ಹೈದರಾಬಾದ್: ರಾಜಮೌಳಿ ನಿರ್ದೇಶನದ ಬಾಹುಬಲಿ2 ಮತ್ತೊಂದು ಹೊಸ ದಾಖಲೆ ಬರೆಯಲಿದೆ. ವಿಶ್ವದೆಲ್ಲೆಡೆ ಒಂದೇ ಬಾರಿಗೆ 9 ಸಾವಿರ ಸ್ಕ್ರೀನ್ ಗಳಲ್ಲಿ ಏಪ್ರಿಲ್ 28ರಂದು ಬಾಹುಬಲಿ ರಿಲೀಸ್ ಆಗಲಿದ್ದು ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿರುವ ಫಿಲ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ದೇಶದಲ್ಲಿ ಸಾಧಾರಣವಾಗಿ ಬಾಲಿವುಡ್ ಸಿನಿಮಾಗಳು 5 ಸಾವಿರ ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗುತ್ತದೆ. ಆಂಧ್ರ, ಕರ್ನಾಟಕ, ತಮಿಳುನಾಡು, ಕೇರಳಗಳ ಒಟ್ಟು 3 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಆಯಾ ಭಾಷೆಯಲ್ಲಿ ಶುಕ್ರವಾರ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತದೆ. ಆದರೆ ಈ ಶುಕ್ರವಾರ ದೊಡ್ಡ ಬಜೆಟ್‍ನ ಚಿತ್ರಗಳು ಬಿಡುಗಡೆಯಾಗದೇ ಇರುವುದರಿಂದ ದೇಶದ ಬಹುತೇಕ ಥಿಯೇಟರ್‍ಗಳಲ್ಲಿ ಬಾಹುಬಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ಮೂಲಗಳು ಮಾಹಿತಿ ನೀಡಿವೆ.
ಸತ್ಯರಾಜ್ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಕಾರಣ ಬಾಹುಬಲಿ ಕರ್ನಾಟಕದಲ್ಲಿ ಬಿಡುಗಡೆಗೆ ದೊಡ್ಡ ಅಡ್ಡಿಯಾಗಿತ್ತು. ಆದರೆ ಸತ್ಯರಾಜ್ ವಿಷಾದ ವ್ಯಕ್ತಪಡಿಸಿದ್ದ ಕಾರಣ ಕನ್ನಡ ಸಂಘಟನೆಗಳು ಬಾಹುಬಲಿ ಬಿಡುಗಡೆಗೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದು ದೊಡ್ಡ ಅಡ್ಡಿ ನಿವಾರಣೆಯಾಗಿದೆ. ಈ ಎಲ್ಲ ಕಾರಣದಿಂದಾಗಿ ಬಾಹುಬಲಿ 2 ಬಾಕ್ಸ್ ಆಫೀಸ್ ನಲ್ಲಿ 1 ಸಾವಿರ ಕೋಟಿ ರೂ. ಗಿಂತಲೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ದೇಶದ ಹಲವು ಮಹಾನಗರಗಳ ಥಿಯೇಟರ್‍ಗಳಲ್ಲಿ ವಾರಾಂತ್ಯದ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದೆ. ಹೀಗಾಗಿ ಕಲೆಕ್ಷನ್ ಎಷ್ಟು ಮಾಡಲಿದೆ ಎನ್ನುವ ಕುತೂಹಲ ಜಾಸ್ತಿ ಆಗಿದೆ.
ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯ ಸ್ಕ್ರೀನ್ ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಬಾಹುಬಲಿ ಪಾತ್ರವಾಗಿದ್ದು, ಮಾಹಿತಿಗಳ ಪ್ರಕಾರ ತಮಿಳು, ತೆಲುಗು, ಹಿಂದಿ ಸೇರಿ ಒಟ್ಟು 1,100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ಕೆನಡಾ 80ಕ್ಕೂ ಹೆಚ್ಚು ಸ್ಥಳಗಳಲ್ಲಿ 150 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ. ಐ ಮ್ಯಾಕ್ಸ್ ಮಾದರಿಯಲ್ಲೂ ಬಾಹುಬಲಿ ಬರುತ್ತಿದ್ದು, ಈ ಮಾದರಿಯ ಫಿಲ್ಮ್ ಗಳು 40-45 ಸ್ಥಳಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಮೆರಿಕ, ಕೆನಡದಲ್ಲಿ ವಿತರಣೆ ಹಕ್ಕು ಪಡೆದಿರುವ ಗ್ರೇಟ್ ಇಂಡಿಯಾ ಫಿಲ್ಮ್ ಸಂಸ್ಥೆ ತಿಳಿಸಿದೆ.
ಹಿಂದಿ ಭಾಷೆಯಲ್ಲಿರುವ ಬಾಹುಬಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಫಿಜಿಯಲ್ಲಿ ಬಿಡುಗಡೆಯಾಗಲಿದೆ. ಮಲೇಷ್ಯಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ತಮಿಳು ಡಬ್ ಆವೃತ್ತಿ ಬಿಡುಗಡೆಯಾಗಲಿದೆ.
2015 ಜುಲೈ 10 ರಂದು 4 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ‘ಬಾಹುಬಲಿ ದಿ ಬಿಗ್‍ನಿಂಗ್’ ಬಿಡುಗಡೆಯಾಗಿತ್ತು. 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣಗೊಂಡಿದ್ದ ಈ ಫಿಲ್ಮ್ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಈ ಮೂಲಕ ಬಾಲಿವುಡ್ ಹೊರತು ಪಡಿಸಿ ಅತಿಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಣೆಯಾದ ಟ್ರೇಲರ್ ಎಂಬ ದಾಖಲೆಯನ್ನು ಬಾಹುಬಲಿ ಬರೆದಿದಿದೆ. ಬಿಡುಗೆಯಾದ 6 ಗಂಟೆಯಲ್ಲಿ 4 ಭಾಷೆಯಲ್ಲಿರುವ ಟ್ರೇಲರ್ 1 ಕೋಟಿ ವೀಕ್ಷಣೆ ಕಂಡರೆ, 24 ಗಂಟೆಯಲ್ಲಿ 2.5 ಕೋಟಿ ವ್ಯೂ ಕಂಡಿತ್ತು.
ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!
ಇದನ್ನೂ ಓದಿ: ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ















