Tag: ದುರ್ಗ್‌ ರೈಲು ನಿಲ್ದಾಣ

  • ಸೈಫ್‌ ಅಲಿ ಖಾನ್‌ ಚಾಕು ಇರಿತ ಕೇಸ್‌ – ಶಂಕಿತ ದಾಳಿಕೋರ ಅರೆಸ್ಟ್‌

    ಸೈಫ್‌ ಅಲಿ ಖಾನ್‌ ಚಾಕು ಇರಿತ ಕೇಸ್‌ – ಶಂಕಿತ ದಾಳಿಕೋರ ಅರೆಸ್ಟ್‌

    ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಚಾಕು ಇರಿದ (Stabbing Case) ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಶಂಕಿತ ದಾಳಿಕೋರನನ್ನ ಛತ್ತಿಸ್‌ಗಢದ ದುರ್ಗ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ಶಂಕಿತ ದಾಳಿಕೋರನನ್ನು ಆಕಾಶ್‌ ಕೈಲಾಶ್‌ ಕನೋಜಿಯಾ (31) ಎಂದು ಗುರುತಿಸಲಾಗಿದೆ. ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರಿಂದ (Mumbai Police) ಮಾಹಿತಿ ಪಡೆದಿದ್ದ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಆರೋಪಿಯನ್ನ ದುರ್ಗ್‌ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆತನ ಗುರುತು ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರು ಒಂದೆರಡು ಗಂಟೆಗಳಲ್ಲೇ ಛತ್ತಿಸ್‌ಗಢದ ದುರ್ಗ್‌ಗೆ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಶಂಕಿತ ದಾಳಿಕೋರನನ್ನು ಬಂಧಿಸಿದ್ದು ಹೇಗೆ?
    ಮಧ್ಯಾಹ್ನ 2 ಗಂಟೆ ಸುಮಾರಿಗೆ ದುರ್ಗ್‌ ರೈಲು ನಿಲ್ದಾಣ ತಲುಪಿದ್ದ ಶಂಕಿತ ಜನರಲ್‌ ಕಂಪಾರ್ಟ್ಮೆಂಟ್‌ನಲ್ಲಿ ಕುಳಿತಿದ್ದ. ಆತನ ಬಳಿ ಯಾವುದೇ ಕಿಟ್‌ ಇರಲಿಲ್ಲ. ಆಕಾಶ್‌ ಕೈಲಾಶ್‌ನನ್ನ ನೋಡಿದ ಆರ್‌ಪಿಎಫ್ ಅನುಮಾನಗೊಂಡು ಕೆಳಗಿಳಿಸಿ, ವಿಚಾರಿಸಿದ್ದಾರೆ. ಮೊದಲು ನಾಗ್ಪುರಕ್ಕೆ ಹೋಗುವುದಾಗಿ ಹೇಳಿದ್ದ ಶಂಕಿತ, ವಿಚಾರಣೆ ವೇಳೆ ಬಿಲಾಸ್‌ಪುರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ ಇದರಿಂದ ಅಧಿಕಾರಿಗಳ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಮೊದಲೇ ಶಂಕಿತನ ಫೋಟೋ, ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ ಹಾಗೂ ಖಚಿತ ಸ್ಥಳದ ಮಾಹಿತಿ ಪಡೆದಿದ್ದ ಆರ್‌ಪಿಎಫ್‌ ಆತನನ್ನ ಬಂಧಿಸಿದ್ದಾರೆ.

    ಸದ್ಯ ಮುಂಬೈ ಪೊಲೀಸರಿಗೆ ವಿಡಿಯೋ ಕರೆ ಮಾಡಿ ಶಂಕಿತನನ್ನ ಮುಂಬೈ ಪೊಲೀಸರೊಂದಿಗೆ ಮಾತನಾಡಿಸಿದ್ದಾರೆ. ಹೀಗಾಗಿ ಬಂಧಿತ ವ್ಯಕ್ತಿ ಘಟನೆಯಲ್ಲಿ ಭಾಗಿಯಾಗಿದ್ದಾನೋ ಇಲ್ಲವೋ ಅನ್ನೋದನ್ನ ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರ ತಂಡ ಛತ್ತಿಸ್‌ಗಢಕ್ಕೆ ಪ್ರಯಾಣ ಬೆಳೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತನಿಖೆಗೆ 20ಕ್ಕೂ ಅಧಿಕ ತಂಡ ರಚನೆ:
    ಸೈಫ್ ಮನೆಯಿಂದ ಬಾಂದ್ರಾ ರೈಲ್ವೆ ನಿಲ್ದಾಣದವರೆಗೂ ಇರುವ ಹಲವು ಸಿಸಿಟಿವಿಗಳನ್ನು ಪರಿಶೀಲಿಸಿದ್ದ ಪೊಲೀಸರಿಗೆ ಆರೋಪಿ ಚಳ್ಳೆಹಣ್ಣು ತಿನ್ನಿಸಿದ್ದ. ಹಲವು ಬಾರಿ ಬಟ್ಟೆ ಬದಲಿಸಿ ತಲೆಮರಿಸಿಕೊಂಡಿದ್ದ. ಕೊನೆಯದ್ದಾಗಿ ಬಾಂದ್ರಾ ರೈಲ್ವೇ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದು, ಆತ ಮುಂಬೈನಿಂದ ಕಾಲ್ಕಿತ್ತಿರಬಹುದು ಎಂದು ಹೇಳಲಾಗುತ್ತಿತ್ತು. ಅದಕ್ಕಾಗಿ 20ಕ್ಕೂ ಅಧಿಕ ವಿಶೇಷ ತಂಡಗಳನ್ನು ರಚಿಸಲಾಗಿತ್ತು.

    ಇನ್ನೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಹಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿಕೋರ ಮನೆಯ ಒಳನುಗ್ಗಿದ ವೇಳೆ ಕಿರಿಯ ಮಗ ಜಹಾಂಗೀರ್ (ಜೆಹ್) ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡಿದ್ದ. ಇದನ್ನು ಮೊದಲು ಮನೆಯಲ್ಲಿ ಕೆಲಸ ಮಾಡುವ ಸಹಾಯಕಿ ಗುರುತಿಸಿದಳು. ಈ ವೇಳೆ, ಮಾತಿನ ಚಕಮಕಿ ನಡೆಯಿತು. ಇಬ್ಬರ ಗದ್ದಲದ ಬಳಿಕ ಎದ್ದು ಬಂದ ಸೈಫ್ ಮಹಿಳೆಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದರು. ಈ ವೇಳೆ, ದಾಳಿಕೋರ ಸೈಫ್‌ಗೆ ಚಾಕು ಇರಿಯಲು ಆರಂಭಿಸಿದ. ನಾವು ಈ ಗದ್ದಲದ ನಡುವೆ ಮಕ್ಕಳನ್ನು ಸುರಕ್ಷಿತ ಕೊಠಡಿಗೆ ಕಳುಹಿಸಿದ್ದರು. ಕಾರು ಚಾಲಕ ಇಲ್ಲದ ಹಿನ್ನೆಲೆ ಸೈಫ್ ಅವರು ಮಗ ತೈಮೂರ್ ಜೊತೆಗೆ ಆಸ್ಪತ್ರೆ ಆಗಮಿಸಿದರು. ಆ ಸಂದರ್ಭದಲ್ಲಿ ಮನೆಯಲ್ಲಿ ತೆರೆದ ಸ್ಥಳದಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ದಾಳಿಕೋರ ಮುಟ್ಟಲಿಲ್ಲ. ಹೀಗಾಗಿ ಕಳ್ಳತನದ ಉದ್ದೇಶ ಇತ್ತಾ? ಇಲ್ವಾ? ಎನ್ನುವ ಗೊಂದಲ ಇದೆ ಎಂದು ತಿಳಿಸಿದ್ದಾರೆ.