Tag: ದುಬಾರಿ ಕಾರು

  • ದುಬಾರಿ ಕಾರು ಮಾರಿ ಆಕ್ಸಿಜನ್ ಪೂರೈಸಿದ

    ದುಬಾರಿ ಕಾರು ಮಾರಿ ಆಕ್ಸಿಜನ್ ಪೂರೈಸಿದ

    ಮುಂಬೈ: ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ತನ್ನ ದುಬಾರಿ ಕಾರನ್ನು ಮಾರಾಟ ಮಾಡಿ ‘ಆಕ್ಸಿಜನ್ ಮ್ಯಾನ್’ ಎಂದು ಬಿರುದು ಪಡೆದುಕೊಳ್ಳುವ ಮೂಲಕವಾಗಿ ವ್ಯಕ್ತಿಯೊಬ್ಬರು ಸುದ್ದಿಯಾಗಿದ್ದಾರೆ.

    ಶೆಹನಾಜ್ ಶೇಖ್ ಅವರು ತಮ್ಮ ದುಬಾರಿ ಕಾರ್ ಮಾರಿ ಕೃತಕ ಆಮ್ಲಜನಕವನ್ನು ಪೂರೈಕೆ ಮಾಡುವ ಮೂಲಕವಾಗಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಬೇಕು ಎಂದು 22 ಲಕ್ಷದ ಕಾರನ್ನು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರಾಟ ಮಾಡಿದ್ದಾರೆ. ಈ ಹಣದಿಂದ 160 ಆಮ್ಲಜನಕ   ಸಿಲಿಂಡರ್‌ಗಳನ್ನು ಖರೀದಿಸಿದ್ದಾರೆ.

    ಶೆಹನಾಜ್ ಅವರ ಈ ಸಾಮಾಜಿಕ ಕಳಕಳಿಯ ಹಿಂದೆ ಕಣ್ಣೀರಿನ ಕಥೆ ಇದೆ. ಕಳೆದ ವರ್ಷ ಶೆಹನಾಜ್ ಪತ್ನಿ ಆಮ್ಲಜನಕದ ಕೊರತೆಯಿಂದಾಗಿ ಆಟೋರಿಕ್ಷಾದಲ್ಲಿಯೇ ಪ್ರಾಣಬಿಟ್ಟಿದ್ದರು. ಈ ಘಟನೆ ಬಳಿಕ ಜೀವದ ಮಹತ್ವವನ್ನ ಅರಿತ ಶೆಹಜಾನ್ ಮುಂಬೈನಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಅಗತ್ಯ ಇರುವವರಿಗೆ ಶೆಹಜಾನ್ ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಮ್ ತೆರೆದಿದ್ದಾರೆ. ಸಹಾಯ ಮಾಡುತ್ತಿರುವ ಶೆಹನಾಜ್ ಅವರ ಬಳಿ ಇದ್ದ ಹಣ ಖಾಲಿಯಾಗಿದೆ. ಹೀಗಾಗಿ ತನ್ನ ಕಾರು ಮಾರಿ ಹಣ ಹೊಂದಿಸಿ ಆಕ್ಸಿಜನ್ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.

  • ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದು ಬಸ್ಕಿ ಹೊಡೆದ ಉದ್ಯಮಿ ಪುತ್ರ

    ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದು ಬಸ್ಕಿ ಹೊಡೆದ ಉದ್ಯಮಿ ಪುತ್ರ

    ಇಂದೋರ್: ಲಾಕ್‍ಡೌನ್ ಇದ್ದರೂ ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದ ಉದ್ಯಮಿ ಮಗನಿಗೆ ಪೊಲೀಸರು ಅಡ್ಡಗಟ್ಟಿ ಬಸ್ಕಿ ಹೊಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.

    ಕೊರೊನಾ ಹೆಚ್ಚಾಗದಿರಲಿ ಎಂದು ಕೇಂದ್ರ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಆದರೆ ಕೆಲ ಕಡೆ ನಕಲಿ ಪಾಸ್ ಪಡೆದು ಅನಾವಶ್ಯಕವಾಗಿ ಮನೆಯಿಂದ ಹೊರಬರುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಕೆಲ ಶ್ರೀಮಂತರ ಮಕ್ಕಳು ಲಾಕ್‍ಡೌನ್ ನಡುವೆಯೂ ಜಾಲಿರೈಡ್ ಮಾಡುತ್ತಿದ್ದಾರೆ.

    ಹಾಗೆಯೇ ಇಂದೋರ್ ನಗರದಲ್ಲಿ ಜಾಲಿರೈಡ್ ಮಾಡುತ್ತಿದ್ದ ಉದ್ಯಮಿ ದೀಪಕ್ ದರ್ಯಾನಿ ಅವರ ಮಗನನ್ನು ಪೊಲೀಸರು ಅಡ್ಡಗಟ್ಟಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ದರ್ಯಾನಿ ಅವರ 20 ವರ್ಷದ ಪುತ್ರ ಹಳದಿ ಬಣ್ಣದ ಓಪನ್ ಪೋರ್ಷೆ ಕಾರಿನಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿದ್ದ. ಇದನ್ನು ಕಂಡ ಅಧಿಕಾರಿಗಳು ಆತನನ್ನು ಅಡ್ಡಗಟ್ಟಿದ್ದಾರೆ. ನಂತರ ಕಿವಿಯನ್ನು ಕೈಯಲ್ಲಿ ಹಿಡಿದು ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ.

    ಅಧಿಕಾರಿ ಹೇಳಿದಂತೆ ಬಸ್ಕಿ ಹೊಡೆಯುತ್ತಿರುವ ದರ್ಯಾನಿ ಮಗನನ್ನು ಸ್ಥಳದಲ್ಲಿ ಇದ್ದವು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಇದನ್ನು ಒಪ್ಪಿಕೊಳ್ಳದ ದರ್ಯಾನಿ ಕುಟುಂಬ ನಮ್ಮ ಮಗನ ಬಳಿ ಕಾರಿನ ದಾಖಲೆಯಿತ್ತು. ಜೊತೆಗೆ ಅವನ ಬಳಿ ಲಾಕ್‍ಡೌನ್ ನಡುವೆಯೂ ಹೊರಗೆ ಹೋಗಲು ಪಾಸ್ ಕೂಡ ಇತ್ತು. ಆದರೂ ಪೊಲೀಸರು ಕರ್ತವ್ಯದ ನೆಪದಲ್ಲಿ ದರ್ಪ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

    ದೀಪಕ್ ದರ್ಯಾನಿ ಅವರು ಇಂದೋರ್ ನಲ್ಲಿ ಇರುವ ಆಶಾ ಮಿಠಾಯಿ ಕಂಪನಿಯ ಮಾಲೀಕರಾಗಿದ್ದಾರೆ. ಆದರೆ ಮಗನ ತಪ್ಪನ್ನು ಒಪ್ಪಿಕೊಳ್ಳದ ದೀಪಕ್ ದರ್ಯಾನಿ ನನ್ನ ಮಗನ ಬಳಿ ಸೂಕ್ತ ದಾಖಲೆಗಳು ಇದ್ದರೂ ಅಲ್ಲಿ ಅಧಿಕಾರಿಗಳು ಅವನ ಜೊತೆ ತಪ್ಪಾಗಿ ನಡೆದುಕೊಂಡಿದ್ದಾರೆ. ಆ ಕಾರಣದಿಂದ ಅವರ ಅಧಿಕಾರಿಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

  • ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. ಸದ್ಯ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ನೂತನ ಸಚಿವರುಗಳಿಗೆ ನೀಡಲಾಗಿದ್ದು, ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಅರ್ಧ ರಾಜ್ಯದ ಜನ ಸೂರಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಪ್ರಭಾವಿ ಮುಖಂಡರು ಕಾಸ್ಟ್ಲಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗೆ ಈವರೆಗೂ ಖಾತೆಯೇ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ಶೋಕಿ ಶುರು ಮಾಡಿಕೊಂಡಿರುವ ಪ್ರಭಾವಿ ಸಚಿವರುಗಳ ಕಾರು ಕ್ಯಾತೆಗೆ ಜನ ಕೆಂಡಾಮಂಡಲರಾಗಿದ್ದಾರೆ.

  • ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರ್ ಗಿಫ್ಟ್ ನೀಡಿದ ಬೆಂಗ್ಳೂರು ಉದ್ಯಮಿ

    ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರ್ ಗಿಫ್ಟ್ ನೀಡಿದ ಬೆಂಗ್ಳೂರು ಉದ್ಯಮಿ

    ಬೆಂಗಳೂರು: ನಮಗೆ ಇಷ್ಟವಾದವರಿಗೆ ಅವರಿಗೆ ಇಷ್ಟವಾದುದನ್ನು ಉಡುಗೊರೆಯಾಗಿ ನೀಡುವುದು ಒಂದು ಖುಷಿಯ ಸಂಗತಿ. ಅದರಂತೆ ಸಿಲಿಕಾನ್ ಸಿಟಿಯ ಉದ್ಯಮಿಯೊಬ್ಬರು ತಮ್ಮ ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಲಾ ಫೆಮ್ಮೆ ಎಂಬ ಕಂಪನಿಯ ಸಿಇಓ ನಿಲುಫರ್ ಶೆರಿಫ್ ಎಂಬವರು ಹೆಂಡತಿಗೆ ಇಷ್ಟವಾದ ಲ್ಯಾಂಬೋರ್ಗಿನಿ ಹರಾಕೆನ್ ಎಲ್‍ಪಿ 610-4 ಎಂಬ ಹಳದಿ ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದು. ಈ ವಿಡಿಯೋವನ್ನು ಆಟೊಮೊಬಿಲಿ ಅರ್ಡೆಂಟ್ ಎಂಬ ಕಂಪನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ.

    https://www.instagram.com/p/Byz77QqHHHF/?utm_source=ig_embed

    ಈ ಲ್ಯಾಂಬೋರ್ಗಿನಿ ಹರಾಕೆನ್ ಎಲ್‍ಪಿ 610-4 ಎಂಬ ಕಾರಿನ ಬೆಲೆ 4.80 ಕೋಟಿ ರೂ. ಆಗಿದ್ದು ಇದರ ಆರಂಭಿಕ ಮೌಲ್ಯವೇ 3 ಕೋಟಿ ಇದೆ. ಈ ಕಾರು ಹೆಚ್ಚು ದುಬಾರಿ ಇರುವ ಎಡಬ್ಲ್ಯುಡಿ ಮಾದರಿಯ ರೂಪಾಂತರವಾಗಿದ್ದು, ಗ್ರೌಂಡ್ ಕ್ಲಿಯರೆನ್ಸ್ ಅನ್ನು 45 ಎಂಎಂ ಹೆಚ್ಚಿಸುವಷ್ಟು ಸಾಮಥ್ರ್ಯ ಇರುವ ಸೂಪರ್ ಕಾರ್ ಆಗಿದೆ. ಕೇವಲ 3 ಸೆಕೆಂಡ್‍ಗಳಲ್ಲಿ ತನ್ನ ವೇಗವನ್ನು ಗಂಟೆಗೆ 100 ಕಿ.ಮೀ ಹೆಚ್ಚಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ.

    ಈ ಲ್ಯಾಂಬೋರ್ಗಿನಿ ಹರಾಕೆನ್ ಇಟಾಲಿಯನ್ ಕಾರು ಉತ್ಪಾದಕರಿಂದ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಲ್ಯಾಂಬೋರ್ಗಿನಿ ಕಂಪನಿಯಿಂದ ಇತ್ತೀಚೆಗೆ ಉರುಸ್ ಎಂಬ ಎಸ್‍ಯುವಿಯನ್ನು ಬಿಡುಗಡೆ ಮಾಡಿದ್ದು ಇದು ವಿಶ್ವದಾದ್ಯಂತ ಹೆಚ್ಚು ಜನಪ್ರಿಯವಾಗಿದೆ.

    ಈ ರೀತಿಯ ಕಾರುಗಳನ್ನು ಉಡುಗೊರೆಯಾಗಿ ಕೊಡುವುದು ಭಾರತದಲ್ಲಿ ಅಪರೂಪ. ಇದಕ್ಕೂ ಮುಂಚೆ ಯುಎಇ ಮೂಲದ ಎನ್‍ಆರ್‍ಐ ಸೋಹನ್ ರಾಯ್ ಎಂಬುವವರು ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಪತ್ನಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ಅವರ ಪತ್ನಿ ರೋಲ್ಸ್ ರಾಯ್ಸ್ ಕಾರನ್ನು ಹೊಂದಿದ ವಿಶ್ವದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]