Tag: ದುಷ್ಕರ್ಮಿಗಳು

  • ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

    ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

    ನವದೆಹಲಿ: ವ್ಯಕ್ತಿಯೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆಯೇ ಬಂದು ಏಕಾಏಕಿ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ಶುಕ್ರವಾರದ ಸಂಜೆ ಹೊತ್ತಿಗೆ ದೆಹಲಿಯ ಸೆಕ್ಟರ್-11ರ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂಲತಃ ದೆಹಲಿಯ ಖೇದಾ ಖರ್ದ್ ಗ್ರಾಮದವರಾದ ಮನೀಶ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸಹೋದ್ಯೊಗಿಗಳ ಜೊತೆ ಹೊರಗಡೆ ಹೊರಟಿದ್ದ ಮನೀಶ್ ಕಾರನ್ನು ದುಷ್ಕರ್ಮಿಗಳು ಮತ್ತೊಂದು ವಾಹನದಲ್ಲಿ ಬಂದು ರೋಹಿಣಿ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಈ ವೇಳೆ ಕಾರಿನಿಂದ ಮನೀಶ್ ಇಳಿದು ಕೆಳಗೆ ಬಂದ ಮೇಲೆ ನಾಲ್ವರು ದುಷ್ಕರ್ಮಿಗಳು ಒಬ್ಬರ ಹಿಂದೆ ಒಬ್ಬರಂತೆ ಬಂದು ಮನೀಶ್ ಮೇಲೆ ಗುಂಡು ಹಾರಿಸಿದ್ದಾರೆ.

    ಆರೋಪಿಗಳು ಮನೀಶ್ ಮೇಲೆ ದಾಳಿ ಮಾಡಿರುವ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗುಂಡೇಟು ತಿಂದಿರುವ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ವಿಡಿಯೋದಲ್ಲಿ ಗಮನಿಸಿದರೆ ಮೊದಲು ಇಬ್ಬರು ವ್ಯಕ್ತಿಗಳು ಮನೀಶ್ ಬಳಿ ಬಂದು ಗುಂಡು ಹೊಡೆಯುತ್ತಾರೆ. ಅವರ ಹಿಂದೆಯೇ ಇನ್ನಿಬ್ಬರು ಸಾಲಾಗಿ ಬಂದು ಗುಂಡು ಹಾರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಘಟನೆಯನ್ನು ಕಂಡು ತಮ್ಮ ಮನೆಯ ಗೇಟ್ ಮುಚ್ಚಿ ಭಯದಿಂದ ಮನೆಯೊಳಗೆ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಮೀನುಗಾರಿಕಾ ಬೋಟ್‍ನ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ದುಷ್ಕರ್ಮಿಗಳು

    ಮೀನುಗಾರಿಕಾ ಬೋಟ್‍ನ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ದುಷ್ಕರ್ಮಿಗಳು

    ಮಂಗಳೂರು: ನಗರದ ಹಳೆ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಕಟ್ಟಿ ಹಾಕಿದ್ದ ಮೀನುಗಾರಿಕಾ ಬೋಟನ್ನು ರಾತ್ರೋರಾತ್ರಿ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ಘಟನೆ ನಡೆದಿದೆ.

    ಖಾಲಿ ಬೋಟ್ ಈಗ ಸಮುದ್ರಕ್ಕೆ ತೇಲುತ್ತಾ ಹೋಗಿ ತೀರದಿಂದ ಸ್ವಲ್ಪ ದೂರದಲ್ಲಿ ಕಡಲ ಮಧ್ಯೆ ಬಂಡೆಗೆ ಸಿಲುಕಿ ಮುಳುಗಡೆಯಾಗಿದೆ. ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆಂದು ಸಂಶಯಿಸಿದ್ದಾರೆ.

    ಗಾಂಜಾ ವ್ಯಸನಿಗಳು ಈ ಕೃತ್ಯ ಎಸಗಿರಬೇಕೆಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್‍ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

    ಬೋಟ್‍ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲೀಕರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ

    ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ

    ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಬಬಲಾದ್ ಗ್ರಾಮದಲ್ಲಿ ನಡೆದಿದೆ.

    ಆನಂದ್ ರಾಮಪೂರೆ (30) ಕೊಲೆಯಾಗಿರುವ ರೌಡಿಶೀಟರ್ ಆಗಿದ್ದು, ಈತ ಕಲಬುರಗಿ ನಗರದ ಕಾಂತಾ ಕಾಲೋನಿ ನಿವಾಸಿಯಾಗಿದ್ದಾನೆ. ಕಳೆದ ರಾತ್ರಿ ರೌಡಿಶೀಟರ್ ಆನಂದ್‍ನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗುತ್ತಿದೆ.

    ಆನಂದ್ ಕೊಲೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಆರೋಪಿ ಆಗಿದ್ದನು. ಈ ಬಗ್ಗೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫೋಟೋಗಾಗಿ ಬೈಕ್ ಏರಿದ್ದವರು ಮಾಲೀಕನಿಗೆ ಥಳಿಸಿ ಎಸ್ಕೇಪ್

    ಫೋಟೋಗಾಗಿ ಬೈಕ್ ಏರಿದ್ದವರು ಮಾಲೀಕನಿಗೆ ಥಳಿಸಿ ಎಸ್ಕೇಪ್

    ಬೆಂಗಳೂರು: ಬೈಕ್ ಚೆನ್ನಾಗಿದೆ ಎಂದು ಫೋಟೋ ತೆಗೆದುಕೊಂಡು ಅಪರಿಚಿತರು ಅದರ ಜೊತೆನೇ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಬೆಥಾನಿ ಸ್ಕೂಲ್ ಬಳಿ ನಡೆದಿದೆ.

    ಬೈಕ್ ಮಾಲೀಕ ಗಣೇಶ್ ಗೌಡ ಎಂಬಾತನಿಗೆ ಹಲ್ಲೆ ನಡೆಸಿ ಇಬ್ಬರು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಇಬ್ಬರು ಅಪರಿಚಿತರು ಹೋಂಡಾ ಆಕ್ಟೀವಾದಲ್ಲಿ ಬಂದಿದ್ದರು. ಈ ವೇಳೆ ಗಣೇಶ್ ಗೌಡ ಅವರ ವಿದೇಶಿ ಬೈಕ್ ಹೋಂಡಾ ಗೋಲ್ಡ್ ವಿಂಗ್ ನೋಡಿದ್ದಾರೆ.

    ಇಬ್ಬರು ದುಷ್ಕರ್ಮಿಗಳು ಬೈಕ್ ಮಾಲೀಕ ಗಣೇಶ್ ಗೌಡ ಬಳಿ ಹೋಗಿ ನಿಮ್ಮ ವಿದೇಶಿ ಬೈಕ್ ಚೆನ್ನಾಗಿದೆ. ನಾವು ಒಂದು ಫೋಟೋ ತೆಗೆದುಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಗಣೇಶ್ ಗೌಡ ಕೂಡ ಇದಕ್ಕೆ ಒಪ್ಪಿಕೊಂಡು ಫೋಟೋ ತೆಗೆದುಕೊಳ್ಳಲು ಅನುಮತಿ ನೀಡಿದರು.

    ಫೋಟೋ ತೆಗೆದುಕೊಂಡ ಮೇಲೆ ದುಷ್ಕರ್ಮಿಗಳು ಬೆರಳುಗಳಿಗೆ ನಕ್ಕಲ್ ಧರಿಸಿ ಗಣೇಶ್‍ಗೆ ಪಂಚ್ ಮಾಡಿದ್ದಾರೆ. ಗಣೇಶ್ ಮೇಲೆ ಹಲ್ಲೆ ನಡೆಸಿದ ನಂತರ ಅವರಿಂದ ಹೋಂಡಾ ಗೋಲ್ಡ್ ವಿಂಗ್ ಬೈಕ್ ಕೀ ಕಸಿದುಕೊಂಡು ಇಬ್ಬರು ಸ್ಥಳದಿಂದ ಪರಾರಿ ಆಗಿದ್ದಾರೆ.

    ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತುಂಗಾ ನದಿಗೆ ವಿಷ ಹಾಕಿದ ದುಷ್ಕರ್ಮಿಗಳು!

    ತುಂಗಾ ನದಿಗೆ ವಿಷ ಹಾಕಿದ ದುಷ್ಕರ್ಮಿಗಳು!

    ಶಿವಮೊಗ್ಗ: ಇಲ್ಲಿಗೆ ಸಮೀಪದ ಹೊಸಳ್ಳಿ- ಮತ್ತೂರು ನಡುವೆ ಇರುವ ಚೆಕ್ ಡ್ಯಾಂ ಬಳಿ ತುಂಗಾ ನದಿಗೆ ಅಪಾರ ಪ್ರಮಾಣದ ವಿಷ ಬೆರೆಸಿರುವ ಆತಂಕಕಾರಿ ಘಟನೆ ನಡೆದಿದೆ.

    ಸಂಸ್ಕೃತ ಗ್ರಾಮ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಮತ್ತೂರು- ಹೊಸಳ್ಳಿ ಸೇರಿ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ನೀರಿನಲ್ಲಿ ವಿಷ ಬೆರೆತಿರುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಹೊನ್ನಾಪುರ, ಹೊಸಕೊಪ್ಪ, ಮಂಡನೇಕೊಪ್ಪ, ಲಕ್ಷ್ಮೀಪುರ, ಮತ್ತೂರು, ಹೊಸಳ್ಳಿ ಸಿದ್ದರಹಳ್ಳಿ ಇನ್ನಿತರ ಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
    ಕಳೆದ ಮೂರು-ನಾಲ್ಕು ದಿನಗಳಿಂದ ನೀರು ಕ್ರಮೇಣ ಹಸಿರು ಬಣ್ಣಕ್ಕೆ ತಿರುಗುತ್ತಿತ್ತು. ಮಂಗಳವಾರದಿಂದ ಭಾರೀ ಗಾತ್ರದ ಮೀನುಗಳು ಸತ್ತು ಬಿದ್ದಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದಾರೆ. ಲಕ್ಷಾಂತರ ಮೀನುಗಳು ಸತ್ತು ತೇಲುತ್ತಿದ್ದು, ಹದ್ದು, ಕಾಗೆಗಳಿಗೆ ಆಹಾರವಾಗುತ್ತಿವೆ.

    ಕಳೆದ ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ಬಂದು ಮಧ್ಯರಾತ್ರಿ ಬಂದು ವಿಷ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ತೀವ್ರ ರೀತಿಯ ಹರಳು ರೂಪದ ವಿಷಯ ಬೆರೆಸಿರುವ ಶಂಕೆ ವ್ಯಕ್ತವಾಗುತ್ತಿದ್ದು, ಅದು ನೀರಿನಲ್ಲಿ ಕರಗಿ ಬರುತ್ತಿದೆ ಎಂದು ಶಂಕಿಸಲಾಗಿದೆ.

    ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೊದಲು ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ವಿಷ ಬೆರಕೆ ಬಗ್ಗೆ ತನಿಖೆ ಆಗಬೇಕು. ಈ ಜಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ನಿಲ್ಲಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕುತ್ತಿಗೆ ಮೇಲೆ ಕಾಲಿಟ್ಟು ಯುವಕನ ಮೇಲೆ ಐವರಿಂದ ಹಲ್ಲೆ

    ಕುತ್ತಿಗೆ ಮೇಲೆ ಕಾಲಿಟ್ಟು ಯುವಕನ ಮೇಲೆ ಐವರಿಂದ ಹಲ್ಲೆ

    ಬೆಂಗಳೂರು: ರೌಡಿಗಳು  ಯುವಕನನ್ನು ನೆಲಕ್ಕೆ ಹಾಕಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

    ಹರೀಶ್ (25) ಹಲ್ಲೆಗೊಳಗಾದ ಯುವಕ. ಹರೀಶ್ ಪರಪ್ಪನ ಅಗ್ರಹಾರದ ಹೊಸರೋಡು ನಿವಾಸಿಯಾಗಿದ್ದು, ಕಚ್ಚಲು ಬಂದ ಸಾಕು ನಾಯಿಗೆ ಬೈದಿದ್ದಕ್ಕೆ ಶ್ವಾನದ ಮಾಲೀಕರು ಹಾಗೂ ಬಾಡಿಗೆ ರೌಡಿಗಳು ಯುವಕನ ಮೇಲೆ ಹಲ್ಲೆ ನಡೆಸಿದರು.

    ಐವರು ದುಷ್ಕರ್ಮಿಗಳ ತಂಡ ಹರೀಶ್‍ನನ್ನು ಥಳಿಸಿ ಕಲ್ಲು ಎತ್ತು ಹಾಕಲು ಮುಂದಾಗಿದ್ದರು. ಹಲ್ಲೆಗೊಳಗಾದ ಹರೀಶ್ ಪ್ರಜ್ಞೆ ಕಳೆದುಕೊಂಡರೂ ದುಷ್ಕರ್ಮಿಗಳು ಬಿಡದೇ ಕಲ್ಲು ಹಾಗೂ ದೊಣ್ಣೆಗಳಿಂದ ಥಳಿಸಿದ್ದಾರೆ. ಹರೀಶ್ ಮೇಲಿನ ಅಮಾನುಷ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಹಲ್ಲೆಯಿಂದ ಹರೀಶ್ ಒಂದು ಕಣ್ಣು ಕಳೆದುಕೊಂಡಿದ್ದು, ಅಲ್ಲದೆ ಸೊಂಟದ ಮೂಳೆಗೆ ಬಲವಾದ ಪೆಟ್ಟು ಬಿದ್ದಿದೆ. ತಲೆಗೆ ಗಾಯವಾಗಿದೆ. ಇಷ್ಟೆಲ್ಲಾ ಆದರೂ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

  • ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ – ಎಫ್‍ಐಆರ್ ದಾಖಲು

    ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ – ಎಫ್‍ಐಆರ್ ದಾಖಲು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಈ ಬಗ್ಗೆ ದರ್ಶನ್ ಅವರ ಮನೆ ಮ್ಯಾನೇಜರ್ ಶ್ರೀನಿವಾಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಸುಮಾರು 15 ವರ್ಷಗಳಿಂದ ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ದರ್ಶನ್ 19ರಂದು ‘ಒಡೆಯ’ ಸಿನಿಮಾ ಶೂಟಿಂಗ್‍ಗಾಗಿ ಹೈದರಾಬಾದ್‍ನಲ್ಲಿದ್ದರು. ಮತ್ತೆ 20ಕ್ಕೆ ದರ್ಶನ್ ಮಂಡ್ಯಕ್ಕೆ ಬಂದು ಮತ್ತೆ ಹೈದರಾಬಾದ್‍ಗೆ ಹೋಗಿದ್ದಾರೆ. ದರ್ಶನ್ ಅವರಿಗೆ ಸೇರಿದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ತೂಗದೀಪ ನಿಲಯ ಈ ಮನೆಯನ್ನು ದರ್ಶನ್ ಅವರು ಸಿನಿಮಾ ಶೂಟಿಂಗ್‍ಗೆ ಹೋಗಿದ್ದ ಸಮಯದಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳಾದ ಕೆಂಪೇಗೌಡ ಹಾಗೂ ಪವನ್ ನೋಡಿಕೊಳ್ಳುತ್ತಾರೆ.

    22ರ ಮಧ್ಯರಾತ್ರಿ ಸುಮಾರು 12.54ಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ದರ್ಶನ್ ಅವರ ಮನೆಯ ಬಳಿಗೆ ನಡೆದುಕೊಂಡು ಬಂದು ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸ್ ಹೊಡೆದು, ಮನೆಯ ಮುಂದೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್ ಹರಿದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೆಂಪೇಗೌಡ ಅವರು ಹೊರ ಬಂದಾಗ ಕಲ್ಲಿನಿಂದ ಮನೆಯ ಗ್ಲಾಸ್ ಒಡೆದ ವ್ಯಕ್ತಿಯು ಅಲ್ಲಿಂದ ಓಡಿ ಹೋಗಿದ್ದಾನೆ. ಈ ವಿಚಾರವನ್ನು ಸೆಕ್ಯೂರಿಟಿ ಗಾರ್ಡ್ ಈ ದಿನ ನನ್ನ ಬಳಿ ಹೇಳಿದ್ದಾನೆ. ದರ್ಶನ್ ಅವರ ಮನೆಯ ಕಿಟಕಿ ಗ್ಲಾಸ್ ಕಲ್ಲಿನಿಂದ ಹೊಡೆದು ಜಖಂಗೊಳಿಸಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು.

    ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಕಲ್ಲು ತೂರಾಟ ಮಾಡಿದವನ ಹುಡುಕಾಟಕ್ಕೆ ಪೊಲೀಸರು ಗಲಿಬಿಲಿ ಆಗಿದ್ದಾರೆ. ಏಕೆಂದರೆ ಕೃತ್ಯ ನಡೆದಿರೋದು ಯಾವುದೇ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. ಸಿಸಿಟಿವಿಯಲ್ಲಿ ಸೆರೆಯಾಗದಂತೆ ಆರೋಪಿ ಓಡಿ ಹೋಗಿದ್ದಾನೆ. ಆದರೆ ಒಂದೆರಡು ಫೂಟೇಜ್‍ಗಳಲ್ಲಿ ಆರೋಪಿ ಕಾಣಿಸಿಕೊಂಡಿದ್ದು, ಅದು ಕೂಡ ಅಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಆರೋಪಿ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಎನ್ನುವ ವಿಚಾರ ಲಭ್ಯವಾಗಿದೆ.

  • ಆಟೋದಲ್ಲಿ ದರ್ಶನ್ ಫೋಟೋ ಹಾಕಿದ್ದಕ್ಕೆ ಚಕ್ರಗಳನ್ನು ಕದ್ದುಕೊಂಡು ಹೋದ ದುಷ್ಕರ್ಮಿಗಳು!

    ಆಟೋದಲ್ಲಿ ದರ್ಶನ್ ಫೋಟೋ ಹಾಕಿದ್ದಕ್ಕೆ ಚಕ್ರಗಳನ್ನು ಕದ್ದುಕೊಂಡು ಹೋದ ದುಷ್ಕರ್ಮಿಗಳು!

    ಮಂಡ್ಯ: ಜಿಲ್ಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಆಕ್ರೋಶ ಮುಂದುವರಿದಿದೆ. ದರ್ಶನ್ ಫೋಟೋ ಇದ್ದ ಆಟೋಗಳ ಚಕ್ರಗಳನ್ನು ದುಷ್ಕರ್ಮಿಗಳು ಬಿಚ್ಚಿಕೊಂಡು ಹೋಗಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಎಂಬವರಿಗೆ ಸೇರಿದ ಆಟೋ ಚಕ್ರಗಳನ್ನು ದುಷ್ಕರ್ಮಿಗಳು ಬಿಚ್ಚಿಕೊಂಡು ಹೋಗಿದ್ದಾರೆ.

    ಸಂತೋಷ್ ತನ್ನ ಆಟೋ ಮೇಲೆ ಡಿ-ಬಾಸ್ ಎಂದು ಬರೆದು ದರ್ಶನ್ ಅವರ ಫೋಟೋ ಹಾಕಿದ್ದರು. ದರ್ಶನ್ ಮೇಲೆಯಿರುವ ಆಕ್ರೋಶದಿಂದ ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಆಟೋ ಚಕ್ರಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೆ.ಆರ್ ಪೇಟೆ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಶನಿವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಮನೆ ಹಾಗೂ ಕಚೇರಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದರು. ಶನಿವಾರ ಬೆಳಗ್ಗಿನ ಜಾವ 3 ಗಂಟೆಗೆ ಕಲ್ಲು ತೂರಿ ಎಸ್ಕೇಪ್ ಆಗಿದ್ದರು. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಪ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿ ಇದ್ದರು.

  • ಕೇಳಿದ ಸಾಂಗ್ ಹಾಕಿಲ್ಲವೆಂದು ಚಾಕು ಇರಿದ ದುಷ್ಕರ್ಮಿಗಳು..!

    ಕೇಳಿದ ಸಾಂಗ್ ಹಾಕಿಲ್ಲವೆಂದು ಚಾಕು ಇರಿದ ದುಷ್ಕರ್ಮಿಗಳು..!

    ಬೆಂಗಳೂರು: ಕೇಳಿದ ಸಾಂಗ್ ಹಾಕಿಲ್ಲ ಎಂದು ದುಷ್ಕರ್ಮಿಗಳು ಚಾಕು ಇರಿದ ಘಟನೆ ಮಂಗಳವಾರ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.

    ವಿಘ್ನೇಶ್ ವಿಗ್ಗಿ, ಅಜಯ್ ಬಂಧಿತ ಆರೋಪಿಗಳಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಮ್ಯೂಸಿಷಿಯನ್ ಗಂಗಾಧರ್(26)ಗೆ ಚಾಕು ಇರಿದಿದ್ದಾರೆ.

    ಗಣೇಶ ಪೂಜೆಯ ಮೆರವಣಿಗೆ ಸಾಗುತ್ತಿದ್ದಾಗ ತಮಗೆ ಬೇಕಾದ ಸಾಂಗ್ ಹಾಕುವಂತೆ ಆರೋಪಿಗಳು ಕೇಳಿದ್ದರು. ಈ ವೇಳೆ ಗಂಗಾಧರ್ ಆ ಹಾಡು ಇಲ್ಲ ಎಂದು ಹೇಳಿದ್ದಾರೆ. ಬಳಿಕ ಈ ವಿಷಯಕ್ಕಾಗಿ ಇಬ್ಬರು ಆರೋಪಿಗಳು ವಾಗ್ವಾದಕ್ಕೆ ಇಳಿದು ಗಂಗಾಧರ್‍ನನ್ನು ಚಾಕುವಿನಿಂದ ಇರಿದಿದ್ದಾರೆ.

    ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಂಜಾ ಗುಂಗಿನಲ್ಲಿ ಇಬ್ಬರಿಗೆ ಚಾಕು ಇರಿದು 12 ಸಾವಿರ ದೋಚಿದ್ರು..!

    ಗಾಂಜಾ ಗುಂಗಿನಲ್ಲಿ ಇಬ್ಬರಿಗೆ ಚಾಕು ಇರಿದು 12 ಸಾವಿರ ದೋಚಿದ್ರು..!

    ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಗಾಂಜಾ ಹಾವಳಿ ಹೆಚ್ಚಾಗಿದ್ದು, ದುಷ್ಕರ್ಮಿಗಳು ಗಾಂಜಾ ಗುಂಗಿನಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಚಾಕು ಇರಿದು, ಬಳಿಕ ಅವರ ಬಳಿಯಿದ್ದ ಸುಮಾರು 12 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ಜಿಲ್ಲೆಯ ಹೊರವಲಯದ ದೊಡ್ಡಿಬೀಳು ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಉಂಬ್ಳೇಬೈಲಿನ ಕೃಷ್ಣಮೂರ್ತಿ, ಚರಣ್ ಎಂಬವರಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಪರಿಣಾಮ ಇಬ್ಬರೂ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಡಪೆಯುತ್ತಿದ್ದಾರೆ.

    ರಾತ್ರಿ ಕೃಷ್ಣಮೂರ್ತಿ ಹಾಗೂ ಚರಣ್ ವಿದ್ಯಾನಗರದಲ್ಲಿ ಕೆಲಸ ಮುಗಿಸಿಕೊಂಡು ಉಂಬ್ಳೇಬೈಲಿಗೆ ಮನೆಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಎರಡು ಬೈಕ್‍ನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮೊದಲೇ ಗಾಂಜಾ ಗುಂಗಿನಲ್ಲಿದ್ದ ದುಷ್ಕರ್ಮಿಗಳು ಕೃಷ್ಣಮೂರ್ತಿ ಹಾಗೂ ಚರಣ್ ಬೈಕ್ ಅಡ್ಡಹಾಕಿ, ಅವರಿಗೆ ಚಾಕು ಇರಿದಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್ ಫೋನ್ಸ್ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ಸದ್ಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv