Tag: ದೀಪಗಳು

  • ಆರಿಹೋಯ್ತು 46 ವರ್ಷದಿಂದ ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ ದೀಪನಾಥೇಶ್ವರದ 3 ದೀಪಗಳು

    ಆರಿಹೋಯ್ತು 46 ವರ್ಷದಿಂದ ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ ದೀಪನಾಥೇಶ್ವರದ 3 ದೀಪಗಳು

    ಕಾರವಾರ: ಯಾವುದೇ ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ (Deepanatheshwara Temple) ಮೂರು ದೀಪಗಳು ನಂದಿ ಹೋಗಿವೆ.

    1979 ರಲ್ಲಿ ದೈವಜ್ಞ ಶಾರದಮ್ಮ ಎಂಬವರು ಸೀಮೆಎಣ್ಣೆ ಹಾಕಿ ಈ ದೀಪವನ್ನು ಬೆಳಗಿಸಿದ್ದರು. ಅಲ್ಲಿಂದ ಈವರೆಗೂ ಈ ದೀಪ ಎಣ್ಣೆ, ಬತ್ತಿಯಿಲ್ಲದೇ ಬೆಳಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ನೂರಾರು ಜನರು ಭೇಟಿ ನೀಡಿ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ದೀಪನಾಥೇಶ್ವರ ಎಂಬ ಹೆಸರಿನಲ್ಲಿ ಆಸ್ತಿಕರು ಪೂಜೆಗಳನ್ನು ನಡೆಸುತ್ತಿದ್ದರು ಎಂಬುದು ಸ್ಥಳೀಯರ ಅಭಿಪ್ರಾಯ. ಕಳೆದ 14 ದಿನದ ಹಿಂದೆ ದೀಪದ ಉಸ್ತುವಾರಿ ನೋಡಿಕೊಳ್ಳುತಿದ್ದ ವೆಂಕಟೇಶ್ ಎಂಬವರು ಮೃತರಾಗಿದ್ದು, ಸೂತಕದ ಹಿನ್ನಲೆಯಲ್ಲಿ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಆದರೆ, ಬುಧವಾರ ದೇವಸ್ಥಾನದ ಗರ್ಭಗುಡಿಯನ್ನು ಸ್ವಚ್ಛ ಮಾಡಲು ಕುಟುಂಬಸ್ಥರು ತೆರಳಿದಾಗ ದೀಪ ಆರಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು – ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆ

    ದೀಪ ಆರಿದರೆ ರಾಜ್ಯ ಆಳುವವರಿಗೆ ಕೆಡುಕಾಗಲಿದೆ ಎಂದು ಜನ ನಂಬಿದ್ದು, ಗ್ರಾಮಕ್ಕೂ ತೊಂದರೆಯಾಗಲಿದೆ ಎಂಬುದು ಇಲ್ಲಿನ ಭಕ್ತರ ಅನಿಸಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಗರ್ಭಗುಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಮುಚ್ಚಿದ್ದು, ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದೆ.

    ಏನಿದರ ಇತಿಹಾಸ?
    ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವವರು 1979ರಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಆದರೆ, ಅದು ಒಂದು ದಿನ ಕಳೆದರೂ ಆರಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಇದರಿಂದ ಕುತೂಹಲಗೊಂಡ ಶಾರದಮ್ಮ, ಒಂದು ವರ್ಷದವರೆಗೆ ಕಾಯ್ದು ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು. 2ನೇ ದೀಪ ಹಚ್ಚಿದ 10-15 ದಿನಗಳ ನಂತರ ಮತ್ತೊಂದು 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪ ಸೇರಿ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು ಎಂಬುದು ಸ್ಥಳೀಯರ ಮಾತು. 1979ರಿಂದ 2025ರ ಫೆಬ್ರವರಿ ವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿದೆ. ಇದನ್ನೂ ಓದಿ: Aeroindia 2025 | ಏರ್ ಶೋ ಹಿನ್ನೆಲೆ ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆಗೆ ನಿಷೇಧ

    ದೇವರು ಮುನಿದನಾ?
    ದೀಪ ಹಚ್ಚಿದ್ದ ಶಾರದಮ್ಮ ಅವರು ಕೆಲವು ವರ್ಷಗಳ ನಂತರ ನಿಧನರಾದರು. ಆದರೂ ದೀಪಗಳು ಇಲ್ಲಿವರೆಗೆ ಉರಿದುಕೊಂಡು ಬರುತ್ತಿದ್ದು ನಂದಾದೀಪ ಎನಿಸಿತ್ತು. 14 ದಿನದ ಹಿಂದೆ ಈ ದೀಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರ್ಚಕ ವೆಂಕಟೇಶ್ ನಿಧನರಾದರು. ಈ ಹಿನ್ನೆಲೆಯಲ್ಲಿ ಸೂತಕವಿದ್ದ ಕಾರಣ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಫೆ.5ರಂದು ಪೂಜೆಗಾಗಿ ಗರ್ಭಗುಡಿ ತೆರೆದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.

    ಆರದ ನಂದಾದೀಪ ಆರಿಹೋದಾಗ ಭಕ್ತರಲ್ಲಿ ನೋವು ತರಿಸಿದೆ. ಇಷ್ಟು ದಿನ ಆರದ್ದು ಈಗ ಆರಿರುವುದು ಕೆಡುಕಿನ ಸಂಕೇತ. ರಾಜ್ಯ ಆಳುವವರಿಗೂ ಕೆಡುಕಾಗಲಿದೆ. ಗ್ರಾಮಕ್ಕೂ ಕೆಡುಕು ಎಂಬ ಮಾತುಗಳು ಕೇಳಿಬರುತ್ತಿವೆ. ದೀಪವನ್ನು ನೋಡಲು ಜನ ಮಿಗಿಬಿದ್ದಿದ್ದಾರೆ. ನಂತರ ಈ ದೇವಸ್ಥಾನದ ಗರ್ಭಗುಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

  • ಧರ್ಮಸ್ಥಳ ಲಕ್ಷ ದೀಪೋತ್ಸವ – ಕ್ಷೇತ್ರಾದ್ಯಂತ ಝಗಮಗಿಸ್ತಿದೆ ವಿದ್ಯುತ್ ದೀಪಗಳು

    ಧರ್ಮಸ್ಥಳ ಲಕ್ಷ ದೀಪೋತ್ಸವ – ಕ್ಷೇತ್ರಾದ್ಯಂತ ಝಗಮಗಿಸ್ತಿದೆ ವಿದ್ಯುತ್ ದೀಪಗಳು

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷ ದೀಪೋತ್ಸವದ ಸಂಭ್ರಮ. ಶುಕ್ರವಾರದಿಂದ ಧರ್ಮಸ್ಥಳ ಕ್ಷೇತ್ರಾದ್ಯಂತ ವಿದ್ಯುತ್ ದೀಪಗಳು ಝಗಮಗಿಸುತ್ತಿದ್ದು, ವರ್ಷಂಪ್ರತಿಯಂತೆ ಕ್ಷೇತ್ರದ ಪರಿಸರ ದೀಪಗಳಿಂದ ಕಂಗೊಳಿಸಲಿದೆ.

    ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಇದೇ ವೇಳೆ, ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವೂ ಜರಗಲಿದೆ. ನ.25ರಂದು 84ನೇ ವರ್ಷದ ಸರ್ವ ಧರ್ಮ ಸಮ್ಮೇಳನ ಹಾಗೂ 26ರಂದು ಸಾಹಿತ್ಯ ಸಮ್ಮೇಳನ ಜರುಗಲಿದ್ದು ಸರ್ವ ಧರ್ಮಗಳ ಸಾಹಿತ್ಯಾಸಕ್ತರನ್ನು ಆಕರ್ಷಿಸಲಿದೆ.

    ಈ ಬಾರಿಯ ಸರ್ವ ಧರ್ಮ ಸಮ್ಮೇಳನವನ್ನು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಘಾಟಿಸಲಿದ್ದಾರೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಈ ಲಕ್ಷ ದೀಪೋತ್ಸವದ ವಿಶೇಷ ಎಂದರೆ, ಉತ್ಸವದ ಕೊನೆಯ ದಿನ ದೇವರ ಮೂರ್ತಿಯನ್ನು ಹೊತ್ತು ಭಕ್ತರ ದರ್ಶನಕ್ಕಾಗಿ ಮೆರವಣಿಗೆ ನಡೆಯಲಿದೆ.

    ಮಂಜುನಾಥನ ಮೂರ್ತಿಯೊಂದಿಗೆ ಕ್ಷೇತ್ರದ ಆವರಣದಲ್ಲಿ ಮೆರವಣಿಗೆ ನಡೆದು, ಐದು ಕಟ್ಟೆಗಳಲ್ಲಿ ಪೂಜೆ ನಡೆಯಲಿದೆ. ಹಿಂದಿನ ಕಾಲದಲ್ಲಿ ಲಕ್ಷ ದೀಪಗಳಿಂದಲೇ ಕ್ಷೇತ್ರವನ್ನು ಝಗಮಗಿಸುತ್ತಿದ್ದರೆ, ಈಗಿನ ಕಾಲದಲ್ಲಿ ವಿದ್ಯುತ್ ದೀಪಗಳಿಂದ ಧರ್ಮಸ್ಥಳ ಕ್ಷೇತ್ರ ಕಂಗೊಳಿಸುವಂತೆ ಮಾಡಲಾಗುತ್ತಿದೆ.

  • ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    – ವ್ಯವಸ್ಥಿತ ದೀಪಾರಾಧನೆ ಹೇಗಿರಬೇಕು?

    ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ.

    ಪೂಜಾಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದು ಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು.

    ನಿಮ್ಮ ಶಕ್ತಿಗನುಸಾರವಾಗಿ 12, 21, 28, 48, 54, 78, 108, 1008 ದೀಪಗಳನ್ನಿಟ್ಟು ದೀಪಾರಾಧನೆ ಮಾಡಬೇಕು. 12 ದೀಪಗಳಿಂದ ಆರಂಭವಾಗಿ 1008 ದೀಪಗಳವರೆಗೆ ನಿಮ್ಮ ಶಕ್ತಿಗನುಸಾರವಾಗಿ ಇರಿಸಿ ದೀಪಾರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ. ಅಲಂಕಾರ ಎಂದು ಹೆಚ್ಚು ದೀಪಗಳನ್ನು ಇರಿಸುವ ಬದಲು ಮಿತವಾಗಿ ದೀಪಗಳನ್ನು ಇರಿಸಿದರೆ ಉತ್ತಮ.

    ವ್ಯವಸ್ಥಿತವಾಗಿ ದೀಪಗಳನ್ನು ಇರಿಸುವುದರಿಂದ ದರಿದ್ರತನ, ಆಲಸ್ಯತನ ನಿವಾರಣೆಯಾಗಿ ಸುಲಭವಾಗಿ ಕಷ್ಟದ ಕೆಲಸ ಕಾರ್ಯಗಳು ನೆರವೇರುತ್ತವೆ. ಹೀಗೆ ವ್ಯವಸ್ಥಿತ ಮತ್ತು ಕ್ರಮಬದ್ಧ ದೀಪಾರಾಧನೆಯಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆಯಿದೆ.

    https://www.youtube.com/watch?v=bdq-b9Difjs