Tag: ದಸರಾ

  • ಜಂಬೂ ಸವಾರಿ ವೇಳೆ ಭಯಗೊಂಡ ವಿಜಯಾ ಆನೆ: ವಿಡಿಯೋ ನೋಡಿ

    ಜಂಬೂ ಸವಾರಿ ವೇಳೆ ಭಯಗೊಂಡ ವಿಜಯಾ ಆನೆ: ವಿಡಿಯೋ ನೋಡಿ

    ಮೈಸೂರು: ಜಂಬೂ ಸವಾರಿ ವೇಳೆ ವಿಜಯಾ ಆನೆ ಭಯಗೊಂಡ ಘಟನೆ ನಡೆದಿದೆ.

    ಜಂಬೂಸವಾರಿ ಸಾಗುತ್ತಿದ್ದ ವೇಳೆ ಪೊಲೀಸ್ ಕುದುರೆಗಳ ನೋಡಿ ವಿಜಯಾ ಆನೆ ಭಯಗೊಂಡು ಗಲಿಬಿಲಿಯಾಗಿತ್ತು. ಕೂಡಲೇ ಮಾವುತ ವಿಜಯಾ ಆನೆಯನ್ನು ನಿಯಂತ್ರಿಸಿದರು.

    ಸಂಪುಟ ಸಹೋದ್ಯೋಗಿಗಳ ಜತೆ ವೋಲ್ವೋ ಬಸ್‍ನಲ್ಲಿ ಬಂದ ಸಿಎಂ ಸಿದ್ದರಾಮಯ್ಯ, ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ಸಲ್ಲಿಸಿದರು.  ನಂದಿಧ್ವಜ ಪೂಜೆಯ ಮೂಲಕ ವೈಭವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿತು.

    ಪೂಜೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವರ್ಷವೂ ನಾನೇ ದಸರಾ ಪೂಜೆ ಮಾಡ್ತೇನೆ. ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

    https://youtu.be/I05j3rIJEqk

     

  • ಮಡಿಕೇರಿ ದಸರಾ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭ

    ಮಡಿಕೇರಿ ದಸರಾ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭ

    ಮಡಿಕೇರಿ: ರಾಜ್ಯದ ಜನ ಮೈಸೂರು ದಸರಾ ಜಂಬೂ ಸವಾರಿಯನ್ನು ನೋಡಲು ಕಾತರರಾಗಿದ್ದರೆ, ಮಂಜಿನ ನಗರಿ ಮಡಿಕೇರಿಯ ಜನರು ಮಾತ್ರ ಐತಿಹಾಸಿಕ ದಶಮಂಟಪಗಳ ಪ್ರದರ್ಶನಕ್ಕಾಗಿ ಸಿದ್ಧತೆಯನ್ನು ಪೂರ್ಣಗೊಳಿಸಿ ಉತ್ಸವ ನೋಡಲು ರೆಡಿಯಾಗುತ್ತಿದ್ದಾರೆ.

    ನಗರದ ಪ್ರಮುಖ 10 ದೇವಾಲಯಗಳಲ್ಲಿ ಈಗಾಗಾಲೇ ಸಿದ್ಧ ಗೊಂಡಿರುವ ದಶಮಂಟಪಗಳ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾದುಕುಳಿತಿದ್ದಾರೆ. ಈ ಬಾರಿಯ ಮೆರವಣಿಗೆಯಲ್ಲಿ ಅನಂತ ಪದ್ಮನಾಭ, ಶ್ರೀ ಕೃಷ್ಣನಿಂದ ದೇವೇಂದ್ರನ ಗರ್ವಭಂಗ, ಚಾಮುಂಡೇಶ್ವರಿಯಿಂದ ಮಹಿಷಾಸುರನ ವಧೆ, ಲಲಿತಾಂಬಿಕೆಯಿಂದ ಭಂಡಾಸುರನ ವಧೆ, ರಾಮಾಂಜನೇಯರಿಂದ ರಾವಣನ ಸಂಹಾರ, ವಿನಾಯಕನಿಂದ ತಾಳಾಸುರನ ಗರ್ವಭಂಗ, ಹೀಗೆ ನಾನಾ ಕಥಾ ಭಾಗಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೃಹತ್ ಧ್ವನಿ ಬೆಳಕಿನ ಸಂಯೋಜನೆಗಳೊಂದಿಗೆ ತಯಾರಿಸಲಾಗಿರುವ ಈ ಸ್ತಬ್ಧಚಿತ್ರಗಳು ಎಲ್ಲರನ್ನೂ ಬೆರಗುಗೊಳಿಸಲಿದೆ.

    ದಶಮಂಟಪಗಳ ಸ್ತಬ್ಧಚಿತ್ರ ಪ್ರದರ್ಶನವು ಇಂದು ರಾತ್ರಿ 11 ಗಂಟೆ ನಂತರ ಆರಂಭಗೊಳ್ಳಲಿದ್ದು, ನಗರದ ಹಲವೆಡೆ ಸಂಚರಿಸಿ ಮುಂಜಾನೆವರೆಗೂ ಪ್ರದರ್ಶನ ನೀಡಲಿವೆ. ದಶಮಂಟಪಗಳನ್ನು ಸಿದ್ಧಗೊಳಿಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ತಯಾರಿಸಲಾಗಿದೆ. ಹಗಲಿನಲ್ಲಿ ಮೈಸೂರು ದಸರಾ ಜನರನ್ನು ಆಕರ್ಷಿಸಿದರೆ, ಮಡಿಕೇರಿ ದಸರಾ ರಾತ್ರಿಯ ಕತ್ತಲನ್ನು ವರ್ಣರಂಜಿತಗೊಳಿಸಲಿದೆ.

    ಅಷ್ಟೇ ಅಲ್ಲದೇ ಮಡಿಕೇರಿಯ ದಸರಾ ಮತ್ತೊಂದು ವಿಶೇಷವಾದ ಪೌರಾಣಿಕ ಹಿನ್ನೆಲೆಯ ಕತೆಗಳ ಪ್ರದರ್ಶನವು ನಡೆಯಲಿದೆ. ಈಗಾಗಲೇ ಮಡಿಕೇರಿಯ ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿ ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದು, ಮಡಿಕೇರಿಯ ವಿಶಿಷ್ಟ ಸಂಸ್ಕೃತಿಯ ಅನುಭವವನ್ನು ಪಡೆಯಲಿದ್ದಾರೆ.

     

  • ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲೂ ರಾಜಕೀಯ- ಸರ್ಕಾರ ಸಾಧನೆ ಬಿಂಬಿಸುವ ಟ್ಯಾಬ್ಲೋ ರೆಡಿ

    ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲೂ ರಾಜಕೀಯ- ಸರ್ಕಾರ ಸಾಧನೆ ಬಿಂಬಿಸುವ ಟ್ಯಾಬ್ಲೋ ರೆಡಿ

    ಮೈಸೂರು: ದಸರಾದ ಪ್ರಮುಖ ವಿಶೇಷ ಆಕರ್ಷಣೆ ಜಂಬೂ ಸವಾರಿಯಾದರೆ ನಂತರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವುದು ಸ್ತಬ್ಧಚಿತ್ರ ಪ್ರದರ್ಶನ. ಈ ಬಾರಿಯೂ ಪ್ರತಿ ವರ್ಷದಂತೆ ದಸರಾ ಸ್ತಬ್ಧಚಿತ್ರ ಪ್ರದರ್ಶನ ಕೈಗೊಳ್ಳಲಾಗಿದೆ. ಆದರೆ ಬಾರಿಯ ಸ್ತಬ್ಧಚಿತ್ರ ಪ್ರದರ್ಶನದ ಮೇಲೆ ಮುಂದಿನ ವಿಧಾನ ಸಭೆ ಚುನಾವಣೆಯ ಬಿಸಿ ತಟ್ಟಿದ್ದು, ಸರ್ಕಾರದ ಸಾಧನೆಯನ್ನು ಬಿಂಬಿಸುವಂತಹ ಸ್ತಬ್ಧಚಿತ್ರಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆ.

    ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟು 40 ಸ್ತಬ್ಧಚಿತ್ರಗಳು ಸಾಗಲಿದ್ದು, ರಾಜ್ಯದ ವಿವಿಧ ಕಲೆ, ಸಂಸ್ಕøತಿಯನ್ನು ಬಿಂಬಿಸುವ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತಬ್ಧಚಿತ್ರಗಳು ಸಿದ್ಧವಾಗಿದೆ.

    ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಮುಖವಾಗಿ ಬೆಂಗಳೂರು ಜಿಲ್ಲೆಯ ಇಂದಿರಾ ಕ್ಯಾಂಟೀನ್ ಸ್ತಬ್ಧಚಿತ್ರ, ದಾವಣಗೆರೆ ಜಿಲ್ಲೆಯ ಸ್ವಚ್ಛ ಭಾರತ್ ಮಿಷನ್ ಸ್ತಬ್ಧಚಿತ್ರ, ಹಾವೇರಿ ಜಿಲ್ಲೆಯ ಕನಕದಾಸರ ಅರಮನೆ ಬಾಡಾದ ಸ್ತಬ್ಧಚಿತ್ರ ಹಾಗೂ ವಾರ್ತಾ ಇಲಾಖೆಯ ನುಡಿದಂತೆ ನಡೆದಿದ್ದೇವೆ ಅನ್ನೋ ಸರ್ಕಾರದ ಘೋಷವಾಕ್ಯ ಸ್ತಬ್ಧಚಿತ್ರ ಈ ಬಾರಿಯ ವಿಶೇಷವಾಗಿ ಕಾಣಿಸಲಿವೆ.

    ಇನ್ನುಳಿದಂತೆ ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ರಾಯಚೂರು ಜಿಲ್ಲೆಯ ಚಿಕ್ಕಬೂದುರು ಬಹು ಕಮಾನ್ ಚೆಕ್ ಡ್ಯಾಂ, ಬಾದಾಮಿಯ ಭೂತನಾಥ ದೇವಾಲಯ, ಬೀದರ ಜಿಲ್ಲೆಯ ಮಾಡಿವಾಳ ಮಾಚಿ ದೇವರ ಹೊಂಡ ಬಸವ ಕಲ್ಯಾಣ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.

  • ಚಾಮುಂಡಿ ತಾಯಿಗೆ ಸಿಎಂ ಪತ್ನಿ ಕೊಟ್ಟ ಸೀರೆ

    ಚಾಮುಂಡಿ ತಾಯಿಗೆ ಸಿಎಂ ಪತ್ನಿ ಕೊಟ್ಟ ಸೀರೆ

    ಮೈಸೂರು: ಕಳೆದ ದಿನ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ನಾನು ಕೊಡುವ ಸೀರೆಯನ್ನೇ ತಾಯಿ ಚಾಮುಂಡಿಗೆ ಉಡಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಎಷ್ಟೇ ಆದರೂ ಸಿಎಂ ಪತ್ನಿ ಅಲ್ಲವೇ ಆದ್ದರಿಂದ ಅವರ ಒತ್ತಾಯಕ್ಕೆ ಮಣಿದು ಇಂದು ಉತ್ಸವ ಮೂರ್ತಿ ದೇವಿ ಚಾಮುಂಡಿಗೆ ಅವರು ನೀಡಿರುವ ಸೀರೆಯನ್ನೇ ಉಡಿಸಿ ಅಲಂಕರಿಸಲಾಗಿದೆ.

    ಇಂದು ನಾಡಹಬ್ಬ ಜಂಬು ಸವಾರಿ. ಆದ್ದರಿಂದ ಚಿನ್ನದ ಅಂಬಾರಿಯೊಳಗೆ ಕೂರಿಸಲಾಗುವ ಉತ್ಸವ ಮೂರ್ತಿ ಸಿದ್ಧವಾಗಿದೆ. ಸಿಎಂ ಪತ್ನಿ ಪತಿ ಸಿದ್ದರಾಮಯ್ಯ ಅವರಿಗೆ ಒಳ್ಳೆದಾಗಲಿ ಎಂದು ಹರಕೆ ಮಾಡಿಕೊಂಡು ಸೀರೆ ನೀಡಿದ್ದಾರೆ. ಅವರು ಸೀರೆಯನ್ನೇ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ತಾಯಿ ಚಾಮುಂಡಿಗೆ ಉಡಿಸಿದ್ದಾರೆ. ಸೀರೆ ಕೆಂಪು ಪಟ್ಟಿ ಉಳ್ಳ ನೀಲಿ ಬಣ್ಣದ ರೇಷ್ಮೆ ಸೀರೆಯಾಗಿದೆ.

    ಕಳೆದ 15 ವರ್ಷಗಳಿಂದ ಈ ಉತ್ಸವ ಮೂರ್ತಿಗೆ ಬೆಂಗಳೂರಿನ ಬಳೆಪೇಟೆಯ ವ್ಯಕ್ತಿ ಸೀರೆ ನೀಡುತ್ತಿದ್ದರು. ಆದರೆ ಈ ಬಾರಿ ಸಿಎಂ ಪತ್ನಿಯವರ ಒತ್ತಡಕ್ಕೆ ಹೇರಿ ಅವರು ನೀಡಿರುವ ಸೀರೆಯನ್ನೇ ಉಡಿಸಲಾಗಿದೆ.

  • ಡೈಲಾಗ್ ಮೂಲಕ ಯಾರು ಯಾರಿಗೂ ಕೊಡಲ್ಲ ಟಾಂಗ್ – ಫ್ಯಾನ್ಸ್ ಗೆ ತಾರಕ್ ದರ್ಶನ್ ಸ್ಪಷ್ಟನೆ

    ಡೈಲಾಗ್ ಮೂಲಕ ಯಾರು ಯಾರಿಗೂ ಕೊಡಲ್ಲ ಟಾಂಗ್ – ಫ್ಯಾನ್ಸ್ ಗೆ ತಾರಕ್ ದರ್ಶನ್ ಸ್ಪಷ್ಟನೆ

    ಮೈಸೂರು: ದಸರಾ ಗಂದಧಗುಡಿ ಸ್ಟಾರ್ ನೈಟ್ ನ ಶುಕ್ರವಾರ ಮುಖ್ಯ ಆಕರ್ಷಣೆಯಾಗಿದ್ದು ನಟ ದರ್ಶನ್. ದರ್ಶನ್ ಸ್ಟೇಜ್ ಮೇಲೆ ಬರ್ತಿದ್ದ ಹಾಗೆ ಅಭಿಮಾನಿಗಳು, ಯುವಕರು ಹುಚ್ಚೆದ್ದು ಕುಣಿದರು.

    ಈ ವೇಳೆ ದರ್ಶನ್ ಸಿನಿಮಾದಲ್ಲಿ ಯಾವ ಹೀರೋಗಳು ಯಾರಿಗೂ ಕೌಂಟರ್ ಕೊಡಲ್ಲ. ರೈಟರ್ ಬರೆದುಕೊಟ್ಟಿದ್ದನ್ನು ನಾವು ಹೇಳ್ತಿವಿ. ಡೈರಕ್ಟರ್ ಚೆನ್ನಾಗಿ ಬರುವಂತೆ ಡೈಲಾಗ್ ಗಳನ್ನು ಬರೆಸಿರುತ್ತಾರೆ. ನಾವು ಆ ಡೈಲಾಗ್ ಚೆನ್ನಾಗಿದೆ ಅಂತಾ ಹೇಳುತ್ತೇವೆ. ನಮಗೆ ನಿಜವಾಗಲೂ ಬೇರೆ ಯಾರೋ ಈ ರೀತಿಯ ಡೈಲಾಗ್ ಹೇಳಿರುವ ಬಗ್ಗೆ ಗೊತ್ತಿರುವುದಿಲ್ಲ ಎಂದು ದರ್ಶನ್ ಅಭಿಮಾನಿಗಳಿಗೆ ಸ್ಪಷ್ಟಣೆ ನೀಡಿದರು.

    ಇನ್ನು ತುಪ್ಪದ ಬೆಡಗಿ ರಾಗಿಣಿ ಸ್ಟೆಪ್ಸ್ ಹಾಕಿ ಮನರಂಜಿಸಿದರೆ ಹರ್ಷಿಕಾ ಪೂಣಚ್ಚ ಸಖತ್ ಡ್ಯಾನ್ಸ್ ಮಾಡಿದರು. ಸಾಧು ಕೋಕಿಲ ಸಿಎಂ ಸಿದ್ದರಾಮಯ್ಯಗೆ ಒಳಿತು ಮಾಡು ಮನುಷ ಹಾಡನ್ನು ಅರ್ಪಣೆ ಮಾಡಿದರು. ಸೃಜನ್ ಲೋಕೇಶ್, ಆದಿತ್ಯ, ದಿಗಂತ್, ಧೃವ ಸರ್ಜಾ ಸೇರಿದಂತೆ ಸ್ಟಾರ್ ನಟರು ಭಾಗವಹಿಸಿದರು.

  • ಶಾಸ್ತ್ರಿಯಂತೆ ರಾಷ್ಟ್ರದ ಮಹಾನ್ ನಾಯಕನಿಗೆ ವಿಷಪ್ರಾಶನ: ಕೋಡಿ ಶ್ರೀ ಭವಿಷ್ಯ

    ಶಾಸ್ತ್ರಿಯಂತೆ ರಾಷ್ಟ್ರದ ಮಹಾನ್ ನಾಯಕನಿಗೆ ವಿಷಪ್ರಾಶನ: ಕೋಡಿ ಶ್ರೀ ಭವಿಷ್ಯ

    ಧಾರವಾಡ: ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ರೀತಿಯಲ್ಲಿಯೇ, ಈ ದೇಶದಲ್ಲಿ ಮತ್ತೊಬ್ಬ ಮಹಾನ್ ನಾಯಕನ ಅವನತಿಯಾಗುತ್ತದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ದಸರಾ ಜಂಬೂ ಸವಾರಿ ಉತ್ಸವಕ್ಕೆ ಆಗಮಿಸಿದ್ದ ಶ್ರೀಗಳು, ರಾಷ್ಟ್ರ ರಾಜಕಾರಣದ ಬಗ್ಗೆ ಈಗಲೇ ಮಾತನಾಡಲ್ಲ ಆದರೆ ಹಿಂದೆ, ಚೋಟು ಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷಪಾನ ಮಾಡುತ್ತಾನೆ’ ಎಂದು ಹೇಳಿದ್ದೆ. ಈ ಹೇಳಿಕೆಯ ಬಳಿಕ ಆಗ ತಾಷ್ಕೆಂಟ್ ನಲ್ಲಿ ಲಾಲಬಹದ್ದೂರ್ ಶಾಸ್ತ್ರಿ ಅವರ ಸಾವು ಸಂಭವಿಸಿತ್ತು. ಈಗ ಅಂಥದ್ದೇ ಘಟನೆ ಈ ದೇಶದಲ್ಲಿ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದರು.

    ರಾಜ್ಯ ಸರ್ಕಾರ ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ತರುತ್ತಿರುವದು ಸ್ವಾಗತಾರ್ಹ. ಜನರು ಮೊದಲಿನಿಂದಲೂ ಸತ್ಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕೆಲವರು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಜನರ ಸುಲಿಗೆ ಮಾಡುತ್ತಿದ್ದಾರೆ. ಹಾಗಾಗಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದರು. ಈ ಕಾಯ್ದೆ ಬಂದರೆ ಸತ್ಯ ಉಳಿಯುತ್ತದೆ. ಇನ್ನೂ ಜನವರಿವರೆಗೆ ಇದೇ ರೀತಿ ಅಕಾಲಿಕ ಮಳೆಯಾಗಲಿದೆ ಎಂದು ಹೇಳಿದರು.

    ಶಾಸ್ತ್ರಿ ಮೃತಪಟ್ಟಿದ್ದು ಹೇಗೆ?
    ಪಾಕಿಸ್ತಾನ ವಿರುದ್ಧದ ಎರಡನೇ ಯುದ್ಧದಲ್ಲಿ ಭಾರತ ಜಯಗಳಿಸಿತ್ತು. ಈ ವೇಳೆ ಎರಡು ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ 1966 ಜನವರಿ 10 ರಂದು ರಷ್ಯಾದ ತಾಷ್ಕೆಂಟ್‍ನಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಪಾಕಿಸ್ತಾನದ ಅಂದಿನ ಅಧ್ಯಕ್ಷರಾದ ಆಯೂಬ್ ಖಾನ್ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಈ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು. ಉಭಯ ದೇಶಗಳ ನಾಯಕರು ರಷ್ಯಾದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

    ಶಾಸ್ತ್ರಿ ಅವರು ಸಹಿ ಹಾಕಿದ ಗಂಟೆಯಲ್ಲೇ ಹೃದಯಾಘಾತದಿಂದ ಸಾವನ್ನಪಿದ್ದರು. ರಷ್ಯಾ ವೈದ್ಯರು ಕೂಡ ಶಾಸ್ತ್ರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದರು. ಆದರೆ ಶಾಸ್ತ್ರಿಯವರ ಕುಟುಂಬದ ನಿಕಟವರ್ತಿಯಾಗಿದ್ದ ಪತ್ರಕರ್ತ ಕುಲದೀಪ್ ನಯ್ಯರ್ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ವಿಷಪ್ರಾಶನ ಮಾಡಿ ಹತ್ಯೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಶಾಸ್ತ್ರಿ ಕುಟುಂಬದ ಸದಸ್ಯರು ರಷ್ಯಾದಲ್ಲಿ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದ್ದರು. ಒಟ್ಟಿನಲ್ಲಿ ಇಲ್ಲಿಯವರೆಗೂ ಶಾಸ್ತ್ರಿ ಮೃತಪಟ್ಟ ವಿಚಾರ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

  • 56 ವರ್ಷಗಳ ಬಳಿಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗ್ತಿದೆ ಅರಮನೆ ಆವರಣ

    56 ವರ್ಷಗಳ ಬಳಿಕ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗ್ತಿದೆ ಅರಮನೆ ಆವರಣ

    ಮೈಸೂರು: ದಸರಾ ಎಂದರೇನೆ ಏನೋ ವಿಶೇಷತೆ ಇರುತ್ತದೆ. ಪ್ರತಿ ಬಾರಿಯ ದಸರಾ ಹಲವು ವಿಶೇಷೆಗಳ ಮೂಲಕ ಗಮನ ಸೆಳೆಯುತ್ತದೆ. ಆದರೆ ಈ ಬಾರಿಯ ದಸರಾ ಆಚರಣೆಯಲ್ಲಿ ಅರಮನೆಯಲ್ಲಿ ವಿಶೇಷ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ.

    ಎಲ್ಲರಿಗೂ ತಿಳಿದಿರುವ ಹಾಗೇ ಮೈಸೂರು ಮಹಾರಾಣಿ ತ್ರಿಶಿಕಾ ತುಂಬುಗರ್ಭಿಣಿಯಾಗಿದ್ದು, ಅರಮನೆಯ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭವು 56 ವರ್ಷಗಳ ಬಳಿಕ ಬಳಿ ಕೂಡಿ ಬರುತ್ತಿರುವ ಅಪರೂಪದ ಸನ್ನಿವೇಶವಾಗಿದೆ.

    ಹಿಂದೆ 1961ರಲ್ಲಿ ಮಹಾರಾಣಿ ತ್ರಿಪುರಸುಂದರ ಅಮ್ಮಣಿಯಾವರು(ಜಯ ಚಾಮರಾಜ ಒಡೆಯರ್ ಮಡದಿ) ದಸರಾ ಸಂದರ್ಭದಲ್ಲಿ ಗರ್ಭಿಣಿ ಆಗಿದ್ದ ಸಮಯದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಅಂದರೆ 1890ರಲ್ಲಿ ಮಹಾರಾಣಿ ವಾಣಿ ವಿಲಾಸ ಅಮ್ಮಣ್ಣಿಯವರು ದಸರಾ ಸಂದರ್ಭದಲ್ಲಿ ಗಭಿರ್ಣಿಯಾಗಿದ್ದರು.

  • ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಆರಂಭ

    ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಆರಂಭ

    ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಆರಂಭವಾಗಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳ ಪೂಜೆ ನೆರವೇರಲಿದ್ದು, ರಾಜ ಪರಿವಾರದವರು ಪಂಚಲೋಹದ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತಂದಿದ್ದಾರೆ.

    ಕೋಡಿ ಸೋಮೇಶ್ವರ ದೇವಾಲಯಕ್ಕೆ ರಾಜ ಕುಟುಂಬದವರು ಆಗಮಿಸಿದ್ದಾರೆ. ಇಲ್ಲಿ ಮೊದಲ ಪೂಜೆಯನ್ನು ನಡೆಸಿ ನಂತರ ಯದುವೀರ್ ಅವರಿಂದ ಅರಮನೆಯ ಒಳಭಾಗದ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನಡೆಯಲಿದೆ.

    ಆಯುಧ ಪೂಜೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಅರ್ಜುನ ನೇತೃತ್ವದ ದಸರಾ ಗಜಪಡೆಯ ಎಲ್ಲಾ ಆನೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು.

    ಅರಮನೆ ಕಲ್ಯಾಣ ಮಂಟಪ ಆಯುಧ ಪೂಜೆಗೆ ಸಿದ್ಧವಾಗಿದೆ ಹಾಗೂ ಕಲ್ಯಾಣ ಮಂಟಪದಲ್ಲಿ ಪಟ್ಟದ ಕತ್ತಿ, ಆಯುಧಗಳನ್ನು ಇಟ್ಟು ಸಿದ್ಧತೆಗಳನ್ನು ನಡೆಸಿಕೊಂಡಿದ್ದಾರೆ. ಕಲ್ಯಾಣ ಮಂಟಪದ ಸವಾರಿ ತೊಟ್ಟಿಯಲ್ಲೂ ಪೂಜೆಗೆ ಸಿದ್ಧತೆ ನಡೆಸಿಕೊಂಡಿದ್ದು, ಮಧ್ಯಾಹ್ನ 12.30ಕ್ಕೆ ಮಹಾರಾಜ ಯದುವೀರ್ ಪೂಜೆ ಆರಂಭಿಸಲಿದ್ದಾರೆ.

    ದೇವಸ್ಥಾನದಿಂದ ಅಲಮೇಲಮ್ಮ ವಿಗ್ರಹವನ್ನು ಅರಮನೆ ಕಲ್ಯಾಣ ಮಂಟಪಕ್ಕೆ ತರಲಾಗಿದೆ. ಅಲಮೇಲಮ್ಮ ಮೈಸೂರು ರಾಜವಂಶಸ್ಥರಿಗೆ ಶಾಪ ಹಾಕಿದ್ದರು. ಆಯುಧ ಪೂಜೆ ದಿನ ಅಲಮೇಲಮ್ಮ ವಿಗ್ರಹಕ್ಕೆ ಪೂಜೆ ಮಾಡುವ ಸಂಪ್ರದಾಯವಿದೆ. ರಾಜಮನೆತನದವರು ಅಲಮೇಲಮ್ಮ ವಿಗ್ರಹವನ್ನು ಬುಟ್ಟಿಯಲ್ಲಿ ಇಟ್ಟು ಮರದ ಪಲ್ಲಕ್ಕಿಯಲ್ಲಿ ತಂದರು. ಅಲಮೇಲಮ್ಮ ದೇವಸ್ಥಾನ ಅರಮನೆಯ ಆವರಣದಲ್ಲಿ ಇದೆ.

     

  • ಹಬ್ಬದ ದಿನವೂ ದಾವಣಗೆರೆಯಲ್ಲಿ ಮಳೆ ಆರ್ಭಟ – ಕೆರೆಯಂತಾಗಿದೆ ಹರಿಹರ ಪಟ್ಟಣದ ರಸ್ತೆ

    ಹಬ್ಬದ ದಿನವೂ ದಾವಣಗೆರೆಯಲ್ಲಿ ಮಳೆ ಆರ್ಭಟ – ಕೆರೆಯಂತಾಗಿದೆ ಹರಿಹರ ಪಟ್ಟಣದ ರಸ್ತೆ

    ದಾವಣಗೆರೆ: ಕಳೆದ 5 ದಿನಗಳಿಂದ ದಾವಣಗೆರೆಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿತ್ತು. ಇದರಿಂದ ಸಾವಿರಾರು ಜನರು ಮನೆಗಳನ್ನ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆದರೆ ಈ ಸರದಿ ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಎದುರಾಗಿದೆ.

    ಇಂದು ಸುರಿದ ಭಾರಿ ಮಳೆಗೆ ಹರಿಹರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳು ಪರದಾಡುವಂತ ಸನ್ನಿವೇಶ ನಿರ್ಮಾಣವಾಗಿತ್ತು. ಸತತ 5 ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಂದು ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲ ನದಿಗಳಂತಾಗಿವೆ. ಇದರಿಂದ ವಾಹನ ಸವಾರರು ಹಾಗೂ ಜನರು ಜೀವಭಯದಲ್ಲಿ ಓಡಾಡುವ ಸಂದರ್ಭ ನಿರ್ಮಾಣವಾಗಿದೆ.

    ವ್ಯಾಪಾರಸ್ಥರಿಗೆ ಲಾಸ್: ಈ ಬಾರಿ ವರುಣನ ಆರ್ಭಟದಿಂದ ದಸರಾ ಹಬ್ಬಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಏಕೆಂದರೆ ದಸರಾ ಹಬ್ಬಕ್ಕೆಂದು ಹಳ್ಳಿಗಳಿಂದ ಹೂ, ಬಾಳೆ, ಕಂದು ಹಾಗೂ ಕುಂಬಳಕಾಯಿ ತಂದು ಅದನ್ನ ಜೀವನ ಆಧಾರವಾಗಿ ಮಾಡಿಕೊಂಡಿದ್ದ ಜನರು, ಮಳೆಯಂದ ವ್ಯಾಪಾರ ಲಾಸ್ ಮಾಡಿಕೊಳ್ಳುತ್ತಿದ್ದಾರೆ. ಒಂದು ದಿನಕ್ಕಾದ್ದರು ವ್ಯಾಪಾರ ಮಾಡಿಕೊಳ್ಳುವ ದಾವಂತದಲ್ಲಿದ್ದ ವ್ಯಾಪಾರಸ್ಥರಿಗೆ ವರುಣ ಅಡ್ಡಗಾಲು ಹಾಕಿದ್ದಾನೆ. ಇದರಿಂದ ವ್ಯಾಪಾರ ಕುಂದಿದ್ದು, ವ್ಯಾಪಾರಸ್ಥರ ಮುಖ ಬಾಡಿದ ಸುಮವಾಗಿದೆ.

  • ಮೈಸೂರು ದಸರೆಗೂ ವರುಣನ ಕಾಟ- ಹಲವು ಬಡಾವಣೆಗಳು ಜಲಾವೃತ  – ಮಿನಿ ಕೆರೆಯಂತಾದ ಗಾಲ್ಫ್ ಕ್ಲಬ್

    ಮೈಸೂರು ದಸರೆಗೂ ವರುಣನ ಕಾಟ- ಹಲವು ಬಡಾವಣೆಗಳು ಜಲಾವೃತ – ಮಿನಿ ಕೆರೆಯಂತಾದ ಗಾಲ್ಫ್ ಕ್ಲಬ್

    ಮೈಸೂರು: ತಡರಾತ್ರಿ ಸುರಿದ ಧಾರಕಾರ ಮಳೆಗೆ ನಾಡ ಹಬ್ಬ ದಸರಾ ಮಹೋತ್ಸವದ 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ವಾನ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಮೇಳದಲ್ಲಿನ ಸ್ಟಾಲ್‍ಗಳ ಮೇಲೆ ತಗಡಿನ ಶೀಟ್‍ಗಳು ಬಿದ್ದು ತಿಂಡಿ ತಿನಿಸುಗಳು ಹಾಳಾಗಿ, ಮಾಲೀಕರಿಗೆ ಅಪಾಯದ ಜೊತೆಗೆ ಪಜೀತಿಯನ್ನುಂಟು ಮಾಡಿದೆ.

    ರಾತ್ರಿ ಬಿದ್ದ ಬಿರು ಮಳೆ ಪರಿಣಾಮ ಮೈಸೂರಿನ ಕೆ. ಆರ್. ಕ್ಷೇತ್ರ ವ್ಯಾಪ್ತಿಯ ಕನಿಗಿರಿ ನೀರಿನಿಂದ ಸಂಪೂರ್ಣ ಮುಳುಗಿದೆ. ಎಲ್ಲಾ ಮನೆಗಳು ನೀರಿನಿಂದ ತುಂಬಿ ಹೋಗಿವೆ. ಚಿಕ್ಕ ಮಕ್ಕಳನ್ನು ಕತ್ತಲಲ್ಲಿ ಮನೆಯ ಅಟ್ಟ, ಟೇಬಲ್, ಬೀರು ಮೇಲೆ ಕೂರಿಸಲಾಗಿದೆ. ಮೈಸೂರಿನ ಹೊರವಲಯದ ಹೂಟಗಳ್ಳಿ ಕೆರೆ ಕೋಡಿ ಒಡೆದು ನೀರು ಹೊರಗೆ ಹರಿಯುತ್ತಿದೆ. ಕನಕಗಿರಿಯಲ್ಲಿ ರಸ್ತೆ, ವಸತಿ ಪ್ರದೇಶಗಳಿಗೆ ಕೆರೆ ನೀರು ನುಗ್ಗಿದೆ. ರಣಮಳೆಗೆ ಮೈಸೂರಿನ ಗಾಲ್ಫ್ ಕ್ಲಬ್ ಮಿನಿ ಕೆರೆಯಂತಾಗಿದೆ. ಕ್ಲಬ್ ತುಂಬಾ ನೀರು ನುಗ್ಗಿದ್ದು ಕೋರ್ಟ್ ಸಂಪೂರ್ಣ ಹಾಳಾಗಿದೆ.

    ಶ್ರೀರಾಂಪುರ, ದಟ್ಟಗಳ್ಳಿ, ಚಾಮುಂಡಿಪುರಂನಲ್ಲಿ ಮನೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶದಲ್ಲಿರುವ 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಮನೆ ಸಾಮಾಗ್ರಿಗಳೆಲ್ಲ ನೀರಿನಲ್ಲಿ ಮುಳುಗಡೆಯಾಗಿವೆ. ಪಾಲಿಕೆಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸದ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳವಾರ ಸಂಜೆ 6 ಗಂಟೆ ಆರಂಭವಾದ ಮಳೆ ರಾತ್ರಿ ಇಡೀ ತನ್ನ ರೌದ್ರಾವತಾರವನ್ನು ಮುಂದುವರೆಸಿದೆ. ಇದರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಅಂಗವಾಗಿ ಜರುಗಿದ ಆರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಜೀತಿ ಉಂಟು ಮಾಡಿದ್ದಲ್ಲದೇ, ನೀರಿನಿಂದ ವೇದಿಕೆ ಸಂಪೂರ್ಣ ಜಲಾವೃತಗೊಂಡಿತು. ಒಂದು ಕಡೆ ವೇದಿಕೆಯ ಮೇಲೆ ಬಾಲಿವುಡ್ ನ ಹಿನ್ನೆಲೆ ಗಾಯಕಿ ಶೀಫಾಲಿ ಮತ್ತು ತಂಡದಿಂದ ಸಂಗೀತ ರಂಗೆರುತ್ತಿದ್ದರೇ, ಇನ್ನೊಂದು ಕಡೆ ವೇದಿಕೆಯ ಮುಂಭಾಗ ನೀರು ನುಗ್ಗುವುದರ ಜೊತೆಗೆ ಛಾವಣಿಯಿಂದ ನೀರು ಸೋರಿ ಪ್ರೇಕ್ಷಕರನ್ನು ಪಜೀತಿಗೆ ಈಡುಮಾಡಿತ್ತು. ಕೆಲ ಪ್ರೇಕ್ಷಕರು ಮಳೆಯ ಅವಾಂತರದಿಂದ ಮನೆ ಕಡೆ ಹೆಚ್ಚೆ ಹಾಕಿದ್ರೆ ಇನ್ನೂ ಕೆಲವರು ಮಳೆ ನೀರಿನಲ್ಲೂ ಕುಣಿದು ಕುಪ್ಪಳಿಸಿದ್ರು.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತ್ರವಲ್ಲದೇ, ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿದ್ದ ಆಹಾರ ಮೇಳದಲ್ಲಿ ಸ್ಟಾಲ್‍ಗಳ ಮಾಲೀಕರಿಗೆ ತೊಂದರೆಯನ್ನುಂಟು ಮಾಡಿತು. ವರುಣನ ಅಬ್ಬರಕ್ಕೆ ಸ್ಟಾಲ್‍ಗಳ ಮೇಲೆ ಇದ್ದ ತಗಡಿನ ಶೀಟ್‍ಗಳು ಕೆಳಗುರುಳಿದ್ವು. ಸ್ಟಾಲ್ ಒಳಗೆ ಸಿಬ್ಬಂದಿಗಳಿದ್ದ ವೇಳೆ ಈ ಅವಘಡ ಸಂಭವಿಸಿತು. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಮಳೆರಾಯನ ಆರ್ಭಟದಿಂದ ಮೊದಲೇ ಗಿರಾಕಿಗಳಲ್ಲದೇ ಪರಿತಪಿಸುತ್ತಿದ್ದ ಮಾಲೀಕರಿಗೆ ಈಗ ಸ್ಟಾಲ್‍ಗಳು ಮುರಿದು ಬಿದ್ದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆ ದಸರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಹಾಗೂ ಪ್ರೇಕ್ಷಕರ ಖುಷಿಗೆ ತಣ್ಣೀರೆರೆಚಿದೆ. ಇಂದು ಕೂಡ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮಳೆರಾಯ ತನ್ನ ಆರ್ಭಟ ಮುಂದುವರೆಸಿದರೆ ದಸರಾ ಕಾರ್ಯಕ್ರಮಗಳು ಸಂಪೂರ್ಣವಾಗಿ ವಿಫಲವಾಗುತ್ತವೆ.