Tag: ದಿನಕರ್ ತೂಗುದೀಪ

  • ಟಕ್ಕರ್ ಟೀಸರ್ ರಿಲೀಸ್ ಮಾಡಿದ ದಿನಕರ್ ತೂಗುದೀಪ

    ಟಕ್ಕರ್ ಟೀಸರ್ ರಿಲೀಸ್ ಮಾಡಿದ ದಿನಕರ್ ತೂಗುದೀಪ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸಿರೋ ಚೊಚ್ಚಲ ಚಿತ್ರ ಟಕ್ಕರ್. ಎಸ್.ಎಲ್.ಎನ್.ಕ್ರಿಯೇಶನ್ಸ್ ಲಾಂಛನದಲ್ಲಿ ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ ನ ಮಜಬೂತಾದ ಟೀಸರ್ ಬಿಡುಗಡೆಗೊಂಡಿದೆ. ನಿರ್ದೇಶಕ ದಿನಕರ್ ತೂಗುದೀಪ ಈ ಟೀಸರ್ ಅನ್ನು ಬಿಡುಗಡೆಗೊಳಿಸಿ ತಮ್ಮ ಅಳಿಯನ ಮೊದಲ ಚಿತ್ರಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಟಕ್ಕರ್ ಸೆಟ್ಟಿಗೆ ಬಂದ್ರು ದಿನಕರ್ ತೂಗುದೀಪ!

    ‘ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ’ ಎಂಬ ಮಾಸ್ ಡೈಲಾಗ್ ಮತ್ತು ಅದಕ್ಕೆ ತಕ್ಕುದಾದ ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರೋ ಟಕ್ಕರ್ ಟೀಸರ್ ನಿಜಕ್ಕೂ ಜಬರ್‍ದಸ್ತಾಗಿದೆ. ಈ ಮೂಲಕ ಮನೋಜ್ ಮೊದಲ ಚಿತ್ರದಲ್ಲಿಯೇ ಪಕ್ಕಾ ಆಕ್ಷನ್ ಅವತಾರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿರೋದೂ ಕೂಡಾ ಸ್ಪಷ್ಟವಾಗಿದೆ. ಇದನ್ನೂ ಓದಿ: ಮಾಸ್ ಪ್ರೇಕ್ಷಕರಿಗಾಗಿ ಹೊರ ಬಂತು ‘ಟಕ್ಕರ್’ ಟೀಸರ್

    ಈ ಹಿಂದೆ ರನ್ ಆಂಟನಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಘುಶಾಸ್ತ್ರಿ ಟಕ್ಕರ್ ನಿರ್ದೇಶನ ಮಾಡಿದ್ದಾರೆ. ಆರಡಿಯ ಕಟ್ಟುಮಸ್ತಾದ ಮನೋಜ್ ಈ ಚಿತ್ರದ ಮೂಲಕ ಪಕ್ಕಾ ಆಕ್ಷನ್ ಹೀರೋ ಆಗಿ ಅಡಿಯಿರಿಸಲಿರೋ ಸೂಚನೆಗಳನ್ನೂ ಕೂಡಾ ಈ ಟೀಸರ್ ರವಾನಿಸಿದೆ. ಆಕ್ಷನ್ ಶೈಲಿಯ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ಪುಟ್ ಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಭಜರಂಗಿ ಲೋಕಿ, ಸುಮಿತ್ರಾ, ಲಕ್ಷ್ಮಣ್ ಶಿವಶಂಕರ್, ಆಶ್ವಿನ್ ಹಾಸನ್, ಶಂಕರ್ ಆಶ್ವಥ್, ಈಟೀವಿ ಶ್ರೀಧರ್ ಸೇರಿಂದತೆ ಇನ್ನು ಹಲವರ ತಾರಾಬಳಗವಿದೆ. ಇದನ್ನೂ ಓದಿ:  EXCLUSIVE: ದರ್ಶನ್ ಸೋದರಳಿಯ ‘ಟಕ್ಕರ್’ ಮನೋಜ್ ಫೈಟ್ ನೋಡಿ!

    ‘ನಮ್ಮ ಕುಟುಂಬದಿಂದ ಮತ್ತೊಂದು ಪ್ರತಿಭೆ ಹೊರಬರುತ್ತಿದೆ. ಸಾಕಷ್ಟು ವರ್ಷಗಳಿಂದ ನಮ್ಮೆಲ್ಲರ ಜೊತೆ ಸಿನಿಮಾಗಳಿಗೆ ಕೆಲಸ ಮಾಡಿರುವ ನಮ್ಮ ಮನೋಜ್ ಟಕ್ಕರ್ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿರುವುದರಿಂದ ನಮ್ಮ ತೂಗುದೀಪ ಕುಟುಂಬದ ಎಲ್ಲರೂ ಖುಷಿಯಾಗಿದ್ದಾರೆ. ಮನೋಜ್ ಇನ್ನೂ ತುಂಬಾ ಸಿನಿಮಾಗಳಲ್ಲಿ ನಟಿಸಲಿ, ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಬೆಳೆಯಲಿ’ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. ಈ ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಸಂಭಾಷಣೆಕಾರರೂ, ಚಕ್ರವರ್ತಿ ಸಿನಿಮಾದ ನಿರ್ದೇಶಕರೂ ಆದ ಚಿಂತನ್ ಅವರು ಹಾಜರಿದ್ದರು. ಇದನ್ನೂ ಓದಿ: ‘ಟಕ್ಕರ್’ಗಾಗಿ ಬಂತು ಫ್ಯಾಂಟಮ್!

  • ಅಣ್ಣ ದರ್ಶನ್ ರನ್ನು ನೋಡಲು ಬರಲಿಲ್ಲ ತಮ್ಮ ದಿನಕರ್!

    ಅಣ್ಣ ದರ್ಶನ್ ರನ್ನು ನೋಡಲು ಬರಲಿಲ್ಲ ತಮ್ಮ ದಿನಕರ್!

    ಮೈಸೂರು: ಅಪಘಾತದಲ್ಲಿ ಕೈ ಮುರಿದುಕೊಂಡು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲು ತಮ್ಮ ನಿರ್ದೇಶಕ ದಿನಕರ್ ತೂಗುದೀಪ ಅವರು ಬಂದಿಲ್ಲ.

    ದಿನಕರ್ ಅವರು ಕೂಡ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ದರ್ಶನ್ ಆರೋಗ್ಯ ವಿಚಾರಿಸಲು ಬಂದಿಲ್ಲ. ಅತ್ತ ಅಣ್ಣ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ದಿನಕರ್ ಮನೆಯಲ್ಲಿ ಜ್ವರದಿಂದ ಬಳಲುತ್ತಿದ್ದಾರೆ. ದಿನಕರ್ ಅವರಿಗೆ ಕಳೆದ ಒಂದು ವಾರದಿಂದ ಬಿಡದೆ ವೈರಲ್ ಫೀವರ್ ಕಾಡುತ್ತಿದೆ. ಆದ್ರೆ ದಿನಕರ್ ಅವರು ಪ್ರತಿನಿತ್ಯ ದರ್ಶನ್ ಜೊತೆಯಲ್ಲಿ ದೂರವಾಣಿ ಸಂಪರ್ಕದಲ್ಲಿದ್ದಾರೆ. ಇದೇ ಕಾರಣದಿಂದ ಅವರು ಆಸ್ಪತ್ರೆಯ ಬಳಿ ಕಾಣಿಸಿಕೊಳ್ಳುತ್ತಿಲ್ಲ ಅಂತ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇಂದೂ ಡಿಸ್ಚಾರ್ಜ್ ಡೌಟ್:
    ನಟ ದರ್ಶನ್ ಕಾರ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಹೀಗಾಗಿ ಇಂದೂ ಡಿಸ್ಚಾರ್ಜ್ ಆಗೋದು ಡೌಟು ಅಂತ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

    ಬುಧವಾರ ಸಂಜೆ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಗಾಯಗಳ ಊತ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ಡಿಸ್ಚಾರ್ಜ್ ಸಾಧ್ಯತೆಗಳಿವೆ. ಸದ್ಯ ದರ್ಶನ್ ಅವರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದೂ ಚಿತ್ರರಂಗದ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಪ್ರಜ್ವಲ್ ದೇವರಾಜ್ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ, ಅದರ ಕಥೆಯ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಇದರ ಕಥೆ, ತಮ್ಮ ಪಾತ್ರದಿಂದ ಕಾಡಿಸಿಕೊಂಡೇ ನಟಿಸಿದ್ದ ಪ್ರಜ್ವಲ್ ಈ ಚಿತ್ರದ ಕಥೆಯ ಆಚೀಚೆಗಿನ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.

    ನಿರ್ದೇಶಕ ದಿನಕರ್ ತೂಗುದೀಪ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಆರಂಭಿಕವಾಗಿ ಕೇಳಿದಾಗಲೇ ಅದರ ಬಗ್ಗೆ ತಮ್ಮ ಪಾತ್ರದ ಬಗ್ಗೆ ಪ್ರಭಾವಿತನಾಗಿದ್ದಾಗಿ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಇಡೀ ಕಥೆ ಎಲ್ಲರ ಬದುಕುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಖಭಾವಿಸುವಂತಿದೆ. ಪ್ರತೀ ಪ್ರೇಕ್ಷಕರೆದೆಯಲ್ಲಿ, ಪ್ರತೀ ಪಾತ್ರಗಳೂ ಶಾಶ್ವತವಾಗೊಂದು ಛಾಯೆಯನ್ನು ಉಳಿಸುವಂತಿವೆ. ಎಲ್ಲ ಸಂಕಟಗಳ ಆಯಸ್ಸು ಕಡಿಮೆ ಎಂಬ ಸೂತ್ರದಡಿಯಲ್ಲಿ ಹೊಸಾ ಭರವಸೆಯೊಂದನ್ನು ತುಂಬಿ ಕಳಿಸುವಂತಿವೆ ಎಂಬುದು ಪ್ರಜ್ವಲ್ ಅನಿಸಿಕೆ.

    ಅಂದಹಾಗೆ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲದಿದ್ದರೂ ಎಂಥಾದ್ದೋ ಕೊರತೆ, ಕೊರೆತಗಳ ನಡುವೆ ಕಂಗಾಲಾದ ಪಾತ್ರವದು. ಇಡೀ ಚಿತ್ರದ ಜೀವಾಳವಾಗಿರೋ ಆ ಪಾತ್ರದ ಅಸಲೀಯತ್ತೇನೆಂಬುದು ಬಿಡುಗಡೆಯ ನಂತರ ಗೊತ್ತಾಗಲಿದೆಯಾದರೂ, ಆ ಪಾತ್ರದ ಪ್ರಭಾವ ದೊಡ್ಡದೆಂಬುದು ಈಗಾಗಲೇ ಜಾಹೀರಾಗಿದೆ.

    ಪ್ರಜ್ವಲ್ ದೇವರಾಜ್ ನಿರ್ದೇಶಕ ತೂಗುದೀಪ ದಿನಕರ್ ಅವರ ಫ್ಯಾಮಿಲಿ ಫ್ರೆಂಡ್. ಪ್ರಜ್ವಲ್ ರನ್ನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರೋ ದಿನಕರ್ ಅವರ ಸಿನಿಮಾ ಬೆಳವಣಿಗೆಗಳನ್ನೂ ಗಮನಿಸುತ್ತಲೇ ಇದ್ದರು. ಅದ್ಭುತ ಎನರ್ಜಿ ಇರೋ ಪ್ರಜ್ವಲ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ದಿನಕರ್ ಅವರಿಗೂ ಇತ್ತು. ಅದು ಪ್ರಜ್ವಲ್ ಅವರದ್ದೂ ಆಗಿತ್ತು. ಕಾಲವೇ ಅದಕ್ಕೆ ವೇದಿಕೆ ಸಿದ್ಧಪಡಿಸಿದೆ. ಪ್ರಜ್ವಲ್‍ಗಾಗಿ ಒಂದು ಪಾತ್ರವೂ ಸೃಷ್ಟಿಯಾಗಿದೆ. ಇಂಥಾ ಕಾಲಾಂತರಗಳ ಕನಸಿನಂತೆ ಮೂಡಿ ಬಂದಿರೋ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ವಾರದೊಪ್ಪತ್ತಿನಲ್ಲೇ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಕ್ಕರ್ ಸೆಟ್ಟಿಗೆ ಬಂದ್ರು ದಿನಕರ್ ತೂಗುದೀಪ!

    ಟಕ್ಕರ್ ಸೆಟ್ಟಿಗೆ ಬಂದ್ರು ದಿನಕರ್ ತೂಗುದೀಪ!

    ಮನೋಜ್ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಟಕ್ಕರ್ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ನಿರ್ದೇಶಕ ರಘು ಮನೋಜ್ ಮತ್ತು ಭಜರಂಗಿ ಲೋಕಿ ನಡುವಿನ ಮೈನವಿರೇಳಿಸುವ ಸಾಹಸ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಹೀಗೆ ತಿಂಗಳಿಂದಲೂ ಬಿಡುವಿರದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಟಕ್ಕರ್ ಚಿತ್ರ ತಂಡಕ್ಕೆ ಏಕಾಏಕಿ ಅಚ್ಚರಿಯೊಂದು ಎದುರಾಗಿತ್ತು!

    ಮನೋಜ್ ಅವರ ಸೋದರ ಮಾವ ದಿನಕರ್, ಮಡದಿ ಮಾನಸಾ ದಿನಕರ್ ಅವರ ಜೊತೆ ಟಕ್ಕರ್ ಚಿತ್ರದ ಸೆಟ್ಟಿಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕೂಡಾ ಹಾಜರಿದ್ದು ಚಿತ್ರತಂಡಕ್ಕೆ ಸರ್‍ಪ್ರೈಸ್ ನೀಡಿದ್ದಾರೆ.

    ಹೀಗೆ ಪತ್ನಿ ಸಮೇತರಾಗಿ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿದ್ದ ದಿನಕರ್ ಚಿತ್ರದ ಬಗ್ಗೆ ಪ್ರತಿಯೊಂದನ್ನೂ ವಿಚಾರಿಸಿಕೊಂಡಿದ್ದಾರೆ. ಅತ್ಯಂತ ವೇಗವಾಗಿ ಚಿತ್ರೀಕರಣ ನಡೆಯುತ್ತಿರೋದರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಪ್ರತಿಯೊಂದರಲ್ಲಿಯೂ ಚೆಂದದ ಪರ್ಫಾರ್ಮೆನ್ಸ್ ನೀಡುತ್ತಿರೋ ಸೋದರಳಿಯ ಮನೋಜ್ ಅವರನ್ನೂ ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದಾರೆ. ಸೃಜನ್ ಲೋಕೇಶ್ ಕೂಡಾ ತಮ್ಮ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ದಿನಕರ್ ಅವರ ಜೊತೆ ಬಂದು ಟಕ್ಕರ್ ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.

    ದಿನಕರ್ ಅವರಂತೂ ಈಗ ಭಾರೀ ಒತ್ತಡದಲ್ಲಿದ್ದಾರೆ. ಅವರು ನಿರ್ದೇಶನ ಮಾಡಿರೋ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಬಿಡುಗಡೆಯಾಗೋ ದಿನ ಹತ್ತಿರಾಗುತ್ತಿರೋದರಿಂದಾಗಿ ಪ್ರಮೋಷನ್ ಕೆಲಸದಲ್ಲವರು ಬ್ಯುಸಿಯಾಗಿದ್ದಾರೆ. ಆದರೆ ಅಂಥಾ ಒತ್ತಡಗಳ ನಡುವೆಯೂ ಅಳಿಯ ಮನೋಜ್ ಅವರ ಚಿತ್ರದ ಸೆಟ್ಟಿಗೆ ಭೇಟಿ ನೀಡಿ ಇಡೀ ಚಿತ್ರ ತಂಡವನ್ನು ಹುರಿದುಂಬಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹರಿಪ್ರಿಯಾ ಲೈಫ್ ಜೊತೆ ಒಂದ್ ಬಿಯರ್ ಕಥೆ!

    ಹರಿಪ್ರಿಯಾ ಲೈಫ್ ಜೊತೆ ಒಂದ್ ಬಿಯರ್ ಕಥೆ!

    ಬೆಂಗಳೂರು: ನಟನೆಯ ವಿಚಾರದಲ್ಲಿ ಯಾವ ಪಾತ್ರಕ್ಕೆ ಯಾವ ರೀತಿ ಒಗ್ಗಿಕೊಳ್ಳಲೂ ಸೈ ಎಂಬಂಥಾ ಬಿಂದಾಸ್ ಹುಡುಗಿ ಹರಿಪ್ರಿಯಾ. ಇಂಥಾ ಮನಸ್ಥಿತಿಯಿಂದಲೇ ಪರಿಪೂರ್ಣ ನಟಿಯಾಗಿ ಬಿಂಬಿಸಿಕೊಂಡಿರೋ ಹರಿಪ್ರಿಯಾ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಾಯಕಿ. ದಿನಕರ್ ತೂಗುದೀಪ ನಿರ್ದೇಶನದ ಈ ಚಿತ್ರದಲ್ಲಿ ಇವರ ಪಾತ್ರವೇನು? ಅದರಲ್ಲಿ ಇನ್ಯಾವ ವಿಶೇಷಗಳೊಂದಿಗೆ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ ಎಂಬೆಲ್ಲ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು.

    ಇದನ್ನು ತಣಿಸಲೋಸ್ಕರ ತಲಾಷಿಗಿಳಿದಾಗ ಸಿಕ್ಕಿದ್ದು ಒಗರೊಗರಾದ ಬಿಯರ್ ಕಥೆ!

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ಒಂಥರಾ ವಿಶೇಷವಾದ ಪಾತ್ರ. ಅದರಲ್ಲಿವರು ಸ್ನೇಹಿತರಿಂದೆಲ್ಲ ಪ್ರೀತಿಯಿಂದ ರ್ಯಾಚ್ ಅಂತ ಕರೆಸಿಕೊಳ್ಳೋ ರಶ್ಮಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಟ್ರಿಪ್ಪೊಂದರ ಮೂಲಕ ಬದುಕಿನ ಸಾಕ್ಷಾತ್ಕಾರವಾಗೋ ಕಥೆ ಹೊಂದಿರೋ ಈ ಚಿತ್ರದ ಪಾತ್ರಕ್ಕಾಗಿ ಹರಿಪ್ರಿಯಾ ಬಿಂದಾಸಾಗಿ ಬಿಯರ್ ಹೊಡೆಯೋ ದೃಶ್ಯಾವಳಿಯಲ್ಲಿಯೂ ನಟಿಸಿದ್ದಾರಂತೆ!

    ಈ ಹಿಂದೆ ನೀರ್ ದೋಸೆ ಚಿತ್ರದಲ್ಲಿನ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಹರಿಪ್ರಿಯಾ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದರು. ಆ ಚಿತ್ರದಲ್ಲಿ ಸಿಗರೇಟು ಸೇದೋ ಸೀನುಗಳಲ್ಲಿ ಅವರು ಸಂಚಲನವನ್ನೇ ಸೃಷ್ಟಿಸಿದ್ದರು. ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಿಯರ್ ಸೀನು ಅದೇ ರೀತಿ ಸೆನ್ಸೇಷನ್ ಕ್ರಿಯೇಟ್ ಮಾಡುವಂತಿದೆಯಾ ಎಂಬ ಪ್ರಶ್ನೆಗೆ ಉತ್ತರ ಸಿಗೋ ದಿನ ಹತ್ತಿರದಲ್ಲಿಯೇ ಇದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಫ್ ಜೊತೆ ಒಂದ್ ಸೆಲ್ಫಿ – ಕಥೆ ಹುಟ್ಟಿದ್ದ ಬಗ್ಗೆ ದಿನಕರ್ ಹೇಳಿದ ಇಂಟರೆಸ್ಟಿಂಗ್ ಕಥೆ!

    ಲೈಫ್ ಜೊತೆ ಒಂದ್ ಸೆಲ್ಫಿ – ಕಥೆ ಹುಟ್ಟಿದ್ದ ಬಗ್ಗೆ ದಿನಕರ್ ಹೇಳಿದ ಇಂಟರೆಸ್ಟಿಂಗ್ ಕಥೆ!

    ಸಾರಥಿಯಂಥಾ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ದಿನಕರ್ ತೂಗುದೀಪ ಅವರ ನಿರ್ದೇಶನದ ನಾಲ್ಕನೇ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಲವ್ಲಿ ಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಏನೆಂಬ ಬಗ್ಗೆ ಎಲ್ಲೆಡೆ ಕುತೂಹಲ ಹರಡಿಕೊಂಡಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ಕಥೆ ಹುಟ್ಟಿದ ಮಜವಾದ ಕಥೆಯ ಬಗ್ಗೆ ದಿನಕರ್ ಅವರು ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ!

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕೆ ಕಥೆ ಬರೆದಿದ್ದು ದಿನಕರ್ ಅವರ ಮಡದಿ ಮಾನಸಾ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ದಿನಕರ್ ಎಲ್ಲ ರೀತಿಯಿಂದಲೂ ತಮ್ಮನ್ನು ಕಾಡಿ ಕೈ ಹಿಡಿದೆಬ್ಬಿಸೋ ಕಥೆಯೊಂದು ಸಿಗದ ಹೊರತಾಗಿ ನಿರ್ದೇಶನಕ್ಕಿಳಿಯುವವರಲ್ಲ. ಒಂದು ದೊಡ್ಡ ಗ್ಯಾಪಿನಲ್ಲಿ ಅಂಥಾದದ್ದೊಂದು ನಿರೀಕ್ಷೆ ಹೊಂದಿದ್ದ ದಿನಕರ್ ಅವರಿಗೆ ಮಾನಸಾ ಈ ಚಿತ್ರದ ಕಥೆಯ ಎಳೆಯೊಂದನ್ನು ಹೇಳಿದ್ದು ಈಗ್ಗೆ ಒಂದೂವರೆ ವರ್ಷಗಳ ಹಿಂದೆ!

    ಈ ಕಥಾ ಎಳೆ ಕೇಳಿದಾಕ್ಷಣ ಏನೋ ಛಳುಕು ಮೂಡಿದಂತಾಗಿ ತಕ್ಷಣವೇ ಅವರು ಮಾನಸಾರ ಜೊತೆ ಸೇರಿ ಕಥೆಗೊಂದು ರೂಪ ಕೊಡಲಾರಂಭಿಸಿದ್ದರು. ಅಖಂಡ ಆರೇಳು ತಿಂಗಳು ಕಳೆದ ನಂತರ ಕಥೆಗೊಂದು ಸ್ಪಷ್ಟವಾದ ರೂಪ ಬಂದಿತ್ತು. ಆ ನಂತರ ಮತ್ತೆ ಆರು ತಿಂಗಳು ಪಟ್ಟಾಗಿ ಕೂತ ದಿನಕರ್ ಅವರೇ ಸ್ಕ್ರೀನ್ ಪ್ಲೇ ರಚಿಸಿದ್ದರು. ಮಾನಸಾ ಕೂಡಾ ಅದಕ್ಕೆ ಸಹಕರಿಸಿದ್ದರು. ಹೀಗೆ ಸ್ಕ್ರೀನ್ ಪ್ಲೇ ರೆಡಿಯಾದಾಕ್ಷಣವೇ ನಿರ್ಮಾಪಕರನ್ನು ಭೇಟಿಯಾದಾಗ ಅವರು ಈ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಳ್ಳಲು ತೆಗೆದುಕೊಂಡಿದ್ದು ಕೇವಲ ಎರಡು ನಿಮಿಷವಂತೆ!

    ಆ ನಂತರದಲ್ಲಿ ಚಿತ್ರೀಕರಣ ಶುರು ಮಾಡಿದಾಗಲೂ ಚಿತ್ರದುದ್ದಕ್ಕೂ ಕಥೆ ಬರೆದ ಮಾನಸಾ ಸಾಥ್ ನೀಡಿದ್ದಾರೆ. ತಮ್ಮ ಕಥೆ ದೃಶ್ಯವಾಗೋದನ್ನು ಥ್ರಿಲ್ ಆಗುತ್ತಲೇ ಕಣ್ತುಂಬಿಕೊಂಡಿದ್ದಾರೆ. ಕಡೆಗೆ ಎಡಿಟಿಂಗ್ ಎಲ್ಲ ಆದ ನಂತರ ನೋಡಿ ಹಿರಿ ಹಿರಿ ಹಿಗ್ಗಿದ್ದಾರಂತೆ. ಒಟ್ಟಾರೆಯಾಗಿ ಈ ಚಿತ್ರದ ಉದ್ದಕ್ಕೂ ದಿನಕರ್ ಅವರ ಮಡದಿ ಮಾನಸಾ ಪ್ರಮುಖ ಪಾತ್ರ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews