Tag: ದಿವಂಗತ ಮಂಜುನಾಥನ ಗೆಳೆಯರು

  • ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ಬೆಂಗಳೂರು: ದಿವಂಗತ ಮಂಜುನಾಥನ ಗೆಳೆಯರ ದರ್ಶನವಾಗಿದೆ. ಒಂದು ಯೂಥ್ ಫುಲ್ ಕಥೆಯನ್ನು ಲವಲವಿಕೆಯಿಂದಲೇ ಹೇಳುತ್ತಾ ಕಡೆಗೆ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಈ ಚಿತ್ರ ಪ್ರೇಕ್ಷಕರಿಗೆಲ್ಲ ಹೊಸಾ ಅನುಭವ ತುಂಬುವಲ್ಲಿ ಸಫಲವಾಗಿದೆ.

    ಎಸ್.ಡಿ ಅರುಣ್ ನಿರ್ದೇಶನದ ಈ ಚಿತ್ರ ಪೋಸ್ಟರುಗಳಲ್ಲಿನ ಫ್ರೆಶ್ ಅನುಭೂತಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಸಂಭಾಷಣೆಯಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಹಜತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ತಮ್ಮನ ನಡುವಿನ ಪಾತ್ರಗಳೇ ಎಂಬಂಥಾ ಫೀಲು ಹುಟ್ಟಿಸುವಂತೆ ಈ ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಯಾವ ಭಾವಗಳೂ ಭಾರ ಅನ್ನಿಸದಂತೆ, ಯಾವ ದೃಶ್ಯಗಳೂ ಬೋರು ಹೊಡೆಸದಂತೆ ಅತ್ಯಂತ ಎಚ್ಚರಿಕೆಯಿಂದ ತಿದ್ದಿ ತೀಡಿದ ಕಲಾಕೃತಿಯಂತೆ ಈ ಚಿತ್ರ ಮೂಡಿ ಬಂದಿದೆ.

    ಸಂಜಯ್, ನವೀನ್, ರಾಜ್ ಕಿರಣ್ ಮತ್ತು ಶ್ರೀನಿವಾಸುಲು ಒಟ್ಟಿಗೇ ಓದಿದ್ದ ಗೆಳೆಯರು. ಅವರೆಲ್ಲರೂ ಇಂಜಿನಿಯರಿಂಗ್ ಓದಿ ಕೆಲಸ ಕಾರ್ಯ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕುಗಳಾಗಿರುವಾಗಲೇ ಅವರ ಮತ್ತೋರ್ವ ಗೆಳೆಯ ದಿವಂಗತನಾದ ದುರ್ವಾರ್ತೆ ಬಂದೆರಗುತ್ತೆ. ಹೇಗೋ ಆ ಸಾವಿನ ನೆಪದಲ್ಲಿ ಮತ್ತೆ ಈ ನಾಲ್ವರು ಒಂದೆಡೆ ಸೇರಿತ್ತಾರೆ. ಆದರೆ ಮಂಜುನಾಥ ದಿವಂಗತನಾಗಿದ್ದು ಆತ್ಮಹತ್ಯೆಯಿಂದಲ್ಲ, ಬದಲಾಗಿ ಇದು ಕೊಲೆ ಅಂತ ಪೊಲೀಸ್ ಅಧಿಕಾರಿ ಕೆಂಪಯ್ಯ ಅದಾಗಲೇ ಫೀಲ್ಡಿಗಿಳಿದಿರುತ್ತಾನೆ. ಅದು ನಿಜಕ್ಕೂ ಕೊಲೆಯಾ? ಅದರಲ್ಲಿ ಈ ಗೆಳೆಯರು ತಗುಲಿಕೊಳ್ತಾರಾ ಅಂತೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿ ಉತ್ತರ ಹುಡುಕಿದರೆ ಮಜವಾದೊಂದು ಅನುಭವವಾಗೋದು ಖಾತರಿ!

    ಸಹಜ ಸಂಭಾಷಣೆಯಲ್ಲಿಯೇ ಲವಲವಿಕೆ, ಹಾಸ್ಯವನ್ನೂ ಬೆರೆಸಿರುವ ನಿರ್ದೇಶಕರು ಪರಿಣಾಮಕಾರಿಯಾಗಿಯೇ ದೃಶ್ಯ ಕಟ್ಟಿದ್ದಾರೆ. ತನ್ನ ಮಗನಿಗೆ ಏನೂ ಕಡಿಮೆಯಾಗದಂತೆ ಪೊರೆದ ತಂದೆ ರಿಟೈರ್ಡು ಸ್ಟೇಜಿಗೆ ಬಂದರೂ ಅಪ್ಪನನ್ನು ನೋಡಿಕೊಳ್ಳಲಾರದ ಮಗ. ಆ ವಯಸ್ಸಲ್ಲಿಯೂ ಮಗನ ನೆರವಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಹೊರಡೋ ಅಪ್ಪನನ್ನು ನೋಡಿ ಮಾನಸಿಕ ವೇದನೆಗೆ ಬೀಳೋ ಪುತ್ರ… ಒಟ್ಟಾರೆಯಾಗಿ ಇಲ್ಲಿ ಸಾವೊಂದರ ಸುತ್ತ ಬದುಕಿನ ಸೂಕ್ಷ್ಮಗಳನ್ನು ಅರಳಿಸುವ ಕುಸುರಿಯಂಥಾದ್ದನ್ನು ನಿರ್ದೇಶಕರು ಮಾಡಿದ್ದಾರೆ.

    ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಈ ಚಿತ್ರ ಯುವ ಸಮೂಹಕ್ಕೆ, ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೊಂದು ಸ್ಪಷ್ಟವಾದ, ಪರಿಣಾಮಕಾರಿಯಾದ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಅದರ ಜೊತೆ ಜೊತೆಗೇ ಒಂದೊಳ್ಳೆ ಚಿತ್ರ ನೋಡಿದ ತೃಪ್ತ ಬಾವವೂ ಪ್ರೇಕ್ಷಕರನ್ನು ತುಂಬಿಕೊಳ್ಳುತ್ತದೆ. ಯುವ ಸಮುದಾಯ, ಪೋಷಕರು ಸೇರಿದಂತೆ ಎಲ್ಲರೂ ನೋಡಬಹುದಾದ ಚಿತ್ರ ದಿವಂಗತ ಮಂಜುನಾಥನ ಗೆಳೆಯರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿವಂಗತ ಮಂಜುನಾಥನ ಗೆಳೆಯರ ಕಥೆಯೇನು?

    ದಿವಂಗತ ಮಂಜುನಾಥನ ಗೆಳೆಯರ ಕಥೆಯೇನು?

    ಸದ್ಯ ಶೀರ್ಷಿಕೆಯ ಮೂಲಕವೇ ಎಲ್ಲರ ಗಮನ ಸೆಳೆದುಕೊಂಡು ಹಾಡುಗಳ ಮೂಲಕ ಭಾರೀ ಕ್ರೇಜ್ ಹುಟ್ಟಿಸಿರುವ ಚಿತ್ರ ದಿವಂಗತ ಮಂಜುನಾಥನ ಗೆಳೆಯರು. ಎಸ್.ಡಿ ಅರುಣ್ ಕುಮಾರ್ ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಿರೋ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿರೋದೇ ಹೊಸತನದ ಮೂಲಕ!

    ಹೀರೋಗಿರಿಯಾಚೆಗೆ ಕಥೆಯನ್ನೇ ಮುಖ್ಯವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಗಿದೆಯಂತೆ. ಹಾಗಿರೋದರಿಂದಲೇ ಇಲ್ಲಿನ ಪ್ರತೀ ಪಾತ್ರಗಳೂ ನಮ್ಮ ಜೊತೆಗಾರರಂತೆ, ನೆರಳಿನಂತೆ ನೆನಪಲ್ಲುಳಿಯುತ್ತವೆ ಅನ್ನುವ ನಿರ್ದೇಶಕ ಅರುಣ್ ಈ ಚಿತ್ರದ ಬಗೆಗಿನ ಕೆಲ ಸೂಕ್ಷ್ಮ ಸಂಗತಿಗಳನ್ನು ಜಾಹೀರು ಮಾಡಿದ್ದಾರೆ.

    ಥಿಯೇಟರಿನಲ್ಲಿ ಚಿತ್ರ ನೋಡುವ ಪ್ರತೀ ಪ್ರೇಕ್ಷಕರಿಗೂ ಇದೊಂದು ಸಿನಿಮಾ ಅನ್ನೋದು ಗೊತ್ತೇ ಆಗದಂತೆ, ತಮ್ಮ ನಡುವೆಯೇ ಕಥೆ ನಡೆಯುತ್ತಿದೆ ಎಂಬ ಫೀಲ್ ಹುಟ್ಟುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಇದು ಶಾಲಾ ಕಾಲೇಜಿನ ಸ್ನೇಹಿತನೊಬ್ಬನ ಸಾವಿನಲ್ಲಿ ಎಷ್ಟೋ ವರ್ಷದ ನಂತರ ಹಳೇ ಗೆಳೆಯರೆಲ್ಲ ಸಂಧಿಸೋ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕಾಮಿಡಿ ಅಂಶವನ್ನೂ ಹೊಂದಿರೋ ಈ ಚಿತ್ರದಲ್ಲಿ ಸಂಭಾಷಣೆಯೂ ಸೇರಿದಂತೆ ಎಲ್ಲವೂ ಸಹಜವಾಗಿದೆಯಂತೆ.

    ಶಾಲಾ ಕಾಲೇಜು ದಿನಗಳಲ್ಲಿ ಬದುಕಿನ ಅಗಾಧತೆಯ ಅಂದಾಜು ಕೂಡಾ ಇರೋದಿಲ್ಲ. ಒಂದೇ ಬೆಂಚಿನಲ್ಲಿ ಒಟ್ಟಿಗೆ ಬೆಚ್ಚಗೆ ಕೂತ ಜೀವಗಳ ದಿಕ್ಕು ಮುಂದ್ಯಾವತ್ತೋ ಗೊತ್ತೇ ಇರದ ದಿಗಂತಗಳತ್ತ ಚಾಚಿಕೊಳ್ಳುತ್ತದೆ ಎಂಬ ಸಣ್ಣ ಕಲ್ಪನೆ ಕೂಡಾ ಎಳೇ ಮನಸುಗಳ ಮೇಲೆ ಮೂಡೋದಿಲ್ಲ. ಓದು ಮುಗಿದ ಮೇಲೆ ಅದೆಷ್ಟೋ ವರ್ಷವಾದ ನಂತರ ಓರ್ವ ಸಹಪಾಠಿಯ ಸಾವಿನ ಕ್ಷಣದಲ್ಲಿ ಒಟ್ಟು ಸೇರಿದ ಗೆಳೆಯರ ಕಥೆಗಳೆಲ್ಲವೂ ರೋಚಕವಾಗಿ ಬಿಚ್ಚಿಕೊಂಡರೂ ತಣ್ಣಗಿನ ನಿರೂಪಣೆಯ ಮೂಲಕ ಈ ಚಿತ್ರ ಎಲ್ಲರನ್ನೂ ತಾಕಲಿದೆಯಂತೆ. ಇದನ್ನೂ ಓದಿ: ದಿವಂಗತ ಮಂಜುನಾಥನ ಗೆಳೆಯರು ಟ್ರೇಲರ್ ಬಿಡುಗಡೆ

    ಥಿಯೇಟರಿಂದ ಹೊರಬಂದ ಮೇಲಷ್ಟೇ ಅಲ್ಲ, ವರ್ಷಗಳೇ ಕಳೆದ ನಂತರವೂ ಈ ಪಾತ್ರಗಳ ಛಾಯೆ ನೋಡುಗರ ಮನಸಲ್ಲಿ ಹಾಗೇ ಉಳಿದುಕೊಂಡಿರುತ್ತದೆ ಅನ್ನುವ ಮೂಲಕ ನಿರ್ದೇಶಕರು ಮಂಜುನಾಥನ ಗೆಳೆಯರ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ದಿವಂಗತ ಮಂಜುನಾಥನ ಗೆಳೆಯರು ಟ್ರೇಲರ್ ಬಿಡುಗಡೆ

    ದಿವಂಗತ ಮಂಜುನಾಥನ ಗೆಳೆಯರು ಟ್ರೇಲರ್ ಬಿಡುಗಡೆ

    ಬೆಂಗಳೂರು: ಈ ಹಿಂದೆ ಎಣ್ಣೆ ಪಾರ್ಟಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ಗುರುತಿಸಿಕೊಂಡಿದ್ದ ನಿರ್ದೇಶಕ ಅರುಣ್ ಎನ್.ಡಿ. ಈಗ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ. ದಿವಂಗತ ಮಂಜುನಾಥನ ಗೆಳೆಯರು ಎಂಬ ಚಲನಚಿತ್ರದ ಮೂಲಕ ಅರುಣ್ ಈಗ ನಿರ್ದೇಶಕರಾಗಿದ್ದು ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿ ಬಿಡುಗಡೆಗೆ ಸಿದ್ಧಗೊಳಿಸಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಕಳೆದ ವಾರ ನಡೆಯಿತು.

    5 ಜನ ಇಂಜಿನಿಯರಿಂಗ್ ಸ್ನೇಹಿತರು ಬಹಳ ವರ್ಷಗಳ ನಂತರ ಗ್ಯಾಪ್ ನಂತರ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸಂಧಿಸುವುದು ಒಂದು ಪೊಲೀಸ್ ಠಾಣೆಯಲ್ಲಿ. ಹೀಗೆ ಸಂಧಿಸುವ ಸಂದರ್ಭ ಹೇಗೆ, ಏಕೆ ಎಂಬುದುದನ್ನು ಹೇಳುವ ಚಿತ್ರವೇ ದಿವಂಗತ ಮಂಜುನಾಥನ ಗೆಳೆಯರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕರು ಆದ ಅರುಣ್ ಇದೊಂದು ಮಲ್ಟಿ ಲೇಯರ್ ಸಿನಿಮಾ. 10 ವರ್ಷ ಕಳೆದ ನಂತರ ಈ ಸಿನಿಮಾ ನೋಡಿದರೂ ಹಳೆಯದು ಅನಿಸುವುದಿಲ್ಲ. ಸುಮಾರು 6-7 ತಿಂಗಳ ಕಾಲ ಕೂತು ಈ ಸ್ಕ್ರಿಪ್ಟ್ ಮಾಡಿದ್ದೇವೆ. ಟೈಟಲ್ ಕ್ಯಾಚಿಯಾಗಿದೆ ಅನಿಸಿತು, ಹಾಗಾಗಿ ದಿವಂಗತ ಮಂಜುನಾಥ ಗೆಳೆಯರು ಅಂತ ಹೆಸರಿಟ್ಟಿದ್ದೇವೆ. ಇಡೀ ಚಿತ್ರದಲ್ಲಿ ಈ ಟೈಟಲ್ ಕ್ಯಾರಿಯಾಗುತ್ತದೆ.

    ನಮ್ಮ ಚಿತ್ರದಲ್ಲಿ 90 ರಷ್ಟು ಹೊಸ ಕಲಾವಿದರೇ ನಟಿಸಿದ್ದಾರೆ. ಎಲ್ಲರನ್ನೂ ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಿದ್ದೇವೆ. ಪುಟ್ಟಣ್ಣ ಸ್ಟುಡಿಯೋ, ಭೂಮಿಕ ಎಸ್ಟೇಟ್ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು ಯ/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೊಂದು ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರ. ಸಿನಿಮಾ ಆಗಸ್ಟ್ ಮೊದಲ ವಾರ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು. ರುದ್ರ ಪ್ರಯಾಗ್ ಹಾಗೂ ಶೀತಲ್ ಪಾಂಡ್ಯ ಪ್ರಮುಕ ಪಾತ್ರದಲ್ಲಿ ನಟಿಸಿದ್ದು ಶಂಕರ್ ಮೂರ್ತಿ, ಅವಿನಾಶ್, ಮುದ್ದಪ್ಪ, ಸತೀಶ್ ಉಳಿದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿನಯ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅರುಣ್ ಹಾಗೋ ಗೋಪಿ ಶೀಗೆಹಳ್ಳಿ ಸಾಹಿತ್ಯ ಬರೆದಿದ್ದಾರೆ. ರವಿಪೂಜಾರ್ ಈ ಚಿತ್ರದ ಕಲಾ ನಿರ್ದೇಶನ ಹಾಗೂ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ರುದ್ರ ಪ್ರಯಾಗ್ ಐಟಿ ಕಂಪನಿಯಲ್ಲಿ ವರ್ಕ್ ಮಾಡುತ್ತಿದ್ದವರು ಒಬ್ಬ ಕಲಾವಿದನಾಗಬೇಕೆಂಬ ಆಸೆಯಿಂದ ಕೆಲಸ ತೊರೆದು ಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.