Tag: ದಿಸ್ಪುರ

  • ಬಂಧನ ಭೀತಿ – ಸುಪ್ರೀಂ ಮೊರೆ ಹೋದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್

    ಬಂಧನ ಭೀತಿ – ಸುಪ್ರೀಂ ಮೊರೆ ಹೋದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್

    ನವದೆಹಲಿ: ಲೈಂಗಿಕ ಕಿರುಕುಳ ಆರೋಪದ ಮೇಲೆ ದಾಖಲಾದ ಎಫ್‍ಐಆರ್ ರದ್ದುಗೊಳಿಸುವಂತೆ ಯುವ ಕಾಂಗ್ರೆಸ್ (Youth Congress) ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿವಿ (Srinivas BV) ಸೋಮವಾರ ಸುಪ್ರೀಂ (Supreme Court) ಮೊರೆ ಹೋಗಿದ್ದಾರೆ. ಕಳೆದ ವಾರ ಗುವಾಹಾಟಿ ಹೈಕೋರ್ಟ್ (Gauhati High Court) ನಿರೀಕ್ಷಣಾ ಜಾಮೀನು ಹಾಗೂ ಎಫ್‍ಐಆರ್‌ (FIR) ರದ್ದುಗೊಳಿಸಲು ನಿರಾಕರಿಸಿದ ನಂತರ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ.

    ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ ಕಾಮತ್ ಅವರು ತುರ್ತು ವಿಚಾರಣೆ ಕೋರಿ ಸಿಜೆಐ (CJI) ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರ ಪೀಠದ ಮುಂದೆ ಈ ಮನವಿಯನ್ನು ಪ್ರಸ್ತಾಪಿಸಿದ್ದಾರೆ. ಪೀಠವು ಮುಂದಿನ ವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಶ್ರೀನಿವಾಸ್ ಬಿವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಕಾಂಗ್ರೆಸ್ ಯುವ ನಾಯಕಿಗೆ ಗೇಟ್ ಪಾಸ್

    ಛತ್ತೀಸ್‍ಗಢದಲ್ಲಿ ನಡೆದಿದೆ ಎನ್ನಲಾದ ಅಪರಾಧವನ್ನು ತನಿಖೆ ಮಾಡಲು ಅಥವಾ ಎಫ್‍ಐಆರ್ ದಾಖಲಿಸಲು ಅಸ್ಸಾಂ (Assam) ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

    ಶ್ರೀನಿವಾಸ್ ನಿರಂತರವಾಗಿ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅಸ್ಸಾಂ ಯುವ ಕಾಂಗ್ರೆಸ್‍ನ (Youth Congress) ಮಾಜಿ ಅಧ್ಯಕ್ಷೆ ಅಂಗಿತಾ ದತ್ತಾ ಅವರು ದೂರು ನೀಡಿದ್ದರು. ಅಲ್ಲದೆ ಅವರ ವರ್ತನೆ ಬಗ್ಗೆ ಕಾಂಗ್ರೆಸ್‍ನ ಉನ್ನತ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದತ್ತಾ ಆರೋಪಿಸಿದ್ದರು.

    ದೂರಿನ ಮೇರೆಗೆ ಶ್ರೀನಿವಾಸ್ ವಿರುದ್ಧ ಐಪಿಸಿ ಸೆಕ್ಷನ್ 352 (ಆಕ್ರಮಣ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 (ಹಲ್ಲೆ), ಮತ್ತು 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಶ್ರೀನಿವಾಸ್ ಅವರಿಗೆ ಅಧಿಕಾರಿಗಳ ಮುಂದೆ ಖುದ್ದಾಗಿ ಹಾಜರಾಗುವಂತೆ ದಿಸ್ಪುರ್ ಪೊಲೀಸರು ನೋಟಿಸ್ ನೀಡಿದ್ದರು. ಈ ವೇಳೆ ರಾಜಕೀಯ ವಿವಾದಗಳಿಂದ ತಮ್ಮ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ ನಿರೀಕ್ಷಣಾ ಜಾಮೀನು ಪಡೆಯಲು ಹಾಗೂ ವಿಚಾರಣೆಗೆ ತಡೆ ನೀಡುವಂತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಎಫ್‍ಐಆರ್ ರಾಜಕೀಯ ಪ್ರೇರಿತವಾಗಿ ಕಂಡು ಬರುತ್ತಿಲ್ಲ ಎಂದು ಅವರ ಮನವಿಯನ್ನು ತಿರಸ್ಕರಿಸಿತ್ತು.

    ದಿಸ್ಪುರ ಪೊಲೀಸರ ಮುಂದೆ ಹಾಜರಾಗಲು ಮೇ 12 ರವರೆಗೆ ಸಮಯವನ್ನು ವಿಸ್ತರಿಸಲಾಗಿದೆ. ಗುವಾಹಾಟಿಗೆ ತೆರಳಿದರೆ ಪೊಲೀಸರು ಬಂಧಿಸುವ ಆತಂಕವಿದೆ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ

  • ಮಾತನಾಡ್ಬೇಕು ಒಬ್ಬನೇ ಬಾ- ಬಂದವನಿಗೆ ಚಾಕು ಇರಿದು ಕೊಂದ್ಳು

    ಮಾತನಾಡ್ಬೇಕು ಒಬ್ಬನೇ ಬಾ- ಬಂದವನಿಗೆ ಚಾಕು ಇರಿದು ಕೊಂದ್ಳು

    ದಿಸ್ಪುರ: ತನ್ನನ್ನು ಪ್ರೀತಿಸಿ, ಬೇರೊಬ್ಬಳೊಂದಿಗೆ ಮದುವೆಯಾದ ಪ್ರೇಮಿಯನ್ನು ಯುವತಿಯೊಬ್ಬಳು ಚಾಕುವಿನಿಂದ ಇರಿದು ಹಾಡಹಗಲೇ ಕೊಲೆಗೈದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಬಾರ್ ಪೇಟಾ ಜಿಲ್ಲೆಯ ನಾಗಾಂವ್‍ನ ಬಿಬಿಕೆ ಕಾಲೇಜು ಎದುರು ಈ ಘಟನೆ ನಡೆದಿದೆ. ಬಿಬಿಕೆ ಕಾಲೇಜಿನ ಪ್ರಥಮ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ರುನುಮಾ ಕೊಲೆ ಮಾಡಿರುವ ಆರೋಪಿ ಎಂದು ಗುರುತಿಸಲಾಗಿದೆ. ಮೊಹಿದುಲ್ ಇಸ್ಲಾಂ ಕೊಲೆಯಾದ ದುರ್ದೈವಿ. ತನ್ನನ್ನು ಪ್ರೀತಿಸಿ, ಬೇರೆ ಹುಡುಗಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎಂಬ ಕೋಪಕ್ಕೆ ಯುವತಿ ಮೊಹಿದುಲ್‍ನನ್ನು ಕೊಲೆ ಮಾಡಿದ್ದಾಳೆ.

    ರುನುಮಾ, ಮೊಹಿದುಲ್ ಹಲವು ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಕಳೆದ ಮೂರು ದಿನಗಳ ಹಿಂದೆ ಮೊಹಿದುಲ್ ರುನುಮಾಳನ್ನು ಬಿಟ್ಟು, ಬೇರೆ ಯುವತಿಯ ಜೊತೆ ಮದುವೆಯಾಗಿದ್ದನು. ಈ ಬಗ್ಗೆ ರುನುಮಾಗೆ ತಿಳಿದ ತಕ್ಷಣ ಆಕೆ ಕೋಪಗೊಂಡಿದ್ದಾಳೆ. ಬಳಿಕ ಪ್ಲಾನ್ ಮಾಡಿ, ಮೊಹಿದುಲ್‍ನನ್ನು ಯುವತಿ ತನ್ನ ಕಾಲೇಜಿನ ಬಳಿ ಭೇಟಿಯಾಗುವಂತೆ ಕರೆದಿದ್ದಳು.

    ಅದಕ್ಕೆ ಒಪ್ಪಿ ಮೊಹಿದುಲ್, ತನ್ನ ಗೆಳೆಯರ ಜೊತೆ ಯುವತಿಯನ್ನು ಭೇಟಿಯಾಗಲು ಬಂದಿದ್ದನು. ಈ ವೇಳೆ ಇಬ್ಬರೂ ಸ್ವಲ್ಪ ಸಮಯ ಮಾತಾಡಿದ್ದಾರೆ. ನಂತರ ನಿನ್ನ ಬಳಿ ಒಂಟಿಯಾಗಿ ಮಾತಾಡಬೇಕು ಎಂದು ಮೊಹಿದುಲ್‍ನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ, ಚಾಕು ಇರಿದು ಯುವತಿ ಕೊಲೆಮಾಡಿದ್ದಾಳೆ. ಬಳಿಕ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾಳೆ.

    ಈ ಘಟನೆ ನಡೆದ ತಕ್ಷಣ ಯುವಕನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆತ ಮೃತಪಟ್ಟಿದ್ದನು. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಯುವತಿಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.

  • ಸುಖೋಯ್ ಫೈಟರ್ ಜೆಟ್ ಪತನ- ಇಬ್ಬರು ಪೈಲಟ್ ಪಾರು

    ಸುಖೋಯ್ ಫೈಟರ್ ಜೆಟ್ ಪತನ- ಇಬ್ಬರು ಪೈಲಟ್ ಪಾರು

    ದಿಸ್ಪುರ: ಭಾರತೀಯ ವಾಯು ಸೇನೆಗೆ ಸೇರಿದ್ದ ಸುಖೋಯ್ ಫೈಟರ್ ಜೆಟ್ ಅಸ್ಸಾಂನ ತೇಜ್ಪುರದ ಭತ್ತದ ಗದ್ದೆಯಲ್ಲಿ ಗುರುವಾರದಂದು ಪತನಗೊಂಡಿದೆ.

    ಗುರುವಾರ ಸುಖೋಯ್ ಫೈಟರ್ ಜೆಟ್(ಎಸ್‍ಯು-30 ಎಂಕೆಐ ಫೈಟರ್ ಜೆಟ್) ಎಂದಿನಂತೆ ತರಬೇತಿ ಮಿಷನ್ ನಲ್ಲಿ ತೊಡಗಿತ್ತು. ಈ ವೇಳೆ ತೇಜ್ಪುರದ ಮಿಲನ್‍ಪುರ ಪ್ರದೇಶದ ಭತ್ತದ ಗದ್ದೆಯಲ್ಲಿ ಪತನವಾಗಿದ್ದು, ವಿಮಾನ ಅಪಘಾತಕ್ಕೀಡಾದ ಕೆಲ ಸಮಯದ ಬಳಿಕ ರಾತ್ರಿ ಸುಮಾರು 8.30ರ ಹೊತ್ತಿಗೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ. ಆದರೆ ಅದೃಷ್ಟವಶಾತ್ ಜೆಟ್‍ನಲ್ಲಿದ್ದ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಲ್ಲಿ ಓರ್ವ ಪೈಲಟ್ ಕಾಲಿಗೆ ಗಂಭಿರವಾಗಿ ಪೆಟ್ಟಾಗಿದೆ ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ತಿಳಿಸಿದ್ದಾರೆ.

    ಈ ಅಪಘಾತದಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಯಾವುದೇ ನಷ್ಟವಾಗಿಲ್ಲ. ವಿಮಾನ ಪತನಗೊಂಡ ತಕ್ಷಣ ಸ್ಥಳೀಯರು ಇಬ್ಬರು ಪೈಲಟ್‍ಗಳನ್ನು ರಕ್ಷಿಸಿ, ತೇಜ್ಪುರದ ಸೇನಾ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ. ಈ ಬಗ್ಗೆ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದರು ಎಂದು ಪಾಂಡೆ ಅವರು ಮಾಹಿತಿ ನೀಡಿದ್ದಾರೆ.

    ವಿಮಾನ ಪತನವಾಗಲು ಕಾರಣವೇನು ಎನ್ನುವುದನ್ನು ತಿಳಿಯಲು ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ ಎಂದು ಅಧಿಕಾರಿಗಳು ದೆಹಲಿಯಲ್ಲಿ ತಿಳಿಸಿದ್ದಾರೆ.