Tag: ದಸರಾ

  • ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ನ್ನೇನು ಗೊಂಬೆಗಳ ಹಬ್ಬ ಬಂದೇ ಬಿಡ್ತು. ಗೊಂಬೆ ಕೂರಿಸುವವರು ಈಗಾಗಲೇ ಎಲ್ಲಾ ಪ್ರೀಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಲ ಲಾಸ್ಟ್ ಟೈಂಗಿಂತ ಚೆನ್ನಾಗಿ ಹಬ್ಬ ಮಾಡಬೇಕು. ಆ ರೀತಿ ಗೊಂಬೆ ತರಬೇಕು, ಈ ರೀತಿ ಗೊಂಬೆ ಡೆಕೊರೇಷನ್ ಮಾಡಬೇಕು. ಎಲ್ಲರೂ ಮಾಡುವಂತೆ ನಾವು ಹಬ್ಬ ಮಾಡಿದ್ರೆ ಮಜಾ ಇರಲ್ಲ ಅನ್ನೋರು ಇರ್ತಾರೆ. ಅವರಿಗೆಲ್ಲಾ ಸೇರಿ ನೆಚ್ಚಿನ ಗೊಂಬೆಗಳನ್ನು ಹೇಗೆ ಕೂರಿಸಿದ್ರೆ ಚೆಂದ. ಹೇಗೆ ಅಲಂಕರಿಸಿದ್ರೆ ಅಂದ ಅನ್ನೋದನ್ನ ನೋಡೋಣ..

    ಈ ಹಿಂದೆ ಗೊಂಬೆಗಳ ಹಬ್ಬ ಅಂದರೆ ಮನೆಯಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತಿತ್ತು.. ಮನೆಯ ಅಟ್ಟದಲ್ಲಿ ಜೋಡಿಸಿಟ್ಟಿದ್ದ ಮಣ್ಣಿನ ಗೊಂಬೆಗಳನ್ನು ಕೆಳಗಿಳಿಸಿ, ಶುದ್ಧಗೊಳಿಸುವುದಕ್ಕೆ ವಾರವಾದರೂ ಬೇಕಾಗಿತ್ತು. ಸದ್ಯದ ಪೀಳಿಗೆಯವರಿಗೆ ಎಲ್ಲಿದೆ? ಇಷ್ಟೊಂದು ಟೈಮ್. ಕೆಲವರು ಹಬ್ಬದ ದಿನ ಹಬ್ಬದೂಟ ಮಾಡಿ ತಿಂದರೆ ಸಾಕು ಅಂತಿರುತ್ತಾರೆ. ಇನ್ನೂ ಕೆಲವರು ಯಾರಾದ್ರೂ ಫ್ರೆಂಡ್ಸ್, ಸಂಬಂಧಿಕರು ಕರೆದರೆ ಸಾಕಾಪ್ಪ ಅಂತಿರುತ್ತಾರೆ. ಹೀಗಿರುವಾಗ ಗೊಂಬೆ ಕೂರಿಸಲು ಸಾಕಷ್ಟು ಸಮಯ ವ್ಯಯಿಸಲು ಆಗುವುದಿಲ್ಲ. ಗೊಂಬೆ ಜೋಡಿಸುವುದು, ಕೂರಿಸುವುದು ಒಂದು ಕಲೆ. ಅದು ಎಲ್ಲರಿಗೂ ಒಲಿದಿರುವುದಿಲ್ಲ. ಹಾಗಾಗಿ ಈ ಒಂದು ಸಿಂಪಲ್ ಟಿಪ್ಸ್ ಗಳನ್ನು ಒಮ್ಮೆ ಕಣ್ಣಾಡಿಸಿ. ಗೊಂಬೆ ಕೂರಿಸಿ ನೋಡಿ.

    * ನಿಮ್ಮ ಮನೆಯಲ್ಲಿ ಮೊದಲಿನಿಂದಲೂ ಗೊಂಬೆ ಕೂರಿಸುವ ರೂಡಿ ಇದ್ದರೆ ಚೆಂದ.
    * ಎತ್ತಿಟ್ಟಿದ್ದ ಮಣ್ಣಿನ ಗೊಂಬೆಗಳನ್ನೆಲ್ಲ ಒಣಗಿದ ಕಾಟನ್ ಬಟ್ಟೆಯಲ್ಲಿ ಒರೆಸಿ ಇಡಿ.
    * ಗೊಂಬೆ ಕೂರಿಸುವ ಮೊದಲು ಯಾವ ಥೀಮ್‍ನಲ್ಲಿ ಕೂರಿಸಬೇಕೆಂದು ಪ್ಲಾನ್ ಮಾಡಿ.
    (ಪೌರಾಣಿಕ, ಐತಿಹಾಸಿಕ, ಸಣ್ಣ ಕಥೆಯಾಧಾರಿತ, ನೀತಿ ಕಥೆ, ಜೀವನಶೈಲಿ, ಆಧುನಿಕ ವಿಷಯಗಳು. ಹೀಗೆ ಯಾವುದು ಇಷ್ಟವೋ ಅದನ್ನ ಸೆಲೆಕ್ಟ್ ಮಾಡಿ)

    ಸೀತೆ ಸ್ವಯಂವರ, ಸೀತೆ ವನವಾಸ, ಶ್ರೀನಿವಾಸ ಕಲ್ಯಾಣ, ಕೃಷ್ಣನ ಆಟ-ತುಂಟಾಟ, ಗಣೇಶನಿಗೆ ಆನೆ ಮುಖ ಬಂದಿದ್ದು, ಕ್ರಿಸ್ತನ ಹುಟ್ಟು ಈ ಪೌರಾಣಿಕ ರೀತಿಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಇತಿಹಾಸದ ಒಲವು ಹೊಂದಿರುವವರು ವಿಜಯನಗರ ಆಡಳಿತ, ಮೈಸೂರು ಒಡೆಯರ್ ಆಡಳಿತ, ವಂಶಾವೃಕ್ಷ, ಕದಂಬ ಸಾಮ್ರಾಜ್ಯ ಎಂಬುದರ ಬಗ್ಗೆಯೂ ಚಿಂತಿಸುತ್ತಾರೆ. ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ ಪಾಠ, ಐತಿಹಾಸಿಕ ಪುರುಷರ ಜೀವನಗಾಥೆ, ಪ್ರೇರಣೆ ನೀಡಬಲ್ಲಂತಹ ಗಣ್ಣರ ಜೀವನ ಶೈಲಿ ತೋರಿಸುವ ರೀತಿಯಲ್ಲಿ ಗೊಂಬೆಗಳನ್ನು ಅಲಂಕರಿಸಬಹುದು. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ? ಯಾವುದು ನಿಮಗೆ ಹೆಚ್ಚು ತಿಳಿದಿದೆಯೋ ಅಂತಹ ಥೀಮ್ ಸೆಲೆಕ್ಟ್ ಮಾಡಿಕೊಳ್ಳಬೇಕು.

    * ಅವರು ಹೇಳಿದ್ರು ಅಂತಾಗಲಿ.. ಅವರು ಮಾಡಿದ್ದಾರೆ ನಾವು ಮಾಡಬೇಕು ಎಂದು ಗೊತ್ತಿಲ್ಲದ, ಮಾಹಿತಿ ಇಲ್ಲದೇ ಗೊಂಬೆ ಕೂರಿಸಿ ಆಭಾಸಕ್ಕೊಳಗಾಗಬೇಡಿ.
    * ಗೊಂಬೆ ಕೂರಿಸಲು ಸ್ಥಳದ ಆಯ್ಕೆ ಸೂಕ್ತವಾಗಿರಲಿ. ಗೊಂಬೆಯನ್ನು ಒಮ್ಮೆ ಕೂರಿಸಿದರೆ 9 ದಿನಗಳ ಕಾಲ ಅದೇ ಸ್ಥಳದಲ್ಲಿರುತ್ತದೆ. ಹೀಗಾಗಿ ಗೊಂಬೆಯನ್ನು ಮೆಟ್ಟಿಲುಗಳ ರೀತಿಯೂ ಕೂರಿಸಬಹುದು. ಇಲ್ಲವಾದಲ್ಲಿ ಒಂದು ವಿಶಾಲವಾದ ಸ್ಥಳದಲ್ಲಿ ಕೂರಿಸಬಹುದು.

    * ಗೊಂಬೆಗಳಿಗೆ ಹೆಚ್ಚಿನ ಹೂವಿನ ಅಲಂಕಾರ ಬೇಡ. 9 ದಿನಗಳವರೆಗೆ ಹೂವು ತಾಜಾವಾಗಿರುವುದಿಲ್ಲ. ಕ್ಲೀನ್ ಮಾಡುವಾಗ ಗೊಂಬೆಗಳು ಡ್ಯಾಮೇಜ್ ಆದ್ರೆ ಕಷ್ಟ.
    * ಹೆಚ್ಚಿನ ಸೀರಿಯಲ್ ಸೆಟ್ ಲೈಟ್‍ಗಳು, ಕಣ್ಣಿಗೆ ರಾಚುವಂತಹ ಲೈಟ್ ಬಳಸಬೇಡಿ.
    * ಸಣ್ಣದಾಗಿದ್ರೂ ಸಿಂಪಲ್ ಆಗಿದ್ರೆ ಗೊಂಬೆಗಳನ್ನು ನೋಡಲು ಚೆಂದ.
    * ಎಷ್ಟೊಂದು ಗೊಂಬೆಗಳಿದೆ ಎಂದು ಎಲ್ಲಾವನ್ನು ತುಂಬಬೇಡಿ. ಅಗತ್ಯಕ್ಕನುಗುಣವಾಗಿ ಜೋಡಿಸಿ.
    * ಚಿಕ್ಕದಾಗಿದ್ರೂ ಚೊಕ್ಕವಾಗಿದ್ರೆ ಎಲ್ಲರನ್ನೂ ಆಕರ್ಷಿಸಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

  • ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

    ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

    ಮೈಸೂರು: ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಆದರೆ ಇಂದು ಮಹಾಲಯ ಅಮವಾಸ್ಯೆಯ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ರದ್ದಾಗಿದೆ.

    ಅರಮನೆ ಆವರಣದ ಒಳಗೆಯೇ ಆನೆಗಳು ವಿಶ್ರಾಂತಿ ಪಡೆಯುತ್ತಿವೆ. ಅರಮನೆ ಆವರಣದ ಒಳಗೆ ಒಂದೆರಡು ಸುತ್ತು ವಾಕಿಂಗ್ ಮಾಡಿದ ಗಜಪಡೆ ನಂತರ ವಿಶ್ರಾಂತಿಗೆ ಜಾರಿವೆ. ಅಮವಾಸ್ಯೆ ಆಗಿರುವ ಕಾರಣ ಅರಮನೆ ಆವರಣದಿಂದ ಆನೆಗಳನ್ನು ಹೊರಕ್ಕೆ ಕರೆದೊಯ್ದರೆ ಏನಾದರೂ ಅನಾಹುತ ಆಗಬಹುದೆಂಬ ಭಯ ಆನೆಯ ಮಾವುತರು ಮತ್ತು ಕಾವಾಡಿಗಳದ್ದು. ಈ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲೇ ಗಜಪಡೆಗೆ ತಾಲೀಮು ನೀಡಲಾಯಿತು. ಕಳೆದ ಅಮಾವಾಸ್ಯೆಯಂದು ಕೂಡ ದಸರಾ ಗಜಪಡೆಯ ತಾಲೀಮನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು.

    ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್‍ನಗರ ಬಂಬೂಬಜಾರ್, ಹೈವೇ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಆನೆಗಳಿಗೆ ತಾಲೀಮು ನಡೆಸುವುದಿಲ್ಲ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಸ್ ಡಿಕ್ಕಿಯಿಂದ ಸೊಂಟ ಮುರಿದಿದ್ದ ದಸರಾ ಆನೆ ಸಾವು

    ಬಸ್ ಡಿಕ್ಕಿಯಿಂದ ಸೊಂಟ ಮುರಿದಿದ್ದ ದಸರಾ ಆನೆ ಸಾವು

    ಮಡಿಕೇರಿ: ಖಾಸಗಿ ಬಸ್ ಡಿಕ್ಕಿಯಿಂದ ಸೊಂಟ ಮುರಿತಕ್ಕೊಳಗಾಗಿದ್ದ ದಸರಾ ಆನೆ ಮೃತಪಟ್ಟಿದೆ. ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಗರಹೋಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದ ರಸ್ತೆಯಲ್ಲಿ ಸಂಭವಿಸಿತ್ತು.

    ನಲವತ್ತೈದು ವರ್ಷ ಪ್ರಾಯದ ಸಾಕಾನೆಯಾದ ರಂಗನನ್ನು ಎಂದಿನಂತೆ ರಾತ್ರಿ ತಿರಾಗಾಡಲು ಬಿಟ್ಟಿದ್ದರು. ಈ ವೇಳೆ ಕಣ್ಣನ್ನೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಸಾಕಾನೆ ಗುದ್ದಿದೆ. ಪರಿಣಾಮ ಆನೆಯ ಸೊಂಟ ಮುರಿದು ಸ್ಥಳದಲ್ಲೇ ಕುಸಿದು ಬಿದ್ದಿತ್ತು. ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು.

    ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಾವುತರು ಹಾಗೂ ಪುಶುವೈದ್ಯ ಡಾ.ಮುಜೀಬ್ ಸಹಾಯದಿಂದ ಆನೆಗೆ ಚಿಕಿತ್ಸೆ ನೀಡಿತಾದರೂ, ಗಂಭೀರವಾಗಿ ಪೆಟ್ಟು ತಿಂದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

    ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ರೌಡಿ ರಂಗನೆಂದೇ ಖ್ಯಾತಿ ಪಡೆದಿದ್ದ ಈ ಆನೆಯನ್ನು ಸೆರೆ ಹಿಡಿದು, ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು.

    ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    ನಾಡಿನಲ್ಲೆಡೆ ದಸಾರ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬದಿಂದ ದೂರು ಇರುವ ಹಲವರು ಹಬ್ಬಕ್ಕಾಗಿ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರೆ, ಮತ್ತೆ ಕೆಲವರು ಈ ಬಾರಿ ಜಂಬೂ ಸವಾರಿ ನೋಡಬೇಕೆಂದು ಪ್ಲಾನ್ ಮಾಡುತ್ತಿರುತ್ತಾರೆ. ವಿಶ್ವಾದ್ಯಂತ ಜಂಬೂ ಸವಾರಿ ಹೇಗೆ ಪ್ರಸಿದ್ಧವೋ, ಹಾಗೆಯೇ ಮೈಸೂರು ಪಾಕ್ ಸಹ ಅಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರಿಗೆ ಬಂದ ಪ್ರವಾಸಿಗರು ‘ಮೈಸೂರು ಪಾಕ್’ ಸವಿಯಲೇ ಬೇಕು.

    ಮೈಸೂರು ಪಾಕ್ ಇತಿಹಾಸ:
    ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕಾಕಾಸುರ ಮಾದಪ್ಪ ಎಂಬ ಭಟ್ಟರು ಕೆಲಸ ಮಾಡಿಕೊಂಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯ ನೇತೃತ್ವವನ್ನು ಕಾಕಾಸುರ ಮಾದಪ್ಪನವರೇ ವಹಿಸಿಕೊಂಡಿದ್ದರು. ಒಂದು ದಿನ ಮಹಾರಾಜರು ಕಾಕಾಸುರು ಅವರಿಗೆ ಸಿಹಿ ತಿಂಡಿ ಮಾಡುವಂತೆ ಆದೇಶಿಸುತ್ತಾರೆ.

    ಮಹಾರಾಜರ ಆದೇಶ ಸ್ವೀಕರಿಸಿದ ಕಾಕಾಸರು ಭಟ್ಟರು, ಮೊದಲು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು `ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).

    ಹೊಸ ಸಿಹಿ ತಿಂಡಿಯ ರುಚಿ ನೀಡಿದ ಮಹಾರಾಜರು ಏನಿದರ ಹೆಸರು ಎಂದು ಕೇಳಿದ್ದರಂತೆ ಆಗಾಗ ಭಟ್ಟರು ಪಾಕದಿಂದ ಮಾಡಿದ ಸಿಹಿ ಅಂದರಂತೆ. ಹಾಗಾದರೆ ಮೈಸೂರು ಪಾಕ್ ಎಂದು ಹೆಸರು ಇಡೋಣ ಅಂತಾ ಹೇಳಿದ್ದರು ಎಂಬ ಕಥೆಯನ್ನು ಜನರು ಹೇಳುತ್ತಾರೆ. ಕಾಕಾಸುರ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸಿಸುತ್ತಿದ್ದು, ಗುರು ಸ್ವೀಟ್ಸ್ ಎಂಬ ಸಿಹಿ ಅಂಗಡಿಯನ್ನು ಹೊಂದಿದ್ದಾರೆ.

    ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ರುಚಿಯನ್ನು ಉಳಿಸಿಕೊಂಡು ಬಂದಿದ್ದು, ಅಂಗಡಿಯ ಮಾಹಿತಿ ಇದ್ದವರೂ ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.

    ಮೈಸೂರು ಪಾಕ್ ನಮ್ಮದು ತಮಿಳರ ವಾದ..?
    ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ ಹೇಳುವ ಪ್ರಕಾರ, 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.

    ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ (ಜಿಯಾಗ್ರಾಫಿಕಲ್ ಇಂಡಿಕೇಷನ್-ಐಜಿ) ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಕನ್ನಡಿಗರು ಮತ್ತು ತಮಿಳರ ಮಧ್ಯೆ ಭಾರೀ ಚರ್ಚೆ ಆರಂಭವಾಗಿತ್ತು. ದಕ್ಷಿಣ ಭಾರತದ ಸಮೃದ್ಧ ಸಿಹಿ ತಿನಿಸಾದ ಮೈಸೂರು ಪಾಕ್ ತಯಾರಿಸಲು ಹೇರಳ ಪ್ರಮಾಣದ ಶುದ್ಧ ತುಪ್ಪ, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಲಾಗುತ್ತದೆ. ಆದರೆ ಮೈಸೂರು ಪಾಕ್ ಹಾಗೂ ಧಾರವಾಡ ಪೇಡಗಳಿಗೆ ಈಗಾಗಲೇ ಕರ್ನಾಟಕಕ್ಕೆ ಜಿಐ ಸ್ಥಾನದ ಹಕ್ಕು ನೀಡಲಾಗಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

  • ಖಾಸಗಿ ಬಸ್ ಡಿಕ್ಕಿ- ದಸರಾ ಆನೆಯ ಸೊಂಟ ಮುರಿತ!

    ಖಾಸಗಿ ಬಸ್ ಡಿಕ್ಕಿ- ದಸರಾ ಆನೆಯ ಸೊಂಟ ಮುರಿತ!

    ಮಡಿಕೇರಿ: ವಿರಾಜಪೇಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ದಸರಾಗೆ ತೆರಳಬೇಕಿದ್ದ ಸಾಕಾನೆಯೊಂದು ಸೊಂಟ ಮುರಿದಿದೆ.

    ಮತ್ತಿಗೋಡು ಆನೆ ಶಿಬಿರದ 45 ವರ್ಷ ವಯಸ್ಸಿನ ರಂಗ ಎನ್ನುವ ಸಾಕಾನೆಯ ಸೊಂಟ ಮುರಿದಿದೆ. ಮಾವುತರು ಎಂದಿನಂತೆ ಭಾನುವಾರ ರಾತ್ರಿ ರಂಗನನ್ನು ತಿರುಗಾಡಲು ಬಿಟ್ಟಿದ್ದರು. ಈ ವೇಳೆ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಆನೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆನೆ ಸ್ಥಳದಲ್ಲೇ ಕುಸಿದು ಬಿದ್ದು, ಸೊಂಟ ಮುರಿದಿದೆ.

    ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಾವುತರು ಹಾಗೂ ಪುಶುವೈದ್ಯ ಡಾ.ಮುಜೀಬ್ ಸಹಾಯದಿಂದ ಆನೆಗೆ ಚಿಕಿತ್ಸೆ ನೀಡಿ, ಶಿಬಿರಕ್ಕೆ ಕರೆತರಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ರೌಡಿ ರಂಗನೆಂದೇ ಖ್ಯಾತಿ ಪಡೆದಿದ್ದ ಈ ಆನೆಯನ್ನು ಸೆರೆ ಹಿಡಿದು, ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು.

    ದುರಂತವೇನೆಂದರೆ ಇನ್ನೆರಡು ದಿನ ಕಳೆದಿದ್ದರೆ ರಂಗ ದಸರಾದಲ್ಲಿ ಪಾಲ್ಗೊಳ್ಳಲು ತೆರಳಬೇಕಿತ್ತು. ಸದ್ಯ ರಂಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಖಾಸಗಿ ಬಸ್ ಚಾಲಕನ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರು: ದಸರಾ ತಯಾರಿ ದಿನದಿಂದಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಗತಿಪರ ಒಕ್ಕೂಟಗಳಿಂದ ಮಹಿಷ ದಸರಾವನ್ನು ಇಂದು ಅದ್ಧೂರಿಯಾಗಿ ಆಚರಿಸಿ, ಮಹಿಷ ಒಬ್ಬ ಜನಪರ ನಾಯಕ. ಆದರೆ ಇತಿಹಾಸಲ್ಲಿ ಆತನ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೈಸೂರಿನ ಪುರಭವನದಿಂದ ಆಕರ್ಷಕ ರಥದಲ್ಲಿ ಮಹಿಷಾಸುರ ಭಾವಚಿತ್ರ ಮೆರವಣಿಗೆ ಮಾಡಿದ ಪ್ರಗತಿಪರರು, ವಿವಿಧ ಕಲಾತಂಡಗಳೊಂದಿಗೆ ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಸೇರಿದಂತೆ ಸಾಹಿತಿಗಳಾದ ಪ್ರೊ.ಮಹೇಶ್‍ಚಂದ್ರ ಗುರು, ಪ್ರೊ.ಕೆ.ಎಸ್ ಭಗವಾನ್, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗಿಯಾದ್ದರು.

    ಪುರಭವನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಸಾಗಿ ಚಾಮುಂಡಿ ಬೆಟ್ಟ ತಲುಪಿ, ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಮೆರವಣಿಗೆ ಚಾಮುಂಡಿ ಬೆಟ್ಟ ತಲುಪಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ಮಹಿಷ ಜನಪರವಾಗಿದ್ದ, ಆದರೆ ಇತಿಹಾಸದಲ್ಲಿ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಕಳೆದ 7 ವರ್ಷಗಳಿಂದ ಮಹಿಷ ದಸರಾವನ್ನು ಆಚರಿಸಲಾಗುತ್ತಿದೆ. ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಅನೇಕ ಚಿಂತಕರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರ ಆಯೋಜನೆ ಮಾಡಲಾಗಿದೆ. ಅವರ ವಿಚಾರಗಳನ್ನು ನಾನು ಪ್ರೋತ್ಸಾಹಿಸುತ್ತಾ ಬಂದಿರುವೆ ಎಂದು ಹೇಳಿದರು.

    ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ವಲಸೆ ಸಂಸ್ಕೃತಿಯವರು ಉದ್ದೇಶಪೂರ್ವಕವಾಗಿ ನಮ್ಮ ಸಂಸ್ಕೃತಿಯ ಮೂಲ ಪ್ರತಿಪಾದಕ ಮಹಿಷನನ್ನು ರಾಕ್ಷಸ ಅಂತಾ ಮಾಡಿ, ಇವರೇ ರಾಕ್ಷಸರಾದರು. ಮಹಿಷ ಕೆಟ್ಟ ಮನುಷ್ಯನಾಗಿದ್ದರೆ ಅವನ ಹೆಸರನ್ನು ಈ ಪ್ರದೇಶಕ್ಕೆ ಇಡುತ್ತಿರಲಿಲ್ಲ. ಕೆಟ್ಟ ವ್ಯಕ್ತಿಯ ಹೆಸರನ್ನು ಊರಿಗೆ, ಪ್ರದೇಶಕ್ಕೆ ಇಡುವುದನ್ನು ಎಲ್ಲಿಯೂ ಕೇಳಿಲ್ಲ. ಮಹಿಷ ರಾಜನಾಗಿದ್ದವನು, ಆದರೆ ಆತನ ಬಗ್ಗೆ ಇತಿಹಾಸದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/rCdHN3PwRNQ

  • ಮೈಸೂರು ದಸರಾ ಮಹೋತ್ಸವ 2018 – ಕ್ರೀಡಾ ಚಟುವಟಿಕೆಗಳು ಆರಂಭ

    ಮೈಸೂರು ದಸರಾ ಮಹೋತ್ಸವ 2018 – ಕ್ರೀಡಾ ಚಟುವಟಿಕೆಗಳು ಆರಂಭ

    ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ 2018ಕ್ಕೆ ತಯಾರಿಗಳು ಜೋರಾಗಿ ಜರುಗುತ್ತಿದ್ದು, ಕ್ರೀಡಾ ಚಟುವಟಿಕೆಗಳು, ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಕಾರು ರೇಸ್ ಆಯೋಜನೆ ಮಾಡಲಾಗಿದೆ.

    ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಕ್ರೀಡಾ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಮೊದಲ ಬಾರಿಗೆ ಟ್ರಯಥ್ಲಾನ್ ಆಯೋಜನೆ ಮಾಡಿದ್ದು, ಅದು ಈಜು, ಸೈಕ್ಲಿಂಗ್, ಓಟ ಒಳಗೊಂಡಿದೆ. ಸರಸ್ವತಿಪುರಂ ಈಜುಕೊಳ ಸಮೀಪ ಟ್ರಯಥ್ಲಾನ್‍ಗೆ ಚಾಲನೆ ನೀಡಲಾಗಿದ್ದು, ಸೂಪರ್ ಸ್ಪ್ರಿಂಟ್(ವೇಗದ ನಡಿಗೆ), ಸ್ಪ್ರಿಂಟ್ ವಿಭಾಗಗಳಲ್ಲಿ ನಡೆಯುತ್ತಿದೆ. ಸೂಪರ್ ಸ್ಪ್ರಿಂಟ್ ವಿಭಾಗದಲ್ಲಿ 400 ಮೀ. ಈಜು, 10 ಕಿ.ಮೀ. ಸೈಕ್ಲಿಂಗ್, 2.5 ಕಿ.ಮೀ. ಓಟ ಒಳಗೊಂಡಿದೆ. ಸ್ಪ್ರಿಂಟ್ ವಿಭಾಗದಲ್ಲಿ 750 ಮೀ. ಈಜು, 20 ಕಿ.ಮೀ. ಸೈಕ್ಲಿಂಗ್, 5 ಕಿ.ಮೀ. ಓಟ ಒಳಗೊಂಡಿದೆ.

    ಟ್ರಯಥ್ಲಾನ್‍ನಲ್ಲಿ ಒಟ್ಟು 98 ಸ್ಪರ್ಧಿಗಳು ಭಾಗಿಯಾಗಿದ್ದು, ಶಾಲಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲ ವಯೋಮಾನದವರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.

    ದಸರಾ ಹಿನ್ನೆಲೆ ಮೈಸೂರಿನಲ್ಲಿ ಗ್ರಾವಲ್ ಫೆಸ್ಟ್ ಆಯೋಜನೆ ಮಾಡಿದ್ದು, ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಕಾರು ರೇಸ್ ಆಯೋಜಿಸಿದೆ. ಕಾರ್ ರೇಸ್ ನಲ್ಲಿ ಕಾರುಗಳು ಮೈ ನವಿರೆಳಿಸುವಂತೆ ಧೂಳೆಬ್ಬಿಸಿವೆ. 1.8 ಕಿ.ಮೀ ವ್ಯಾಪ್ತಿಯ ಟ್ರ್ಯಾಕ್ ನಲ್ಲಿ ನಡೆಯುತ್ತಿರೋ ಕಾರ್ ರೇಸ್, 168 ಸ್ಪರ್ಧಿಗಳು ಗ್ರಾವಲ್ ಫೆಸ್ಟ್ ನಲ್ಲಿ ಭಾಗಿಯಾಗಿದ್ದಾರೆ.

    ಇಂಡಿಯನ್ ಓಪನ್ ಕ್ಲಾಸ್ ಮೈಸೂರ್ ಲೋಕಲ್ ನಾವಿಸ್ ಓಪನ್, ಎಸ್.ಯು.ವಿ ಕ್ಲಾಸ್, ಅನ್ ರಿಸ್ಟ್ರಿಕ್ಟೆಡ್ ಕ್ಲಾಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಗ್ರಾವಲ್ ಫೆಸ್ಟ್ ಆಯೋಜನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • KSTDCಯಿಂದ ದಸರಾಗಾಗಿ ಬಂತು ವಿಶೇಷ ವಿಮಾನದ ಬಂಪರ್ ಆಫರ್!

    KSTDCಯಿಂದ ದಸರಾಗಾಗಿ ಬಂತು ವಿಶೇಷ ವಿಮಾನದ ಬಂಪರ್ ಆಫರ್!

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2018 ಹಿನ್ನೆಲೆಯಲ್ಲಿ ಪ್ರಯಾಣಿಕರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವಿಮಾನ ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡುತ್ತಿದೆ.

    ಮೈಸೂರು ದಸರಾಗೆ ವಿಶೇಷ ವಿಮಾನಯಾನ ಸೇವೆ ಆರಂಭವಾಗಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮೈಸೂರಿನಿಂದ ಬೆಂಗಳೂರಿಗೆ ಕೇವಲ 999 ರೂ. ಗೆ ವಿಶೇಷ ವಿಮಾನಯಾನದ ಬಂಪರ್ ಆಫರ್ ಅನ್ನು ನೀಡಿದೆ. ಆಕಾಶ್ ಅಂಬಾರಿ ಹೆಸರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ವಿಮಾನ ವ್ಯವಸ್ಥೆಯನ್ನು ಕಲ್ಪಿಸಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಫ್ಲೈಟ್ ಗಳು ಹಾರಲಿವೆ.

    ಅಕ್ಟೋಬರ್ 10 ರಿಂದ 19 ರ ವರೆಗೆ 9 ದಿನಗಳವರೆಗೆ ಪ್ರಯಾಣಿಕರ ಸೇವೆಗೆ ಲಭ್ಯವಿದ್ದು, ಮಧ್ಯಾಹ್ನ 2:10 ಕ್ಕೆ ಬೆಂಗಳೂರಿನಿಂದ ಹೊರಟು 3 ಗಂಟೆ ಮೈಸೂರು ತಲುಪುತ್ತದೆ. ಬಳಿಕ 3;30 ರಿಂದ ಮೈಸೂರಿನಿಂದ ಹೊರಟು 4:20 ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಆನ್‍ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ವಿದೇಶಿ ಪ್ರಯಾಣಿಕರು ಹಾಗೂ ಸ್ಥಳೀಯರ ಆಗಸ ಯಾತ್ರೆಗೆ ವಿಶೇಷ ವ್ಯವಸ್ಥೆ ಇದಾಗಿದ್ದು, ವಿಶೇಷ ವಿಮಾನಗಳು ಆಕಾಶ್ ಅಂಬಾರಿ ಹೆಸರಿನಲ್ಲಿ ಹಾರಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    ಸಾಂದರ್ಭಿಕ ಚಿತ್ರ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳಿದ್ದು, ಅರಮನೆಯಲ್ಲಿ ತಯಾರಿ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗಿದೆ.

    ನಾಡಹಬ್ಬ ದಸರಾಗೆ ಮೈಸೂರು ಸಜ್ಜಾಗುತ್ತಿದ್ದು, ದಸರಾದ ಪ್ರಮುಖ ಖಾಸಗಿ ಕಾರ್ಯಕ್ರಮದ ನಿಮಿತ್ತ ಅರಮನೆಯಲ್ಲಿ ದಸರಾ ತಯಾರಿ ಜೋರಾಗಿ ನಡೆಯುತ್ತಿದೆ. ಅಲ್ಲದೇ ದಸರಾ ದಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಸಿಂಹಾಸದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ.

    ಸಿಂಹಾಸನ ಜೋಡಣೆ ಕಾರ್ಯವನ್ನು ತಲೆತಲಾಂತರದಿಂದ ತಾಲೂಕಿನ ಗೆಜ್ಜಗಳ್ಳಿ ಗ್ರಾಮಸ್ಥರು ನಡೆಸುತ್ತಾ ಬಂದಿದ್ದಾರೆ. ಸಿಂಹಾಸ ಜೋಡಣೆ, ವಿಸರ್ಜನೆ ಸಂದರ್ಭದಲ್ಲಿ ಗೆಜ್ಜಗಳ್ಳಿಯ ಗ್ರಾಮಸ್ಥರನ್ನು ಅರಮನೆಗೆ ಕರೆಸಲಾಗುತ್ತದೆ.

    ಸಿಂಹಾಸನದಲ್ಲಿ ಸಿಂಹದ ಮುಖ ಇರುವ ಭಾಗವನ್ನು ದರ್ಬಾರ್ ದಿನ ಜೋಡಿಸಲಾಗುತ್ತದೆ. ಇನ್ನು ವರ್ಷಪೂರ್ತಿ ಸಿಂಹಾಸನ ಬಿಡಿಭಾಗಗಳನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿರುತ್ತದೆ. ಸಿಂಹಾಸನ ಜೋಡಣೆ ಕೆಲಸ ಇರುವುದರಿಂದ ಇಂದು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ವೈಭವದ ಜೊತೆಗೆ ಜಗ್ಗಣ್ಣನ 8ಎಂಎಂ ಎಂಟ್ರಿ!

    ದಸರಾ ವೈಭವದ ಜೊತೆಗೆ ಜಗ್ಗಣ್ಣನ 8ಎಂಎಂ ಎಂಟ್ರಿ!

    ಒಂದು ದೊಡ್ಡ ಗ್ಯಾಪಿನ ನಂತರ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದೂ ಕೂಡಾ ಭಾರೀ ಬದಲಾವಣೆಯೊಂದಿಗೆ. ಜಗ್ಗೇಶ್ ಅಂದರೆ ಅವರ ವಿಶಿಷ್ಟವಾದ ಮ್ಯಾನರಿಸಂ ನೆನಪಾಗುತ್ತದೆ. ಡೈಲಾಗುಗಳ ಗೊಡವೆಯೇ ಇಲ್ಲದೇ ಬರೀ ಮ್ಯಾನರಿಸಂ ಮೂಲಕವೇ ನಗೆಯುಕ್ಕಿಸಬಲ್ಲ ಜಗ್ಗೇಶ್ ನಗುವಿಗೇ ಹೆಸರಾದವರು. ಹೀಗೆ ಕಾಮಿಡಿ ಪಾತ್ರಗಳಾಚೆಗೆ ಗಂಭೀರವಾದ ತುಡಿತ ಹೊಂದಿದ್ದ ಜಗ್ಗೇಶ್ 8ಎಂಎಂ ಚಿತ್ರದ ನಾಯಕರಾಗಿ ಚಿತ್ರೀಕರಣ ಪೂರೈಸಿಕೊಂಡಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕವೂ ಬಯಲಾಗಿದೆ.

    ದಸರಾ ಮುಗಿದಾಕ್ಷಣವೇ ಈ ಚಿತ್ರ ತೆರೆ ಕಾಣಲಿದೆ. ಅಂದರೆ ಅಕ್ಟೋಬರ್ 26ರಂದು 8 ಎಂಎಂ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಮೂಲಕ ಜಗ್ಗೇಶ್ ಅವರನ್ನು ಹೊಸ ರೂಪದಲ್ಲಿ ನೋಡೋ ದಿನಾಂಕವೂ ನಿಗದಿಯಾದಂತಾಗಿದೆ.

    8 ಎಂಎಂ ಚಿತ್ರದ ಮೂಲಕ ಹರಿಕೃಷ್ಣ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದು ಅಕಿರಾ ಕುರಸೋವಾ ಅವರ ಪ್ರಸಿದ್ಧ ಚಿತ್ರವೊಂದರಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದ್ದರೂ ಸ್ವತಂತ್ರ ಧಾಟಿಯ ಕಥಾ ಹಂದರ ಹೊಂದಿದೆಯಂತೆ. ಪೊಲೀಸ್ ಹಾಗೂ ಕ್ರಿಮಿನಲ್ ಕೆಲಸ ಮಾಡಿದ ವ್ಯಕ್ತಿಯೋರ್ವನ ನಡುವೆ ನಡೆಯೋ ರೋಚಕ ಕಥಾ ಎಳೆಯನ್ನು ‘8 ಎಂಎಂ’ ಚಿತ್ರ ಒಳಗೊಂಡಿದೆಯಂತೆ.

    ನೀರ್ ದೋಸೆ ಚಿತ್ರದ ನಂತರ ಜಗ್ಗೇಶ್ ಅವರು ಯಾವುದೇ ಚಿತ್ರ ಒಪ್ಪಿಕೊಳ್ಳದಿರಲು ಕಾರಣ ಅವಕಾಶದ ಅಭಾವವೇನಲ್ಲ. ಅವರೇ ಹೇಳಿರೋ ಪ್ರಕಾರ ಒಂದಷ್ಟು ಕಥೆಗಳನ್ನು ಕೇಳಿಸಿಕೊಂಡು ನಿರಾಕರಿಸಿದ್ದಾರಂತೆ. ಈ ನಿರಾಕರಣೆಗೂ ಕಾರಣ ಇಲ್ಲದಿಲ್ಲ. ಸಾಮಾನ್ಯವಾಗಿ ಬಂದ ಕಥೆಗಳೆಲ್ಲವೂ ಈವರೆಗೆ ಜಗ್ಗೇಶ್ ಅವರಿಗಿದ್ದ ಕಾಮಿಡಿ ಇಮೇಜ್‍ಗೆ ಪೂರಕವಾಗಿಯೇ ಹೆಣೆದ ಕಥೆಗಳು ಮತ್ತು ನೀರ್ ದೋಸೆ ಮಾದರಿಯದ್ದೇ ಕಥೆಗಳಾಗಿದ್ದವಂತೆ.

    ಈಗ ಐವತ್ತೈದರ ಹೊಸ್ತಿಲಲ್ಲಿರೋ ಜಗ್ಗೇಶ್ ಬೇರೆಯದ್ದೇ ಬಗೆಯ ಪಾತ್ರವೊಂದಕ್ಕಾಗಿ ತಹತಹಿಸುತ್ತಿದ್ದರಂತೆ. ಇದೇ ಹೊತ್ತಿಗೆ ಈ ಹಿಂದೆ ಟೀಸರ್ ಒಂದರ ಮೂಲಕ ಸದ್ದು ಮಾಡಿದ್ದ ಹರಿಕೃಷ್ಣ ಕೂಡಾ ಒಂದೊಳ್ಳೆ ಕಥೆ ಮಾಡಿಕೊಂಡು ನಿರ್ಮಾಪಕರನ್ನು ಭೇಟಿಯಾಗಿದ್ದರು. ಆದರೆ ಕಥೆ ಕೇಳಿದ ನಿರ್ಮಾಪಕರು ಜಗ್ಗೇಶ್ ನಟಿಸೋದಾದರೆ ಮಾತ್ರ ಹಣ ಹೂಡೋದಾಗಿ ಹೇಳಿ ಜಗ್ಗಣ್ಣನನ್ನು ಒಪ್ಪಿಸೋ ಜವಾಬ್ದಾರಿಯನ್ನೂ ಕೂಡಾ ಹರಿಕೃಷ್ಣ ಹೆಗಲಿಗೆ ಹಾಕಿದ್ದರಂತೆ. ತುಸು ಹೆದರಿಕೆಯಿಂದಲೇ ಅದನ್ನು ಒಪ್ಪಿಕೊಂಡ ಹರಿಕೃಷ್ಣ ಕಡೆಗೂ ಅದರಲ್ಲಿ ಯಶಸ್ವಿಯಾಗಿದ್ದರು.

    ಅಳುಕಿನೊಂದಿಗೇ ಜಗ್ಗೇಶ್ ಅವರನ್ನು ಭೇಟಿಯಾಗಿ ರಿವರ್ಸ್ ವರ್ಷನ್ನಲ್ಲಿ ಕಥೆ ಹೇಳಿದೇಟಿಗೆ ಜಗ್ಗೇಶ್ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದರಂತೆ. ಈ ಕಥೆಯಲ್ಲಿ ಜಗ್ಗೇಶ್ ಅವರನ್ನು ಅವರ ವಯಸ್ಸಿಗೆ ತಕ್ಕುದಾಗಿಯೇ ತೋರಿಸಿದ್ದು ಮತ್ತು ಮನ ಮಿಡಿಯುವ ಕ್ಲೈಮ್ಯಾಕ್ಸ್ ಕಥೆ ಒಪ್ಪಿಕೊಳ್ಳಲು ಕಾರಣ ಎಂಬುದು ಜಗ್ಗಣ್ಣನ ಅಭಿಪ್ರಾಯ. ಅಂತೂ ಈಗ ಸಿಕ್ಕಿರೋ ಸುಳಿವುಗಳ ಪ್ರಕಾರ ಹೇಳೋದಾದರೆ 8 ಎಂಎಂ ಚಿತ್ರ ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಕಾರಣದಿಂದಲೇ ಕುತೂಹಲ ಹುಟ್ಟಿಸಿರೋ ಈ ಚಿತ್ರ ದಸರಾ ವೈಭವದ ಜೊತೆ ಜೊತೆಗೆ ಯಶಸ್ಸಿನ ವೈಭವವನ್ನೂ ತನ್ನದಾಗಿಸಿಕೊಳ್ಳೋ ಲಕ್ಷಣಗಳಿವೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv