ಮೈಸೂರು: ವಿಶ್ವವಿಖ್ಯಾತ ದಸರಾ ಹಬ್ಬ ಈಗಾಗಲೇ ಶುರುವಾಗಿದ್ದು, ಅರಮನೆ ಮುಂದೆ ಹಲವು ತಯಾರಿಗಳು ನಡೆಯುತ್ತಿವೆ. ಅದರಲ್ಲಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಇನ್ನು ನಾಲ್ಕು ದಿನಗಳು ಬಾಕಿ ಇರುವಾಗಲೇ ಇಂದು ಅರಮನೆ ಮೈದಾನದಲ್ಲಿ ಆನೆಗಳ ತಾಲೀಮು ಭರ್ಜರಿಯಾಗಿ ನಡೆಯಿತು.

ಮೈಸೂರಿನ ಎಸಿಪಿ ಶೈಲೇಂದ್ರ ಮತ್ತು ಇನ್ಸ್ ಪೆಕ್ಟರ್ ಚಂದ್ರಶೇಖರ್ ಅಂಬಾರಿ ಹೋರುವ ಅರ್ಜುನನಿಗೆ ಪುಷ್ಪ ಎರಚುವ ಮೂಲಕ ಆನೆಗಳ ತಾಲಿಮಿಗೆ ಚಾಲನೆ ನೀಡಿದರು. ವಿಜಯದಶಮಿಯಂದು ಅಂಬಾರಿ ಹೊರುವ ಅರ್ಜುನ ಮತ್ತು ಸಾಥ್ ನೀಡುವ ಆನೆಗಳಿಗೆ ಸರತಿ ಸಾಲಿನ ಪೂರ್ವನಿಗದಿಗಾಗಿ ಇಂದು ತಾಲೀಮು ಕಾರ್ಯ ನಡೆಯಿತು. ಇಂದು ನಿಗದಿಯಾಗಿದ್ದ ಮರದ ಅಂಬಾರಿ ಹೋರುವ ತಾಲಿಮನ್ನು ರದ್ದುಗೊಳಿಸಲಾಯಿತು. ಅಂಬಾರಿ ನಡೆಯುವ ಸಮಯದಲ್ಲಿ ಯಾವುದೇ ರೀತಿಯ ಅಡಚಣೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ತಾಲೀಮು ಕಾರ್ಯ ನಡೆಯುತ್ತದೆ.

ವಿಜಯ ದಶಮಿಯಂದು ಅಂಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ. ಇನ್ನೂ ತಾಲೀಮಿನ ವೇಳೆ ಕೆ.ಎಸ್.ಆರ್.ಪಿ, ಡಿ.ಎ.ಆರ್, ಸಿ.ಎ.ಆರ್, ಅಶ್ವರೋಹಿ ದಳ, ಹೋಮ್ ಗಾರ್ಡ್ ಸಿಬ್ಬಂದಿಗಳ ಪೂರ್ವ ಪಥಸಂಚಲನವೂ ಕೂಡ ನಡೆಯಿತು.






































