Tag: ದಸರಾ

  • ಸಿಎಂ ಹೊಗಳಿ ವೇದಿಕೆಯಲ್ಲೇ ಎರಡು ಮನವಿ ಇಟ್ಟ ಪ್ರತಾಪ್ ಸಿಂಹ

    ಸಿಎಂ ಹೊಗಳಿ ವೇದಿಕೆಯಲ್ಲೇ ಎರಡು ಮನವಿ ಇಟ್ಟ ಪ್ರತಾಪ್ ಸಿಂಹ

    ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಕುಮಾರಸ್ವಾಮಿ ಅವರನ್ನು ಹೊಗಳಿ ವೇದಿಕೆಯಲ್ಲೇ ಎರಡು ಮನವಿಯನ್ನು ಇಟ್ಟಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಎಂದರೆ ಅಂತಃಕರಣ ಎಂದು ಹೇಳಿ ಮಹಿಷಾ ದಸರಾ ಮತ್ತು ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಿ ಎಂದು ಕೇಳಿಕೊಂಡರು.

    ಮಹಿಷಾ ದಸರಾ ಆಚರಿಸುವುದನ್ನು ತಡೆಯಬೇಕು. ಇಂತಹ ಆಚರಣೆಯಿಂದಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಇದರ ಜೊತೆಯಲ್ಲಿ ಮೈಸೂರು ರಾಜವಂಶಸ್ಥರಿಗೆ ಕಿರುಕುಳ ನೀಡಿದ ವ್ಯಕ್ತಿಯ ಜಯಂತಿ ಮಾಡುವುದನ್ನು ನಿಲ್ಲಿಸಿ ಎಂದು ಟಿಪ್ಪು ಹೆಸರನ್ನು ಹೇಳದೇ ಟಿಪ್ಪು ಜಯಂತಿ ರದ್ದು ಮಾಡಿ ಎಂದು ಸಿಎಂಗೆ ಮನವಿ ಮಾಡಿದರು. ಇದನ್ನು ಓದಿ: ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಸಚಿವೆ ಜಯಾಮಾಲ ಅವರನ್ನು ಉದ್ದೇಶಿಸಿ ಅಣ್ಣವ್ರ ಜೊತೆ ಇವರ ನಟನೆ ನೋಡಿ ನಾನು ಮನಸೋತಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದರು.

    ಬುಧವಾರ ಬೆಳಗ್ಗೆ 7.05ರ ಶುಭ ತುಲಾ ಲಗ್ನದಲ್ಲಿ ಇನ್ಫೋಸಿಸ್ ಫೌಂಡೇಷನ್‍ನ ಸುಧಾಮೂರ್ತಿ 408ನೇ ನಾಡಹಬ್ಬವನ್ನು ಉದ್ಘಾಟಿಸಿದರು. ಸಿಎಂ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಸಾ.ರಾ.ಮಹೇಶ್, ರಾಜಶೇಖರ್ ಪಾಟೀಲ್, ಜಯಮಾಲಾ, ಶಾಸಕರಾದ ಎಚ್.ವಿಶ್ವನಾಥ್, ಎಸ್.ಎ.ರಾಮದಾಸ್, ಅಶ್ವಿನ್ ಕುಮಾರ್, ಹರ್ಷಕುಮಾರ್, ಕೆ.ಮಹದೇವ್, ಎಲ್.ನಾಗೇಂದ್ರ, ಕೆ.ಟಿ.ಶ್ರೀಕಂಠೇಗೌಡ ಈ ವೇಳೆ ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    -ಮೈಸೂರು ದಸರಾ ಉಪಾಧ್ಯಕ್ಷ ಸ್ಥಾನಕ್ಕೆ ದೋಸ್ತಿ ಸಚಿವರಲ್ಲಿ ಜಟಾಪಟಿ

    ಚಾಮರಾಜನಗರ: ಮೈತ್ರಿ ಸರ್ಕಾರದಲ್ಲಿ ಕೈ ಹಾಗೂ ತೆನೆ ಸಚಿವರ ವಾಗ್ದಾಳಿ ಮತ್ತೆ ಮುಂದುವರಿದಿದೆ. ಈ ಬಾರಿ ಮೈಸೂರು ದಸರಾ ಸ್ಥಾನಮಾನಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ವಿರುದ್ಧ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಪ್ರತಿ ದಸರಾದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಶೇಷ ಸ್ಥಾನ ಮಾಡ ನೀಡುವುದು ವಾಡಿಕೆ. ಆದರೆ ಜಿ.ಟಿ.ದೇವೇಗೌಡ ಅವರು ಯಾವುದೇ ವಾಡಿಕೆ ಉಳಿಸಿಲ್ಲ. ಎಲ್ಲವನ್ನೂ ನಾನೇ ಮಾಡುತ್ತೇನೆ ಎನ್ನುತ್ತಾರೆ. ಅವರ ದರ್ಬಾರ್ ದಸರಾದಲ್ಲಿ ನಡೆಯಲಿ. ನಾನು ಮೈಸೂರು ದಸರಾಗೆ ಬರಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮನ್ನ ಕರೆಯದೆ ತಮಗೆ ಇಷ್ಟ ಬಂದ ಹಾಗೆ ಮೈಸೂರು ದಸರಾ ಸಮಿತಿಗಳನ್ನು ಮಾಡಿಕೊಂಡರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ ಸ್ಥಾನ ನೀಡುವುದಿರಲ್ಲಿ ಎಲ್ಲಿಯೂ ನನ್ನ ಹೆಸರನ್ನು ಪ್ರಕಟಿಸಿಲ್ಲ. ಇದೆಲ್ಲ ಆಗಿದ್ದು ಜಿ.ಟಿ.ದೇವೇಗೌಡ ಅವರಿಂದ ಎಂದು ಕಿಡಿಕಾರಿದರು.

    ಈ ಹಿಂದೆ ಆಗಿದ್ದೇನು?:
    ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲವು ದಿನಗಳ ಹಿಂದೆ ಮೈಸೂರು ದಸರಾ ವಿಚಾರವಾಗಿ ಸಭೆ ನಡೆದಿತ್ತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮೈಸೂರು ದಸರಾದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಅಷ್ಟೇ ಆಮಂತ್ರಣ ಪತ್ರದಲ್ಲಿ ನನ್ನ ಹೆಸರು ಹಾಗೂ ಫೋಟೋವನ್ನು ಕೂಡ ಸೇರಿಸಿಲ್ಲ. ನಿಮ್ಮ ಇಷ್ಟ ಬಂದ ಹಾಗೆ ಸಮಿತಿ ರಚನೆ ಮಾಡಿರುವಿರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಜಿ.ಟಿ.ದೇವೇಗೌಡ ಅವರನ್ನು ತರಾಟೆ ತಗೆದುಕೊಂಡಿದ್ದರು.

    ಪುಟ್ಟರಂಗಶೆಟ್ಟಿ ಅವರು ಅಸಮಾಧಾನ ಹೊರಹಾಕುತ್ತಿದ್ದಂತೆ ಮನವೊಲಿಕೆಗೆ ಮುಂದಾದ ಜಿ.ಟಿ.ದೇವೇಗೌಡ, ಆಮಂತ್ರಣದಲ್ಲಿ ಹೆಸರು ಹಾಗೂ ಫೋಟೋ ಹಾಕಿಸುತ್ತೇವೆ. ಉಪಾಧ್ಯಕ್ಷರಾಗಿ ಘೋಷಣೆ ಮಾಡುತ್ತೇನೆ ಎಂದು ಓಲೈಸಿದ್ದರು. ಆದರೆ ದಸರಾ ಉಪಾಧ್ಯಕ್ಷರಾಗಿ ಪುಟ್ಟರಂಗನಶೆಟ್ಟಿ ಅವರ ಹೆಸರು ಇದ್ದರೂ, ಎಲ್ಲಿಯೂ ಪ್ರಸ್ತಾಪ ಮಾಡಿಲ್ಲವಂತೆ. ಇದರಿಂದಾಗಿ ಇಬ್ಬರು ಸಚಿವರ ನಡುವೆ ಜಟಾಪಟಿ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ನೆಮ್ಮದಿಯಿಂದ ಸಿಎಂ ಪಟ್ಟ ಅನುಭವಿಸುತ್ತಿಲ್ಲ- ಎಚ್‍ಡಿಕೆ

    ನಾನು ನೆಮ್ಮದಿಯಿಂದ ಸಿಎಂ ಪಟ್ಟ ಅನುಭವಿಸುತ್ತಿಲ್ಲ- ಎಚ್‍ಡಿಕೆ

    ಮೈಸೂರು: ನಾನು ನೆಮ್ಮದಿ, ಸಂತೋಷದಿಂದ ಸಿಎಂ ಪಟ್ಟ ಅನುಭವಿಸುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದು ಹೇಳುವ ಮೂಲಕ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

    ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮೂಲತಃ ರಾಜಕಾರಣಿಯೇ ಅಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಆಕಸ್ಮಿಕವಾಗಿಯೇ ಎರಡು ಬಾರಿ ಸಿಎಂ ಆಗಿದ್ದೇನೆ. ಆದರೆ ನಿಮ್ಮ ಕಷ್ಟ ಪರಿಹರಿಸಲು ಶ್ರಮಿಸುತ್ತಿದ್ದೇನೆ. ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಜನತೆಗೆ ಮನವಿ ಮಾಡಿಕೊಂಡರು.

    ಚುನಾವಣಾ ಆಯೋಗದ ನೀತಿ ಸಂಹಿತೆಯಿಂದಾಗಿ ನಾನು ವೇದಿಕೆಯಲ್ಲಿ ಭಾಷಣ ಮಾಡಲು ಆಗುತ್ತದೆಯೋ, ಇಲ್ಲವೋ ಎಂಬ ಅನುಮಾನ ಇತ್ತು ಎಂದ ಅವರು, ರೈತರೇ ಕೈ ಜೋಡಿಸಿ ಮನವಿ ಮಾಡಿಕೊಳ್ಳುತ್ತೇನೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಮ್ಮಲ್ಲಿ ಪ್ರಾಮಾಣಿಕತೆ ಇದೆ. ನಿಮ್ಮ ರಕ್ಷಣೆಗೆ ಈ ಸರ್ಕಾರ ಇರುವುದು. ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ರೈತರಲ್ಲಿ ಕೇಳಿಕೊಂಡರು.

    ಇನ್ಫೋಸ್ಸಿಸ್ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ತಾಯಿ ಹೃದಯದ ಮಹಿಳೆ. ಅವರಿಂದ ನಾಡದೇವಿಗೆ ಪೂಜೆ ಸಲ್ಲಿಸಿದರೆ, ರಾಜ್ಯದ ಎಲ್ಲಾ ಸಮಸ್ಯೆ ಬಗೆಹರಿಯುತ್ತವೆ ಎನ್ನುವ ನಂಬಿಕೆ ನನ್ನದು. ಕರ್ನಾಟಕ ಜನ ಸುಭಿಕ್ಷವಾಗಿ ಬದುಕುವ ವಾತಾವರಣ ಕಲ್ಪಿಸು ಅಂತಾ ಅವರು ಚಾಮುಂಡಿ ದೇವಿಯಲ್ಲಿ ಬೇಡಿದ್ದಾಗಿ, ನನಗೆ ವಿವರಿಸಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

    ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

    – ಎಂದೆಂದಿಗೂ ಕನ್ನಡವೇ ನನ್ನ ತಾಯಿ ಅಂದ್ರು ಇನ್ಫೋಸಿಸ್ ಮುಖ್ಯಸ್ಥೆ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ರು.

    ಬಳಿಕ ಮಾತನಾಡಿದ ಅವರು, ಪಂಪ ಕವಿ ಹೇಳುವ ಹಾಗೆ ನನಗೆ ಕನ್ನಡ ಎಂದರೆ ತುಂಬಾ ಇಷ್ಟ. ಕನ್ನಡ ನಾಡಲ್ಲಿ ಮತ್ತೆ ಮತ್ತೆ ಹುಟ್ಟಬೇಕು ಅಂತಾ ನನಗೆ ಆಸೆ ಇದೆ. ಅವಿರೋಧವಾಗಿ ನಾನು ದಸರಾ ಉದ್ಘಾಟಕಿಯಾಗಿ ಆಯ್ಕೆ ಆಗಿದ್ದು ನನಗೆ ಬಹಳ ಸಂತೋಷ ತಂದಿದೆ. ಸರ್ಕಾರ ಮಾಡುವ ಕೆಲಸಕ್ಕೆ ನಮ್ಮಂತಹ ಸಂಸ್ಥೆಗಳು ನೆರವಾಗಬೇಕು ಅಂದ್ರು.

    ಕೊಡಗಿನ ಜನಕ್ಕೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಡುತ್ತೇವೆ. ಇದು ದಾನವಲ್ಲ, ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ನೀಡುತ್ತಿದ್ದೇವೆ ಅಷ್ಟೇ. ಮೈಸೂರಿನ ಹೆಬ್ಬಾಳ ಕೆರೆ ಅಭಿವೃದ್ದಿಗೆ ನಮ್ಮ ಫೌಂಡೇಷನ್ ಬದ್ಧವಾಗಿದೆ. ನಾವು ನಿಂತ ಜಾಗವೇ ನಮ್ಮ ನೆಲೆ. ಹೀಗಾಗಿ ನಾವು ಎಲ್ಲೆ ಇದ್ದರೂ ಅವರು ಪಕ್ಕದ ಮನೆ ಆಂಟಿ ಅಷ್ಟೆ ನಮ್ಮ ತಾಯಿ ಆಗೋಲ್ಲ. ಎಂದೆಂದಿಗೂ ಕನ್ನಡವೇ ನನ್ನ ತಾಯಿ ಅಂತ ಅವರು ತಿಳಿಸಿದ್ರು.

    ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ರು. ಇನ್ನು, ಅರಮನೆಯಲ್ಲೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ಪ್ರಾರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/kpEHP6BsOoM

  • ಮೈಸೂರಿನಂತೆ ಮಂಗ್ಳೂರು, ಗದಗದಲ್ಲೂ ನಾಡಹಬ್ಬದ ಸಂಭ್ರಮ

    ಮೈಸೂರಿನಂತೆ ಮಂಗ್ಳೂರು, ಗದಗದಲ್ಲೂ ನಾಡಹಬ್ಬದ ಸಂಭ್ರಮ

    ಮಂಗಳೂರು/ಗದಗ: ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರು ದಸರಾ ಖ್ಯಾತಿಯೂ ಏರುತ್ತಿದೆ. ಅಲ್ಲದೇ ಗದಗದ ಲಕ್ಷ್ಮೇಶ್ವರದಲ್ಲಿ 45 ವರ್ಷಗಳ ನಂತರ ಅದ್ಧೂರಿಯಾಗಿ 9 ದಿನಗಳವರೆಗೆ ದಸರಾ ದರ್ಬಾರ್ ನಡೆಯಲಿದ್ದು, ಲಕ್ಷ್ಮೇಶ್ವರ ಪಟ್ಟಣ ನವ ವಧುವಿನಂತೆ ಶೃಂಗಾರಗೊಂಡಿದೆ.

    ಹಿಂದೆ ದಸರಾ ಅಂದ್ರೆ ಮೈಸೂರು ಅನ್ನುವುದಷ್ಟೇ ರಾಜ್ಯದ ಜನರಿಗಿತ್ತು. ಆದ್ರೀಗ ಮಂಗಳೂರು ದಸರಾ ಕೂಡ ದೇಶದಲ್ಲಿ ಗುರುತಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಕಳೆಗಟ್ಟಿದ್ದು, 10 ದಿನಗಳ ವೈಭವದ ಉತ್ಸವಕ್ಕೆ ಇಂದು ಅದ್ಧೂರಿ ಚಾಲನೆ ಸಿಗಲಿದೆ. ಅಕ್ಟೋಬರ್ 14ರಂದು ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

    ಈಗಾಗಲೇ ಇಡೀ ಮಂಗಳೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ವಿಜಯದಶಮಿಯಂದು ಸುದೀರ್ಘ ದಸರಾ ಮೆರವಣಿಗೆ ನಡೆಯಲಿದೆ. 75ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ 9 ಕಿಮೀ ಉದ್ದಕ್ಕೆ 16 ಗಂಟೆಗಳ ಕಾಲ ಮೆರವಣಿಗೆ ನಡೆಯೋದು ಇಲ್ಲಿನ ವಿಶೇಷ ಅಂತ ಕುದ್ರೋಳಿ ಕ್ಷೇತ್ರದ ಟ್ರಸ್ಟಿ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

    ಇತ್ತ ಗದಗದ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ದಸರಾ ಧರ್ಮಸಮ್ಮೇಳನದ ದರ್ಬಾರ್ ಆರಂಭವಾಗಿದೆ. ಮಂಗಳವಾರ ಶ್ರೀಗಳು ಪುರಪ್ರವೇಶಿಸಿದ್ದು, 1008 ಮುತೈದೆಯರಿಂದ ಕುಂಭಮೇಳ ಗಜರಾಜನ ಹಾಗೂ ಕುದುರೆ ಗಾಂಭಿರ್ಯ ನಡಿಗೆ, ಮಹಿಳೆಯ ಡೊಳ್ಳು ಕುಣಿತ, ಜಗ್ಗಲಗಿ, ಕರಡಿ ಮಜಲು, ವೀರಗಾಸೆ ಕುಣಿತ ಹೀಗೆ ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಗೆ ನಡೀತು.

    9 ದಿನಗಳವರೆಗೆ ಪ್ರತಿದಿನ ಬೆಳಗ್ಗೆ ಜಗದ್ಗರುಗಳ ಇಷ್ಟ ಲಿಂಗಪೂಜೆ, ದಸರಾ ಧರ್ಮ ಸಮ್ಮೆಳನ, ಸಂಗೀತ, ಕವಿಗೊಷ್ಠಿ, ಉಪನ್ಯಾಸ ಹೀಗೆ ಅನೇಕ ಕಾರ್ಯಕ್ರಮಗಳು ಜರುಗಲಿವೆ. ಜಗದ್ಗುರುಗಳ ಪಲ್ಲಕ್ಕಿ ಉತ್ಸವ ಮೂಲಕ ದಸರಾ ಸಮ್ಮೇಳನಕ್ಕೆ ಚಾಲನೆ ನೀಡಲಾಯ್ತು ಅಂತ ಮುಕ್ತಿಮಂದಿರದ ವಿಮಲ ರೇಣುಕ ಶಿವಾಚಾರ್ಯಸ್ವಾಮೀಜಿ ಹೇಳಿದ್ದಾರೆ.

    ಒಟ್ಟಿನಲ್ಲಿ ಕಡಲತಡಿ ಮಂಗಳೂರು, ಗದಗದ ಲಕ್ಷ್ಮೇಶ್ವರ 10 ದಿನಗಳ ಕಾಲ ದಸರಾ ಸಂಭ್ರಮದಲ್ಲಿ ಮಿಂದೇಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳ ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.

    ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾ ಸರಸ್ವತಿಯನ್ನು ಪೂಜಿಸಲಾಗುತ್ತಿದೆ. ಮಹಾಕಾಳಿ ತಾಮಸ ಗುಣಕ್ಕೂ, ಮಹಾಲಕ್ಷ್ಮಿ ರಾಜಸಗುಣಕ್ಕೂ, ಮಹಾಸರಸ್ವತಿ ಸಾತ್ವಿಕ ಗುಣದ ಸಂಕೇತ. ನವರಾತ್ರಿ ಆಚರಿಸುವ ಭಕ್ತರು ತಾಮಸದಿದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ ಬಂದಾಗ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತದೆ.

    ನವರಾತ್ರಿ ವೇಳೆ ದೇವಿಯ ಪೂಜೆ, ದೇವಿ ಭಾಗವತ, ದುರ್ಗ ಸಪ್ತಶತೀ, ಲಲಿತಾ ಸಹಸ್ರನಾಮ ಪವಿತ್ರ ಸ್ತೋತ್ರಗಳ ಮತ್ತು ಮಂತ್ರಗಳ ಪಠಣ ಹಾಗೂ ಪಾರಾಯಣ ನಡೆಯುತ್ತದೆ. ನವದುರ್ಗೆಯರ ಆರಾಧನೆಯ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿದಿನ ದೇವಿಯ ಒಂದೊಂದು ಅವತಾರದ ವಿವರಣೆಯನ್ನು ಪಬ್ಲಿಕ್ ಟಿವಿ ಪ್ರಕಟಿಸಲಿದೆ.

    ಒಂಬತ್ತು ದುರ್ಗೆಯರು:
    1. ಶೈಲಪುತ್ರಿ
    2. ಬ್ರಹ್ಮಚಾರಿಣಿ
    3. ಚಂದ್ರಘಂಟಾ
    4. ಕೂಷ್ಮಾಂಡಾ
    5. ಸ್ಕಂದ ಮಾತೆ
    6. ಕಾತ್ಯಾಯನಿ
    7. ಕಾಳರಾತ್ರಿ
    8. ಮಹಾಗೌರಿ
    9. ಸಿದ್ಧಿದಾತ್ರಿ


    ಪರ್ವತ ರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ದಸರಾ ದಿನ ಈ ದೇವಿಯನ್ನು ಮೊದಲಿಗೆ ಆರಾಧಿಸುತ್ತಾರೆ. ಈ ದೇವಿಯನ್ನು ಆರಾಧಿಸಲು ಒಂದು ಕಥೆಯಿದೆ. ಪ್ರಜಾಪತಿ ಬಹ್ಮನ ಮಗನಾದ ದಕ್ಷ ತನ್ನ 27 ಮಂದಿ ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದ್ದಳು.

    ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಹಿಮಾವೃತವಾಗಿರುವ ಕೈಲಾಸ ಅಥವಾ ಸ್ಮಶಾನದಲ್ಲಿ ವಾಸ, ಕುತ್ತಿಗೆಗೆ ನಾಗರಹಾವು ಇರುವ ಶಿವನಿಗಿಂತ ನನ್ನ ಚೆಲುವೆಯಾಗಿರುವ ಮಗಳಿಗೆ ಉತ್ತಮನಾಗಿರುವ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

    ಶಿವನ ವಿಚಾರದಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದ್ದ ದಕ್ಷ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲ ಮಕ್ಕಳಿಗೆ, ಬಂಧು ಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ದಕ್ಷ, “ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ” ಎಂದು ಮನಸ್ಸಿನಲ್ಲೇ ಕಹಿಯನ್ನು ಅನುಭವಿಸಿದ.

    ಕೆಲ ಸಮಯದ ಬಳಿಕ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿದ. ಈ ಬಾರಿ ಮಗಳು ದಾಕ್ಷಾಯಿಣಿ ಮತ್ತು ಶಿವನಿಗೆ ಆಹ್ವಾನ ನೀಡದೇ ಎಲ್ಲ ಮಕ್ಕಳಿಗೆ ಆಹ್ವಾನ ನೀಡಿದ್ದ. ತಂದೆ ಯಾಗವನ್ನು ಆಯೋಜಿಸಿದ ವಿಚಾರ ತಿಳಿದು ಮಗಳು ಶಿವನ ಜೊತೆ,”ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ” ಎಂದು ಕೇಳುತ್ತಾಳೆ. ಇದಕ್ಕೆ ಶಿವ,”ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆ ಸೇರಿದಂತೆ ಎಲ್ಲಿಗೂ ಹೋಗಬಾರದು” ಎಂದು ತಿಳಿಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ,”ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತುಹೋಗಿರಬಹುದು. ತಂದೆ ಮನೆಗೆ ಹೋಗಲು ಮಗಳಿಗೆ ಆಹ್ವಾನ ಯಾಕೆ ಬೇಕು”ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿಯ ಹಠಕ್ಕೆ ಕರಗಿ ಶಿವ ತಂದೆಯ ಮನೆಗೆ ಹೋಗಲು ಅನುಮತಿ ನೀಡುತ್ತಾನೆ.

    ಪತಿಯಿಂದ ಅನುಮತಿ ಸಿಕ್ಕಿದ್ದೆ ತಡ ದಾಕ್ಷಾಯಿಣಿ ಶಿವನ ವಾಹನ ನಂದಿಯನ್ನೇರಿ, ಕೈಗೆ ಸಿಕ್ಕ ಉಡುಗೊರೆಯನ್ನು ಹಿಡಿದುಕೊಂಡು ತಂದೆಯ ಯಜ್ಞ ಸಮಾರಂಭಕ್ಕೆ ತೆರಳುತ್ತಾಳೆ. ಮಗಳನ್ನು ನೋಡಿದ ಕೂಡಲೇ ದಕ್ಷ,”ನಾನು ನಿನಗೆ ಆಹ್ವಾನ ನೀಡಿಲ್ಲ. ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ” ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ಆ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನ ವಿರುದ್ಧ ಕಿಡಿಕಾರುತ್ತಾನೆ.”ನೀನು ಪತಿಯನ್ನು ಸೇರು. ಇಲ್ಲಿಂದ ಹೊರಟು ಹೋಗು” ಎಂದು ಅವಮಾನಿಸುತ್ತಾನೆ. ಈ ಎಲ್ಲರ ಮುಂದೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ಶಿವನನ್ನು ಧ್ಯಾನಿಸುತ್ತಾ,”ಪತಿಯೇ ನಾನು ನಿಮ್ಮ ಮಾತನ್ನು ಕೇಳಿ ಇಲ್ಲಿಗೆ ಬಾರಬಾರದಿತ್ತು. ತಂದೆ ನಿಮಗೆ ಮಾಡಿದ ಈ ಅವಮಾನವನ್ನು ನಾನು ಸಹಿಸಲಾರೆ” ಎಂದು ಪ್ರಾರ್ಥಿಸಿ ಮುಂದಿದ್ದ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.

    ಪತಿಯನ್ನು ಅವಮಾನಿಸಿದ್ದನ್ನು ಸಹಿಸದೆ ಯಜ್ಞ ಕುಂಡಕ್ಕೆ ಹಾರಿಕೊಂಡಿದ್ದ ದಾಕ್ಷಾಯಿಣಿಗೆ ಅಂದಿನಿಂದ `ಸತಿ’ ಎಂಬ ಹೆಸರು ಬಂತು. ಸತಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ‘ಶೈಲಪುತ್ರಿ’ ಎಂದು ಹೆಸರುವಾಸಿಯಾಗುತ್ತಾಳೆ. ಮತ್ತೆ ಶಿವನ ಮಡದಿಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರ ಸೂಚನೆ ಏನೋ ಎಂಬಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯ ನಡೆಯುತ್ತದೆ. ಶೈಲಪುತ್ರಿ ವೃಷಭ ವಾಹನದ ಮೇಲೆ ಕುಳಿತು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಹಿಡಿದುಕೊಂಡಿರುತ್ತಾಳೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಸರಾ ಕರ್ನಾಟಕ ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮದವರಿಗೆ ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದಲೇ ‘ನವರಾತ್ರಿ’ ಅಥವಾ ‘ದಸರಾ ಹಬ್ಬ’ ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ಯಾಗಿಯೂ ಆಚರಿಸುತ್ತಾರೆ.

    ಮೈಸೂರು: ಆಯುಧ ಪೂಜೆ, ವಿಜಯದಶಮಿ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜಮನೆತನ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ವಿಜಯದಶಮಿಯಂದು ಆನೆಯ ಮೇಲೆ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ.

    ಮಂಗಳೂರು: ಮಂಗಳೂರಲ್ಲಿ ನವರಾತ್ರಿ ಎಂದು ಕರೆಯುವ ಈ ಹಬ್ಬದಲ್ಲಿ ಹುಲಿಯ ನೃತ್ಯ, ಕರಡಿಯ ನೃತ್ಯ ಹಾಗೂ ಸಿಂಹ ನೃತ್ಯ ಮಾಡುತ್ತಾರೆ. ಹತ್ತು ದಿನದ ಆಚರಣೆಯಲ್ಲಿ ಇಡೀ ನಗರವನ್ನು ಬೆಳಕಿನಿಂದ ಅಲಂಕರಿಸಲಾಗುತ್ತದೆ. ಹುಲಿ ವೇಷ, ದಸರಾದಲ್ಲಿ ಮಾಡುವ ಜನಪದ ನೃತ್ಯವಾಗಿದ್ದು, ಯುವಕರು ಐದರಿಂದ ಹತ್ತು ಪಡೆಗಳನ್ನು ಮಾಡಿಕೊಳ್ಳುತ್ತಾರೆ. ಅವರು ಹುಲಿಗಳಂತೆ ವೇಷ ಹಾಕಿಕೊಂಡು ಇಬ್ಬರಿಂದ ಮೂರು ಜನ ಡೋಲು ವಾದ್ಯದವರನ್ನು ಬಳಸಿ ಊರೆಲ್ಲಾ ತಿರುಗಾಡುತ್ತಾರೆ. ಶಾರದಾ ದೇವಿಗೆ ಹುಲಿ ವಾಹನ ಆದ್ದರಿಂದ ಅವಳಿಗೆ ಗೌರವ ಸೂಚಿಸಲು ಹುಲಿ ವೇಷ ಧರಿಸುತ್ತಾರೆ.

    ಮಂಗಳೂರಿನಲ್ಲಿ ಜನರು ತಮ್ಮ ಮನೆಗಳನ್ನು, ಅಂಗಡಿಗಳನ್ನು, ಉಪಹಾರ ಕೇಂದ್ರಗಳನ್ನು ಅಲಂಕರಿಸುತ್ತಾರೆ. ನವದುರ್ಗೆಯರ, ಮಹಾಗಣಪತಿಯ ಹಾಗೂ ಶಾರದೆಯ ಮೂರ್ತಿಗಳನ್ನು ಮೆರವಣಿಗೆ ಮಾಡಿ ಹೂಗಳಿಂದ ಅಲಂಕರಿಸಿದ ಛತ್ರಿ, ವರ್ಣ ಚಿತ್ರ, ಜಾನಪದ ನೃತ್ಯ, ಯಕ್ಷಗಾನ ಪಾತ್ರ, ಡೊಳ್ಳು ಕುಣಿತ, ಹುಲಿವೇಶ ಹಾಗು ಇನ್ನಿತರ ಸಾಂಪ್ರದಾಯಿಕ ಕಲಾ ರೂಪ ಈ ಹಬ್ಬಕ್ಕೆ ಮೆರಗು ನೀಡುತ್ತದೆ.

    ಮಡಿಕೇರಿ: ಮಡಿಕೇರಿಯಲ್ಲಿ ಹತ್ತು ದಿನಗಳ ನವರಾತ್ರಿ ಹಬ್ಬದ ಆಚರಣೆ ನಡೆಯುತ್ತದೆ. ಇಲ್ಲಿ ನಡೆಯುವ ದಸರಾಗೆ ನೂರು ವರ್ಷಗಳ ಇತಿಹಾಸವಿದ್ದು, ಇದರಲ್ಲಿ ಅಸುರರನ್ನು ಕೊಲ್ಲುತ್ತಿರುವ ಸುರರನ್ನು ಚಿತ್ರಿಸಿರುವ 10 ಮಂಟಪಗಳಿರುತ್ತವೆ. ಒಂದು ಮಂಟಪದಲ್ಲಿರುವ ಮೂರ್ತಿಗಳು ಸುಮಾರು 8 ರಿಂದ 15 ಅಡಿ ಎತ್ತರವಿದ್ದು, ಒಂದು ಮಂಟಪದ ವೆಚ್ಚ 3 ರಿಂದ 5 ಲಕ್ಷಗಳಾಗುತ್ತವೆ.

    ದಂತ ಕಥೆಗಳ ಪ್ರಕಾರ, ಬಹಳ ವರ್ಷಗಳ ಹಿಂದೆ ಮಡಿಕೇರಿಯ ಜನ ರೋಗ ಋಜಿನಗಳಿಂದ ನರಳುತ್ತಿದ್ದಾಗ ಮಡಿಕೇರಿಯ ರಾಜನು ಆಗಿನಿಂದ ಮಾರಿಯಮ್ಮ ಹಬ್ಬವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಮಹಾಲಯ ಅಮಾವಾಸ್ಯೆಯ ನಂತರ ದಸರಾ ದಿನದಿಂದ ಮಾರಿಯಮ್ಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ವ್ಯಾಪಕ ನೆರೆ ಬಂದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಜನ ತೀರ್ಮಾನಿಸಿದ್ದಾರೆ.

    ಕೇರಳ: ಕೇರಳದಲ್ಲಿ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಮಾತ್ರ ದೇವಿಯ ಆರಾಧನೆ ನಡೆಯುತ್ತದೆ. ಅಷ್ಟಮಿ, ನವಮಿ ಮತ್ತು ದಶಮಿಯ ದಿನ ಕೇರಳದಲ್ಲಿ ತಾಯಿ ಸರಸ್ವತಿಯ ಪೂಜೆ ನಡೆಸಲಾಗುತ್ತದೆ. ಕಲೆಯನ್ನು ಸರಸ್ವತಿ ಎಂದೇ ಪರಿಗಣಿಸುವ ಕೇರಳದ ಜನರು ಮನೆಯಲ್ಲಿರುವ ಸಂಗೀತ ಸಲಕರಣೆಗಳು, ಪುಸ್ತಕಗಳು ಎಲ್ಲವನ್ನೂ ಸರಸ್ವತಿಯ ಮೂರ್ತಿಯ ಮುಂದೆ ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯ ದಿನ ಪೂಜೆಗಿಟ್ಟ ಪುಸ್ತಕಗಳನ್ನು ತೆಗೆದು ಓದುತ್ತಾರೆ. ವಿದ್ಯಾದಶಮಿ ಎಂದು ಕರೆಯಲ್ಪಡುವ ಅಂದು ಅಧ್ಯಯನ ಮಾಡುವುದರಿಂದ ಸರಸ್ವತಿ ಒಲಿಯುತ್ತಾಳೆ ಎಂಬ ನಂಬಿಕೆ ಕೇರಳದಲ್ಲಿದೆ.

    ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ನವರಾತ್ರಿಗೆ `ಬತುಕಾಮ್ಮ ಪಾಂಡುಗ’ ಎಂದು ಕರೆಯುತ್ತಾರೆ. ತೆಲಂಗಾಣ ಪ್ರದೇಶದಲ್ಲಿ ವಿಶೇಷವಾಗಿ ಈ ಬತುಕಾಮ್ಮ ಪಾಂಡುಗವನ್ನು ಆಚರಿಸುತ್ತಾರೆ. ಬತುಕಾಮ್ಮ ಪಾಂಡುಗ ಎಂದರೆ ತಾಯಿ ದುರ್ಗೆಗೆ ನೀಡುವ ಆಹ್ವಾನ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮನೆ ಮನೆಯಲ್ಲಿ ಮಹಿಳೆಯರು ಬತುಕಾಮ್ಮನನ್ನು ಹೂವಿನಿಂದ ತಯಾರಿಸುತ್ತಾರೆ. ಕುಂಭದ ಆಕೃತಿಯಲ್ಲಿ ಬತುಕಾಮ್ಮನನ್ನು ತಯಾರಿಸಿ ಪೂಜಿಸುತ್ತಾರೆ. ನವರಾತ್ರಿಯ 9 ದಿನಗಳು ಸಂಜೆ ದೇವಿಗೆ ಪೂಜೆ ನಡೆಸಿ ಭಕ್ತಿ ಗೀತೆಗಳನ್ನು ಹಾಡಿ, ಬತುಕಾಮ್ಮನ ಸುತ್ತ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ನಂತರ ವಿದ್ಯಾದಶಮಿಯ ದಿನ ಹೂವಿನಿಂದ ತಯಾರು ಮಾಡಲಾಗಿದ್ದ ಬತುಕಾಮ್ಮನನ್ನು ನೀರಿನಲ್ಲಿ ತೇಲಿಬಿಡುತ್ತಾರೆ.

    ಪಂಜಾಬ್: ಪಂಜಾಬ್‍ನಲ್ಲಿ ನವರಾತ್ರಿಯ ಮೊದಲ ಏಳು ದಿನಗಳ ಕಾಲ ಹೆಚ್ಚಿನ ಪಂಜಾಬಿ ಜನರು ಹಗಲಿನಲ್ಲಿ ಉಪವಾಸ ಮಾಡಿ ದೇವಿಯನ್ನು ಪೂಜಿಸುತ್ತಾರೆ. ಪ್ರತಿ ರಾತ್ರಿ ದೇವಿಯ ಭಜನೆ ಮಾಡಿ ಪೂಜೆ ನೆರವೇರಿಸುತ್ತಾರೆ. ಅಷ್ಟಮಿಯ ದಿನ ಉಪವಾಸ ವ್ರತವನ್ನು ಕೈಬಿಟ್ಟು ವಿಜಯ ದಶಮಿಯ ತನಕ ನೆರೆಹೊರೆಯ ಒಂಬತ್ತು ಯುವತಿಯರನ್ನು ಆಮಂತ್ರಿಸಿ ಅವರಿಗೆ ಹಣ, ಸಿಹಿ ತಿಂಡಿಗಳನ್ನು ನೀಡಿ ಉಡುಗೊರೆಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಮನೆಗೆ ಆಹ್ವಾನಿಸುವ ಹೆಣ್ಣುಮಕ್ಕಳನ್ನು ದುರ್ಗೆಯ ಅವತಾರಗಳು ಎಂದು ಪರಿಗಣಿಸಲಾಗುತ್ತದೆ.

    ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ದಸರಾದಂದು ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಕೋಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುತ್ತದೆ. ಅಲ್ಲದೇ ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುತ್ತಾರೆ. ಗಣೇಶ ಚತುರ್ಥಿಯಂತೆ ಸಾಮಾನ್ಯವಾಗಿ ಪಶ್ಚಿಮ ಬಂಗಾಳದಾದ್ಯಂತ ದುರ್ಗೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

    ಕೋಲ್ಕತ್ತಾದಲ್ಲಿ 10 ದಿನಗಳ ಕಾಲ ಬಣ್ಣ, ಭಾರೀ ಶಬ್ಧ, ದೀಪಾಲಂಕಾರ ಹಾಗೂ ವಿವಿಧ ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ಅಲ್ಲದೇ ಇಲ್ಲಿನ ಜನರು ಹಬ್ಬದಂದು ತೆಂಗಿನ ಸಿಪ್ಪೆಯೊಳಗೆ ಬೆಂಕಿ ಹಾಕಿ ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ದಸರಾದಂದು ಈ ರಾಜ್ಯದ ಮುತ್ತೈದೆಯರು ದೇವರ ಮೇಲೆ ಕುಂಕುಮ ಹಾಕುತ್ತಾರೆ. ಆ ದಿನ ದೇವಿ ತನ್ನ ಪತಿಯ ಮನೆಗೆ ಹಿಂದಿರುತ್ತಿದ್ದಾಳೆ ಎಂದು ಅಲ್ಲಿನ ಜನರು ನಂಬುತ್ತಾರೆ. ದೇವಿಗೆ ಕುಂಕುಮ ಹಾಕಿದ್ದ ನಂತರ ಮುತ್ತೈದೆಯರು ಒಬ್ಬರಿಗೊಬ್ಬರು ತಮ್ಮ ಮೇಲೆ ಕುಂಕುಮ ಎರಚಿಕೊಳ್ಳುತ್ತಾರೆ. ತಮ್ಮ ಪತಿಯ ಆಯಸ್ಸು ವೃದ್ಧಿಗಾಗಿ ಈ ರೀತಿ ಆಚರಣೆ ಮಾಡುತ್ತಾರೆ.

    ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲೂ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಮಾಡುತ್ತಾರೆ. ಸಾಂಸ್ಕೃತಿಕ ಉಡುಗೆ ತೊಟ್ಟು ರಾಮಾಯಣದ ನಾಟಕವನ್ನು ಮಾಡುತ್ತಾರೆ. ಅಲ್ಲದೇ ರಾವಣ, ಕುಂಭಕರ್ಣ, ಮೇಘನಾದ ದೊಡ್ಡ ಪ್ರತಿಕೃತಿಯನ್ನು ರಾಮ ಹಾಗೂ ಲಕ್ಷ್ಮಣ ವೇಷಧಾರಿ ತಮ್ಮ ಬಾಣಕ್ಕೆ ಬೆಂಕಿಗೆ ಹಚ್ಚಿ ಪ್ರತಿಕೃತಿಯನ್ನು ಸುಟ್ಟು ಹಾಕುತ್ತಾರೆ.

    ಗುಜರಾತ್: ಗುಜರಾತ್ ನಲ್ಲಿ ನವರಾತ್ರಿಯಂತೂ ಅತ್ಯಂತ ಅದ್ಧೂರಿಯಿಂದ ನಡೆಯುತ್ತದೆ. ಈ ಹಬ್ಬದಂದು ಮಹಿಳೆಯರು ಹಾಗೂ ಪುರುಷರು ಸೇರಿ ಗರ್ಭಾ ನೃತ್ಯ ಮಾಡುತ್ತಾರೆ. ಈ ಹಬ್ಬದಂದು ಗುಜರಾತಿನ ತುಂಬ ದಾಂಡಿಯಾ ಕೋಲು ಮತ್ತು ಡೋಲಿನ ಶಬ್ಧವೇ ಕೇಳಿಸುತ್ತದೆ. ಸಂಪ್ರದಾಯಸ್ಥರು 9 ದಿನಗಳ ಕಾಲವೂ ಉಪವಾಸ ಮಾಡಿ ಸಂಜೆಯ ವೇಳೆ ದುರ್ಗೆಯ ಪೂಜೆ ಮಾಡಿ ನಂತರ ಊಟ ಮಾಡುತ್ತಾರೆ. ಸಂಜೆ ಹೊತ್ತಿನಲ್ಲಿ ದೇವಿಗೆ ಆರತಿ ಬೆಳಗಿ ದೇವಿಯ ಮುಂದೆ ಗರ್ಭಾ ಅಥವಾ ದಾಂಡಿಯಾ ಎಂದು ಕರೆಯಲ್ಪಡುವ ವಿಶಿಷ್ಟ ನೃತ್ಯ ಮಾಡಿ ಸಂಭ್ರಮಿಸುತ್ತಾರೆ.

    ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನವರಾತ್ರಿಯನ್ನು ಹಬ್ಬವನ್ನು ವಿಜೃಂಭಣೆಯಿಂದ ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ. ಇಲ್ಲಿ ಮಣ್ಣಿನ ಪಾತ್ರೆಯಲ್ಲಿ ಧ್ಯಾನಗಳ ಬೀಜವನ್ನು ತುಂಬಿ ಅದರ ಮೇಲೆ ಜೋಳದ ತೆನೆಗಳನ್ನು ಇಡಲಾಗುತ್ತದೆ, ನಂತರ ಆ ಮಡಿಕೆಯನ್ನು ಅದರೊಳಗಿನ ಬೀಜಗಳು ಮೊಳಕೆಯೊಡೆದು ಬರುವವರೆಗೂ ಸತತವಾಗಿ 9 ದಿನಗಳ ಕಾಲ ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ನವರಾತ್ರಿ ಹಬ್ಬವನ್ನು ಹೊಸದಾಗಿ ಪ್ರಾರಂಭ ಮಾಡಲು ಇರುವ ಶುಭ ಸಂದರ್ಭವಾಗಿ ಪರಿಗಣಿಸಲಾಗುತ್ತದೆ. ಹೊಸ ಮನೆ ಅಥವಾ ಕಾರನ್ನು ಖರೀದಿಸುವುದು ಹೀಗೆ ಹೊಸ ಆರಂಭವನ್ನು ನವರಾತ್ರಿಯಿಂದಲೇ ಆರಂಭಿಸಬೇಕು ಎನ್ನುವ ನಂಬಿಕೆಯನ್ನು ಮರಾಠಿಗರು ಇಟ್ಟುಕೊಂಡಿದ್ದಾರೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಡಲ ನಗರಿಯಲ್ಲಿ ಹಬ್ಬದ ಕಳೆ, ನಾಳೆಯಿಂದ ಮಂಗಳೂರು ದಸರಾ!

    ಕಡಲ ನಗರಿಯಲ್ಲಿ ಹಬ್ಬದ ಕಳೆ, ನಾಳೆಯಿಂದ ಮಂಗಳೂರು ದಸರಾ!

    ಮಂಗಳೂರು: ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರು ದಸರಾ ಖ್ಯಾತಿಯೂ ಏರುತ್ತಿದೆ. ಕಡಲ ತಡಿಯ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಈ ದಸರಾ ಉತ್ಸವ ಮಂಗಳೂರಿನ ಪಾಲಿಗೆ ಹಬ್ಬದ ಕಳೆ ತರುತ್ತೆ. ಈ ಬಾರಿ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಚಾಲನೆ ನೀಡುತ್ತಿದ್ದಾರೆ.

    ಹೌದು. ಹಿಂದೆಲ್ಲಾ ದಸರಾ ಅಂದರೆ ಬರೀ ಮೈಸೂರು ಅನ್ನುವುದಷ್ಟೇ ರಾಜ್ಯದ ಜನರಿಗಿತ್ತು. ಆದರೆ, ಈಗ ಕರಾವಳಿಯ ಮಂಗಳೂರಿನ ದಸರಾ ದೇಶದಲ್ಲಿ ಗುರುತಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮೈಸೂರು ದಸರಾ ರೀತಿಯಲ್ಲೇ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಕಳೆಗಟ್ಟಿದ್ದು, ಹತ್ತು ದಿನಗಳ ವೈಭವದ ಉತ್ಸವಕ್ಕೆ ನಾಳೆ ಅದ್ಧೂರಿ ಚಾಲನೆ ಸಿಗಲಿದೆ.

    ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರು ನಗರವಿಡೀ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ಉತ್ಸವದ ಕಳೆ ಬಂದಿದೆ. ಸಂಜೆಯಾಗುತ್ತಿದ್ದಂತೆ ಬಣ್ಣದ ಲೋಕ ಆವರಿಸುತ್ತಿದೆ. ನಾಳೆ ಬೆಳಗ್ಗೆ ನವದುರ್ಗೆಯರ ಸಹಿತ ಶಾರದಾ ಮೂರ್ತಿಯ ಪ್ರತಿಷ್ಠೆ ನಡೆಯಲಿದ್ದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಮಹಾಬಲೇಶ್ವರ ಎಸ್. ಉದ್ಘಾಟಿಸಲಿದ್ದಾರೆ.

    ಮಂಗಳೂರು ದಸರಾ ಉತ್ಸವಕ್ಕೆ ಅಕ್ಟೋಬರ್ 14 ರಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉದ್ಘಾಟನೆ ಚಾಲನೆ ನೀಡಲಿದ್ದಾರೆ. ಕ್ಷೇತ್ರದ ರೂವಾರಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಹಬ್ಬದೋಪಾದಿಯಲ್ಲಿ ಉತ್ಸವ ನಡೆಯಲಿದ್ದು, ವಿಜಯದಶಮಿಯಂದು ಸುದೀರ್ಘ ದಸರಾ ಮೆರವಣಿಗೆ ನಡೆಯಲಿದೆ. 75 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೊಂದಿಗೆ 9 ಕಿಮೀ ಉದ್ದಕ್ಕೆ 16 ಗಂಟೆಗಳ ಕಾಲ ಮೆರವಣಿಗೆ ನಡೆಯುವುದು ವಿಶೇಷ ಎಂದು ಕುದ್ರೋಳಿ ಕ್ಷೇತ್ರದ ಟ್ರಸ್ಟಿ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

    ಒಟ್ಟಿನಲ್ಲಿ ಮೈಸೂರು ದಸರಾ ರೀತಿಯಲ್ಲೇ ವಿದೇಶಿಗರನ್ನು ಆಕರ್ಷಿಸುವ ಮಾದರಿಯಲ್ಲಿ ಮಂಗಳೂರು ದಸರಾ ಉತ್ಸವ ನಡೆಯುವುದು ಕರಾವಳಿಗರಿಗೆ ಹೆಮ್ಮೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ಗಂಟೆ ಬಾಕಿ – ಚಾಮುಂಡೇಶ್ವರಿ ದೇಗುಲದಲ್ಲಿ ಸಕಲ ಸಿದ್ಧತೆ

    ನಾಡಹಬ್ಬ ದಸರಾ ಆರಂಭಕ್ಕೆ ಕೆಲವೇ ಗಂಟೆ ಬಾಕಿ – ಚಾಮುಂಡೇಶ್ವರಿ ದೇಗುಲದಲ್ಲಿ ಸಕಲ ಸಿದ್ಧತೆ

    ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

    ರಾಜ್ಯದ ಜನತೆ ಅತ್ಯಂತ ಕಾತುರದಿಂದ ಕಾಯುತ್ತಿದ್ದ ದಸರಾ ಹಬ್ಬಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಚಾಮುಂಡೇಶ್ವರಿ ದೇಗುಲ ಸಕಲ ರೀತಿಯಲ್ಲೂ ಸಿದ್ಧಗೊಳ್ಳುತ್ತಿದೆ. ಇಂದು ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದಿಕ್ಷೀತ್ ನೇತೃತ್ವದಲ್ಲಿ ದೇವಿಯನ್ನು ಶುದ್ಧಿಗೊಳಿಸಿ ಹೂವಿನ ಅಲಂಕಾರ ಮಾಡಲಾಯಿತು. ಹಾಗೇ ಉದ್ಘಾಟನಾ ಸಮಾರಂಭಕ್ಕೆ ವಿಶಾಲವಾದ ವೇದಿಕೆ ಕೂಡ ಸಿದ್ಧ ಮಾಡಲಾಗಿದೆ. ಭಕ್ತಾದಿಗಳಿಗೆ ಅಸನಾ ವ್ಯವಸ್ಥೆ ಕೂಡ ಮಾಡಲಾಗಿದೆ. ಚಾಮುಂಡೇಶ್ವರಿ ಸನ್ನಿಧಿ ತಳಿರು ತೋರಣ ಹಾಗೂ ಹೂವಿನಿಂದ ಶೃಂಗಾರಗೊಂಡಿದೆ.

    ಬುಧವಾರ ಬೆಳಗ್ಗೆ 7.05 ರಿಂದ 7.35 ತುಲಾ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಅಗ್ರ ಪೂಜೆಯನ್ನು ಸಲ್ಲಿಸುವ ಮೂಲಕ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ದಸರಾಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

    ನಾಳೆಯಿಂದ ಅರಮನೆಯಲ್ಲಿ ಕೂಡ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಯದುವೀರ ಜಯಚಾಮರಾಜೇಂದ್ರ ಒಡೆಯರ್ ಒಂಭತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸುತ್ತಾರೆ. 11 ಗಂಟೆಗೆ ಖಾಸಗಿ ದರ್ಬಾರ್ ಪ್ರಾರಂಭವಾಗಲಿದೆ. ಒಂಭತ್ತು ದಿನಗಳ ಕಾಲ ವಿವಿಧ ರಾಜ್ಯದ ಸಾಂಸ್ಕೃತಿಕ, ನಾಡಿನ ಪರಂಪರೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿವೆ. ಸಾಕಷ್ಟು ಸಂಖ್ಯೆಯಲ್ಲಿ ದಸರಾ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    ಹಬ್ಬ-ಹರಿದಿನಗಳು ಬಂದಾಗ ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಂತೂ ತಮಗೆ ಡ್ರೆಸ್(ಚೂಡಿದಾರನೇ) ಬೇಕುಂತ ಹಠ ಹಿಡಿಯುತ್ತಾರೆ. ಆದ್ರೆ ಕೆಲವರಿಗೆ ಚೂಡಿದಾರ ಹಾಕಿ ಬೇಜರಾಗಿರುತ್ತೆ. ಹೀಗಾಗಿ ಅವರು ಈ ಬಾರಿ ದಸರಾ ಹಬ್ಬಕ್ಕೆ ಸಾರಿ ಉಟ್ಟು ಸ್ವಲ್ಪ ಚೇಂಜಾಗಿ ಸ್ಟೈಲಿಶ್ ಆಗಿ ಕಾಣಬೇಕು ಅಂದುಕೊಳ್ಳುತ್ತಾರೆ. ಅಂತವರು ಈ ಕೆಳಗಿನಂತೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

    ಸೀರೆಗಳ ಆಯ್ಕೆ ಹೀಗಿದ್ದರೆ ಚೆಂದ:
    * ಹಬ್ಬ ಎಂದರೆ ರೇಷ್ಮೆ ಸೀರೆಗಳು ಮೊದಲ ಸ್ಥಾನದಲ್ಲಿರುತ್ತದೆ. ಟ್ರೆಡಿಷನಲ್ ಆಗಿ ಕಾಣಬೇಕಂದರೆ ರೇಷ್ಮೆ ಸೀರೆ ಆಯ್ದುಕೊಳ್ಳಿ.
    * ರೇಷ್ಮೆ ಬದಲಿಗೆ ಕಾಟನ್ ಸಿಲ್ಕ್, ರಾ ಸಿಲ್ಕ್ ಸೀರೆ ಸೆಲೆಕ್ಟ್ ಮಾಡಿಕೊಳ್ಳಿ.
    * ನಿಮಗೆ ಯಾವುದರಲ್ಲಿ ಹೆಚ್ಚು ಕಂಫರ್ಟ್ ಇರುತ್ತೋ ಅದನ್ನು ಆಯ್ಕೆ ಮಾಡಿ
    * ಕ್ಯಾರಿ ಮಾಡಲು ಬಾರದೇ ಇರಿಸು ಮುರಿಸು ಉಂಟಾಗೋ ಅಲಂಕಾರ ಬೇಡ.
    * ಇತ್ತೀಚೆಗೆ ಕಲಂಕಾರಿ ಹೆಚ್ಚು ಟ್ರೆಂಡ್ ಆಗಿದೆ. ಅದರಲ್ಲಿ ನಾನಾ ವೆರೈಟಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
    * ಕಲಂಕಾರಿ ಬ್ಲೌಸ್ ಜೊತೆಗೆ ರೇಷ್ಮೆ ಸೀರೆ ಉಡುವುದು ಹೊಸ ಟ್ರೆಂಡ್
    * ಪ್ರೆಟೆಂಡ್ ಕಲಂಕಾರಿಯ ಬ್ಯಾಕ್ ನೆಕ್ ಡಿಸೈನ್ ಚೆಂದ ಕಾಣುತ್ತೆ.


    * ತೆಳ್ಳಗೆ ಉದ್ದನೆಯ ದೇಹ ಇರುವವರು ಅಗಲ ಬಾರ್ಡರ್ ಇರುವಂತಹ ಪ್ರಿಂಟೆಡ್ ಸೀರೆ ಬಳಸಬಹುದು. ಇವರಿಗೆ ಬಹುತೇಕ ಎಲ್ಲ ವಿನ್ಯಾಸಗಳು ಒಪ್ಪುತ್ತವೆ.
    * ಸ್ವಲ್ಪ ದಪ್ಪಗೆ, ಕುಳ್ಳಗಿರುವವರು ಸಿಂಪಲ್ ಅಥವಾ ಚಿಕ್ಕ ಬಾರ್ಡರ್ ಇಲ್ಲವೇ ಸರಳ ಬಾರ್ಡರ್ ಲೈನ್ ಸೀರೆ ಉಡಬಹುದು.
    * ಮಧ್ಯ ವಯಸ್ಕರು ಆದಷ್ಟು ಪ್ರಿಂಟೆಡ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಂಡರೆ ಚೆಂದ.
    * ಶ್ವೇತ ವರ್ಣದವರಿಗೆ ಎಲ್ಲಾ ಗಾಢ ಬಣ್ಣ ಚೆನ್ನಾಗಿ ಕಾಣಿಸುತ್ತದೆ.
    * ಉದ್ಯೋಗಸ್ಥರು ಎಲ್ಲ ಕಾಲದಲ್ಲೂ ಬಳಸಬಹುದಾದ, ವಿನ್ಯಾಸ ಇರುವಂತಹ ರೇಷ್ಮೆ ಸೀರೆ, ಲೈಟ್ ವೇಯ್ಟ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ
    * ಜೊತೆಗೆ ಅಮ್ಮನ, ಅತ್ತೆಯ ಹಳೆಯ ಸೀರೆಗಳನ್ನು ಕಲಂಕಾರಿ ಬ್ಲೌಸ್‍ಗಳೊಂದಿಗೆ ಒಮ್ಮೆ ಉಟ್ಟು ನೋಡಿ.

    ಒಟ್ಟಿನಲ್ಲಿ ಈ ಬಾರಿಯ ದಸರಾ ಹಬ್ಬಕ್ಕೆ ನಿಮಗೆ ಕನ್ಫರ್ಟ್ ಹಾಗೂ ಒಪ್ಪುವಂತಹ ಕಲರ್ ಸೀರೆಗಳನ್ನು ಆಯ್ಕೆ ಮಾಡಿಕೊಂಡು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ