Tag: ದಿಗ್ವಿಜಯ್ ಸಿಂಗ್

  • ಮಧ್ಯಪ್ರದೇಶದಲ್ಲಿ ತಡರಾತ್ರಿ ಆಪರೇಷನ್ ಕಮಲ – ಚಿಕ್ಕಮಗಳೂರು ರೆಸಾರ್ಟಿಗೆ ಶಾಸಕರು ಶಿಫ್ಟ್

    ಮಧ್ಯಪ್ರದೇಶದಲ್ಲಿ ತಡರಾತ್ರಿ ಆಪರೇಷನ್ ಕಮಲ – ಚಿಕ್ಕಮಗಳೂರು ರೆಸಾರ್ಟಿಗೆ ಶಾಸಕರು ಶಿಫ್ಟ್

    – ಕರ್ನಾಟಕ ಮಾದರಿಯಲ್ಲಿ ಆಪರೇಷನ್
    – ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಶಾಸಕರು
    – ತಡರಾತ್ರಿ ಚಿಕ್ಕಮಗಳೂರಿಗೆ ಶಿಫ್ಟ್

    ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲ ಮಾದರಿಯಲ್ಲಿ ತಡರಾತ್ರಿ ಮಧ್ಯಪ್ರದೇಶದಲ್ಲಿ ಆಪರೇಷನ್ ಆರಂಭಗೊಂಡಿದ್ದು 12 ಮಂದಿ ಶಾಸರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಈ ಸಂಬಂಧ 8 ಮಂದಿ ಶಾಸಕರು ದೆಹಲಿಗೆ ಶಿಫ್ಟ್ ಆಗಿದ್ದರೆ ರಾತ್ರೋರಾತ್ರಿ 4 ಮಂದಿ ಶಾಸಕರು ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ.

    ತಡರಾತ್ರಿ 4 ಶಾಸಕರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದು ಅವರು ಈಗ ಚಿಕ್ಕಮಗಳೂರಿನ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಡಿಸಿಎಂ ಒಬ್ಬರ ಕಣ್ಗಾವಲಿನಲ್ಲಿ ಚಿಕ್ಕಮಗಳೂರಿನಲ್ಲಿ ನಾಲ್ವರು ಕೈ ಶಾಸಕರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ರೆಸಾರ್ಟ್‍ನಲ್ಲಿ ಬಿಜೆಪಿ ಬಲವಂತವಾಗಿ ಶಾಸಕರನ್ನು ಹಿಡಿದಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಧ್ಯ ಪ್ರದೇಶದ ಸಚಿವ, ಕಾಂಗ್ರೆಸ್ ನಾಯಕರಾದ ಜಿತು ಪಟ್‍ವಾರಿ ಮತ್ತು ಜೈವರ್ಧನ್ ಸಿಂಗ್ ಅವರು ಐಟಿಸಿ ರೆಸಾರ್ಟ್‍ಗೆ ತೆರಳಿ ಉಚ್ಚಾಟಿತ ಬಿಎಸ್‍ಪಿ ಶಾಸಕಿ ರಮಾಬಾಯಿ ಅವರ ಜತೆ ತೆರಳುತ್ತಿರುವ ವಿಡಿಯೋ ಲಭ್ಯವಾಗಿದೆ.

    ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಶಾಸಕರಿಗೆ ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಕಾಂಗ್ರೆಸ್ಸಿಗೆ ಮರಳಲಿದ್ದಾರೆ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಕಮಲನಾಥ್ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ. ಎಲ್ಲ ಶಾಸಕರು ವಾಪಸ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಎರಡು ದಿನಗಳ ದಿಗ್ವಿಜಯ್ ಸಿಂಗ್ ಮಾತನಾಡಿ, ಕರ್ನಾಟಕದಲ್ಲಿ ನಡೆದಂತೆ ಮಧ್ಯಪ್ರದೇಶದಲ್ಲಿ ಸರ್ಕಾರ ಬೀಳಿಸಲು ನಾವು ಬಿಡುವುದಿಲ್ಲ. 25-30 ಕೋಟಿ ರೂ. ನೀಡಿ ಬಿಜೆಪಿ ಶಾಸಕರನ್ನು ಖರೀದಿಸಲು ಮುಂದಾಗುತ್ತಿದೆ. ಮೊದಲ ಕಂತಿನಲ್ಲಿ 5 ಕೋಟಿ ನಂತರ ರಾಜ್ಯಸಭಾಗೆ ಆಯ್ಕೆ ಮಾಡುವುದು, ಕೊನೆಗೆ ಉಳಿದ ಹಣ ಹಂಚಿಕೆ ಸಂಬಂಧ ಒಪ್ಪಂದ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಗೋಪಾಲ್ ಭಾರ್ಗವ್, ಬಿಜೆಪಿ ಯಾರನ್ನು ಸಂಪರ್ಕಿಸಿಲ್ಲ. ಅಧಿಕಾರದಲ್ಲಿರುವ ಶಾಸಕರ ತಾವಾಗಿಯೇ ಬಿಜೆಪಿಗೆ ಬಂದರೆ ಸ್ವಾಗತ ಎಂದಿದ್ದರು. ಪ್ರಸ್ತುತ 230 ಸದಸ್ಯರನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಪರ ಸ್ಪೀಕರ್ ಸೇರಿ 121 ಶಾಸಕರ ಬಲವನ್ನು ಹೊಂದಿದೆ.

    ಕಳೆದ ಜುಲೈನಲ್ಲಿ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

  • ಕೊಟ್ಟ ಮಾತು ಉಳಿಸಿಕೊಳ್ಳದ ರಾಹುಲ್ ಕ್ಷಮೆ ಕೇಳಲಿ- ಕೈ ನಾಯಕ, ದಿಗ್ವಿಜಯ್ ಸಿಂಗ್ ಸಹೋದರ

    ಕೊಟ್ಟ ಮಾತು ಉಳಿಸಿಕೊಳ್ಳದ ರಾಹುಲ್ ಕ್ಷಮೆ ಕೇಳಲಿ- ಕೈ ನಾಯಕ, ದಿಗ್ವಿಜಯ್ ಸಿಂಗ್ ಸಹೋದರ

    ಭೋಪಾಲ್: ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಗಾಂಧಿ ಮಾತು ತಪ್ಪಿದ್ದು, ಈ ಕುರಿತು ಜನತೆ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕಿರಿಯ ಸಹೋದರ ಲಕ್ಷ್ಮಣ್ ಸಿಂಗ್ ಒತ್ತಾಯಿಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಮಧ್ಯಪ್ರದೇಶದ ರೈತರ ಬಾಕಿ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ಹೀಗಾಗಿ ರಾಹುಲ್ ಗಾಂಧಿ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಭರವಸೆ ಈಡೇರಿಸದೇ ದೂರ ಇರುವುದರಿಂದ ಹಾಗೂ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡದಿರುವುದರಿಂದ ಕ್ಷಮೆಯಾಚಿಸಬೇಕು. ಇಂತಹ ಭರವಸೆಗಳನ್ನು ನೀಡಬಾರದು. ಭರವಸೆ ನೀಡುವ ಬದಲು ರೈತರ ಸಂಪೂರ್ಣ ಸಾಲವನ್ನು ಯಾವಾಗ ಮನ್ನಾ ಮಾಡಲಾಗುವುದು ಎಂದು ಸಮಯದ ಚೌಕಟ್ಟನ್ನು ನಿಗದಿಪಡಿಸಬೇಕು ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

    ಕಳೆದ ವರ್ಷ ಜೂನ್‍ನಲ್ಲಿ ರಾಜ್ಯದ ಮಂಡ್‍ಸೌರ್ ಜಿಲ್ಲೆಯಲ್ಲಿ ನಡೆದ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಈ ಭರವಸೆ ನೀಡಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ರಾಜಸ್ಥಾನ ಮತ್ತು ಚತ್ತಿಸ್‍ಗಢದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಆಡಳಿತ ವಹಿಸಿಕೊಂಡ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದರು.

    ನನ್ನನ್ನೂ ಸೇರಿದಂತೆ ಎಲ್ಲ ಕಾಂಗ್ರೆಸ್ ಶಾಸಕರು ಪ್ರತಿದಿನ ರೈತರನ್ನು ಭೇಟಿಯಾಗುತ್ತೇವೆ. ರಾಜ್ಯ ಸರ್ಕಾರ ಅವರಿಗೆ ಸಾಲ ಮನ್ನಾ ಪತ್ರಗಳನ್ನು ನೀಡಿದ್ದರೂ, ಸಂಬಂಧಪಟ್ಟ ಬ್ಯಾಂಕ್ ಆಡಳಿತದ ಮಟ್ಟದಲ್ಲಿ ಇನ್ನೂ ಸಾಲ ಮನ್ನಾ ಆಗಿಲ್ಲ ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಏನು ಮಾಡಲು ಸಾಧ್ಯ ಎಂದು ಲಕ್ಷಣ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

    ಚಚೋಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಲಕ್ಷ್ಮಣ್ ಸಿಂಗ್ ಅವರು, ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಕಳೆದ ತಿಂಗಳು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಹ ಅವರು ಹಾಡಿಹೊಗಳಿದ್ದರು.

  • ಕೇಸರಿ ಬಟ್ಟೆ ಧರಿಸಿ, ದೇವಸ್ಥಾನದಲ್ಲಿ ರೇಪ್: ದಿಗ್ವಿಜಯ್ ಸಿಂಗ್

    ಕೇಸರಿ ಬಟ್ಟೆ ಧರಿಸಿ, ದೇವಸ್ಥಾನದಲ್ಲಿ ರೇಪ್: ದಿಗ್ವಿಜಯ್ ಸಿಂಗ್

    ಭೋಪಾಲ್: ಕೇಸರಿ ಬಟ್ಟೆ ಧರಿಸಿದ ವ್ಯಕ್ತಿಗಳಿಂದ ಅತ್ಯಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ, ಮಾಜಿ ಸಂಸದ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದು ನಮ್ಮ ಹಿಂದೂ ಸಂಸ್ಕೃತಿಯೇ? ನಮ್ಮ ಸನಾತನ ಧರ್ಮವನ್ನು ಹಾನಿ ಮಾಡುತ್ತಿರುವವರನ್ನು ದೇವರು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

    ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರತಿ ಅಪರಾಧವನ್ನು ಸನಾತನ ಧರ್ಮದೊಂದಿಗೆ ಸಂಯೋಜಿಸುವ ಮೂಲಕ ಹಿಂದೂಗಳನ್ನು ಕೆಣಕುವ ಅಭ್ಯಾಸವನ್ನು ದಿಗ್ವಿಜಯ್ ಸಿಂಗ್ ಹೊಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಅಪರಾಧಗಳ ವಿಷಯ ಬಂದಾಗ ಅವರಿಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಇಂದು ಕಾಂಗ್ರೆಸ್‍ನ ಸಿದ್ಧಾಂತ ಎಂದು ದೇವಿಕಾ ಎಂಬವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

    ಈ ಹಿಂದೆಯೂ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಮಧ್ಯಪ್ರದೇಶದ ಭಿಂಡ್‍ನಲ್ಲಿ ಮಹಾರಾಣಾ ಪ್ರತಾಪ್ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ್ದ ಅವರು, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನಿಂದ ಬಿಜೆಪಿ ಹಾಗೂ ಬಜರಂಗ ದಳ ಹಣ ಪಡೆಯುತ್ತಿವೆ. ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಾಗಿ ಪಾಕಿಸ್ತಾನದ ಐಎಸ್‍ಐಗೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

    ಬಿಜೆಪಿ ಹಾಗೂ ಹಿಂದೂ ಸಂಘಟನೆಯಾಗಿರುವ ಬಜರಂಗ ದಳಕ್ಕೆ ಪಾಕಿಸ್ತಾನದ ಐಎಸ್‍ಐನಿಂದ ಹಣ ವರ್ಗಾವಣೆಯಾಗುತ್ತಿದೆ. ಇದನ್ನು ಎಲ್ಲರೂ ಗಮನಿಸಬೇಕು, ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಸಂಘ ಪರಿವಾರ ಸಿದ್ಧಾಂತದ ವಿರುದ್ಧ ಹೋರಾಡುತ್ತಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ- ಸಂಘ ಪರಿವಾರ ಇರಲಿಲ್ಲ. ಹೀಗಾಗಿ ಅವರಿಂದ ನಾವು ದೇಶ ಪ್ರೇಮವನ್ನು ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದರು.

  • ನೋಟ್ ಬ್ಯಾನ್ ವೇಳೆ ಕೂಡಿಟ್ಟ ಹಣದಿಂದ ಬಿಜೆಪಿ ಆಪರೇಷನ್ : ದಿಗ್ವಿಜಯ್ ಸಿಂಗ್

    ನೋಟ್ ಬ್ಯಾನ್ ವೇಳೆ ಕೂಡಿಟ್ಟ ಹಣದಿಂದ ಬಿಜೆಪಿ ಆಪರೇಷನ್ : ದಿಗ್ವಿಜಯ್ ಸಿಂಗ್

    ಮುಂಬೈ: ನೋಟ್ ಬ್ಯಾನ್ ಸಂದರ್ಭದಲ್ಲಿ ಕೂಡಿಟ್ಟ ಕೋಟ್ಯಂತರ ಹಣವನ್ನು ಇದೀಗ ವಿರೋಧ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ಬಳಸುತ್ತಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಮುಂಬೈನಲ್ಲಿದ್ದ ತಮ್ಮ ಸ್ನೇಹಿತ(ರೆಬೆಲ್ ಶಾಸಕ)ರನ್ನು ಭೇಟಿಯಾಗಲು ಬಂದಾಗ ಪೊಲೀಸರು ಹೋಟೆಲ್ ಒಳಗಡೆ ಪ್ರವೇಶಿಸಲು ನಿರಾಕರಿಸಿದರು. ಶಾಸಕರೂ ಸಹ ಅವರ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಹೋಟೆಲ್ ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರನ್ನು ತಡೆದರು ಎಂದು ಡಿಕೆಶಿ ಪ್ರಕರಣವನ್ನು ದಿಗ್ವಿಜಯ್ ಸಿಂಗ್ ಪ್ರಸ್ತಾಪಿಸಿ, ಬಿಜೆಪಿ ಆಪರೇಷನ್ ಕಮಲದ ವಿರುದ್ಧ ಹರಿಹಾಯ್ದರು.

    ಇದೇ ವೇಳೆ ಮಧ್ಯಪ್ರದೇಶದ ಕಮಲ್‍ನಾಥ್ ಅವರ ಮೈತ್ರಿ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ವಧ್ಯಪ್ರದೇಶದ ಸರ್ಕಾರ ಸುರಕ್ಷಿತವಾಗಿದೆ. ಮುಖ್ಯಮಂತ್ರಿ ಕಮಲ್‍ನಾಥ್ ಅವರು 121 ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಬೀಳಿಸಲು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಮಧ್ಯಪ್ರದೇಶ ಸರ್ಕಾರ ಬೀಳುತ್ತದೆ ಎಂಬುದು ಕೇವಲ ವದಂತಿ. ಸರ್ಕಾರ ಸುಭದ್ರವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಡಿಕೆಶಿ ಮುಂಬೈ ಹೈಡ್ರಾಮಾ
    ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದಾಗ ಮುಂಬೈ ಪೊಲೀಸರು ವಶಕ್ಕೆ ಪಡೆದು ಸಂಜೆ ಹೊತ್ತಿಗೆ ವಾಪಸ್ ಕಳುಹಿಸಿದ್ದರು. ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದರು. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆ ಶಿವಕುಮಾರ್ ಹಠಕ್ಕೆ ಮಣಿದು ಶಾಸಕರು ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ರೂಮ್ ಕೊಡಲು ನಿರ್ಧಾರ ಮಾಡಿದ್ದರು. ಆದರೆ, ಪಟ್ಟು ಬಿಡದ ಶಿವಕುಮಾರ್ ಶಾಸಕರು ತಂಗಿರುವ ಬಿಲ್ಡಿಂಗ್‍ನಲ್ಲೇ ರೂಮ್ ನೀಡುವಂತೆ ಹಠ ಹಿಡಿದಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಡಿಕೆಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಸಂಜೆ ವೇಳೆಗೆ ಬಿಡುಗಡೆ ಮಾಡಿದ್ದರು.

  • ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್‍ಗೆ ಸೋಲು – ಸಮಾಧಿಗೆ ಅವಕಾಶ ನೀಡಿ ಎಂದ ‘ಮಿರ್ಚಿ ಬಾಬಾ’

    ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್‍ಗೆ ಸೋಲು – ಸಮಾಧಿಗೆ ಅವಕಾಶ ನೀಡಿ ಎಂದ ‘ಮಿರ್ಚಿ ಬಾಬಾ’

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲ್ಲದಿದ್ದರೆ ಸಮಾಧಿ ಆಗುವುದಾಗಿ ಹೇಳಿದ್ದ ವೈರಗಾನಂದ್ ಬಾಬಾ ಅಲಿಯಾಸ್ ಮಿರ್ಚಿ ಬಾಬಾ ಮತ್ತೆ ಸುದ್ದಿಯಲ್ಲಿದ್ದಾರೆ.

    ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್ ಅವರು ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಗೆಲುವು ಪಡೆಯುತ್ತಾರೆ. ಇಲ್ಲವಾದರೆ ತಾವು ಸಮಾಧಿ ತೆಗೆದುಕೊಳ್ಳುವುದಾಗಿ ಬಾಬಾ ತಿಳಿಸಿದ್ದರು. ಸದ್ಯ ಸಾಧ್ವಿ ಪ್ರಗ್ಯಾ ಸಿಂಗ್ ಪ್ರಚಂಡ ಗೆಲುವು ಪಡೆದ ಕಾರಣ ತಾನು ಸಾಯೋದಕ್ಕೆ ಸಮಾಧಿ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬಾಬಾರ ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಳ್ಳಿ ಹಾಕಿದ್ದಾರೆ.

    ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಮಿರ್ಚಿ ಬಾಬಾ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ಭಾರೀ ಪ್ರಮಾಣದಲ್ಲಿ ಹೋಮ ಹವನ ನಡೆಸಿದ್ದರು. ಆ ವೇಳೆ ಹವನ ಮಾಡಿಸಿದ್ದರೆ ದಿಗ್ವಿಜಯ್ ಸಿಂಗ್ ಗೆಲುವು ಖಚಿತ ಎಂದು ಹೇಳಿದ್ದರು. ಮಿರ್ಚಿ ಬಾಬಾ ಸಲ್ಲಿಸಿರುವ ಮನವಿ ಅನ್ವಯ ಜೂನ್ 16 ರ ಮಧ್ಯಾಹ್ನ 2 ಗಂಟೆ 11 ನಿಮಿಷಕ್ಕೆ ಬಾಬಾ ಸಮಾಧಿ ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು.

  • ಹಠ ಯೋಗಕ್ಕೆ ದಿಗ್ವಿಜಯ್ ಸಿಂಗ್‍ರನ್ನ ಆಹ್ವಾನಿಸಿರಲಿಲ್ಲ: ಕಂಪ್ಯೂಟರ್ ಬಾಬಾ ಯೂಟರ್ನ್

    ಹಠ ಯೋಗಕ್ಕೆ ದಿಗ್ವಿಜಯ್ ಸಿಂಗ್‍ರನ್ನ ಆಹ್ವಾನಿಸಿರಲಿಲ್ಲ: ಕಂಪ್ಯೂಟರ್ ಬಾಬಾ ಯೂಟರ್ನ್

    ಭೋಪಾಲ್: ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ಹಠ ಯೋಗಕ್ಕೆ ಆಹ್ವಾನಿಸಿರಲಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಕಂಪ್ಯೂಟರ್ ಬಾಬಾ ಯೂಟರ್ನ್ ಹೊಡೆದಿದ್ದಾರೆ.

    ಚುನಾವಣಾ ಆಯೋಗ ನೀಡಿರುವ ನೋಟಿಸ್‍ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವರು, ಹಠ ಯೋಗ ಕ್ಯಾಂಪ್‍ಗೆ ಬರುವಂತೆ ದಿಗ್ವಿಜಯ್ ಸಿಂಗ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಅವರು ಪತ್ನಿಯ ಸಮೇತ ಬಂದು ಪೂಜೆಯಲ್ಲಿ ಭಾಗವಹಿಸಿದ್ದು ನನಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ದಾನಿಗಳಿಂದ ಹಣ ಸಂಗ್ರಹಿಸಿ ಹಠ ಯೋಗ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ಕಂಪ್ಯೂಟರ್ ಬಾಬಾ ಅವರ ಮೂಲ ಹೆಸರು ನಾಮ್‍ದಾಸ್ ತ್ಯಾಗಿ. ಅವರು ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌವ್ಹಾನ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ ಭೋಪಾಲ್‍ನ ಸಫಿಯಾ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ಹಠ ಯೋಗ ಕ್ಯಾಂಪ್ ಮಾಡಿದ್ದರು.

    ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಂಪ್ಯೂಟರ್ ಬಾಬಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿರ ಇಲ್ಲವೆಂದ ಮೇಲೆ ಮೋದಿಯೂ ಇಲ್ಲ ಎಂದು ಹೇಳಿದ್ದರು. ಈ ಸಂಬಂಧ ಬಿಜೆಪಿಯು ಕಂಪ್ಯೂಟರ್ ಬಾಬಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

    ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ನಾಯಕರ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಸಾಗರ್, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.

  • ದಿಗ್ವಿಜಯ್ ಸಿಂಗ್ ಪರ ಬಿಜೆಪಿಯ ಮಾಜಿ ಸಚಿವ ಪ್ರಚಾರ

    ದಿಗ್ವಿಜಯ್ ಸಿಂಗ್ ಪರ ಬಿಜೆಪಿಯ ಮಾಜಿ ಸಚಿವ ಪ್ರಚಾರ

    ಭೋಪಾಲ್: ಬಿಜೆಪಿಯ ಮಾಜಿ ಸಚಿವ ಕಂಪ್ಯೂಟರ್ ಬಾಬಾ ಅವರು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪರ ಪ್ರಚಾರ ಮಾಡುತ್ತಿದ್ದಾರೆ.

    ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ಗೆಲುವಿಗಾಗಿ ಕಂಪ್ಯೂಟರ್ ಬಾಬಾ ಅವರು ಹಠ ಯೋಗ ಮಾಡುತ್ತಿದ್ದಾರೆ. ಸಾವಿರಾರು ಸಾಧುಗಳು ಕೂಡ ಹಠ ಯೋಗದಲ್ಲಿ ಭಾಗಿಯಾಗಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಂಪ್ಯೂಟರ್ ಬಾಬಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿನ ಇಲ್ಲವೆಂದಮೇಲೆ ಮೋದಿಯೂ ಇಲ್ಲ ಎಂದು ಹೇಳಿದ್ದಾರೆ.

    ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ದಿಗ್ವಿಜಯ್ ಸಿಂಗ್ ಅವರು ಇಂದು ಕುಟುಂಬ ಸಮೇತ ವಿಶೇಷ ಪೂಜೆ ನೆರವೇರಿಸಿದರು. ಇತ್ತ ಅನೇಕ ಸಾಧುಗಳು ಹಠ ಯೋಗದಲ್ಲಿ ನಿರತರಾಗಿದ್ದಾರೆ.

    ದಿಗ್ವಿಜಯ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ನಾಯಕರ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಸಾಗರ್, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.

  • ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣೆ ಆಯೋಗ

    ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣೆ ಆಯೋಗ

    ಭೋಪಾಲ್: ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಪರಿಣಾಮ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಚುನಾವಣಾ ಆಯೋಗ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ಹೇರಿದೆ.

    ಸಾಧ್ವಿ ಪ್ರಜ್ಞಾ ಸಿಂಗ್ ಅವರು ಮಾಜಿ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಮತ್ತು ಬಾಬ್ರಿ ಮಸೀದಿ ಧ್ವಂಸ ವಿಚಾರದ ಬಗ್ಗೆ ವಿವಾದತ್ಮಾಕ ಹೇಳಿಕೆ ನೀಡಿದರು. ಇದರಂತೆ ಪ್ರಜ್ಞಾರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಆಯೋಗ ಗುರುವಾರ ಬೆಳಗ್ಗೆ 6 ರಿಂದ ಮುಂದಿನ 72 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ವಿಧಿಸಿದೆ.

    ಈ ನಿಷೇದ ಹೇರಿರುವ ಬಗ್ಗ ಪ್ರತಿಕ್ರಿಯೆ ನೀಡಿರುವ ಸಾಧ್ವಿ ಪ್ರಜ್ಞಾ ಸಿಂಗ್, ಇದರಿಂದ ಯಾವುದೇ ಸಮಸ್ಯೆ ಇಲ್ಲ ನಾನು ಚುನಾವಣಾ ಆಯೋಗಕ್ಕೆ ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ.

    2008 ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಸಾಧ್ವಿ ಠಾಕೂರ್ ಅವರು, 2011 ರಲ್ಲಿ ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ನಿಧನರಾದ ಮಾಜಿ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ದ ಮುಖ್ಯಸ್ಥರಾದ ಹೇಮಂತ್ ಕರ್ಕರೆ ಅವರು ಮಾಡಿದ ಕರ್ಮಕ್ಕೆ ಅವರಿಗೆ ಆ ರೀತಿಯ ಸಾವು ಬಂತು ಎಂದು ಹೇಳಿಕೆ ನೀಡಿದ್ದರು. 1992 ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಮಾಡಿದವರಲ್ಲಿ ನಾನು ಒಬ್ಬಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್‍ರನ್ನ ಭಯೋತ್ಪಾದಕ ಎಂದು ಕರೆದಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಆಯೋಗ ಸಾಧ್ವಿ ಅವರಿಗೆ ಮೂರನೇ ನೋಟಿಸ್ ಜಾರಿ ಮಾಡಿದೆ.

    48 ವರ್ಷದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಭೋಪಾಲ್‍ನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

  • ಮಸೂದ್ ಅಜರ್‌ಗೆ ಸಾಧ್ವಿ ಶಾಪ ಹಾಕಿದ್ರೆ ಸರ್ಜಿಕಲ್ ಸ್ಟ್ರೈಕ್ ಅಗತ್ಯವೇ ಬೀಳಲ್ಲ: ದಿಗ್ವಿಜಯ್ ಸಿಂಗ್

    ಮಸೂದ್ ಅಜರ್‌ಗೆ ಸಾಧ್ವಿ ಶಾಪ ಹಾಕಿದ್ರೆ ಸರ್ಜಿಕಲ್ ಸ್ಟ್ರೈಕ್ ಅಗತ್ಯವೇ ಬೀಳಲ್ಲ: ದಿಗ್ವಿಜಯ್ ಸಿಂಗ್

    ಭೋಪಾಲ್: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಅವರು ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಶಾಪ ಹಾಕಿದರೆ ಸರ್ಜಿಕಲ್ ಸ್ಟ್ರೈಕ್ ಅಗತ್ಯವೇ ಬೀಳಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

    ಮಧ್ಯ ಪ್ರದೇಶದ ಭೋಪಾಲ್‍ನ ಅಶೋಕ್ ಗಾರ್ಡನ್ ಬಳಿ ಪ್ರಚಾರ ನಡೆಸಿ ಮಾತನಾಡಿದ ಅವರು, ತಾವು ಶಾಪ ಹಾಕಿದ್ದರಿಂದಲೇ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಸಾವನ್ನಪ್ಪಿದ್ದರು ಎಂದು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹೇಳಿದ್ದಾರೆ. ದೇಶದ ಭದ್ರತೆಗಾಗಿ ಉಗ್ರರ ಜೊತೆ ಹೋರಾಡಿ ಹುತಾತ್ಮರಾದ ಕರ್ಕರೆ ಅವರ ಬಗ್ಗೆ ಸಾಧ್ವಿ ಸಿಂಗ್ ಹಗುರವಾಗಿ ಮಾತನಾಡಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಹೇಮಂತ್ ಕರ್ಕರೆ ಸಾವಿನ ಬಗ್ಗೆ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆ ವೈಯಕ್ತಿಕ: ಬಿಜೆಪಿ 

    ಉಗ್ರರು ಬೆಟ್ಟದಲ್ಲಿ ಅಡಗಿ ಕುಳಿತಿದ್ದರೂ ನಾವು ಹೊಡೆದು ಹಾಕುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಪುಲ್ವಾಮಾ, ಪಠಾನ್‍ಕೋಟ್ ಹಾಗೂ ಉರಿ ದಾಳಿ ನಡೆದಾಗ ಪ್ರಧಾನಿ ಮೋದಿ ಎಲ್ಲಿದ್ದರು? ಇಂತಹ ದಾಳಿಯನ್ನು ಯಾಕೆ ಮೋದಿ ತಡೆಯಲಿಲ್ಲ ಎಂದು ದಿಗ್ವಿಜಯ್ ಅವರು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಸಹೋದರರಂತೆ ಬದುಕುತ್ತಿದ್ದಾರೆ. ಹಿಂದೂಗಳು ಒಗ್ಗಾಟ್ಟಾಗಿ ಇರಬೇಕು ಎಂದು ಅವರು ಹೇಳುತ್ತಿದ್ದಾರೆ. ದೇಶವನ್ನು ಸುಮಾರು 500 ವರ್ಷಗಳ ಕಾಲ ಮುಸ್ಲಿಂ ರಾಜಮನೆತಗಳು ಆಳಿವೆ. ಆದರೆ ಇದು ಯಾವುದೇ ಧರ್ಮದ ಮೇಲೆ ಪರಿಣಾಮ ಬೀರಿಲ್ಲ. ಹೀಗಾಗಿ ರಾಜಕೀಯ ಲಾಭಕ್ಕೆ ಧರ್ಮ ಬಳಸಿಕೊಳ್ಳುವವರ ಬಗ್ಗೆ ಎಚ್ಚರ ವಹಿಸಿ ಎಂದು ಬಿಜೆಪಿ ನಾಯಕ ವಿರುದ್ಧ ಗುಡುಗಿದರು.

    ಹಿಂದೂ ಧರ್ಮದಲ್ಲಿ “ಹರ ಹರ ಮಹದೇವ್” ಎಂದು ಹೇಳಲಾಗುತ್ತದೆ. ಆದರೆ ಬಿಜೆಪಿಯವರು ”ಹರ ಹರ ಮೋದಿ” ಎಂದು ಹೇಳುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

    ಭೋಪಾಲ್ ಲೋಕಸಭಾ ಕ್ಷೇತ್ರದ ಮತದಾನವು ಮೇ 12ರಂದು ನಡೆಯಲಿದೆ. ಫಲಿತಾಂಶವು ಮೇ 23ರಂದು ಹೊರ ಬೀಳಲಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಹಿರಿಯ ಮುಖಂಡ ದಿಗ್ವಜಯ್ ಸಿಂಗ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಕಣಕ್ಕೆ ಇಳಿದಿದ್ದಾರೆ.

  • ಖಾತೆಗೆ 15 ಲಕ್ಷ ರೂ. ಬಂತೇ – ದಿಗ್ವಿಜಯ್ ಪ್ರಶ್ನೆಗೆ ವೇದಿಕೆಯಲ್ಲೇ ಉತ್ತರ ಕೊಟ್ಟ ಯುವಕನಿಗೆ ಸನ್ಮಾನ

    ಖಾತೆಗೆ 15 ಲಕ್ಷ ರೂ. ಬಂತೇ – ದಿಗ್ವಿಜಯ್ ಪ್ರಶ್ನೆಗೆ ವೇದಿಕೆಯಲ್ಲೇ ಉತ್ತರ ಕೊಟ್ಟ ಯುವಕನಿಗೆ ಸನ್ಮಾನ

    ನವದೆಹಲಿ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಭೋಪಾಲ್ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಪ್ರಶ್ನೆಗೆ ವೇದಿಕೆ ಮೇಲೆ ಉತ್ತರಿಸಿದ್ದ ಯುವಕನಿಗೆ ಬಿಜೆಪಿ ಸನ್ಮಾನ ಮಾಡಿ ಗೌರವ ಸೂಚಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು 2014ರ ಚುನಾವಣೆಗೂ ಮುನ್ನ 15 ಲಕ್ಷ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿದ್ದರು. ನಿಮ್ಮ ಖಾತೆಗೆ ಹಣ ಬಂದಿದ್ದೇಯಾ ಎಂದು ದಿಗ್ವಿಜಯ್ ಸಿಂಗ್ ಪ್ರಚಾರ ಸಮಾರಂಭದಲ್ಲಿ ಪ್ರಶ್ನಿಸಿದ್ದರು. ಈ ವೇಳೆ ವೇದಿಕೆ ಬಂದಿದ್ದ ಅಮಿತ್ ಮಲಿ, ಮೋದಿ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸುವ ಮೂಲಕ 15 ಲಕ್ಷ ರೂ. ನನಗೆ ನೀಡಿದ್ದಾರೆ ಎಂದು ಹೇಳಿ ದಿಗ್ವಿಜಯ್ ಸಿಂಗ್‍ಗೆ ಮುಜುಗರ ಉಂಟು ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಒಂದೇ ದಿನದಲ್ಲಿ ಯುವಕ ಸ್ಟಾರ್ ಆಗಿದ್ದ.

    ಕಾಂಗ್ರೆಸ್ ಸಮಾವೇಶದ ಬಳಿಕ ಅಲ್ಲಿದ್ದ ಯಾರು ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಅಮಿತ್ ಮಲಿ ಸ್ಪಷ್ಟಪಡಿಸಿದ್ದಾನೆ. ಇತ್ತ ಯುವಕ ನಡೆಗೆ ಮೆಚ್ಚುಗೆ ಸೂಚಿಸಿರುವ ಭೋಪಾಲ್ ಬಿಜೆಪಿ ಘಟಕ ಸನ್ಮಾನ ಮಾಡಿ ಗೌರವಿಸಿದೆ.

    ಲೋಕಸಭಾ ಚುನಾವಣೆಯ 6ನೇ ಹಂತದ ಭಾಗವಾಗಿ ಮೇ 12 ರಂದು ಭೋಪಾಲ್ ನಲ್ಲಿ ಮತದಾನ ನಡೆಯಲಿದೆ. ಇತ್ತ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾ ಸಿಂಗ್ ಭೋಪಾಲ್ ನಿಂದ ಸ್ಪರ್ಧೆ ಮಾಡುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.