Tag: ದುರಸ್ಥಿ

  • ವಿದ್ಯುತ್ ತಂತಿ ದುರಸ್ಥಿ ವೇಳೆ ಶಾಕ್ – ಕಂಬದಲ್ಲೇ ನೇತಾಡಿದ ನೌಕರ

    ವಿದ್ಯುತ್ ತಂತಿ ದುರಸ್ಥಿ ವೇಳೆ ಶಾಕ್ – ಕಂಬದಲ್ಲೇ ನೇತಾಡಿದ ನೌಕರ

    ಕೋಲಾರ: ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಡೆಸುತ್ತಿದ್ದ ವೇಳೆ ಶಾಕ್ ಹೊಡೆದು ಗುತ್ತಿಗೆ ನೌಕರ ಕೆಲಕಾಲ ಕಂಬದಲ್ಲೇ ನೇತಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಪಶ್ಚಿಮ ಬಂಗಾಳ ಮೂಲದ ಬೆಸ್ಕಾಂ ಗುತ್ತಿಗೆ ನೌಕರ ದೀಪಕ್ ಗಂಭೀರ ಗಾಯಗೊಂಡಿದ್ದಾನೆ. ಕೋಲಾರ ನಗರದ ಕೋಲಾರಮ್ಮ ದೇವಾಲಯ ಮುಂಭಾಗದಲ್ಲಿ ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ದೀಪಕ್‍ಗೆ ಶಾಕ್ ಹೊಡೆದಿದೆ. ಇದರಿಂದ ನೌಕರ ಕೆಲಕಾಲ ಕಂಬದಲ್ಲೇ ನೇತಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ.

    ಈ ವೇಳೆ ಇತರೆ ಐದಕ್ಕೂ ಹೆಚ್ಚು ಜನ ಬೆಸ್ಕಾಂ ನೌಕರರು ದುರಸ್ಥಿ ಕೆಲಸದಲ್ಲಿ ತೊಡಗಿದ್ದರು. ಆದರೆ ಅದೃಷ್ಟವಶಾತ್ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಗೊಂಡ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಷ್ಟೇ ಸುದ್ದಿಯಾದ್ರೂ ತಲೆಕೆಡಿಸಿಕೊಳ್ಳದ PWD- ಈಗ ಹೊರನಾಡು ದೇವಾಲಯದಿಂದ ಹೆಬ್ಬಾಳೆ ಸೇತುವೆ ದುರಸ್ತಿ!

    ಎಷ್ಟೇ ಸುದ್ದಿಯಾದ್ರೂ ತಲೆಕೆಡಿಸಿಕೊಳ್ಳದ PWD- ಈಗ ಹೊರನಾಡು ದೇವಾಲಯದಿಂದ ಹೆಬ್ಬಾಳೆ ಸೇತುವೆ ದುರಸ್ತಿ!

    ಚಿಕ್ಕಮಗಳೂರು: ಹೊರನಾಡು ದೇವಾಲಯದ ಆಡಳಿತ ಮಂಡಳಿ ಶಿಥಿಲಾವಸ್ಥೆಗೆ ತಲುಪಿದ್ದ ಹೆಬ್ಬಾಳೆ ಸೇತುವೆಯ ದುರಸ್ತಿ ಕಾರ್ಯವನ್ನು ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಹೆಬ್ಬಾಳೆ ಸೇತುವೆಯ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದರೂ ಲೋಕೋಪಯೋಗಿ ಅಧಿಕಾರಿಗಳು ಮಾತ್ರ ತಲೆಯೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಸಿಮೆಂಟ್ ಕಾಂಕ್ರೀಟ್‍ಗಳನ್ನು ಹಾಕಿ ಸೇತುವೆಯನ್ನು ದುರಸ್ತಿ ಮಾಡಿದೆ.

    ಈ ವರ್ಷ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಂದೇ ತಿಂಗಳಲ್ಲಿ 7 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಭದ್ರೆಯ ರಭಸಕ್ಕೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ತಲುಪಿತ್ತು. ಒಂದೇ ತಿಂಗಳಲ್ಲಿ ಈ ಸೇತುವೆ ಏಳು ಬಾರಿ ಮುಳುಗಿತ್ತು. ಸೇತುವೆ ಮೇಲಿನ ಸಿಮೆಂಟ್ ಕಾಂಕ್ರಿಟ್ ಕಿತ್ತು ಹೋಗಿ ಅಲ್ಲಲ್ಲೇ ರಂಧ್ರಗಳಾಗಿ ಸೇತುವೆ ಮೇಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿತ್ತು. ಕಾಂಕ್ರೀಟ್ ಕಿತ್ತಿದರಿಂದ ಕಬ್ಬಿಣದ ಸರಳುಗಳು ಹೊರಬಂದಿತ್ತು.

    ಕಳೆದೊಂದು ತಿಂಗಳಿನಿಂದ ಸೇತುವೆ ಸ್ಥಿತಿ ಹೀಗೆ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸೇತುವೆ ಮೇಲೆ ಕಬ್ಬಿಣದ ಸರಳುಗಳು ಹೊರ ಬಂದಿರೋದರಿಂದ ಭಕ್ತರು ಅಥವಾ ಪ್ರವಾಸಿಗರ ಕಾರಿನ ಟೈರ್ ಗಳಿಗೆ ಚುಚ್ಚಿ ಅನಾಹುತವಾದರೆ ಗತಿ ಏನೆಂದು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿಯೇ ಈಗ ಹೆಬ್ಬಾಳೆ ಸೇತುವೆಯನ್ನ ದುರಸ್ತಿ ಮಾಡಿದೆ.

    ಸೇತುವೆಯಲ್ಲಿ ಎಲ್ಲೆಲ್ಲಿ ಕಿತ್ತು ಹೋಗಿತ್ತೋ ಅಲ್ಲೆಲ್ಲಾ ದೇವಸ್ಥಾನದ ವತಿಯಿಂದ ಸಿಮೆಂಟ್ ಕಾಂಕ್ರೀಟ್ ಹಾಕಿಸಿ, ಭಕ್ತರು ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    1992ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತುವೆಗೆ ತಡೆಗೋಡೆಗಳು ಇರಲಿಲ್ಲ. ತೀರಾ ಕೆಳಮಟ್ಟದಲ್ಲಿರುವುದರಿಂದ ಭದ್ರಾ ನದಿ ಉಕ್ಕಿ ಹರಿದರೆ ಸೇತುವೆ ಮುಳುಗಡೆಯಾಗುತ್ತದೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews