Tag: ದುಬಾರಿ ವಾಚ್

  • ಎಲ್ಲಿದ್ದರೂ ಬಂದು ಬಿಡು ಮಗನೇ ಎಂದು ಗೋಗರೆಯುತ್ತಿದ್ದಾರೆ ಹಾಸನದ ಪೋಷಕರು!

    ಎಲ್ಲಿದ್ದರೂ ಬಂದು ಬಿಡು ಮಗನೇ ಎಂದು ಗೋಗರೆಯುತ್ತಿದ್ದಾರೆ ಹಾಸನದ ಪೋಷಕರು!

    ಹಾಸನ: ಕ್ಷುಲ್ಲಕ ಕಾರಣಕ್ಕೆ ತಾನು ಓದುತ್ತಿದ್ದ ಖಾಸಗಿ ಶಾಲೆಯ ಶಿಕ್ಷಕರು ಥಳಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ಹಾಸನದಲ್ಲಿ ನಡೆದಿದೆ.

    ನಗರದ ಶಾಂತಿನಗರದ ಶ್ರೀನಿವಾಸ್ ಮತ್ತು ಪುಷ್ಪಲತಾ ಪುತ್ರ ಚಿರಾಗ್ ಕಾಣೆಯಾಗಿರುವ ವಿದ್ಯಾರ್ಥಿ. ಹಾಸನದ ಪ್ರತಿಷ್ಠಿತ ರಾಯಲ್ ಅಪೊಲೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಚಿರಾಗ್, ನವೆಂಬರ್ 19-20 ರಂದು ಶಾಲೆಯವರೇ ಕರೆದುಕೊಂಡು ಹೋಗಿದ್ದ ವಂಡರ್ ಲಾ ಪ್ರವಾಸಕ್ಕೆ ಹೋಗಿದ್ದನು.

    ಪ್ರವಾಸ ಮುಗಿಸಿ ಬಂದ ನಂತರ ದುಬಾರಿ ವಾಚ್ ಕಟ್ಟಿಕೊಂಡು ಮಾಮೂಲಿ ಶಾಲೆಗೆ ಹೋಗಿದ್ದ. ಇದನ್ನು ಕಂಡ ಶಿಕ್ಷಕರು ಚಿರಾಗ್ ಗೆ ಹೊಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿನ್ನ ಪೋಷಕರನ್ನು ಶಾಲೆಗೆ ಕರೆದುಕೊಂಡು ಬರುವವರೆಗೂ ವಾಚ್ ಕೊಡೋದಿಲ್ಲ ಎಂದಿದ್ದಾರೆ.

    ಇದರಿಂದ ಮನನೊಂದ ಚಿರಾಗ್ ನವೆಂಬರ್ 21 ರ ಬೆಳಗ್ಗೆ ಟ್ಯೂಷನ್ ಹೋಗಿ ಬರುತ್ತೇನೆ ಎಂದು ಮನೆ ಬಿಟ್ಟು ಹೋದವನು ಇನ್ನೂ ಮರಳಿ ಬಂದಿಲ್ಲ. ಇದರಿಂದ ಪೋಷಕರು ಕಂಗಾಲಾಗಿದ್ದು, ಒಂದೇ ಸಮನೆ ಕಣ್ಣೀರಿಡುತ್ತಿದ್ದಾರೆ. ಎಲ್ಲಿದ್ದರೂ ಬಂದು ಬಿಡು ಮಗನೇ ಎಂದು ಗೋಗರೆಯುತ್ತಿದ್ದಾರೆ.

    ಚಿರಾಗ್ 21 ರ ಬೆಳಗ್ಗೆ ಮನೆಯಿಂದ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಏ.1ರಿಂದ 3 ಲಕ್ಷಕ್ಕಿಂತ ಹೆಚ್ಚು ಹಣ ಪಡೆದ್ರೆ 3 ಲಕ್ಷ ರೂ. ಫೈನ್ ನೀವೇ ಕಟ್ಬೇಕು!

    ನವದೆಹಲಿ: ಏಪ್ರಿಲ್ 1ರಿಂದ ಯಾವುದೇ ಕಾರಣಕ್ಕೂ ನೀವು 3 ಲಕ್ಷಕ್ಕಿಂತ ನಗದು ಹಣ ಸ್ವೀಕರಿಸಬೇಡಿ. ಒಂದು ವೇಳೆ 3 ಲಕ್ಷಕ್ಕಿಂತ ಹೆಚ್ಚು ಹಣ ಕೊಟ್ಟರೆ ಅಷ್ಟೇ ಮೊತ್ತದ ಫೈನ್ ಕಟ್ಟಬೇಕಾಗುತ್ತದೆ. ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿರುವ 3 ಲಕ್ಷ ರೂ. ನಗದು ವಹಿವಾಟು ಮಿತಿ ಏಪ್ರಿಲ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.

    ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಗದಿತ ಮಿತಿಗಿಂತ ಹೆಚ್ಚು ಹಣದ ನಗದು ವಹಿವಾಟು ನಡೆಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇದು ನೀವು ಸ್ವೀಕರಿಸಿದ ಹಣದ ಮೊತ್ತಕ್ಕೆ ಸರಿಸಮನಾಗಿರಬಹುದು ಎಂದು ಹೇಳಿದ್ದಾರೆ.

    ಒಂದು ವೇಳೆ ನೀವು 4 ಲಕ್ಷ ರೂ. ವಹಿವಾಟು ನಡೆಸಿದರೆ ದಂಡ 4 ಲಕ್ಷ ರೂಪಾಯಿ. ನೀವು 50 ಲಕ್ಷ ರೂ.ಗಳ ವಹಿವಾಟು ನಡೆಸಿದರೆ ದಂಡ 50 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಹಣವನ್ನು ಸ್ವೀಕರಿಸಿದ ವ್ಯಕ್ತಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು. ಯಾರಾದರೂ ನಗದು ಹಣ ನೀಡಿ ದುಬಾರಿ ವಾಚ್ ಖರೀದಿಸಿದರೆ, ಹಣವನ್ನು ಸ್ವೀಕರಿಸಿದ ಅಂಗಡಿಯ ಮಾಲೀಕರೇ ದಂಡ ಪಾವತಿಸಬೇಕಾಗುತ್ತದೆ. ಭಾರೀ ಪ್ರಮಾಣದ ಹಣದ ವಹಿವಾಟು ನಡೆಸುವುದನ್ನು ತಡೆಗಟ್ಟುವುದೇ ನಮ್ಮ ಉದ್ದೇಶ ಎಂದು ಹೇಳಿದರು.

    ಈ ಹಿಂದೆ ಲೆಕ್ಕ ತೋರಿಸದ ಹಣವನ್ನು ಕೆಲವರು ಪ್ರವಾಸ, ದುಬಾರಿ ಕಾರು, ವಾಚ್ ಹಾಗೂ ಆಭರಣ ಖರೀದಿಗೆ ಬಳಸುತ್ತಿದ್ದರು. ಆದರೆ ಇನ್ನು ಮುಂದೆ ಈ ನಿಯಮಗಳು ಇದಕ್ಕೆ ತಡೆಯೊಡ್ಡಲಿವೆ. ಈ ಮೂಲಕ ಕಪ್ಪು ಹಣ ಚಲಾವಣೆಗೆ ಬ್ರೇಕ್ ಬೀಳಲಿದೆ ಎಂದು ಹೇಳಿದರು. ಹೊಸ ನಿಯಮಗಳು ಬ್ಯಾಂಕಿಂಗ್ ಕಂಪೆನಿಗಳು, ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯವಾಗುವುದಿಲ್ಲ.