Tag: ದುರಸ್ತಿ

  • ಇಳಿವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಗ್ರಾಪಂ ಸದಸ್ಯ

    ಇಳಿವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಗ್ರಾಪಂ ಸದಸ್ಯ

    ಬೀದರ್: ತಾಲೂಕಿನ ಮಲ್ಕಾಪುರ ಗ್ರಾಮ ಪಂಚಾಯಿತಿ ಸದಸ್ಯ ಶಹಾಪುರದ 82 ವರ್ಷದ ಶಂಕರೆಪ್ಪ ಬಿರಾದಾರ ಅವರು ಸ್ವಂತ ಖರ್ಚಿನಲ್ಲಿ ರಸ್ತೆಯನ್ನು ದುರಸ್ತಿಗೊಳಿಸಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

    ಸಾವಿರಾರು ರೂ. ಖರ್ಚು ಮಾಡಿದ ಪರಿಣಾಮ ಇಂದು ಗ್ರಾಮದಲ್ಲಿ ಬಸ್ ಸಂಚಾರ ಪುನರಾರಂಭಗೊಂಡಿದೆ. ಬೀದರ್-ಜಹೀರಾಬಾದ್ ರಸ್ತೆಯಲ್ಲಿನ ಶಹಾಪುರ ಗೇಟ್‌ನಿಂದ ಶಹಾಪುರ ಗ್ರಾಮದ ವರೆಗಿನ 3 ಕಿ.ಮೀ. ಉದ್ದದ ರಸ್ತೆ ಹಾಳಾಗಿದ್ದರಿಂದ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದನ್ನೂ ಓದಿ: ಬಡವರ ರಕ್ಷಣೆಗಾಗಿ ಜೈಲಿಗೆ ಹೋಗಲು ಸಿದ್ಧ: ಹರೀಶ್ ಪೂಂಜಾ

    ಇದೀಗ ಇಳಿವಯಸ್ಸಿನಲ್ಲೂ ಶಂಕರೆಪ್ಪ ಅವರು ಮುಂದೆ ನಿಂತು ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ. ಇದರ ಪರಿಣಾಮ ಈಗ ಗ್ರಾಮಕ್ಕೆ ಬಸ್ ಬರುತ್ತಿದ್ದು, ಗ್ರಾಮಸ್ಥರು ಶಂಕರೆಪ್ಪ ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಮನೆಯೊಂದು ನೂರಾರು ಬಾಗಿಲು: ಮುನಿಸ್ವಾಮಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಂತ ಹಣ ಹಾಕಿ ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ- ಭಾರೀ ವಾಹನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಆಗ್ರಹ

    ಸ್ವಂತ ಹಣ ಹಾಕಿ ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ- ಭಾರೀ ವಾಹನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಆಗ್ರಹ

    ಕಾರವಾರ: ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ರಲ್ಲಿ ಮೊದಲಿನಂತೆ ಎಲ್ಲ ಬಸ್ ಗಳ ಸಂಚಾರಕ್ಕೆ ಹಾಗೂ ಜಲ್ಲಿ, ಮರಳು ಸಾಗಾಟಕ್ಕೆ ಅನುಕೂಲ ಮಾಡಿಕೊಡುವಂತೆ ಜೊಯಿಡಾ ತಾಲೂಕಿನ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

    ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ಸಂಪೂರ್ಣ ಸಂಚಾರ ಬಂದಾಗಿತ್ತು. ಗುಡ್ಡ ಕುಸಿತವಾದ ಭಾಗವನ್ನು ಸ್ಥಳೀಯರೇ ತೆರವುಗೊಳಿಸಿ, ರಸ್ತೆ ನಿರ್ಮಾಣ ಮಾಡಿದ್ದು, ಇದೀಗ ತಾತ್ಕಾಲಿಕವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಸಣ್ಣ ವಾಹನಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಕಾರವಾರ ಹಾಗೂ ಜೊಯಿಡಾ ಸುತ್ತಲಿನ ಭಾಗದ ಜನರು ನಿತ್ಯ ಒಂದಲ್ಲ ಒಂದು ಕಾರಣದಿಂದಾಗಿ ಓಡಾಟ ಮಾಡುವುದರಿಂದ ಈ ಸಮಯದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಸ್ ಸಂಚಾರ ಕೂಡ ಮೊದಲಿನಂತೆ ಇರದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದನ್ನೂ ಓದಿ: ನಗರಸಭೆ ಕರ ವಸೂಲಾತಿಯ ಲಕ್ಷಾಂತರ ರೂ. ದುರುಪಯೋಗ- ಸಿಬ್ಬಂದಿ ಆಸ್ತಿ ಮುಟ್ಟುಗೋಲು ಹಾಕಲು ಮುಂದಾದ ಅಧಿಕಾರಿಗಳು

    ಆದ್ದರಿಂದ ಈ ಮೊದಲಿನಂತೆ ಎಲ್ಲ ಬಸ್ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಗುಡ್ಡ ಕುಸಿತ ಭಾಗಗಳನ್ನು ಪರಿಶೀಲಿಸಿ ಸಣ್ಣ ಪುಟ್ಟ ತೊಂದರೆಗಳಿದ್ದಲ್ಲಿ ತಕ್ಷಣ ಸರಿಪಡಿಸಿ ಮರಳು, ಜಲ್ಲಿಗಳನ್ನು ಕೊಂಡೊಯ್ಯೊಲು ಅವಕಾಶ ಮಾಡಿಕೊಡಬೇಕು. ಕಾರವಾರ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಜೊಯಿಡಾ ಭಾಗದಿಂದ ಜಲ್ಲಿ ಹಾಗೂ ಎಂ ಸ್ಯಾಂಡ್ ನ್ನು ಪಡೆಯುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕೂಡಲೇ ಈ ಬಗ್ಗೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಸಿದ್ದಾರೆ. ಇದನ್ನೂ ಓದಿ: ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್

    ಈ ವೇಳೆ ಗ್ರಾ.ಪಂ ಸದಸ್ಯ ಕೃಷ್ಣಾ ದೇಸಾಯಿ, ದಿಗಂಬರ ದೇಸಾಯಿ, ಪ್ರವೀಣ ನಾಯ್ಕ, ರತ್ನಾಕರ್ ದೇಸಾಯಿ, ಮಂಜುನಾಥ ಮುಕಾಶಿ, ಅನಂತ್ ಭಟ್, ರಾಮಚಂದ್ರ ಭಟ್ ಇನ್ನಿತರರು ಇದ್ದರು.

  • ಹಳ್ಳಕೊಳ್ಳದಂತಿರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಪ್ರತಿಭಟನೆ

    ಹಳ್ಳಕೊಳ್ಳದಂತಿರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಪ್ರತಿಭಟನೆ

    ಬೆಂಗಳೂರು: ರಸ್ತೆಯನ್ನು ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ  ವಿರುದ್ಧ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಭತ್ತದ ಪೂರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ನಾಲ್ಕು ವರ್ಷದ ಹಿಂದೆ ಕಾವೇರಿ ನೀರಾವರಿ ಪೈಪ್ ಲೈನ್ ಹಾಗೂ ಒಳಚರಂಡಿಗೆ ರಸ್ತೆಯನ್ನ ದುರಸ್ತಿ ಮಾಡಲಾಗಿತ್ತು, ದುರಸ್ತಿ ಕೆಲಸ ಮುಗಿದು ವರ್ಷಗಳೇ ಕಳೆದರು ರಸ್ತೆ ಮಾಡದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾಡ್9ನ ಮೆದರಹಳ್ಳಿಯಲ್ಲಿ ಜನರು ಕೆಸರಿನಂತೆ ಇರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನ ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂಪುರದಲ್ಲಿ ನೂತನ ಈದ್ಗಾ ಲೋಕಾರ್ಪಣೆ

    ಮಳೆ ಬಂದರೆ ಸಾಕು ಹಳ್ಳಕೊಳ್ಳದಂತಿರುವ ಈ ಕೆಸರಿನಂತ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು ವೃದ್ಧರು, ಮಹಿಳೆಯರು ಜಾರು ಬಿದ್ದು, ಎದ್ದ ಪ್ರಸಂಗಗಳು ನಿತ್ಯದ ಗೋಳಾಗಿದೆ. ಈಗಾಗಲೇ ಸಾಕಷ್ಟು ಮಂದಿ ಸ್ಥಳೀಯರು ಶಾಸಕ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಮುಖ್ಯ ರಸ್ತೆ ಮೆದರಹಳ್ಳಿ ಯಿಂದ ಚಿಕ್ಕಬಾಣವಾರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಸಾವಿರಾರು ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ನರಕಯಾತನೆಯಾಗಿ ಪರಿಗಣಿಸಿದೆ.

    ಟಿ.ದಾಸರಹಳ್ಳಿಯ ಶಾಸಕ ಆರ್. ಮಂಜುನಾಥ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ರಸ್ತೆ ದುರಸ್ತಿ ಮಾಡಿ ಟಾರ್ ಹಾಕುವಂತೆ, ರಸ್ತೆಯಲ್ಲಿ ಭತ್ತದ ಪೈರನ್ನ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

  • ವರದಾ ನದಿಯ ಬ್ರಿಜ್ ಕಂ ಬ್ಯಾರೇಜ್ ಶಿಥಿಲ- ಆತಂಕದಲ್ಲಿ ಜನ

    ವರದಾ ನದಿಯ ಬ್ರಿಜ್ ಕಂ ಬ್ಯಾರೇಜ್ ಶಿಥಿಲ- ಆತಂಕದಲ್ಲಿ ಜನ

    ಹಾವೇರಿ: ತಾಲೂಕಿನ ಅಕ್ಕೂರು ಹಾಗೂ ಮರಡೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ವರದಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಸಂಪೂರ್ಣ ಹಾಳಾಗಿದ್ದು, ಅಪಾಯದ ಮಟ್ಟ ತಲುಪಿದೆ. ಜೊತೆಗೆ ತಡೆಗೊಡೆ ಇಲ್ಲದ ಕಾರಣ ಈ ಸೇತುವ ಮೂಲಕ ಸಂಚರಿಸುವ ಸಾರ್ವಜನಿಕರಿಗೆ ಭಯವಾಗುತ್ತಿದೆ.

    ರೈತರ ಅನುಕೂಲಕ್ಕೆಂದು ನೀರು ನಿಲ್ಲಿಸುವ ನಿಟ್ಟಿನಲ್ಲಿ ಈ ಸೇತುವೆಯ ಕೆಳ ಭಾಗದಲ್ಲಿ ಗೇಟ್ ವಾಲ್ ಅಳವಡಿಸಲಾಗಿದ್ದು, ಅವು ಸಹ ತುಕ್ಕು ಹಿಡಿದು ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ನೀರು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಗೇಟ್‍ಗಳನ್ನು ಹಾಕಿ, ಸೇತುವೆಗೆ ತಡೆಗೋಡೆ ನಿರ್ಮಿಸಬೇಕು. ಅಕ್ಕೂರು ಹಾಗೂ ಮರಡೂರು ಗ್ರಾಮಗಳ ನಡುವಿನ ವರದಾ ನದಿಯ ಸೇತುವೆ ಶಿಥಿಲಗೊಂಡು ತಡೆಗೊಡೆ ಇಲ್ಲದೆ ಕಬ್ಬಿಣದ ರಾಡ್‍ಗಳು ಹೊರ ಚಾಚಿವೆ. ಹೀಗಾಗಿ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸೇತುವೆ ಹಾಳಾಗಿರುವುದು ಜನರಲ್ಲಿ ಭಯ ಹುಟ್ಟು ಹಾಕಿದ್ದರೆ, ಸೇತುವೆಯ ಎರಡು ಬದಿಯಲ್ಲೂ ನಿರ್ಮಿಸಲಾದ ತಡೆಗೊಡೆಯೂ ಸಂಪೂರ್ಣ ಹಾಳಾಗಿ ತುಕ್ಕು ಹಿಡಿದ ಕಬ್ಬಿಣದ ರಾಡ್‍ಗಳು ಹೊರ ಚಾಚಿವೆ. ಇದರಿಂದ ಈ ರಸ್ತೆಯ ಮೂಲಕ ಹಾದು ಹೋಗುವ ಪ್ರಯಾಣಿಕರು ಹಾಗೂ ಎರಡು ಗ್ರಾಮಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

    ಸುಮಾರು ಎರಡು ದಶಕಗಳ ಹಿಂದೆ ಗುತ್ತಲ ಹೋಬಳಿಯ ಅಕ್ಕೂರು ಹಾಗೂ ಮರಡೂರು ಗ್ರಾಮಗಳ ಮಧ್ಯೆ ಹಾದು ಹೋಗಿರುವ ವರದಾ ನದಿಗೆ ಸಾರ್ವಜನಿಕರ ಅನಕೂಲಕ್ಕೆಂದು ನದಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಿಸಿದೆ. ನಿರ್ಮಿಸಿದ ದಿನಗಳಿಂದ ಇಲ್ಲಿಯವರೆಗೂ ಸೂಕ್ತ ನಿರ್ವಹಣೆ ಇಲ್ಲದೆ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಹಾಳಾಗಿದೆ. ಸಂಪೂರ್ಣ ಹಾಳಾಗಿರುವ ಸೇತುವೆಯನ್ನು ಮರು ದುರಸ್ಥಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರೋಗಿಗಳ ಸಂಬಂಧಿಗಳೇ ತಳ್ಳಬೇಕು – ಅಥಣಿ ಆಸ್ಪತ್ರೆಯಲ್ಲಿದೆ ಡಕೋಟಾ ಅಂಬುಲೆನ್ಸ್!

    ರೋಗಿಗಳ ಸಂಬಂಧಿಗಳೇ ತಳ್ಳಬೇಕು – ಅಥಣಿ ಆಸ್ಪತ್ರೆಯಲ್ಲಿದೆ ಡಕೋಟಾ ಅಂಬುಲೆನ್ಸ್!

    ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಡಕೋಟಾ ಅಂಬುಲೆನ್ಸ್ ಇದ್ದು, ಪ್ರತಿದಿನವೂ ತಳ್ಳಿ ಚಾಲನೆ ಮಾಡಬೇಕಾದ ದುಸ್ಥಿತಿಗೆ ತಲುಪಿದೆ.

    ಹೌದು, ಅಥಣಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ನಿತ್ಯ 108 ಅಂಬುಲೆನ್ಸ್ ಗಳನ್ನು ತಳ್ಳುವ ಮೂಲಕವೇ ಚಾಲನೆ ಮಾಡುತ್ತಿದ್ದಾರೆ. ಅಂಬುಲೆನ್ಸ್ ಗಳ ವ್ಯವಸ್ಥೆ ಸರಿಯಾಗಿಲ್ಲ. ಆದರೂ ಕೂಡ ಆಸ್ಪತ್ರೆಯವರು ಈ ಕುರಿತು ಕ್ರಮ ತೆಗೆದುಕೊಳ್ಳದೇ, ಅಂಬುಲೆನ್ಸ್ ಗಳನ್ನು ರಿಪೇರಿಯೂ ಮಾಡಿಸದೇ ಹಾಗೆಯೇ ಬಳಕೆ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಆಸ್ಪತ್ರೆಗೆ ಬರುವವರು ಅವ್ಯವಸ್ಥೆಯಲ್ಲಿರುವ ಅಂಬುಲೆನ್ಸ್ ನೋಡಿ ದಂಗಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಸ್ಟಾರ್ಟ್ ಆಗದೇ ಇದ್ದಾಗ ರೋಗಿಗಳು ಹೈರಾಣಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ರೋಗಿಯನ್ನು ರವಾನಿಸುವ ವೇಳೆ ಅವರ ಸಂಬಂಧಿಗಳೇ ಅಂಬುಲೆನ್ಸ್ ತಳ್ಳಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

    ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿರುಕು ಮೂಡಿದ್ದು ಯಾಕೆ? ಸಮಸ್ಯೆ ಹೇಗೆ ಪರಿಹರಿಸಲಾಗುತ್ತದೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮೆಟ್ರೋ ಎಂಡಿ ಅಜಯ್ ಸೇಠ್

    ಬಿರುಕು ಮೂಡಿದ್ದು ಯಾಕೆ? ಸಮಸ್ಯೆ ಹೇಗೆ ಪರಿಹರಿಸಲಾಗುತ್ತದೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮೆಟ್ರೋ ಎಂಡಿ ಅಜಯ್ ಸೇಠ್

    ಬೆಂಗಳೂರು: ನಮ್ಮ ಮೆಟ್ರೋ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಪ್ರಯಾಣಿಕರು ಈ ಬಗ್ಗೆ ಯಾವುದೇ ಅನುಮಾನ ಪಡುವುದು ಬೇಡ. ಈ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಭರವಸೆ ನೀಡಿದ್ದಾರೆ.

    ಟ್ರಿನಿಟಿ ವೃತ್ತ ಸಮೀಪದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಮೂಡಿದ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರಿಗೆ ಯಾವುದೇ ಆತಂಕ ಬೇಡ. ಮೆಟ್ರೋ ಸಂಚಾರ ಸುರಕ್ಷಿತವಾಗಿದೆ. ಈ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ವಯಾಡಕ್ಟ್ ಭಾಗದಲ್ಲಿ ಗ್ಯಾಪ್ ಇರುವ ಬಗ್ಗೆ ಸುದ್ದಿಯಾಗುತ್ತಿದೆ. ಅಲ್ಲದೇ ಅದರ ಡಿಸೈನ್ ಮಾಡಿರುವುದೇ ಹಾಗೇ. ಇದು ಸಾಮಾನ್ಯವಾಗಿರುವಂತಹದ್ದು ಎಂದು ತಿಳಿಸಿದರು.

    ಹನಿಕಾಂಬ್(ಕಾಂಕ್ರೀಟ್ ಪದರ ಟೊಳ್ಳಾಗುವುದನ್ನು ಸಿವಿಲ್ ಎಂಜಿನಿಯರಿಂಗ್ ಭಾಷೆಯಲ್ಲಿ ಹನಿಕಾಂಬ್ ಎಂದು ಕರೆಯಲಾಗುತ್ತದೆ) ಸಮಸ್ಯೆಯಿಂದ ಕಾಂಕ್ರಿಟ್ ಸಿಮೆಂಟ್ ಟೊಳ್ಳಾಗಿದೆ. ನಮ್ಮ ಪರಿಶೀಲನೆ ವೇಳೆ ಗೊತ್ತಾಗಿದೆ. ಪಿಲ್ಲರ್‍ಗೆ ಇಂದು ರಾತ್ರಿ ಮತ್ತೆ ಹೆಚ್ಚುವರಿಯಾಗಿ ಸಪೋರ್ಟ್ ಆಗಿ ಕಬ್ಬಿಣದ ಸರಳನ್ನು ಅಳವಡಿಸಲಿದ್ದೇವೆ. ಇದು ಮುನ್ನೆಚ್ಚರಿಕಾ ಕ್ರಮವಾಗಿ ಮಾತ್ರವೇ ಅಳವಡಿಸುತ್ತಿರುವುದು. ಹೆಚ್ಚುವರಿಯಾಗಿ ಕಬ್ಬಿಣದ ಸರಳನ್ನು ಸಪೋರ್ಟ್ ಕೊಟ್ಟಿದ್ದೇವೆಂದರೆ, ಮೆಟ್ರೋ ಅನ್ ಸೇಫ್ ಎಂದಲ್ಲ. ಇಂದಿನಿಂದ ನಾರ್ಮಲ್ ಆಪರೇಷನ್ ಶುರುವಾಗಿದೆ ಎಂದರು.

    ರಾತ್ರಿ ಮೆಟ್ರೋ ಕಾಮಗಾರಿ ನಡೆಸುತ್ತೇವೆ. ಕ್ರಾಸ್ ಬೀಮ್ ನಲ್ಲಿ ಅಲ್ಟ್ರಾಸೋನಿಕ್ ಟೆಸ್ಟ್ ಮಾಡಿದ್ದೇವೆ. ಈಗಾಗಲೇ ಕೆಮಿಕಲ್ ಮಿಶ್ರಿತ ಜೆಲ್ ಕೂಡ ಹಾಕಿದ್ದೇವೆ. ಈಗ ಕಂಪ್ಲೀಟ್ ಆಗಿ ಕೆಲಸದ ಬಗ್ಗೆ ಅಂತಿಮ ರೂಪುರೇಷೆ ಸಿದ್ಧಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಅನುಭವಿ ತಜ್ಞರ ಬಳಿ ಈ ಬಗ್ಗೆ ಮಾತನಾಡಿದ್ದೇವೆ. ಇನ್ನು ನಾಲ್ಕೈದು ದಿನಗಳಲ್ಲಿ ಆಕ್ಷನ್ ಪ್ಲಾನ್ ರೆಡಿಯಾಗಲಿದೆ. ಅನುಭವಿ ತಜ್ಞರಿಂದಲೇ ಅಂತಿಮ ದುರಸ್ತಿ ಕಾರ್ಯ ಮಾಡಿಲಿದ್ದೇವೆ ಎಂದು ವಿವರಿಸಿದರು.

    ಈಗ ಪೂರ್ವ ಸಿದ್ಧತೆಯಷ್ಟೇ ನಡೆಯುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ದುರಸ್ತಿ ಕಾರ್ಯ ನಡೆಸಲು ಸಜ್ಜಾಗಿದ್ದೇವೆ. ವೀಕೆಂಡ್‍ನಲ್ಲಿ ಅಂತಿಮ ದುರಸ್ತಿ ಕಾರ್ಯ ನಡೆಸುತ್ತೇವೆ. ರಸ್ತೆಯ ಎರಡೂ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪಿಲ್ಲರ್ ಭಾಗದಲ್ಲಿ ಹೋಗುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಕಾಂಕ್ರೀಟ್ ನಲ್ಲಿ ಸಣ್ಣ ಸಣ್ಣ ರಂಧ್ರಗಳಾಗಿವೆ. ಆ ಗ್ಯಾಪನ್ನು ಫಿಲ್ ಮಾಡಬೇಕಾಗಿದೆ. ಒಂದು ದಿನ ಅಥವಾ ಎರಡು ದಿನ ಮೆಟ್ರೋ ಬಂದ್ ಮಾಡಲಿದ್ದೇವೆ ಎಂದು ತಿಳಿಸಿದರು.

    ಈ ಶನಿವಾರ ಹಾಗೂ ಭಾನುವಾರ ಮೆಟ್ರೋ ಸ್ಥಗಿತಗೊಳ್ಳುವುದಿಲ್ಲ. ಮುಂದಿನ ಶನಿವಾರ ಹಾಗೂ ಭಾನುವಾರ ಮಾತ್ರ ಮೆಟ್ರೋ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಮೆಟ್ರೋ ಸ್ಥಗಿತಗೊಂಡರೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದರಲ್ಲಿ ಮೆಟ್ರೋ ದರದಲ್ಲಿ ಬಸ್ ದರವೂ ಸೇರಲಿದ್ದು, ಎಂಜಿ ರೋಡ್‍ನಿಂದ ಇಂದಿರಾನಗರದ ಫೀಡರ್ ಬಸ್ ಸರ್ವೀಸ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮಾರ್ಗದಲ್ಲಿ ಬಿಎಂಟಿಸಿಯಿಂದ ಶಟಲ್ ಬಸ್ ಸೇವೆ ಮೆಟ್ರೋ ಪ್ರಯಾಣಿಕರಿಗೆ ಮಾತ್ರವೇ ಉಚಿತವಾಗಿರಲಿದೆ ಅಜಯ್ ಸೇಠ್ ಹೇಳಿದರು.

    ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಮೆಟ್ರೋ ಅಧಿಕಾರಿಗಳ ವಾಟ್ಸಪ್ ಗ್ರೂಪ್ ನಲ್ಲಿ ಹರಿದಾಡಿದ್ದ ಬೇರಿಂಗ್ ಕ್ರ್ಯಾಕ್ ಕುರಿತು ಪ್ರಶ್ನಿಸಿದಾಗ, ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಾಟ್ಸಪ್ ಸ್ಕ್ರೀನ್ ಶಾಟ್ಸ್ ಗಳು ನಮ್ಮ ಅಧಿಕಾರಿಗಳದ್ದಲ್ಲ. ಅಲ್ಲದೇ ತಪ್ಪು ಮಾಡಿದ ಎಂಜಿನಿಯರ್ ಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.

    ನಮಗೆ ಬೆಂಗಳೂರು ಜನರ ಸುರಕ್ಷತೆ ಮಾತ್ರ ಮುಖ್ಯ. ಎಂಜಿನಿಯರ್ ಮೇಲೆ ಕ್ರಮ ಕೈಗೊಳ್ಳುವ ಸಮಯ ಇದಲ್ಲ. ಮೊದಲು ನಾವು ದುರಸ್ತಿ ಕಾರ್ಯದತ್ತ ಗಮನ ಹರಿಸುತ್ತಿದ್ದೇವೆ. ಟ್ರಿನಿಟಿ-ಬೈಯಪ್ಪನಹಳ್ಳಿ ಕಡೆಯಿಂದ 10 ಕಿ.ಮೀ.ವೇಗ ಹಾಗೂ ಬೈಯಪ್ಪನಹಳ್ಳಿ-ಟ್ರಿನಿಟ್ ಮಾರ್ಗದಲ್ಲಿ ಮೆಟ್ರೋ 30 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಈಗಾಗಲೇ ದೆಹಲಿ ಟೀಮ್ ಕೂಡ ಈ ಬಗ್ಗೆ ಸಲಹೆ ನೀಡಿದೆ. ಕೆಲಸ ಮುಗಿದ ಮೇಲೂ, ಅವರು ಬಂದು ನೋಡಲಿದ್ದಾರೆ. 2012ರಲ್ಲಿಯೂ ಒಂದು ಬಾರಿ ಈ ಸೇಮ್ ಸ್ಟ್ರಕ್ಚರ್‍ನಲ್ಲಿ ಸಮಸ್ಯೆ ಕಂಡುಬಂದಿತ್ತು ಎಂದು ಹೇಳಿದರು.

    ಸಂಖ್ಯೆ ಇಳಿಕೆ: ಬೆಂಗಳೂರು ಮಂದಿಗೆ ಮೆಟ್ರೋ ಗುಮ್ಮ ಆವರಿಸಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಏಕಾಏಕಿ ಒಂದೇ ದಿನದಲ್ಲಿ 7 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದೇ ಮಾರ್ಗದಲ್ಲಿ ಬುಧವಾರ 3.88 ಲಕ್ಷ ಮಂದಿ ಪ್ರಯಾಣಿಸಿದ್ದರೇ, ಗುರುವಾರ 3.81 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ದಿನ ಮೆಟ್ರೋ ಸಂಚಾರ ಸ್ಥಗಿತ!

    ಒಂದು ದಿನ ಮೆಟ್ರೋ ಸಂಚಾರ ಸ್ಥಗಿತ!

    ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿಯಿರುವ ಕಂಬದಲ್ಲಿನ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಒಂದು ದಿನ ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಮೆಟ್ರೋ ಸಂಚಾರ ಸ್ತಬ್ಧವಾಗುವ ಸಾಧ್ಯತೆಯಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೆಟ್ರೋ ನಿಗಮ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅಜಯ್ ಸೇಠ್ ಅವರು, ಗುಣಮಟ್ಟದ ಕೊರತೆಯಿಂದ ಅಥವಾ ಎಂಜಿನಿಯರ್ ತಪ್ಪಿನಿಂದ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಹನಿಕೂಮ್ ಕಾಂಕ್ರೀಟ್ (ಮಿಶ್ರಣ)ದಿಂದಾಗಿ ಹೀಗೆ ಆಗುವುದು ಸಾಮಾನ್ಯ. ಹೀಗಾಗಿ ಬೈಯಪ್ಪನಹಳ್ಳಿ ಹಾಗೂ ನಾಯಂಡಹಳ್ಳಿ ಮಾರ್ಗದಲ್ಲಿ ಸ್ವಲ್ಪ ಈ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ದುರಸ್ತಿ ಕೆಲಸ ನಡೆಯುತ್ತಿದೆ. ಒಂದು ದಿನ ಪಿಲ್ಲರ್ ಕಂಬದ ಅಂತರ ಸರಿಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಬೇಕೋ? ಬೇಡವೋ ಎನ್ನುವುದನ್ನು ಚರ್ಚೆ ಮಾಡುತ್ತೇವೆ. ಒಂದು ವೇಳೆ ಸ್ಥಗಿತ ಮಾಡುವ ಅನಿವಾರ್ಯತೆ ಬಂದರೆ ಈ ಭಾನುವಾರ ಅಥವಾ ಮುಂದಿನ ಭಾನುವಾರ ಮೆಟ್ರೋ ಸಂಚಾರ ಸ್ತಬ್ಧವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

    ಕಂಬಗಳನ್ನು ಮುಖಾಮುಖಿಯಾಗಿ ನಿರ್ಮಾಣ ಮಾಡಿಲ್ಲ. ಮುಂದಿನ ತಿರುವಿನ ಭಾರವನ್ನು ಹೊತ್ತುಕೊಳ್ಳುವ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಈ ಭಾನುವಾರ ಅಥವಾ ಮುಂದಿನ ಭಾನುವಾರ ದುರಸ್ತಿ ಮಾಡಲಿದ್ದೇವೆ. ಜನ ಆತಂಕ ಪಡುವುದು ಬೇಡ. ನಮ್ಮ ಎಂಜಿನಿಯರ್ ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಬೇರೆ ಭಾಗದ ತಜ್ಞರಿಂದಲೂ ಸಲಹೆ ಪಡೆದಿದ್ದೇವೆ ಎಂದು ತಿಳಿಸಿದರು.

    ದುರಸ್ತಿ ಕಾರ್ಯದ ವೇಳೆ ಮೆಟ್ರೋ ಸಂಚಾರ ತೊಂದರೆ ಆಗುತ್ತದೆ. ಹೀಗಾಗಿ ಮೆಜೆಸ್ಟಿಕ್ ಭಾಗದಲ್ಲಿ ಹೆಚ್ಚಿನ ಮೆಟ್ರೋ ರೈಲು ಸಂಚಾರ ಮಾಡಲಿವೆ. ಆದರೆ ಸದ್ಯದ ಮಟ್ಟಿಗೆ ಸಂಚಾರದಲ್ಲಿ ಕೊಂಚ ಏರು ಪೇರು ಆಗಿದೆ. ಪ್ರಯಾಣಿಕರು ಸಹಕರಿಸಬೇಕು. ಆಂತರಿಕ ತನಿಖೆ ನಡೆಯುತ್ತಿದೆ. ಪಿಲ್ಲರ್ ನಲ್ಲಿ ಯಾವುದೇ ದೋಷವಿಲ್ಲ ಎಂದು ಮಾಹಿತಿ ನೀಡಿದರು.

    ಮೆಟ್ರೋ ಗುಣಮಟ್ಟದಲ್ಲಿ ರಾಜಿಯಾಗಲ್ಲ. ಲೋಡ್ ಹೆಚ್ಚಳದಿಂದ ಪಿಲ್ಲರ್ ನಲ್ಲಿ ಬಿರುಕು ಉಂಟಾಗಿಲ್ಲ. ಕಾಂಕ್ರೀಟ್ ಮಿಶ್ರಣದ ತೊಂದರೆಯಿಂದ ಈ ರೀತಿ ಆಗಿರಬಹುದು ಎಂದು ಸ್ಪಷ್ಟನೆ ನೀಡಿದರು.

    https://youtu.be/KoPKGJPuua8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಕಳಪೆ ಕಾಮಗಾರಿ ನಡೆದಿದ್ಯಾ ಎನ್ನುವ ಅನುಮಾನ ಈಗ ಎದ್ದಿದೆ.

    ಮೆಟ್ರೋ ಮಾರ್ಗದ ಒಂದು ಕಂಬದಲ್ಲಿ ಬಿರುಕು ಮೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ವಿವಿಧ ವಿಶ್ಲೇಷಣೆ ನೀಡಿದ್ದು ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

    ಬಿರುಕು ಮೂಡಲು ಕಾರಣವಾದ ಅಂಶಗಳು ಏನಿರಬಹುದು?
    – ಮೆಟ್ರೋ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿರಲೇಬೇಕು. ಇದರ ಪಿಲ್ಲರ್, ಜಾಯಿಂಟ್ ಭಾಗ, ಟ್ರ್ಯಾಕ್ ಆಯಸ್ಸು ಬರೋಬ್ಬರಿ 60 ವರ್ಷ ಇರಬೇಕು. ಹೀಗಾಗಿ ಉದ್ಘಾಟನೆಯಾದ 7 ವರ್ಷಕ್ಕೆ ಬಿರುಕು ಬಿಡಲು ಸಾಧ್ಯವೇ ಇಲ್ಲ. ಆದರೆ ಇದು ಕಳಪೆ ಕಾಮಗಾರಿಯ ಸಂಕೇತ ಎನ್ನುವುದು ಸ್ಪಷ್ಟವಾಗುತ್ತದೆ.

    – ಮೆಟ್ರೋ ಪಿಲ್ಲರ್ ಮೇಲಿನ ಲೋಡ್ ನಿಗದಿತ ಸಾಮರ್ಥ್ಯ ಕ್ಕಿಂತ ಹೆಚ್ಚಾಗಿದೆ. ಮೆಟ್ರೋ ರೈಲಿಗೆ ಹೆಚ್ಚುವರಿ ಕೋಚ್ ಈಗ ಹಾಕಲಾಗಿದೆ. ಲಾಭದ ದೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಮೆಟ್ರೋ ಓಡಾಟದಿಂದ ಪಿಲ್ಲರ್ ಗಳ ಮೇಲಿನ ಒತ್ತಡ ಹೆಚ್ಚಾಗಿರಬಹುದು. ಇದರಿಂದಾಗಿ ಬಿರುಕು ಬಿಟ್ಟಿರಬಹುದು.

    – ಪ್ರತಿ ವರ್ಷಕ್ಕೆ ಪಿಲ್ಲರ್ ಬೀಮ್, ಟ್ರ್ಯಾಕ್, ಪಿಲ್ಲರ್ ಗಳ ಗುಣಮಟ್ಟದ ಪರಿಶೀಲನೆ ಮಾಡಬೇಕು. ಆದರೆ ಬಿರುಕು ಬಿಟ್ಟ ಮೇಲೆ ನಮ್ಮ ಮೆಟ್ರೋ ಎಚ್ಚೆತ್ತುಕೊಂಡಿದೆ. ಇವರೆಗೂ ಯಾವುದೇ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಟ್ರೋ ಕಾಮಗಾರಿಯಲ್ಲಿ ಗೋಲ್‍ಮಾಲ್ ನಡೆದಿದೆ.

    – ಕೇವಲ ಟ್ರಿನಿಟಿ ಸರ್ಕಲ್‍ನ 155 ಪಿಲ್ಲರ್ ಬಳಿ ಮಾತ್ರವಲ್ಲ. ಟ್ರಿನಿಟಿ ಪಕ್ಕದ ಪಿಲ್ಲರ್ ಕೂಡ ಶಿಥಿಲವಾಸ್ಥೆಯಲ್ಲಿದ್ದು, ಸಿಮೆಂಟ್ ಕಿತ್ತು ಹೋಗಿದೆ. ಕೆಲವಡೆ ತೇಪೆ ಹಚ್ಚಿರುವ ಕಾಮಗಾರಿಯೂ ಕಾಣುತ್ತದೆ. ಅಷ್ಟೇ ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಇರುವ ಕಾರಣ ಪಿಲ್ಲರ್ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿರುವ ಸಾಧ್ಯತೆಯಿದೆ.

    ರಾತ್ರಿ ಕಾರ್ಯಾಚರಣೆ:
    ಮೆಟ್ರೋ ದುರಸ್ತಿ ಆರಂಭವಾಗಲಿದ್ದು, ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಮಧ್ಯರಾತ್ರಿಯೇ ಕಾಮಗಾರಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗ ಕಾಮಗಾರಿ ನಡೆಸಿದರೆ ಮೆಟ್ರೋ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಮೆಟ್ರೋ ಸಂಪೂರ್ಣ ಸಂಚಾರ ನಿಲ್ಲಲ್ಲಿದೆ. ಈ ವೇಳೆ ದುರಸ್ತಿ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಮೂಲಗಳು ತಿಳಿಸಿವೆ.

    https://youtu.be/KoPKGJPuua8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯ ಛಾವಣಿ ಕಿತ್ತುಹಾಕಿ ಗಣೇಶನ ಮೂರ್ತಿಯನ್ನು ಬೀದಿಗೆ ತಂದ ಎಂಜಿನಿಯರ್!

    ಶಾಲೆಯ ಛಾವಣಿ ಕಿತ್ತುಹಾಕಿ ಗಣೇಶನ ಮೂರ್ತಿಯನ್ನು ಬೀದಿಗೆ ತಂದ ಎಂಜಿನಿಯರ್!

    ದಾವಣಗೆರೆ: ಶಾಲೆಯಲ್ಲಿ ಗಣೇಶ ಮೂತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಕೇಳದ, ಎಂಜಿನಿಯರ್ ಅಧಿಕಾರಿಯೊಬ್ಬರು ಶಾಲೆಯ ಛಾವಣಿಯನ್ನು ತೆಗೆಸಿದ ಘಟನೆ ಹರಪನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

    ಎಂಜಿನಿಯರ್ ಮಹಾಂತೇಶ್ ಹಾಗೂ ಕಾರ್ಮಿಕ ನವಾಜ್ ಶಾಲೆಯ ಛಾವಣಿ ತೆಗೆಸಿ ಹಾಕಿದವರು. ಗುರುವಾರ ಬೆಳಗ್ಗೆ ಮಾದಾಪುರ ಗ್ರಾಮದ ಮಕ್ಕಳು ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿದ್ದರು. ಬಳಿಕ ಕೆಲವು ವಿದ್ಯಾರ್ಥಿಗಳನ್ನು ಬಿಟ್ಟು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು.

    ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯಕ್ಕೆಂದು ಶಾಲೆಗೆ ಬಂದ ಎಂಜಿನಿಯರ್ ಮಹಾಂತೇಶ್, ಕಾರ್ಮಿಕ ನವಾಜ್ ಅವರಿಗೆ ಹೇಳಿ ಛಾವಣಿ ತೆಗೆಸುತ್ತಿದ್ದರು. ಆಗ ಕೆಲ ವಿದ್ಯಾರ್ಥಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ, ಹಬ್ಬದ ನಂತರ ಶಾಲೆ ದುರಸ್ತಿ ಕಾರ್ಯ ಮಾಡುವಂತೆ ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮಾತನ್ನು ಕೇಳ ಎಂಜಿನಿಯರ್ ಛಾವಣಿ ತೆಗೆಸಿದ್ದಾರೆ.

    ಶಾಲೆಗೆ ಬಂದ ಸ್ಥಳೀಯರು ಎಂಜಿನಿಯರ್ ವರ್ತನೆಯಿಂದ ಗರಂ ಆಗಿದ್ದರು. ಮಹಾಂತೇಶ್ ಹಾಗೂ ನವಾಜ್‍ನನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಥಳಿಸಲು ಮುಂದಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಹಾಂತೇಶ್ ಹಾಗೂ ನವಾಜ್‍ನನ್ನು ವಶಕ್ಕೆ ಪಡೆದು, ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ!

    ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ!

    ಮೈಸೂರು: ಜಿಲ್ಲೆಗೆ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ ಬಿದ್ದಿದೆ. ಅರಮನೆ ದುರಸ್ತಿಯಲ್ಲಿದೆ ಎಂದು ಅರಮನೆಯ ಮುಖ್ಯ ದ್ವಾರಕ್ಕೆ ಫಲಕ ಹಾಕಲಾಗಿದೆ.

    ಎರಡು ತಿಂಗಳ ಕಾಲ ಜಗನ್ಮೋಹನ ಅರಮನೆ ನೋಡಿ ಆನಂದಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲವಾಗಿದೆ. ಅದರಲ್ಲೂ ದಸರಾ ವೇಳೆ ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ ನೋಡುವ ಭಾಗ್ಯ ಸಿಗುವುದಿಲ್ಲ. ಆರ್ಟ್ ಗ್ಯಾಲರಿಯ ಮೇಲ್ಛಾವಣಿಯ ಒಂದು ಭಾಗ ಕುಸಿದ ಕಾರಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಜಗನ್ಮೋಹನ ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.

    ಅಂಬಾ ವಿಲಾಸ ಅರಮನೆ ಬೆಂಕಿಗೆ ಆಹುತಿಯಾದಾಗ ಇದೇ ಅರಮನೆಯಲ್ಲಿ ರಾಜ ಮನೆತನದವರು ವಾಸ ಮಾಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಟ್ಟಾಭಿಷೇಕ ಮಹೋತ್ಸವ ಇದೇ ಅರಮನೆಯಲ್ಲಿ ನಡೆದಿತ್ತು. 1861 ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ನಿರ್ಮಾಣಗೊಂಡ ಅರಮನೆಯಲ್ಲಿ ಅಂದಿನಿಂದಲೂ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಭಾಗದಲ್ಲಿ ವೇದಿಕೆ ಸಭಾಂಗಣ ಮತ್ತೊಂದು ಭಾಗದಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದ ಅರಮನೆಗೆ ಈಗ ಬೀಗ ಬಿದ್ದಿದೆ.

    ರಾಜ ಮನೆತನದ ಆಡಳಿತಾವಧಿಯನ್ನು ನೆನಪಿಸುವಂತಹ ಸನ್ನಿವೇಶಗಳು ಜಗನ್ಮೋಹನ ಅರಮನೆಯ ಪ್ರಮುಖ ಆಕರ್ಷಣೆಯಾಗಿತ್ತು. ಶಸ್ತ್ರಾಸ್ತ್ರಗಳು, ತೈಲ ವರ್ಣದ ಚಿತ್ರಗಳು, ಪರಂಪರೆಯನ್ನ ಬಿಂಬಿಸುವ ವಸ್ತುಗಳು, ರಾಜಮಹಾರಾಜರ ಚಿತ್ರಗಳು ಆರ್ಟ್ ಗ್ಯಾಲರಿಯ ವಿಶೇಷವಾಗಿತ್ತು. ಮೈಸೂರಿಗೆ ಬರುವ ಪ್ರವಾಸಿಗರು ಜಗನ್ಮೋಹನ ಅರಮನೆ ವೀಕ್ಷಿಸದೆ ವಾಪಸ್ ಹೋಗುತ್ತಿರಲಿಲ್ಲ. ಇಂತಹ ಪ್ರವಾಸಿ ಕೇಂದ್ರಕ್ಕೆ ದಸರಾ ವೇಳೆ ಬೀಗ ಬಿದ್ದಿರುವುದು ವಿಪರ್ಯಾಸವಾಗಿದೆ.

    ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಇಲ್ಲಿನ ವ್ಯಾಪಾರಸ್ಥರ ಹೊಟ್ಟೆಗೂ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜಗನ್ಮೋಹನ ಅರಮನೆ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಿ ದಸರಾ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv