Tag: ದಾಖಲೆ

  • ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಬೆಂಗಳೂರು: ಮಠದ ಜಾಗವನ್ನು ಹೊಡೆಯಲು ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಪ್ರಯತ್ನಿಸಿದ್ದಾಯ್ತು. ಇದೀಗ ಸಚಿವ ಕೆಜೆ ಜಾರ್ಜ್ ಕ್ಷೇತ್ರದಲ್ಲಿ ಬರುವ ಶ್ರೀರಾಮ ಮಂದಿರದ ಟ್ರಸ್ಟ್ ಗೆ ಸೇರಿದ ಜಾಗವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗಿರೋದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ರಾಮಮಂದಿರದ ಸುತ್ತಮುತ್ತಲಿನ ಜಾಗ ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಗೆ ಸೇರಿದ್ದು ಅಂತ ಕೋರ್ಟ್ ಆದೇಶಿಸಿದೆ. ಆದ್ರೆ ಈ ಜಾಗ ಸರ್ಕಾರದ್ದು ಅಂತ ತಹಶೀಲ್ದಾರ್ ಮತ್ತು ಅಧಿಕಾರಿಗಳು ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ.

    ಈ ಕುರಿತು ಆದೇಶ ಎಲ್ಲಿದೆ ಅಂತ ಪ್ರಶ್ನಿಸಿದ್ರೆ ನಮಗೆ ಮೇಲಿಂದ ಒತ್ತಡ ಇದೆ ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ದೇವಸ್ಥಾನದ ಟ್ರಸ್ಟಿಗಳು ಮತ್ತು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿವ ಕೆಜೆ ಜಾರ್ಜ್ ಅವರೇ ಪರೋಕ್ಷವಾಗಿ ಒತ್ತಡ ಹೇರಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ ಅಂತ ಟ್ರಸ್ಟಿಗಳು ಆರೋಪಿಸಿದ್ದಾರೆ.

    ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ನಮಗೆ ಯಾರ ಒತ್ತಡವೂ ಇಲ್ಲ ಅಂತ ಹೇಳುತ್ತಿದ್ದಾರೆ. ಆದ್ರೆ ದಾಖಲೆಗಳನ್ನು ಕೇಳಿದ್ರೆ ಮಾತ್ರ ತೋರಿಸಲು ಮುಂದಾಗುತ್ತಿಲ್ಲ.

  • ಕೊಹ್ಲಿ 35ನೇ ಶತಕದೊಂದಿಗೆ ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ!

    ಕೊಹ್ಲಿ 35ನೇ ಶತಕದೊಂದಿಗೆ ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ!

    ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.

    ಇಲ್ಲಿನ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 82 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ ಶತಕ ಸಿಡಿಸಿ ಅಂತರಾಷ್ಟ್ರಿಯ ಏಕದಿನ ಪಂದ್ಯದಲ್ಲಿ 35 ಶತಕ ಸಿಡಿಸಿದ ಸಾಧನೆ ಮಾಡಿದರು. ಈ ಮೂಲಕ ಅತ್ಯಂತ ವೇಗವಾಗಿ 35 ಶತಕಗಳನ್ನು ಸಿಡಿಸಿದ ಅಟಗಾರ ಎಂಬ ಹೆಗ್ಗಳಿಕೆ ಪಡೆದರು.

    ಶರವೇಗದ 35 ಶತಕಗಳು: ವಿರಾಟ್ ಕೊಹ್ಲಿ ಕೇವಲ 200 ಇನ್ನಿಂಗ್ಸ್ ಗಳಲ್ಲಿ 35 ಶತಕಗಳನ್ನು ಬಾರಿಸಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು (49) ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದು, ಅವರು 35 ಶತಕ ಗಳಿಸಲು 309 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

    ಇದರೊಂದಿಗೆ ಕೊಹ್ಲಿ, ಸಚಿನ್ ರ ಮತ್ತೊಂದು ದಾಖಲೆ ಮುರಿದಿದ್ದಾರೆ. 30 ವರ್ಷ ವಯಸ್ಸಿನ ಒಳಗೆ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ಸಚಿನ್ 30 ವರ್ಷ ವಯಸ್ಸಿನ ಒಳಗೆ 34 ಶತಕಗಳಿಸಿದ್ದರು.

    500 ಪ್ಲಸ್ ರನ್: ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇಲ್ಲಿಯವರೆಗೆ ಒಟ್ಟು 558 ರನ್ ಕಲೆಹಾಕಿರುವ ಕೊಹ್ಲಿ ಕ್ರಿಕೆಟ್ ಇತಿಹಾಸದ ದ್ವಿಪಕ್ಷೀಯ ಸರಣಿಯಲ್ಲಿ 500 ಪ್ಲಸ್ ರನ್ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೊದಲು ಟೀಂ ಇಂಡಿಯಾ ಆಟಗಾರರ ರೋಹಿತ್ ಶರ್ಮಾ 2013 ರ ಆಸ್ಟ್ರೇಲಿಯಾ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ 491 ರನ್ ಗಳಿಸಿದ್ದರು. ಪಟ್ಟಿಯ ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆಟಗಾರ ಜಾರ್ಜ್ ಬೈಲಿ 2013 ಸರಣಿಯಲ್ಲಿ 478 ರನ್ ಗಳಿಸಿದ್ದರು.

    17 ಸಾವಿರ ರನ್: ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ 129 ರನ್(96 ಎಸೆತ, 19 ಬೌಂಡರಿ, 2 ಸಿಕ್ಸರ್) ಸಿಡಿಸುವುದರೊಂಗಿದೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 17 ಸಾವಿರ ರನ್ ಪೂರೈಸಿದರು. ಕೊಹ್ಲಿ ಈ ಸಾಧನೆ ಮಾಡಲು 363 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು 2017ರಲ್ಲಿ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ 381 ಇನ್ನಿಂಗ್ಸ್ ಗಳಲ್ಲಿ 17 ಸಾವಿರ ತನ್ ಪೂರೈಸಿದ್ದರು. ಕೊಹ್ಲಿ ಸೆಂಚೂರಿಯನ್ ಪಂದ್ಯಕ್ಕೂ ಮೊದಲು ಟೆಸ್ಟ್ ನಲ್ಲಿ 5,554 ರನ್, ಏಕದಿನ 9,459 ರನ್, ಟಿ20 1,956 ರನ್ 55.45 ಸರಾಸರಿಯಲ್ಲಿ ಒಟ್ಟಾರೆ 16,969 ರನ್ ಗಳಿಸಿದ್ದರು.

     

  • ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

    ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

    ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯ ಸಾಹಸಿ ಮಹಿಳೆ ಶೀತಲ್ ರಾಣೆ-ಮಹಾಜನ್, ಥೈಲ್ಯಾಂಡ್‍ನಲ್ಲಿ ‘ನವ್ ವಾರಿ ಸೀರೆ’ (8.25 ಮೀಟರ್ ಉದ್ದದ ಸೀರೆ) ಧರಿಸಿ ಸ್ಕೈ ಡೈವಿಂಗ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೀರೆ ಧರಿಸಿ ಸ್ಕೈ ಡೈವಿಂಗ್ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಬಿರುದಿಗೆ ಶೀತಲ್ ಪಾತ್ರವಾಗಿದ್ದಾರೆ.

    ಸ್ಕೈ ಡೈವಿಂಗ್ ಬಳಿಕ ಮಾತನಾಡಿದ ಶೀತಲ್, ಅನಕೂಲಕರವಾದ ವಾತಾವರಣ ಇದ್ದ ಕಾರಣ ಪಟ್ಟಾಯ್‍ನ ವಿಶ್ವ ಪ್ರಸಿದ್ಧ ರೆಸಾರ್ಟ್ ಮೇಲಿಂದ ಸುಮಾರು 13,000 ಅಡಿ ಎತ್ತರದಿಂದ ಎರಡು ಬಾರಿ ಸ್ಕೈ ಡೈವಿಂಗ್ ಮಾಡಿದೆ ಎಂದು ತಮ್ಮ ಸಂತೋಷವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

    ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಈ ಬಾರಿ ಏನಾದ್ರೂ ಸಾಹಸ ಮಾಡಬೇಕೆಂದು ಯೋಚಿಸಿ, ನವ್ ವಾರಿ ಸೀರೆ ಧರಿಸಿ ಸ್ಕೈ ಡೈವಿಂಗ್ ಮಾಡಲು ತೀರ್ಮಾನಿಸಿದೆ ಅಂತಾ ತಿಳಿಸಿದ್ದಾರೆ.

    ಭಾರತೀಯ ಮಹಿಳೆಯರು ಧರಿಸುವ ಸಾಮಾನ್ಯ ಸೀರೆಗಿಂತ್ ‘ನವ್ ವಾರಿ ಸೀರೆ’ ತುಂಬಾ ಉದ್ದವಾಗಿರುತ್ತದೆ. ಮೊದಲು ಸರಿಯಾಗಿ ಸೀರೆಯನ್ನು ತೊಟ್ಟು ರೆಡಿಯಾದೆ. ನಂತರ ಪ್ಯಾರಾಚೂಟ್, ಹ್ಯಾಂಡ್ ಗ್ಲೌಸ್, ಹೆಲ್ಮೆಟ್, ಸಂಪರ್ಕ ಸಾಧನ ಮತ್ತು ಶೂಗಳನ್ನು ಧರಿಸಿ ಸ್ಕೈ ಡೈವಿಂಗ್ ಮಾಡಿದೆ. ಮೊದಲ ಬಾರಿಗೆ ಧುಮುಕುವಾಗ ಸ್ವಲ್ಪ ಭಯವಾಗಿತ್ತು, ಆದ್ರೆ ಎರಡನೇ ಬಾರಿಗೆ ಧೈರ್ಯದಿಂದ ಧುಮುಕಿ ಎಂಜಾಯ್ ಮಾಡಿದೆ ಅಂತಾ ಶೀತಲ್ ಹೇಳಿಕೊಂಡಿದ್ದಾರೆ.

    ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಶೀತಲ್ ಮಹಾಜನ್ ಫಿನ್‍ಲ್ಯಾಂಡ್ ಮೂಲದ ಎಂಜಿನಿಯರ್ ವೈಭವ್ ರಾಣೆ ಅವರನ್ನು ಮದುವೆ ಆಗಿದ್ದಾರೆ. 2008ರಲ್ಲಿ ಪುಣೆ ನಗರದ ಸ್ಕೈ ಸಿಟಿಯಲ್ಲಿ 750 ಅಡಿ ಎತ್ತರದಲ್ಲಿ ಹಾಟ್ ಏರ್ ಬಲೂನ್‍ನಲ್ಲಿ ಮದುವೆಯಾಗುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು.

    ಏಪ್ರಿಲ್ 18, 2004ರಲ್ಲಿ ತಮ್ಮ ಮೊದಲ ಸ್ಕೈ ಡೈವಿಂಗ್ ನಲ್ಲಿ ರಷ್ಯಾದಲ್ಲಿರುವ ಉತ್ತರ ದ್ರುವದಲ್ಲಿ ಮೈನಸ್ 37 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 2,400 ಅಡಿ ಎತ್ತರದಿಂದ ಧುಮಕಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆ ಶೀತಲ್ ಹೆಸರಿನಲ್ಲಿದೆ. ಇದೂವರೆಗೂ ಸ್ಕೈ ಡೈವಿಂಗ್ ನಲ್ಲಿ 18 ರಾಷ್ಟ್ರೀಯ ರೆಕಾರ್ಡ್ ಬರೆದಿದ್ದಾರೆ.

  • ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ

    ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ

    ಡರ್ಬನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

    ಡರ್ಬನ್ ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕರಾಗಿ ಹೆಚ್ಚು ಶತಕ ಗಳಿಸಿದ ಗಂಗೂಲಿ ಹೆಸರಿನಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಕೊಹ್ಲಿ 119 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 112 ರನ್ ಸಿಡಿಸಿದರು. ಈ ಮೂಲಕ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿ 11 ನೇ ಶತಕ ಗಳಿಸಿದರು, ವೃತ್ತಿ ಜೀವನದಲ್ಲಿ ತಮ್ಮ 33 ನೇ ಏಕದಿನ ಶತಕವನ್ನು ಪೂರೈಸಿದರು. ಈ ಹಿಂದೆ ಸೌರವ್ ಗಂಗೂಲಿ ಟೀಂ ಇಂಡಿಯಾ ನಾಯಕರಾಗಿ 11 ಶತಕಗಳನ್ನು ಸಿಡಿಸಿದರು.

    ಕೊಹ್ಲಿ ಕೇವಲ 44 ಪಂದ್ಯಗಳಲ್ಲಿ 11 ಶತಕಗಳನ್ನು ಸಿಡಿಸಿದರೆ, ಗಂಗೂಲಿ ಅವರು 146 ಪಂದ್ಯಗಳಲ್ಲಿ 38.79 ಸರಾಸರಿಯಲ್ಲಿ 5,082 ರನ್ ಗಳನ್ನು ಗಳಿಸುವ ಮೂಲಕ 11 ಶತಕ, 30 ಅರ್ಧ ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದರು. ನಂತರದ ಸ್ಥಾನದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಇದ್ದು, ತಲಾ 6 ಶತಕಗಳನ್ನು ಗಳಿಸಿದ್ದಾರೆ.

    ಕೊಹ್ಲಿ ಡರ್ಬನ್ ನಲ್ಲಿ ಶತಕ ಗಳಿಸುವ ಮೂಲಕ ಆಫ್ರಿಕಾದಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ರು. ಈ ಮೂಲಕ ಕೊಹ್ಲಿ ಆಡಿದ 9 ದೇಶಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದರು.

    ಈ ಹಿಂದೆ ಡರ್ಬನ್ ಮೈದಾನದಲ್ಲಿ ಆಡಿದ್ದ 07 ಪಂದ್ಯಗಳಲ್ಲಿ ಭಾರತ 06 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಉಳಿದ ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿತ್ತು. ಮತ್ತೊಂದೆಡೆ ತನ್ನ ನೆಲದಲ್ಲಿ ಸತತ 17 ಏಕದಿನ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಹರಿಣಗಳಿಗೆ ಟೀಂ ಇಂಡಿಯಾ ಸೋಲಿನ ರುಚಿ ತೋರಿಸಿದೆ.

    06 ಏಕದಿನಗಳ ಸರಣಿಯ 2ನೇ ಪಂದ್ಯ ಸೆಂಚೂರಿಯನ್ ನ ಸೂಪರ್ ಸ್ಪೋಟ್ರ್ಸ್ ಪಾರ್ಕ್ ನಲ್ಲಿ ಭಾನುವಾರ ನಡೆಯಲಿದೆ.

     

  • ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಕ್ಯಾಚ್ – ವಿಡಿಯೋ ನೋಡಿ

    ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಕ್ಯಾಚ್ – ವಿಡಿಯೋ ನೋಡಿ

    ಮೆಲ್ಬರ್ನ್: ಕ್ರಿಕೆಟ್‍ನಲ್ಲಿ ಎಂತೆಂಥಾ ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಆದ್ರೆ ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಒಂದು ಬಿಗ್ ಬ್ಯಾಷ್‍ನಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಐಪಿಎಲ್ ಮಾದರಿಯಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ಟೂರ್ನಿ ಬಿಗ್‍ಬ್ಯಾಷ್‍ನ 35ನೇ ಪಂದ್ಯದ ಒಂದು ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ. ಅತೀಥೇಯ ಮೆಲ್ಬರ್ನ್ ರೆನಗೇಡ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸ್ಟ್ರೈಕರ್ಸ್, ರೆನಗೇಡ್ಸ್ ಗೆಲುವಿಗೆ 174 ರನ್‍ಗಳ ಗುರಿ ನೀಡಿತ್ತು.

    ಚೇಸಿಂಗ್ ವೇಳೆ 15 ಓವರ್  ಗಳಲ್ಲಿ ರೆನಗೇಡ್ಸ್ 100 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಸ್ಟ್ರೈಕರ್ಸ್ ಪರ 15ನೇ ಓವರ್ ಎಸೆಯಲು ಬಂದ ರಶೀದ್ ಖಾನ್ ಅವರ ಮೊದಲನೇ ಎಸೆತವನ್ನು ಕ್ರೀಸ್‍ನಲ್ಲಿದ್ದ ಡ್ವೈನ್ ಬ್ರಾವೋ ಸಿಕ್ಸರ್ ಗೆ  ಅಟ್ಟಲು ಬಲವಾಗಿಯೇ ಬಾರಿಸಿದ್ದರು.

    ಇನ್ನೇನು ಬಾಲ್ ಬೌಂಡರಿ ಗೆರೆ ದಾಟಿತು ಎನ್ನುವಷ್ಟರಲ್ಲಿಯೇ ಅಲ್ಲೊಂದು ಮಹಾ ಮ್ಯಾಜಿಕ್ ನಡೆಯಿತು. ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆಯಲ್ಲಿದ್ದ ಬೆನ್ ಲಾಫ್ಲಿನ್ ದೂರದಿಂದ ಓಡಿ ಬಂದು ಚಿರತೆಯಂತೆ ಜಂಪ್ ಮಾಡಿ ಸಿಕ್ಸರ್ ತಡೆದು ಚೆಂಡನ್ನು ಮತ್ತೆ ಮೈದಾನಕ್ಕೆ ವಾಪಸ್ ಎಸೆದರು.

    ಇದೇ ವೇಳೆ ಮೈದಾನದಲ್ಲಿದ್ದ ಮತ್ತೋರ್ವ ಫೀಲ್ಡರ್ ಜಾಕ್ ವೆರರಾಲ್ಡ್ ಮಿಂಚಿನ ವೇಗದಲ್ಲಿ ಬಹುದೂರ ಹಾರಿ ಅತ್ಯದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದ್ರು. ಅಂತಿಮವಾಗಿ ಅಡಿಲೇಡ್ ಸ್ಟ್ರೈಕರ್ಸ್ 26 ರನ್‍ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.

    https://twitter.com/haceeb/status/955465784121286656

  • ಉಡುಪಿಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರಿತು ವಂದೇ ಮಾತರಂ

    ಉಡುಪಿಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರಿತು ವಂದೇ ಮಾತರಂ

    ಉಡುಪಿ: ವಿಶ್ವಾದ್ಯಂತ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಸರ್ಕಾರವೂ ಸ್ವಾಮೀಜಿಯ 155ನೇ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿದೆ. ಉಡುಪಿಯಲ್ಲಿ ಈ ದಿನ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸಾಕ್ಷಿಯಾಯ್ತು. 5000 ಮಂದಿ ವಂದೇ ಮಾತರಂ ಹಾಡುವ ಮೂಲಕ ತಮ್ಮ ಹೆಸರುಗಳನ್ನು ವಿದ್ಯಾರ್ಥಿಗಳು ದಾಖಲೆ ಪುಸ್ತಕದಲ್ಲಿ ಬರೆಸಿದ್ದಾರೆ.

    ಭಾರತ್ ಮಾತಾಕಿ ಜೈ.., ಸ್ವಾಮೀ ವಿವೇಕಾನಂದರಿಗೆ ಜೈ.., ವಂದೇ ಮಾತರಂ.., ವಂದೇ ಮಾತರಂ. ಇವಿಷ್ಟು ಘೋಷ ವಾಕ್ಯಗಳನ್ನು ಬಿಟ್ಟು ಉಡುಪಿಯ ಮಲ್ಪೆಯಲ್ಲಿ ಬೇರೇನೂ ಇರಲೇ ಇಲ್ಲ. ಬರೀ ವಂದೇ ಮಾತರಂ ಘೋಷವಾಕ್ಯವಷ್ಟೆ ಕಿವಿಗಪ್ಪಳಿಸುತ್ತಿತ್ತು. ಕಣ್ಣಮುಂದೆ ತಿರಂಗ ಪಟಪಟಿಸುತ್ತಿತ್ತು.

    ಸ್ವಾಮಿ ವಿವೇಕಾನಂದರ 155ನೇ ಜನ್ಮದಿನೋತ್ಸವವನ್ನು ಉಡುಪಿಯಲ್ಲಿ ವಿಭಿನ್ನವಾಗಿ ಆಚರಿಸಲಾಯ್ತು. ಇಳಿ ಸಂಜೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಐದು ಸಾವಿರ ಮಂದಿ ವಿದ್ಯಾರ್ಥಿಗಳು ವಂದೇ ಮಾತರಂ ಹಾಡಿನ ಗಾಯನ ಮಾಡಿದ್ರು. `ಸೇವ್ ನೇಚರ್ ಫಾರ್ ಫ್ಯೂಚರ್’ ಎಂಬ ಲೋಗೋವನ್ನು ಹಾಡಿದ ಎಲ್ಲಾ ವಿದ್ಯಾರ್ಥಿಗಳು ಧರಿಸಿದ್ದರು. ಇದೇ ಮೊದಲ ಬಾರಿಗೆ ಸಂಪೂರ್ಣ ಹಾಡನ್ನು ಇಷ್ಟು ದೊಡ್ಡ ಗುಂಪಿನಲ್ಲಿ ಹಾಡಲಾಯ್ತು.

    ಹಿನ್ನೆಲೆ ಸಂಗೀತಕ್ಕೆ ವಿದ್ಯಾರ್ಥಿಗಳು, ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಸೇರಿದ್ದ ಜನ- ಗಣ್ಯರು ಎದ್ದು ನಿಂತು ವಂದೇ ಮಾತರಂಗೆ ಗೌರವ ಕೊಟ್ಟರು. ಸಾಮೂಹಿಕ ವಂದೇ ಮಾತರಂ ಮತ್ತು ಒಂದೇ ರೀತಿಯ ಲೋಗೋ ಧರಿಸಿದ್ದು ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಯಾಗಲು ಕಾರಣವಾಯಿತು.

    ಈ ವಿಭಿನ್ನ ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ 24 ಕಾಲೇಜಿನ 5000 ವಿದ್ಯಾರ್ಥಿಗಳು ಪಾಲ್ಗೊಂಡರು. ಸುಮಾರು 15 ಸಾವಿರ ಮಂದಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದೊಂದು ಅವಿಸ್ಮರಣೀಯ ದಿನ ಅನ್ನೋದು ಪಾಲ್ಗೊಂಡ ವಿದ್ಯಾರ್ಥಿಗಳ ಖುಷಿಯ ಮಾತು.

    ವಿದ್ಯಾರ್ಥಿನಿ ಮಧುಮತಿ ಮತ್ತು ಮಮತಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ದಿನ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಕರಾವಳಿಯಲ್ಲಿ ಕೋಮು ಸಂಘರ್ಷ ಹೆಚ್ಚಾಗಿದ್ದು, ಪರಸ್ಪರ ಆತ್ಮೀಯತೆಯ ಭಾವನೆ ಕ್ಷೀಣಿಸಿದೆ. ದೇಶಭಕ್ತಿ ಇಲ್ಲವಾಗಿದ್ದು ಘರ್ಷಣೆ ಹೆಚ್ಚಾಗಿದೆ. ವಂದೇ ಮಾತರಂ ಹಾಡನ್ನು ಎಂದೂ ಸಂಪೂರ್ಣವಾಗಿ ನಾನು ಕೇಳಿಲ್ಲ. ಮೊದಲ ಬಾರಿ ಈ ಅನುಭವವಾಗಿದೆ. ವಂದೇ ಮಾತರಂ ಹಾಡುವಾಗ ತನ್ಮಯತೆ ಬರುತ್ತದೆ. ವಿಶೇಷ ದಿನದಂದು ವಂದೇ ಮಾತರಂ ಹಾಡಿದ್ರೆ ಯುವ ಜನರಲ್ಲಿ ದೇಶ ಭಕ್ತಿಯ ಜಾಗೃತಿ ಬರುತ್ತದೆ ಎಂದರು.

    ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಸಂವೇದನಾ ಫೌಂಡೇಶನ್‍ಗೆ ಸರ್ಟಿಫಿಕೇಟನ್ನು ಹಸ್ತಾಂತರ ಮಾಡಿದರು. ಸಂಸ್ಥೆಯ ಅಧಿಕಾರಿ ಸಂತೋಷ್ ಅಗರ್ವಾಲ್ ಮಾತನಾಡಿ, ಇದೊಂದು ಅಭೂತಪೂರ್ವ ಆಯೋಜನೆ. ವಿಶೇಷ ರೀತಿಯ ಸಾಧನೆ ಕೂಡಾ. ನಮ್ಮ ಸಂಸ್ಥೆಯಿಂದ ಗೌರವವನ್ನು ಕೊಡುತ್ತಿದ್ದೇವೆ. ಸಂವೇದನಾ ಸಂಸ್ಥೆಗೆ ಮಾತ್ರವಲ್ಲ, ಇದೊಂದು ದೇಶಕ್ಕೆ ಸಂದ ಗೌರವ ಎಂದು ಹೇಳಿದರು.

    ರಮೇಶ್ ಚಂದ್ರ, ಸುಹಾನಾ ಸೈಯ್ಯದ್, ಯಶವಂತ್, ಸೇರಿದಂತೆ ಸರಿಗಮಪ ಮತ್ತು ರಿಯಾಲಿಟಿ ಶೋನ ಹಾಡುಗಾರರು ಈ ರೆಕಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ ಒಂದು ತಿಂಗಳಿಂದ ಸಂವೇದನಾ ಸಂಸ್ಥೆ ಮತ್ತು ಹಿರಿಯ ಸಂಗೀತ ಕಲಾವಿದರು ವಿದ್ಯಾರ್ಥಿಗಳಿಗೆ ಹಾಡು ಕಲಿಸಿಕೊಟ್ಟಿದ್ದರು.

    ಕಾರ್ಯಕ್ರಮದ ಆಯೋಜನೆ ಮಾಡಿದ ಪ್ರಕಾಶ್ ಮಲ್ಪೆ ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಲು ಕಾರಣಕರ್ತರಾದ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಧನ್ಯವಾದ ಸಲ್ಲಿಸಿದ್ರು.

    ಕಾರ್ಯಕ್ರಮಕ್ಕೆ ಮೊದಲು ನಾಲ್ಕು ಕಿಲೋಮೀಟರ್ ಶೋಭಾಯಾತ್ರೆ ಮಾಡಲಾಯ್ತು. 40ಕ್ಕೂ ಹೆಚ್ಚು ಭಜನಾ ತಂಡಗಳು, ಟ್ಯಾಬ್ಲೋ, 1750 ಅಡಿ ಉದ್ದದ ತಿರಂಗವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯ್ತು. ಸಾವಿರಾರು ವಿದ್ಯಾರ್ಥಿಗಳು ಅರ್ಧ ಕಿಲೋಮೀಟರ್ ಉದ್ದದ ತಿರಂಗ ಹೊತ್ತು ಸಾಗಿದ್ದು ರಾಷ್ಟ್ರಧ್ವಜ ನದಿ ರೂಪದಲ್ಲಿ ಹರಿದಂತಾಯ್ತು.

    ಯುವಕರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮತ್ತು ವಿವೇಕಾನಂದರ ಆಶಯಗಳನ್ನು ಭಿತ್ತರಿಸುವ ವಿಭಿನ್ನ ಕಾರ್ಯಕ್ರಮ ಉಡುಪಿಯಲ್ಲಿ ಎಲ್ಲರ ಗಮನ ಸೆಳೆದಿದೆ. ವಂದೇ ಮಾತರಂ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

  • ಒಂದೇ ವೇದಿಕೆಯಲ್ಲಿ 4,500 ಮಂದಿ ‘ವಂದೇ ಮಾತರಂ’ ಗೀತೆ ಗಾಯನ- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ನಿರ್ಮಿಸಲು ಸಿದ್ಧತೆ

    ಒಂದೇ ವೇದಿಕೆಯಲ್ಲಿ 4,500 ಮಂದಿ ‘ವಂದೇ ಮಾತರಂ’ ಗೀತೆ ಗಾಯನ- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ನಿರ್ಮಿಸಲು ಸಿದ್ಧತೆ

    ಉಡುಪಿ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಉಡುಪಿಯಲ್ಲಿ ಇಂದು ವಿಶ್ವದಾಖಲೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಒಂದೇ ವೇದಿಕೆಯಲ್ಲಿ 4500 ಮಂದಿ ಸಂಪೂರ್ಣ ವಂದೇ ಮಾತರಂ ಹಾಡನ್ನು ಗಾಯನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡುವ ಹಾದಿಯಲ್ಲಿದ್ದಾರೆ.

    ಜಿಲ್ಲೆಯ ಸಂವೇದನಾ ಫೌಂಡೇಶನ್ಸ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಮಲ್ಪೆ ಪೊಲೀಸ್ ಸ್ಟೇಷನ್ ಮೈದಾನದಿಂದ ಬೃಹತ್ ಮೆರವಣಿಗೆಯಲ್ಲಿ 1,750 ಅಡಿ ಉದ್ದದ ತಿರಂಗವನ್ನು ಸುಮಾರು ಒಂದು ಸಾವಿರ ಮಕ್ಕಳು ಹೊತ್ತು ಸಾಗುತ್ತಾರೆ. ಸುಮಾರು 10 ಸಾವಿರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಾಷ್ಟ್ರ ಧ್ವಜಕ್ಕೆ ಹೂವು ಹಾಕಿ ಗೌರವ ವಂದನೆ ಸಲ್ಲಿಸಲಿದ್ದಾರೆ.

    ಮಲ್ಪೆ ಬೀಚ್‍ವರೆಗೆ ಮೆರವಣಿಗೆ ಸಾಗಿ ಅಲ್ಲಿ 4500 ವಿದ್ಯಾರ್ಥಿಗಳು ಒಂದೇ ಬಾರಿ ವಂದೇ ಮಾತರಂ ಹಾಡುತ್ತಾರೆ. ಸಾಮೂಹಿಕ ಹಾಡಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕಾಗಿ ಆಂಧ್ರಪ್ರದೇಶದಿಂದ ಅರ್ಧ ಕಿಲೋಮೀಟರ್ ಉದ್ದದ ತಿರಂಗವನ್ನು ತರಿಸಿಕೊಳ್ಳಲಾಗಿದೆ.

    ಕಾರ್ಯಕ್ರಮದಲ್ಲಿ 40 ಭಜನಾ ಮಂಡಳಿ, ವಿವಿಧ ಸಂಘ ಸಂಸ್ಥೆಗಳು, 24 ಪದವಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸೇವ್ ನೇಚರ್ ಎಂಬ ಬ್ಯಾಡ್ಜ್, ಸಮವಸ್ತ್ರ ತೊಟ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ರಿಂದ ಸಂಜೆ ಆರು ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.

    ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ 25 ಸಾವಿರ ಜನ ಪಾಲ್ಗೊಳ್ಳಲಿದ್ದು, ಸಿನೆಮಾ ಕ್ಷೇತ್ರದ 20 ಹಿನ್ನೆಲೆ ಗಾಯಕರು ವಂದೇ ಮಾತರಂ ಹಾಡಿಗೆ ಧನಿಗೂಡಿಸಲಿದ್ದಾರೆ. ಮೂವರು ವಿದೇಶಿಗರು ವಂದೇ ಮಾತರಂ ಹಾಡೋದು ಮತ್ತೊಂದು ವಿಶೇಷ. ಟ್ಯಾಬ್ಲೋಗಳು, ಸಾಂಸ್ಕೃತಿಕ ತಂಡಗಳು, ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.

    ಸಾಂಧರ್ಬಿಕ ಚಿತ್ರ

  • ರಜಿನಿಕಾಂತ್ ಅನಕ್ಷರಸ್ಥ, ಮಾಧ್ಯಮ ಪ್ರಚಾರಕ್ಕಾಗಿ ರಾಜಕೀಯ ಎಂಟ್ರಿ: ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಕಿಡಿ

    ರಜಿನಿಕಾಂತ್ ಅನಕ್ಷರಸ್ಥ, ಮಾಧ್ಯಮ ಪ್ರಚಾರಕ್ಕಾಗಿ ರಾಜಕೀಯ ಎಂಟ್ರಿ: ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಕಿಡಿ

    ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದ್ದಕ್ಕೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಮಾಧ್ಯಮ ಪ್ರಚಾರಕ್ಕಾಗಿ ರಜಿನಿಕಾಂತ್ ರಾಜಕೀಯ ಪ್ರವೇಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಕೇವಲ ಪ್ರಚಾರಕ್ಕಾಗಿ ರಜಿನಿಕಾಂತ್ ರಾಜಕೀಯ ಪ್ರವೇಶಿಸಿದ್ದಾರೆ. ತಮಿಳುನಾಡು ಜನರು ಬುದ್ಧಿವಂತರು. ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.


    ರಜನಿಕಾಂತ್ ಅನಕ್ಷರಸ್ಥರಾಗಿದ್ದು, ಗೊತ್ತು ಗುರಿ ಇಲ್ಲದ ವ್ಯಕ್ತಿ. ಅವರು ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದು, ಅದರ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ತಮಿಳುನಾಡಿನ ಜನ ಬುದ್ಧಿವಂತರು ಯಾರಿಗೆ ಮತ ಹಾಕಬೇಕೆಂದು ಗೊತ್ತಿದೆ ಎಂದು ಟೀಕಿಸಿದ್ರು.

    ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ನಡೆದ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಸ್ವಂತ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ರು. ಬಾಬಾನ ಮುದ್ರೆ ಪ್ರದರ್ಶಿಸಿ, ಭಗವದ್ಗೀತೆಯ ಶ್ಲೋಕ ಪಠಿಸಿದ್ರು.

    ಬಳಿಕ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿರುವ ಕಾರಣ, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು. ಪಕ್ಷದ ಹೆಸರನ್ನ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಹಿರಂಗಗೊಳಿಸುತ್ತೇನೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಜನರೇ ನಮ್ಮ ಶಕ್ತಿ. ಸರ್ಕಾರ ರಚನೆ ಅಷ್ಟು ಸುಲಭವಲ್ಲ. ಕಳೆದ ಒಂದು ವರ್ಷದಿಂದ ತಮಿಳುನಾಡು ಜನ ರೋಸಿ ಹೋಗಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಉತ್ತಮ ಆಡಳಿತ ನಡೆಸುತ್ತೇನೆ ಅಂದ್ರು.

    ಇತ್ತ ರಜಿನಿಕಾಂತ್ ಗೆಳೆಯ ಕಮಲ್ ಹಾಸನ್ ಅವರ ನಿರ್ಧಾರವನ್ನು ಸ್ವಾಗತಿಸಿ ಶುಭಾಶಯ ತಿಳಿಸಿದ್ದರು.

  • ಕಟಕ್‍ನಲ್ಲಿ ಮೂರು ದಾಖಲೆ ನಿರ್ಮಿಸಿದ ಧೋನಿ

    ಕಟಕ್‍ನಲ್ಲಿ ಮೂರು ದಾಖಲೆ ನಿರ್ಮಿಸಿದ ಧೋನಿ

    ಕಟಕ್: ಭಾರತ ಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಧೋನಿ 39 ರನ್ ಗಳಿಸುವುದರ ಜೊತೆಗೆ ಮೂರು ದಾಖಲೆಯನ್ನು ನಿರ್ಮಿಸಿದ್ದಾರೆ.

    ಹೌದು, ಪಂದ್ಯದ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಧೋನಿ, 22 ಎಸೆತಗಳಲ್ಲಿ 4 ಬೌಂಡರಿ, ಒಂದು ಸಿಕ್ಸರ್ ನೆರವಿನೊಂದಿಗೆ 177.27 ರ ಸರಾಸರಿಯಲ್ಲಿ ಔಟಾಗದೇ 39 ರನ್ ಗಳಿಸಿದರು. ಅಲ್ಲದೇ ಕೀಪಿಂಗ್ ನಲ್ಲಿ 4 ಬಲಿ ಪಡೆದರು. ಈ ಮೂಲಕ ಭಾರತದ ಪರ ಟಿ20 ಮಾದರಿಯ ಪಂದ್ಯವೊಂದರಲ್ಲಿ 39 ರನ್ ಹೊಡೆದು 4 ಮಂದಿಯನ್ನು ಔಟ್ ಮಾಡಿದ ಟೀಂ ಇಂಡಿಯಾದ ಮೊದಲ ಕೀಪರ್ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (2 ಬಾರಿ) ಮತ್ತು ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಈ ಸಾಧನೆ ನಿರ್ಮಿಸಿದ್ದರು.

    ಟಿ20 ಮಾದರಿಯಲ್ಲಿ ಶ್ರೀಲಂಕಾ ವಿರುದ್ಧ ನಾಲ್ಕು ಬಲಿ ಪಡೆಯುವ ಮೂಲಕ ತಮ್ಮ ವೃತ್ತಿ ಜೀವನದ ಎಲ್ಲಾ ಮಾದರಿಯ 272 ಟಿ 20 ಪಂದ್ಯಗಳಿಂದ ಒಟ್ಟು 201 ಮಂದಿಯನ್ನು ಔಟ್ ಮಾಡುವ ಮೂಲಕ ಅತಿ ಹೆಚ್ಚು ಬಲಿ ಪಡೆದ ವಿಶ್ವದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡರು. ಮೊದಲ ಸ್ಥಾನದಲ್ಲಿ ಪಾಕ್ ನ ಕಮ್ರಾನ್ ಆಕ್ಮಲ್ ಇದ್ದು, 211 ಪಂದ್ಯಗಳಿಂದ 207 ವಿಕೆಟ್ ಪಡೆದಿದ್ದಾರೆ.

    ಈ ಪಂದ್ಯದಲ್ಲಿ ನಾಲ್ಕು ಮಂದಿಯನ್ನು ಔಟ್ ಮಾಡುವ ಮೂಲಕ ಲಂಕಾ ವಿರುದ್ಧದ ಟಿ 20 ಯಲ್ಲಿ ನಾಲ್ಕು ಮಂದಿಯನ್ನು ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ಮತ್ತೊಂದು ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಧೋನಿ ಅವರಿಗೆ ಮುಂಬಡ್ತಿ ನೀಡಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್ ನಡೆಸುವ ಅವಕಾಶ ನೀಡಿದ್ದರು.

    ನಾಲ್ಕನೇ ಕ್ರಮಾಂಕದಲ್ಲಿ ಹನ್ನೊಂದು ಇನ್ನಿಂಗ್ಸ್ ಆಡಿರುವ ಧೋನಿ 244 ರನ್ ಗಳಿಸಿ 7 ಬಾರಿ ನಾಟೌಟ್ ಆಗಿ ಉಳಿದಿದ್ದಾರೆ. 2017 ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 134.1 ಸರಾಸರಿಯಲ್ಲಿ 56 ರನ್ ಸಿಡಿಸಿ ಅರ್ಧ ಶತಕ ಗಳಿಸಿದ್ದರು.

    <

  • ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಢಾಕಾ : ವೆಸ್ಟ್ ಇಂಡೀಸ್‍ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ತಮ್ಮ ಆಟದ ಮೂಲಕ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಹಲವು ಹೊಸ ವಿಶ್ವದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಫೈನಲ್ ಪಂದ್ಯದಲ್ಲಿ 18 ಸಿಕ್ಸರ್‍ಗಳನ್ನು ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಈ ಹಿಂದೆ 2013ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪರ ಕಣಕ್ಕಿಳಿದು ಪುಣೆ ವಾರಿಯರ್ಸ್ ವಿರುದ್ಧ 17 ಸಿಕ್ಸರ್ ಸಿಡಿಸಿ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ನಿರ್ಮಿಸಿದ್ದರು.

    ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ನಲ್ಲಿ ರಂಗ್ಪುರ್ ರೈಡರ್ಸ್ ಪರ ಕಣಕ್ಕಿಳಿದ ಗೇಲ್, ಕೇವಲ 69 ಎಸೆತಗಳಲ್ಲಿ 5 ಬೌಂಡರಿ ಮತ್ತು 18 ಸಿಕ್ಸರ್‍ಗಳ ನೆರವಿನಿಂದ 146 ರನ್ ಬಾರಿಸಿದ್ದಾರೆ. ಈ ಮೂಲಕ ಟಿ20 ಯಲ್ಲಿ 20 ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಗೇಲ್ ದಾಖಲೆಗಳು :
    – ಟಿ20 ಪಂದ್ಯದ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು 18 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ
    – ಟಿ20 ಮಾದರಿ ಫೈನಲ್ ಪಂದ್ಯದಲ್ಲಿ ಹೆಚ್ಚು ರನ್ (146 ರನ್, 69 ಎಸೆತ)ಹೊಡೆದ ಬ್ಯಾಟ್ಸ ಮನ್
    – ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರ
    – ಟಿ20 ಕ್ರಿಕೆಟ್‍ನಲ್ಲಿ 20 ಶತಕಗಳನ್ನು ಹೊಡೆದ ಮೊದಲ ಆಟಗಾರ
    – ಐಪಿಲ್, ಸಿಪಿಲ್, ಬಿಪಿಲ್ ಮತ್ತು ಟಿ20 ಮಾದರಿಯ ಲೀಗ್‍ಗಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರ.

    https://www.youtube.com/watch?v=D4bwutxZSk8