Tag: ದಾಖಲೆ

  • ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ  4 ವಿಕೆಟ್ ಕೀಳುವ ಮೂಲಕ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವದಾಖಲೆ ಬರೆದಿದ್ದಾರೆ.

    ಅತಿ ಕಡಿಮೆ ಪಂದ್ಯದಲ್ಲಿ 300 ವಿಕೆಟ್ ಕಿತ್ತ ಬೌಲರ್ ಎನ್ನುವ ಹೆಗ್ಗಳಿಕೆಗೆ ಆರ್ ಅಶ್ವಿನ್ ಈಗ ಪಾತ್ರವಾಗಿದ್ದಾರೆ. ಅಶ್ವಿನ್ 54 ಪಂದ್ಯಗಳ 101 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಈ ಹಿಂದೆ ಆಸ್ಟ್ರೇಲಿಯಾ ಡೆನ್ನಿಸ್ ಲಿಲ್ಲಿ 56 ಪಂದ್ಯ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 58 ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡಿನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್ ನ ಮ್ಯಾಲ್ಕಂ ಮಾರ್ಶಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ 61ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪಡೆದಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ನೀಡಿ 4 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೇ ಇನ್ನಿಂಗ್ಸ್ ನಲ್ಲಿ 63 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು.

    54 ಪಂದ್ಯಗಳಲ್ಲಿ ಅಶ್ವಿನ್ ಇದೂವರೆಗೆ 15,636 ಎಸೆತಗಳನ್ನು ಹಾಕಿ 7520 ರನ್ ನೀಡಿದ್ದಾರೆ. ಒಂದು ಇನ್ನಿಂಗ್ಸ್ ನಲ್ಲಿ 59 ರನ್ ನೀಡಿ 7 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ ಆಗಿದ್ದು, ಎರಡು ಇನ್ನಿಂಗ್ಸ್ ನಲ್ಲಿ 140 ರನ್ ನೀಡಿ 13 ವಿಕೆಟ್ ಪಡೆದಿರುವುದು ಅಶ್ವಿನ್ ಶ್ರೇಷ್ಠ ಸಾಧನೆಯಾಗಿದೆ.

     

  • ದ್ವಿಶತಕ ಸಿಡಿಸಿ ಭಾರತದ ಪರ ಹೊಸ ದಾಖಲೆ ಬರೆದ ಕೊಹ್ಲಿ

    ದ್ವಿಶತಕ ಸಿಡಿಸಿ ಭಾರತದ ಪರ ಹೊಸ ದಾಖಲೆ ಬರೆದ ಕೊಹ್ಲಿ

    ನಾಗ್ಪುರ: ಇಲ್ಲಿನ ಜಮ್ತಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ.

    ಈ ಹಿಂದೆ ನಾಯಕನಾಗಿದ್ದುಕೊಂಡು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾ 5 ದ್ವಿಶತಕ ಹೊಡೆದಿದ್ದರು. ಕೊಹ್ಲಿ ಈಗ 213 ರನ್ ಹೊಡೆಯುವ ಮೂಲಕ ಈ ದಾಖಲೆಯನ್ನು ಸರಿದೂಗಿಸಿದ್ದಾರೆ.

    ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಾಯಕನಾಗಿದ್ದುಕೊಂಡು 4 ದ್ವಿಶತಕ ಸಿಡಿಸಿದ್ದಾರೆ. ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ 267 ಎಸೆತಗಳಲ್ಲಿ 17 ಬೌಡರಿ, 2 ಸಿಕ್ಸರ್ ನೆರವಿನಿಂದ 213 ರನ್ ಸಿಡಿಸಿದರು.

    ಭಾರತದ ಪರ 5 ದ್ವಿಶತಕ ಸಿಡಿಸಿದ ಎರಡನೇ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಈಗ ಪಾತ್ರರಾಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ 5 ದ್ವಿಶತಕ ಸಿಡಿಸಿ ಭಾರತದ ಪರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದರು.

    ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ದ್ವಿಶತಕ ಹೊಡೆದ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ 12 ದ್ವಿಶತಕ ಹೊಡೆದಿದ್ದಾರೆ.

    ಈ ಪಂದ್ಯದಲ್ಲಿ ಮೂರನೇ ವಿಕೆಟ್ ಗೆ ಪೂಜಾರಾ ಜೊತೆ 183 ರನ್ ಹಾಗೂ ಐದನೇ ವಿಕೆಟ್ ಗೆ ರೋಹಿತ್ ಶರ್ಮಾ 173 ರನ್ ಜೊತೆ ಆಟ ಆಡುವ ಮೂಲಕ ಕೊಹ್ಲಿ ಭಾರತದ ಬೃಹತ್ ಮೊತ್ತ ಗಳಿಸಲು ಕಾರಣರಾದರು. ಭಾರತ 6 ವಿಕೆಟ್ ಗೆ 610 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

    ಕೊಹ್ಲಿಯ ದ್ವಿಶತಕಗಳು: 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 200 ರನ್ ಗಳಿಸುವ ಮೂಲಕ ಮೊದಲ ದ್ವಿಶತಕ ದಾಖಲಿಸಿದ್ದರು. ನಂತರ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 211 ರನ್, ವಾಂಕೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯಧಿಕ 235 ರನ್ ಹಾಗೂ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್ ಹೊಡೆದಿದ್ದರು.

    ಕೊಹ್ಲಿ ದ್ವಿಶತಕ ಗಳಿಸಿದ್ದು ಹೀಗೆ
    50 ರನ್ – 66 ಬಾಲ್ (5 ಬೌಂಡರಿ)
    100 ರನ್ – 130 ಬಾಲ್ (10 ಬೌಂಡರಿ)
    150 ರನ್ – 193 ಬಾಲ್ (14 ಬೌಂಡರಿ, 1 ಸಿಕ್ಸರ್)
    200 ರನ್ – 259 ಬಾಲ್ (15 ಬೌಂಡರಿ, 2 ಸಿಕ್ಸರ್)
    217 ರನ್ – 267 ಬಾಲ್ (17 ಬೌಡರಿ, 2 ಸಿಕ್ಸರ್)

    ಒಂದು ವರ್ಷದಲ್ಲಿ ಅತಿ ಹೆಚ್ಚು ಶತಕ: ಕೊಹ್ಲಿ 100 ರನ್ ಗಳಿಸುತ್ತಿದ್ದಂತೆ ಹೊಸ ದಾಖಲೆಯನ್ನು ಬರೆದಿದ್ದಾರೆ. ಒಂದೇ ವರ್ಷದಲ್ಲಿ ಅತಿ ಹೆಚ್ಚು ಶತಕ(9) ಹೊಡೆದ ನಾಯಕ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಪಾಟಿಂಗ್ 2005 ಮತ್ತು 2006ರಲ್ಲಿ 9 ಶತಕ ಹೊಡೆದಿದ್ದರೆ, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 9 ಶತಕ ಹೊಡೆದಿದ್ದರು.

     

     

  • 12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    – ಬಾಗಲಕೋಟೆ ಚಿಣ್ಣರಿಂದ ಪವರ್ ಪ್ಲಾಂಟ್ ಪ್ರಸೆಂಟ್

    ಬೆಳಗಾವಿ\ಬಾಗಲಕೋಟೆ: ಹಲವು ವಿಶ್ವ ದಾಖಲೆಗಳನ್ನು ಮಾಡಿರೋ ಗಡಿನಾಡಿನ ಖ್ಯಾತ ಸ್ಕೇಟಿಂಗ್ ಪಟು ಮಾಸ್ಟರ್ ಅಭಿಷೇಕ್ ನಾವಲೆ ಇದೀಗ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಹಿಂದೆ ಇದ್ದ ಎಲ್ಲಾ ದಾಖಲೆ ಮುರಿದಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಚಿಣ್ಣರ ಕೈಯಲ್ಲಿ ಅರಳಿದ ಬಗೆ ಬಗೆಯ ವಿಜ್ಞಾನ ಮಾದರಿ, ವಸ್ತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಹೀಗೆ ಈತ ಕಾಲಿಗೆ ಚಕ್ರ ಕಟ್ಕೊಂಡು ಓಡೋಕೆ ಶುರು ಮಾಡಿದರೆ ಎಲ್ಲಾ ರೆಕಾರ್ಡ್ ಗಳು ಬ್ರೇಕ್. ಅಂದು ಕೊಂಡಿದ್ದನ್ನು ಸಾಧಿಸಿಯೇ ಬಿಡುವ ಛಲವಂತ. ಬೆಳಗಾವಿಯ ಮಾಸ್ಟರ್ ಅಭಿಷೇಕ್ ನಾವಲೆ, ಖಾನಾಪುರ ರಸ್ತೆ ಹಾಗೂ ಕೆಎಲ್‍ಇ ಸಂಸ್ಥೆಯ ಸ್ಕೇಟಿಂಗ್ ರಿಂಗ್ ನಲ್ಲಿ 100 ಮೀಟರ್ ಗುರಿಯನ್ನು ಕೇವಲ 12 ಸೆಕೆಂಡ್ ನಲ್ಲಿ ಮುಟ್ಟಿ ಸಾಧನೆ ಮಾಡಿದ್ದಾರೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ವಿಶ್ವದಾಖಲೆಗೆ ಯತ್ನಿಸಿದ್ದಾರೆ. ಈ ದಾಖಲೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಕೋಚ್ ಹಾಗೂ ಇತರರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಿದ್ದಾರೆ.

    ಇನ್ನು ಇತ್ತ ಬಾಗಲಕೋಟೆಯ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಟ್ಟ ಮಕ್ಕಳ ಟ್ಯಾಲೆಂಟ್ ಎಕ್ಸ್ ಪೋ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆಟ ಪಾಠ ಎಂದು ಹಾಯಾಗಿ ದಿನಗಳನ್ನು ಕಲಿತಿದ್ದ ಮಕ್ಕಳು ಹೈಡ್ರೋ ಎಲೆಕ್ಟ್ರೀಕ್ ಪವರ್ ಪ್ಲಾಂಟ್, ಮ್ಯಾನ್ ಆಂಡ್ ರೋಬೋಟ್, ಅಗ್ರೀಕಲ್ಚರ್ ಎಲಿಮೆಂಟ್ಸ್ ಹಲವು ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಮಕ್ಕಳ ಟ್ಯಾಲೆಂಟ್ ನೋಡಿದ ಜನರು ಬೇಷ್ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಛಲ ಮಾಡೋ ಹುಮ್ಮಸ್ಸಿದ್ದರೆ ಏನನ್ನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

  • 151 ಎಸೆತಕ್ಕೆ 490 ರನ್, 27 ಬೌಂಡರಿ, 57 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಬ್ಯಾಟ್ಸ್ ಮನ್

    151 ಎಸೆತಕ್ಕೆ 490 ರನ್, 27 ಬೌಂಡರಿ, 57 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಬ್ಯಾಟ್ಸ್ ಮನ್

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಯುವ ಕ್ರಿಕೆಟ್ ಪಟು ಏಕದಿನ ಕ್ರಿಕೆಟ್ ನಲ್ಲಿ 151 ಎಸೆತಗಳಲ್ಲಿ ಬರೋಬ್ಬರಿ 490 ರನ್ ಗಳಿಸುವ ಮೂಲಕ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ.

    ದಕ್ಷಿಣ ಆಫ್ರಿಕಾದ 20 ವರ್ಷದ ಬ್ಯಾಟ್ಸ್ ಮನ್ ಶೇನ್ ಡ್ಯಾಡ್ಸ್ ವೆಲ್ 151 ಎಸೆತಗಳಲ್ಲಿ 490 ರನ್ ಚಚ್ಚಿದ್ದಾರೆ. ಕ್ಲಬ್ ಕ್ರಿಕೆಟ್ ನಲ್ಲಿ ಎನ್‍ಡಬ್ಲ್ಯೂಯು ಪುಕ್ಕೆ ತಂಡ ಪರ ಆಡಿದ ಶೇನ್ ಎದುರಾಳಿ ಪೋಚ್ ಡ್ರಾಪ್ ವಿರುದ್ಧ ಈ ವಿಶೇಷ ಸಾಧನೆ ಮಾಡಿದ್ದಾರೆ.

    ಶೇನ್ ಅಮೋಘ ಇನ್ನಿಂಗ್ಸ್ ನಲ್ಲಿ 27 ಬೌಂಡರಿ, 57 ಸಿಕ್ಸರ್ ಸಿಡಿಸಿದ್ದರು. ಶೇನ್ ಜೊತೆಯಾಗಿ ಆಡಿದ ರವೂನ್ ಹ್ಯಾಸ್‍ಬ್ರೋಕ್ 104 ರನ್(54 ಎಸೆತ, 6 ಸಿಕ್ಸ್, 12 ಬೌಂಡರಿ)ಗಳಿಸುವ ತಂಡದ ಮೊತ್ತ ಹೆಚ್ಚಿಸಲು ಕಾರಣರಾದರು.

    ಪುಕ್ಕೆ ತಂಡದ ಬ್ಯಾಟ್ಸ್ ಮನ್ ಗಳ ಬ್ಯಾಟಿಂಗ್ ಆರ್ಭಟ ಹೇಗಿತ್ತು ಎಂದರೆ 63 ಸಿಕ್ಸ್, 48 ಬೌಂಡರಿಗಳು ಸಿಡಿಯಲ್ಪಟ್ಟಿತ್ತು. ಪರಿಣಾಮ ಎನ್‍ಡಬ್ಲ್ಯೂಯು ಪುಕ್ಕೆ ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ದಾಖಲೆಯ 677 ರನ್ ಗಳ ಮೊತ್ತವನ್ನು ಕಲೆ ಹಾಕಿತು. ಭಾರೀ ಮೊತ್ತವನ್ನು ಬೆನ್ನಟ್ಟಿದ್ದ ಪೋಚ್ ಡ್ರಾಪ್ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಬೌಲಿಂಗ್‍ನಲ್ಲಿಯೂ ಕಮಾಲ್: 490 ರನ್ ಹೊಡೆದಿದ್ದ ಶೇನ್ ಬಾಲಿಂಗ್ ನಲ್ಲಿ ತಮ್ಮ ಮೋಡಿ ಮಾಡಿದ್ದು, 7 ಓವರ್ ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದರು. ಅಷ್ಟೇ ಅಲ್ಲದೇ ಒಂದು ಮೇಡನ್ ಓವರ್ ಮಾಡಿದ್ದರು. ಪುಕ್ಕೆ ತಂಡದ ಬ್ಯಾಟ್ ಮನ್‍ಗಳು ಮೊದಲ ಮೂರು ವಿಕೆಟ್‍ಗೆ ಅನುಕ್ರಮವಾಗಿ 194, 204 ಮತ್ತು 220 ಜೊತೆಯಾಟವಾಡಿದ್ದರು. ಶೇನ್ ಅವರು ತಮ್ಮ 20ನೇ ಹುಟ್ಟುಹಬ್ಬದ ದಿನದಂದೇ ಈ ಸಾಧನೆ ಮಾಡಿರುವುದು ವಿಶೇಷ.

  • ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಕೋಲಾರ: ಅದೊಂದು ಊರಾದರೂ ಗ್ರಾಮ ಇದೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಬ್ರಿಟೀಷ್ ರೆವಿನ್ಯೂ ದಾಖಲೆಗಳಲ್ಲಿರುವ ಊರನ್ನು ತೋರಿಸುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ, ಮನೆಗಳು ಇವೆಲ್ಲಾ ಇದೆ ಅಂದಮೇಲೆ ಅದೊಂದು ಊರು ಅಲ್ವಾ. ಆದರೆ ಮಾಹಿತಿ ಹಕ್ಕು ಹೋರಾಟಗಾರ ರವಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಧ್ವನಿ ಎತ್ತಿದ್ದಾರೆ. ಇದಕ್ಕೆ ಕಾರಣ ದಾಖಲಾತಿ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳ ಗ್ರಾಮ ಭೌಗೋಳಿಕವಾಗಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಹೀಗೆ ಯಾವ ವ್ಯಾಪ್ತಿಯಲ್ಲೂ ದಾಖಲೆಗಳನ್ನೇ ಹೊಂದಿಲ್ಲ. ಹೀಗಾಗಿ ಈ ಊರಿಗೆ ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ.

    ಮಾರೇನಹಳ್ಳಿ ಕಂದಾಯ ಇಲಾಖೆ ಸರ್ವೆ ನಂಬರ್ ನಲ್ಲಿರುವುದರಿಂದ ಗ್ರಾಮ ನಂದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿ ಒಬ್ಬರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಗ್ರಾಮದಲ್ಲಿನ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ದರ್ಬಾರ್ ನಲ್ಲಿದೆ. ಈ ಬಗ್ಗೆ ಕಂದಾಯ ಇಲಾಖೆಯವರನ್ನು ಕೇಳಿದರೆ ಬ್ರಿಟೀಷ್ ರೆವಿನ್ಯೂ ದಾಖಲೆ ತೋರಿಸಿ ಮೈಸೂರು ರಾಜ್ಯದ ನಕ್ಷೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಒಟ್ಟಿನಲ್ಲಿ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಮಸ್ಥರು ಪರಿತಪಿಸುವಂತಾಗಿದೆ.

     

  • ಗಂಗೂಲಿ ದಾಖಲೆ ಮುರಿಯುವತ್ತ ಕೊಹ್ಲಿ ಕಣ್ಣು!

    ಗಂಗೂಲಿ ದಾಖಲೆ ಮುರಿಯುವತ್ತ ಕೊಹ್ಲಿ ಕಣ್ಣು!

    ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ ಬಳಿಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದು ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಅತಿ ಹೆಚ್ಚು ಟೆಸ್ಟ್ ಮ್ಯಾಚ್ ಗೆದ್ದ ಎರಡನೇ ಯಶಸ್ವಿ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಮೂರು ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಗಂಗೂಲಿ ಅವರ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ. ಇದೂವರೆಗೆ ಕೊಹ್ಲಿ ನಾಯಕತ್ವದಲ್ಲಿ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 19 ಪಂದ್ಯಗಳಲ್ಲಿ ಗೆಲುವು ಪಡೆದು ಟೀಂ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಭಾರತದ ಪರ ಟೆಸ್ಟ್ ನಲ್ಲಿ ಯಶಸ್ವಿ ನಾಯಕನೆಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಧೋನಿ ನೇತೃತ್ವದಲ್ಲಿ 60 ಪಂದ್ಯಗಳನ್ನು ಟೀಂ ಇಂಡಿಯಾ ಆಡಿದ್ದು 27 ರಲ್ಲಿ ಜಯಿಸಿದೆ. ನಂತರ ಸ್ಥಾನದಲ್ಲಿ ಗಂಗೂಲಿ ಇದ್ದು 49 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿ 21 ರಲ್ಲಿ ಗೆಲುವು ಪಡೆದಿದ್ದಾರೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. 104 ಪಂದ್ಯಗಳನ್ನು ಮುನ್ನಡೆಸಿದ ಸ್ಮಿತ್ 53ರಲ್ಲಿ ಗೆಲುವು ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಟಿಂಗ್ ಇದ್ದು, 77 ಪಂದ್ಯಗಳಲ್ಲಿ 48ರಲ್ಲಿ ಗೆಲುವು ಪಡೆದಿದ್ದಾರೆ.

    ತಿಂಗಳ ಹಿಂದೆಯಷ್ಟೇ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯನ್ನು ಭಾರತ 9-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

     

  • 85 ಭಾಷೆಗಳಲ್ಲಿ ಹಾಡಿ ಗಿನ್ನಿಸ್ ದಾಖಲೆಗೆ ತಯಾರಿ ನಡೆಸ್ತಿದ್ದಾಳೆ 12ರ ಪೋರಿ!

    85 ಭಾಷೆಗಳಲ್ಲಿ ಹಾಡಿ ಗಿನ್ನಿಸ್ ದಾಖಲೆಗೆ ತಯಾರಿ ನಡೆಸ್ತಿದ್ದಾಳೆ 12ರ ಪೋರಿ!

    ದುಬೈ: 12 ವರ್ಷದ ಬಾಲಕಿಯೊಬ್ಬರು 85 ಭಾಷೆಗಳಲ್ಲಿ ಹಾಡುಗಳನ್ನು ಗಾಯನ ಮಾಡುವ ಮೂಲಕ ಗಿನ್ನಿಸ್ ಬುಕ್ ದಾಖಲೆ ನಿರ್ಮಿಸಲು ತಯಾರಿ ನಡೆಸಿದ್ದಾಳೆ.

    ದುಬೈನ ಇಂಡಿಯನ್ ಹೈಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಖೇತಾ ಸತೀಶ್ ಎಂಬ ಬಾಲಕಿ ಈ ದಾಖಲೆ ನಿರ್ಮಿಸಲು ತಯಾರಿ ನಡೆಸಿದ್ದು, ಈಗಾಗಲೇ ಈಕೆ 80 ವಿವಿಧ ಭಾಷೆಗಳಲ್ಲಿ ಹಾಡುವ ಸಾಮಥ್ರ್ಯ ಹೊಂದಿದ್ದಾಳೆ. ಡಿಸೆಂಬರ್ 29 ರಂದು ನಡೆಯುವ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಪ್ರದರ್ಶನವನ್ನು ನೀಡಲು ಸಿದ್ಧತೆ ನಡೆಸಿದ್ದಾಳೆ.

    ಈ ಕಾರ್ಯಕ್ರಮದ ವೇಳೆಗೆ ಇನ್ನು 5 ಭಾಷೆಗಳ ಹಾಡುಗಳನ್ನು ಕಲಿತು ಹೊಸ ದಾಖಲೆ ಬರೆಯಲು ತಯಾರಿ ನಡೆಸಲಾಗುತ್ತಿದೆ. ಮೂಲತಃ ಕೇರಳದಿಂದ ಬಂದಿರುವ ಈಕೆ, ದೇಶದ ಪ್ರಮುಖ ಭಾಷೆಗಳಾದ ಹಿಂದಿ, ಮಲಯಾಳಂ, ತಮಿಳು ಭಾಷಗಳ ಹಾಡುಗಳನ್ನು ಹಾಡುತ್ತಾಳೆ.

    ಈ ಕುರಿತು ಮಾತನಾಡಿರುವ ಸುಖೇತಾ, `ನಾನು ಒಂದು ವರ್ಷ ಹಿಂದೆ ವಿದೇಶಿ ಭಾಷೆ ಹಾಡುಗಳನ್ನು ಕಲಿಯಲು ಆರಂಭಿಸಿದೆ. ನನ್ನ ಮೊದಲ ವಿದೇಶಿ ಭಾಷೆ ಹಾಡು ಜಪಾನಿಸ್. ನಮ್ಮ ತಂದೆಯವರ ಜಪಾನಿ ಸ್ನೇಹಿತರಿಂದ ಕೇವಲ 2 ಗಂಟೆ ಅವಧಿಯಲ್ಲಿ ಹಾಡನ್ನು ಕಲಿತೆ. ಇನ್ನು ಪ್ರೆಂಚ್, ಜರ್ಮನ್, ಹಂಗೇರಿಯನ್ ಭಾಷೆಗಳು ಕಲಿಯಲು ಹೆಚ್ಚು ಶ್ರಮ ವಾಹಿಸಬೇಕಾಯಿತು ಎಂದು ಹೇಳಿದ್ದಾಳೆ.

    ಪ್ರಸ್ತುತ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಅತೀ ಹೆಚ್ಚು ಭಾಷೆಗಳಲ್ಲಿ ಗಾಯನ ಮಾಡಿರುವ ದಾಖಲೆ ಆಂಧ್ರಪ್ರದೇಶ ಕೆಸಿರಾಜು ಶ್ರೀನಿವಾಸ್ ಎಂಬವರ ಹೆಸರಿನಲ್ಲಿದ್ದು, ಇವರು 2008 ರಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ಭಾಷೆಗಳಲ್ಲಿ ಹಾಡನ್ನು ಹಾಡುವ ಮಾಡುವ ದಾಖಲೆ ನಿರ್ಮಿಸಿದ್ದರು.

  • ನಂಬರ್ ಒನ್ ಸ್ಥಾನಕ್ಕೆ ಏರಿ ಸಚಿನ್ ದಾಖಲೆ ಮುರಿದ ಕೊಹ್ಲಿ

    ನಂಬರ್ ಒನ್ ಸ್ಥಾನಕ್ಕೆ ಏರಿ ಸಚಿನ್ ದಾಖಲೆ ಮುರಿದ ಕೊಹ್ಲಿ

    ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟಕ್ಕೆ ಏರಿದ್ದು ಮಾತ್ರವಲ್ಲೇ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ.

    ಹೌದು. ಕೊಹ್ಲಿ ಈಗ ಏಕದಿನ ಕ್ರಿಕೆಟ್ ನಲ್ಲಿ ಜೀವನಶ್ರೇಷ್ಠ 889 ರೇಟಿಂಗ್ಸ್ ಪಡೆದುಕೊಂಡಿದ್ದಾರೆ. ಈ ಹಿಂದೆ 887 ರೇಟಿಂಗ್ಸ್ ಪಡೆಯುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು. ಭಾನುವಾರ ಸಚಿನ್ ದಾಖಲೆಯನ್ನು ಮುರಿದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 872 ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಡೇವಿಡ್ ವಾರ್ನರ್ 865 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

    799 ರೇಟಿಂಗ್ ಪಡೆದು ರೋಹಿತ್ ಶರ್ಮಾ 7ನೇ ಸ್ಥಾನದಲ್ಲಿದ್ದರೆ, 730 ರೇಟಿಂಗ್ ಪಡೆದು ಧೋನಿ 11ನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ 15ನೇ ಸ್ಥಾನದಲ್ಲಿದ್ದು, 708 ರೇಟಿಂಗ್ ಪಡೆದುಕೊಂಡಿದ್ದಾರೆ.

    ಟಿ 20 ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 729 ರೇಟಿಂಗ್ ಪಡೆಯುವ ಮೂಲಕ ಜಸ್‍ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದರೆ, ಏಕದಿನ ಬೌಲಿಂಗ್ ಪಟ್ಟಿಯಲ್ಲಿ 719 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ರೋ’ಹಿಟ್’ ಶರ್ಮಾ – ‘ವಿರಾಟ’ ಶತಕ ದರ್ಶನ – ಹಲವು ದಾಖಲೆಗಳ ಸೃಷ್ಟಿ!

  • ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನ: ಭಾನುವಾರ ಬೆಳಗ್ಗೆ ಆರಂಭಗೊಂಡಿದ್ದ ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ ಸಂಜೆ ವೇಳೆ ಮುಕ್ತಾಯಗೊಂಡಿದ್ದು, ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿವೆ.

    ಒಂದು ಸಾವಿರ ಬೆಲೆಯ ಟಿಕೆಟ್‍ನಿಂದ 1.3 ಕೋಟಿ ರೂಪಾಯಿ, 300 ರೂಪಾಯಿ ಟಿಕೆಟ್‍ನಿಂದ 1.2ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಪ್ರಸಾದದ ಆದಾಯ 70 ಲಕ್ಷ ರೂಪಾಯಿ ಬಂದಿದೆ. ಒಟ್ಟು ಈ ಬಾರಿಯ ಜಾತ್ರೆಯಲ್ಲಿ 4.14 ಕೋಟಿ ರೂ. ಆದಾಯ ಬಂದಿದೆ.

    ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನ ಹುಂಡಿ ಎಣಿಕೆ ಮಾಡಿದ್ದರು. 4 ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾ ಕಾರ್ಯ ಮುಕ್ತಾಯವಾಗಿದೆ. ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಈ ಬಾರಿ ಸುಮಾರು 5 ಕೋಟಿ ರೂ. ಅಧಿಕ ಆದಾಯವನ್ನು ನಿರೀಕ್ಷಿಸಲಾಗಿತ್ತು.

    ಕಳೆದ ವರ್ಷ ಹಾಸನಾಂಬೆ ಜಾತ್ರೆಯಲ್ಲಿ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

    ವಿಶೇಷವಾಗಿ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿದ್ದು, ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು. ನನ್ನ ಮುಖದ ಮೊಡವೆಗಳನ್ನ ನಿವಾರಣೆ ಮಾಡು. ನನ್ನ ಸೌಂದರ್ಯವನ್ನ ಹೆಚ್ಚಿಸು. ಅತ್ತೆ ಮನೆ ಕಿರುಕುಳದಿಂದ ಪಾರು ಮಾಡು. ನನ್ನ ರೋಗ ನಿವಾರಿಸು ಎಂಬ ನಾನಾ ಕೋರಿಕೆಗಳನ್ನು ದೇವಿ ಬಳಿ ಭಕ್ತರು ಕೇಳಿಕೊಂಡಿದ್ದಾರೆ.

  • ಶೋಭಾ ಕರಂದ್ಲಾಜೆ ಸಹೋದರನ ಎಸ್ಟೇಟ್ ದಾಖಲೆಗಳೇ ನಾಪತ್ತೆ – ಕೇಳಿದ್ರೆ ನಾಶಪಡಿಸಿದ್ದೇವೆ ಅಂತಾರೆ ರಿಜಿಸ್ಟ್ರಾರ್

    ಶೋಭಾ ಕರಂದ್ಲಾಜೆ ಸಹೋದರನ ಎಸ್ಟೇಟ್ ದಾಖಲೆಗಳೇ ನಾಪತ್ತೆ – ಕೇಳಿದ್ರೆ ನಾಶಪಡಿಸಿದ್ದೇವೆ ಅಂತಾರೆ ರಿಜಿಸ್ಟ್ರಾರ್

    ಶಿವಮೊಗ್ಗ: ಸಂಸದೆ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ ಖರೀದಿಸಿದ ಎಸ್ಟೇಟ್ ದಾಖಲೆ ನಾಪತ್ತೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಕೊಡಗಿನ ಭಾಗಮಂಡಲದ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ 166 ಎಕರೆ ಎಸ್ಟೇಟ್ ಖರೀದಿಸಿದ್ದ ದಾಖಲೆ ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಡಿಕೇರಿ ರಿಜಿಸ್ಟ್ರಾರ್ ಎಸ್ಟೇಟ್ ಖರೀದಿ ದಾಖಲೆಗಳು ನಾಶವಾಗಿರಬಹುದು ಎಂದು ಹೇಳಿದ್ದಾರೆ. ಇದೀಗ ಆರ್‍ಟಿಐ ಕಾರ್ಯಕರ್ತರಿಂದ ದಾಖಲೆ ನಾಪತ್ತೆ ಹಗರಣ ಬಟಾ ಬಯಲಾಗಿದೆ.

    ಕೊಡುಗು ಜಿಲ್ಲೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ 166 ಎಕರೆ ಭೂಮಿ ಖರೀದಿಸಿದ್ದರು. ಈ ಭೂಮಿಯನ್ನು ಅಬ್ದುಲ್ ರೆಹಮಾನ್ ಅವರಿಂದ ಕಪಿಲ ಮಂಜುಶ್ರೀ ಅಪೆರೆಲ್ಸ್ ಎಂಬ ಸಂಸ್ಥೆಯ ಪರವಾಗಿ ಲಕ್ಷ್ಮಣ್ ಗೌಡ ಮತ್ತು ಸೆಬಾಸ್ಟಿಯನ್ ಎಂಬವರು 5 ಕೋಟಿ 10 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಈ ಖರೀದಿಯ ನೋಂದಣಿ ಪತ್ರ ಹಾಗೂ ನೋಂದಣಿಗೆ ಪೂರಕವಾಗಿ ಸಲ್ಲಿಸಲಾದ ದಾಖಲೆಗಳನ್ನು ಆರ್‍ಟಿಐ ಮೂಲಕ ಕೇಳಲಾಗಿತ್ತು. ಆದರೆ ನೋಂದಣಿ ಪತ್ರವನ್ನು ಮಾತ್ರ ನೀಡಿರುವ ರಿಜಿಸ್ಟ್ರಾರ್, ಪೂರಕ ದಾಖಲೆಗಳನ್ನು ನೀಡಿರಲಿಲ್ಲ. ಮತ್ತೆ ಪೂರಕ ದಾಖಲೆಗಳಿಗೆ ಕೋರಿಕೆ ಸಲ್ಲಿಸಿದಾಗ ತೀರಾ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.

    ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದೊಂದಿಗೆ ಕಚೇರಿ ಕರ್ತವ್ಯದ ವೇಳೆ ಪ್ರತಿದಿನ ದಾಖಲೆಗಳನ್ನು ಹುಡುಕಲಾಗಿತ್ತು. ಕಚೇರಿಯ ಸಮಸ್ತ ದಾಖಲೆಗಳನ್ನು ಹುಡುಕಲು ಹೆಚ್ಚಿನ ಸಮಯ ವ್ಯಯವಾಗಿದೆ. ಕಚೇರಿಯ ಸಂಪೂರ್ಣ ದಾಖಲೆಗಳನ್ನು ಹುಡುಕಲಾಗಿ ಸದರಿ ದಾಸ್ತಾವೇಜಿನೊಂದಿಗೆ ನೀಡಲಾಗಿರುವ ಪೂರಕ ದಾಖಲೆಗಳು ಅವಧಿ ಮೀರಿದ್ದೆಂದು ನಾಶಪಡಿಸಲಾಗಿದೆ. ಈ ಸಂದರ್ಭದಲ್ಲೇ ಮೇಲ್ಕಂಡ ದಿನಾಂಕ 17.08.2008ರಂದು ನೋಂದಣಿಯಾದ ಕ್ರಯಪತ್ರದ ಜೊತೆ ನೀಡಲಾದ ಲಗತ್ತುಗಳು ಹಾಗೂ ದಾಖಲೆಗಳನ್ನೂ ನಾಶಪಡಿಸಿರುವ ಸಂಭವ ಇರುತ್ತದೆ ಎಂದು ಕೊಡಗು ಜಿಲ್ಲೆಯ ಹಿರಿಯ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.

    2007ರಲ್ಲಿ ನೋಂದಣಿಯಾಗಿರುವ ಕಪಿಲ ಮಂಜುಶ್ರೀ ಅಪಾರೆಲ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಣ ಗೌಡ ಕರಾಂದ್ಲಾಜೆ ಅವರ ಸಹೋದರ. 2007ರಲ್ಲಿ ನೋಂದಣಿಯಾಗಿರುವ ಮಂಜುಶ್ರೀ ಅಪಾರೆಲ್ಸ್ ಕಂಪನಿಗೆ ಒಂದೇ ವರ್ಷದಲ್ಲಿ 5 ಕೋಟಿ 10 ಲಕ್ಷ ರೂಪಾಯಿ ಲೋನ್ ದೊರಕಿದೆ. ಇಷ್ಟು ಪ್ರಮಾಣದ ಲೋನ್ ದೊರಕುವಲ್ಲಿ ಕರಂದ್ಲಾಜೆ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿಬಂದಿದೆ.

    ಬೆಂಗಳೂರು ಆರ್.ಟಿ ನಗರದಲ್ಲಿರುವ ಫೆಡರಲ್ ಬ್ಯಾಂಕ್‍ನಿಂದ ಭೂಮಿ ಮಾರಾಟ ಮಾಡಿದ ಅಬ್ದುಲ್ ರೆಹಮಾನ್ ಅವರಿಗೆ ಖಾತೆಗೆ ನೇರವಾಗಿ ಈ ಹಣ ಸಂದಾಯವಾಗಿದೆ. ಮಂಜುಶ್ರೀ ಅಪಾರೆಲ್ಸ್ ಕಂಪನಿಯ ಧ್ಯೇಯೋದ್ದೇಶಗಳೇನು? ಕಂಪನಿಯ ನಿರ್ದೇಶಕರು ಯಾರು? ಯಾವ ಉದ್ದೇಶಕ್ಕಾಗಿ ಭೂಮಿ ಖರೀದಿ ಮಾಡಲಾಗುತ್ತಿದೆ? ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ.

    ವಿವರಗಳು ಪೂರಕ ದಾಖಲೆಗಳಲ್ಲಿ ಇರುತ್ತವೆ. ಆದರೆ ಈಗ ಈ ದಾಖಲೆಗಳನ್ನು ನಾಶ ಮಾಡಲಾಗಿದೆ ಎನ್ನುವ ಮೂಲಕ ಮಡಕೇರಿ ರಿಜಿಸ್ಟ್ರಾರ್ ಕರ್ತವ್ಯ ಲೋಪವೆಸಗಿದ್ದಾರೆ. ಮಹತ್ವದ ದಾಖಲೆಗಳನ್ನು ಸೂಕ್ತ ನಿರ್ದೇಶನ, ನಿಯಮ ಪಾಲನೆ ಮಾಡದೆ ನಾಶವಾಗಿರಬಹುದು ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

    ಇದು ಜಿಲ್ಲಾ ಮಟ್ಟದ ಅಧಿಕಾರಿಯ ಅತೀ ಬೇಜವಾಬ್ದಾರಿ ಹೇಳಿಕೆಯಾಗಿದ್ದು, ಅಷ್ಟಕ್ಕೂ ಈ ದಾಖಲೆಗಳಲ್ಲಿ ಇರುವ ಕಂಪನಿ ಹಾಗೂ ವ್ಯಕ್ತಿಗಳು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನೇರವಾಗಿ ಸಂಬಂಧಿಸಿವೆ. ಕಪಿಲ ಮಂಜುಶ್ರೀ ಅಪಾರೆಲ್ಸ್ ಕಂಪನಿಯ ನಿರ್ದೇಶಕ ಲಕ್ಷ್ಮಣ ಗೌಡ ಖರೀದಿಸಿರುವ 166 ಎಕರೆ ಪ್ರದೇಶದಲ್ಲಿ 20 ಎಕರೆ ಮಾತ್ರ ಕಾಫಿ ಬೆಳೆಯಲು ಅನುಮತಿಯನ್ನು ನೀಡಲಾದೆ. ಇನ್ನುಳಿದ 146 ಎಕರೆ ಪ್ರದೇಶವು ಅರಣ್ಯ ಭೂಮಿಯಾಗಿದೆ. ಈ ಪ್ರದೇಶದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಮರಳು ಇದೆ. ಪ್ರತಿ ಎಕರೆ 15ರಿಂದ 20ಲಕ್ಷ ಬೆಲೆ ಬಾಳುತ್ತದೆ. ಆದರೆ ಇವರಿಗೆ ಕೇವಲ 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇದರ ಹಿಂದೆ ಬೇರೆಯಾವುದೇ ಉದ್ದೇಶವಿದೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳನ್ನು ರಕ್ಷಿಸುವ ಹಾಗೂ ಅವರ ಪ್ರಭಾವಕ್ಕೆ ಮಣಿದಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ಹಾಗೂ ವಕೀಲ ವಿನೋದ್ ಆರೋಪ ಮಾಡಿದ್ದಾರೆ.