Tag: ದಿಲ್ಜಿತ್ ದೋಸಂಜ್

  • ತಾಜ್ ಮಹಲ್‍ಗೆ ಕರ್ಕೊಂಡ್ ಹೋಗಿದ್ದಕ್ಕೆ ಥ್ಯಾಂಕ್ಸ್ – ಭಾರತೀಯರ ಕ್ರಿಯೇಟಿವಿಟಿಗೆ ಇವಾಂಕಾ ಟ್ರಂಪ್ ಫಿದಾ

    ತಾಜ್ ಮಹಲ್‍ಗೆ ಕರ್ಕೊಂಡ್ ಹೋಗಿದ್ದಕ್ಕೆ ಥ್ಯಾಂಕ್ಸ್ – ಭಾರತೀಯರ ಕ್ರಿಯೇಟಿವಿಟಿಗೆ ಇವಾಂಕಾ ಟ್ರಂಪ್ ಫಿದಾ

    ನವದೆಹಲಿ: ಭಾರತೀಯರ ಕ್ರಿಯೇಟಿವಿಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಫಿದಾ ಆಗಿಬಿಟ್ಟಿದ್ದಾರೆ. ತಮ್ಮನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದರೂ ಕಿಂಚಿತ್ತು ಬೇಜಾರಾಗದೇ ಕ್ರಿಯೇಟಿವ್ ಆಗಿ ಟ್ರೋಲ್ ಮಾಡುತ್ತಿರುವ ಭಾರತೀಯರ ಟ್ಯಾಲೆಂಟ್ ನೋಡಿ ಇವಾಂಕಾ ಖುಷ್ ಆಗಿದ್ದಾರೆ.

    ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಪ್ರವಾಸಕ್ಕೆ ಭಾರತಕ್ಕೆ ಬಂದಿದ್ದರು. ಈ ವೇಳೆ ತಮ್ಮೊಂದಿಗೆ ಪತ್ನಿ ಮಲಾನಿಯಾ ಟ್ರಂಪ್, ಮಗಳು ಇವಾಂಕಾ ಟ್ರಂಪ್ ಹಾಗೂ ಅಳಿಯ ಜೆರಾಲ್ಡ್ ಕುಶ್ನರ್ ಕೂಡ ಭಾರತಕ್ಕೆ ಕರೆತಂದಿದ್ದರು. ಈ ವೇಳೆ ಟ್ರಂಪ್ ಕುಟುಂಬ ಭಾರತದ ಹೆಮ್ಮೆ ತಾಜ್ ಮಹಲ್‍ಗೆ ಭೇಟಿ ಕೊಟ್ಟು, ಪ್ರೇಮಸೌಧದ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿತ್ತು. ಅದರಲ್ಲೂ ಇವಾಂಕಾ ಅವರು ತಾಜ್‍ಮಹಲ್ ಮುಂದೆ ಕೂತು ಕ್ಲಿಕ್ಕಿಸಿದ ಫೋಟೋವಂತೂ ನೆಟ್ಟಿಗರ ಟ್ರೋಲ್‍ಗೆ ವಿಷಯವಾಗಿಬಿಟ್ಟಿದೆ.

    ಇವಾಂಕಾ ಟ್ರಂಪ್ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಸಖತ್ ಕಾಲೆಳೆಯಲಾಗುತ್ತಿದೆ. ಇವಾಂಕಾ ಪಕ್ಕ ಕೂತಿರುವ ಹಾಗೆ, ಸೈಕಲ್ ಮೇಲೆ ಅವರನ್ನು ಕೂರಿಸಿಕೊಂಡು ಹೋಗುತ್ತಿರುವ ಹಾಗೆ ಅನೇಕರು ತಮ್ಮ ಫೋಟೋಗಳನ್ನು ಎಡಿಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಟ್ರೋಲ್‍ಗಳನ್ನು ನೋಡಿದ ಇವಾಂಕಾ ಅವರು ಮಾತ್ರ ಬೇಸರಗೊಳ್ಳದೇ, ಭಾರತೀಯರ ಕ್ರಿಯೇಟಿವಿಗೆ ಭೇಷ್ ಅಂದಿದ್ದಾರೆ. ಇಂತಹ ಸುಂದರ ತಾಜ್ ಮಹಲ್‍ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದ, ಈ ಅನುಭವವನ್ನು ನಾನು ಎಂದಿಗೂ ಮರೆಯಲ್ಲ ಎಂದು ಖುಷಿಯಿಂದ ಟ್ರೋಲ್ ಟ್ವೀಟ್‍ಗಳನ್ನು ತಮ್ಮ ಅಧಿಕೃತ ಖಾತೆಯಿಂದ ರೀ-ಟ್ವೀಟ್ ಮಾಡಿಕೊಂಡಿದ್ದಾರೆ.

    ಖ್ಯಾತ ಗಾಯಕ, ನಟ ದಿಲ್ಜಿತ್ ದೋಸಂಜ್ ಅವರು ಇವಾಂಕಾ ಫೋಟೋಗೆ ತಮ್ಮ ಫೋಟೋ ಎಡಿಟ್ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದರು. ತಾಜ್ ಮಹಲ್‍ಗೆ ಕರೆದುಕೊಂಡು ಹೋಗು ಎಂದು ಹಠ ಮಾಡುತ್ತಿದ್ದಳು, ಅದಕ್ಕೆ ಕರೆತಂದೆ ಎಂದು ಬರೆದು ಇವಾಂಕಾ ಹಾಗೂ ತಾವು ತಾಜ್ ಮಹಲ್ ಮುಂದೆ ಕೂತಿರುವ ಎಡಿಟೆಡ್ ಫೋಟೋವನ್ನು ದಿಲ್ಜಿತ್ ಟ್ವೀಟ್ ಮಾಡಿದ್ದರು. ಅಲ್ಲದೇ ಇವಾಂಕಾರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇವಾಂಕಾ ಅವರು, ‘ನನ್ನನ್ನು ತಾಜ್ ಮಹಲ್‍ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು, ಅದೊಂದು ಮರೆಯಲಾಗದ ಅನುಭವ’ ಎಂದು ಖುಷಿಯಿಂದ ರೀ-ಟ್ವೀಟ್ ಮಾಡಿದ್ದಾರೆ.

    ಕೇವಲ ಸೆಲಿಬ್ರೆಟಿ ಮಾತ್ರವಲ್ಲ, ಸುಮ್ಮನೆ ಟ್ರೋಲ್‍ಗಾಗಿ ಸಾಮಾನ್ಯ ಜನರು ಎಡಿಟ್ ಮಾಡಿದ ತಮ್ಮ ಫೋಟೋವನ್ನು ಕೂಡ ಇವಾಂಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯರ ಕ್ರಿಯೇಟಿವಿಟಿಗೆ ಮನಸೋತಿದ್ದಾರೆ. ಭಾರತದಲ್ಲಿ ನನಗೆ ಹೊಸ ಗೆಳೆಯರು ಸಿಕ್ಕಿದ್ದಾರೆ. ಭಾರತೀಯರ ಕ್ರಿಯೇಟಿವಿಟಿ ನನಗೆ ಇಷ್ಟವಾಯ್ತು ಎಂದಿದ್ದಾರೆ.

    ಜನರು ನಗಲೆಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವ ಟ್ರೋಲ್‍ಗಳು ಕೆಲವೊಮ್ಮೆ ಗಲಾಟೆಗೆ ಕೂಡ ಕಾರಣವಾಗುತ್ತೆ. ಅದರಲ್ಲೂ ಸೆಲೆಬ್ರೆಟಿಗಳನ್ನು ಟ್ರೋಲ್ ಮಾಡಿದಾಗ ನಮ್ಮ ಮೇಲೆಯೇ ಟ್ರೋಲ್ ಮಾಡ್ತೀರಾ ಅಂತ ಸಿಟ್ಟಾಗುವವರೇ ಹೆಚ್ಚು. ಕೆಲವೊಮ್ಮೆ ಟ್ರೋಲ್ ಪೇಜಸ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿರುವ ಪ್ರಕರಣಗಳೂ ಇವೆ. ಆದರೆ ಇವಾಂಕಾ ಮಾತ್ರ ತಮ್ಮನ್ನು ಟ್ರೋಲ್ ಮಾಡಿದನ್ನ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಟ್ರೋಲ್ ಮಾಡಿ ಭಾರತೀಯರು ಇವಾಂಕಾ ಮನ ಗೆದ್ದರೆ, ಇತ್ತ ಟ್ರೋಲ್ ಪೋಸ್ಟ್ ಗಳನ್ನು ತಾವೇ ಶೇರ್ ಮಾಡಿಕೊಂಡು ಇವಾಂಕಾ ನೆಟ್ಟಿಗರ ಮನ ಕದ್ದಿದ್ದಾರೆ.