Tag: ದಾಖಲೆ

  • ಧೋನಿ, ಬ್ರಾವೋ 3 ರನ್ ಡ್ಯಾಶ್ ಚಾಲೆಂಜ್ – ವಿಡಿಯೋ ನೋಡಿ

    ಧೋನಿ, ಬ್ರಾವೋ 3 ರನ್ ಡ್ಯಾಶ್ ಚಾಲೆಂಜ್ – ವಿಡಿಯೋ ನೋಡಿ

    ಮುಂಬೈ: ಕ್ರೀಡೆಯಲ್ಲಿ ವಯಸ್ಸು ಕೇವಲ ನಂಬರ್ ಎಂದು ಸಾಬೀತು ಪಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ, ತಮ್ಮದೇ ತಂಡದ ಆಟಗಾರ ಬ್ರಾವೋ ಜೊತೆ 3 ರನ್ ಚಾಲೆಂಜ್ ಸ್ವೀಕರಿಸಿ ತಾವು ಫಿಟ್ ಇರುವುದಾಗಿ ತೋರಿಸಿಕೊಟ್ಟಿದ್ದಾರೆ.

    ಸದ್ಯ ಧೋನಿ ಹಾಗೂ ಬ್ರಾವೋ ರ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ 3 ರನ್ ಓಡುವ ಚಾಲೆಂಜ್ ಪಡೆಯುವ ಧೋನಿ ಹಾಗೂ ಬ್ರಾವೋ ನಡುವೆ ನೆಕ್ ಟು ನೆಕ್ ಫೈಟ್ ನಡೆಯುತ್ತದೆ. ಈ ವೇಳೆ ಧೋನಿ ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಹೈದರಾಬಾದ್ ವಿರುದ್ಧ ಗೆಲುವಿನ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಬ್ಬರ ನಡುವಿನ 3 ರನ್ ಡ್ಯಾಶ್ ಚಾಲೆಂಜ್ ನಡೆದಿದೆ.

    ಸ್ಟಪಿಂಗ್ ದಾಖಲೆ: ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಧೋನಿ ಸ್ಟಪಿಂಗ್ ದಾಖಲೆಯನ್ನು ಮಾಡಿದ್ದು, ಐಪಿಎಲ್ ನಲ್ಲಿ ಅತೀ ಹೆಚ್ಚು ಸ್ಟಪಿಂಗ್ ಮಾಡಿದ ರಾಬಿನ್ ಉತ್ತಪ್ಪ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ ಪಟ್ಟಿಯಲ್ಲಿ 175 ಪಂದ್ಯದಲ್ಲಿ 33 ಸ್ಟಪಿಂಗ್ ಮಾಡಿರುವ ಧೋನಿ ಮೊದಲ ಸ್ಥಾನದಲ್ಲಿದ್ದರೆ, ರಾಬಿನ್ ಉತ್ತಪ್ಪ (32, 165 ಪಂದ್ಯ), ದಿನೇಶ್ ಕಾರ್ತಿಕ್ (32, 168 ಪಂದ್ಯ), ಸಹಾ (15, 115 ಪಂದ್ಯ) ಗಳೊಂದಿಗೆ ನಂತರದ ಸ್ಥಾನ ಪಡೆದಿದ್ದಾರೆ.

    ಒಟ್ಟಾರೆ ಐಪಿಎಲ್ ನಲ್ಲಿ 175 ಪಂದ್ಯಗಳನ್ನು ಆಡಿರುವ ಧೋನಿ 40.16 ಸರಾಸರಿಯಲ್ಲಿ 4,016 ರನ್ ಗಳಿಸಿದ್ದು, ಇದರಲ್ಲಿ 20 ಅರ್ಧ ಶತಕಗಳು ಸೇರಿದೆ.

  • ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಕೊನೆ ಸ್ಥಾನದಲ್ಲಿ ಹೊರಬಿದ್ದ ತಂಡ ಎನಿಸಿಕೊಂಡರೂ ತಂಡದ ಯುವ ಆಟಗಾರ ರಿಷಭ್ ಪಂತ್ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ ಅರ್ಧ ಶತಕ (44 ಎಸೆತ, 64 ರನ್) ಸಿಡಿಸಿ ಮಿಂಚಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಸಹ ಪಡೆದರು. ಇನ್ನು ಟೂರ್ನಿಯಲ್ಲಿ ಒಟ್ಟಾರೆ 684 ರನ್ ಸಿಡಿಸಿದ ಪಂತ್ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ ಈ ಹಿಂದೆ ಕೆಕೆಆರ್ ಪರ 2014 ರಲ್ಲಿ ರಾಬಿನ್ ಉತ್ತಪ್ಪ (660 ರನ್) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪಂತ್ ದಾಖಲೆಯನ್ನು ಮುರಿಯುವ ಅವಕಾಶವಿತ್ತು. ಆದರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ಟೂರ್ನಿಯಲ್ಲಿ ಒಟ್ಟಾರೆ 659 ರನ್ ಗಳೊಂದಿಗೆ ರಾಹುಲ್ ಈ ಐಪಿಎಲ್ ಆವೃತ್ತಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

    20 ವರ್ಷದ ಪಂತ್ ಟೂರ್ನಿಯಲ್ಲಿ 52.61 ಸರಾಸರಿ ಹಾಗೂ 173.60 ಸ್ಟ್ರೈಕ್ ರೇಟ್ ನಲ್ಲಿ 684 ರನ್ ಸಿಡಿಸಿದ್ದು, ಇದರಲ್ಲಿ 5 ಅರ್ಧ ಶತಕ ಹಾಗೂ ದಾಖಲೆಯ ಅಜೇಯ 128 ರನ್ ಗಳ ಶತಕವೂ ಸೇರಿದೆ. ಅಲ್ಲದೇ ಈ ಟೂರ್ನಿಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಪಂತ್ ಹೊಂದಿದ್ದು, ಒಟ್ಟಾರೆ 37 ಸಿಕ್ಸರ್ ಸಿಡಿಸಿದ್ದಾರೆ.

    ಡೆಲ್ಲಿ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ತಂಡದವನ್ನು ಪ್ಲೇ ಆಫ್ ನಿಂದ ದೂರ ಮಾಡಿತ್ತು. ಇದರಲ್ಲಿ 64 ರನ್ ಸಿಡಿಸಿ ಪಂತ್ ತಂಡದ ಗೆಲುವಿಗೆ ಕಾರಣರಾಗಿದ್ದರು.

  • ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಸೋಲುಂಡರೂ ಪಂತ್ ಬ್ಯಾಟ್ ನಿಂದ ಸರಾಗವಾಗಿ ರನ್ ಹರಿದು ಬಂದಿತ್ತು. ಈ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಮೊದಲ ಶತಕ ಸಿಡಿಸಿದ್ದ ಪಂತ್ ಬೆಂಗಳೂರು ವಿರುದ್ಧವು ಅರ್ಧ ಶತಕ (61 ರನ್, 34 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ 582 ರನ್ ಗಳಿಸಿದರು.

    ಈ ಮೂಲಕ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಪಂತ್ ಮಾಜಿ ನಾಯಕ ಗೌತಮ್ ಗಂಭೀರ್ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ನ ಮೊದಲ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಗಂಭೀರ್ 2008 ರಲ್ಲಿ 534 ರನ್ ಸಿಡಿಸಿದ್ದರು. 10 ವರ್ಷಗಳ ಬಳಿಕ ಡೆಲ್ಲಿ ಪರ 20 ವರ್ಷದ ಪಂತ್ ಈ ದಾಖಲೆಯನ್ನು ಮುರಿದಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಪಂತ್ ಒಟ್ಟಾರೆ 1 ಶತಕ ಹಾಗೂ ನಾಲ್ಕು ಅರ್ಧ ಶತಕ ಹಾಗೂ 61 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ.

    ಐಪಿಎಲ್ ಚೊಚ್ಚಲ ಶತಕ ಸಿಡಿಸಿ ಟೂರ್ನಿಯಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಮನಿಷ್ ಪಾಂಡೆ ಐಪಿಎಲ್ ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರರಾಗಿದ್ದಾರೆ. 2009 ರಲ್ಲಿ ಪಾಂಡೇ 19 ವರ್ಷ 253 ದಿನ ವಯಸ್ಸಿನಲ್ಲಿ ಶತಕ ಸಿಡಿಸಿದ್ದರು. ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (22 ವರ್ಷ 151 ದಿನ) ಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

  • ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಇಂದೋರ್: 2018 ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಬಳಗ ಉತ್ತಮ ಆರಂಭ ಪಡೆದಿದ್ದರು, ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.

    ಪಂಜಾಬ್ ವಿರುದ್ಧದ ಗೆಲುವುನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 300 ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಐಪಿಎಲ್ ಚೇಸಿಂಗ್ ವೇಳೆ ಗೆಲುವು ಪಡೆದ ತಂಡದ ಪರ 17 ಬಾರಿ ಔಟಾಗದೆ ಉಳಿದ ಆಟಗಾರ ಎಂಬ ದಾಖಲೆಯನ್ನು ಬರೆದರು.

    ರೋಹಿತ್ ಶರ್ಮಾ ಒಟ್ಟಾರೆ ಟಿ20 ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ್ದು, ಅಂತರಾಷ್ಟ್ರೀಯ ಹಾಗೂ ದೇಶಿಯ ಟೂರ್ನಿಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಕ್ರಿಸ್ ಗೇಲ್ (844 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಚೇಸಿಂಗ್ ವೇಳೆ 16 ಬಾರಿ ನಾಟೌಟ್ ಆಗಿ ಉಳಿದಿದ್ದ ಗೌತಮ್ ಗಂಭೀರ್ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9 ಪಂದ್ಯಗಳಿಂದ 6 ಅಂಕ ಪಡೆದು 5ನೇ ಸ್ಥಾನ ಪಡೆದಿದೆ. ಪಂಜಾಬ್ ವಿರುದ್ಧ ಕಣಕ್ಕೆ ಇಳಿಯಲು ಅವಕಾಶ ಪಡೆದ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅರ್ಧ ಶತಕ ಸಿಡಿಸಿದ್ದರು. 47 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಮಿಂಚಿದರು.

  • ಧೋನಿ ಮುಡಿಗೆ ಮತ್ತೊಂದು ದಾಖಲೆಯ ಗರಿಮೆ

    ಧೋನಿ ಮುಡಿಗೆ ಮತ್ತೊಂದು ದಾಖಲೆಯ ಗರಿಮೆ

    ಪುಣೆ: ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ ಎಂಎಸ್ ಧೋನಿ ಐಪಿಎಲ್ ನಲ್ಲಿ 150 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಡೆದಿದ್ದಾರೆ.

    ಟೀಂ ಇಂಡಿಯಾವನ್ನು ಹಲವು ಟೂರ್ನಿಗಳಲ್ಲಿ ಮುನ್ನಡೆಸಿ ಭಾರತಕ್ಕೆ 2 ವಿಶ್ವಕಪ್ ತಂದುಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿರುವ ಧೋನಿ ಐಪಿಎಲ್ ನಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಕಪ್ ತನ್ನದಾಗಿಸಿಕೊಂಡಿದೆ. ಅಲ್ಲದೇ 4 ಬಾರಿ ಫೈನಲ್ ವರೆಗೂ ಮುನ್ನಡೆಸಿದ ದಾಖಲೆ ಧೋನಿ ಹೆಸರಿನಲ್ಲಿದೆ.

    ಕಳೆದ 10 ಐಪಿಎಲ್ ಆವೃತ್ತಿಯಲ್ಲಿ 8 ಬಾರಿ ಚೆನ್ನೈ ಹಾಗೂ ಎರಡು ಆವೃತ್ತಿಗಳಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿಯೂ ಧೋನಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು, 11 ನೇ ಆವೃತ್ತಿಯಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳನ್ನು ಆಡಿರುವ ಚೆನ್ನೈ 5 ಪಂದ್ಯಗಳಲ್ಲಿ ಗೆಲುವು ಪಡೆದು 10 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಮತ್ತೊಮ್ಮೆ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿಕೊಂಡಿದೆ.

    ಕಳೆದ ಕೆಲ ದಿನಗಳ ಹಿಂದೆ ನಡೆದ ಪಂದ್ಯದಲ್ಲೂ ಧೋನಿ ಭರ್ಜರಿ ಆಟ ಪ್ರದರ್ಶಿಸಿ ತಾವು ಬೆಸ್ಟ್ ಫಿನಿಷರ್ ಎಂದು ಸಾಬೀತು ಪಡಿಸಿದ್ದರು. ಅಲ್ಲದೇ ಟಿ20 ಯಲ್ಲಿ 5 ಸಾವಿರ ರನ್ ಪೂರೈಸಿದ ನಾಯಕ ಎಂಬ ದಾಖಲೆ ಬರೆದಿದ್ದರು.

  • ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 58 ಕೆಜಿ ಚಿನ್ನಾಭರಣ ವಶ!

    ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 58 ಕೆಜಿ ಚಿನ್ನಾಭರಣ ವಶ!

    ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ 58 ಕೆಜಿ ತೂಕದ ಚಿನ್ನಾಭರಣ ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬಾಲೇಪುರ ಗ್ರಾಮದ ಚೆಕ್‍ಪೋಸ್ಟ್ ಬಳಿ ನಡೆದಿದೆ.

    ದೇವನಹಳ್ಳಿ ಮಾರ್ಗದಿಂದ ಹೊಸಕೋಟೆ ಕಡೆಗೆ ತೆರಳುತ್ತಿದ್ದ ಬೊಲೇರೋ ವಾಹನ ತಪಾಸಣೆ ವೇಳೆ ಚಿನ್ನ ಪತ್ತೆಯಾಗಿದೆ. ಬಾಲೇಪುರ ಚೆಕ್‍ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ.

    ಹೆಚ್ಚಿನ ಪ್ರಮಾಣದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಬೇರೆಡೆಗೆ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಇವುಗಳಿಗೆ ಸೂಕ್ತ ದಾಖಲೆಗಳನ್ನು ನೀಡದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವಶಕ್ಕೆ ಪಡೆಯಲಾಗಿರುವ ಚಿನ್ನ ಮೌಲ್ಯ ಸುಮಾರು 15 ಕೋಟಿ ರೂ. ಆಗಿದೆ.

    ಘಟನೆಗೆ ಸಂಬಂಧಿಸಿದಂತೆ ಆಕ್ರಮ ಚಿನ್ನ ಸಾಗಾಟ ನಡೆಸುತ್ತಿದ್ದ ಓರ್ವ ವ್ಯಕ್ತಿಯನ್ನ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಕಸ್ಟಮ್ಸ್ ಹಾಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚೆನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • `ಸೂಪರ್ ಮ್ಯಾನ್’ ಧೋನಿ – 28 ಮೀಟರ್ ಕ್ರಮಿಸಲು ತೆಗೆದುಕೊಂಡಿದ್ದು 6.12 ಸೆಕೆಂಡ್!

    `ಸೂಪರ್ ಮ್ಯಾನ್’ ಧೋನಿ – 28 ಮೀಟರ್ ಕ್ರಮಿಸಲು ತೆಗೆದುಕೊಂಡಿದ್ದು 6.12 ಸೆಕೆಂಡ್!

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಸೂಪರ್ ಮ್ಯಾನ್ ರೀತಿ ಓಡಿ ಬೌಂಡರಿ ಬಳಿ ಬಾಲನ್ನು  ತಡೆದಿದ್ದಾರೆ.

    36 ವರ್ಷದ ಎಂಎಸ್ ಧೋನಿ ವಿಕೆಟ್ ಗಳ ಮಧ್ಯೆ ವೇಗವಾಗಿ ಓಡಿ ರನ್ ಕದಿಯುವ ವಿಷಯ ಎಲ್ಲರಿಗೂ ತಿಳಿದ ಸಂಗತಿ. ಆದರೆ ಕೆಲ ದಿನಗಳ ಹಿಂದೆ ಧೋನಿ ಕಳಪೆ ಆಟ ಪ್ರದರ್ಶಿಸಿದ ವೇಳೆ ಅವರ ವಯಸ್ಸನ್ನು ಪ್ರಶ್ನಿಸಿ ಹಲವರು ನಿವೃತ್ತಿ ಘೋಷಿಸುವಂತೆ ಸಲಹೆ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ವಯಸ್ಸಿನ ವಿಚಾರವನ್ನು ಪ್ರಸ್ತಾಪಿಸಿ ಟೀಕಿಸಿದವರಿಗೆ ತಿರುಗೇಟು ಎನ್ನುವಂತೆ ತನ್ನ ಆಟ ಏನು ಎನ್ನುವಂತೆ ಧೋನಿ ತೋರಿಸಿಕೊಟ್ಟಿದ್ದಾರೆ.

    ಚಿನ್ನಸ್ವಾಮಿಯಲ್ಲಿ ಅವರು ನೀಡಿದ ಪ್ರದರ್ಶನ ವೀಕ್ಷಿಸಿದ ಹಲವರು ಮತ್ತೆ ಧೋನಿ ತಮ್ಮ ನೈಜ ಆಟಕ್ಕೆ ಮರಳಿದ್ದಾರೆ ಎಂದು ಪ್ರಶಂಸಿದ್ದಾರೆ. ಆರ್ ಸಿಬಿ ಬ್ಯಾಟಿಂಗ್ 3ನೇ ಓವರ್ ವೇಳೆ ಡಿ ಕಾಕ್ ಅವರ ಬ್ಯಾಟ್ ನ ಟಾಪ್ ಎಡ್ಜ್ ಗೆ ತಾಗಿದ ಚೆಂಡು ಧೋನಿ ಅವರ ಕೈ ತಪ್ಪಿ ಬೌಂಡರಿ ಕಡೆ ಸಾಗಿತ್ತು. ಈ ವೇಳೆ ಪ್ಯಾಡ್ ಧರಿಸಿಯೇ ಚೆಂಡನ್ನು ಬೆನ್ನತ್ತಿ 6.12 ಸೆಕೆಂಡ್‍ನಲ್ಲಿ 28 ಮೀಟರ್ ದೂರವನ್ನು ಕ್ರಮಿಸಿ ಬೌಂಡರಿ ತಡೆದು ತಂಡಕ್ಕೆ 2 ರನ್ ಉಳಿಸಿದ್ದರು.

    5 ಸಾವಿರ ರನ್ ದಾಖಲೆ: ರಾಯಲ್ ಚಾಲೆಂಜರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಧೋನಿ ಕೇವಲ 30 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಈ ಮೂಲಕ ಟ್ವೆಂಟಿ 20 ಮಾದರಿಯಲ್ಲಿ 5 ಸಾವಿರ ರನ್ ಗಳಿಸಿದ ಮೊದಲ ನಾಯಕ ಎನ್ನುವ ದಾಖಲೆಯನ್ನು ಬರೆದರು.

  • ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ಮೊಹಾಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಗೌತಮ್ ಗಂಭೀರ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಅರ್ಧಶತಕ ಹೊಡೆದಿದ್ದ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಐಪಿಎಲ್ ಟೂರ್ನಿಯಲ್ಲಿ ಈ ಮೂಲಕ 36 ನೇ ಅರ್ಧಶತಕ ಸಿಡಿಸಿದ ಗಂಭೀರ್ ಪಟ್ಟಿಯಲ್ಲಿ ಆಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಚೆಂಡು ವಿರೂಪಗೊಳಿದ ಪ್ರಕರಣದಲ್ಲಿ ಐಪಿಎಲ್ ನಿಂದ ಹೊರಗುಳಿದಿರುವ ವಾರ್ನರ್ ದಾಖಲೆಯನ್ನು ಗಂಭೀರ್ ಮುರಿಯುವ ಅವಕಾಶವಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (32) ಮೂರನೇ ಸ್ಥಾನ, ಸುರೇಶ್ ರೈನಾ (31) 4ನೇ ಸ್ಥಾನ, ಆರ್ ಸಿಬಿ ನಾಯಕ ಕೊಹ್ಲಿ (30) ನಂತರದ ಸ್ಥಾನ ಪಡೆದಿದ್ದಾರೆ.

    ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೌತಮ್ ಗಂಭೀರ್ ಅರ್ಧ ಶತಕ ಗಳಿಸಿದ್ದಾರೆ. ಪಂದ್ಯದಲ್ಲಿ 36 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ನೆರವಿನಿಂದ ಅರ್ಧಶತಕ ಸಿಡಿಸಿದರು.

    ಕಳೆದ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕತ್ವ ವಹಿಸಿದ್ದ ಗಂಭೀರ್ ಈ ಬಾರಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಗಂಭೀರ್ ಕಳೆದ 10 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ ಗಳಿದ ಪಟ್ಟಿ: 58 , 15, 72, 1, 0, 41, 0, 57, 38, 76, 50. ಒಟ್ಟಾರೆ 11 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ 68 ರನ್ ಸರಾಸರಿ ಯೊಂದಿಗೆ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.

  • ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ

    ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ

    ಬೆಂಗಳೂರು: ರಾಯಲ್ಸ್ ಚಾಲೆಂಜರ್ಸ್ ಟೀಂ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

    ಐಪಿಎಲ್ 11 ಅವೃತ್ತಿಗಳಲ್ಲಿ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    2008 ರಲ್ಲಿ ಆರಂಭವಾದ ಐಪಿಎಲ್ ಲೀಗ್ ನಲ್ಲಿ ಮೊದಲ ಬಾರಿಗೆ ಬೆಂಗಳೂರು ತಂಡ ಅವರನ್ನು ಬೃಹತ್ ಮೊತ್ತವನ್ನು ನೀಡಿ ಖರೀದಿಸಿತ್ತು, ಬಳಿಕ 11 ಅವೃತ್ತಿಗಳಲ್ಲಿ ಕೊಹ್ಲಿ ತಂಡವನ್ನು ಮುನ್ನಡೆಸಿದ್ದಾರೆ.

    ಐಪಿಎಲ್ ಲೀಗ್ ನಲ್ಲಿ ಗರಿಷ್ಠ ಮೊತ್ತವನ್ನು ಪಡೆಯುತ್ತಿರುವ ಕೊಹ್ಲಿ ಜನವರಿಯಲ್ಲಿ ನಡೆದ ಐಪಿಎಲ್ 11 ನೇ ಅವೃತ್ತಿಯಲ್ಲಿ 17 ಕೋಟಿ ರೂ. ನೀಡಿ ಆರ್ ಸಿಬಿ ತನ್ನಲ್ಲೇ ಉಳಿಸಿಕೊಂಡಿತ್ತು.

    ಐಪಿಎಲ್ ಅವೃತ್ತಿಯಲ್ಲಿ ಒಟ್ಟಾರೆ 149 ಪಂದ್ಯಗಳನ್ನು ಆಡಿರುವ ಕೊಹ್ಲಿ, 129.82 ಸ್ಟ್ರೈಕ್ ರೇಟ್‍ನಲ್ಲಿ 4,418 ರನ್ ಗಳಿಸಿದ್ದಾರೆ. ಅಲ್ಲದೇ 4 ಶತಕ ಹಾಗೂ 30 ಅರ್ಧ ಶತಕಗಳು ಸಿಡಿಸಿದ್ದಾರೆ. ಆದರೆ ಇದುವರೆಗೆ ನಡೆದಿರುವ 10 ಆವೃತ್ತಿಗಳಲ್ಲಿ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ, 11 ನೇ ಆವೃತ್ತಿ ಆಡಲು ಸಿದ್ಧವಗಿರುವ ತಂಡ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

    ಕೊಹ್ಲಿ ಐಪಿಎಲ್ ಸಾಧನೆ:
    ಪಂದ್ಯ -149
    ರನ್ -4,412
    ಸರಾಸರಿ -37.44
    ಸ್ಟ್ರೈಕ್ ರೇಟ್ – 129.82
    ಶತಕ – 04
    ಅರ್ಧ ಶತಕ – 30
    ಬೌಂಡರಿ – 382
    ಸಿಕ್ಸರ್ – 160
    ಕ್ಯಾಚ್ – 61
    ವಿಕೆಟ್ – 4
    ಬೆಸ್ಟ್ ಬೌಲಿಂಗ್ – 2/25

  • ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ಪುಣೆ: ದುಡಿಯುವ ಮನಸ್ಸಿದ್ದರೆ ಯಾವುದೇ ಕೆಲಸವಾದ್ರೂ ಕೀಳಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ನಗರದ ಟೀ ವ್ಯಾಪಾರಿಯೊಬ್ಬರು ತಿಂಗಳಿಗೆ ಬರೋಬ್ಬರಿ 10-12 ಲಕ್ಷ ರೂ. ವರೆಗೆ ಸಂಪಾದನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪುಣೆ ಮೂಲದ ಯೆವ್ಲೆ ಟೀ ಹೌಸ್ ಈಗ ನಗರದಲ್ಲಿ ಪ್ರತಿಷ್ಠಿತ ಅಂಗಡಿಯಾಗಿ ಹೊರಹೊಮ್ಮಿದೆ. ಯೆವ್ಲೆ ಟೀ ಕಂಪನಿಯ ಸಹ ಸಂಸ್ಥಾಪಕ ನವನಾಥ್ ಯೆವ್ಲೆ ತಮ್ಮ ಈ ಉದ್ಯಮ ಹೇಗೆ ಬೆಳೆಯಿತೆಂಬ ಬಗ್ಗೆ ಮಾತನಾಡಿ, ಭಾರತೀಯರಿಗೆ ಟೀ ಮಾರಾಟ ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತಿದೆ. ಈ ಟೀ ವ್ಯಾಪಾರವೂ ಅತೀ ವೇಗವಾಗಿ ಬೆಳೆಯುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

    ನಮ್ಮ ಈ ಟೀ ಬ್ರಾಂಡ್ ಅತೀ ವೇಗವಾಗಿ ಬೆಳೆಯುತ್ತಿರುವುದನ್ನ ನೋಡಿ ನನಗೆ ತುಂಬಾ ಖುಷಿಯಾಗಿದೆ. ಈ ಟೀ ಮಾರಾಟವನ್ನ ಅಂತಾರಾಷ್ಟೀಯ ಮಟ್ಟದ ಬ್ರಾಂಡ್ ಆಗಿ ಪರಿವರ್ತಿಸಬೇಕೆಂಬುದು ನನ್ನ ಕನಸಾಗಿದೆ ಎಂದು ಹೇಳಿದರು.

    2011 ರಲ್ಲಿ ನವನಾಥ್ ಮತ್ತು ಅವರ ಪಾಲುದಾರರು ಈ ಟೀ ಅಂಗಡಿ ಪ್ರಾರಂಭ ಮಾಡಲು ಯೋಚಿಸಿದರು. ನಾಲ್ಕು ವರ್ಷಗಳ ಸತತ ಅಧ್ಯಯನದ ನಂತರ ಉತ್ಪನ್ನದ ಗುಣಮಟ್ಟವನ್ನ ಅಂತಿಮಗೊಳಿಸಲಾಯ್ತು.

    ನಗರದಲ್ಲಿ ಈಗ 2 ಅಂಗಡಿಗಳಿದ್ದು ಪ್ರತಿ ಅಂಗಡಿಯಲ್ಲಿ ಸುಮಾರು 12 ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರದ ವರೆಗೂ ಟೀ ಮಾರಾಟವಾಗುತ್ತಿದೆ. ಪ್ರತಿ ತಿಂಗಳಿಗೆ 10-12 ಲಕ್ಷದ ವರೆಗೂ ಸಂಪಾದನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ 100 ಅಂಗಡಿಗಳನ್ನು ತೆರೆಯಲು ಯೋಚಿಸಲಾಗಿದೆ ಎಂದು ನವನಾಥ್ ತಿಳಿಸಿದ್ದಾರೆ.