Tag: ದಿನಸಿ

  • ಫೋನ್ ಮಾರಾಟ ಮಾಡಿ ಮನೆಗೆ ದಿನಸಿ ತಂದು ಕೊಟ್ಟು ವ್ಯಕ್ತಿ ಆತ್ಮಹತ್ಯೆ

    ಫೋನ್ ಮಾರಾಟ ಮಾಡಿ ಮನೆಗೆ ದಿನಸಿ ತಂದು ಕೊಟ್ಟು ವ್ಯಕ್ತಿ ಆತ್ಮಹತ್ಯೆ

    – ಬೇಸಿಗೆಯಲ್ಲಿ ಮಕ್ಕಳು ಆರಾಮಾಗಿರಲು ಫ್ಯಾನ್ ಖರೀದಿ
    – ಉಳಿದ ಹಣವನ್ನ ಪತ್ನಿಗೆ ಕೊಟ್ಟು ನೇಣಿಗೆ ಶರಣು

    ಚಂಡೀಗಢ: ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ಆಹಾರವಿಲ್ಲದೆ ಪರದಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟ ಕೊಡಿಸಲು ಸಾಧ್ಯವಾಗದೆ ನೊಂದ 30 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    ಸರಸ್ವತಿ ಕುಂಜ್ ಪ್ರದೇಶದ ಕೊಳೆಗೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಖೇಶ್ ಆತ್ಮಹತ್ಯೆ ಮಾಡಿಕೊಂಡು ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಮೊಬೈಲ್ ಫೋನ್ ಅನ್ನು 2,500 ರೂ.ಗೆ ಮಾರಾಟ ಮಾಡಿದ್ದಾನೆ. ಅದರಲ್ಲಿ ಅಕ್ಕಿ, ಹಿಟ್ಟು ಮತ್ತು ಸಕ್ಕರೆ ಮತ್ತು ಟೇಬಲ್ ಫ್ಯಾನ್ ಖರೀದಿಸಿ ಪತ್ನಿಗೆ ಕೊಟ್ಟಿದ್ದಾನೆ. ಬೇಸಿಗೆಯಲ್ಲಿ ತನ್ನ ಮಕ್ಕಳು ಆರಾಮಾಗಿರಲಿ ಎಂದು ಫ್ಯಾನ್ ಖರೀದಿಸಿದ್ದಾನೆ.

    ಈತನಿಗೆ ಮದ್ವೆಯಾಗಿ ನಾಲ್ವರು ಮಕ್ಕಳಿದ್ದು, ತನ್ನ ಪತ್ನಿ ಪೂನಂ ಜೊತೆ ಗುಡಿಸಲಲ್ಲಿ ವಾಸಿಸುತ್ತಿದ್ದನು. ಫೋನ್ ಮಾರಾಟ ಮಾಡಿ ಉಳಿದ ಹಣವನ್ನು ಪತ್ನಿಗೆ ನೀಡಿದ್ದಾನೆ. ನಂತರ ತಾನು ವಾಸ ಮಾಡುತ್ತಿದ್ದ ಗುಡಿಸಲಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸ್ವಲ್ಪ ಸಮಯದ ನಂತರ ಪತ್ನಿ ಪೂನಂ ಗುಡಿಸಿಲಿನೊಳಗೆ ಹೋಗಿ ನೋಡಿದ್ದಾಳೆ. ಅಷ್ಟರಲ್ಲಿ ಮುಖೇಶ್ ನೇಣು ಬಿಗಿದುಕೊಂಡು ಮೃತಪಟ್ಟಿದ್ದನು. ಮೊಬೈಲ್ ಫೋನ್ ಮಾರಾಟ ಮಾಡಿ ಮುಖೇಶ್ ನೀಡಿದ್ದ ಹಣವನ್ನು ಹೊರತುಪಡಿಸಿ ಕುಟುಂಬಕ್ಕೆ ಯಾವುದೇ ಆದಾಯ ಇಲ್ಲ. ಹೀಗಾಗಿ ನೆರೆಹೊರೆಯವರು ಹಣ ಸಂಗ್ರಹ ಮಾಡಿ ಅಂತಿಮ ವಿಧಿಗಳನ್ನು ಮುಗಿಸಿದ್ದಾರೆ.

    ಮೃತ ಮಾವ ಉಮೇಶ್ ಮುಖಿಯಾ ಮಾತನಾಡಿ, ಮುಖೇಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ಆದರೆ ಕಳೆದ ಎರಡು ತಿಂಗಳಿಂದ ಯಾವುದೇ ಪೇಂಟಿಂಗ್ ಕೆಲಸವಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದನು. ಕೊನೆಗೆ ಕೂಲಿ ಮಾಡುತ್ತಿದ್ದನು. ಆದರೆ ಲಾಕ್‍ಡೌನ್‍ನಿಂದ ಕೂಲಿ ಕೆಲಸವು ಸಿಗಲಿಲ್ಲ. ಆಗ ಸಾಲ ಕೂಡ ಮಾಡಿಕೊಂಡಿದ್ದ. ಇದರಿಂದ ಮುಖೇಶ್ ಖಿನ್ನತೆಗೆ ಒಳಗಾಗಿದ್ದನು ಎಂದು ಹೇಳಿದರು.

    ಆತನ ಕುಟುಂಬ ಭಿಕ್ಷೆ ಬೇಡುತ್ತಿತ್ತು. ಅವರು ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲ. ಅಲ್ಲದೇ ಆತ ಖಿನ್ನತೆಗೆ ಒಳಗಾಗಿದ್ದನು ಎಂದು ಮುಖೇಶ್ ಸಂಬಂಧಿಕರೊಬ್ಬರು ತಿಳಿಸಿರುವುದಾಗಿ ಪೊಲೀಸ್ ಕಮಿಷನರ್ ಮೊಹಮ್ಮದ್ ಅಕಿಲ್ ಹೇಳಿದ್ದಾರೆ.

  • ಹೊರಗೆ ಬಿಡುವಂತೆ ಮುಗಿಬಿದ್ದ ಕಂಟೈನ್ಮೆಂಟ್ ಪ್ರದೇಶದ ಜನರು

    ಹೊರಗೆ ಬಿಡುವಂತೆ ಮುಗಿಬಿದ್ದ ಕಂಟೈನ್ಮೆಂಟ್ ಪ್ರದೇಶದ ಜನರು

    ಗದಗ: ಕೊರೊನಾ ವೈರಸ್‍ಗೆ ನಗರದಲ್ಲಿ ರೋಗಿ ನಂಬರ್ 166ರ 80 ವರ್ಷದ ವೃದ್ಧ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಗರದ ರಂಗನವಾಡಿ ಗಲ್ಲಿಯನ್ನ ಕಂಟೈನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

    ಕಳೆದ ಮೂರು ದಿನಗಳಿಂದ ಇಲ್ಲಿನ ಜನರನ್ನ ಹೊರ ಬರದಂತೆ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿದ್ದು, ಬಿಗಿ ಬಂದೋಬಸ್ತ್‌ನಿಂದ ಜನರು ಹೊರಬರದಂತೆ ಹಾಗೂ ಒಳಹೋಗದಂತೆ ಮಾಡಲಾಗುತ್ತಿದೆ. ಇದರಿಂದ ರಂಗನವಾಡಿ ಕಂಟೈನ್ಮೆಂಟ್ ಪ್ರದೇಶ ಜನರು ನಮ್ಮನ್ನ ಹೊರಬಿಡುವಂತೆ ಗಲಾಟೆಗೆ ಮಾಡಿದ್ದಾರೆ.

    ನಮಗೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆಹಾರ ಪದಾರ್ಥ, ಹಾಲು, ತರಕಾರಿ, ಮೆಡಿಷನ್ ಇದ್ಯಾವುದು ಸಿಗುತ್ತಿಲ್ಲ. ಅಗತ್ಯ ವಸ್ತುಗಳನ್ನು ತರಲು ಹೋಗಲು ಪೊಲೀಸರು ಬಿಡುತ್ತಿಲ್ಲ. ಜೊತೆಗೆ ಈ ಏರಿಯಾದಲ್ಲಿ ಶೌಚಾಲಯಗಳಿಲ್ಲ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಮ್ಮನ್ನ ಹೊರಬಿಡಿ ಅಂತ ಮಹಿಳೆಯರು, ಮಕ್ಕಳು, ಯುವಕರು ಗಲಾಟೆ ಮಾಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಿಷೇಧಿತ ಪ್ರದೇಶದ ಜನರನ್ನು ಯಾವುದೇ ಕಾರಣಕ್ಕೂ ಹೊರಬಿಡಲ್ಲ. ಶೌಚಾಲಯ ಸಮಸ್ಯೆ ಆದರೆ ನಗರಸಭೆಯಿಂದ ಮೊಬೈಲ್ ಟಾಯ್ಲೆಟ್ ಮಾಡುತ್ತೀವಿ. ಹಾಲು, ಆಹಾರ, ದಿನಸಿ ಹಾಗೂ ಕಿರಾಣಿ ಸಾಮಗ್ರಿ ಮನೆಗೆ ತಲುಪಿಸುತ್ತೇವೆ. ಲಾಕ್‍ಡೌನ್ ಮುಗಿಯುವವರೆಗೆ ನಿಷೇಧಿತ ಪ್ರದೇಶದ ಜನರನ್ನು ಹೊರಬಿಡುವುದಿಲ್ಲ ಎಂದು ಹೇಳಿದರು.

    ಕಂಟೈನ್ಮೆಂಟ್ ಪ್ರದೇಶದ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಈ ವೇಳೆ ಗದಗ ಜಿಲ್ಲಾಧಿಕಾರಿ, ಡಿವೈಎಸ್‍ಪಿ ಪ್ರಹ್ಲಾದ್ ಸೇರಿದಂತೆ ಎಲ್ಲ ಅಧಿಕಾರಿಗಳು ಸ್ಥಳೀಯರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಲಾಕ್‍ಡೌನ್ ಮುಗಿಯುವವರೆಗೆ ಹೊರಬರಬೇಡಿ. ನಿಮಗೆ ಬೇಕಾಗುವ ಸೌಲಭ್ಯಗಳನ್ನ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

  • ವಿದ್ಯಾರ್ಥಿ ಮಿತ್ರ ಒಕ್ಕೂಟದಿಂದ ನೂರಾರು ಕುಟುಂಬಗಳಿಗೆ ಮಾಸ್ಕ್, ದಿನಸಿ, ತರಕಾರಿ ವಿತರಣೆ

    ವಿದ್ಯಾರ್ಥಿ ಮಿತ್ರ ಒಕ್ಕೂಟದಿಂದ ನೂರಾರು ಕುಟುಂಬಗಳಿಗೆ ಮಾಸ್ಕ್, ದಿನಸಿ, ತರಕಾರಿ ವಿತರಣೆ

    ಬೆಂಗಳೂರು: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರಧಾನಿ ಮೋದಿ ಹಾಗೂ ರಾಜ್ಯ ಸರ್ಕಾರ ವೈರಸ್ ತಡೆಗಟ್ಟಲು ನೀಡಿರುವ ಲಾಕ್‍ಡೌನ್‍ನಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕಂಗಾಲಾಗಿದ್ದಾರೆ.

    ಹೊರಗೆ ಬಂದರೆ ವೈರಸ್ ಹರಡುವ ಭೀತಿಯಿಂದ ಜನರು ಮನೆಯಿಂದ ಹೊರಗೆ ಬರದೆ ಲಾಕ್‍ಡೌನ್‍ಗೆ ನೈತಿಕ ಬೆಂಬಲವನ್ನ ನೀಡಿದ್ದಾರೆ. ಇಂತಹವರಿಗೆ ನೆಲಮಂಗಲ ಸಮೀಪದ ವಡೇರಹಳ್ಳಿಯ ವಿದ್ಯಾರ್ಥಿ ಮಿತ್ರ ಒಕ್ಕೂಟದಿಂದ ನೂರಾರು ಕುಟುಂಬಗಳಿಗೆ ಮಾಸ್ಕ್, ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನ ವಿತರಣೆ ಮಾಡಲಾಯಿತು.

    ವಿದ್ಯಾರ್ಥಿ ಮಿತ್ರ ಒಕ್ಕೂಟ ವತಿಯಿಂದ ದಾಸನಪುರ ಹೋಬಳಿ ಬ್ಲಾಕ್‍ನಲ್ಲಿ ನೂರಾರು ಬಡ ಕುಟುಂಬಗಳಿಗೆ 10 ದಿನಕ್ಕೆ ಬೇಕಾಗುವ ದಿನಸಿ ಪದಾರ್ಥಗಳು ಸೇರಿದಂತೆ ತರಕಾರಿಗಳನ್ನ ವಿತರಣೆ ಮಾಡಲಾಗಿದೆ.

    ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿ.ಜಿ.ಜಯರಾಮ್, ಹುಸ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಸೋಮಶೇಖರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಚಂದ್ರುಶೇಖರ್ ಹಾಗೂ ವಿದ್ಯಾರ್ಥಿ ಮಿತ್ರ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

  • ಮನೆ-ಮನೆಗೆ ತೆರಳಿ ಅಗತ್ಯ ವಸ್ತುಗಳನ್ನ ಉಚಿತವಾಗಿ ವಿತರಿಸಿದ ಪೊಲೀಸರು

    ಮನೆ-ಮನೆಗೆ ತೆರಳಿ ಅಗತ್ಯ ವಸ್ತುಗಳನ್ನ ಉಚಿತವಾಗಿ ವಿತರಿಸಿದ ಪೊಲೀಸರು

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಹಿರೇ ಬಿದನೂರಿನಲ್ಲಿ ಪೊಲೀಸರು ಮನೆ-ಮನೆಗೂ ತೆರಳಿ ದಿನಬಳಕೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡಿದರು.

    132 ಮನೆಗಳಲ್ಲಿರುವ ಹಿರೇ ಬಿದನೂರಿನಲ್ಲಿ ಸುಮಾರು 872 ಮಂದಿಯನ್ನು ಗೃಹಬಂಧನ ಮಾಡಲಾಗಿದೆ. ಹೀಗಾಗಿ ಪೊಲೀಸರು ದಾನಿಗಳ ನೆರವಿನಿಂದ ದಿನಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಪ್ಯಾಕ್ ಮಾಡಿ ವಿತರಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‍ಪಿ ರವಿಶಂಕರ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿದ ಆರಕ್ಷಕರು ಉಚಿತ ಮಾಸ್ಕ್ ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನು ವಿತರಿಸಿದರು.

    ಇದೇ ವೇಳೆ ತಮಗೆ ಅಗತ್ಯ ವಸ್ತುಗಳು ಬೇಕಾದಲ್ಲಿ ತಾಲೂಕು ಆಡಳಿತ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ. ದಯವಿಟ್ಟು ಮನೆಯಿಂದ ಯಾರೂ ಕೂಡ ಹೊರಗೆ ಬರಬೇಡಿ ಅಂತ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿಕೊಂಡರು.

    ಹಿರೇ ಬಿದನೂರಿನಲ್ಲಿ ಸೋಂಕಿತರ ಮನೆಗಳು ಇರುವ ಕಾರಣ ಈಗ ಇಡೀ ಹಿರೇ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಹಿರೇಬಿದನೂರಿನಿಂದ ಯಾರೂ ಕೂಡ ಹೊರಗೆ ಬರುವಂತಿಲ್ಲ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೂ ಗೌರಿಬಿದನೂರಿನಲ್ಲಿ 10 ಮಂದಿಗೆ ಕೊರೊನಾ ಸೋಂಕು ಧೃಡವಾಗಿದೆ.

  • ಪೊಲೀಸರಿಗೂ ದಿನಸಿ ವಿತರಣೆ- ಮಾದರಿಯಾದ ಬಿಗ್‍ಬಾಸ್ ವಿನ್ನರ್

    ಪೊಲೀಸರಿಗೂ ದಿನಸಿ ವಿತರಣೆ- ಮಾದರಿಯಾದ ಬಿಗ್‍ಬಾಸ್ ವಿನ್ನರ್

    ಬೆಂಗಳೂರು: ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ತಿನ್ನಲೂ ಊಟವಿಲ್ಲದೇ ಪರದಾಡುತ್ತಿದ್ದಾರೆ. ಇತ್ತ ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ದಿನಗೂಲಿ ಕಾರ್ಮಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಇಡೀ ತಿಂಗಳ ರೇಷನ್ ಮತ್ತು ಬಾಡಿಗೆ ನೀಡುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಇದೀಗ ಜನರ ರಕ್ಷಣೆಗೆ ನಿಂತಿರುವ ಪೊಲೀಸರಿಗೂ ಬಿಗ್‍ಬಾಸ್ ವಿನ್ನರ್ ಸಹಾಯ ಮಾಡುತ್ತಿದ್ದಾರೆ.

    ಶೈನ್ ಶೆಟ್ಟಿ ಮತ್ತು ಅವರ ತಂಡದವರು ಸೇರಿಕೊಂಡು ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ದಿನಸಿಯನ್ನು ವಿತರಣೆ ಮಾಡುತ್ತಿದ್ದಾರೆ. ಈ ನಡುವೆ ಪೊಲೀಸರಿಗೂ ದಿನಸಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಮಾದರಿಯಾಗಿದ್ದಾರೆ. ಶೈನ್ ಮತ್ತು ಅವರ ತಂಡವರು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ದಿನಗೂಲಿ ಕಾರ್ಮಿಕರಿಗೆ ಬಾಡಿಗೆ, ಇಡೀ ತಿಂಗ್ಳ ರೇಷನ್ ವಿತರಣೆ – ಶೈನ್ ಶೆಟ್ಟಿ

    ಈ ವಿಡಿಯೋವನ್ನು ಶೈನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಂದು ತಿಂಗಳಿಗೆ ಬೇಕಾಗುವ ಸಾಮಗ್ರಿಗಳನ್ನು ತಂಡದವರ ಜೊತೆ ಸೇರಿಕೊಂಡು ಪ್ಯಾಕ್ ಮಾಡಿದ್ದಾರೆ. ನಂತರ ಕಾರಿನ ಮೂಲಕ ಅದನ್ನು ಅಗತ್ಯವಿರುವವರಿಗೆ ಸಾಗಿಸುತ್ತಿದ್ದಾರೆ ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ರೀತಿ ಪೊಲೀಸರಿಗೆ ದಿನಸಿ ನೀಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

    https://www.instagram.com/p/B-VwMbahQBr/

    “ಪೊಲೀಸರು ಜನರ ಆರೋಗ್ಯದ ದೃಷ್ಟಿಯಿಂದ ಹಗಲು-ರಾತ್ರಿ ಎನ್ನದೇ ಕರ್ತವ್ಯ ಮಾಡುತ್ತಿದ್ದಾರೆ. ಅವರ ಸೇವೆಗಳಿಗೆ ನಾವು ಕೃತಜ್ಞತೆ ತೋರಿಸಬೇಕಾಗಿದೆ. ಆದ್ದರಿಂದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಮತ್ತು ಸುಬ್ರಮಣ್ಯಪುರ ಪೊಲೀಸ್ ಠಾಣೆಗಳಿಗೆ ಹೋಗಿ ರೇಷನ್ ನೀಡಿದ್ದೇವೆ. ಎಷ್ಟೋ ಪೊಲೀಸರು ಹೋಟೆಲ್‍ಗಳಲ್ಲಿ ಊಟ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೋಟೆಲ್‍ಗಳನ್ನು ಸ್ಥಗಿತಗೊಳಿಸುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರಿಗೂ ರೇಷನ್ ನೀಡುತ್ತಿದ್ದೇವೆ. ಜೊತೆಗೆ ಅಗತ್ಯವಿರುವ ಜನರಿಗೂ ದಿನಸಿಯನ್ನು ವಿತರಣೆ ಮಾಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

    ಪೊಲೀಸ್ ಸ್ಟೇಷನ್‍ಗೂ ದಿನಸಿ ನೀಡುವ ಮೂಲಕ ಶೈನ್ ಶೆಟ್ಟಿ ಮತ್ತು ತಂಡ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಿದ್ದಾರೆ.