭೇಟಿ ನೀಡಲಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆಯಿಂದ ಯುವಕರಿಗೆ 100% ಉದ್ಯೋಗವಕಾಶ: ಅನುರಾಗ್ ಠಾಕೂರ್

    ಮಕ್ಕಳ ಆಸ್ಪತ್ರೆಗೆ ಭಾರೀ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ಜನರು ಕಾಂಪೌಂಡ್ ಗೋಡೆ ಹತ್ತಿ ಧಾವಿಸಿದ್ದರು. ನವಜಾತ ಶಿಶುಗಳನ್ನು ರಕ್ಷಿಸಲು ಕಟ್ಟಡದ ಹಿಂಭಾಗದಿಂದ ಹತ್ತಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

  • 2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

    2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

    – ದೆಹಲಿಯ 2 ಸರ್ಕಾರಿ ಆಸ್ಪತ್ರೆ, ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ!

    ನವದೆಹಲಿ: ಇಲ್ಲಿನ ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ (Delhi Hospitals) ಬಾಂಬ್‌ ಬೆದರಿಕೆ ಕೇಳಿಬಂದ ಎರಡು ಗಂಟೆ ಅಂತರದಲ್ಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ (IGI Airport) ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಕೂಡಲೇ ಎಚ್ಚೆತ್ತುಕೊಂಡಿರುವ ದೆಹಲಿ ಪೊಲೀಸರು (Delhi Police), ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಕ್ರೈಂ ಬ್ರಾಂಚ್‌ ಅಧಿಕಾರಿ ತಂಡಗಳು ಆಸ್ಪತ್ರೆಗೆ ತೆರಳಿ ಶೋಧಕಾರ್ಯ ನಡೆಸುತ್ತಿವೆ. ಮತ್ತೊಂದು ಕಡೆ ಇ-ಮೇಲ್‌ ಮೂಲವನ್ನು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆ ಹೊರಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಸ್ವೀಕರಿಸಿದ 2 ಗಂಟೆಗಳ ಅಂತರದಲ್ಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. IGI ಟರ್ಮಿನಲ್-3 ರಲ್ಲಿ ಭಾನುವಾರ ಸಂಜೆ 6:19ಕ್ಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನ ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ದೆಹಲಿ ಎನ್‌ಸಿಆರ್‌ನ ಸುಮಾರು 130 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದ ಕೆಲಕಾಲ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಿಂದ ತೆರವುಗೊಳಿಸಿ, ತೀವ್ರ ಶೋಧ ನಡೆಸಲಾಗಿತ್ತು.

    ಇದೀಗ ಬಾಂಬ್‌ ಬೆದರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವಾಲಯ, ಬಾಂಬ್ ಬೆದರಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬೆಂಗಳೂರಿನ ಶಾಲೆಗಳಿಗೂ ಬೆದರಿಕೆ ಬಂದಿದ್ದವು. ಈ ಬಗ್ಗೆ ಜನರು ವಿಚಲಿತರಾಗಬೇಕಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.

  • ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು

    ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು

    ನವದೆಹಲಿ: ಕೀನ್ಯಾ ಮೂಲಯ ಹೆಚ್‌ಐವಿ ಪೀಡಿತ ಮಹಿಳೆಯೊಬ್ಬರ ಮೂತ್ರಪಿಂಡದಿAದ 10ಕೆಜಿ ಗೂ ಅಧಿಕ ತೂಕದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯಲಾಗಿದೆ.

    59 ವರ್ಷದ ಕೀನ್ಯಾದ ಮಹಿಳೆಯ ಮೂತ್ರಪಿಂಡದಿಂದ ಗಡ್ಡೆಯನ್ನು ತೆಗೆಯಲು ವೈದ್ಯರು 8 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಗೆಡ್ಡೆ 40 ಸೆ.ಮೀ. ಅಗಲವಿದ್ದು, ಭಾರತದಲ್ಲಿ ಇಂತಹ ಗಾತ್ರದ ಮೂತ್ರಪಿಂಡದ ಗೆಡ್ಡೆಯನ್ನು ತೆಗೆದಿರುವ ಇತಿಹಾಸ ಇಲ್ಲಿಯವರೆಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ

    ದೆಹಲಿಯ ಶಾಲಿಮಾರ್ ಬಾಗ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಬರೋಬ್ಬರಿ 10 ಕೆಜಿ ತೂಗುವ ಗೆಡ್ಡೆ ರೋಗಿಯ ಹೊಟ್ಟೆಯ ಸಂಪೂರ್ಣ ಜಾಗವನ್ನು ಆಕ್ರಮಿಸಿಕೊಂಡಿತ್ತು. ಅದನ್ನು ಹೊರಗಡೆ ತೆಗೆಯುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಜೊತೆಗೆ ರೋಗಿ ಹೆಚ್‌ಐವಿ ಸೋಂಕಿಗೂ ತುತ್ತಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ತೈಲ ಖರೀದಿಸಲು ಶ್ರೀಲಂಕಾಗೆ 3 ಸಾವಿರ ಕೋಟಿ ಸಾಲ ನೀಡಿದ ಭಾರತ

    ಡಾ. ಅರ್ಚಿತ್ ಪಂಡಿತ್ ಹಾಗೂ ಡಾ. ವಿನೀತ್ ಗೋಯೆಲ್ ನೇತೃತ್ವದ ವೈದ್ಯಕೀಯ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಇಲ್ಲಿಯವರೆಗೆ ದಾಖಲಾಗಿರುವ ವೈದ್ಯಕೀಯ ಇತಿಹಾಸದಲ್ಲಿ ಹೆಚ್‌ಐವಿ ಸೋಂಕಿತ ಮಹಿಳೆಯ ಮೂತ್ರಪಿಂಡದಿಂದ 10 ಕೆಜಿ ತೂಕದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿರುವುದು ಭಾರತದಲ್ಲೇ ಇದು ಮೊದಲನೆಯದ್ದು ಎಂದು ವೈದ್ಯರು ತಿಳಿಸಿದ್ದಾರೆ.