Tag: ದಾಖಲೆ

  • 15 ವರ್ಷಗಳ ಹಿಂದಿನ `ದಿ ವಾಲ್’ ದ್ರಾವಿಡ್ ದಾಖಲೆ ಮುರಿದ ಪೂಜಾರ

    15 ವರ್ಷಗಳ ಹಿಂದಿನ `ದಿ ವಾಲ್’ ದ್ರಾವಿಡ್ ದಾಖಲೆ ಮುರಿದ ಪೂಜಾರ

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ 193 ರನ್ ಸಿಡಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಆಸೀಸ್ ಸರಣಿಯಲ್ಲಿ ಒಟ್ಟು 1,258 ಎಸೆತಗಳನ್ನು ಎದುರಿಸುವ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದ್ದಾರೆ.

    ಟೀಂ ಇಂಡಿಯಾ ಪರ ಆಸೀಸ್ ನೆಲದಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪೂಜಾರ ಪಾತ್ರರಾಗಿದ್ದು, 2003-04 ರ ಆಸೀಸ್ ಸರಣಿಯೊಂದರಲ್ಲಿ 1,203 ಎಸೆತಗಳನ್ನು ಎದುರಿಸಿದ್ದ ರಾಹುಲ್ ದಾಖಲೆಯನ್ನು ಮುರಿದಿದ್ದಾರೆ. ಪಂದ್ಯದಲ್ಲಿ 130 ರನ್ ಗಳಿಂದ 2ನೇ ದಿನದಾಟ ಆರಂಭಿಸಿದ ಪೂಜಾರ 282 ಎಸೆತಗಳಲ್ಲಿ (18 ಬೌಂಡರಿ) 150 ರನ್ ಪೂರ್ಣಗೊಳಿಸಿದರು. ಅಂತಿಮವಾಗಿ 373 ಎಸೆತಗಳನ್ನು ಎದುರಿಸಿ 22 ಬೌಂಡರಿಗಳ ಸಹಾಯದಿಂದ 193 ರನ್ ಸಿಡಿಸಿ ದ್ವಿಶತಕ ಸಿಡಿಸುವ ಹಂತದಲ್ಲಿ ನಾಥನ್ ಲಯನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

    ಟೀಂ ಇಂಡಿಯಾ ಒನ್ ಡೌನ್ ಬ್ಯಾಟ್ಸ್ ಮನ್ ಆಗಿರುವ ಪೂಜಾರ 1,702 ನಿಮಿಷ ಅಂದರೆ 28 ಗಂಟೆ, 22 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ್ದಾರೆ. ಅಲ್ಲದೇ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಪೂಜಾರ ಬ್ಯಾಟಿಂಗ್ ನಡೆಸಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. 32 ವರ್ಷದ ಪೂಜಾರ ಸದ್ಯ 15 ವರ್ಷಗಳ ಹಿಂದಿನ ರಾಹುಲ್ ದ್ರಾವಿಡ್‍ಯನ್ನು ಮುರಿದಿದ್ದು, ಈ ಪಟ್ಟಿಯಲ್ಲಿ 2014-15ರ ಟೂರ್ನಿಯಲ್ಲಿ 1,093 ಎಸೆತಗಳನ್ನು ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. 1977-78 ರ ಟೂರ್ನಿಯಲ್ಲಿ 1,032 ಎಸೆತಗಳನ್ನು ಎದುರಿಸಿದ ಸುನಿಲ್ ಗವಾಸ್ಕರ್ ನಂತರದ ಸ್ಥಾನವನ್ನು ಪಡೆದಿದ್ದಾರೆ.

    ಸರಣಿಯಲ್ಲಿ ಪೂಜಾರ 3 ಶತಕಗಳನ್ನು ಸಿಡಿಸಿದ್ದು, ಈ ಮೂಲಕ ಟೀಂ ಇಂಡಿಯಾ ಪರ ಆಸೀಸ್ ವಿರುದ್ಧ 500 ಪ್ಲಸ್ ರನ್ ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ ಮತ್ತು ಕೊಹ್ಲಿ ಮಾತ್ರ 500 ಪ್ಲಸ್ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ ತಂಡದ ಇತರೇ ಆಟಗಾರರೊಂದಿಗೆ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಅಗರ್ವಾಲ್, ಕೊಹ್ಲಿ, ವಿಹಾರಿ, ಪಂತ್‍ರೊಂದಿಗೆ ಕ್ರಮವಾಗಿ 116, 54, 101, 89 ರನ್ ಜೊತೆಯಾತ ನೀಡಿ ಟೀಂ ಇಂಡಿಯಾ ಬೃಹತ್ ಮೊತ್ತ ಗಳಿಸಲು ಕಾರಣರಾಗಿದ್ದಾರೆ. ನಾಥನ್ ಲಯನ್ ಬೌಲಿಂಗ್‍ನಲ್ಲಿ ಪೂಜಾರ ಔಟ್ ಆಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲಾ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    11 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸಿಡ್ನಿ: ನನ್ನ ದಾಖಲೆಗಳನ್ನು ಮುರಿಯುವ ಶಕ್ತಿ, ಸಾಮರ್ಥ್ಯವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ ಎಂಬ ಸಚಿನ್ ಮಾತಿನಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆ ಮುರಿದಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಚಿನ್‍ರ ಮತ್ತೊಂದು ದಾಖಲೆಯನ್ನು ಮುರಿದಿರುವ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 17 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಕೊಹ್ಲಿ ಈ ಪಂದ್ಯದಲ್ಲಿ 23 ರನ್ ಗಳಿಸಿ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು ಕೂಡ 11 ರನ್ ಗಳಿಸಿದ್ದ ವೇಳೆ ಟಿ20, ಏಕದಿನ ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ 19 ಸಾವಿರ ರನ್ ಪೂರ್ಣಗೊಳಿಸಿದ್ದರು. ಕೊಹ್ಲಿ ಈ ಸಾಧನೆಯನ್ನು 399 ಇನ್ನಿಂಗ್ಸ್ ಗಳಲ್ಲಿ ಮಾಡಿದ್ದು, ಸಚಿನ್ 432 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ರನ್ ಹೊಡೆದಿದ್ದರು.

    ಉಳಿದಂತೆ ವೆಸ್ಟ್ ಇಂಡೀಸ್ ತಂಡದ ಲಾರಾ 433 ಇನ್ನಿಂಗ್ಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 444 ಇನ್ನಿಂಗ್ಸ್, ಸೌತ್ ಆಫ್ರಿಕಾದ ಜಾಕ್ ಕಾಲಿಸ್ 458 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ಪೂರ್ಣಗೊಳಿಸಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ 2018 ರಲ್ಲಿ 2,735 ರನ್ ಗಳಿಸಿ ಟಾಪ್ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ 2019 ಆರಂಭದಲ್ಲೇ ಮಹತ್ವದ ದಾಖಲೆ ಮಾಡುವ ಮೂಲಕ ಶುಭಾರಂಭ ಮಾಡಿದ್ದಾರೆ.

    ಎಷ್ಟು ಇನ್ನಿಂಗ್ಸ್ ಗಳಲ್ಲಿ ಎಷ್ಟು ರನ್?
    15 ಸಾವಿರ ರನ್ (333 ಇನ್ನಿಂಗ್ಸ್)
    16 ಸಾವಿರ ರನ್ (350 ಇನ್ನಿಂಗ್ಸ್)
    17 ಸಾವಿರ ರನ್ (363 ಇನ್ನಿಂಗ್ಸ್)
    18 ಸಾವಿರ ರನ್ (382 ಇನ್ನಿಂಗ್ಸ್)
    19 ಸಾವಿರ ರನ್ (399 ಇನ್ನಿಂಗ್ಸ್)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!

    150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!

    ಬೆಂಗಳೂರು: ಪಂಚಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ ಕೆಜಿಎಫ್ ಈಗ ವಿಶ್ವಾದ್ಯಂತ 150 ಕೋಟಿ ರೂ. ಕಲೆಕ್ಷನ್‍ಗೈದ ಕನ್ನಡದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಬಿಡುಗಡೆಯಾದ 5ನೇ ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿದ್ದ ಯಶ್ ಅಭಿನಯದ ಕೆಜಿಎಫ್ ಈಗ ಎರಡನೇ ವಾರಾಂತ್ಯದಲ್ಲಿ 150 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈಗ ವಿದೇಶದಲ್ಲೂ ಕೆಜಿಎಫ್ ಸ್ಕ್ರೀನ್ ಹೆಚ್ಚಳವಾಗುತ್ತಿದ್ದು ಮತ್ತಷ್ಟು ಕಲೆಕ್ಷನ್ ಜಾಸ್ತಿಯಾಗಲಿದೆ. ಇದನ್ನೂ ಓದಿ: ಲುಂಗಿ, ಹವಾಯಿ ಚಪ್ಪಲಿ, ಮಂಕಿಕ್ಯಾಪ್ ಹಾಕ್ಕೊಂಡು ‘ಕೆಜಿಎಫ್’ ನೋಡಿದ ಸ್ಯಾಂಡಲ್‍ವುಡ್ ಟಾಪ್ ನಟ

    ಕನ್ನಡದಲ್ಲಿ ಒಟ್ಟು 87 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಇದು ದಾಖಲೆಯಾಗಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 26.70 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿದೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಹಲವು ಜನ ಊರು ಮತ್ತು ಪ್ರವಾಸಕ್ಕೆ ತೆರಳಿದ್ದರು. ಹೀಗಾಗಿ ಸಿನಿಮಾ ವೀಕ್ಷಿಸದವರು ಈಗ ಚಿತ್ರ ಮಂದಿರದತ್ತ ಬರುತ್ತಿದ್ದಾರೆ. ಇದನ್ನೂ ಓದಿ:ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

    ಬಿಡುಗಡೆಯಾದ 4 ದಿನಕ್ಕೆ 77 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ಸ್ಕ್ರೀನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಜೊತೆಗೆ ಕ್ರಿಸ್‍ಮಸ್ ರಜೆ  ಇದ್ದ ಕಾರಣ ಭರ್ಜರಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುವ ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

    `ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ. ಆಗಿದ್ದರೆ, ಎರಡನೇ 40 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 58 ಕೋಟಿ ರೂ., ನಾಲ್ಕನೇಯ ದಿನ 77 ಕೋಟಿ ರೂ. ಆಗಿದ್ದರೆ, ಐದನೇ ದಿನ ಕೆಜಿಎಫ್ ನೂರು ಕೋಟಿ ರೂ. ಗಡಿ ದಾಟಿತ್ತು. ಇದನ್ನೂ ಓದಿ:ಸಲಾಂ ರಾಕಿ ಭಾಯ್ ಅಂತಾ ಹೇಳ್ತಿರೋದು ಕೆಜಿಎಫ್ ಸಿನಿಮಾಗೆ ಅಲ್ಲ

    ಕೆಜಿಎಫ್ ಬಿಡುಗಡೆಯಾದ ದಿನವೇ ರಿಲೀಸ್ ಆಗಿದ್ದ ಶಾರೂಖ್ ಖಾನ್ ಅಭಿನಯದ ಝೀರೋ ಎರಡನೇ ವಾರಾಂತ್ಯದ ವೇಳೆಗೆ ಒಟ್ಟು 80 ಕೋಟಿ ರೂ. ಕಲೆಕ್ಷನ್ ಮಾಡಿದೆ. ಒಟ್ಟು 10 ದಿನದಲ್ಲಿ 80 ಕೋಟಿ ಗಳಿಸಿದ್ದು, ಎರಡನೇ ವಾರಾಂತ್ಯದಲ್ಲಿ ಕೇವಲ 3.10 ಕೋಟಿ ರೂ. ಗಳಿಕೆ ಮಾಡಿದೆ. ಬಾಕ್ಸ್ ಆಫೀಸಿನಲ್ಲಿ ಶಾರೂಖ್ ಅಭಿನಯದ ಅತಿ ಕಡಿಮೆ ಗಳಿಕೆ ಮಾಡಿದ ಚಿತ್ರ ಝೀರೋ ಆಗಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಇದನ್ನೂ ಓದಿ:ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನ್ರು ಫುಲ್ ಫಿದಾ

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಬೆಳಗಾವಿ/ಚಿಕ್ಕೋಡಿ: ಅಸಲಿ ಜಾತಿ ಪ್ರಮಾಣ ಪತ್ರ ಪಡೆಯುವರು ಸಾಕಷ್ಟು ಬಾರಿ ತಹಶೀಲ್ದಾರ್ ಕಚೇರಿ ಅಲೆದಾಡಿದ ಮೇಲೆ ಕೊನೆಗೆ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಲೂಕಿನಲ್ಲಿ ಅಸಲಿಗಿಂತ ನಕಲಿ ಪ್ರಮಾಣ ಪತ್ರ ಸಲೀಸಾಗಿ ದೊರೆಯುತ್ತಿದೆ. ಜನರಿಗೆ ಯಾವುದು ಬೇಕೋ ಆ ಜಾತಿಯ ಪ್ರಮಾಣ ಪತ್ರವನ್ನು ಯಾವುದೇ ದಾಖಲೆಗಳಿಲ್ಲದೆ ನೀಡಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ಸದಸ್ಯರು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸದಲಗಾ ಪುರಸಭೆಯ 11ನೇ ವಾರ್ಡಿನಲ್ಲಿ ಅವಿರೋಧವಾಗಿ ಆಯ್ಕೆಯಾದ ರವಿ ಗೋಸಾವಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ.

    ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್ ಅವರು ಯಾವುದೇ ದಾಖಲೆ ಇಲ್ಲದೇ ಪ್ರವರ್ಗ 2ಎ ಅಲ್ಲಿ ಬರುತ್ತಿದ್ದ ಹಿಂದೂ ಗೋಸಾವಿ ಭಟಕಿ ಜಮಾತ ಜಾತಿಯಿಂದ ಎಸ್‍ಟಿ ಪರಿಶಿಷ್ಟ ಪಂಗಡಕ್ಕೆ ಯಾವುದೇ ದಾಖಲೆಗಳಿಲ್ಲದೇ ಬದಲಾಯಿಸಿಕೊಂಡಿದ್ದಾರೆ. ರವಿ ಗೋಸಾವಿಯಿಂದ ಯಾವುದೇ ಶಾಲಾ ಹಾಗೂ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪಡೆಯದೇ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

    ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ವರ್ಗದಲ್ಲಿ ಯಾವುದೇ ಮುಖಂಡರು ಇಲ್ಲದನ್ನು ಗಮನಿಸಿ ರವಿ ಗೋಸಾವಿ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಲಿಂಕ್ ಹಿಡಿದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾನೆ. ನಂತರ ವಾರ್ಡ್ ನಂ.11 ಎಸ್‍ಟಿ ಮೀಸಲು ವಾರ್ಡ್‍ನಿಂದ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿಯ ಪುರಸಭೆ ಸದಸ್ಯರಿಗೆ ಈತನ ಅಸಲಿ ಬಂಡವಾಳ ಗೊತ್ತಾಗಿ ಈತನ ಜಾತಿ ಪ್ರಮಾಣ ಪತ್ರದ ಎಲ್ಲ ದಾಖಲೆಗಳನ್ನ ಸಂಗ್ರಹಿಸಿ ಈತನ ಸದಸ್ಯತ್ವ ರದ್ದು ಮಾಡುವಂತೆ ಎಚ್ಚರಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜಕೀಯ ಮುಖಂಡರ ಮಾತು ಕೇಳಿ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಲಗಾ ಬಿಜೆಪಿ ಪುರಸಭೆ ಸದಸ್ಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 16 ವರ್ಷಗಳ ಹಿಂದಿನ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    16 ವರ್ಷಗಳ ಹಿಂದಿನ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿ ಶತಕ ಸಿಡಿಸಲು ವಿಫಲರಾದರು, ಆದರೆ 82 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿಯಲು ಯಶಸ್ವಿಯಾಗಿದ್ದಾರೆ.

    ನಾಯಕ ವಿರಾಟ್ ಕೊಹ್ಲಿ 2018ರ ವರ್ಷದಲ್ಲಿ ವಿದೇಶಿ ನೆಲದಲ್ಲಿ 1,138 ರನ್ ಸಿಡಿಸಿದ್ದು, ಈ ಹಿಂದೆ ರಾಹುಲ್ ದ್ರಾವಿಡ್ 2002 ರಲ್ಲಿ 1,137 ರನ್ ಸಿಡಿಸಿದ್ದರು. ಈ ಮೂಲಕ ಕೊಹ್ಲಿ ಕ್ಯಾಲೆಂಡರ್ ವರ್ಷ ಒಂದರಲ್ಲಿ ವಿದೇಶಿ ನೆಲದಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಮೊಹಿಂದರ್ ಅಮರನಾಥ್ 3ನೇ ಸ್ಥಾನದಲ್ಲಿ ಇದ್ದು, 1983 ರಲ್ಲಿ ಅಮರನಾಥ್ 1,065 ರನ್ ಗಳಿಸಿದ್ದರು.

    ಆಸೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೂಡ ಕೊಹ್ಲಿ ಟೀಂ ಇಂಡಿಯಾ ಪರ ಮೊದಲ ಸ್ಥಾನ ಪಡೆದಿದ್ದು, 1,236 ರನ್ ಸಿಡಿಸಿದ್ದಾರೆ. ಈ ಹಿಂದೆ ವಿವಿಎಸ್ ಲಕ್ಷ್ಮಣ್ 1,809 ರನ್ ಗಳಿಸಿದ್ದರು. ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ವಿಕೆಟ್ ಪಡೆಯಲು ಆಸೀಸ್ ಬೌಲರ್ ಸ್ಟಾರ್ಕ್ ಯಶಸ್ವಿಯಾಗಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಕೊಹ್ಲಿರನ್ನು 3ನೇ ಬಾರಿಗೆ ಔಟ್ ಮಾಡಿದರು. ಅಲ್ಲದೇ ಕೊಹ್ಲಿ ಟೂರ್ನಿಯಲ್ಲಿ 4ನೇ ಬಾರಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ದಾರೆ. ಇದನ್ನು ಓದಿ: ಸಿಕ್ಸರ್ ಸಿಡಿಸಿದ್ರೆ ಮುಂಬೈ ಇಂಡಿಯನ್ಸ್‌ಗೆ ಬೆಂಬಲ – ರೋಹಿತ್ ಶರ್ಮಾ ಕೆಣಕಿದ ಆಸೀಸ್ ನಾಯಕ

    ಈಗಾಗಲೇ ಸರಣಿಯಲ್ಲಿ ಶತಕ ಗಳಿಸುವ ಕೊಹ್ಲಿ, ಆಸೀಸ್ ವಿರುದ್ಧ 6 ಶತಕ ಸಿಡಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಸದ್ಯ ಕೊಹ್ಲಿ 7ನೇ ಶತಕ ಸಿಡಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಹೊಂದಿದ್ದಾರೆ. ಆಸೀಸ್ ವಿರುದ್ಧ ಸಚಿನ್ 7 ಶತಕಗಳನ್ನ ಸಿಡಿಸಿ ಟೀಂ ಇಂಡಿಯಾ ಪರ ಮೊದಲ ಸ್ಥಾನದಲ್ಲಿದ್ದು, 5 ಶತಕಗಳನ್ನು ಗಳಿಸಿರುವ ಸುನಿಲ್ ಗವಾಸ್ಕರ್ 3ನೇ ಸ್ಥಾನ ಪಡೆದಿದ್ದಾರೆ.

    https://twitter.com/Marvellous_Capt/status/1078119993018118144

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರೈಂ ಡಿಟೆಕ್ಷನ್ ನಲ್ಲಿ ದಾಖಲೆ ಬರೆದ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್

    ಕ್ರೈಂ ಡಿಟೆಕ್ಷನ್ ನಲ್ಲಿ ದಾಖಲೆ ಬರೆದ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿವಂಗತ ಅಂಬರೀಷ್ ಅಂತ್ಯಕ್ರಿಯೆಯಲ್ಲಿ ಒಂಚೂರು ಗಲಾಟೆಯಾಗದಂತೆ ಬಂದೋಬಸ್ತ್ ಮಾಡಿದ್ದ ಬೆಂಗಳೂರು ಪೊಲೀಸ್ ಕಮೀಷನರ್ ಹೀರೋ ಆಗಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಪೊಲೀಸ್ ಆಯುಕ್ತರ ಮುಡಿಗೆ ಕಿರೀಟವೊಂದು ಬಂದು ಸೇರಿದೆ.

    ಅಂಬಿ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಇದೀಗ ಕ್ರೈಂ ಡಿಟೆಕ್ಷನ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಿಂದಿನ ಯಾವ ಕಮೀಷನರ್ ಗಳ ಅವಧಿಯಲ್ಲೂ ಆಗದಷ್ಟು ಹೆಚ್ಚಿನ ಕ್ರೈಂ ಡಿಟೆಕ್ಷನ್ ಸುನೀಲ್ ಕುಮಾರ್ ಅವಧಿಯಲ್ಲಿ ಆಗಿದೆ.

    ಈ ವರ್ಷ ನವೆಂಬರ್ ಅಂತ್ಯದ ತನಕ ನಗರದಲ್ಲಿ ಒಟ್ಟು 202 ಕೊಲೆಗಳಾಗಿದೆ. ಇದರಲ್ಲಿ 194 ಕೇಸ್ ಡಿಟೆಕ್ಟ್ ಆಗಿದ್ದು, ಕೊಲೆ ಹಂತಕರನ್ನು ಜೈಲಿಗಟ್ಟಿದ್ದಾರೆ. 636 ದರೋಡೆ ಪ್ರಕರಣಗಳು ದಾಖಲಾಗಿದ್ದು, 411 ರಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಅಲ್ಲದೇ ಪೊಲೀಸರ ನಿದ್ದೆ ಕೆಡಿಸಿದ ಸರಗಳ್ಳತನ ಪ್ರಕರಣಗಳ 289 ಕೇಸ್ ವರದಿಯಾಗಿದ್ದು, ಅದರಲ್ಲಿ 206 ಕೇಸ್ ಪತ್ತೆ ಮಾಡಲಾಗಿದೆ. ಈ ವರ್ಷದಲ್ಲಿ 5023 ಮೋಟಾರ್ ವಾಹನಗಳು ಕಳವಾಗಿದ್ದು, 1296 ವಾಹನಗಳನ್ನ ಪತ್ತೆ ಮಾಡಲಾಗಿದೆ. ಈ ವರ್ಷ 2701 ಚೀಟಿಂಗ್ ಕೇಸ್ ಗಳು ದಾಖಲಾಗಿದ್ದು, 1015 ಕೇಸ್ ಗಳಲ್ಲಿ ನ್ಯಾಯ ಕೊಡಿಸಲಾಗಿದೆ.

    ದುರಂತ ಅಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗದೇ ಇರುವುದು. ಈ ವರ್ಷ ಬರೋಬ್ಬರಿ 350 ಪೋಕ್ಸೋ ಕೇಸ್ ಗಳು ದಾಖಲಾಗಿದ್ದು, 339 ಮಂದಿ ಆರೋಪಿಗಳನ್ನ ಜೈಲಿಗಟ್ಟಲಾಗಿದೆ. 750 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿ 560 ಕೇಸ್ ಗಳನ್ನು ಪರಿಹರಿಸಲಾಗಿದೆ. ಸ್ವಾರಸ್ಯದ ಸಂಗತಿ ಅಂದರೆ ದಾಖಲಾದ 98 ರೇಪ್ ಕೇಸ್ ಗಳಲ್ಲಿ ಅಷ್ಟು ಮಂದಿಗೂ ನ್ಯಾಯ ಕೊಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

    ಒಟ್ಟಿನಲ್ಲಿ ಈ ಬಾರಿ ಕ್ರೈಂ ಡಿಟೆಕ್ಷನ್ ಮೇಲುಗತಿಯಲ್ಲಿ ಸಾಗಿದೆ. ಹಗಲು ರಾತ್ರಿ ದುಡಿದು ಸಾಕಷ್ಟು ಕೇಸ್ ಗಳನ್ನ ಪತ್ತೆ ಹಚ್ಚುವಲ್ಲಿ ಎಲ್ಲಾ ಪೊಲೀಸರು ಶ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಟ್ಟಿದ ಎರಡೇ ಗಂಟೆಯಲ್ಲಿ ಭಾರತದಲ್ಲಿ ದಾಖಲೆ ನಿರ್ಮಿಸಿದ ಹೆಣ್ಣುಮಗು!

    ಹುಟ್ಟಿದ ಎರಡೇ ಗಂಟೆಯಲ್ಲಿ ಭಾರತದಲ್ಲಿ ದಾಖಲೆ ನಿರ್ಮಿಸಿದ ಹೆಣ್ಣುಮಗು!

    ಗಾಂಧಿನಗರ: ಹುಟ್ಟಿದ ಎರಡೇ ಗಂಟೆಯ ಅವಧಿಯಲ್ಲಿ ಗುಜರಾತ್ ದಂಪತಿ ತಮ್ಮ ಹೆಣ್ಣುಮಗುವಿನ ಹೆಸರನ್ನು ಎಲ್ಲಾ ಅಧಿಕೃತ ದಾಖಲೆಗಳಿಗೆ ನೊಂದಣಿ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ.

    ಹುಟ್ಟಿದ ಎರಡೇ ಗಂಟೆಯಲ್ಲಿ ಎಲ್ಲಾ ಅಧಿಕೃತ ದಾಖಲೆಗಳಿಗೆ ನೊಂದಣಿಯಾಗಿರುವ ಭಾರತದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಈಗ ಈ ಮಗು ಪಾತ್ರವಾಗಿದೆ.

    ಅಂಕಿತ್ ನಾಗರಾಣಿ ಹಾಗೂ ತಾಯಿ ಭೂಮಿ ನಾಗರಾಣಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ. ಹೀಗಾಗಿ ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ತಮ್ಮ ಮಗುವಿನ ಹೆಸರನ್ನು ನೊಂದಣಿ ಮಾಡಿಸಲು ಕಾತುರದಿಂದ ಕಾಯುತ್ತಿದ್ದರು. ಅಲ್ಲದೆ ಅವರ ಮಗಳು ಹುಟ್ಟಿದ ಸ್ಥಳದಲ್ಲೇ ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿರುವ ಮೊದಲ ಮಗು ಎಂಬ ಹೆಗ್ಗಳಿಕೆ ಪಡೆಯಬೇಕು ಎಂದು ಅಂಕಿತ್ ಕನಸು ಕಂಡಿದ್ದರು.

    ಆದರಿಂದ ಮಗು ಹುಟ್ಟುವ ಮೊದಲೇ ದಾಖಲೆಗಳಿಗೆ ನೊಂದಣಿಯಾಗಲು ಫಾರಂಗಳನ್ನು ತುಂಬಿಸಿಟ್ಟಿದ್ದರು. ಡಿಸೆಂಬರ್ 12 ರಂದು ಮಗಳು ಜನಿಸಿದ ಎರಡೇ ಗಂಟೆಯಲ್ಲಿ ಯಶಸ್ವಿಯಾಗಿ ಆಧಾರ್, ರೇಶನ್ ಕಾರ್ಡ್ ಹಾಗೂ ಪಾಸ್ರ್ಪೋಟ್ ಸೇರಿದಂತೆ ಎಲ್ಲಾ ದಾಖಲೆಗಳಿಗೆ ಮಗುವಿನ ಹೆಸರಾದ ರಮಿಯಾಳನ್ನು ನೊಂದಣಿ ಮಾಡಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಈ ಹಿಂದೆ ಎಪ್ರೀಲ್‍ನಲ್ಲಿ ಮಹಾರಾಷ್ಟ್ರದಲ್ಲಿ ಹುಟ್ಟಿದ 1.48 ನಿಮಿಷದಲ್ಲೇ ಹೆಣ್ಣು ಮಗುವಿನ ಹೆಸರನ್ನು ಪೋಷಕರು  ಆಧಾರ್‌ಗೆ ನೊಂದಣಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

    ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

    ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಟೀಂ ಇಂಡಿಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    30 ವರ್ಷದ ಕೊಹ್ಲಿ ಅಡಿಲೇಡ್‍ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದು, ಪಂದ್ಯದಲ್ಲಿ 5 ರನ್ ಗಳಿಸಿದ್ದ ವೇಳೆ 1 ಸಾವಿರ ರನ್ ಪೂರ್ಣಗೊಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾದಲ್ಲಿ 1 ಸಾವಿರ ರನ್ ಪೂರೈಸಿದ ಭಾರತ 4ನೇ ಹಾಗೂ ಒಟ್ಟಾರೆಯಾಗಿ 28ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಕೊಹ್ಲಿ ಕೇವಲ 18 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ 1,809 ರನ್, ವಿವಿಎಸ್ ಲಕ್ಷ್ಮಣ್ 1,236 ರನ್, ರಾಹುಲ್ ದ್ರಾವಿಡ್ 1,143 ರನ್ ಸಿಡಿಸಿದ್ದರು. ಕೊಹ್ಲಿ 59.05 ಸರಾಸರಿಯಲ್ಲಿ 1 ಸಾವಿರ ರನ್ ಪೂರೈಸಿದ್ದು, ಟೆಸ್ಟ್ ತಂಡದ ನಾಯಕರಾಗಿ 2 ಸಾವಿರ ರನ್ ಕೂಡ ಪೂರ್ಣಗೊಳಿಸಿದ್ದಾರೆ. ಉಳಿದಂತೆ ಅಲನ್ ಬಾರ್ಡರ್, ರಿಕಿ ಪಾಟಿಂಗ್, ಗ್ರೇಮ್ ಸ್ಮಿತ್ ಹಾಗೂ ಕುಕ್ ನಾಯಕರಾಗಿ 2 ಸಾವಿರ ರನ್ ಪೂರೈಸಿದ್ದಾರೆ.

    ಅಂದಹಾಗೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡು ಮಾದರಿಗಳಲ್ಲಿ 1 ಸಾವಿರ ರನ್ ಸಿಡಿಸಿ ವಿಶ್ವದ ಟಾಪ್ ಶ್ರೇಯಾಂಕ ಪಡೆದಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನ ಕೊಹ್ಲಿ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮರಾಠಿ ಸದಸ್ಯರ ಪುಂಡಾಟ

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮರಾಠಿ ಸದಸ್ಯರ ಪುಂಡಾಟ

    ಬೆಳಗಾವಿ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯ ಸದಸ್ಯರು ಪುಂಡಾಟ ನಡೆಸಿದ್ದು, ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಒತ್ತಾಯ ಮಾಡಿದ್ದಾರೆ.

    ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಜಿ.ಪಂ ಸದಸ್ಯ ಜಯರಾಮ್ ದೇಸಾಯಿ ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಪಟ್ಟು ಹಿಡಿದರು. ಅಲ್ಲದೇ ಅಧಿಕಾರಿಗಳು ನಮ್ಮ ಮಾತು ಕೇಳದೇ ಭಾಷಾವಾದ ಮಾಡುತ್ತಿದ್ದಾರೆ. ನಮಗೆ ಕನ್ನಡದಲ್ಲಿ ಕೊಟ್ಟ ದಾಖಲೆಗಳು ತಿಳಿಯುತ್ತಿಲ್ಲ. ಅದ್ದರಿಂದ ಕೂಡಲೇ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲು ಒತ್ತಾಯ ಮಾಡಿದರು. ಆದರೆ ಅವರ ಇದನ್ನು ನಿರಾಕರಿಸಿದ ಅಧ್ಯಕ್ಷರು ಮರಾಠಿಯಲ್ಲಿ ದಾಖಲೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಏಕವಚನ ಪ್ರಯೋಗ:
    ಈ ವೇಳೆ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಿಗೆ ಏಕವಚನದಲ್ಲಿ ಮಾತನಾಡಿ ಬಾಯಿಮುಚ್ಚಿ ಎಂದು ಮರಾಠಿ ಸದಸ್ಯೆ ಸರಸ್ವತಿ ಪಾಟೀಲ್ ಉದ್ಧಟತನ ಮೆರೆದರು. ತಮ್ಮ ವ್ಯಾಪ್ತಿಯಲ್ಲಿ ಒಂದು ವಾರದ ಹಿಂದೆ ಗ್ರಾಮಕ್ಕೆ ಚಿರತೆ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದ ಸರಸ್ವತಿ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಅವರಿಗೆ ಏಕವಚನದಲ್ಲಿ ಮಾತನಾಡಿ ಸರಸ್ವತಿ ಉದ್ಧಟನ ಮೆರೆದರು.

    ಈ ಮಾತಿಗೆ ಆಕ್ರೋಶಗೊಂಡ ಕನ್ನಡ ಸದಸ್ಯರು ಸಭೆ ನಡುವೆಯೇ ಸರಸ್ವತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಉಪಾಧ್ಯಕ್ಷರನ್ನು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಈ ಕುರಿತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಒಂದೇ ಪಿಚ್ ಹಂಚಿಕೊಂಡು ದಾಖಲೆ ನಿರ್ಮಿಸಿದ ಸಲಿಂಗಿ ದಂಪತಿ!

    ಒಂದೇ ಪಿಚ್ ಹಂಚಿಕೊಂಡು ದಾಖಲೆ ನಿರ್ಮಿಸಿದ ಸಲಿಂಗಿ ದಂಪತಿ!

    ಸೈಂಟ್‍ಲೂಸಿಯಾ: ವೆಸ್ಟ್ ಇಂಡಿಸ್ ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಸಲಿಂಗಿ ದಂಪತಿ ಆಡುವ ಮೂಲಕ ದಾಖಲೆ ಬರೆದಿದ್ದಾರೆ.

    ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಕ್ಯಾಪ್ಟನ್ ಡೇನ್ ವ್ಯಾನ್ ನಿಕೆರ್ಕ್ ಹಾಗೂ ಅದೇ ತಂಡದ ಅಲ್‍ರೌಂಡರ್ ಮರಿಝಾನ್ ಕಾಪ್ ಈ ವರ್ಷದ ಜುಲೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಡೇನ್ ಪತಿಯಾದರೆ, ಮರಿಝಾನ್ ಪತ್ನಿಯಾಗಿದ್ದು, ಐಸಿಸಿ ಟೂರ್ನಿಯಲ್ಲಿ ಸಲಿಂಗಿ ದಂಪತಿ ಒಂದೇ ಪಿಚ್‍ನಲ್ಲಿ ಒಟ್ಟಿಗೆ ಆಡುವ ಮೂಲಕ ದಾಖಲೆ ಬರೆದಿದ್ದಾರೆ.

    ಇಬ್ಬರು ಮೂರನೇ ವಿಕೆಟ್ ಗೆ 67 ರನ್ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ನಾಯಕಿ ಡೇನ್ ಔಟಾಗದೆ 33 ರನ್ ಬಾರಿಸುವುದರ ಜತೆ 1 ವಿಕೆಟ್ ಉರುಳಿಸಿದರೆ, ಮರಿಝಾನ್ 38 ರನ್ ಮತ್ತು 1 ವಿಕೆಟ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ 18.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿ ಜಯಗಳಿಸಿತು.

    2009ರ ಮಹಿಳಾ ವಿಶ್ವಕಪ್ ಸಮಯದಲ್ಲಿ ನಿಕೆರ್ಕ್ ಹಾಗೂ ಕಾಪ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಿಕೆರ್ಕ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್ 8ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಇನ್ನೂ ಕಾಪ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

    ಈ ಮದುವೆಗೆ ಇಬ್ಬರು ಆಟಗಾರ್ತಿಯರ ಕುಟುಂಬದವರು, ಸ್ನೇಹಿತರು ಹಾಗೂ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರರು ಭಾಗಿಯಾಗಿದ್ದರು. ನಿಕೆರ್ಕ್ ಹಾಗೂ ಕಾಪ್ ಅವರದ್ದು ಸಲಿಂಗಿ ಮದುವೆಯಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಇವರ ಮದುವೆ ಎರಡನೇ ಪ್ರಕರಣವಾಗಿದೆ.

    ಈ ಮೊದಲು ನ್ಯೂಜಿಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

     

    View this post on Instagram

     

    ????

    A post shared by Marizanne Kapp (@kappie777) on

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews