Tag: ದುಷ್ಕರ್ಮಿಗಳು

  • ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    – ಮಸೀದಿಯಲ್ಲಿ ಪ್ರಾರ್ಥನೆಗೆ ನಿಷೇಧ

    ಶ್ರೀನಗರ: ಕಣಿವೆ ರಾಜ್ಯ ಸದ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಎರಡು ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ವಿಕೃತಿ ಮೆರೆದ ಪರಿಣಾಮ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ನಿಷೇಧ ಹೇರಲಾಗಿದೆ.

    ಗುರುವಾರ ರಾತ್ರಿ ದುಷ್ಕರ್ಮಿಗಳು ಎರಡು ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಚವಾಲ್ಗಾಮ್ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬೆಂಕಿ ಹಚ್ಚಿ, ಬಳಿಕ ಅದೇ ರೀತಿ ವಾಡೂನಲ್ಲಿರುವ ಮತ್ತೊಂದು ಶಾಲೆಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಶುಕ್ರವಾರ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ನಡೆಯಬೇಕಿದ್ದ ಸಾಮೂಹಿಕ ನಮಾಜ್ ಅನ್ನು ನಿಷೇಧಿಸಲಾಗಿತ್ತು. ಈ ವೇಳೆ ಈ ನಿರ್ಧಾರವನ್ನು ವಿರೋಧಿಸಿ ಶ್ರೀನಗರದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಅವರ ವಾಹನಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆಗ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

    ಈ ಹಿಂದೆ ಗುರುವಾರ ಸಂಜೆ ಕಾಶ್ಮೀರದಲ್ಲಿ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದರು. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದರು. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಮನೆಯಲ್ಲಿ ಒಂಟಿಯಾಗಿದ್ದಾಗ ಮಹಿಳೆ ಕೊಲೆ

    ಮನೆಯಲ್ಲಿ ಒಂಟಿಯಾಗಿದ್ದಾಗ ಮಹಿಳೆ ಕೊಲೆ

    ಬೆಂಗಳೂರು: ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯೊಂದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಿತ್ತಾಗನಹಳ್ಳಿಯಲ್ಲಿ ನಡೆದಿದೆ.

    ಸುನತಿ ದಾಸ್ (35) ಮೃತ ಮಹಿಳೆ. ಸುನತಿ ಮೂಲತಃ ಪಶ್ಚಿಮ ಬಂಗಾಳದವಳಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಹರಸಿ ಬೆಂಗಳೂರಿಗೆ ಬಂದಿದ್ದಳು. ಸುನತಿ ಒಂಟಿಯಾಗಿದ್ದಾಗ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ.

    ದುಷ್ಕರ್ಮಿಗಳು ಮಹಿಳೆಯನ್ನು ಕೊಲೆ ಮಾಡಿ ಹೊರಗಿನಿಂದ ಮನೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ವೇಳೆ ಸುತ್ತಮುತ್ತಲಿನ ನಿವಾಸಿಗಳಿಗೆ ಮೃತದೇಹದ ವಾಸನೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈ ಕೊಲೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

    ಈ ವಿಷಯ ತಿಳಿದ ತಕ್ಷಣ ಸೂರ್ಯಸಿಟಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಗಣೇಶ ವಿಸರ್ಜನೆ ವೇಳೆ ಚಾಕು ಇರಿತ – ವಿದ್ಯಾರ್ಥಿ ಸಾವು

    ಗಣೇಶ ವಿಸರ್ಜನೆ ವೇಳೆ ಚಾಕು ಇರಿತ – ವಿದ್ಯಾರ್ಥಿ ಸಾವು

    ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದಿದ್ದರಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಬಸವರಾಜ್ ವಿರೇಶ್ ಶಿವುರ (21) ಮೃತಪಟ್ಟ ವಿದ್ಯಾರ್ಥಿ. ಬಸವರಾಜ್ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಬಸವರಾಜ್ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದನು.

    ಗುರುವಾರ ಬಸವರಾಜ್ ತನ್ನ ಗೆಳೆಯರ ಜೊತೆ ಗಣೇಶ ವಿಸರ್ಜನೆ ನೋಡಲು ಬಂದಿದ್ದನು. ಈ ವೇಳೆ ಹರ್ಷ ಕಾಂಪ್ಲೆಕ್ಸ್ ಕಡೆ ಗಲಾಟೆಯಾಗಿ ಗಣೇಶ ಮೆರವಣಿಗೆ ನೋಡುತ್ತ ನಿಂತಿದ್ದ ಬಸವರಾಜ್‍ನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜ್‍ನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಈ ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿ ನಗರದ ಐದು ಕಡೆ ಚಾಕು ಇರಿತವಾಗಿದೆ. ಹರ್ಷ ಕಾಂಪ್ಲೆಕ್ಸ್, ದುರ್ಗದ ಬೈಲ್ ನಲ್ಲಿ ಎರಡು ಕಡೆ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತವಾಗಿದೆ.

    ಈ ಕುರಿತು ಶಹರ, ಉಪನಗರ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

  • ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

    ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

    ವಿಜಯಪುರ: ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಭಯಾನಕ ಘಟನೆ ನಗರದ ಶಿಖಾರಖಾನೆಯಲ್ಲಿ ನಡೆದಿದೆ.

    ಸುರೇಶ್ ಬೆಡಸೂರ್ (45) ಕೊಲೆಯಾದ ವ್ಯಕ್ತಿ. ಸುರೇಶ್‍ನನ್ನು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ, ಆತನ ತಲೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈಯಲಾಗಿದೆ. ಬೆಳ್ಳಂಬೆಳಗ್ಗೆ ರಸ್ತೆ ಮೇಲೆ ಸುರೇಶ್ ಮೃತದೇಹ ಕಂಡು ಭಯಗೊಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ದೊರಕಿಲ್ಲ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸಾಲ ಮಾಡಿ ಬಿತ್ತನೆ ಮಾಡಿದ ಫಸಲಿಗೆ ಕಳೆ ನಾಶಕ ಸಿಂಪಡಿಸಿದ ದುಷ್ಕರ್ಮಿಗಳು

    ಸಾಲ ಮಾಡಿ ಬಿತ್ತನೆ ಮಾಡಿದ ಫಸಲಿಗೆ ಕಳೆ ನಾಶಕ ಸಿಂಪಡಿಸಿದ ದುಷ್ಕರ್ಮಿಗಳು

    ದಾವಣಗೆರೆ: ಅಲ್ಪಸ್ವಲ್ಪ ಮಳೆಗೆ ಕಷ್ಟಪಟ್ಟು ಸಾಲ ಮಾಡಿ ಬಿತ್ತನೆ ಮಾಡಿ ಬೆಳೆದ ಮೆಕ್ಕೆಜೋಳದ ಫಸಲಿಗೆ ದುಷ್ಕರ್ಮಿ ಕಳೆ ನಾಶಕ ಸಿಂಪಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಟಿ. ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಟಿ. ಗೊಲ್ಲರಹಟ್ಟಿ ಗ್ರಾಮದ ರೈತ ಯರ್ರಪ್ಪ ಅವರಿಗೆ ಸೇರಿದ ನಾಲ್ಕು ಏಕರೆಯಲ್ಲಿ ಮೆಕ್ಕೆಜೋಳದ ಬೆಳೆ ಬೆಳೆದಿದ್ದು, ಬೆಳೆ ನೋಡಿ ಸಹಿಸಲಾಗದ ದುಷ್ಕರ್ಮಿಗಳು ರಾತ್ರೋರಾತ್ರಿ ಕಳೆ ನಾಶಕ ಔಷಧಿ ಸಿಂಪಡಿಸಿದ್ದಾರೆ. ಔಷಧಿ ಸಿಂಪಡಿಸಿದ ನಂತರ ನಾಲ್ಕು ಎಕರೆಯಲ್ಲಿ ಇರುವ ಮೆಕ್ಕೆಜೋಳದ ಬೆಳೆ ಸಂಪೂರ್ಣ ಒಣಗಿ ಹೋಗುತ್ತಿದೆ.

    ಕಷ್ಟ ಪಟ್ಟು ಬೆಳೆದ ಬೆಳೆ ನಾಶವಾಗುತ್ತಿದೆ ಎಂದು ಬಡ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಹುಲ್ಲು ಜಾತಿಗೆ ಸೇರಿದ ಮೆಕ್ಕೆಜೋಳದ ಬೆಳೆಯಾಗಿದ್ದು, ಕಳೆ ನಾಶಕ ಸಿಂಪಡಿಸಿದರೆ ಸಂಪೂರ್ಣ ಒಣಗಿ ಹೋಗುತ್ತಿದೆ. ಇನ್ನೇನು ಎರಡು ತಿಂಗಳಲ್ಲಿ ಫಸಲು ಕೈಗೆ ಬರುತಿತ್ತು. ಆದರೆ ದುಷ್ಕರ್ಮಿಗಳು ಮಾಡಿದ ಕಿಡಿಗೇಡಿತನಕ್ಕೆ ಬೆಳೆ ಸಂಪೂರ್ಣ ನಾಶವಾಗಿದೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಡಿಗೇಡಿತನ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ರೈತ ಯರ್ರಪ್ಪ ಅವರು ಸಾಲಸೋಲಾ ಮಾಡಿ ಬಿತ್ತನೆ ಮಾಡಿದ ಮೆಕ್ಕೆಜೋಳ ನಾಶವಾಗಿದ್ದಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ.

  • ಉಡುಪಿಯಲ್ಲಿ ದುಷ್ಕರ್ಮಿಗಳಿಂದ ಬಸ್ ನಿರ್ವಾಹಕನ ಕಗ್ಗೊಲೆ

    ಉಡುಪಿಯಲ್ಲಿ ದುಷ್ಕರ್ಮಿಗಳಿಂದ ಬಸ್ ನಿರ್ವಾಹಕನ ಕಗ್ಗೊಲೆ

    ಉಡುಪಿ: ಬಸ್ ನಿರ್ವಾಹಕನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉಡುಪಿ ತಾಲೂಕಿನ ಪೆರ್ಡೂರು ಸಮೀಪ ಬೈರಂಪಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.

    ಪ್ರಶಾಂತ್ ಪೂಜಾರಿ (35) ಕೊಲೆಯಾದ ಬಸ್ ನಿರ್ವಾಹಕ. ಪ್ರಶಾಂತ್ ಪೂಜಾರಿ ದುಷ್ಕರ್ಮಿಗಳ ದಾಳಿಗೆ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ 12 ಗಂಟೆಗೆ ಸಂತೋಷ್ ಪೂಜಾರಿ ಅವರ ಮನೆಗೆ ಇಬ್ಬರು ದುಷ್ಕರ್ಮಿಗಳು ಬಂದಿದ್ದರು. ವ್ಯವಹಾರ ವಿಚಾರದಲ್ಲಿ ಮೂವರ ನಡುವೆ ರಾತ್ರಿ 12 ಗಂಟೆಯವರೆಗೆ ಮಾತುಕತೆ ನಡೆದಿತ್ತು.

    ಈ ವೇಳೆ ಮಾತಿಗೆ ಮಾತು ಬೆಳೆದು ಜಟಾಪಟಿ ನಡೆದಿದೆ. ಇಬ್ಬರು ಅಪರಿಚಿತರು ಪ್ರಶಾಂತ್ ಪೂಜಾರಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸಿಟಿ ಬಸ್ ಪರ್ಮಿಟ್ ಪಡೆದಿದ್ದ ಸಂತೋಷ್ ಅದೇ ಬಸ್ಸಲ್ಲಿ ಕಂಡಕ್ಟರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮೃತ ಸಂತೋಷ್ ಪೂಜಾರಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲೂ ಕೂಡ ಶಾಮೀಲಾಗಿದ್ದ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಬಸ್ಸಿನ ವ್ಯವಹಾರ ವಿಚಾರದಲ್ಲಿ ಇಬ್ಬರ ಜೊತೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಆರ್ಡರ್ ಮಾಡಿದ್ದ ಊಟಕ್ಕಾಗಿ ಕಾಯ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ

    ಆರ್ಡರ್ ಮಾಡಿದ್ದ ಊಟಕ್ಕಾಗಿ ಕಾಯ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ

    ನವದೆಹಲಿ: ಆರ್ಡರ್ ಮಾಡಿದ್ದ ಊಟಕ್ಕಾಗಿ ಕಾಯ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನವದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ.

    ಅಮಿತ್ ಕೋಚರ್ ಕೊಲೆಯಾದ ವ್ಯಕ್ತಿ. ಅಮಿತ್ ತನ್ನ ಸ್ನೇಹಿತರ ಜೊತೆ ಮನೆಯಲ್ಲಿ ಕಾಲ ಕಳೆಯುತ್ತಿದ್ದನು. ಈ ವೇಳೆ ಅವರು ತನ್ನ ಮೊಬೈಲ್ ಆ್ಯಪ್‍ನಲ್ಲಿ ಊಟವನ್ನು ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಡೋರ್ ಬೆಲ್ ಆಗಿದೆ.

    ಡೆಲಿವರಿ ಬಾಯ್ ಎಂದು ತಿಳಿದು ಅಮಿತ್ ಬಾಗಿಲು ತೆಗೆದಿದ್ದಾರೆ. ಆದರೆ ದುಷ್ಕರ್ಮಿಗಳು ಮೊದಲು ಮಾತನಾಡುವುದಾಗಿ ಹೇಳಿ ಅಮಿತ್‍ನನ್ನು ಕಾರಿನ ಬಳಿ ಕರೆದುಕೊಂಡು ಹೋದರು. ಬಳಿಕ ನಿರಂತರವಾಗಿ ಗುಂಡು ಹಾರಿಸಿದ್ದಾರೆ. ಪರಿಣಾಮ ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗುಂಡಿನ ಸದ್ದು ಕೇಳಿ ಅಮಿತ್ ಸ್ನೇಹಿತರು ಸ್ಥಳಕ್ಕೆ ಓಡಿ ಬಂದು ಸಹಾಯ ಮಾಡಲು ಮುಂದಾದರು. ಈ ವೇಳೆ ದುಷ್ಕರ್ಮಿಗಳು ಗನ್ ತೋರಿಸಿ ಈ ವಿಷಯದಿಂದ ದೂರ ಇರಿ ಎಂದು ಅಮಿತ್ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾರೆ.

    ಅಮಿತ್ ಪತ್ನಿ ಗುರುಗ್ರಾಮದ ಕಾಲ್ ಸೆಂಟರ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ನಡೆದಾಗ ಅಮಿತ್ ಪತ್ನಿ ಕೆಲಸಕ್ಕೆ ಹೋಗಿದ್ದರು. ಅಮಿತ್ ಕೂಡ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು.

  • ಯುವಕನ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ

    ಯುವಕನ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ

    ಉಡುಪಿ: ಯುವಕನ ಮೇಲೆ ನಾಲ್ವರು ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ ಮಾಡಿದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ.

    ರಿಯಾಝ್ (34) ದಾಳಿಗೊಳಗಾದ ಯುವಕ. ರಿಯಾಝ್ ಫರಂಗಿಪೇಟೆಯ ಹಂಝಾ ಎಂಬವರ ಮಗನಾಗಿದ್ದು, ಮೀನು ವ್ಯಾಪಾರ ಹಾಗೂ ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾನೆ. ಇಂದು ಬೆಳಗ್ಗೆ ನಾಲ್ವರು ದುಷ್ಕರ್ಮಿಗಳು ರಿಯಾಝ್ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ್ದಾರೆ.

    ರಿಯಾಝ್ ಮೀನು ಖರೀದಿಸಿ ಮಾರಾಟ ಮಾಡಲು ಇಂದು ಮುಂಜಾನೆ 4:30ರ ವೇಳೆಗೆ ಇತರ ಮೂವರೊಂದಿಗೆ ಎಂದಿನಂತೆ ತನ್ನ ಪಿಕಪ್ ವಾಹನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿಗೆ ಮಲ್ಪೆ ಫಿಶಿಂಗ್ ಪೋರ್ಟ್‍ಗೆ ಆಗಮಿಸಿದ್ದರು. ಬಂದರಿನೊಳಗೆ ತಮ್ಮ ವಾಹನ ನಿಲ್ಲಿಸಿ, ಇತರ ಮೂವರು ಚಹಾ ಕುಡಿಯಲು ಇಳಿದು ಹೋಗಿದ್ದರು. ಆದರೆ ರಿಯಾಝ್ ಅದೇ ಪಿಕಪ್ ವಾಹನದಲ್ಲಿ ನಿದ್ರೆಗೆ ಜಾರಿದ್ದರು.

    ಇದೇ ಸಮಯದಲ್ಲಿ ಅವರ ವಾಹನವನ್ನು ಹಿಂಬಾಲಿಸಿಕೊಂಡು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ನಾಲ್ವರು ರಿಯಾಝ್ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಇವರ ಕಿರುಚಾಟದ ಶಬ್ಧ ಕೇಳಿ ಇತರರು ಸಹಾಯಕ್ಕೆ ಧಾವಿಸಿದಾಗ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಕೋರರು ಬಟ್ಟೆಯಿಂದ ತಮ್ಮ ಮುಖ ಮುಚ್ಚಿಕೊಂಡಿದ್ದರಿಂದ ಗುರುತು ಹಿಡಿಯಲಾಗಿರಲಿಲ್ಲ.

    ದಾಳಿಗೊಳಗಾದ ರಿಯಾಜ್ ರವರ ಕೈ ತೂಳು, ಕಾಲಿನ ಬೆರಳು, ತಲೆಯ ಹಿಂಭಾಗಕ್ಕೆ ಗಾಯವಾಗಿರುವುದಲ್ಲದೆ, ಕಿರು ಬೆರಳು ತುಂಡಾಗಿ ಬಿದ್ದಿದೆ. ತುಂಡಾದ ಬೆರಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಮರು ಜೋಡಣೆಯ ಕಾರ್ಯ ನಡೆಯುತ್ತಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ರಿಯಾಝ್ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ರಭಸಕ್ಕೆ ವಾಹನದ ಒಳಗೆಲ್ಲಾ ರಕ್ತ ಚಿಮ್ಮಿದೆ.

    ಈ ಬಗ್ಗೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ. ದಾಳಿಕೋರರ ಪತ್ತೆಗಾಗಿ ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

  • ಬಿಜೆಪಿ ನಾಯಕನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು!

    ಬಿಜೆಪಿ ನಾಯಕನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು!

    ಬೆಳಗಾವಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಬೈಲೂರು ಗ್ರಾಮದ ಬಳಿ ನಡೆದಿದೆ.

    ಸಂತಿ ಬಸ್ತವಾಡ ಗ್ರಾಮದ ನಿವಾಸಿ ನಾಗಪ್ಪಾ ಜಿಡ್ಡನ್ನವರ(45) ಕೊಲೆಯಾಗಿರುವ ಬಿಜೆಪಿ ನಾಯಕ. ನಾಗಪ್ಪಾ ಸಂತಿ ಬಸ್ತವಾಡ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರು. ಗುರುವಾರ ತಡರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಬೆಳಗಾವಿಯ ಬೈಲೂರು ಗ್ರಾಮದ ಬಳಿ ನಾಗಪ್ಪ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ರಸ್ತೆ ಬದಿ ಬೀಸಾಡಿದ್ದಾರೆ ಎಂದು ಶಂಕಿಸಲಾಗಿದೆ.

    ನಾಗಪ್ಪ ಅವರನ್ನು ಕೊಲೆ ಮಾಡಿದ ಆರೋಪಿಗಳ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಕೊಲೆ ಮಾಡಲು ನಿಖರ ಕಾರಣಗಳು ಏನೆಂದು ಲಭ್ಯವಾಗಿಲ್ಲ. ಆದರೆ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಗುಂಡಿಕ್ಕಿ ಟಿಕ್‍ಟಾಕ್ ಸ್ಟಾರ್‌ನ ಬರ್ಬರ ಹತ್ಯೆ

    ಗುಂಡಿಕ್ಕಿ ಟಿಕ್‍ಟಾಕ್ ಸ್ಟಾರ್‌ನ ಬರ್ಬರ ಹತ್ಯೆ

    ನವದೆಹಲಿ: ಜಿಮ್ ಟ್ರೈನರ್ ಆಗಿರುವ ಟಿಕ್‍ಟಾಕ್ ಸ್ಟಾರ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾಷ್ಟ್ರರಾಜಧಾನಿ ನವದೆಹಲಿಯ ನಾಜಫ್‍ಗರ್ ನಲ್ಲಿ ನಡೆದಿದೆ.

    ಮೋಹಿತ್ ಮೋರ್(27) ಮೃತ ಜಿಮ್ ಟ್ರೈನರ್. ಮೋಹಿತ್ ನಾಜಫ್‍ಗರ್ ನ ಧರಂಪುರನ ನಿವಾಸಿಯಾಗಿದ್ದು, ಮನೆಯ ಹತ್ತಿರ ಇರುವ ಫೋಟೋಕಾಪಿ ಶಾಪ್‍ನಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದನು. ಈ ವೇಳೆ ದುಷ್ಕರ್ಮಿಗಳು ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

    ಮೋಹಿತ್ ಫೋಟೋಶಾಪ್ ಒಳಗೆ ಕುಳಿತುಕೊಂಡು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದನು. ಈ ವೇಳೆ ಮೂವರು ದುಷ್ಕರ್ಮಿಗಳು ಅಂಗಡಿಯೊಳಗೆ ಬಂದು ಬರೋಬ್ಬರಿ 13 ಗುಂಡು ಹೊಡೆದು ಮೋಹಿತ್‍ನನ್ನು ಕೊಲೆ ಮಾಡಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಮೋಹಿತ್ ಶಾಪ್‍ನಲ್ಲಿದ್ದ ಸೋಫಾ ಮೇಲೆ ಬಿದ್ದನು. ಈ ವೇಳೆ ಅಲ್ಲಿದ್ದ ಜನರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಮೋಹಿತ್ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.

    ಕೊಲೆ ಮಾಡಿದ ನಂತರ ಆರೋಪಿಗಳು ತಪ್ಪಿಸಿಕೊಂಡು ಹೋದ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂವರು ಆರೋಪಿಗಳಲ್ಲಿ ಒಬ್ಬ ಬ್ಲ್ಯಾಕ್ ಹೆಲ್ಮೆಟ್ ಧರಿಸಿ ಸ್ಕೂಟಿಯಲ್ಲಿ ಬಂದಿದ್ದನು. ಕೊಲೆ ಮಾಡಿದ ನಂತರ ಮೂವರು ಆರೋಪಿಗಳು ಜನಸಂದನಿ ಇರುವ ರಸ್ತೆಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೋಹಿತ್ ಮೋರ್ ಗೆ ಟಿಕ್‍ಟಾಕ್‍ನಲ್ಲಿ 5 ಲಕ್ಷ ಸಬ್‍ಸ್ಕ್ರೈಬರ್ ಇದ್ದು, ಇನ್‍ಸ್ಟಾಗ್ರಾಂನಲ್ಲಿ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮೋಹಿತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ತನ್ನ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದನು.

    ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಹಣದ ವಿಷಯ ಅಥವಾ ಹಳೆ ದ್ವೇಷದಿಂದ ಈ ಕೊಲೆ ನಡೆದಿರಬಹುದು. ಮೋಹಿತ್ ಸಾಮಾಜಿಕ ಜಾಲತಾಣದಲ್ಲಿ ಯಾರೊಂದಿಗಾದರೂ ದ್ವೇಷ ಮಾಡಿಕೊಂಡಿದ್ದನಾ ಎಂದು ಆತನ ಟಿಕ್‍ಟಾಕ್, ಇನ್‍ಸ್ಟಾಗ್ರಾಂ ಹಾಗೂ ಕಾಲ್ ರೆಕಾರ್ಡ್ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.