Tag: ದೀಕ್ಷೆ

  • ಜೈನ ಸನ್ಯಾಸಿನಿಯಾದ 12ರ ಬಾಲಕಿ

    ಜೈನ ಸನ್ಯಾಸಿನಿಯಾದ 12ರ ಬಾಲಕಿ

    -ಮಗಳ ನಿರ್ಧಾರಕ್ಕೆ ಹೆತ್ತವರ ಸಮ್ಮತಿ

    ಸೂರತ್: 12ರ ಬಾಲಕಿಯೊಬ್ಬಳು ಜೈನ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಲು ಮುಂದಾಗಿದ್ದಾಳೆ. ಮಗಳ ಈ ನಿರ್ಧಾರಕ್ಕೆ ತಂದೆ-ತಾಯಿ ಕೂಡ ಬೆಂಬಲ ನೀಡಿರುವುದು ಸದ್ಯ ಎಲ್ಲರ ಗಮನ ಸೆಳೆದಿದೆ.

    ಸೂರತ್‍ನ 12 ವರ್ಷದ ಖುಷಿ ಶಾ ಜೈನ ಸನ್ಯಾಸಿನಿ ಆಗಲು ನಿರ್ಧರಿಸಿದ್ದಾಳೆ. ಖುಷಿ ಕುಟುಂಬದಲ್ಲಿ ಜೈನ ಸನ್ಯಾಸತ್ವ ಸ್ವೀಕರಿಸುತ್ತಿರುವುದು ಇವರೇ ಮೊದಲೇನಲ್ಲ. ಹೀಗಾಗಿ ಈ ಬಗ್ಗೆ ಬಾಲಕಿ ಮಾತನಾಡಿ, ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬದ ನಾಲ್ವರು ಸನ್ಯಾಸತ್ವದ ಹಾದಿ ಹಿಡಿದಿದ್ದರು. ಸಿಮಂದರ್ ಸ್ವಾಮೀಜಿ ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ್ದರು. ನಾನು 12ನೇ ವಯಸ್ಸಿನಲ್ಲಿ ದೀಕ್ಷೆ ಪಡೆಯುತ್ತೇನೆ ಎಂದು ಹೇಳಿದಳು.

    ಸರ್ಕಾರಿ ಉದ್ಯೋಗಿಯಾಗಿರುವ ಖುಷಿ ತಂದೆ ವಿನಿತ್ ಶಾ ಹಾಗೂ ತಾಯಿ ಮಗಳ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಗಳು ತನ್ನ ಆಂತರ್ಯದ ಬಗ್ಗೆ ತಿಳಿದುಕೊಂಡಿದ್ದಾಳೆ. ಇದು ಎಲ್ಲ ಮಕ್ಕಳಲ್ಲಿ ಬರುವುದಿಲ್ಲ. ನಮ್ಮ ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಸನ್ಯಾಸಿಯಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ತರಲಿ ಎಂದು ಮಗಳ ನಿರ್ಧಾರಕ್ಕೆ ತಂದೆ-ತಾಯಿ ಶುಭ ಹಾರೈಸಿದರು.

    ಕಳೆದ ವರ್ಷ ನವೆಂಬರ್‍ನಲ್ಲಿ ಆಕೆ 6ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಶಾಲೆ ಬಿಟ್ಟಿದ್ದಾಳೆ. 6ನೇ ತರಗತಿ ಪರೀಕ್ಷೆಯಲ್ಲಿ 97 ಅಂಕ ಪಡೆದಿದ್ದಳು. ಈಗಾಗಲೇ ಆಕೆ ಬರಿಗಾಲಲ್ಲಿ ಸಾವಿರಾರು ಕಿ.ಮೀ ಪ್ರವಾಸ ಮಾಡಿದ್ದಾಳೆ. ದೀಕ್ಷೆಯ ನಂತರ ಜೀವನವನ್ನು ಮತ್ತಷ್ಟು ಹತ್ತಿರದಿಂದ ನೋಡಲಿದ್ದಾಳೆ ಎಂದು ತಂದೆ ತಿಳಿಸಿದರು.

    ತಾಯಿ ಮಾತನಾಡಿ, ನಮ್ಮ ಮಗಳು ಡಾಕ್ಟರ್ ಆಗಬೇಕು ಎಂದು ನಾನು ಬಯಸಿದ್ದೆ. ಆದರೆ, ಅವಳ ನಿರ್ಧಾರಕ್ಕೆ ನಾವು ಆಕೆ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಸಮ್ಮತಿಸಿದ್ದೇವೆ. ಆಕೆಯ ಆಸೆಯನ್ನು ಪೂರೈಸುವುದು ನಮ್ಮ ಕರ್ತವ್ಯ. ಆಕೆಯ ನಿರ್ಧಾರದಿಂದ ನಮಗೆ ಹೆಮ್ಮೆ ಇದೆ ಎಂದು ಮಗಳ ನಡೆಗೆ ಬೆಂಬಲಿಸಿದರು.

    ಜೈನ ಸನ್ಯಾಸತ್ವ ದೀಕ್ಷೆ ಸ್ವೀಕರಿಸುವುದು ಸಾಮಾನ್ಯವಲ್ಲ. ಅದು ಬರೀ ಪ್ರಕ್ರಿಯೆ ಮಾತ್ರವಲ್ಲ, ಕಠಿಣ ವ್ರತಗಳನ್ನು ನಿರ್ವಹಿಸಬೇಕಿರುತ್ತದೆ. ದೀಕ್ಷೆ ನೀಡುವ ಸಮಯದಲ್ಲಿ ದೇಹದ ಮೇಲಿನ ವ್ಯಾಮೋಹ ಕಳೆದುಕೊಳ್ಳಲು ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಹೊಸ ಸನ್ಯಾಸಿಗಳು ಮಹಾವ್ರತ ಹೆಸರಿನ ಐದು ಪ್ರತಿಜ್ಞೆಗಳನ್ನು ಪಾಲಿಸಬೇಕಾಗಿರುತ್ತದೆ. ಇದರಲ್ಲಿ ಪ್ರತಿದಿನ ಕ್ರಿಯಾದಿಗಳು ಒಳಗೊಂಡಿರುತ್ತವೆ. ಹಾಗೆಯೇ ಎಂಟು ಸಿದ್ಧಾಂತಗಳನ್ನು (ಪ್ರವಚನ ಮಾತ್ರಕ್) ಅಭ್ಯಾಸ ಮಾಡಬೇಕು. ಜೊತೆಗೆ ಆರು ಕಡ್ಡಾಯ ಕ್ರಿಯೆಗಳನ್ನು (ಅವಸ್ಯಾಕ್) ಪಾಲಿಸಲೇಬೇಕು. ಈ ಎಲ್ಲಾ ಕಠಿಣ ವ್ರತ, ಸಿದ್ಧಾಂತ ಹಾಗೂ ಕ್ರಿಯೆಗಳನ್ನು ಪಾಲಿಸಿ ಜೈನ ಸನ್ಯಾಸಿನಿಯಾಗಲು ಖುಷಿ ಮುಂದಾಗಿದ್ದಾಳೆ.

  • ಇಷ್ಟಲಿಂಗ ದೀಕ್ಷೆ ಪಡೆದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ

    ಇಷ್ಟಲಿಂಗ ದೀಕ್ಷೆ ಪಡೆದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ

    ಬಳ್ಳಾರಿ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ.

    ವಾರಣಾಸಿಯಲ್ಲಿ ಇಷ್ಟಲಿಂಗ ದೀಕ್ಷೆ ಸ್ವೀಕಾರ ಪಡೆಯುವ ವೇಳೆ ಪತಿ ಜನಾರ್ದನ ರೆಡ್ಡಿ, ಪುತ್ರ ಹಾಗೂ ಅರುಣಾ ತಂದೆ-ತಾಯಿ ಜೊತೆಗಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಆಪ್ತ ಶ್ರೀರಾಮುಲು ಅವರು ಕಾಶಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಕಳೆದ 2014 ರ ಮಾರ್ಚ್ ತಿಂಗಳಲ್ಲಿ ಶಿವಲಿಂಗ ದೀಕ್ಷೆ ಪಡೆದಿದ್ದರು. ಈಗ ಲಕ್ಷ್ಮಿ ಅರುಣಾ ದೀಕ್ಷೆ ಪಡೆದುಕೊಂಡಿದ್ದಾರೆ.

    ದೀಕ್ಷೆ ಪಡೆದವರು ಮಾಂಸ ಮತ್ತಿತರ ಪದಾರ್ಥಗಳನ್ನು ಬಿಟ್ಟು, ನಿತ್ಯ ಶಿವಪೂಜೆ, ಗೋಪೂಜೆ ಮತ್ತು ಗಣಾರಾಧನೆ ಮಾಡಬೇಕು. ಶ್ರೀರಾಮುಲು ದೀಕ್ಷೆ ಪಡೆದ ಬಳಿಕ ನಿತ್ಯ ಎರಡು ಗಂಟೆಗಳ ಕಾಲ ಶಿವ ಪೂಜೆ ಮಾಡುತ್ತಾರೆ. ಇಷ್ಟಲಿಂಗ ಪೂಜೆಗೂ ಮುನ್ನ ಗೋಪೂಜೆ, ಶಿವಪೂಜೆ, ಗಣಾರಾಧನೆ, ಪಂಚಾಮೃತ ಅಭಿಷೇಕದ ವಿತರಣೆ ನಂತರವೇ ಉಪಹಾರ ಸೇವನೆ ಮಾಡುತ್ತಾರೆ.

    ದೆಹಲಿ, ಬೆಂಗಳೂರು, ಗದಗ, ರಾಯಚೂರು ಮತ್ತು ಕಲಬುರಗಿಗೆ ತೆರಳಿದರೆ ಅಲ್ಲಿ ಶಿವಪೂಜೆಗಾಗಿ ಒಂದು ತಂಡವನ್ನು ಸಿದ್ಧಮಾಡಿಕೊಂಡಿದ್ದರು. ಇನ್ನೂ ಶ್ರೀರಾಮುಲು ಅವರಂತೆ ಅವರ ಪತ್ನಿಯೂ ಮಾಂಸ ಆಹಾರವನ್ನು ತ್ಯಜಿಸಿದ್ದು, ಮನೆಯಲ್ಲಿ ಈ ಆಹಾರಕ್ಕೆ ನಿಷೇಧ ಮಾಡಿದ್ದಾರೆ.

    ಇಷ್ಟಲಿಂಗ ದೀಕ್ಷೆಯನ್ನು ಯಾರಾದರೂ ತೆಗೆದುಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ನಿಯಮಗಳಿಲ್ಲ ಅನ್ನೊದು ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ.

  • ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮೊದಲು ಫೋಟೋಶೂಟ್ ಮಾಡಿಸಿಕೊಂಡ ಯುವತಿ

    ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮೊದಲು ಫೋಟೋಶೂಟ್ ಮಾಡಿಸಿಕೊಂಡ ಯುವತಿ

    ಗಾಂಧಿನಗರ: 28 ವರ್ಷದ ಪದವೀಧರೆಯೊಬ್ಬರು ಜೈನ ಧರ್ಮ ದೀಕ್ಷೆ ತೆಗೆದುಕೊಳ್ಳುವ ಮೊದಲು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಗುಜರಾತಿನ ಶೆಫಾಲಿ ಕುಮಾರಿ ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮುನ್ನ ಫೋಟೋ ಶೂಟ್ ಮಾಡಿಸಿದ್ದು, ಈಗ ಈ ಫೋಟೋಗಳು ವೈರಲ್ ಆಗಿದೆ. ಪ್ರಪಂಚ ನನಗೆ ಸಂತೋಷವನ್ನು ಕೊಟ್ಟಿದೆ. ಹೀಗಾಗಿ ನಾನು ಸನ್ಯಾಸಿನಿ ದೀಕ್ಷೆಯನ್ನು ಪಡೆಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

    ಶೆಫಾಲಿ ತನ್ನ 15 ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ನಂತರ ತನ್ನ ತಾಯಿ ಮತ್ತು ಸಹೋದರನಿಂದ ದೂರ ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಶೆಫಾಲಿ ಅವರಿಗೆ ಈಗ 28 ವರ್ಷ ವಯಸ್ಸಾಗಿದ್ದು ಮಹೇಶ್‍ನಗರದಲ್ಲಿ ನಡೆಯುತ್ತಿದ್ದ ವಸಂತ್ ಪಂಚಮಿ ಕಾರ್ಯಕ್ರಮದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ.


    ಶೆಫಾಲಿಯ ತಂದೆ ವಸಂತ್ ಕುಮಾರ್ ಫೂಲ್ಚಂದ್ ಶ್ರಾಫ್ 2003 ರಲ್ಲಿ ನಿಧನರಾಗಿದ್ದರು. ತಾಯಿ ಮತ್ತು ಸಹೋದರ ಭೌಮಿಕ್ ಅವರು ಶೆಫಾಲಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿದ್ದು, ಶೆಫಾಲಿ ಕುಟುಂಬ ಮತ್ತು ಸಂವಹನ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.

    ಗುರುವಾರ ವಸಂತ್ ಪಂಚಮಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜನವರಿ 21 ರಂದು ದೀಕ್ಷಾರ್ಥಿ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲ್ಪಟ್ಟಿದ್ದು, ಜನವರಿ 23 ರಂದು ಸಂಜೆ ಸುಮಾರು 6:30 ಅಧಿಕೃತವಾಗಿ ನಿಜಾಂಪುರಾ ಜೈನ್ ಯೂನಿಯನ್ ಶೆಫಾಲಿ ಅವರಿಗೆ ಸನ್ಯಾಸತ್ವ ನೀಡಿದೆ.

    ಜೈನ ಸಮುದಾಯದ 100 ಕ್ಕೂ ಅಧಿಕ ಮಂದಿ ಸದಸ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಶೆಫಾಲಿ ಅವರ ಈ ನಿರ್ಧಾರಕ್ಕೆ ಅವರ ಸಹೋದರ ಕೂಡ ಬೆಂಬಲ ನೀಡಿದ್ದು ಈ ಕಾರ್ಯಕ್ರಮಕ್ಕೆ ವಿದೇಶದಿಂದ ಆಗಮಿಸಿದ್ದರು.

  • ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ವ್ಯಕ್ತಿಗೆ ವೈಷ್ಣವ ದೀಕ್ಷೆ!

    ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ವ್ಯಕ್ತಿಗೆ ವೈಷ್ಣವ ದೀಕ್ಷೆ!

    – ಮಂತ್ರ ಪಠಿಸಿ, ಮುದ್ರೆ ಒತ್ತಿದ ಪೇಜಾವರ ಶ್ರೀ

    ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ವೈಷ್ಣವ ದೀಕ್ಷೆ ನೀಡಲಾಗಿದೆ. ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ದೀಕ್ಷೆಯನ್ನು ನೀಡಿದ್ದು ವೈಷ್ಣವತ್ವಕ್ಕೆ ಆದರದಿಂದ ಬರಮಾಡಿಕೊಂಡರು.

    ಉಡುಪಿಯ ಪಡುಬಿದ್ರೆ ಮೂಲದ ಪಾಂಡು ಎಂಬವರು ದೀಕ್ಷೆ ನೀಡಬೇಕೆಂದು 3-4 ಬಾರಿ ಸ್ವಾಮೀಜಿ ಅವರನ್ನು ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನು ಹೇಳಿಕೊಂಡಿದ್ದರು. ಆದ್ರೆ ಸ್ವಾಮೀಜಿ ಅವರು ದೀಕ್ಷೆ ನೀಡುವ ಕಾರ್ಯವನ್ನು ಕೆಲ ತಿಂಗಳ ಕಾಲ ಮುಂದೆ ಹಾಕುತ್ತಾ ಬಂದಿದ್ದರು. ಇದೀಗ ದೀಕ್ಷೆ ಪಡೆಯಲು ಪಾಂಡು ಪರಿಪೂರ್ಣವಾಗಿ ಪಕ್ವವಾಗಿದ್ದಾರೆ ಎಂದು ತಿಳಿದ ಮೇಲೆ ಸ್ವಾಮೀಜಿ ಅವರು ವೈಷ್ಣವ ದೀಕ್ಷೆಯನ್ನು ಧಾರೆಯೆರೆದಿದ್ದಾರೆ.

    ಕೃಷ್ಣ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದೀಕ್ಷಾ ಮಂತ್ರಗಳನ್ನು ಪಠಿಸಿ, ಹೋಮ ನಡೆಸಿ, ಶಂಖ ಮತ್ತು ಚಕ್ರವನ್ನು ಯಜ್ಞದಲ್ಲಿ ಬಿಸಿ ಮಾಡಿ ಪಾಂಡು ಅವರ ತೋಳುಗಳ ಮೇಲೆ ಮುದ್ರೆ ಹಾಕಲಾಯ್ತು. ಮುದ್ರೆ ಹಾಕಿದ ನಂತರ ಕೆಲ ಧಾರ್ಮಿಕ ವಿಧಿ-ವಿಧಾನಗಳನ್ನು ಸ್ವಾಮೀಜಿ ಬೋಧಿಸಿದರು. ನಂತರ ನವಗ್ರಹ ಕಿಂಡಿಯ ಮೂಲಕ ಪಾಂಡು ಅವರು ಶ್ರೀಕೃಷ್ಣನ ದರ್ಶನ ಮಾಡಿದರು.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿಗೆ ಅವರ ಅಪೇಕ್ಷೆಯಂತೆ ವೈಷ್ಣವ ದೀಕ್ಷೆ ನೀಡಿದ್ದೇನೆ. ಹಿಂದುಳಿದವರು, ದಲಿತರು ಸಮಾಜದಲ್ಲಿ ಯಾರು ಅಪೇಕ್ಷೆ ಪಟ್ಟು ಬಂದರೂ ವೈಷ್ಣವ ದೀಕ್ಷೆ, ಭಕ್ತಿ ದೀಕ್ಷೆಯನ್ನು ಕೊಡುತ್ತೇನೆ. ಮಂತ್ರ ಜಪವನ್ನು ಬೋಧನೆ ಮಾಡಿ ಶಂಖ- ಚಕ್ರದ ಮುದ್ರೆಯನ್ನು ಇಟ್ಟು ದೀಕ್ಷೆ ನೀಡಿದ್ದೇನೆ. ಮುಂದೆ ಅವರು ವೈಷ್ಣವರಂತೆ ವಿಷ್ಣುವಿನ ಹಾಗೂ ಶ್ರೀಕೃಷ್ಣನ ಅನುಯಾಯಿಯಾಗುತ್ತಾರೆ ಎಂದು ಹೇಳಿದರು.

    ಮಧ್ವಾಚಾರ್ಯರು ಹೇಳಿದಂತೆ ಈ ದೀಕ್ಷೆ ಪಡೆದವರು ಬ್ರಾಹ್ಮಣರಿಗೆ ಸಮಾನ. ದೀಕ್ಷೆ ಪಡೆದವರನ್ನು ಸಮಾಜದಲ್ಲಿ ಯಾರನ್ನೂ ಕೀಳಾಗಿ ನೋಡಬಾರದು. ವೈಷ್ಣವ ದೀಕ್ಷೆ ಪಡೆದವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದು ಹೇಳಿದರು.

    ಅಸ್ಪøಶ್ಯತೆ ನಿವಾರಣೆಗೆ ವೈಷ್ಣವ ದೀಕ್ಷೆಯೂ ಒಂದು ಮಾರ್ಗ. ಸಮಾಜದಲ್ಲಿನ ಮೇಲು ಕೀಳೆಂಬ ಅಸಮಾನತೆ ಇದರಿಂದ ಹೋಗಲಾಡಿಸಬಹುದು. ಬಯಸಿ ಬಂದ್ರೆ ಹಾಗೂ ಅಪೇಕ್ಷೆ ಪಟ್ಟರೆ ಮುಂದೆಯೂ ನಾನು ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದರು.