Tag: ದಾಖಲೆ

  • ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ನವದೆಹಲಿ: ಭಾರತದ ಕ್ರಿಕೆಟ್ ಮಾಂತ್ರಿಕ, ದಂತ ಕಥೆ ಎಂದೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ 5 ವಿಶ್ವ ದಾಖಲೆಗಳನ್ನು ಇನ್ನೂ ಯಾರೂ ಸರಗಟ್ಟಿಲ್ಲ.

    ಇದೀಗ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅವರು ಗುಡ್ ಬೈ ಹೇಳಿದ್ದು, ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನುಂಟು ಮಾಡಿದೆ. ಟೆಸ್ಟ್ ಕ್ರಿಕೆಟ್‍ಗೆ ಧೋನಿ 2014ರಲ್ಲಿ ನಿವೃತ್ತಿ ಘೋಷಿಸಿದ ಧೋನಿ ಶನಿವಾರ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಆದರೆ ಐಪಿಎಲ್‍ಬಲ್ಲಿ ಧೋನಿ ಆಟವಾಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ.

    1. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ
    ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ನಡೆದ ಟಿ-20 ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ ಗೆಲುವು ಸಾಧಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆಯಿತು. ಇದಾದ ಬಳಿಕ 2011ರ ಏಕದಿನ ವಿಶ್ವಕಪ್ 2013ರ ಐಸಿಸಿ ಚಾಂಪಿಯನ್ಸ್ ಟ್ರೋಪಿಯಲ್ಲಿ ಸಹ ಗೆಲವು ಸಾಧಿಸಿದೆ.

    2. ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳ ನಾಯಕ
    ಮಾಹಿ ಒಟ್ಟು 332 ಅಂತರಾಷ್ಟ್ರೀಯ ಪಂದ್ಯಗಳ ನಾಯಕತ್ವ ವಹಿಸಿದ್ದು, 200 ಏಕದಿನ, 60 ಟೆಸ್ಟ್ ಹಾಗೂ 72 ಟಿ 20 ಪಂದ್ಯಗಳಲ್ಲಿ ತಮ್ಮ ನಾಯಕತ್ವದ ಜಾಣತನ ತೋರಿಸಿದ್ದಾರೆ. ಇದು ಸಹ ವಿಶ್ವ ದಾಖಲೆಯಾಗಿದೆ. ಈವರೆಗೆ ಇದನ್ನು ಯಾರೂ ಸರಗಟ್ಟಿಲ್ಲ. ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 324 ಅಂತರಾಷ್ಟ್ರೀಯ ಪಂದ್ಯಗಳಿಗೆ ನಾಯಕರಾಗಿದ್ದರು. ಅಲ್ಲದೆ ಧೋನಿ ಮೂರು ಮಾದರಿಯ ಮಧ್ಯಗಳ ಪೈಕಿ ಎಲ್ಲದರಲ್ಲೂ 50 ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

    3. ಹೆಚ್ಚು ಏಕದಿನ ಪಂದ್ಯಗಳಲ್ಲಿ ನಾಟ್‍ಔಟ್
    ಮಾಹಿ 84 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ನಾಟ್‍ಔಟ್ ಆಗಿ ಉಳಿದುಕೊಂಡಿದ್ದಾರೆ. ಇದು ಸಹ ಮತ್ತೊಂದು ವಿಶ್ವ ದಾಖಲೆಯಾಗಿದೆ. ಇದರಲ್ಲಿ ಎರಡನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಶಾನ್ ಪೊಲಾಕ್ ಪಡೆದಿದ್ದು, 72 ಬಾರಿ ಔಟಾಗದೇ ಉಳಿದಿದ್ದಾರೆ.

    4. ಹೆಚ್ಚು ಸ್ಟಂಪಿಂಗ್
    ಧೋನಿ ಎಂದರೆ ಸ್ಟಂಪಿಂಗ್‍ನಲ್ಲಿ ಎಕ್ಸ್‍ಪರ್ಟ್. ಮಿಂಚಿನ ವೇಗದಲ್ಲಿ ಬಾಲ್ ಅನ್ನು ಸ್ಟಂಪ್‍ಗೆ ತಾಗಿಸುತ್ತಾರೆ. ಒಟ್ಟು 350 ಪಂದ್ಯಗಳಲ್ಲಿ ಧೋನಿ ಹೆಸರಲ್ಲಿ 123 ಆಟಗಾರರು ಸ್ಟಂಪ್ ಮಾಡಿದ್ದಾರೆ. 100 ಅಂತರಾಷ್ಟ್ರೀಯ ಸ್ಟಂಪಿಂಗ್‍ಗಳನ್ನು ಮಾಡಿದ ಏಕೈಕ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಮಾಹಿಯದ್ದು. ಒಟ್ಟು ಸ್ಟಂಪಿಂಗ್‍ನಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ ಹಾಗೂ ಆಸ್ಟ್ರೇಲಿಯಾದ ಆಡಮ್ ಗಿಲ್‍ಕ್ರಿಸ್ಟ್ ಧೋನಿ ನಂತರದ ಸ್ಥಾನವನ್ನು ಪಡೆದಿದ್ದಾರೆ.

    5. ನಾಯಕನಾಗಿ ಫೈನಲ್ ಗೆಲುವು
    ಧೋನಿ 6 ಅಂತರಾಷ್ಟ್ರೀಯ ಫೈನಲ್ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, ಇದರಲ್ಲಿ ಭಾರತ ನಾಲ್ಕು ಬಾರಿ ಜಯಗಳಿಸಿದೆ. ಈ ಮೂಲಕ ಧೋನಿ ಅಂತರಾಷ್ಟ್ರೀಯ ಏಕದಿನ ಪಂದ್ಯಗಳ ಯಶಸ್ಸಿನ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಂಡದ ನಾಯಕನಾಗಿ ಧೋನಿ ಒಟ್ಟು 110 ಏಕದಿನ ಪಂದ್ಯಗಳಲ್ಲಿ ತಂಡವನ್ನು ಜಯದತ್ತ ಕೊಂಡೊಯ್ದಿದ್ದಾರೆ. ಇದರಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದು, ರಿಕ್ಕಿ ಪಾಂಟಿಂಗ್ 165 ಏಕದಿನ ಪಂದ್ಯಗಳಲ್ಲಿ ತಂಡವನ್ನು ಜಯಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

  • ಪ್ರಧಾನಿಯಾಗಿ ಮತ್ತೊಂದು ದಾಖಲೆ ನಿರ್ಮಿಸಿದ ಮೋದಿ

    ಪ್ರಧಾನಿಯಾಗಿ ಮತ್ತೊಂದು ದಾಖಲೆ ನಿರ್ಮಿಸಿದ ಮೋದಿ

    – ಅಟಲ್ ಬಿಹಾರಿ ವಾಜಪೇಯಿಯನ್ನು ಹಿಂದಿಕ್ಕಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ವೃತ್ತಿಜೀವನದಲ್ಲಿ ಗುರುವಾರ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು 2,268 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ(67) ವಾಜಪೇಯಿ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಿಗಳ ಪೈಕಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

    ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅತಿ ಹೆಚ್ಚು ಅವಧಿ ಪ್ರಧಾನಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ನೆಹರು 16 ವರ್ಷ ಹಾಗೂ 286 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇವರ ಮಗಳು ಇಂದಿರಾ ಗಾಂಧಿ ಎರಡನೇ ಸ್ಥಾನದಲ್ಲಿದ್ದು, 11 ವರ್ಷ ಹಾಗೂ 59 ದಿನ ಆಡಳಿತ ನಡೆಸಿದ್ದಾರೆ.

    ಇದಾದ ಬಳಿಕ ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 3ನೇ ಸ್ಥಾನದಲ್ಲಿದ್ದು, ಇವರು 10 ವರ್ಷ ಹಾಗೂ 4 ದಿನಗಳ ಕಾಲ ಪ್ರಧಾನಿಯಾಗಿದ್ದರು.

    ನರೇಂದ್ರ ಮೋದಿಯವರು ಪ್ರಧಾನಿಯಾಗಿ 6 ವರ್ಷ ಪೂರೈಸಿದ್ದು, ಬಿಜೆಪಿ ಭರ್ಜರಿ 303 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಮೋದಿ ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಎನ್‍ಡಿಎ ಕೂಟ ಒಟ್ಟು 353 ಸ್ಥಾನಗಳಲ್ಲಿ ಜಯಗಳಿಸಿದೆ.

    ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ 3 ದಾಖಲೆಗಳನ್ನು ಮಾಡಿದ್ದಾರೆ. ರಾಮಜನ್ಮ ಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಅಲ್ಲದೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಾರ್ಚ್ 24ರಂದು 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಭಾಷಣ ಎಂಬ ದಾಖಲೆಯನ್ನು ಇದು ಬರೆದಿತ್ತು.

    ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಟ್ವಿಟ್ಟರ್ ನಲ್ಲಿ 50 ಮಿಲಿಯನ್(5 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಜನ ಫಾಲೋವರ್ಸ್ ಹೊಂದಿರುವ ಭಾರತದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯ ಟ್ವಿಟ್ಟರ್ ಖಾತೆಯನ್ನು 60.9 ಮಿಲಿಯನ್(6.10 ಕೋಟಿ) ಜನ ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ಪ್ರಧಾನಿಗಳ ಅಧೀಕೃತ ಟ್ವಿಟ್ಟರ್ ಖಾತೆ 37.9 ಮಿಲಿಯನ್(3.07 ಕೋಟಿ) ಹಿಂಬಾಲಕರನ್ನು ಹೊಂದಿದೆ.

  • ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ – ಸಿದ್ದುಗೆ ಹೆಬ್ಬಾರ್ ತೀರುಗೇಟು

    ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ – ಸಿದ್ದುಗೆ ಹೆಬ್ಬಾರ್ ತೀರುಗೇಟು

    – ಬೆಂಗ್ಳೂರಿನಲ್ಲಿ ಭಯಪಡುವ ವಾತಾವರಣವಿಲ್ಲ

    ಹಾಸನ: ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು ಮಾಧ್ಯಮದ ವಿರುದ್ಧವೂ ವ್ಯಂಗ್ಯವಾಡಿದ್ದು, ಟಿವಿ ನೋಡುವುದನ್ನು ಪಾಲಕರು ಬಂದ್ ಮಾಡಿದರಿಂದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿಯಿತು. ಇಲ್ಲವಾದರೆ ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಏನೋ ಆಗಿಬಿಡುತ್ತೆ ಎಂದು ದೂರದರ್ಶನದಲ್ಲಿ ತೋರಿಸುತ್ತಾರೆ. ಅದನ್ನು ನೋಡಿದ ನಿಮಗೆಲ್ಲ ಬೆಂಗಳೂರಿನಲ್ಲಿದ್ದವರ ನಿಮ್ಮ ಸಂಬಂಧಿಕರ ಬಗ್ಗೆ ಭಯ ಆಗುತ್ತೆ. ಅಂತಹ ಯಾವುದೇ ಭಯಪಡುವ ವಾತಾವರಣ ಬೆಂಗಳೂರಿನಲ್ಲಿ ಇಲ್ಲ. ಬೆಂಗಳೂರಿನಲ್ಲಿ ವ್ಯವಸ್ಥಿತವಾದ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಬರುತ್ತೆ ಎಂಬುದು ಗೊತ್ತಿಲ್ಲದ ಕಾರಣ ಸಿದ್ಧತೆ ಮಾಡಿಕೊಳ್ಳಲು ವಿಳಂಬವಾಗಿತ್ತು. ಈಗ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸಮರ್ಥವಾಗಿ ಕೊರೊನಾಗೆ ಕಡಿವಾಣ ಹಾಕುವ ಪ್ರಯತ್ನ ಆಗಿದೆ. ಜೊತೆಗೆ ಕೋವಿಡ್-19 ಜೊತೆಗೆ ನಾವು ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು.

  • ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ ಅವಘಡ – ಸುಟ್ಟು ಕರಕಲಾದ ದಾಖಲೆಗಳು

    ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ ಅವಘಡ – ಸುಟ್ಟು ಕರಕಲಾದ ದಾಖಲೆಗಳು

    ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಳೇ ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಅಪಾರ ಪ್ರಮಾಣದ ದಾಖಲೆ ಸುಟ್ಟು ಭಸ್ಮವಾಗಿದೆ.

    ಬೆಳಗ್ಗೆ ಸುಮಾರು 9 ಗಂಟೆಗೆ ಕಚೇರಿ ತೆರೆಯುತ್ತಿರುವಾಗಲೇ ಈ ಅವಘಡ ನಡೆದಿದ್ದು, ಎರಡು ಕಂಪ್ಯೂಟರ್ ಮತ್ತು ಸ್ಟೋರ್ ರೂಂನಲ್ಲಿಟ್ಟಿದ್ದ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಹಠಾತ್ ಬೆಂಕಿಯಿಂದಾಗಿ ಇಡೀ ಕಚೇರಿ ತುಂಬಾ ಹೊಗೆ ಆವರಿಸಿಕೊಂಡಿತ್ತು. ಈ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಾರ್ಟ್ ಸರ್ಕ್ಯೂಟ್‍ನಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಇತ್ತ ಕೆಲವರು ಉದ್ದೇಶಪೂರಕವಾಗಿ ಈ ಘಟನೆ ನಡೆದಿದೆ. ಯಾರೋ ಕಿಡಿಗೇಡಿಗಳು ಬೇಕಂತಲೇ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

  • 33 ವರ್ಷಗಳ ನಂತ್ರ ಪ್ರಸಾರವಾದ್ರೂ ವಿಶ್ವದಾಖಲೆ ನಿರ್ಮಿಸಿದ ‘ರಾಮಾಯಣ’

    33 ವರ್ಷಗಳ ನಂತ್ರ ಪ್ರಸಾರವಾದ್ರೂ ವಿಶ್ವದಾಖಲೆ ನಿರ್ಮಿಸಿದ ‘ರಾಮಾಯಣ’

    ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕಾಲ ಕಳೆಯಲು ಅನುಕೂಲವಾಗುವಂತೆ ಸರ್ಕಾರ ಹಳೆಯ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. ಆದರೆ 33 ವರ್ಷಗಳ ನಂತರ ಮತ್ತೆ ಸೀರಿಯಲ್ ಪ್ರಾರಂಭವಾದರೂ ಇದೀಗ ‘ರಾಮಾಯಣ’ ಧಾರಾವಾಹಿ ವಿಶ್ವ ದಾಖಲೆ ನಿರ್ಮಿಸಿದೆ.

    ಲಾಕ್‍ಡೌನ್ ಅವಧಿಯಲ್ಲಿ ಜನರ ಬೇಸರ ಕಳೆಯುವ ಉದ್ದೇಶದಿಂದ ದೂರದರ್ಶನ ‘ರಾಮಾಯಣ’ ಧಾರಾವಾಹಿಯನ್ನು ದಿನದ ಎರಡು ಸಮಯ ಮರು ಪ್ರಸಾರ ಆರಂಭಿಸಿತ್ತು. ಇದು ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡಿತು. ಈ ಬಗ್ಗೆ ಸ್ವತಃ ದೂರದರ್ಶನ ಟ್ವೀಟ್ ಮಾಡುವ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿದೆ.

    ದೂರದರ್ಶನ ಮಾಹಿತಿ ನೀಡಿರುವ ಪ್ರಕಾರ ಮರು ಪ್ರಸಾರವಾದ ‘ರಾಮಾಯಣ’ ವಿಶ್ವದಾಖಲೆಯನ್ನೇ ಬರೆದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಯನ್ನು ಸಹ ‘ರಾಮಾಯಣ’ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಮರು ಪ್ರಸಾರವು ವಿಶ್ವದಾದ್ಯಂತ ವೀಕ್ಷಕರ ದಾಖಲೆಗಳನ್ನು ಬ್ರೇಕ್ ಮಾಡಿದೆ. ಏಪ್ರಿಲ್ 16ರ ವೇಳೆಗೆ 7.7 ಕೋಟಿ ವೀವರ್ಸ್ ಪಡೆದುಕೊಳ್ಳುವ ಮೂಲಕ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎನಿಸಿಕೊಂಡಿದೆ” ಎಂದು ದೂರದರ್ಶನ ಟ್ವೀಟ್ ಮಾಡಿದೆ.

    ಸಾರ್ವಜನಿಕ ಬೇಡಿಕೆಯ ಮೇರೆಗೆ ಮಾರ್ಚ್ 28ರಿಂದ ಮತ್ತೆ ರಾಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ಈ ಸೀರಿಯಲ್ ದಿನಕ್ಕೆ ಎರಡು ಬಾರಿ ಡಿಡಿ ನ್ಯಾಷನಲ್ ಚಾನೆಲ್‍ನಲ್ಲಿ ಪ್ರಸಾರವಾಗುತ್ತಿತ್ತು. ದೂರದರ್ಶನವು ‘ರಾಮಾಯಣ’ ಸೀರಿಯಲ್ ಮಾತ್ರವಲ್ಲದೇ ‘ಮಹಾಭಾರತ’, ‘ಶ್ರೀ ಕೃಷ್ಣ’ ಮತ್ತು ‘ಉತ್ತರ ರಾಮಾಯಣ’ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ.

    ‘ರಾಮಾಯಣ’ ಧಾರಾವಾಹಿ ದೇಶದಲ್ಲಿ ಮೊದಲ ಬಾರಿಗೆ ಜನವರಿ 25, 1987 ರಿಂದ ಜುಲೈ 31, 1988 ರವರೆಗೆ ಪ್ರಸಾರವಾಗಿದೆ. 1987 ರಿಂದ 1988 ರವರೆಗೆ ‘ರಾಮಾಯಣ’ ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಧಾರಾವಾಹಿ ಆಗಿತ್ತು. ಅಲ್ಲದೇ ಇದು ಲಿಮ್ಕಾ ಬುಕ್ ಆಫ್ ರೆಕಾರ್ಟ್ ನಲ್ಲಿ ‘ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಪೌರಾಣಿಕ ಧಾರಾವಾಹಿ’ ಎಂದು ದಾಖಲೆ ಬರೆದಿತ್ತು.

    ಲಾಕ್‍ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾಗುತ್ತಿರುವ ಚಾನೆಲ್‍ಗಳ ಪಟ್ಟಿಯಲ್ಲಿ ಡಿಡಿ ನ್ಯಾಷನಲ್ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ‘ರಾಮಾಯಣ’ ಧಾರಾವಾಹಿ ಏಪ್ರಿಲ್ 18ರಂದು ಮುಕ್ತಾಯವಾದ ನಂತರ ಅದರ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

  • ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿದ ಆವಕ

    ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿದ ಆವಕ

    ರಾಮನಗರ: ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಬರೆದುಕೊಂಡಿದೆ.

    ಅಷ್ಟೇ ಅಲ್ಲದೇ ಸರ್ಕಾರಿ ರಜೆಯನ್ನು ಹೊರತು ಪಡಿಸಿ, ಕೊರೊನಾ ಹೊಡೆತಕ್ಕೆ ಮೊದಲ ಬಾರಿಗೆ ಮಾರುಕಟ್ಟೆ ಬಂದ್ ಕೂಡ ಆಗುತ್ತಿದೆ. ಇದರೊಂದಿಗೆ ಹೊರ ರಾಜ್ಯದ ಬೆಳೆಗಾರರ ಮೇಲೆ ನಿರ್ಬಂಧ ಹೇರಲಾಗಿದೆ.

    ದಿನನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುವ ರಾಮನಗರದ ರೇಷ್ಮೆ ಮಾರುಕಟ್ಟೆ ಕೊರೊನಾ ಕಾಟಕ್ಕೆ ತತ್ತರಿಸಿದೆ. ಹಾಗಾಗಿ ನಾಳೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೇಷ್ಮೆ ಮಾರುಕಟ್ಟೆ ಬಂದ್ ಮಾಡಲಾಗಿದ್ದು, ಮಾರುಕಟ್ಟೆಗೆ ಅಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.

    ಏಷ್ಯದಲ್ಲೇ ಅತೀ ದೊಡ್ಡಮಟ್ಟದ ವಹಿವಾಟು ಹೊಂದಿರುವ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಮಾಡಿದೆ. 1,300ಕ್ಕೂ ಹೆಚ್ಚು ಲಾಟ್ ಒಮ್ಮೆಯೇ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಗೂಡಿನ ದರವು ಕುಸಿತಕಂಡಿದ್ದು, ಇಷ್ಟು ಪ್ರಮಾಣದ ಗೂಡಿನ ನಿರ್ವಹಣೆ, ತೂಕ ಮಾಡುವ ಕೆಲಸವು ಮಾರುಕಟ್ಟೆ ಅಧಿಕಾರಿಗಳಿಗೆ ತಲೆಬಿಸಿ ತಂದಿತ್ತು.

    ಈ ಮೊದಲು ದಿನಕ್ಕೆ 30ರಿಂದ 32 ಟನ್ ರೇಷ್ಮೆ ಗೂಡು ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಕೊರೊನಾದಿಂದಾಗಿ ಭಾನುವಾರ ಮಾರುಕಟ್ಟೆ ಬಂದ್ ಆಗಲಿದೆ. ಹೀಗಾಗಿ ಶನಿವಾರ 75 ಟನ್ ರೇಷ್ಮೆ ಆವಕಗೊಂಡಿರುವುದು ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳೆಗಾರರು ಮಾರುಕಟ್ಟೆಯಲ್ಲಿ ಜಾಲರಿ ಸಿಗದೇ ನೆಲದ ಮೇಲೆಯೇ ಗೂಡು ಹರಡಿಕೊಂಡು ಹರಾಜಿಗಾಗಿ ಕಾದು ಕುಳಿತ್ತಿದ್ದರು.

  • ಅಂತ್ಯಸಂಸ್ಕಾರಕ್ಕೆ ಮೃತರ ಆಧಾರ್ ಕಾರ್ಡ್ ಕಡ್ಡಾಯ

    ಅಂತ್ಯಸಂಸ್ಕಾರಕ್ಕೆ ಮೃತರ ಆಧಾರ್ ಕಾರ್ಡ್ ಕಡ್ಡಾಯ

    ಮೈಸೂರು: ನಗರದಲ್ಲಿ ಇನ್ಮುಂದೆ ಅಂತ್ಯಸಂಸ್ಕಾರಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು. ಬದುಕಿದ್ದಾಗ ಮಾತ್ರವಲ್ಲ ಸತ್ತಮೇಲು ಆಧಾರ್ ಕಡ್ಡಾಯವಾಗಿದೆ.

    ಸ್ಮಶಾನದಲ್ಲಿ ಹೂಳಲು, ಸುಡಲು ಮೃತರ ಆಧಾರ್ ಪ್ರತಿ ಬೇಕು. ಮೃತರಿಂದ ಉಂಟಾಗುವ ಕಾನೂನು ತೊಡಕು ಹಾಗೂ ಕೌಟುಂಬಿಕ ವ್ಯಾಜ್ಯ ನಿವಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಯಾವುದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಬೇಕಿದ್ರೆ ಆಧಾರ್ ಜೆರಾಕ್ಸ್ ಪ್ರತಿ ನೀಡಬೇಕು. ವಾಸ ಧೃಡಿಕರಣ ಯಾವುದಾದರೂ ದಾಖಲೆ ನೀಡಬೇಕು. ಈ ದಾಖಲೆ ಇಲ್ಲವಾದಲ್ಲಿ ಸ್ಮಶಾನದಲ್ಲಿರುವ ಪಾಲಿಕೆ ಅಧಿಕಾರಿಯಿಂದ ಸ್ಥಳ ಪರಿಶೀಲನೆ ನಡೆಸಬೇಕು. ಆ ನಂತರವಷ್ಟೇ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಲಾಗುತ್ತದೆ.

    ಇದು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರುದ್ರಭೂಮಿ ಹಾಗೂ ಸ್ಮಶಾನಗಳಿಗೆ ಅನ್ವಯವಾಗಿದೆ. ಜನರಿಗೆ ಅನುಕೂಲವಾಗಲೆಂದು ಈ ಕ್ರಮ ಜಾರಿ ಮಾಡಲಾಗಿದೆ. ಅಂತ್ಯಸಂಸ್ಕಾರ ಸಂದರ್ಭದಲ್ಲಿ ತಪ್ಪು ಮಾಹಿತಿ ಅಥವಾ ತಪ್ಪು ಹೆಸರು ನೀಡುತ್ತಿದ್ದರು. ಅಲ್ಲದೆ ಕ್ರೈಂ ನಡೆದಿದ್ದರು ಪೊಲೀಸರಿಗೆ ಮಾಹಿತಿ ಗೊತ್ತಿಲ್ಲದೆ ಅಂತ್ಯಸಂಸ್ಕಾರವಾಗಿದ್ದ ಪ್ರಕರಣ ಇವೆ. ಇದರಿಂದ ಅಂತ್ಯಸಂಸ್ಕಾರವಾಗಿದ್ರೂ ಮತ್ತೆ ಶವ ಹೊರ ತೆಗೆದಿರುವ ಪ್ರಕರಣ ನಡೆದಿವೆ. ಇದಷ್ಟೇ ಅಲ್ಲದೆ ಮರಣ ಪ್ರಮಾಣ ಪತ್ರದಲ್ಲಿ ಹೆಸರು ತಪ್ಪಾದ್ರೆ ಜನರು ಕೋರ್ಟ್ ಗೆ ಅಲೆದಾಡಬೇಕಿತ್ತು. ಈ ಎಲ್ಲಾ ದೃಷ್ಟಿಯಿಂದ ಪಾಲಿಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

  • ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿ – ಪತಿ ಬಳಿಕ ಪತ್ನಿಗೆ 3 ಸ್ಟಾರ್

    ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿ – ಪತಿ ಬಳಿಕ ಪತ್ನಿಗೆ 3 ಸ್ಟಾರ್

    ನವದೆಹಲಿ: ಭಾರತೀಯ ಸೇನೆಯಲ್ಲಿ ಮಾಧುರಿ ಕಾನಿಟ್ಕರ್ ಅವರು ಶನಿವಾರ ಲೆಫ್ಟಿನೆಂಟ್ ಸ್ಥಾನವನ್ನು ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಮೂರನೇ ಲೆಫ್ಟಿನೆಂಟ್ ಸ್ಥಾನ ಪಡೆದ ಹೆಗ್ಗಳಿಕೆಗೆ ಮಾಧುರಿ ಪಾತ್ರರಾಗಿದ್ದಾರೆ.

    ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಅವರು ದೆಹಲಿಯಲ್ಲಿ ಡೆಪ್ಯೂಟಿ ಚೀಫ್, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟ್ಯಾಫ್(ಡಿಸಿಐಡಿಎಸ್) ಹಾಗೂ ವೈದ್ಯಕೀಯ(ಅಂಡರ್ ಚೀಫ್ ಆಫ್ ಡಿಫೆನ್ಸ್ ಸ್ಟ್ಯಾಫ್) ಆಗಿ ಅಧಿಕಾರ ವಹಿಸಿಕೊಂಡಿದ್ದರು. ಶುಕ್ರವಾರ ಇಲಾಖೆ ಮಾಧುರಿ ಅವರಿಗೆ ಪ್ರಮೋಶನ್ ನೀಡಿದೆ.

    ಮಾಧುರಿ ಅವರ ಪತಿ ರಾಜೀವ್ ಅವರು ಕೂಡ ಲೆಫ್ಟಿನೆಂಟ್ ಜನರಲ್ ಆಗಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಾಧುರಿ ಹಾಗೂ ರಾಜೀವ್ ಲೆಫ್ಟಿನೆಂಟ್ ಆದ ದೇಶದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಧುರಿ ಅವರು 37 ವರ್ಷದಿಂದ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಮಾಧುರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಹುದ್ದೆ ಖಾಲಿ ಇಲ್ಲ ಕಾರಣ ಶನಿವಾರ ಅವರಿಗೆ ಲೆಫ್ಟಿನೆಂಟ್ ಸ್ಥಾನವನ್ನು ನೀಡಲಾಯಿತು.

    1982ರಲ್ಲಿ ಸೇನಾ ಮೆಡಿಕಲ್ ಕಾರ್ಪ್ಸ್ ಗೆ ಮಾಧುರಿ ಸೇರ್ಪಡೆಯಾಗಿದ್ದರು. ಸೇನಾ ಪಡೆಗಳಲ್ಲಿ ಮಾಧುರಿ ಮೂರು ಸ್ಟಾರ್ ಪಡೆದು ಮೂರನೇ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ವೈಸ್ ಅಡ್ಮಿರಲ್ ಡಾ. ಪುನೀತಾ ಅರೋರಾ ನೌಕಾಪಡೆಯಲ್ಲಿ ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದ್ದಾರೆ. ವಾಯುಪಡೆ ಮಹಿಳೆ ಏರ್ ಮಾರ್ಷಲ್ ಪದ್ಮಾವತಿ ಬಂದೋಪಾಧ್ಯಾಯ ಈ ಸ್ಥಾನವನ್ನು ಸ್ವೀಕರಿಸಿದ ಎರಡನೇ ಮಹಿಳೆ. ಈಗ ಮಾಧುರಿ ಕನಿಟ್ಕರ್ ಈ ಸಾಧನೆ ಮಾಡಿದ್ದಾರೆ.

  • ಚಕ್ರಾಸನದ ರೇಸ್- ತನುಶ್ರೀ ಪಿತ್ರೋಡಿಯಿಂದ ಮತ್ತೊಂದು ವಿಶ್ವದಾಖಲೆ

    ಚಕ್ರಾಸನದ ರೇಸ್- ತನುಶ್ರೀ ಪಿತ್ರೋಡಿಯಿಂದ ಮತ್ತೊಂದು ವಿಶ್ವದಾಖಲೆ

    – ಪಬ್ಲಿಕ್ ಹೀರೋ ತನುಶ್ರೀಯ ಐದನೇ ವಿಶ್ವದಾಖಲೆ

    ಉಡುಪಿ: ಯೋಗಾಸನದ ಮೂಲಕವೇ ನಾಲ್ಕು ವಿಶ್ವದಾಖಲೆ ಮಾಡಿರುವ ಕೇವಲ 10 ವರ್ಷದ ತನುಶ್ರೀ ಮತ್ತೊಂದು ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ.

    ಅತೀ ಕಲ್ಲಿಷ್ಟಕರ ಚಕ್ರಾಸನ ರೇಸ್ ಮಾಡುವ ಮೂಲಕ ದಾಖಲಿ ಬರೆದಿದ್ದಾರೆ. ಉಡುಪಿಯ ಉದ್ಯಾವರದಲ್ಲಿ ಈ ಸಾಧನೆ ದಾಖಲೆಯಾಗಿದ್ದು, ಈಗಾಗಲೇ ನಾಲ್ಕು ವಿಶ್ವದಾಖಲೆ ಹೊಂದಿರುವ ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ ಇದೀಗ ಅತೀ ಕ್ಲಿಷ್ಟಕರ ಚಕ್ರಾಸನ ರೇಸ್ ಮಾಡಿದ್ದಾಳೆ. 100 ಮೀಟರ್ ಚಕ್ರಾಸನ ರೇಸನ್ನು ಕೇವಲ 1.14 ನಿಮಿಷದಲ್ಲಿ ಮುಗಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.

    10 ವರ್ಷದ ಪುಟಾಣಿಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಹೆಸರಿನಲ್ಲಿದ್ದ ದಾಖಲೆಯನ್ನು ಉಡುಪಿಯ ತನುಶ್ರೀ ಮುರಿದಿದ್ದಾಳೆ. ಸಮೀಕ್ಷಾ ಇದೇ ದೂರ ಕ್ರಮಿಸಲು ಆರು ನಿಮಿಷ ತೆಗೆದುಕೊಂಡಿದ್ದರು. ಆದರೆ ತನುಶ್ರೀ ಕೇವಲ 1.14 ನಿಮಿಷಗಳಲ್ಲಿ 100 ಮೀ. ಕ್ರಮಿಸುವ ಮೂಲಕ ದಾಖಲೆ ಮುರಿದಿದ್ದಾರೆ. ಯೋಗಾಸನದಲ್ಲೇ ರೇಸ್ ಮಾಡೋದು ಅಂದ್ರೆ ಅಸಾಧ್ಯ ಎನ್ನುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ತನುಶ್ರೀ ಕೇವಲ 1.14 ನಿಮಿಷದಲ್ಲಿ 100 ಮೀಟರ್ ಕ್ರಮಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

    ತನುಶ್ರೀ ಈ ಹಿಂದೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ್ದಾರೆ 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು ಕೇವಲ ಒಂದು ನಿಮಿಷದಲ್ಲಿ 19 ಬಾರಿ ಮಾಡಿದ್ದಾರೆ. ಅಲ್ಲದೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು 1.42 ನಿಮಿಷದಲ್ಲಿ 42 ಬಾರಿ ತಿರುಗಿಸಿ ದಾಖಲೆ ಮಾಡಿದ್ದರು. 2019ರಲ್ಲಿ ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆ ಮುರಿದಿದ್ದರು. ನಂತರ ಧನುರಾಸನ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ಮತ್ತೊಂದು ದಾಖಲೆಗೆ ಕಾರಣರಾಗಿದ್ದರು. ಇದೀಗ ಐದನೇ ವಿಶ್ವದಾಖಲೆ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ತನುಶ್ರೀ ನಮ್ಮ ಪಬ್ಲಿಕ್ ಹೀರೋ ಎಂಬುದು ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.

  • ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಮಂಗಳೂರು: ಉಸೇನ್ ಬೋಲ್ಟ್ ಜಗತ್ತಿನ ಅತೀ ವೇಗದ ಓಟಗಾರ. ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಗುರಿತಲುಪುವ ಸಾಧಕ. ಉಸೇನ್ ಬೋಲ್ಟ್‌ನ ದಾಖಲೆಗಳನ್ನು ಬ್ರೇಕ್ ಮಾಡೋಕೆ ಸಾಧ್ಯನೇ ಇಲ್ಲ ಅಂತ ತಿಳಿದುಕೊಂಡವರಿಗೆ ಮಾತ್ರ ಇದು ಶಾಕಿಂಗ್ ನ್ಯೂಸ್. ಹೌದು ವೇಗದಲ್ಲಿ ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಕರಾವಳಿಯ ಕಂಬಳ ಕೋಣಗಳ ಓಟಗಾರ ಶ್ರೀನಿವಾಸ್ ಹೊಸ ದಾಖಲೆ ಬರೆದಿದ್ದಾರೆ.

    ಸದೃಢ ಮೈಕಟ್ಟು, ಜಿಮ್‍ಗೆ ಹೋಗದೆ ಬೆಳೆದ ನ್ಯಾಚುರಲ್ ಸಿಕ್ಸ್ ಪ್ಯಾಕ್, ಕಂಬಳದ ಗದ್ದೆಗೆ ಇಳಿದರೆ ಸಾಕು ಚಿರತೆಯನ್ನೇ ನಾಚಿಸುವಂತಹ ವೇಗದಲ್ಲಿ ಓಡುವ ಶ್ರೀನಿವಾಸ ಗೌಡ ಈಗ ಕರಾವಳಿಯಲ್ಲಿ ಸಖತ್ ಫೆಮಸ್ ಆಗಿಬಿಟ್ಟಿದ್ದಾರೆ. ಕಂಬಳ ಕ್ರೀಡೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಎಂದೇ ಇವರು ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವಥಪುರ ನಿವಾಸಿ ಕಂಬಳ ಕೋಣದ ಓಟಗಾರ ಶ್ರೀನಿವಾಸ ಗೌಡ ಈಗ ಹೊಸ ದಾಖಲೆಯನ್ನು ಬರೆದಿದ್ದಾರೆ.

    ವಿಶ್ವದ ಫಾಸ್ಟೆಸ್ಟ್ ರನ್ನರ್ ಉಸೇನ್ ಬೋಲ್ಟ್‌ನ ದಾಖಲೆಯನ್ನು ಪುಡಿಪುಡಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರ್‍ನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

    ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದಾರೆ.

    ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡಿ ಉಸೇನ್ ಬೋಲ್ಟ್ ಮಾಡಿದ ದಾಖಲೆಯನ್ನು ಶ್ರೀನಿವಾಸಗೌಡ ಕಾಲು ಹೂತು ಹೋಗುವ ಕಂಬಳದ ಕೆಸರುಗದ್ದೆಯಲ್ಲಿ ಓಡಿ ಮುರಿದಿದ್ದಾರೆ. ಈ ಮೂಲಕ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದ್ದಾರೆ.

    ಕಂಬಳದ ಗದ್ದೆಯಲ್ಲಿ ಮೊಣಕಾಲಿನವರೆಗೆ ಕೆಸರು ತುಂಬಿದ್ದು, ಒಂದು ಕೈಯಲ್ಲಿ ಕೋಣಗಳ ಹಗ್ಗ ಮತ್ತೊಂದು ಕೈಯಲ್ಲಿ ಬಾರುಕೋಲು ಹಿಡಿದು, ಸಮಚಿತ್ತದಿಂದ ಓಡಬೇಕಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡುವ ಶ್ರೀನಿವಾಸ ಗೌಡ ಅವರೇ ಬೋಲ್ಟಿಗಿಂತ ಕೂದಲೆಳೆಯ ಅಂತರದಲ್ಲಿ ಮುಂದಿದ್ದಾರೆ.

    ಯಾವ ತರಬೇತಿಯನ್ನೂ ಪಡೆಯದೆ ಶ್ರೀನಿವಾಸ ಗೌಡ ತಮ್ಮ ಸ್ವಂತ ಆಸಕ್ತಿಯಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಾಖಲೆ ಮಾಡಿದ್ದಾರೆ. ಈ ಋತುವಿನ ಕಂಬಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಂಬಳ ಕೂಟದ ಚಿನ್ನದ ಓಟಗಾರನಾಗಿ ಪ್ರಸಿದ್ಧಿಯಾಗಿದ್ದಾರೆ.