Tag: ದಾಖಲೆಗಳು

  • ಡಿಕೆಶಿಗೆ ಮತ್ತೊಂದು ಬಿಗ್ ಶಾಕ್- ಆಪ್ತನ ಮನೆ ಮೇಲೆ ಇಡಿ ದಾಳಿ

    ಡಿಕೆಶಿಗೆ ಮತ್ತೊಂದು ಬಿಗ್ ಶಾಕ್- ಆಪ್ತನ ಮನೆ ಮೇಲೆ ಇಡಿ ದಾಳಿ

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಂದು ಬಿಗ್ ಶಾಕ್ ನೀಡಿದೆ. ದೆಹಲಿಯ ಮನೆಯಲ್ಲಿ ಸಿಕ್ಕ ಹಣ, ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್ (ಸೌರಶಕ್ತಿ ಉತ್ಪಾದನಾ ಸ್ಥಾವರ) ಬೆನ್ನಲ್ಲೇ ಈಗ ಮಾಜಿ ಸಚಿವರ ಆಪ್ತರೊಬ್ಬರ ಮನೆ ಮೇಲೆ ದಾಳಿ ಮಾಡಿದೆ.

    ಡಿ.ಕೆ.ಶಿವಕುಮಾರ್ ಆಪ್ತ, ವಿಶೇಷ ಅಧಿಕಾರಿ ಆಂಜನೇಯ ಅವರ ನವದೆಹಲಿಯ ಆರ್.ಕೆ.ಪುರಂ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಂಜನೇಯ ಅವರು ಕಳೆದ 3 ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಅವರ ನಿವಾಸದ ಮೇಲೆ ದಾಳಿ ಮಾಡಿ ಕೆಲವು ಮಹತ್ವದ ದಾಖಲೆಗಳನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಗಳ ಹೆಸರಲ್ಲಿಟ್ಟಿದ್ದ 78 ಕೋಟಿ ಹಣವೇ ಡಿಕೆಶಿಗೆ ಮುಳುವಾಯ್ತು

    ಆಂಜನೇಯ ಅವರು ಡಿ.ಕೆ.ಶಿವಕುಮಾರ್ ಅವರ ದೆಹಲಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಶರ್ಮಾ ಟ್ರಾವೆಲ್ಸ್ ಮಾಲೀಕ ಸುನೀಲ್ ಶರ್ಮಾ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲವು ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಂಜನೇಯ ಅವರ ಮನೆ ಮೇಲೆ ಇಡಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ

    ದೆಹಲಿಯಲ್ಲಿ ಪತ್ತೆಯಾಗಿದ್ದ 8.59 ಕೋಟಿ ರೂ. ಬಗ್ಗೆ ಆಂಜನೇಯ ಅವರಿಗೆ ಮಾಹಿತಿ ಇದೆ. ಹೀಗಾಗಿ ಅವರ ಮನೆಯ ಮೇಲೆ ಇಡಿ ಅಧಿಕಾರಿಗಳು ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸೋಮವಾರ ಮತ್ತೆ ದಾಳಿ ಮಾಡಿ ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಇತ್ತ ಬಳ್ಳಾರಿಯ ಹಗರಿಬೊಮ್ಮನ ಹಳ್ಳಿಯಲ್ಲಿ 1,950 ಎಕರೆ ಭೂಮಿಯಲ್ಲಿರುವ ಸೋಲಾರ್ ಪವರ್ ಪ್ಲಾಂಟ್‍ನ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಯೋಜನೆಯಲ್ಲಿ ಡಿಕೆಶಿಯವರದ್ದೇ ಶೇಕಡಾ 60ರಷ್ಟು ಪಾಲುದಾರಿಕೆ ಇದೆ ಎನ್ನಲಾಗಿದ್ದು, ಒಂದು ವೇಳೆ ಇದು ಅಕ್ರಮವೆಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಈ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅವಕಾಶವಿದೆ. ಸದ್ಯ ಇಡಿ ಅಧಿಕಾರಿಗಳ ಸುಪರ್ದಿಗೆ ಸೊಲಾರ್ ಪವರ್ ಪ್ಲಾಂಟ್‍ನ ದಾಖಲೆಗಳು ಸಿಕ್ಕಿರುವುದು ಡಿಕೆಶಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಲಾರ್ ಪವರ್ ಪ್ಲಾಂಟ್ ಬಿಡಿಸಿಕೊಳ್ಳಬೇಕು ಎಂದರೆ ಡಿಕೆಶಿ ನ್ಯಾಯಾಲಯದ ಮೊರೆ ಹೋಗಬೇಕಿದೆ.

  • ಇಡಿ ವಶದಲ್ಲಿದೆ ಸೋಲಾರ್ ಪವರ್ ಪ್ಲಾಂಟ್ ದಾಖಲೆ- ಟ್ರಬಲ್ ಶೂಟರ್‌ಗೆ ಹೆಚ್ಚಾದ ಸಂಕಷ್ಟ

    ಇಡಿ ವಶದಲ್ಲಿದೆ ಸೋಲಾರ್ ಪವರ್ ಪ್ಲಾಂಟ್ ದಾಖಲೆ- ಟ್ರಬಲ್ ಶೂಟರ್‌ಗೆ ಹೆಚ್ಚಾದ ಸಂಕಷ್ಟ

    ಬೆಂಗಳೂರು: ಇಡಿ ಬಂಧನದಲ್ಲಿರುವ ಟ್ರಬಲ್ ಶೂಟರ್ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇಷ್ಟು ದಿನ ದೆಹಲಿಯ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಇಡಿ, ಈಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್(ಸೌರಶಕ್ತಿ ಉತ್ಪಾದನಾ ಸ್ಥಾವರ) ಮೇಲೆ ಕಣ್ಣು ಹಾಕಿದೆ.

    ದೆಹಲಿಯಲ್ಲಿ ಸಿಕ್ಕ 8.59 ಕೋಟಿ ರೂಪಾಯಿ ಬೆನ್ನಹಿಂದೆ ಬಿದ್ದಿರುವ ಇಡಿ ಅಧಿಕಾರಿಗಳು ಈಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್ ಮೇಲೆ ಕಣ್ಣು ಹಾಕಿದ್ದಾರೆ. ಹಗರಿಬೊಮ್ಮನ ಹಳ್ಳಿಯಲ್ಲಿ 1,950 ಎಕರೆ ಭೂಮಿಯಲ್ಲಿರುವ ಸೋಲಾರ್ ಪವರ್ ಪ್ಲಾಂಟ್ ನ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಈ ಯೋಜನೆಯಲ್ಲಿ ಡಿಕೆಶಿಯವರದ್ದೇ ಶೇಕಡ 60ರಷ್ಟು ಪಾಲುದಾರಿಕೆ ಇದೆ ಎನ್ನಲಾಗಿದ್ದು, ಒಂದು ವೇಳೆ ಇದು ಅಕ್ರಮವೆಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಈ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅವಕಾಶವಿದೆ. ಸದ್ಯ ಇಡಿ ಅಧಿಕಾರಿಗಳ ಸುಪರ್ದಿಗೆ ಸೊಲಾರ್ ಪವರ್ ಪ್ಲಾಂಟ್‍ನ ದಾಖಲೆಗಳು ಸಿಕ್ಕಿರುವುದು ಡಿಕೆಶಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಲಾರ್ ಪವರ್ ಪ್ಲಾಂಟ್ ಬಿಡಿಸಿಕೊಳ್ಳಬೇಕು ಎಂದರೆ ಡಿಕೆಶಿ ನ್ಯಾಯಾಲಯದ ಮೊರೆ ಹೋಗಬೇಕಿದೆ.

    ಅಕ್ರಮ ಹಣ ವರ್ಗಾವಣೆ, ಹವಾಲಾ ಕೇಸ್‍ನಲ್ಲಿ ಕಳೆದೊಂದು ವಾರದಿಂದ ಇಡಿ ಹಿಡಿತದಲ್ಲಿರುವ ಕನಕಪುರ ಬಂಡೆ ಡಿಕೆಶಿ ಬಳಲಿ ಬೆಂಡಾಗಿದ್ದಾರೆ. ಡಿಕೆಶಿ ಇಂದು ಏಳನೇ ದಿನದ ವಿಚಾರಣೆ ಎದುರಿಸಲಿದ್ದಾರೆ. ಸೆಪ್ಟೆಂಬರ್ 4 ರಿಂದ 13 ರವರೆಗೂ ಅಂದರೆ ಒಟ್ಟು 10 ದಿನಗಳ ಕಾಲ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ಇಡಿ ವಿಶೇಷ ಕೋರ್ಟ್ ಆದೇಶಿಸಿತ್ತು. ಆದೇಶದಂತೆ ಇನ್ನು ಮೂರು ದಿನಗಳಲ್ಲಿ ಕಸ್ಟಡಿ ಅಂತ್ಯವಾಗಲಿದೆ.

    ಇತ್ತ ಪ್ರಕರಣದ ಮತ್ತಷ್ಟು ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರನ್ನು ಇನ್ನೂ ನಾಲ್ಕು ದಿನ ಕಸ್ಟಡಿಗೆ ಕೇಳಲು ಇಡಿ ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 13ರಂದು ಇಡಿ ಕೋರ್ಟ್ ಮುಂದೆ ಹಾಜರುಪಡಿಸಿ ಮತ್ತೆ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಳ್ಳುವ ಲೆಕ್ಕಾಚಾರ ಇಡಿ ಅಧಿಕಾರಿಗಳು ಹಾಕಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

  • ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಲಖನೌ: ಭಾರತೀಯ ನಿಯೋಗವೊಂದು ಜೂನ್‍ನಲ್ಲಿ ಇರಾಕ್ ಯಾತ್ರೆ ಕೈಗೊಂಡಿದ್ದ ವೇಳೆ ಕ್ರಿಸ್ತಪೂರ್ವ 2000ನೇ ಇಸವಿಯ ಕಾಲದ್ದು ಎನ್ನಲಾದ ಪ್ರಾಚೀನ ಬಂಡೆಯ ಮೇಲೆ ಶ್ರೀರಾಮನ ಚಿತ್ರ ಕಾಣಿಸಿಕೊಂಡಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಹೇಳಿದೆ.

    ಇರಾಕ್‍ನ ಹೊರೇನ್ ಶೇಖಾನ್ ಪ್ರದೇಶಕ್ಕೆ ಹೋಗುವ ಕಿರುದಾದ ದಾರಿಯ ಎದುರಿನ ಮಣ್ಣಿನ ಗೋಡೆಯೊಂದರಲ್ಲಿ (ದರ್ಬಂದ್-ಇ-ಬೆಲುಲಾ) ಈ ಚಿತ್ರ ಕಂಡುಬಂದಿದೆ. ಈ ಚಿತ್ರದಲ್ಲಿ ಎದೆಯ ಮೇಲೆ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಧನುಸ್ಸನ್ನು ಹಿಡಿದು ಬಾಣ ಹೂಡುತ್ತಿರುವ ಚಿತ್ರಣವಿದೆ. ಅಲ್ಲದೇ ರಾಜನ ಸೊಂಟಕ್ಕೆ ಖಡ್ಗವನ್ನು ಸಿಕ್ಕಿಸಿಕೊಂಡಂತೆ ಇದೆ. ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಚಿತ್ರವಿದ್ದು, ಅದು ಹನುಮಂತನದ್ದಾಗಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ಹೇಳಿದ್ದಾರೆ.

    ಇರಾಕ್‍ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಯಾತ್ರೆ ಕೈಗೊಂಡಿತ್ತು. ಅಯೋಧ್ಯಾ ಶೋಧ ಸಂಸ್ಥಾನವು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಅಧ್ಯಯನ ಸಂಸ್ಥೆಯಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿ ಚಂದ್ರಮೌಳಿ ಕರ್ಣ, ಸುಲೈಮಾನಿಯಾ ವಿಶ್ವವಿದ್ಯಾಲಯದ ಇತಿಹಾಸ ತಜ್ಞರು ಮತ್ತು ಕುರ್ದಿಸ್ಥಾನದ ಇರಾಕಿ ಗವರ್ನರ್ ಕೂಡ ಈ ಶೋಧ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳುವ ಪ್ರಕಾರ, ನಿಯೋಗ ಈಗ ಸಂಗ್ರಹಿಸಿರುವ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸೊಪೊಟೇಮಿಯಾ ಸಂಸ್ಕೃತಿಗಳ ನಡುವಣ ಕೊಂಡಿಯನ್ನು ಪತ್ತೆ ಮಾಡಬಹುದು. ಮತ್ತು ಮಣ್ಣಿನ ಕೆತ್ತನೆಯಲ್ಲಿ ಕಂಡು ಬರುವ ದೊರೆ ಮತ್ತು ಸೇವಕನ ಚಿತ್ರಣವು ನಮ್ಮಲ್ಲಿ ಹಲವರಿಗೆ ಭಗವಾನ್ ಶ್ರೀರಾಮ ಮತ್ತು ಹನುಮಂತನನ್ನು ನೆನಪಿಗೆ ತಂದಿತು ಎಂದಿದ್ದಾರೆ.

    ಇರಾಕಿನ ವಿದ್ವಾಂಸರು, ಮಣ್ಣಿನ ಗೋಡೆಯ ಚಿತ್ರಣವು ಪರ್ವತ ಪ್ರದೇಶದ ಬುಡಕಟ್ಟು ನಾಯಕ ತಾರ್ದುನ್ನಿಯನ್ನು ಹೋಲುತ್ತದೆ. ಹಿಂದೆಯೂ ಇರಾಕ್‍ನ ಕೆಲವೆಡೆ ಈ ರೀತಿಯ ಮಣ್ಣಿನ ಭಿತ್ತಿ ಕೆತ್ತನೆಗಳಲ್ಲಿ ರಾಜ ಹಾಗೂ ಅವನ ಮುಂದೆ ಮಂಡಿಯೂರಿ ಕುಳಿತ ಸೇವಕನ ಚಿತ್ರಗಳು ಕಂಡು ಬಂದಿವೆ. ಈ ಸೇವಕನನ್ನು ರಾಜನು ಬಂಧಿಸಿ ಕರೆತಂದ ಕೈದಿಯಾಗಿರಬಹುದು ಎಂದು ಹೇಳಿದ್ದಾರೆ.

    ಇರಾಕಿನ ಪ್ರಾಚೀನ ವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಈ ಚಿತ್ರಗಳಿಗೂ ಭಗವಾನ್ ರಾಮನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪ್ರತಾಪ್ ಸಿಂಗ್ ಅವರು ಎರಡೂ ನಾಗರಿಕತೆಗಳ ನಡುವಣ ಸಂಬಂಧದ ಕೊಂಡಿಯನ್ನು ಶೋಧಿಸಲು ಇರಾಕ್ ಸರ್ಕಾರದ ಅನುಮತಿ ಅಗತ್ಯವಿದೆ. ಅನುಮತಿಗಾಗಿ ನಾವು ಸರ್ಕಾರಕ್ಕೆ ಕೋರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

    ಜಗತ್ತಿನ ಹಲವು ಭಾಗಗಳಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳ ದಾಖಲೆಗಳು ಲಭ್ಯವಾಗಿವೆ. ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರತಿಕೃತಿಗಳನ್ನು ಅಯೋಧ್ಯೆಯಲ್ಲಿ ಒಂದೇ ಕಡೆ ಸಂಗ್ರಹಿಸಿ ಇಡುವ ಉದ್ದೇಶವಿದೆ. ಸಿಂಧೂ ನಾಗರಿಕತೆ ಮತ್ತು ಮೆಸೊಪೊಟೇಮಿಯಾ ನಾಗರಿಕತೆಗಳ ನಡುವೆ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೊದಲ ಅಧಿಕೃತ ಪ್ರಯತ್ನ ಇದಾಗಿದೆ ಎಂದು ಸಿಂಗ್ ತಿಳಿಸಿದರು.

  • ನೀರವ್ ಬಂಧನಕ್ಕೆ ದಾಖಲೆ ಕೇಳಿದ್ರೂ ನೀಡಿಲ್ಲ- ಚೋರ್ ಮೋದಿ ರಕ್ಷಣೆಗೆ ನಿಂತ್ರಾ ಚೌಕಿದಾರ್..?

    ನೀರವ್ ಬಂಧನಕ್ಕೆ ದಾಖಲೆ ಕೇಳಿದ್ರೂ ನೀಡಿಲ್ಲ- ಚೋರ್ ಮೋದಿ ರಕ್ಷಣೆಗೆ ನಿಂತ್ರಾ ಚೌಕಿದಾರ್..?

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿಯನ್ನು ಬಂಧಿಸಲು ಇಂಗ್ಲೆಂಡ್, ಭಾರತದ ಬಳಿ ದಾಖಲೆಗಳನ್ನು ಕೇಳಿತ್ತು. ಆದ್ರೆ ಕೇಂದ್ರ ಸರ್ಕಾರ ಈ ಸಂಬಂಧ ಇದೂವರೆಗೂ ಸ್ಪಂದಿಸಿಲ್ಲ ಎಂದು ಮೂಲಗಳಿಂದ ಮಾಹಿತಿ ದೊರಕಿದೆ.

    ನೀರವ್ ಮೋದಿಗೆ ಸಂಬಂಧಿಸಿದಂತೆ ಬ್ರಿಟಿಷ್ ಪ್ರಾಧಿಕಾರ ಮಾಹಿತಿಗಾಗಿ ಹಲವು ಪ್ರಶ್ನೆಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಆದ್ರೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅಲ್ಲದೆ ನೀರವ್ ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಇಂಗ್ಲೆಂಡ್‍ನ ಕಾನೂನು ತಜ್ಞರ ತಂಡ ಭಾರತಕ್ಕೆ ಆಗಮಿಸಬೇಕೆ ಎಂದು ಕೇಳಿತ್ತು. ಇದಕ್ಕೂ ಭಾರತ ಸರಿಯಾಗಿ ಸ್ಪಂದಿಸಿಲ್ಲ  ಎಂದು ಎನ್ ಡಿ ಟಿವಿ ವರದಿ ಮಾಡಿದೆ.

    ಈ ಹಿಂದೆ ಬಂದ ಮಾಹಿತಿ ಪ್ರಕಾರ, ನೀರವ್ ಮೋದಿ ಪಶ್ಚಿಮ ಲಂಡನ್‍ನಲ್ಲಿರುವ ಸೊಹೊ ಪ್ರದೇಶದಲ್ಲಿ ಹೊಸ ವಜ್ರದ ವ್ಯಾಪಾರ ಆರಂಭಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವಂಚಕ ನೀರವ್ ಮೋದಿಯನ್ನು ಬಂಧಿಸಲು ಭಾರತ ಸರ್ಕಾರ ಇಂಗ್ಲೆಂಡ್‍ಗೆ ಮನವಿ ಸಲ್ಲಿಸಿತ್ತು. ಈ ಕುರಿತು ಈಗ ಇಂಗ್ಲೆಂಡ್ ಆರೋಪಿ ನೀರವ್ ಮೋದಿ ವಿರುದ್ಧ ಇರುವ ದಾಖಲೆಗಳನ್ನು ನೀಡಿ, ನಂತರ ಅದನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುತ್ತೇವೆ ಎಂದು ಭಾರತಕ್ಕೆ ತಿಳಿಸಿತ್ತು. ಇದನ್ನೂ ಓದಿ:ದುಬಾರಿ ಜಾಕೆಟ್ ಧರಿಸಿ ಲಂಡನ್‍ನಲ್ಲಿ ನೀರವ್ ಮೋದಿ ಸುತ್ತಾಟ – ಪ್ರಶ್ನೆಗಳಿಗೆ ನೋ ಕಮೆಂಟ್ಸ್

    ವಿದೇಶದಲ್ಲಿ ಅಪರಾಧಿಗಳನ್ನು ಹಿಡಿಯಲು ಕಾನೂನು ನೆರವು ಬೇಗನೆ ಸಿಗುವುದಿಲ್ಲ, ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಕಾನೂನು ನೆರವು ಒಪ್ಪಂದದ ಪ್ರಕಾರ ಭಾರತದ ಗೃಹ ಸಚಿವಾಲಯ ನೇರವಾಗಿ ಲಂಡನ್‍ನ ಭಾರತೀಯ ಹೈಕಮಿಷನ್‍ಗೆ ಸಮನ್ಸ್ ಅಥವಾ ವಾರೆಂಟ್‍ಗಳನ್ನು ರವಾನಿಸಬಹುದು. ಬಳಿಕ ಅದನ್ನು ಲಂಡನ್‍ನ ಭಾರತೀಯ ಹೈಕಮಿಷನ್ ಅಲ್ಲಿನ ಕೇಂದ್ರ ಪ್ರಾಧಿಕಾರಕ್ಕೆ ವರ್ಗಾಯಿಸುತ್ತದೆ. ಈ ಪ್ರಕರಣದಲ್ಲಿ, ನೀರವ್ ಮೋದಿ ವಂಚನೆ ಮಾಡಿರುವ ಬಗ್ಗೆ ದಾಖಲೆ ನೀಡಿದರೆ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬ್ರಿಟನ್‍ನ ಕೇಂದ್ರೀಯ ಅಧಿಕಾರವು ತಿಳಿಸಿದೆ.

    ಏನಿದು ಪ್ರಕರಣ?:
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪರಾರಿಯಾಗಿದ್ದಾರೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ನವದೆಹಲಿ: ವಾಹನಗಳ ದಾಖಲೆಗಳನ್ನು ಸವಾರರು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ಪೊಲೀಸರಿಗೆ ತೋರಿಸಬಹುದೆಂದು ಕೇಂದ್ರ ಸರ್ಕಾರ ಡಿಜಿ ಲಾಕರ್ ಸೇವೆಗೆ ಅಧಿಕೃತ ಆದೇಶ ನೀಡಿದೆ.

    ಕೇಂದ್ರ ಸಾರಿಗೆ ಇಲಾಖೆಯು ದಾಖಲೆಗಳನ್ನು ಡಿಜಿ ಲಾಕರ್ ನಲ್ಲಿಯೇ ಪರಿಶೀಲಿಸಬಹುದೆಂದು ಮಾನ್ಯತೆ ನೀಡಿ, ಮಹತ್ವದ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ವಾಹನಸವಾರರು ಇನ್ನು ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ದಾಖಲೆ ಕೇಳಿದರೆ, ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸಿ ದಂಡ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದಾಗಿದೆ.

    ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಸ್ಮಾರ್ಟ್​ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದೆಂದು ಉಲ್ಲೇಖಿಸಲಾಗಿದೆ. ಸದ್ಯ ಇಲಾಖೆ ಡಿಜಿಲಾಕರ್ ​ಆ್ಯಪ್​ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಬಹುದಾಗಿದೆ.

    ಇದಲ್ಲದೇ ಕುಡಿದು, ಅಜಾಗರೂಕ ಚಾಲನೆ ಹಾಗೂ ಇನ್ನು ಮುಂತಾದ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸವಾರರ ಮೂಲ ಚಾಲನಾ ಪತ್ರವನ್ನು ಮುಟ್ಟುಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಅಧಿಕಾರಿಗಳು ಕಾನೂನು ರೀತಿ ಡಿಎಲ್ ಮತ್ತು ಆರ್ ಸಿ ಜಪ್ತಿಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 1 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ವಿಮೆ ಹಾಗೂ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.

    ಡಿಜಿ ಲಾಕರ್ ಪಡೆಯುವುದು ಹೇಗೆ?
    ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಪ್ಲೇ ಸ್ಟೋರ್ ಹಾಗೂ ಆಪಲ್ ಐಓಎಸ್ ಮುಖಾಂತರ ಡಿಜಿಲಾಕರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.

    ದಿನ ನಿತ್ಯ ಜೀವನದಲ್ಲಿ ಡಿಜಿ ಲಾಕರ್ ಉಪಯೋಗವೇನು?

    ಆಧಾರ್ ಮೂಲಕ ಡಿಜಿ ಲಾಕರ್ ಬಳಸುವುದು ಹೇಗೆ?

    https://youtu.be/27U4XUl-nyg

    ಡಿಜಿ ಲಾಕರ್ ನಲ್ಲಿ ದಾಖಲೆಗಳನ್ನು ಸಂಗ್ರಹಿಸುವುದು ಹೇಗೆ?

    https://youtu.be/7P17ZJdKmts

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews