Tag: ದಸರಾ

  • ವಿಜಯಪುರದಲ್ಲಿ ಉಪಮೇಯರ್ ದರ್ಬಾರ್- ದಸರಾ ದೇಣಿಗೆ ಕೊಡದ ಕೆಲಸಗಾರರ ಮೇಲೆ ಹಲ್ಲೆ

    ವಿಜಯಪುರದಲ್ಲಿ ಉಪಮೇಯರ್ ದರ್ಬಾರ್- ದಸರಾ ದೇಣಿಗೆ ಕೊಡದ ಕೆಲಸಗಾರರ ಮೇಲೆ ಹಲ್ಲೆ

    -ಸಿಸಿಟಿವಿಯಲ್ಲಿ ಸೆರೆಯಾಯ್ತು ಪುಂಡಾಟಿಕೆ

    ವಿಜಯಪುರ: ದಸರಾ ಹಬ್ಬದ ಪ್ರಯುಕ್ತ ದೇಣಿಗೆ ನೀಡದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಅವರ ಗುಂಡಾಗಿರಿ ನಡೆಸಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಮಹಾನಗರ ಪಾಲಿಕೆ ಉಪಮೇಯರ್ ರಾಜೇಶ್ ದೇವಗಿರಿ ಅವರು ದಸರಾ ಹಬ್ಬದ ಪ್ರಯುಕ್ತ ನಗರದ ಶಾಪೇಟೆಯಲ್ಲಿ ದೇವಿ ಪ್ರತಿಷ್ಠಾಪನೆಗೆ ದೇಣಿಗೆ ಕೇಳಲು ನಗರದ ಮಾರ್ಕೆಟ್ ನಲ್ಲಿರುವ ಶ್ರೀ ಸಾಯಿ ಮೊಬೈಲ್ ಅಂಗಡಿಗೆ ತೆರಳಿದ್ದಾರೆ. ಆಗ ಅಂಗಡಿಯ ಮಾಲೀಕ ಗಂಗಪ್ಪ ಹಂಚಿನಾಳ ಹೊರಗಡೆ ಹೋಗಿದ್ದಾರೆ ನಂತರ ಬನ್ನಿ ಅಂತಾ ತಮ್ಮ ಯಲ್ಲಪ್ಪ ಹಂಚಿನಾಳ ಹೇಳಿದ್ದಾರೆ. ಆಗ ಉಪಮೇಯರ್ ರಾಜೇಶ್ ದೇವಗಿರಿ ಮತ್ತು ಜೊತೆ ಬಂದಿದ್ದ 15 ಜನರು ಅಂಗಡಿಯಲ್ಲಿ ಮೂರು ಜನ ಇದ್ದರಿ ನಿಮ್ಮ ಹತ್ತಿರ 250 ರೂ. ಕೂಡ ಇಲ್ವಾ ಎಂದು ಅವಾಜ್ ಹಾಕಿದ್ದಾರೆ.

    ಯಲ್ಲಪ್ಪ ಮತ್ತು ಅಂಗಡಿಯ ಕೆಲಸಗಾರರು ಹಣ ಇಲ್ಲ ಅಂದಿದ್ದಾರೆ. ನಿಮಗೆ ಮಾಲೀಕ ಸಂಬಳ ಎಷ್ಟು ಕೊಡ್ತಾನೆ. ನಮ್ಮ ಜೊತೆ ದೇಣಿಗೆ ಕೇಳಲು ಬನ್ನಿ ಇದಕ್ಕಿಂತ ಹೆಚ್ಚು ಸಂಬಳ ಕೊಡುತ್ತೇವೆ ಎಂದು ಉಪಮೇಯರ್ ಜೊತೆ ಬಂದಿದ್ದ ಸಿದ್ದು ಎಂಬಾತ ಹೇಳಿದ್ದಾರೆ. ಇಷ್ಟಕ್ಕೆ ಇಬ್ಬರಲ್ಲು ಗಲಾಟೆ ಶುರುವಾಗಿದೆ. ಆಗ ನಮಗೆ ಈ ರೀತಿ ಮಾತಾಡತೀಯ ಅಂತಾ ಸಿಟ್ಟಿಗೆದ್ದ ಉಪಮೇಯರ್ ರಾಜೇಶ್ ಮತ್ತು ಸಿದ್ದು ಯಲ್ಲಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಈ ಎಲ್ಲ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಉಪಮೇಯರ್ ಗುಂಡಾಗಿರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಯಲ್ಲಪ್ಪ ದೂರು ದಾಖಲಿಸಿದ್ದು, ಗಾಯಾಳು ಯಲ್ಲಪ್ಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    https://youtu.be/modGIcWAOTI

  • ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಮೈಸೂರು: ಇಲ್ಲಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ನಾಡಹಬ್ಬ ದಸಾರ ಇನ್ನೇನು ಕೆಲ ದಿನಗಳಲ್ಲೇ ಆರಂಭವಾಗಲಿದ್ದು, ಮೃಗಾಲಯ ವೀಕ್ಷಕರಿಗೆ ಹೊಸ ಪ್ರಾಣಿಗಳ ದರ್ಶನವಾಗಲಿದೆ.

    ತಮಿಳುನಾಡಿನಿಂದ ಹೆಬ್ಬಾವು ಮತ್ತು ಮೊಸಳೆಗಳನ್ನು ತಂದು ಮೈಸೂರು ಮೃಗಾಲಯದಲ್ಲಿ ಬಿಡಲಾಗಿದೆ. ನಾಲ್ಕು ಇಂಡಿಯನ್ ರಾಕ್ ಪೈಥಾನ್ ಹಾಗೂ ಐದು ಗಾರಿಯಲ್ ಮೊಸಳೆಗಳ ಆಗಮನವಾಗಿದೆ.

    ಪ್ರಾಣಿ ವಿನಿಮಯ ಯೋಜನೆಯಡಿ ಈ ಹೊಸ ಪ್ರಾಣಿಗಳ ಆಗಮನವಾಗಿದ್ದು, ಆಗಮಿಸಿದ ಎಲ್ಲಾ ಪ್ರಾಣಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

    ನಾಡಹಬ್ಬ ದಸರಾ ಉತ್ಸವವನ್ನು ಈ ಬಾರಿಯೂ ಸಾಂಪ್ರದಾಯಿಕ ಮತ್ತು ಹೆಚ್ಚು ಜನಾಕರ್ಷಕವಾಗಿ ಆಚರಿಸಲಾಗುವುದು. ದಸರಾ ಉತ್ಸವ ಸೆಪ್ಟೆಂಬರ್ 21ರಿಂದ 30ರ ವರೆಗೆ ನಡೆಯಲಿದೆ. 21ರಂದು ಬೆಳಗ್ಗೆ 9.15ಕ್ಕೆ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ನೆರವೇರಲಿದೆ. ಜಂಬೂ ಸವಾರಿಯ ದಿನವಾದ 29ರಂದು ಮಧ್ಯಾಹ್ನ 1.15ರಿಂದ 1.43ರೊಳಗೆ ನಂದಿ ಧ್ವಜಕ್ಕೆ ಪೂಜೆ ಮತ್ತು 3.13ರಿಂದ 3.40ರೊಳಗೆ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರಿಗೆ ದಸರಾಗೆ ಆಗಮಿಸಿ ಉದ್ಘಾಟನೆ ನೆರವೇರಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಈಗಾಗಲೇ ಅಧಿಕೃತ ಆಹ್ವಾನ ನೀಡಿದ್ದಾರೆ.

     

  • ದಸರಾಗೆ ದಿನಗಣನೆ- ಹೊರರಾಜ್ಯದ ಪ್ರವಾಸಿಗರಿಗೆ ಸರ್ಕಾರದಿಂದ ಬಂಪರ್ ಆಫರ್

    ದಸರಾಗೆ ದಿನಗಣನೆ- ಹೊರರಾಜ್ಯದ ಪ್ರವಾಸಿಗರಿಗೆ ಸರ್ಕಾರದಿಂದ ಬಂಪರ್ ಆಫರ್

    ಬೆಂಗಳೂರು: ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಬರ್ತಾಯಿದ್ರೆ ಸಾಕು ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ದಸರಾ ಹಬ್ಬದ ವಿಜೃಂಭಣೆಯ ಆಚರಣೆ ಕಣ್ಣ ಮುಂದೆ ಬರುತ್ತೆ. ಈಗಾಗಲೇ ದಸರಾ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರೋ ಸರ್ಕಾರ ಹೊರ ರಾಜ್ಯದವರನ್ನು ಆಕರ್ಷಿಸಿಲು ಹೊಸ ಯೋಜನೆಯೊಂದನ್ನ ಘೋಷಣೆ ಮಾಡಿದೆ.

    ಈ ಬಾರಿ ಬರಗಾಲ ಇರೋದ್ರಿಂದ ಸರ್ಕಾರ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಿದ್ದರೂ ಜನ ಮಾತ್ರ ಅದ್ಧೂರಿ ದಸರಾಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಮೈಸೂರು ದಸರಾಗೆ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ಘೋಷಣೆ ಮಾಡಿರೋ ಸರ್ಕಾರ, ಒಂದು ಹೆಜ್ಜೆ ಮುಂದೆ ಹೋಗಿ ಇಂದಿನಿಂದಲೇ ಜಾರಿಗೆ ಬರುವಂತೆ ಹೊರ ರಾಜ್ಯದ ಟೂರಿಸ್ಟ್ ಟ್ಯಾಕ್ಸಿಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದೆ.

    ಈ ಬಗ್ಗೆ ಆದೇಶ ಹೊರಡಿಸಿರೋ ರಾಜ್ಯ ಸರ್ಕಾರ ದಿನಾಂಕ 9-9-2017 ರಿಂದ ದಿನಾಂಕ 9-10-2017 ರವರೆಗೆ ಒಂದು ತಿಂಗಳ ಕಾಲ ಹೊರ ರಾಜ್ಯದ ಟೂರಿಸ್ಟ್ ಟ್ಯಾಕ್ಸಿಗಳಿಗೆ ಯಾವುದೇ ರೀತಿಯ ತೆರಿಗೆಯನ್ನು ವಿಧಿಸಬಾರದು ಅಂತ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವನ್ನು ಕರ್ನಾಟಕ ಟ್ಯಾಕ್ಸಿ ಅಸೋಸಿಯೇಷನ್ ಸ್ವಾಗತಿಸಿದೆ. ನಮ್ಮ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿದಂತೆ ಪಕ್ಕದ ರಾಜ್ಯದವರು ಸಹ ಆಯಾ ರಾಜ್ಯದ ಪ್ರಮುಖ ಹಬ್ಬಗಳಿಗೆ ರಿಯಾಯಿತಿ ನೀಡಬೇಕು ಅಂತ ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ರಾಧಕೃಷ್ಣ ಹೋಳ್ಳ ಹೇಳಿದ್ದಾರೆ.

    ಒಟ್ಟಿನಲ್ಲಿ ಸರ್ಕಾರದ ಈ ನಿರ್ಧಾರದಿಂದ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದು ಬರಬಹುದಾದ ನಿರೀಕ್ಷೆ ಇದೆ.

  • ಅನಾಥ ಭೀಮ ಆಗಲಿದ್ದಾನೆ ಅರ್ಜುನನ ಉತ್ತರಾಧಿಕಾರಿ!

    ಅನಾಥ ಭೀಮ ಆಗಲಿದ್ದಾನೆ ಅರ್ಜುನನ ಉತ್ತರಾಧಿಕಾರಿ!

    ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗಿಯಾಗಿರುವ ಕಿರಿಯ ಆನೆ ಭೀಮ, ಭವಿಷ್ಯದಲ್ಲಿ ಗಜಪಡೆಯ ಕ್ಯಾಪ್ಟನ್ ಆಗಲಿದ್ದಾನೆ. ಒಂದರ್ಥದಲ್ಲಿ ಕ್ಯಾಪ್ಟನ್ ಅರ್ಜುನನಿಗೆ ಉತ್ತರಾಧಿಕಾರಿಯಾಗಿ ಭೀಮನನ್ನು ಬೆಳೆಸಲಾಗುತ್ತಿದೆ.

    ಅಂಬಾರಿ ಆನೆಗೆ ಇರಬೇಕಾದ ಅಗಲವಾದ ಬೆನ್ನು, ಎತ್ತರ, ದಂತ, ತೂಕ ಎಲ್ಲವೂ ಭೀಮನಲ್ಲಿ ಕಾಣುತ್ತಿವೆ. 17 ವರ್ಷದ ಭೀಮ ಇನ್ನೂ ಆರೇಳು ವರ್ಷಕ್ಕೆ ಅಂಬಾರಿ ಆನೆ ಆಗಲು ಬೇಕಾದ ಎಲ್ಲಾ ಗುಣಗಳನ್ನು ಹೊಂದಲಿದ್ದಾನೆ.

    ಇಂಥಹ ಭೀಮನ ಜೀವನ ಕಥೆಯೇ ರೋಚಕವಾಗಿದೆ. 1 ವರ್ಷದ ಮರಿ ಇದ್ದಾಗಲೇ ತಾಯಿಯನ್ನ ಕಳೆದುಕೊಂಡು ತಬ್ಬಲಿಯಾಗಿದ್ದ ಭೀಮ ಸತತ 16 ವರ್ಷಗಳಿಂದ ಆನೆ ಶಿಬಿರದಲ್ಲೇ ಬೆಳೆದಿದ್ದಾನೆ. ಮತ್ತಿಗೂಡು ಆನೆ ಕ್ಯಾಂಪ್‍ನಲ್ಲಿ ಬೆಳೆದಿರುವ ಭೀಮ ಆನೆ, ಹುಲಿ ಸೆರೆ ಕಾರ್ಯಾಚರಣೆ, ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಿಪುಣತೆ ಸಾಧಿಸಿದ್ದಾನೆ.

     

    ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನ ಹೊಂದಿರುವ ಭೀಮನಿಗೆ ದಸರಾದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ. ಈ ಬಾರಿ ಉತ್ತಮ ರೀತಿಯಲ್ಲಿ ನಡವಳಿಕೆ ಇದ್ದರೆ ಮುಂದಿನ ವರ್ಷಗಳಲ್ಲಿ ಭೀಮನಿಗೆ ಆದ್ಯತೆ ಇನ್ನೂ ಹೆಚ್ಚಾಗಲಿದೆ. ಅನಾಥನಾದರೂ ಮಾವುತರು ಹಾಗೂ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿರುವ ಭೀಮ, ಈ ಬಾರಿ ಮೆರವಣಿಗೆ ಹಾಗೂ ಸಿಡಿಮದ್ದಿನ ಶಬ್ದಕ್ಕೆ ಹೆದರದಿದ್ದರೆ ಪರೀಕ್ಷೆಯಲ್ಲಿ ಪಾಸಾಗಿ, ಮುಂದಿನ ಬಾರಿಯಿಂದ ಭಾರ ಹೊರಿಸಿ ತಾಲೀಮಿನಲ್ಲಿ ತೊಡಗಲಿದ್ದಾನೆ.

  • ಮೈಸೂರು- ಚೆನ್ನೈ ನಡುವೆ ಹಾರಾಡಲಿವೆ ಹೊಸ ವಿಮಾನಗಳು

    ಮೈಸೂರು- ಚೆನ್ನೈ ನಡುವೆ ಹಾರಾಡಲಿವೆ ಹೊಸ ವಿಮಾನಗಳು

    ಮೈಸೂರು: ನಾಡಹಬ್ಬ ದಸರೆಗೆ ಮುನ್ನ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ವಿಶೇಷ ವಿಮಾನಗಳು ಹಾರಾಡಲಿವೆ. ಉಡೇ ದೇಶ್ ಕಾ ಆಮ್ ನಾಗರಿಕ್(ಉಡಾನ್) ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನ ಸಂಪರ್ಕಕ್ಕೆ ನಿರ್ಧಾರ ಮಾಡಲಾಗಿದೆ.

    ಸೆಪ್ಟೆಂಬರ್ ಮೊದಲ ವಾರದಿಂದ ವಿಮಾನಗಳು ತಮ್ಮ ಹಾರಾಟ ಆರಂಭಿಸಲಿವೆ. ಹಗಲಿನ ವೇಳೆಯಲ್ಲಿ ಒಂದು ರಾತ್ರಿ ವೇಳೆಯಲ್ಲಿ ಮತ್ತೊಂದು ವಿಮಾನ ಹಾರಾಟ ನಡೆಸಲಿದೆ. ಹಗಲು ವೇಳೆ ಸಂಚರಿಸುವ ವಿಮಾನ ಒಟ್ಟು 72 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ರಾತ್ರಿ ವೇಳೆ 19 ಆಸನ ಸಾಮರ್ಥ್ಯದ ವಿಮಾನ ಹಾರಟ ನಡೆಸಲಿದೆ.

    ಸಮಯ ಹೀಗಿದೆ: ಬೆಳಗ್ಗೆ 10 ರಿಂದ 12 ಗಂಟೆ ಅವಧಿಯಲ್ಲಿ ಟ್ರೂಜೆಟ್ ಸಂಸ್ಥೆಯ ಒಂದು ವಿಮಾನ ಲಭ್ಯವಿರುತ್ತದೆ. ಇನ್ನೂ ರಾತ್ರಿ ವೇಳೆ 8.45 ರಿಂದ 9 ಗಂಟೆ ಅವಧಿಯಲ್ಲಿ ಏರ್ ಒಡಿಶಾ ಸಂಸ್ಥೆಯ ವಿಮಾನ ಲಭ್ಯವಿರುತ್ತದೆ. ಪ್ರತಿ ಪ್ರಯಾಣಕ್ಕೆ 2500 ರೂ.ಯನ್ನು ನಿಗದಿ ಮಾಡಲಾಗಿದೆ.

    ಈ ವಿಶೇಷ ವಿಮಾನಯಾಣ ದಸರೆಯ ನಂತರ ಸ್ಥಗಿತಗೊಳ್ಳುವುದಿಲ್ಲ. ಉಡಾನ್ ಯೋಜನೆಯಡಿಯಲ್ಲಿ ಈ ಎರಡು ವಿಮಾನಗಳು 3 ವರ್ಷಗಳ ಕಾಲ ಹಾರಾಟ ನಡೆಸಲಿವೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

     

  • ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ವೀರಗಾಸೆ, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಚೂಢ, ಕುಷ್ಮಾಂದ, ಸ್ಕಂದಮಾತ, ಕಾತ್ಯಾಯಿನಿ, ಸರಸ್ವತಿ, ದುರ್ಗಾಮಾತೆ, ಸಿದ್ಧಿಧತ್ರಿ ದೇವಿಗಳ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು ಖುಷಿಯ ಅಲೆಯಲ್ಲಿ ತೇಲಿದರು. ನಂತರ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬಕ್ಕೆ ಮುನ್ನುಡಿ ಬರೆದ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು. ಆವರಣದಲ್ಲಿ ವಿಶೇಷವಾಗಿ ರಚಿಸಿದ್ದ ಹೂವಿನ ಅಲಂಕಾರವುಳ್ಳ ರಂಗೋಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

    ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಹತ್ತು ಅವತಾರ ಬಿಂಬಿಸುವ ವೇಷದೊಂದಿಗೆ ನರ್ತಿಸಿ ಕೃಷ್ಣಾಷ್ಟಮಿ ನೆನಪಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರು ಕೊಡಗಿನ ಹುತ್ತರಿ ಹಬ್ಬ, ಕಾವೇರಮ್ಮ ಮತ್ತು ಈಶ್ವರನ ಪೂಜೆ, ಭತ್ತದ ಗದ್ದೆಯಲ್ಲಿ ಸುಗ್ಗಿಯೊಂದಿಗೆ ಕೊಡವರ ಸಾಂಪ್ರದಾಯಿಕ ಕುಣಿತವನ್ನ ಪ್ರದರ್ಶಿಸಿದ್ರು. ಅಂತಿಮ ಬಿ.ಕಾಂ ತಂಡ ಕುಡ್ಲದ ಪರ್ಬಕೋಲ ಪೂಜೆಯೊಂದಿಗೆ ಕೋಲ ಕಟ್ಟಿ ಕುಣಿದರು.

    ಗಾಯಕಿ ರೇಖಾ ಪ್ರೇಮ್‍ಕುಮಾರ್ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ, ಕಾಲೇಜು ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಗೀತಾ, ಸುಷ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.