Tag: ದಾಸವರೇಣ್ಯ ಶ್ರೀ ವಿಜಯ ದಾಸರು

  • `ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ

    `ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ

    ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ  ಆರಾಧನಾ ಪರ್ವಕಾಲದಲ್ಲಿ “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” (Dasavarenya Sri Vijaya Dasaru 2) ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.  ತೇಜಸ್ವಿನಿ ಅನಂತ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.‌ ಇತ್ತೀಚೆಗಷ್ಟೇ ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಹಾಗೂ ಖ್ಯಾತ ಗಮಕ ಕಲಾವಿದರಾದ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಹೂರ್ತ ಸಮಾರಂಭದ ನಂತರ ಮಾತನಾಡಿದ ಗಣ್ಯರು ಚಿತ್ರ  ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.            ‌‌‌

    ನಾನು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ ನಿರ್ಮಾಪಕ ತ್ರಿವಿಕ್ರಮ ಜೋಶಿ (Trivikrama Joshi),  ನಾನೇ ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಭಾಗ ಒಂದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಎರಡನೇ ಭಾಗಕ್ಕೆ ಚಾಲನೆ ದೊರಕ್ಕಿದೆ. ನನ್ನದಲ್ಲದ ಕ್ಷೇತ್ರಕ್ಕೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ (Madhusudan Havaldar) ನನ್ನನ್ನು ಎಳೆದು ತಂದಿದ್ದಾರೆ. ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ.‌  ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ ತಿಳಿಸುತ್ತಿದ್ದೇನೆ. ನವೆಂಬರ್ 12, ದೇಶ ಕಂಡ ಸಜ್ಜನ ರಾಜಕಾರಣಿ ದಿ.ಅನಂತಕುಮಾರ್ ಅವರು ನಮ್ಮನೆಲ್ಲಾ ಬಿಟ್ಟು‌ ಹೋದ ದಿನ. ಅವರು ನನ್ನ ಗುರುಗಳು. ಇಂದು ಅವರ ಶ್ರೀಮತಿ ಅವರು ಬಂದಿದ್ದಾರೆ. ಅವರ ಜೊತಗೆ ಅನಂತಕುಮಾರ್ ಅವರ ಕುರಿತಾದ ಚಿತ್ರ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸುತ್ತೇವೆ. ನನ್ನ ತರಹ ಸಾಕಷ್ಟು ಅನಂತಕುಮಾರ್ ಅಭಿಮಾನಿಗಳು ನನ್ನೊಂದಿಗಿರುತ್ತಾರೆ. ಇಂದು ಪೂಜ್ಯ ಆಚಾರ್ಯರು ಸಹ ಈ ಚಿತ್ರ ಆರಂಭಿಸುವಂತೆ ಹೇಳಿ ಆಶೀರ್ವದಿಸಿದ್ದಾರೆ ಎಂದರು.

    “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ.‌ ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಚಿತ್ರ ಸಿದ್ದವಾಗಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಒಂಭತ್ತು ಹಾಡುಗಳು ಚಿತ್ರದಲ್ಲಿರುತ್ತದೆ. ತ್ರಿವಿಕ್ರಮ ಜೋಶಿ, ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತ ಬಾಗೇವಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿರುತ್ತಾರೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

    ಚಿತ್ರಕಥೆ ಹಾಗೂ ಸಂಭಾಷಣೆ ಕುರಿತು ಜೆ.ಎಂ.ಪ್ರಹ್ಲಾದ್ ಮಾತನಾಡಿದರು. ಗೋಪಾಲದಾಸರ ಪಾತ್ರದಲ್ಲಿ ಕಾಣಿಕೊಳ್ಳುತ್ತಿರುವುದಾಗಿ ಪ್ರಭಂಜನ ದೇಶಪಾಂಡೆ ಹಾಗು ವಿಜಯದಾಸರ ಪತ್ನಿ ಹರಳಮ್ಮನವರ ಪಾತ್ರ ನಿರ್ವಹಿಸುತ್ತಿರುವುದಾಗಿ ನಟಿ ಶ್ರೀಲತ ಬಾಗೇವಾಡಿ ತಿಳಿಸಿದರು.

  • ‘ದಾಸವರೇಣ್ಯ ಶ್ರೀ ವಿಜಯ ದಾಸರು’ ಹಾಡು ರಿಲೀಸ್ ಮಾಡಿದ ಕೇಂದ್ರ ಸಚಿವ ಜೋಶಿ

    ‘ದಾಸವರೇಣ್ಯ ಶ್ರೀ ವಿಜಯ ದಾಸರು’ ಹಾಡು ರಿಲೀಸ್ ಮಾಡಿದ ಕೇಂದ್ರ ಸಚಿವ ಜೋಶಿ

    ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ ‘ದಾಸವರೇಣ್ಯ ಶ್ರೀ ವಿಜಯದಾಸರು’ (Dasavarenya Sri Vijaya Dasaru) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.  ತ್ರಿವಿಕ್ರಮ ಜೋಶಿ ಅವರು ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ,  ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿರುವ ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರದ ಧ್ವನಿ ಸುರುಳಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದರು. ಪಂಡಿತ ಪೂಜ್ಯ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ,  ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ಬಸವನಗೌಡ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

    ಶ್ರೀವೇದವ್ಯಾಸರು ರಚಿಸಿದ ವೇದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟ.  ಹರಿದಾಸರು ವೇದಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹಾಡುಗಳ ಮೂಲಕ ನೀಡಿದ್ದಾರೆ‌‌. ಶ್ರೀಪುರಂದರದಾಸರ ನಂತರ ಬರುವ ಶ್ರೀವಿಜಯದಾಸರು 2800 ಕ್ಕೂ ಹೆಚ್ಚು ಸುಳಾದಿಗಳನ್ನು, ಸಾಕಷ್ಟು ದೇವರನಾಮ ಹಾಗೂ ಸುಳಾದಿಗಳನ್ನು ರಚಿಸಿದ್ದಾರೆ. ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ ಈ ಚಿತ್ರವನ್ನು ಸ್ನೇಹಿತರಾದ ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿದ್ದಾರೆ. ಹರಿದಾಸರ ಚಿತ್ರಗಳ ಹ್ಯಾಟ್ರಿಕ್ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ‌‌. ವಿಜಯಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾರೈಸಿದರು.

    ಕನ್ನಡದಲ್ಲಿ ನವಕೋಟಿ ನಾರಾಯಣ, ಭಕ್ತ ಕನಕದಾಸ ಚಿತ್ರಗಳ ನಂತರ ಯಾವುದೇ ಹರಿದಾಸರ ಚಿತ್ರಗಳು ಬಂದಿಲ್ಲ ಎಂದು ಮಾತನಾಡಿದ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ, ಶ್ರೀ ಮಾತಾಂಬುಜ ಮೂವೀಸ್ ಮೂಲಕ ನಿರ್ಮಾಣವಾಗಿದ್ದ ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ನಾನು ಸಹ ನಿರ್ಮಾಪಕನಾಗಿ ಚಿತ್ರರಂಗ ಪ್ರವೇಶಿಸಿದೆ.  ಈಗ ಶ್ರೀ ದಾಸವರೇಣ್ಯ ವಿಜಯದಾಸರು ಚಿತ್ರವನ್ನು ನಮ್ಮ ತಂದೆ – ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಮೂಲಕ  ನಿರ್ಮಿಸಿದ್ದೇನೆ. ಮುಂದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಸರ ಕುರಿತಾದ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ. ವಿಜಯಕೃಷ್ಣ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡುಗಳನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರು ಬಿಡುಗಡೆ ಮಾಡಿದ್ದಾರೆ. ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬ ಗಣ್ಯರಿಗೆ ನನ್ನ ಧನ್ಯವಾದ ಎಂದರು.

    ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರು ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ವಿಜಯ ಪತಾಕೆ ಹಾರಿಸಲಿ ಎಂದು ತುಂಬು ಹೃದಯದಿಂದ ಹಾರೈಸಿದರು.