Tag: ದಿಸ್ಪುರ್

  • ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ಪರೀಕ್ಷೆ ಬರೆಯಲು ಹೋದ ತಾಯಂದಿರು – ಮಕ್ಳನ್ನು ನೋಡ್ಕೊಂಡ ಪೇದೆಗಳಿಗೆ ಮೆಚ್ಚುಗೆ

    ದಿಸ್ಪುರ್: ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ತರಗತಿ ಹೊರಗೆ ನಿಂತ ಬಾಲಕಿ- ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ದಾಖಲಾತಿ

    ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿಯಾಗುವುದು ಒಂದು ಕ್ರಿಯೆ. ನೀವು ಅದನ್ನು ಮಾಡಬೇಕಾಗುತ್ತದೆ. ಅಸ್ಸಾಂ ಪೊಲೀಸರು ದಾರಂಗ್ ಜಿಲ್ಲೆಯಲ್ಲಿ ಈ ಮಕ್ಕಳ ತಾಯಂದಿರು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋಗಿದ್ದರು. ಈ ವೇಳೆ ಅವರವರ ಮಕ್ಕಳನ್ನು ಇಬ್ಬರು ಪೇದೆಗಳು ನೋಡಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

    ನವೆಂಬರ್ 10ರಂದು ಅಸ್ಸಾಂನಲ್ಲಿ ಈ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಶಿಕ್ಷಕರು ಮೊದಲನೇ ತರಗತಿಯಿಂದ 8ನೇ ತರಗತಿವರೆಗೂ ಕಲಿಸಲು ಅರ್ಹರಾಗುತ್ತಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವು ಮಂದಿ ಪೇದೆಗಳನ್ನು ಹೊಗಳಿದ್ದಾರೆ. ಕೆಲವರು ‘ಸೆಲ್ಯೂಟ್’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಸೆಲ್ಯೂಟ್ ಮ್ಯಾಮ್. ನೀವು ಸೂಪರ್ ಮೇಡಂ’ ಎಂದು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಅಕ್ರಮ ವಲಸಿಗರನ್ನು ದೇಶದಿಂದ ಓಡಿಸುತ್ತೇವೆ: ಅಮಿತ್ ಶಾ

    ಅಕ್ರಮ ವಲಸಿಗರನ್ನು ದೇಶದಿಂದ ಓಡಿಸುತ್ತೇವೆ: ಅಮಿತ್ ಶಾ

    ದಿಸ್ಪುರ್: ದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಅಕ್ರಮವಾಗಿ ಬಂದ ಎಲ್ಲರನ್ನೂ ಓಡಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂನಲ್ಲಿ ಗುಡುಗಿದ್ದಾರೆ.

    ಗೃಹ ಸಚಿವರಾದ ಬಳಿಕ ಅಸ್ಸಾಂಗೆ ಮೊದಲ ಬಾರಿ ಭೇಟಿಕೊಟ್ಟ ಅಮಿತ್ ಶಾ ಅವರು ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕುರಿತಾಗಿ ಮಾತನಾಡಿದ್ದಾರೆ. ಎನ್‌ಆರ್‌ಸಿ ಕುರಿತಾಗಿ ವಿವಿಧ ರೀತಿಯ ಪ್ರಶ್ನೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ದೇಶದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಓಡಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಸ್ಸಾಂನಲ್ಲಿ NRC ಪಟ್ಟಿ ಅಂತಿಮ- 19 ಲಕ್ಷ ಜನರು ಪಟ್ಟಿಯಿಂದ ಹೊರಗೆ

    ಹಾಗೆಯೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿರುವ 371 ಅನುಚ್ಚೇದವನ್ನು ರದ್ದು ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಗೂ, ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ 371 ಪರಿಚ್ಚೇದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಈ ಸ್ಥಾನಮಾನವನ್ನು ರದ್ದು ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಕೈ ಹಾಕುವುದಿಲ್ಲ. ಈ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಅಮಿತ್ ಶಾ ತಿಳಿಸಿದ್ದಾರೆ.

    ಅಂತಿಮ ಎನ್‌ಆರ್‌ಸಿ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಕೆಲವು ಬಿಜೆಪಿ ನಾಯಕರು ಅಸ್ಸಾಂನ ಜನಸಂಖ್ಯೆಯಲ್ಲಿ 18% ಜನರು ಬಂಗಾಳಿ ಹಿಂದೂಗಳ ಇದ್ದಾರೆ, ಆದರೆ ಅವರನ್ನು ಪಕ್ಷದ ವೋಟ್ ಬ್ಯಾಂಕಿನಿಂದ ಹೊರಗಿಡಲಾಗಿದೆ ಎಂದು ನಿರಾಶೆ ವ್ಯಕ್ತಪಡಿಸಿದ್ದರು. ಅಂತಿಮ ಪಟ್ಟಿಗೆ ಹೊರತಾಗಿ, ವಲಸೆ ಮುಸ್ಲಿಮರ ಪ್ರಾಬಲ್ಯವಿರುವ ರಾಜ್ಯದ ಕೆಲ ಜಿಲ್ಲೆಗಳ ಜನರಲ್ಲಿ ತಮ್ಮನ್ನೂ ವೋಟ್ ಬ್ಯಾಂಕಿನಿಂದ ಹೊರಗಿಡಬಹುದು ಎಂಬ ಆತಂಕ ಮನೆಮಾಡಿದೆ.

    ಈ ಹಿಂದೆ ಅಮಿತ್ ಶಾ ಅವರು ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರಕ್ಕೆ ತೆರೆಳಿದ್ದ ವೇಳೆ, ಬಾಂಗ್ಲಾದೇಶಿ ವಲಸಿಗರು ಗೆದ್ದಲುಗಳು ಇದ್ದಂತೆ ಅವರನ್ನು ಮತದಾರರ ಪಟ್ಟಿದಿಂದ ಹೊರ ಇಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

  • ವೃದ್ಧಾಶ್ರಮದಲ್ಲಿ ವೃದ್ಧೆಯರ  ಸಖತ್ ಡ್ಯಾನ್ಸ್: ವಿಡಿಯೋ ನೋಡಿ

    ವೃದ್ಧಾಶ್ರಮದಲ್ಲಿ ವೃದ್ಧೆಯರ ಸಖತ್ ಡ್ಯಾನ್ಸ್: ವಿಡಿಯೋ ನೋಡಿ

    ದಿಸ್ಪುರ್: ಅಸ್ಸಾಂನ ಗುವಾಹಟಿಯ ವೃದ್ಧಾಶ್ರಮದಲ್ಲಿ ವೃದ್ಧೆಯರ ಡ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಪ್ರತಿಯೊಬ್ಬರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ವೃದ್ಧಾಶ್ರಮದ ಹಾಲ್‍ನಲ್ಲಿ ಎಲ್ಲರಿಗೂ ಚೇರ್ ಗಳನ್ನು ಹಾಕಲಾಯಿತು. ಬಳಿಕ ಇಬ್ಬರು ಅಸ್ಸಾಂ ಹಾಡು ಹಾಡುವ ಮೂಲಕ ವೃದ್ಧರಿಗೆ ಮನರಂಜನೆ ನೀಡಿದ್ದರು. ಈ ಹಾಡು ಕೇಳಿ ವೃದ್ಧರು ಖುಷಿಪಟ್ಟಿದಲ್ಲದೇ ಡ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ. ಕೆಲವರು ತಮ್ಮ ಸ್ನೇಹಿತರಿಗಾಗಿ ಹಾಗೂ ಇತರ ಸದಸ್ಯರಿಗಾಗಿ ಕುಣಿಯಲು ಶುರು ಮಾಡಿದ್ದರು.

    ಈ ವಿಡಿಯೋವನ್ನು ‘ಮದರ್ ಓಲ್ಡ್ ಏಜ್ ಹೋಮ್, ಗುವಾಹಟಿ’ ಶುಕ್ರವಾರ ತನ್ನ ಫೇಸ್‍ಬುಕ್ ಪೇಜಿನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋಗೆ ಇದುವರೆಗೂ 5 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ. ಅಲ್ಲದೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 9 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ.

    ಈ ವೈರಲ್ ವಿಡಿಯೋ ನೋಡಿ ಜನರು ಖುಷಿಯಾಗಿದ್ದು, ವೃದ್ಧರ ಉತ್ಸಾಹ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಅವರು ತಮ್ಮ ಜೀವನವನ್ನು ಇದೇ ರೀತಿಯಲ್ಲಿ ಬದುಕಲಿ ಹಾಗೂ ಆರೋಗ್ಯದಿಂದ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.

  • 1 ತಿಂಗ್ಳ ಸಂಬಳದ ಅರ್ಧ ಮೊತ್ತ ದಾನ – ಅಸ್ಸಾಂ ಉಳಿಸಲು ಹಿಮಾ ದಾಸ್ ಮನವಿ

    1 ತಿಂಗ್ಳ ಸಂಬಳದ ಅರ್ಧ ಮೊತ್ತ ದಾನ – ಅಸ್ಸಾಂ ಉಳಿಸಲು ಹಿಮಾ ದಾಸ್ ಮನವಿ

    ದಿಸ್ಪುರ್: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳವನ್ನು ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂನನ್ನು ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪ್ರವಾಹಕ್ಕೆ ಅಸ್ಸಾಂನಲ್ಲಿ ಸುಮಾರು 50 ಲಕ್ಷ ಜನರು ತುತ್ತಾಗಿದ್ದಾರೆ. ಹಿಮಾ ಅವರು ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ.

    ಹಿಮಾ ಈ ಬಗ್ಗೆ ಟ್ವೀಟ್ ಮಾಡಿ, ನಮ್ಮ ಅಸ್ಸಾಂ ಜಿಲ್ಲೆಯಲ್ಲಿ ಪ್ರವಾಹದಿಂದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಸುಮಾರು 30 ಜಿಲ್ಲೆ ಪ್ರವಾಹಕ್ಕೆ ತುತ್ತಾಗಿದೆ. ಹಾಗಾಗಿ ದೊಡ್ಡ ಕಾರ್ಪೋರೇಟ್‍ಗಳು ಹಾಗೂ ವ್ಯಕ್ತಿಗಳು ಮುಂದೆ ಬಂದು, ಕಷ್ಟದಲ್ಲಿ ಇರುವ ನಮ್ಮ ರಾಜ್ಯಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಹಿಮಾ ಅವರು, ನಾನು ನನ್ನ ಕಡೆಯಿಂದ ಹಣವನ್ನು ನೀಡಿದ್ದೇನೆ ಹಾಗೂ ನೀವು ಕೂಡ ಅಸ್ಸಾಂ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಅಸ್ಸಾಂನಲ್ಲಿ ಈಗಾಗಲೇ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ 15 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ 46 ಲಕ್ಷಕ್ಕೂ ಹಚ್ಚು ಮಂದಿ ಪ್ರವಾಹಕ್ಕೆ ತುತ್ತಾಗಿದ್ದಾರೆ. ಉತ್ತರ ಬಿಹಾರದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ.

  • 500ಕ್ಕೂ ಅಧಿಕ ಮಂದಿಯಿಂದ ಬಟ್ಟೆ ಬಿಚ್ಚುವಂತೆ ನೃತ್ಯಗಾರ್ತಿಯರಿಗೆ ಒತ್ತಾಯ

    500ಕ್ಕೂ ಅಧಿಕ ಮಂದಿಯಿಂದ ಬಟ್ಟೆ ಬಿಚ್ಚುವಂತೆ ನೃತ್ಯಗಾರ್ತಿಯರಿಗೆ ಒತ್ತಾಯ

    ದಿಸ್ಪುರ್: ಅಸ್ಸಾಂನ ಕಾಮ್ರುಪ್ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ 500ಕ್ಕೂ ಅಧಿಕ ಪುರುಷರ ಗುಂಪು ಮಹಿಳಾ ನೃತ್ಯಗಾರ್ತಿಯರಿಗೆ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿರುವ ಅಘಾತಕಾರಿ ಘಟನೆ ನಡೆದಿದೆ.

    ಅಸ್ಸಾಂನ ಅಸೋಲ್ಪಾರಾನಲ್ಲಿ ಈ ಘಟನೆ ನಡೆದಿದ್ದು, ಸಾಂಸ್ಕ್ರತಿಕ ತಂಡವು ಈ ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರ ವಿರುದ್ಧ ಚಾಯ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಭಾನುವಾರ ಬಂಧಿಸಿದ್ದಾರೆ. ಇಬ್ಬರನ್ನು ಶಾರುಖ್ ಖಾನ್ ಮತ್ತು ಸುಭಾಹನ್ ಖಾನ್ ಎಂದು ಗುರುತಿಸಲಾಗಿದೆ.

    ಸುಮಾರು 500 ಮಂದಿಯ ಗುಂಪು ಮಹಿಳಾ ನೃತ್ಯಗಾರ್ತಿಯರನ್ನು ಸ್ಟ್ರಿಪ್ ಡ್ಯಾನ್ಸ್ ಮಾಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಕಾರ್ಯಕ್ರಮ ಆಯೋಜಕರು ಸ್ಟ್ರಿಪ್ ಡಾನ್ಸ್ ತೋರಿಸುವುದಾಗಿ ಜನರಿಂದ ಅಧಿಕ ಹಣವನ್ನು ವಸೂಲಿ ಮಾಡಿ ಟಿಕೆಟ್ ನೀಡಿದ್ದಾರೆ ಎಂದು ನೃತ್ಯತಂಡವು ಆರೋಪಿಸಿದೆ.

    ಪಶ್ಚಿಮ ಬಂಗಾಳದ ಕೂಬ್ವೀರ್ ನಿಂದ ಡ್ಯಾನ್ಸ್ ಮಾಡಲು ಬಂದಿದ್ದರು. ಈ ಕಾರ್ಯಕ್ರಮಕ್ಕೆ 500 ಮಂದಿ ಬಂದಿದ್ದರು. ಈ ವೇಳೆ ನೃತ್ಯಗಾರ್ತಿಯರಿಗೆ ಬಟ್ಟೆ ಬಿಚ್ಚುವಂತೆ ಒತ್ತಡ ಮಾಡಲಾಗಿದೆ. ಆಗ ನೃತ್ಯಗಾರ್ತಿಯರು ಇದಕ್ಕೆ ವಿರೋಧ ಮಾಡಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದಾರೆ. ಆದರೂ ಜನರು ಅವರ ವಾಹನದ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ನೃತ್ಯತಂಡ ನೀಡಿದ ದೂರಿನ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

  • ಗೆಳೆಯನ ಜೊತೆಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರು

    ಗೆಳೆಯನ ಜೊತೆಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರು

    -ಗೆಳತಿಯನ್ನು ಬಿಟ್ಟು ಕಾಲ್ಕಿತ್ತ ಗೆಳೆಯ

    ದಿಸ್ಪುರ್: ತನ್ನ ಮುಸ್ಲಿಂ ಪ್ರಿಯಕರನೊಂದಿಗೆ ಪಾರ್ಕ್ ನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಯುವಕರ ಗುಂಪೊಂದು ದೌರ್ಜನ್ಯ ನಡೆಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಬಾಲಕಿ ಪಾರ್ಕ್ ನಲ್ಲಿ ಪ್ರಿಯಕರನ ಜೊತೆ ಕುಳಿತುಕೊಂಡಿದ್ದಳು. ಬಾಲಕಿ ಮತ್ತು ಯುವಕ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಯುವಕರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕರ ಗುಂಪು ಹಲ್ಲೆಗೆ ಮುಂದಾಗುತ್ತಿದ್ದಂತೆ ಭಯಬೀತನಾದ ಪ್ರಿಯಕರ ಬಾಲಕಿಯನ್ನು ಬಿಟ್ಟು ಓಡಿ ಹೋಗಿದ್ದಾನೆ.

    ಬಾಲಕಿಯ ಮೇಲೆ ಮುಗಿಬಿದ್ದ ಯುವಕರ ಗುಂಪು ಆಕೆಯೊಂದಿಗೆ ಅಸಭ್ಯಬಾಗಿ ವರ್ತಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಾಲಕಿ ಎಷ್ಟೇ ಮನವಿ ಮಾಡಿಕೊಂಡರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಕೆಲ ಯುವಕರ ಮೊಬೈಲಿನಲ್ಲಿ ಸೆರೆಯಾಗಿವೆ. ಸದ್ಯ ಈ ವಿಡಿಯೋ ಅಸ್ಸಾಂನಲ್ಲಿ ವೈರಲ್ ಆಗಿದ್ದು, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಕೆಲವು ತಿಂಗಳ ಹಿಂದೆ ಎಂಟು ಮಂದಿ ಯುವತಿಯೊಬ್ಬಳಿಗೆ ಕಿರುಕುಳವನ್ನು ನೀಡಿದ್ದ ಘಟನೆ ಬಿಹಾರದ ಯೆಹಾನಾಬಾದನಲ್ಲಿ ನಡೆದಿತ್ತು. ಕಿರುಕುಳವನ್ನು ನೀಡಿದ್ದಲ್ಲದೇ ವೀಡಿಯೊವನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆರವಣಿಗೆ ವೇಳೆ ಆನೆ ಮೇಲಿಂದ ನೆಲಕ್ಕುರುಳಿದ ಡೆಪ್ಯೂಟಿ ಸ್ಪೀಕರ್ – ವಿಡಿಯೋ ನೋಡಿ

    ಮೆರವಣಿಗೆ ವೇಳೆ ಆನೆ ಮೇಲಿಂದ ನೆಲಕ್ಕುರುಳಿದ ಡೆಪ್ಯೂಟಿ ಸ್ಪೀಕರ್ – ವಿಡಿಯೋ ನೋಡಿ

    ದಿಸ್ಪುರ್: ಕೆಲ ದಿನಗಳ ಹಿಂದೆ ಅಸ್ಸಾಂ ವಿಧಾನಸಭಾ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೃಪಾನಾಥ ಮಲ್ಲಾ ಆನೆ ಮೇಲಿಂದ ನೆಲಕ್ಕುರುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿರುವ ಸ್ವಕ್ಷೇತ್ರ ರತಬರಿಯಲ್ಲಿನ ಅಭಿಮಾನಿಗಳು ಭಾನುವಾರ ನೂತನವಾಗಿ ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಕೃಪಾನಾಥರನ್ನು ಆನೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

    ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಪಾನಾಥ್ ಕೈಯಲ್ಲಿ ಬಿಜೆಪಿಯ ಬಾವುಟ ಹಿಡಿದು ಮಾವುತನ ಜೊತೆ ಆನೆ ಮೇಲೆ ಕುಳಿತಿದ್ದರು. ಈ ವೇಳೆ ಆನೆಗೆ ಅದೇನಾಯಿತೊ ಗೊತ್ತಿಲ್ಲ. ಏಕಾಏಕಿ ಮೈ ಕೊಡವಿ, ಓಡಿದ್ದರಿಂದ ಕೃಪಾನಾಥ್ ಸೇರಿದಂತೆ ಇಬ್ಬರೂ ಆನೆ ಮೇಲಿಂದ ಬಿದ್ದಿದ್ದಾರೆ. ರಸ್ತೆ ಬದಿಯ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಯಾರಿಗೂ ಯಾವುದೇ ಅನಾಹುತಗಳು ಆಗಿಲ್ಲ. ಕೂಡಲೇ ಕಾರ್ಯಕರ್ತರು ಕೃಪಾನಾತ್‍ರನ್ನು ರಕ್ಷಿಸಿದ್ದಾರೆ.

    ಬಿಜೆಪಿ ಶಾಸಕ ಆನೆ ಮೇಲಿಂದ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=quJLbdM-ihk

  • ಅಪ್ರಾಪ್ತ ಮಗನ ಮದ್ವೆ ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ!

    ಅಪ್ರಾಪ್ತ ಮಗನ ಮದ್ವೆ ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ!

    ದಿಸ್ಪುರ್: ಎಳೆ ವಯಸ್ಸಿನ ಬಾಲಕಿಯೊಂದಿಗೆ ಅಪ್ರಾಪ್ತ ಮಗನ ಬಲವಂತ ಮದುವೆಯನ್ನು ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಅಸ್ಸಾಂನ ಧುಬ್ರಿ ಎಂಬಲ್ಲಿ ನಡೆದಿದೆ.

    ಅಕ್ಟೋಬರ್ 2 ರಂದು ಬೊಟೆರ್‍ಹಟ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಶಿಮಾ ಬಿಬಿ(39) ಹಲ್ಲೆಗೊಳಗಾದ ತಾಯಿ. ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಾಲ್ಕು ದಿನಗಳ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ರಾಶಿಯಾ ಬಿಬಿ ಅವರ ಎರಡನೇ ಗಂಡನ ಮಗನಿಗೆ 19 ವರ್ಷವಾಗಿರುತ್ತದೆ. ಆತನಿಗೆ ಹದಿಹರೆಯದ ಬಾಲಕಿಯೊಂದಿಗೆ ಕೆಲವು ತಿಂಗಳುಗಳ ಹಿಂದೆ ರಾಶಿಯಾ ಎರಡನೆಯ ಗಂಡ ಮಂಟುಶೇಕ್ ಬಲವಂತವಾಗಿ ಮದುವೆ ಮಾಡಲು ಮುಂದಾಗಿದ್ದ. ಭಾರತದ ಕಾನೂನು ಪ್ರಕಾರ ಹುಡುಗ ಮದವೆಯಾಗಬೇಕಾದರೆ 21 ವರ್ಷ ಪೂರ್ಣಗೊಳ್ಳಬೇಕು. ಹೀಗಾಗಿ ರಾಶಿಯಾ ಮದುವೆಯನ್ನು ನಿಲ್ಲಿಸಲು ಹೋದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

    ಆಗಸ್ಟ್‌ನಲ್ಲಿ ನಡೆದ ಮದುವೆಯ ವಿರುದ್ಧ ರಾಶಿಯಾ ಬೀಬಿ ಪೊಲೀಸರಿಗೆ ದೂರು ನೀಡಿದ್ದರಿಂದ ಆಕೆಯ ವಿರುದ್ಧ ಎರಡನೇ ಗಂಡ ಮಂಟುಶೇಕ್ ಹಾಗೂ ಬಾಲಕಿಯ ಕುಟುಂಬದವರು ಆಕ್ರೋಶಗೊಂಡಿದ್ದರು. ಹೀಗಾಗಿ ಆಕೆಯ ಬಟ್ಟೆಯನ್ನು ಹರಿದು ಬಿಸಿ ನೀರನ್ನು ಎರಚಿ ಹಲ್ಲೆ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮಹಿಳೆಯರು ಬಿಬಿ ಅವರ ಮೇಲೆ ಹಲ್ಲೆ ಮಾಡಿ ಆಕೆಯ ಉಡುಪುಗಳನ್ನು ಹರಿಯುತ್ತಾರೆ. ಅಷ್ಟೇ ಅಲ್ಲದೇ ಆಕೆಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಯಾರೊಬ್ಬರು ಆಕೆಯನ್ನು ರಕ್ಷಿಸಲು ಬಾರದೇ ಮೂಕ ಪ್ರೇಕ್ಷಕರ ಹಾಗೆ ನೋಡುತ್ತಿರುತ್ತಾರೆ. ಹೀಗಾಗಿ ಹಲ್ಲೆಗೊಳಗಾದ ಬಿಬಿಯಾ ಮೂರನೇ ಪತಿ ಮೊಯಿಯುಲ್ ಹಕ್ ಹಲ್ಲೆ ಮಾಡಿದ್ದವರ ವಿರುದ್ಧ ದೂರು ದಾಖಲಿಸಿದ್ದು, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಗಾಯಗೊಂಡಿರುವ ರಾಶಿಯಾಳಿಗೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv