Tag: ದೃಷ್ಟಿದೋಷ

  • 18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

    18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

    – ಕತ್ತಲೆಮನೆಯಲ್ಲಿರುವ ಕುಟುಂಬಕ್ಕೆ ಬೇಕಿದೆ ಬೆಳಕಿನಾಸರೆ

    ರಾಯಚೂರು: ಈ ಕುಟುಂಬಕ್ಕೆ ಅದ್ಯಾವ ಶಾಪ ತಟ್ಟಿದೆಯೋ ಗೊತ್ತಿಲ್ಲ. ಮನೆಯಲ್ಲಿನ ಪ್ರತಿಯೊಬ್ಬರಿಗೂ ಒಂದೊಂದು ಹಂತದಲ್ಲಿ ದೃಷ್ಟಿ ಸಂಪೂರ್ಣವಾಗಿ ಮಾಯವಾಗುತ್ತದೆ. ರಾಯಚೂರಿನ ಸಿಂಧನೂರು ತಾಲೂಕಿನ ಹೆಡಗಿನಾಳದ ಸುರೇಶ್ ಹಾಗೂ ಬಸ್ಸಮ್ಮ ದಂಪತಿಯ ಕುಟುಂಬಕ್ಕೆ ದೃಷ್ಟಿದೋಷ ಕಾಡುತ್ತಿದೆ. ಕಷ್ಟಗಳೆಲ್ಲಾ ಹುಡುಕಿಕೊಂಡು ಬಂದು ಇವರ ಮನೆಯಲ್ಲೇ ಠಿಕಾಣಿ ಹೂಡಿದ ಹಾಗಿದೆ ಇವರ ಪರಿಸ್ಥಿತಿ.

    ಕೂಲಿ ಕೆಲಸ ಮಾಡುತ್ತಿದ್ದ ಸುರೇಶ್ ಪಾಶ್ರ್ವವಾಯುನಿಂದ ಕೈ ಸ್ವಾಧೀನ ಕಳೆದುಕೊಂಡು ಸುಮಾರು ವರ್ಷಗಳಾಗಿವೆ. ಮೂರನೇ ಮಗುವಿಗೆ ಜನ್ಮ ನೀಡಿದ ಬಳಿಕ ಬಸ್ಸಮ್ಮ ತನ್ನ ದೃಷ್ಟಿಯನ್ನ ಕಳೆದುಕೊಂಡಿದ್ದಾಳೆ. 6ನೇ ತರಗತಿವರೆಗೆ ಶಾಲೆಗೆ ಹೋಗುತ್ತಾ ಕೂಲಿ ಕೆಲಸವನ್ನೂ ಮಾಡುತ್ತಿದ್ದ ದೊಡ್ಡ ಮಗಳು ಜ್ಯೋತಿಗೆ ನಿಧಾನವಾಗಿ ದೃಷ್ಟಿ ಹೋಗಿದೆ. ಈಗ ಇರುವ ಇಬ್ಬರು ಗಂಡು ಮಕ್ಕಳಲ್ಲಿ ದೊಡ್ಡ ಹುಡುಗ ನವೀನ್ ಕುಮಾರ್ ಗೆ ದೃಷ್ಟಿ ಮಂದವಾಗುತ್ತಿದೆ. ಕೂಡಲೇ ಚಿಕಿತ್ಸೆ ಸಿಗದಿದ್ದರೆ ನವೀನ್ ಕೂಡ ದೃಷ್ಟಿ ಕಳೆದುಕೊಳ್ಳುತ್ತಾನೆ. ಅನಕ್ಷರತೆ, ಬಡತನದಿಂದ ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಅಂತ ಸುಮ್ಮನೆ ಕುಳಿತಿದ್ದ ಕುಟುಂಬಕ್ಕೆ ನವೀನ್ ಓದುವ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸ್ವತಃ ಕಣ್ಣಿನ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗಲೇ ಕುಟುಂಬದ ಸಮಸ್ಯೆ ಬೆಳಕಿಗೆ ಬಂದಿದೆ.

    ಈ ಕುಟುಂಬ ‘ಪಾಲಿಕೋಲಿಯಾ’ ಹೆಸರಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಕೆಲವರಿಗೆ ಅನುವಂಶಿಕವಾಗಿ ಬಂದರೆ, ಇನ್ನೂ ಕೆಲವರಿಗೆ 18 ವರ್ಷ ತುಂಬುವುದರೊಳಗೆ ದೃಷ್ಟಿ ಮಂದವಾಗುತ್ತಾ ಹೋಗುತ್ತದೆ. ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಾ ದಿನದಿಂದ ದಿನಕ್ಕೆ ಕತ್ತಲು ಆವರಿಸುತ್ತದೆ. ಈ ಹಿಂದೆ ಕಣ್ಣಿನ ತಪಾಸಣೆ ಶಿಬಿರದಲ್ಲಿ ನವೀನ್ ನನ್ನ ಪರೀಕ್ಷಿಸಿದ್ದ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡಲು ಮುಂದೆ ಬಂದಿದ್ದಾರೆ. ನವೀನ್ ಸಹೋದರಿ ಹಾಗೂ ತಮ್ಮನನ್ನೂ ಪರೀಕ್ಷಿಸಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಕನಿಷ್ಠ ಬಸ್ ಚಾರ್ಜ್‍ಗೂ ಹಣವಿಲ್ಲದೆ ಈ ಕುಟುಂಬ ಬೆಂಗಳೂರಿಗೆ ಚಿಕಿತ್ಸೆಗಾಗಿ ಓಡಾಡಲು ಪರದಾಡುತ್ತಿದೆ. ಹೀಗಾಗಿ ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿದೆ.

    ಸಿಂಧನೂರಿನ ನೇತ್ರತಜ್ಞ ಡಾ.ಚನ್ನನಗೌಡ ಪಾಟೀಲ್ ತಮ್ಮ ಹಂತದ ಚಿಕಿತ್ಸೆಯ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಆದರೆ ಜೀವನಕ್ಕೆ ಮುಂದೆ ಯಾವುದೇ ಭರವಸೆಗಳಿಲ್ಲದೆ ಕೇವಲ ವಿಕಲಚೇತನರ ಮಾಸಿಕ ವೇತನದಲ್ಲಿ ಸಂಸಾರ ನಿರ್ವಹಣೆ ಮಾಡುತ್ತಿರುವ ಕುಟುಂಬಕ್ಕೆ ಆರ್ಥಿಕ ಸಬಲತೆಗಾಗಿ ಆಸರೆ ಬೇಕಿದೆ. ಮಕ್ಕಳ ದೃಷ್ಟಿ ಸಮಸ್ಯೆ ಬಗೆಹರಿದರೆ ಇವರ ಬದುಕಲ್ಲಿ ಸಣ್ಣದಾಗಿ ನೆಮ್ಮದಿಯ ಬೆಳಕು ಆರಂಭವಾಗಬಹುದು.

  • ದೃಷ್ಟಿದೋಷ ಅಂದರೇನು? ಕಾಲಿಗೆ ಕಪ್ಪು ದಾರ ಕಟ್ಟೋದ್ಯಾಕೆ?

    ದೃಷ್ಟಿದೋಷ ಅಂದರೇನು? ಕಾಲಿಗೆ ಕಪ್ಪು ದಾರ ಕಟ್ಟೋದ್ಯಾಕೆ?

    ಕ್ಕಳು ಚೆಂದದ ಡ್ರೆಸ್ ತೊಟ್ಟರೆ ಸಾಕು ಮಗುವಿಗೆ ದೃಷ್ಟಿ ಆಗುತ್ತೆ ಅಂತ ಅಮ್ಮ ಹೇಳುವ ಮೊದಲು ಮಾತು. ಇನ್ನು ಮನೆ ಕಟ್ಟಿದ್ರೆ ಮುಂಭಾಗದಲ್ಲಿ ದೃಷ್ಟಿಗೊಂಬೆ ಇರಲೇಬೇಕು. ಅನಾರೋಗ್ಯಕ್ಕೆ ತುತ್ತಾದ್ರೆ ಕಾಲಿಗೆ ಕಪ್ಪು ದಾರ ಕಟ್ಟಿದ್ರೆ ಗುಣಮುಖರಾಗ್ತಾರೆ ಅನ್ನೋದು ನಂಬಿಕೆ. ಯುವತಿಯರು ಎಡಗಾಲಿಗೆ, ಯುವಕರು ಬಲಗಾಲಿಗೆ ಕಪ್ಪು ದಾರ ಕಟ್ಟಿರೋದನ್ನು ನೋಡಿರುತ್ತೇವೆ. ಪೋಷಕರ ಒತ್ತಾಯಕ್ಕೆ ದಾರ ಕಟ್ಟಿಕೊಂಡಿದ್ದೇವೆ ಅನ್ನೋದು ಬಹುತೇಕರ ಮಾತು. ದೃಷ್ಟಿದೋಷ ಎಂದರೇನು? ಕಾಲಿಗೆ ಕಪ್ಪು ದಾರ ಕಟ್ಟೋದ್ಯಾಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

     

    ಕೆಲವರ ನೇತ್ರದಿಂದ ದೃಷ್ಟಿ ಆಗುತ್ತೆ ಅನ್ನೋದು ನಂಬಿಕೆ. ಮಕ್ಕಳು ಆರೋಗ್ಯವಾಗಿದ್ದಾಗಲೂ ಹಠ ಮಾಡುತ್ತಿರುತ್ತವೆ. ಹೇಳಿದ ಮಾತನ್ನು ಕೇಳಲ್ಲ. ಸದೃಢವಾಗಿದ್ದರೂ ಮಗು ಮಾತ್ರ ಅಳೋದನ್ನು ನಿಲ್ಲಿಸಲ್ಲ. ಆಗ ಮನೆಯ ಹಿರಿಯರು ಕಪ್ಪು ದಾರವನ್ನು ಕಟ್ಟುವಂತೆ ಸೂಚಿಸುತ್ತಾರೆ. ಯಾವುದೋ ಒಂದು ದೇವಾಲಯ ಅಥವಾ ದೇವರ ಹೆಸರು ಹೇಳಿ ಮಕ್ಕಳಿಗೆ ಕಪ್ಪು ದಾರ ಕಟ್ಟುತ್ತಾರೆ.

    ಕಾಲಿಗೆ ಕಪ್ಪುದಾರ ಕಟ್ಟೋದ್ಯಾಕೆ?
    ಪ್ರತಿನಿತ್ಯ ಬಳಸುವ ದಾರಿಯಲ್ಲಿ ಅಂದ್ರೆ ಮೂರು ರಸ್ತೆಗಳು ಸೇರುವ ಕೇಂದ್ರದಲ್ಲಿ ದೃಷ್ಟಿದೋಷಗಳನ್ನು ನಿವಾರಿಸಿ ನಿಂಬೆಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಇರಿಸಿರುತ್ತಾರೆ. ನಿವಾರಿಸಿದ ವಸ್ತಗಳನ್ನು ದಾಟಿದ್ರೆ ಅದರಿಂದಾಗುವ ದುಷ್ಪರಿಣಾಮಗಳು ಮಕ್ಕಳ ಮೇಲೆ ಬೀಳದಿರಲಿ ಎಂದು ಪೋಷಕರು ಕಪ್ಪು ದಾರ ಕಟ್ಟಿಕೊಳ್ಳುವಂತೆ ಸೂಚಿಸುತ್ತಾರೆ. ಹೆಣ್ಣು ಮಕ್ಕಳು ಎಡಗಾಲಿಗೆ, ಗಂಡು ಮಕ್ಕಳು ಬಲಗಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಬೇಕು.

    ದೃಷ್ಟಿದೋಷಕ್ಕೆ ಪರಿಹಾರ:
    ಹಿತ, ಅಹಿತ, ಕ್ರೂರ ಮತ್ತು ನೀಚ ದೃಷ್ಟಿ ಎಂಬ ನಾಲ್ಕು ಬಗೆಯ ದೃಷ್ಟಿಗಳಿರುತ್ತವೆ. ಈ ದೋಷದ ನಿವಾರಣೆಗಾಗಿ ದೃಷ್ಟಿ ಗಣೇಶನನ್ನು ಆರಾಧಿಸಬೇಕು. ಹಾಗಾಗಿ ಕೆಲವರು ಮನೆ, ಅಂಗಡಿ, ವಾಹನಗಳಲ್ಲಿ ದೃಷ್ಟಿ ಗಣೇಶನ ವಿಗ್ರಹ ಅಥವಾ ಫೋಟೋ ಅಥವಾ ಸಣ್ಣದಾದ ಸ್ಟಿಕ್ಕರ್ ಹಾಕಿಕೊಂಡಿರುತ್ತಾರೆ. ದೃಷ್ಟಿ ಗಣೇಶನ ಫೋಟೋ ಹಾಕುವುದರಿಂದ ನಮ್ಮ ಬಳಿ ಬರುವಂತಹ ಕೆಟ್ಟ ದೃಷ್ಟಿ (ಬ್ಯಾಡ್ ಎನರ್ಜಿ ಅಥವಾ ನೆಗಟಿವ್ ರೇಸ್) ವಾಪಾಸ್ ಹೋಗುತ್ತದೆ ಎಂದು ಗಣೇಶ ಪುರಾಣದಲ್ಲಿ ಹೇಳಲಾಗುತ್ತದೆ.

    ವ್ಯಾಪಾರ ಸ್ಥಳದಲ್ಲಿ ಅಥವಾ ಮನೆಯಲ್ಲಿ ಯಾರು ನನ್ನನ್ನು ಆರಾಧನೆ ಮಾಡುತ್ತಾರೋ ಅಲ್ಲಿಗೆ ಬರುವ ಕೆಟ್ಟ ದೃಷ್ಟಿಯನ್ನು ನಾನು ಸಂಹಾರ ಮಾಡುತ್ತೇನೆ ಎಂದು ವಿಘ್ನ ನಿವಾರಕ ಗಣೇಶ ಹೇಳುತ್ತಾನೆ ಎಂಬುವುದು ಪುರಾಣದಲ್ಲಿದೆ. ಗೃಹಪ್ರವೇಶ ಮಾಡುವ ವೇಳೆ ಕುಂಬಳಕಾಯಿ ಕಟ್ಟಲು ಕಪ್ಪು ದಾರ ಬಳಸಲಾಗುತ್ತದೆ.