– ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚಾಗಿದೆ - ʻಪಬ್ಲಿಕ್ ಟಿವಿʼ ಎದುರು ಕಣ್ಣೀರಿಟ್ಟ ಸಂತ್ರಸ್ತೆ
ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಪ್ರಕರಣದ ಗಾಯಾಳು ಅನಿತಾ ʻಪಬ್ಲಿಕ್ ಟಿವಿʼ ಜೊತೆ ಅಳಲು ತೋಡಿಕೊಂಡಿದ್ದಾರೆ.
ಸಾಲ ಮಾಡಿ ಚಿಕಿತ್ಸೆ ಪಡೆದುಕೊಂಡ ಗಾಯಾಳು ಅನಿತಾ ಮಾತಾಡುತ್ತಾ ಕಣ್ಣೀರಿಟ್ಟಿದ್ದಾರೆ. ತಾವು ಟೈಲರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ತಮ್ಮ ಗಂಡ ಆಟೋ ಓಡಿಸುತ್ತಿದ್ದಾರೆ. ಗುಂಡ್ಲುಪೇಟೆಯಿಂದ ಇಲ್ಲಿ ಬಂದು ಬದುಕು ಕಟ್ಟಿಕೊಂಡ ಈ ಕುಟುಂಬಕ್ಕೆ ಈ ಘಟನೆ ಆಘಾತವನ್ನೇ ಉಂಟು ಮಾಡಿದೆ.

ಅಸಲಿಗೆ ಘಟನೆ ಆಗಿದ್ದು, ಅಕ್ಟೋಬರ್ 4ರ ರಾತ್ರಿ ಗಾಯಾಳು ಅನಿತಾ ಸಹೋದರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಹೀಗಾಗಿ ಗಾಡಿ ಸ್ವಲ್ಪ ಜೋರಾಗಿ ಓಡಿಸಿದ್ದಾರೆ. ಅದೇ ವೇಳೆಗೆ ಬ್ಯಾಟರಾಯನಪುರ ಎಂಎಂ ರಸ್ತೆಯ ಟರ್ನಿಂಗ್‌ನಲ್ಲಿ ಸ್ಪೀಡಾಗಿ ಕಾರ್ ಚಲಾಯಿಸಿಕೊಂಡು ಬಂದ ದಿವ್ಯಾ ಸುರೇಶ್, ಕಿರಣ್, ಅನಿತಾ ಹಾಗೂ ಸಹೋದರಿ ಅನುಷಾ ಇದ್ದ ಬೈಕ್‌ಗೆ ಗುದ್ದಿ ಕಾರ್ ನಿಲ್ಲಿಸೇ ಹೊರಟಿದ್ದಾರೆ. ಕಿರಣ್ ಬೈಕ್ ಚಲಾಯಿಸುತ್ತಿದ್ದರು, ಅನುಷಾ ಹಾಗೂ ಅನಿತಾ ಹಿಂಬದಿಯಲ್ಲಿ ಕುಳಿತಿದ್ದರು. ಅನಿತಾ ಅವರ ಕಾಲಿಗೆ ಕಾರ್ ಗುದ್ದಿದ ಪರಿಣಾಮ ಮಂಡಿ ಚಿಪ್ಪು ಒಡೆದಿದೆ. ವೈದ್ಯರು ಕನಿಷ್ಠ ಒಂದು ವರ್ಷವಾದರೂ ರೆಸ್ಟ್ ಮಾಡಲು ಸಲಹೆ ನೀಡಿದ್ದಾರೆ.

ಊರಿಂದ ಬೆಂಗಳೂರಿಗೆ ಬಂದು ನಿತ್ಯ ದುಡಿದು ಜೀವನ ನಡೆಸುವ ಈ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು ಅನಿತಾ. ಈ ಘಟನೆ ನಡೆದ ಬಳಿಕ ದಿವ್ಯಾ ಸುರೇಶ್ ಕನಿಷ್ಠ ಮಾನವೀಯ ದೃಷ್ಟಿಯಿಂದಲೂ ಭೇಟಿ ಮಾಡಿ ಮಾತಾಡಿಸಿಲ್ಲ. ಆಸ್ಪತ್ರೆಯ ಖರ್ಚು ಲಕ್ಷ ಲಕ್ಷ ಆಗಿದೆ. ಆಸ್ಪತ್ರೆಗಾಗಿ ಸಾಲ ಮಾಡಿದ್ದೇವೆ ಅಂತಾ ಅನಿತಾ ʻಪಬ್ಲಿಕ್ ಟಿವಿʼ ಜೊತೆ ಮಾತಾಡುತ್ತಾ ಕಣ್ಣೀರಿಟ್ಟಿದ್ದಾರೆ. ಸದ್ಯ ಪ್ರಕರಣ ಪೊಲೀಸ್ ಠಾಣೆಯಲ್ಲಿದ್ದು, ಪೊಲೀಸರಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ವಿಚಾರಣೆ ನಡೆಸಿ ತಿಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.



















